ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮನೆಯಲ್ಲಿ ಸ್ಮಶಾನ ಮೌನ

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಈ ಘಟನೆ ನಡೆದು ಹತ್ತು ವರ್ಷಗಳಾಯಿತಾದರೂ ನೆನೆದರೆ ಈಗಲೂ ಎದೆ ಝಲ್ಲೆನ್ನುತ್ತದೆ. ಆ ದಿನ ಊರಲ್ಲಿ ಎಲ್ಲರ ಬಾಯಲ್ಲೂ ಅದೇ ಸುದ್ದಿ. ಹೀಗಾಗಬಾರದಿತ್ತು. ಇಂಥಾ ಮಕ್ಕಳಿರೋದಕ್ಕಿಂತ ಮಕ್ಕಳಿಲ್ಲ ಅನ್ನೋ ಕೊರಗೇ ಎಷ್ಟೊ ವಾಸಿ, ಅಂತ ಪಕ್ಕದ್ಮನೆ ಆಂಟಿ ಆಕ್ರೋಶದಿಂದ ಹೇಳುತ್ತಿದ್ದರು. ನಾನು ಗಾಬರಿಯಿಂದ ಕೇಳಿದೆ. ಯಾಕೆ? ಏನಾಯ್ತು? ‘ಅದೇರಿ ನಾಳೆ ಮದ್ವೆ ಇತ್ತಲ್ಲ, ಛತ್ರಕ್ಕೆ ಬೀಗರೆಲ್ಲ ಬಂದಾಗಿತ್ತಂತೆ. ಆದ್ರೆ ಹುಡುಗಿ ಈ ಮದುವೆ ನನಗಿಷ್ಟ ಇಲ್ಲ. ನಾನು ಪ್ರೀತಿಸಿದ ಹುಡುಗನ ಜೊತೆ ಹೋಗ್ತಾ ಇದೀನಿ ಅಂತ ಪತ್ರ ಬರೆದಿಟ್ಟು ಓಡಿ ಹೋಗಿದ್ದಾಳಂತೆ’.

ಅಯ್ಯೋ, ಹೌದಾ! ಛೇ! ಬೀಗರೆದುರು ಅವಮಾನ ಅಲ್ವಾ, ಅಂದೆ. ಅವಮಾನದ ಮನೆ ಹಾಳಾಯ್ತು. ಇವಳು ಮಾಡಿರೋ ಘನಂದಾರಿ ಕೆಲಸದಿಂದ ಎಂಥ ಅನಾಹುತ ಆಗಿದೆ ಗೊತ್ತಾ? ಅವಳ ತಂದೆ ವಿಷಯ ತಿಳಿದು ಹೃದಯಾಘಾತ ಆಗಿ ತೀರಿ ಹೋದ್ರಂತೆ. ಅದನ್ನು ನೋಡಿ ಅವಳಮ್ಮ ಪ್ರಜ್ಞೆ ತಪ್ಪ ಅಸ್ಪತ್ರೆಲಿದ್ದಾರಂತೆ.

ಪಾಪ ಕಣ್ರಿ, ತುಂಬಾ ಒಳ್ಳೆ ಜನ. ಅವರಿಗೆ ಮಗುವಾಗಿದ್ದೆ ಮದುವೆಯಾಗಿ ಎಂಟು ವರ್ಷಗಳ ನಂತರ. ಇವಳೊಬ್ಬಳೆ ಮಗಳು. ಮಗಳ ಮೇಲೆ ಪ್ರಾಣನೇ ಇಟ್ಕೊಂಡಿದ್ರಂತೆ. ತುಂಬಾ ಸಂಪ್ರದಾಯಸ್ಥರಾದ್ರು ಸಹ ಮಗಳ ಯಾವ ಬೇಡಿಕೆಗೂ ಇಲ್ಲ ಅನ್ನದೆ ಅವಳ ಮೇಲೆ ನಂಬಿಕೆ ಇಟ್ಟು ಎಲ್ಲ ಸ್ವಾತಂತ್ರ್ಯನೂ ಕೊಟ್ಟಿದ್ರು.

ಅಪ್ಪನ ಆಸೆ, ಕನಸುಗಳ ಜೊತೆ ಅವರ ಜೀವನೆ ನುಂಗಿಬಿಟ್ಟ ರಾಕ್ಷಸಿ, ಎಂದು ಸಿಟ್ಟಿನಿಂದ. ಮನೆಯಲ್ಲಿ ತನಗೆ ಗಂಡು ಹುಡುಕುತ್ತಿರುವಾಗ್ಲೆ ಅಪ್ಪ, ಅಮ್ಮನ ಬಳಿ ತನ್ನ ಪ್ರೀತಿಯ ವಿಷಯ ಹೇಳಬಹುದಿತ್ತಲ್ಲ ಎಂದರು.

ಜೀವನದಲ್ಲಿ ಮದುವೆ ಪ್ರಮುಖ ಘಟ್ಟ. ಅದರಿಂದ ಎಲ್ಲರ ಮನಸ್ಸುಗಳಿಗೂ ನೆಮ್ಮದಿ ಸಿಗಬೇಕೆ ಹೊರತು ನೋವಲ್ಲ. ಮೆಚ್ಚಿದ ಹುಡುಗನಿಗೋಸ್ಕರ ಹೆತ್ತವರ ಪ್ರೀತಿಗೆ ಬೆಂಕಿ ಇಟ್ಟು ಅವರನ್ನು ಶಾಶ್ವತವಾಗಿ ಕಳೆದುಕೊಳ್ಳುವ ಧಾರುಣ ಘಟನೆಗೆ ಕಾರಣವಾಗುವ ಮಕ್ಕಳು ಇಂಥ ಪ್ರಕರಣಗಳಿಂದಾದರೂ ಪಾಠ ಕಲಿಯಬೇಕಲ್ಲವೇ?

ಬಾಂಧವ್ಯ ಇಬ್ಬಗೆಯದ್ದು, ಒಂದು ಕರುಳ ಬಳ್ಳಿಗೆ ಸಂಬಂಧಿಸಿದ್ದಾದರೆ ಮತ್ತೊಂದು ಹೃದಯಕ್ಕೆ ಸಂಬಂಧಿಸಿದ್ದು, ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿಚಾರಶಕ್ತಿ ಹೊಂದಿರುವ ಯುವಪೀಳಿಗೆ ಅವಸರಿಸಿ ನಿರ್ಧಾರ ತೆಗೆದುಕೊಳ್ಳದೆ ಯೋಚಿಸಿ ಹೆಜ್ಜೆ ಇಡುವುದು ಒಳಿತು.

ಭದ್ರತೆಯ ಬಾಂಧವ್ಯಕ್ಕೆ ಬೆನ್ನು ಕೊಟ್ಟು ಬಿಸಿರಕ್ತದ ದುಡುಕಿನ ನಿರ್ಧಾರದ ಬದುಕಿಗೆ ಮುಖ ಮಾಡುವ ಮುನ್ನ ಹೆತ್ತವರೊಡನೆ ಭಾವನೆಗಳನ್ನು ಹಂಚಿಕೊಂಡರೆ ಭವಿಷ್ಯದಲ್ಲಿ ಘಟಿಸುವ ಒಳಿತು ಕೆಡಕುಗಳಿಗೆ ಅವರು ಬೆನ್ನುಲುವಾಗಿ ಭಾಗಿಯಾಗುತ್ತಾರೆ. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT