ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ನಡೆ ಜಾಡು ಹಿಡಿಯಿರಿ

Last Updated 15 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಇಂದಿನ ಕಾಲಕ್ಕೆ ತಕ್ಕಂತೆ ಬದುಕನ್ನು ಹೊಂದಿಸಿಕೊಳ್ಳುವ ಧಾವಂತದಲ್ಲಿ ಗಂಡ– ಹೆಂಡತಿ ಇಬ್ಬರೂ ಅನಿವಾರ್ಯವಾಗಿ ಹೊರಗೆ ದುಡಿಯಬೇಕಾಗಿದೆ. ಕುಸಿಯುತ್ತಿರುವ ಕೌಟುಂಬಿಕ ವ್ಯವಸ್ಥೆಯಡಿ ಇಂತಹ ಬದಲಾದ ಜೀವನಶೈಲಿ, ಆಧುನಿಕತೆಯ ಭರಾಟೆಗಳ ನಡುವೆಯೂ, ಅವರು ತಮ್ಮ ಮಕ್ಕಳೆಡೆಗೆ ವಿಶೇಷ ಗಮನಹರಿಸಿ ಬೆಳೆಸಬೇಕಾದದ್ದು ಅನಿವಾರ್ಯ.

ಮಕ್ಕಳು ಹೇಗಿದ್ದರೂ, ಏನು ಮಾಡಿದರೂ ‘ಹೆತ್ತವರಿಗೆ ಹೆಗ್ಗಣ ಮುದ್ದು’. ಐದು ವರ್ಷದೊಳಗಿನ ಮಕ್ಕಳು ಯಾವುದಾದರೊಂದು ಚಟುವಟಿಕೆಯಲ್ಲಿ ನಿರತರಾಗಿರುವುದು ಸಹಜ. ಅದನ್ನು ಎಂದೂ ಹತ್ತಿಕ್ಕಲು ಹೋಗಬಾರದು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮಕ್ಕಳು ಶೈಶವಾವಸ್ಥೆಯಲ್ಲಿ ಹೇಗೆ ಬೆಳೆಯುತ್ತಾರೋ ಅದನ್ನೇ ಭವಿಷ್ಯದಲ್ಲೂ ಮೈಗೂಡಿಸಿಕೊಳ್ಳುತ್ತಾರೆ. ಮಗುವಿನ ನಡವಳಿಕೆಯ ಒಳಿತು, ಕೆಡುಕುಗಳನ್ನು ಸರಿಯಾದ ಸಮಯದಲ್ಲಿ ಗುರುತಿಸದಿದ್ದರೆ, ಅದರ ಭವಿಷ್ಯ ಮಸುಕಾದೀತು.

ನಡವಳಿಕೆ ಸರಿಯಾಗಿರದಿದ್ದರೆ ತಕ್ಷಣ ‘ಅದು ತಪ್ಪು, ಹಾಗೆ ಮಾಡಬಾರದು’ ಎಂದು ತಿಳಿಹೇಳಿ. ಆಗಲೂ ಬಗ್ಗದಿದ್ದರೆ ಲಘುವಾಗಿ ಬೆದರಿಸಿ ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಅವರ ಒಳ್ಳೆಯ ನಡವಳಿಕೆಯನ್ನು ಸದಾ ಪ್ರೋತ್ಸಾಹಿಸುತ್ತಾ ಪ್ರೀತಿಯಿಂದ ಶಿಸ್ತು– ಸಂಯಮವನ್ನು ಕಲಿಸಿಕೊಡಬೇಕು. ಒಂದು ವೇಳೆ ಅವರ ನಡವಳಿಕೆಯಲ್ಲಿ ಕೆಳಗಿನ ನ್ಯೂನತೆಗಳಿದ್ದರೆ, ಪ್ರಾರಂಭದಲ್ಲೇ ಅವನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು.

ಪೈಕಾ: ಮಗು ಎದೆ ಹಾಲು ಕುಡಿಯುವುದನ್ನು ನಿಲ್ಲಿಸಿ ಇತರ ಆಹಾರ ತಿನ್ನಲು ಪ್ರಾರಂಭಿಸುವ ಹಂತದಲ್ಲಿ ಆಹಾರೇತರ ವಸ್ತುಗಳನ್ನು ತಿನ್ನುತ್ತದೆ. ಇಂತಹ ವಸ್ತುಗಳನ್ನು ತಿನ್ನುವ ಅಥವಾ ಚೀಪುವ ವಿಚಿತ್ರ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ ‘ಪೈಕಾ’ ಎನ್ನುತ್ತಾರೆ. ಆರಂಭದಲ್ಲಿ ಕೆಲವು ಅಪೌಷ್ಟಿಕ ವಸ್ತುಗಳಿಂದ ಆಕರ್ಷಿತಗೊಂಡು ತಿನ್ನಲು ಪ್ರಾರಂಭಿಸಿ, ಕ್ರಮೇಣ ಅದನ್ನೇ ರೂಢಿಸಿಕೊಳ್ಳುತ್ತದೆ.

ನಿಂದನೆಗೆ ಒಳಗಾಗುವ, ನಿರ್ಲಕ್ಷ್ಯಕ್ಕೆ ಈಡಾಗುವ, ಮಾನಸಿಕ ಅಸ್ವಸ್ಥ, ಸಾಮಾಜಿಕ ಒತ್ತಡ, ಬಡತನ, ಅಪೌಷ್ಟಿಕತೆ, ಕಬ್ಬಿಣಾಂಶದ ಕೊರತೆ ಇರುವ ಮಕ್ಕಳು ಹೆಚ್ಚಾಗಿ ಪೈಕಾ ದುರಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಇದ್ದಿಲು, ಸುಣ್ಣ–ಬಣ್ಣ, ಸಾಬೂನು, ಬಳಪದ ಕಡ್ಡಿ, ಸೀಸದ ಕಡ್ಡಿ ಮುಂತಾದ ವಸ್ತುಗಳನ್ನು ಕನಿಷ್ಠ ಒಂದು ತಿಂಗಳು ತಿಂದರೆ, ಅದನ್ನು ಬೆಳವಣಿಗೆಗೆ ವಿರುದ್ಧ ಎಂದು ಹೇಳಬಹುದು. ಇಂತಹ ಮಕ್ಕಳು ಸಾಮಾನ್ಯವಾಗಿ ಸೀಸದ ವಿಷವನ್ನು ಹೆಚ್ಚಿಗೆ ಸೇವಿಸುತ್ತಾರೆ.  ಅನೀಮಿಯಾ, ಜಂತುಹುಳುವಿನ ಸಮಸ್ಯೆಗಳಿಗೆ ಬಲುಬೇಗ ತುತ್ತಾಗುತ್ತಾರೆ.

ಪೈಕಾಗೆ ಪರಿಹಾರವಾಗಿ ಆಹಾರೇತರ ವಸ್ತುಗಳು ಮಕ್ಕಳಿಗೆ ಸಿಗದಂತೆ ಎಚ್ಚರ ವಹಿಸಬೇಕು. ಮಕ್ಕಳ ಸಾಮಾಜಿಕ, ಮಾನಸಿಕ ಒತ್ತಡಗಳನ್ನು ಶಮನಗೊಳಿಸಬೇಕು. ಕಬ್ಬಿಣಾಂಶದ ಕೊರತೆ ಕಂಡುಬಂದ ಮಕ್ಕಳಿಗೆ ಹೇರಳವಾಗಿ ತರಕಾರಿ, ಸೊಪ್ಪನ್ನು ಪೂರಕವಾದ ಆಹಾರವಾಗಿ ಕೊಡಬೇಕು.

ಆಹಾರ ನಿರಾಕರಣೆ (FOOD FUSSINESS): ಬಹಳಷ್ಟು ತಾಯಂದಿರು ತಮ್ಮ ಮಕ್ಕಳಿಗೆ ಉಣ್ಣಿಸುವಾಗ ಅವು ಹಟ ಮಾಡುತ್ತಾ ಆಹಾರ ನಿರಾಕರಿಸುವುದು ಒಂದು ಸಾಮಾನ್ಯ ಸಮಸ್ಯೆ. ಮಕ್ಕಳಿಗೆ ಆ ತಿನಿಸು ರುಚಿಸದೇ ಇರಬಹುದು. ದಿನನಿತ್ಯ ತಿನ್ನುವಾಗ ಹೇವರಿಸಿಕೊಳ್ಳಬಹುದು. ಆಟದ ಕಡೆ ಗಮನ ಹರಿದು ಊಟದಲ್ಲಿ ತೊಡಗದೇ ಇರಬಹುದು. ಮಕ್ಕಳು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನು ತಾಯಂದಿರು ತಾವೇ ನಿರ್ಧರಿಸದೆ ಅದನ್ನು ಅವರ ಆಯ್ಕೆಗೇ ಬಿಡಬೇಕು. ಒಳ್ಳೆಯ ವಾತಾವರಣದಲ್ಲಿ, ನಿರ್ದಿಷ್ಟ ಸಮಯದಲ್ಲಿ ಮಕ್ಕಳಿಗೆ ಏನಿಷ್ಟವೋ ಅದೇ ಆಹಾರವನ್ನು ಕೊಡುವುದರಿಂದ, ಹಟಮಾರಿತನ ಕಡಿಮೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.

ಮಕ್ಕಳಿಗೆ ಕತೆ ಹೇಳುತ್ತಾ, ತಾವೂ ಜೊತೆಯಲ್ಲಿ ಊಟ ಸವಿಯುತ್ತಾ ಕೈತುತ್ತು ನೀಡಿದರೆ ಅವಕ್ಕೆ ಊಟದ ಆಕರ್ಷಣೆ ಜಾಸ್ತಿಯಾಗಿ ಮೊದಲಿಗಿಂತ ಹೆಚ್ಚು ಆಹಾರ ಸೇವಿಸುತ್ತವೆ. ಒಮ್ಮೆಲೇ ಹೆಚ್ಚು ಉಣ್ಣಿಸುವುದಕ್ಕಿಂತ ಚಿಕ್ಕ ಪ್ರಮಾಣದಲ್ಲಿ ಹಲವು ಬಾರಿ ‘ಊಟವನ್ನು ಒಂದು ಆಟದಂತೆ’ ರೂಢಿಸುವುದು ಉತ್ತಮ. ಮಕ್ಕಳಿಗೆ ಪೌಷ್ಟಿಕ ಆಹಾರದ ಉಪಯೋಗ ಮತ್ತು ಜಂಕ್‌ಫುಡ್‌ಗಳ ದುಷ್ಪರಿಣಾಮದ ಬಗೆಗೆ ತಿಳಿಹೇಳಬೇಕು. ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಹಾಗೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವ ಶಕ್ತಿ ದೊಡ್ಡವರಿಗಿಂತ ಮಕ್ಕಳಲ್ಲೇ ಹೆಚ್ಚು.

ಯಾವುದೇ ಆಹಾರ ತಿನ್ನಲು ಮಕ್ಕಳಿಗೆ ಒತ್ತಾಯ ಕೂಡದು. ಮೊದಲೇ ಕಲಸಿಟ್ಟ ಆಹಾರವನ್ನು ಮುಗಿಸಿಯೇ ಮೇಲೇಳಬೇಕು ಎಂದು ಒತ್ತಡ ಹೇರುವುದೂ ತಪ್ಪು. ತಮಗೆ ಬೇಕಾದಷ್ಟು ತಿನ್ನುವ ಸ್ವಾತಂತ್ರ್ಯ ಅವರಿಗೆ ಇರಲಿ. ಎರಡು ಊಟದ ಮಧ್ಯೆ ಇತರ ಆಹಾರಗಳ ಮೂಲಕ ಸೇವಿಸುವ ಕ್ಯಾಲೊರಿಯನ್ನು ಕಡಿಮೆ ಮಾಡಬೇಕು. ಇದು ಅವರಿಗೆ ಊಟ ಸೇರುವಂತೆ ಮಾಡಲು ಇರುವ ಉತ್ತಮ ಮಾರ್ಗ.

ಮಲಮೂತ್ರ ವಿಸರ್ಜನೆಯಲ್ಲಿ ಶಿಸ್ತು
ಅತಿ ಚಿಕ್ಕ ಮಕ್ಕಳಲ್ಲಿ ಮಲಮೂತ್ರ ವಿಸರ್ಜನೆಯು ಪಕ್ವವಾಗುವ ಮೊದಲೇ ಶಿಸ್ತು ಹೇರುವುದರಿಂದ ಮಕ್ಕಳು ಹಾಗೂ ಪೋಷಕರ ನಡುವೆ ಅನವಶ್ಯಕ ಹೋರಾಟ ಏರ್ಪಡುತ್ತದೆ. ಎರಡು ವರ್ಷಗಳ ನಂತರ ಶಿಸ್ತು ಕ್ರಮ ತಿಳಿಸಿಕೊಡುವುದು ಅಪೇಕ್ಷಣೀಯ. ಎರಡರ ವಯಸ್ಸಿನಲ್ಲಿ ಮಕ್ಕಳು ಮೂತ್ರಚೀಲ ತುಂಬಿದ ಹಾಗೂ ಮಲವಿಸರ್ಜನಾ ಒತ್ತಡವನ್ನು ಗುರುತಿಸಿ ಅದನ್ನು ಪಾಲಕರಿಗೆ ಹೇಳುವ ಸಾಮರ್ಥ್ಯ ಹೊಂದಿರುತ್ತಾರೆ.

ಶೌಚಾಲಯದಲ್ಲಿ ಶೌಚ ಮಾಡುವುದನ್ನು ಪ್ರಾರಂಭದಲ್ಲಿ ನಿರಾಕರಿಸುವ ಮಕ್ಕಳಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಪೋಷಕರು ಅನಗತ್ಯ ಆತಂಕಕ್ಕೆ ಒಳಗಾಗಿ ಮಗುವಿನ ಮೇಲೆ ಒತ್ತಡ ಹೇರಲು ಪ್ರಾರಂಭಿಸುತ್ತಾರೆ. ಇದು ತಪ್ಪು. ತಕ್ಷಣ ಶೌಚಾಲಯದಲ್ಲಿ ಕೂಡಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸ್ವಲ್ಪ ದಿನ ತಡೆದು ನಂತರ ಮತ್ತೆ ಹೊಸದಾಗಿ ಶುರು ಮಾಡಬೇಕು. ಪಾಲಕರು ನಿಶ್ಚಿಂತೆಯಿಂದ,  ಸಕಾರಾತ್ಮಕವಾಗಿ ಮಕ್ಕಳನ್ನು ಪ್ರೋತ್ಸಾಹಿಸಿ, ಪ್ರಶಂಸಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಹಾಸಿಗೆಯಲ್ಲಿ ಮೂತ್ರ (ENURESIS)
ನಾಲ್ಕು ವರ್ಷದ ನಂತರ ಮಕ್ಕಳು ಹಗಲಿನಲ್ಲಿ ಮೂತ್ರ ತಡೆಯಲಾಗದೆ ಬಟ್ಟೆಯಲ್ಲಿ ವಿಸರ್ಜಿಸಿಕೊಂಡರೆ ಅಥವಾ 6 ವರ್ಷದ ನಂತರ ರಾತ್ರಿ ವೇಳೆ ಹಾಸಿಗೆ ಒದ್ದೆ ಮಾಡಿಕೊಂಡರೆ, ಮೂತ್ರ ವಿಸರ್ಜನೆಯಲ್ಲಿ ಹಿಡಿತ ಸಾಧಿಸಿದ 3 ತಿಂಗಳ ನಂತರವೂ ಬಟ್ಟೆ ಹಸಿ ಮಾಡಿಕೊಂಡರೆ ವೈದ್ಯಕೀಯ ಭಾಷೆಯಲ್ಲಿ ಅದನ್ನು ‘ಎನುರಿಸಿಸ್‌’ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ 5 ವರ್ಷದೊಳಗಿನ ಮಕ್ಕಳು ಮೂತ್ರ ವಿಸರ್ಜನೆಯಲ್ಲಿ ಹಿಡಿತ ಸಾಧಿಸುತ್ತಾರೆ. ಬಟ್ಟೆ ಒದ್ದೆ ಮಾಡಿಕೊಳ್ಳುವವರಲ್ಲಿ ಶೇ 5ರಷ್ಟು ಮಕ್ಕಳು ಇತರ ರೋಗಗಳಿಂದ ಬಳಲುತ್ತಿರುತ್ತಾರೆ.  ಉಳಿದವರಲ್ಲಿ ವಂಶವಾಹಿ ಗುಣಗಳು, ಮಾನಸಿಕ ಒತ್ತಡ ಮತ್ತು ಸಾಮಾನ್ಯ ವರ್ತನೆಯಲ್ಲಿನ ಬದಲಾವಣೆಗಳಿಂದ ಈ ತೊಂದರೆ ಕಂಡುಬರುತ್ತದೆ.

6 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಕಾಲಾಂತರದಲ್ಲಿ ತನ್ನಷ್ಟಕ್ಕೆ ತಾನೇ ಈ ಲಕ್ಷಣಗಳು ಸರಿಹೋಗುತ್ತವೆ. ಹಾಸಿಗೆ ಮತ್ತು ಬಟ್ಟೆಯಲ್ಲಿ ಮೂತ್ರ ವಿಸರ್ಜಿಸುವುದನ್ನು ಸಹಿಸಲು ಪಾಲಕರಿಗೆ  ಸಾಧ್ಯವಾಗದಿದ್ದರೆ ಅಥವಾ ಅದರಿಂದ ಮಕ್ಕಳಲ್ಲಿ ಒತ್ತಡ, ಕೀಳರಿಮೆ ಕಾಣಿಸಿಕೊಂಡರೆ ಅದನ್ನು ಸಕಾರಾತ್ಮಕವಾಗಿ ಹೀಗೆ ಪರಿಹರಿಸಿಕೊಳ್ಳಬಹುದು–

* ಮಕ್ಕಳು ಒದ್ದೆ ಮಾಡಿಕೊಂಡ ರಾತ್ರಿ ಹಾಗೂ ಮಾಡಿಕೊಳ್ಳದಿರುವ ರಾತ್ರಿಯನ್ನು   ದಿನಚರಿ ಪುಸ್ತಕದಲ್ಲಿ ಗುರುತು ಮಾಡಿಕೊಳ್ಳಬೇಕು.
* ಮಲಗುವ ಮುನ್ನ ಮೂತ್ರ ವಿಸರ್ಜಿಸಿ ಬಂದು ಮಲಗುವ ರೂಢಿ ಬೆಳೆಸಬೇಕು.
* ತಮ್ಮ ಹಸಿ ಬಟ್ಟೆ– ಹಾಸಿಗೆಯನ್ನು ಮಕ್ಕಳು ತಾವೇ ಬದಲಿಸಬೇಕು.
* ಸಂಜೆ ಹಾಗೂ ರಾತ್ರಿ ನೀರು, ಕಾಫಿ, ಚಹಾ ಕುಡಿಯವುದನ್ನು ಕಡಿಮೆ ಮಾಡಬೇಕು.
* ಹಾಸಿಗೆಯಲ್ಲಿ ಮೂತ್ರ ಮಾಡದ ದಿನ ಮಕ್ಕಳನ್ನು ಹೊಗಳಿ/ ಉಡುಗೊರೆ ಕೊಟ್ಟು ಪ್ರಶಂಸಿಸಿ ಖುಷಿಪಡಿಸಿದರೆ, ಮತ್ತೆ ಮೂತ್ರ ವಿಸರ್ಜಿಸದಂತೆ ತಮ್ಮನ್ನು ನಿಯಂತ್ರಿಸಿಕೊಳ್ಳಲು ಅವರು ಪ್ರಯತ್ನಿಸುತ್ತಾರೆ.

ಮೇಲಿನ ಪ್ರಯತ್ನಗಳು ಫಲಕಾರಿಯಾಗದಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.ಪ್ರತಿದಿನ ಮೂತ್ರ ಮಾಡಿಕೊಳ್ಳುವ ಸಮಯಕ್ಕಿಂತ ಮೊದಲು ಮಗುವನ್ನು ಪಾಲಕರು  ಮೂತ್ರ ವಿಸರ್ಜಿಸಲು ಕರೆದೊಯ್ಯಬೇಕು.

ಹಟಮಾರಿತನ: ಒಂದೂವರೆ ವರ್ಷದಲ್ಲಿ ಮಕ್ಕಳ ಬೆಳವಣಿಗೆ ಆದಂತೆಲ್ಲ ನಕಾರಾತ್ಮಕತೆಯೂ ಬೆಳೆಯುತ್ತದೆ. ಹಿರಿಯರು ಹೇಳಿದ್ದಕ್ಕೆ ತದ್ವಿರುದ್ಧವಾದ ಉತ್ತರ ಕೊಡುವುದು, ತದ್ವಿರುದ್ಧ ಕೆಲಸ ಮಾಡುವುದು, ಬಯಸಿದ್ದು ಸಿಗದಿದ್ದಾಗ, ಅಂದುಕೊಂಡದ್ದು ನಡೆಯದಿದ್ದಾಗ ಆತಂಕದಿಂದ ಕೋಪಗೊಳ್ಳುವುದು,  ಕಚ್ಚುವುದು, ಅಳುವುದು, ತುಳಿಯುವುದು, ತಳ್ಳುವುದು, ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವುದರ ಮೂಲಕ ಹಟಮಾರಿತನವನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ.
ನಕಾರಾತ್ಮಕತೆಯನ್ನು ತಹಬಂದಿಗೆ ತಂದುಕೊಳ್ಳುವುದನ್ನು 8–6 ವರ್ಷಗಳಲ್ಲಿ ಕಲಿತುಕೊಳ್ಳುತ್ತಾರೆ. ನಂತರ ಹಟಮಾರಿತನವೂ ಕಡಿಮೆಯಾಗುತ್ತಾ ಹೋಗುತ್ತದೆ.

ಮಕ್ಕಳು ಸಿಟ್ಟು ಮಾಡಿಕೊಳ್ಳುವ ಸಂದರ್ಭಗಳನ್ನು ಪಟ್ಟಿ ಮಾಡಿ ಅದಕ್ಕೆ ಆದಷ್ಟೂ ತಡೆ ಒಡ್ಡಬೇಕು. ಉದಾಹರಣೆಗೆ ಮಗುವನ್ನು ನೆಂಟರ ಮನೆಗೆ ಕರೆದೊಯ್ಯುವಾಗ ಬರುವುದಿಲ್ಲ ಎಂದು ಹಟ ಮಾಡಿದರೆ, ಇಷ್ಟವಾದ ತಿಂಡಿ ಕೊಡಿಸಿ ಆಮೇಲೆ ಕರೆದೊಯ್ಯುತ್ತೇವೆ ಎಂದರೆ ಹಟ ಕಡಿಮೆಯಾದೀತು. ಆದರೆ, ಅದನ್ನೇ ಲಾಭದಾಯಕವಾಗಿ ಮಾಡಿಕೊಳ್ಳದಂತೆ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಹಟ ಮಾಡಿದಾಗ ಮಗುವೊಂದೇ ಶಾಂತ ಸ್ಥಳದಲ್ಲಿ ಕೆಲವು ನಿಮಿಷ ಕಳೆಯುವಂತೆ ಮಾಡಬೇಕು. ಅದಕ್ಕಿರುವ ಕಾರಣವನ್ನು ಸರಿಯಾಗಿ ತಿಳಿ ಹೇಳಬೇಕು. ನಂತರ ಮಗುವನ್ನು ಪ್ರೀತಿಯಿಂದ ಮನೆಯವರೆಲ್ಲ ಸೇರಿ ಬರಮಾಡಿಕೊಳ್ಳಬೇಕು.

ಬೆರಳು ಚೀಪುವಿಕೆ: ಒಂದು ವರ್ಷದೊಳಗಿನ ಮಕ್ಕಳಲ್ಲಿ ಇದು ಸಾಮಾನ್ಯ. ಇದು ನಾಲ್ಕೈದು ವರ್ಷದ ನಂತರವೂ ಮುಂದುವರಿದರೆ ಮಕ್ಕಳು ಬೆರಳು ಚೀಪದಂತೆ ಪಾಲಕರು ಮೃದುವಾಗಿ ಪ್ರಚೋದಿಸಬೇಕು. ಮಕ್ಕಳು ತಾವಾಗಿಯೇ ಈ ಅಭ್ಯಾಸ ನಿಲ್ಲಿಸಲು ಪ್ರಯತ್ನಿಸಿದರೆ ಪ್ರಶಂಸಿಸಿ ಪ್ರೋತ್ಸಾಹಿಸಬೇಕು. ಬೆರಳಿಗೆ ದ್ರವಗಳನ್ನು ಹಚ್ಚುವುದರಿಂದಲೂ ಈ ಅಭ್ಯಾಸಕ್ಕೆ ಕಡಿವಾಣ ಹಾಕಬಹುದು.

ಹಲ್ಲು ಮಸೆಯುವುದು (BRUXISM): ಹಗಲಿನಲ್ಲಿ ಆತಂಕದಿಂದ ಬಳಲುವ ಮಕ್ಕಳು, ರಾತ್ರಿ ನಿದ್ರೆಯಲ್ಲಿ ಹಲ್ಲು ಮಸೆಯುವುದನ್ನು ಕಾಣುತ್ತೇವೆ. ಬಹುಕಾಲ ಹೀಗೇ ನಡೆದರೆ, ದವಡೆ ಮತ್ತು ಮುಖದ ಸ್ನಾಯುಗಳಲ್ಲಿ ನೋವು ಕಾಣಿಸಿಕೊಂಡು, ಮಕ್ಕಳ ದಂತಪಂಕ್ತಿ ವಕ್ರವಾಗುವ ಸಾಧ್ಯತೆ ಇರುತ್ತದೆ. ಪಾಲಕರು ತಮ್ಮ ಮಕ್ಕಳೊಂದಿಗೆ ಕುಳಿತು ಅವರ ಭಯ, ಆತಂಕಗಳನ್ನು ಪರಿಹರಿಸಲು ಯತ್ನಿಸಬೇಕು. ಮಗು ಮಲಗುವ ಮುನ್ನ ಕತೆ ಹೇಳಿ ಅಥವಾ ಲಾಲಿ ಹಾಡುವುದರಿಂದ ಅವರ ಆತಂಕವನ್ನು ಕಡಿಮೆ ಮಾಡಬಹುದು.

ಒಟ್ಟಾರೆ, ಮಕ್ಕಳ ಇಂತಹ ನಡವಳಿಕೆ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ, ಸಂದರ್ಭಕ್ಕೆ ತಕ್ಕಂತೆ ವಿಶೇಷ ಕಾಳಜಿ ವಹಿಸಿ, ಸೂಕ್ತ ದಂಡನೆ ಅಥವಾ ವರ್ತನಾ ಚಿಕಿತ್ಸೆಯ ಮಾರ್ಗ ಆಯ್ದುಕೊಂಡರೆ ಮಕ್ಕಳ ಆರೋಗ್ಯವೂ ಸುಧಾರಿಸುತ್ತದೆ ಸ್ವಸ್ಥ ಸಮಾಜವೂ ನಿರ್ಮಾಣವಾಗುತ್ತದೆ.

ದೈಹಿಕ ದಂಡನೆ ಬೇಡ

ಆರೋಗ್ಯವಂತ ಶಿಸ್ತಿನ ಮಕ್ಕಳನ್ನು ತಯಾರು ಮಾಡುವಲ್ಲಿ ಪಾಲಕರ ಆಸಕ್ತಿ, ಸಾಮರ್ಥ್ಯ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳ ಮಾತು, ಭಾಷೆ ಮತ್ತು ನಡವಳಿಕೆಯನ್ನು ತಿದ್ದಿ, ಮೂರ್ತ ರೂಪ ಕೊಟ್ಟರೆ ಮಗುವನ್ನು ಶಿಸ್ತಿನ ಸಿಪಾಯಿ ಮಾಡಬಹುದು.

ಮಗುವಿನ ಅಶಿಸ್ತು, ಕೆಟ್ಟ ವರ್ತನೆಗಳನ್ನು ಎಂದೂ ಬೆಳೆಯಲು ಬಿಡಬಾರದು. ತಪ್ಪು ನಡವಳಿಕೆ ಕಂಡಾಗ ಸವಲತ್ತುಗಳನ್ನು ಕಡಿತಗೊಳಿಸಿ ಶಿಕ್ಷಿಸಬೇಕು. ಉದಾಹರಣೆಗೆ ಅವರ ನೆಚ್ಚಿನ ಟಿ.ವಿ. ಕಾರ್ಯಕ್ರಮ ನೋಡಲು ಬಿಡಬಾರದು ಅಥವಾ ಒಂದು ದಿನದ ಮಟ್ಟಿಗೆ ಸ್ನೇಹಿತರೊಂದಿಗೆ ಆಟವಾಡದಂತೆ ತಡೆಯಬಹುದು.

ಆದರೆ, ಮಕ್ಕಳನ್ನು ದೈಹಿಕವಾಗಿ ದಂಡಿಸುವುದರಿಂದ ದುಷ್ಪರಿಣಾಮಗಳೇ ಹೆಚ್ಚು. ಅಲ್ಲದೆ ಇದರಿಂದ ಮಕ್ಕಳಿಗೆ ದೈಹಿಕ ದಂಡನೆ ಅಥವಾ ವ್ಯಗ್ರತನದಿಂದ ಬೇಕಾದ್ದನ್ನು ಪಡೆಯಬಹುದೆಂಬ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ.
ಎಚ್ಚರ... ಉಸಿರು ಬಿಗಿ ಹಿಡಿದಾರು

ಸಿಟ್ಟು ಬಂದಾಗ, ನೋವಾದಾಗ ಕೆಲವು ಮಕ್ಕಳು ಉಸಿರುಗಟ್ಟಿ ಅಳುವುದನ್ನು  ಕಾಣುತ್ತೇವೆ. ಇದರಿಂದ ಅವರ ಮೈ ನೀಲಿಗಟ್ಟಿ, ಪ್ರಜ್ಞೆ  ಕಳೆದುಕೊಳ್ಳಲೂಬಹುದು. ಕೆಲವೊಮ್ಮೆ ಫಿಟ್ಸ ಕೂಡ ಕಾಣಿಸಿಕೊಳ್ಳಬಹುದು. 2 ವರ್ಷದ ಆಸುಪಾಸಿನಲ್ಲಿ ಇದು ಸಾಮಾನ್ಯ. 5 ವರ್ಷದ ನಂತರ ಕ್ರಮೇಣ ಕಡಿಮೆಯಾಗುತ್ತದೆ.

ಕೆಲವು ಪೋಷಕರು ಮತ್ತು ಅಜ್ಜ– ಅಜ್ಜಿ ಮಕ್ಕಳನ್ನು ಅತಿಯಾದ ಮುದ್ದಿನಲ್ಲಿ ಬೆಳೆಸಿ ಅವರ ಆಸೆಗಳನ್ನೆಲ್ಲ ಹಿಂದುಮುಂದು ನೋಡದೇ ಈಡೇರಿಸುತ್ತಾ ಬರುತ್ತಾರೆ.  ಎಂದಾದರೊಮ್ಮೆ ಅದನ್ನು ನಿರಾಕರಿಸಿದರೆ, ದೈಹಿಕವಾಗಿ ದಂಡಿಸಿದರೆ, ಸಿಟ್ಟು ಬರುವಂತೆ ಹಿರಿಯರು ನಡೆಸಿಕೊಂಡರೆ ಅಂತಹ ಸಂದರ್ಭದಲ್ಲಿ ಈ ಮಕ್ಕಳು ಹೀಗೆ ಉಸಿರು ಬಿಗಿ ಹಿಡಿದು ಅಳುತ್ತಾರೆ.
ಮೇಲಿಂದ ಮೇಲೆ ಹೀಗೆ ಸಂಭವಿಸಿದಾಗ ಪಾಲಕರು ಸ್ಥಿರ ನಡವಳಿಕೆಯನ್ನು ಪ್ರದರ್ಶಿಸಬೇಕು. ಉಸಿರು ಬಿಗಿ ಹಿಡಿದಾಗ ಮಗುವನ್ನು ಚಿವುಟಬೇಕು. ಇದರಿಂದ ನಿಂತ ಉಸಿರು ಮತ್ತೆ ಪ್ರಾರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT