ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯ ಮಾತೃಸಂಹಿತೆಯೇ ಸ್ವಾತಂತ್ರ್ಯ

Last Updated 12 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ದಿನವೂ ತನ್ನ ಸ್ವಾತಂತ್ರ್ಯದ ಬಗ್ಗೆಯೇ ಚಿಂತಿಸಬೇಕಾದ ಸ್ಥಿತಿಯಲ್ಲಿ ಮಹಿಳೆ ಇದ್ದಾಳೆ. ಆತ್ಮಗೌರವವನ್ನು ಕಾಪಾಡಿಕೊಳ್ಳುವುದೇ ಅವಳ ಪಾಲಿಗೆ ನಿಜವಾದ ಸ್ವಾತಂತ್ರ್ಯವಾಗಿದೆ. ಹಾಗಾದರೆ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿದೆಯೆ? ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಹೇಗೆ? ಇನ್ನೂ ದಕ್ಕದ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದು ಹೇಗೆ? ಇಂಥದೊಂದು ಚಿಂತನೆ ಈ  ಲೇಖನದ ಉದ್ದೇಶ...

ಸ್ತ್ರೀಯ ಸುತ್ತಮುತ್ತಲೇ ಅದೆಷ್ಟು ಶ್ರೀಮಂತ ಆಲಂಕಾರಿಕ ಹೆಸರುಗಳಿವೆ! ಮಹಿಳೆ, ತಾಯಿ, ತಂಗಿ, ಅತ್ತಿಗೆ, ಹೆಂಡತಿ – ಎಂದೆಲ್ಲಾ ಕುಟುಂಬದಲ್ಲಿ ಕರೆಸಿಕೊಳ್ಳುವಂತೆಯೇ, ಲಕ್ಷ್ಮಿ, ಸರಸ್ವತಿ, ದುರ್ಗೆ, ಕಾಳಿ, ಚಾಮುಂಡೇಶ್ವರಿ – ಎಂದೆಲ್ಲ ಪೂಜೆಗೆ ಕುಳಿತುಕೊಳ್ಳುವ ವೈಭವವೂ ಅವಳಿಗೇ ಮೀಸಲು. 

ಲಕ್ಷಾಂತರ ಮನೆಗಳಲ್ಲಿ, ಜನರಿಂದ ಪೂಜೆಗೆ ಅರ್ಹಳಾಗುವ ಸ್ತ್ರೀ ಅದೇ ಮನೆಗಳಲ್ಲಿ ಶೋಷಣೆಗೆ ಒಳಗಾಗುವುದು ಕೂಡ ಸೋಜಿಗವೇ!  ದೇವಿ, ಗೌರಿ ಎಂದು ಪೂಜಿಸಿ ಬಾಗಿನ ನೀಡುವ  ಮನೆಯಲ್ಲೇ ಅವಳನ್ನು ನಿಂದಿಸುವ ದೊಡ್ಡ ಪರಿಪಾಠವೂ ಬೆಳೆದುಕೊಂಡು ಬಂದಿದೆ. 

ಅವಳನ್ನು ಪೂಜಿಸುವವರೇ ಅವಳನ್ನು ಪತನದ ಮಾರ್ಗಕ್ಕೂ ಎಳೆದಿದ್ದಾರೆ.  ಇಂತಹ ವಿಪರ್ಯಾಸ. ವಿಪರೀತಗಳು ಒಂದು ಸಮಾಜದಲ್ಲಿ ಇವೆ ಎಂಬುದೇ ಒಂದು ವಿಸ್ಮಯ.  ನಾವೆಲ್ಲ ‘ನಮ್ಮದು ಸುಸಂಸ್ಕೃತ ಸಮಾಜ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. 

ಭಾರತಮಾತೆ ಹೆಣ್ಣು ಎಂದು ಹೇಳುವ ಭಾಷಣಗಳು ದೇಶದ ಮೂಲೆ ಮೂಲೆಯಲ್ಲೂ ತುಂಬಿ ತುಳುಕಾಡುತ್ತಿರುತ್ತವೆ.  ಆದರೆ ನಕ್ಷೆ, ಬಾವುಟ, ಪ್ರತಿಮೆ, ಚಿತ್ರಪಟ, ವಿಗ್ರಹಕ್ಕೆ ಸಲ್ಲುವ ಗೌರವವು ಜೀವಂತ ಹೆಣ್ಣಿಗೆ ದೊರಕುವುದೇ ಇಲ್ಲ.  ಇದು ಹೇಗೆ ಸಾಧ್ಯ? ಎಲ್ಲಿ ತಪ್ಪುತ್ತಿದ್ದೇವೆ?

ಸಮಾಜವೆಂದರೆ ಅನೇಕ ಸಮುದಾಯ, ಕುಟುಂಬಗಳಿಂದ ತುಂಬಿರುವ ಒಕ್ಕಲು.  ಅದು ಧರ್ಮ, ವಿಜ್ಞಾನ ಮತ್ತು ತತ್ತ್ವಗಳ ಒಕ್ಕೂಟ.  ಒಂದು ಸಮಾಜವು ನಾಗರಿಕ ಎಂದು ಕರೆಸಿಕೊಳ್ಳಲು ಸಾಧ್ಯವಾಗುವುದೇ ಅದರ ವೈಚಾರಿಕ , ವೈಜ್ಞಾನಿಕ ನಿಲುಮೆಗಳಿಂದ. 

ವಿಜ್ಞಾನ ಎಂದರೆ Chemistry, physics, Botony ... ಎಂಬ ಮೇಲುಸ್ತರದ ತಿಳಿವಳಿಕೆಯಲ್ಲಿಯೇ ನಿಂತುಬಿಟ್ಟ ಸಮಾಜವು ಅಧೋಮುಖ ಪ್ರಯಾಣದಲ್ಲಿ ಅತಿ ಶೀಘ್ರವಾಗಿ ಮುಂದುವರಿದುಬಿಡುತ್ತದೆ.  ಅಂತಹ ಸಮಾಜವು ನಾಗರಿಕ ಆಗಲು ಸರ್ವತೋಮುಖ ಪ್ರಯತ್ನಗಳ ಅನಿವಾರ್ಯತೆ ಇರುತ್ತದೆ.

ಹೊಸಕಾಲದ ಹೊಸ ಸೌಲಭ್ಯಗಳಾದ ಗೃಹೋಪಯೋಗಿ ಉಪಕರಣಗಳು, ಮತ್ತು ಮೊಬೈಲ್, ಕಂಪ್ಯೂಟರ್, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂತೃಪ್ತಳೆಂದು, ನಾಗರಿಕಳೆಂದು ಭಾವಿಸುವ ಹೆಣ್ಣುಮಕ್ಕಳು ಅಲ್ಲಿಯ ಧಾರಾವಾಹಿಗಳಲ್ಲಿ ಕ್ರೂರಿಯಂತೆ, ತಮಾಷೆಯ ವಸ್ತುವಿನಂತೆ ಮತ್ತು ಅಶ್ಲೀಲವಾಗಿ ಬಿಂಬಿತಗೊಳ್ಳುತ್ತಿರುವುದನ್ನು ನಿಟ್ಟುಸಿರಿನಿಂದಲೇ ನೋಡಬೇಕಾಗುತ್ತದೆ.  ಒಂದು ಸಮಾಜದ ಅವಿಭಾಜ್ಯ ಅಂಗವಾದ ಸ್ತ್ರೀಯನ್ನು, ಅದೇ ಸಮಾಜ ತಾನೇ ಅವಮಾನಿಸಿ ನಗುವುದನ್ನು ‘ನಾಗರಿಕ, ವೈಚಾರಿಕ, ವೈಜ್ಞಾನಿಕ’ ಎನ್ನಲಾದೀತೇ!

ಈಗ ಸುಧಾರಿತ ಸಮಾಜದಲ್ಲಿದ್ದಾಳೆ ಮಹಿಳೆ. ಏಕೆಂದರೆ ಅವಳಿಗೆ ಸಾಂವಿಧಾನಿಕ ಸ್ಥಾನಮಾನ ಹಕ್ಕುಗಳ ಸೌಲಭ್ಯವಿದೆ. ಶಿಕ್ಷಿತಳಾಗಿದ್ದಾಳೆ. ವಿಶೇಷ ಕಾನೂನಿನ ಸುರಕ್ಷತೆ ಇದೆ.  ಅವಳು ಉದ್ಯೋಗಸ್ಧೆ ಆಗುವುದರಿಂದ ಅನುಕೂಲಸ್ಥಳು. 

ಉದ್ದಿಮೆದಾರಳಾಗಿ ಬೆಳೆಯಲು ಅವಳಿಗೆ ವಿಪುಲ ಅವಕಾಶ. ಎಲ್ಲವೂ ಇದೆ.. ಆದರೂ ಸ್ವಾತಂತ್ರ್ಯಕ್ಕಾಗಿ ಅವಳ ಹೋರಾಟ ನಿಂತೇ ಇಲ್ಲ. ಏಕೆಂದರೆ ಅವಳು ಎಷ್ಟೇ ಪ್ರಗತಿ ಸಾಧಿಸಿದರೂ, ಸಮಾಜ ಏನೇ ಸೌಲಭ್ಯಗಳನ್ನು ನೀಡಿದರೂ ಅವೆಲ್ಲ ‘ಮೇಲುಸ್ತರದ’ ಅನುಕೂಲಗಳು. 

ಇದನ್ನು ಸಮಾಜ ಮತ್ತು ಅವಳು ಇಬ್ಬರೂ ಒಪ್ಪಿಕೊಳ್ಳಲೇಬೇಕು.  ವಾಸ್ತವದಲ್ಲಿ  ಅವಳಿಗೆ ಬೇಕಾಗಿರುವುದು ಸಮಾಜ ಮತ್ತು ಕುಟುಂಬದ ‘ಮಾನವೀಯ ಸ್ಪಂದನ ಮತ್ತು ಸ್ಥಾನ ಗೌರವ’. ಎಲ್ಲಿಯವರೆಗೆ ಇವು ಅವಳಿಗೆ ದಕ್ಕುವುದಿಲ್ಲವೋ ಅವಳು ಎಷ್ಟೇ ವಿದ್ಯಾವಂತೆ ಆಗಿರಲಿ, ಶ್ರೀಮಂತಳಾಗಿರಲಿ, ಉದ್ದಿಮೆದಾರಳಾಗಿರಲಿ.. ಅವಳು ತಾನು ಸ್ವತಂತ್ರೆ ಎಂದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಸ್ವಾತಂತ್ರ್ಯಎಂಬ ಶಬ್ದವು ಪ್ರಾರಂಭವಾದುದೇ ‘ಆತ್ಮಗೌರವ’ಕ್ಕಾಗಿ.

ಬ್ರಿಟಿಷರು ಭಾರತವನ್ನು ಆಳಿದಾಗ ಸಮಸ್ಯೆ ಇದ್ದುದು  ಭಾರತೀಯರ ‘ಆತ್ಮಗೌರವ’ ದ ಅಂಶದಲ್ಲಿ. ಜನರಿಗೆ ದಬ್ಬಾಳಿಕೆ ಎಂಬುದು ವ್ಯಕ್ತಿಯ ಆತ್ಮಗೌರವಕ್ಕೆ ವಿರುದ್ಧವಾಗಿ ಎಂಬ ಅಂಶ ಅರಿವಾಗುವವರೆಗೂ ಸಮಸ್ಯೆಗೆ ಉತ್ತರ ದೊರೆಯಲಿಲ್ಲ.

ಅಲ್ಲಿಯವರೆಗೆ ಸ್ವಾತಂತ್ರ್ಯದ ಕಲ್ಪನೆ ಅಸ್ಪಷ್ಟವಾಗಿತ್ತು.   ಪ್ರತಿರೋಧಗಳು ನಡೆದವೇ ಹೊರತು, ಆ ಎಲ್ಲ ಕ್ರಿಯೆಗಳ ಹಿಂದೆ ಇರುವುದು ‘ಆತ್ಮಗೌರವಕ್ಕೆ ಚ್ಯುತಿ ತರುವ ಮನೋಭಾವ’ ಎಂಬುದರ ಅರಿವು ಗಾಂಧೀಜಿಯವರ ಪ್ರವೇಶದಿಂದ ಸ್ಪಷ್ಟವಾಯಿತು.

ಈ ದಬ್ಬಾಳಿಕೆ ಮತ್ತು ಆತ್ಮಗೌರವದ ಬಿಕ್ಕಟ್ಟುಗಳು ಬೇರೆ ಬೇರೆ ರೂಪದಲ್ಲಿ ಇಂದಿಗೂ ಮುಂದುವರಿದಿವೆ. ಹಾಗಾಗಿಯೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಹೋರಾಟವು ಮತ್ತೆ ಮತ್ತೆ ನಡೆಯುತ್ತಲೇ ಇದೆ. ಇಂತಹ ದಬ್ಬಾಳಿಕೆ ಹೊರಗಿನಿಂದ ಮಾತ್ರ ಬರುವುದಿಲ್ಲ... ಒಳಗೂ ಅದರ ವಾಸನೆಗಳು ಬಲವಾಗಿಯೇ ಇದೆ.  ಅದಕ್ಕಾಗಿ ಭಾರತವನ್ನು ‘ಸಹನಶೀಲ’ ರಾಷ್ಟ್ರ ಎಂದು ಗೌರವಿಸಿದರೆ.. ಇದನ್ನು ಒಪ್ಪಬೇಕೇ, ಬಿಡಬೇಕೇ.. ಜನತೆಯ ಜವಾಬ್ದಾರಿ ಅದು.

ಹೆಣ್ಣಿನ ಸ್ಥಿತಿಯೂ ಇದೇ ಆಗಿದೆ.  ಅವಳು ತಾನು ದಬ್ಬಾಳಿಕೆಗೆ ಒಳಗಾಗುವುದು ಒಂದು ಕಡೆ ಆದರೆ  ಇನ್ನೊಂದು ಕಡೆ ತಾನೇ ದಬ್ಬಾಳಿಕೆ ನಡೆಸಲು ಹಿಂಜರಿಯುವುದಿಲ್ಲ.  ಇದಕ್ಕೆ ಕಲಿತವರು, ಕಲಿಯದವರು ಎಂದೆಲ್ಲ ಪಟ್ಟಿಗಳ ಅಗತ್ಯವೇ ಇಲ್ಲ.

ಹಳ್ಳಿ ಇರಲಿ, ದಿಲ್ಲಿ ಇರಲಿ – ಅವಕಾಶ ದೊರೆತಾಗ ಶೋಷಿಸಲು ಅವಳೂ ಹಿಂಜರಿಯುವುದಿಲ್ಲ. ಹಾಗಾಗಿಯೇ ಅತ್ತೆ-ಸೊಸೆ, ಅತ್ತಿಗೆ- ನಾದಿನಿಯರ, ಓರಗಿತ್ತಿಯರ ನಡುವಿನ ಸೂಕ್ಷ್ಮ ವೈಮನಸ್ಯಗಳು ಸದಾಕಾಲ ಜೀವಂತವಾಗಿಯೇ ಇರುತ್ತವೆ. ಕೆಲವು ಕಡೆ ಬದ್ಧ ವೈರಿಗಳಂತೆ ಕೂಡ ನೋಡುವ ಮನೋಭಾವಗಳು ಕಂಡುಬರುತ್ತವೆ.

ಒಂದು ಕಡೆ ಸಬಲವಾಗಿ, ಸಶಕ್ತವಾಗಿ ಇಂತಹ ದಬ್ಬಾಳಿಕೆಯ ಹುನ್ನಾರಗಳನ್ನು ನಡೆಸುವ ಹೆಣ್ಣು ಮತ್ತೊಂದು ಕಡೆ ತಾನು ಶೋಷಿತಳಂತೆ, ಅಶಕ್ತಳಂತೆ ಪ್ರಕಟಿಸಿಕೊಳ್ಳುತ್ತಾಳೆ. ಈ ವೈರುಧ್ಯಗಳಿಂದ ಅವಳೇ ಮುಕ್ತಳಾಗಬೇಕು.

ಅದು ಅವಳದೇ ಜವಾಬ್ದಾರಿ. ಯಾವುದೇ ವ್ಯವಸ್ಥೆಯಲ್ಲಿ ಶೋಷಿತ ಹೆಣ್ಣು ಅದರ ವೈಪರೀತ್ಯಗಳ ವಿರುದ್ಧ ಹೋರಾಡ ತೊಡಗಿದರೆ ಅವಳು ಎಂದೂ ಒಂಟಿಯೇ ಆಗಿ ಬಿಡುತ್ತಾಳೆ. ಅದು ಕುಟುಂಬವೇ ಇರಬಹುದು, ಸಮಾಜ, ದೇಶವೂ ಇರಬಹುದು.

ಈ ಒಂಟಿತನ ಅವಳಿಗೆ ಸೋತೆ ಎಂಬ ಭಾವವನ್ನು ತಂದು ಕೊಡುತ್ತದೆ. ಮತ್ತು ಅವಳನ್ನು ಕುಟುಂಬವೋ, ಸಮಾಜವೋ ಹೊರಗೆ ಹಾಕಿ ...‘ನೀನು ಅತಂತ್ರಳು’ ಎಂಬ ಭಾವನೆಯನ್ನು ಬಿತ್ತಿ ಆನಂದಿಸಬಹುದು. ಆದರೆ ಸೋಲಿರುವುದು ಅವಳಲ್ಲಿ ಅಲ್ಲ. ಬದಲಾಗಿ ಆ ದಬ್ಬಾಳಿಕೆಯ ಮನೋಭಾವ ತೋರಿದ ಕುಟುಂಬ, ಸಮಾಜ ಅದರ ವ್ಯವಸ್ಥೆಯು ಅಧೋಗತಿಯತ್ತ ಸಾಗುತ್ತಿರುತ್ತದೆ.

ಇತ್ತೀಚೆಗೆ ಮಣಿಪುರದ ಇರೋಮ್ ಶರ್ಮಿಳಾಳ  ಹದಿನಾರು ವರ್ಷಗಳ ಉಪವಾಸ ಸೋಲಿನಲ್ಲಿ ಮುಗಿಯಿತು ಎಂದು ಯಾರೂ ಭಾವಿಸುವ ಅಗತ್ಯವಿಲ್ಲ.  ಏಕೆಂದರೆ ಒಳಿತನ್ನು ಕಟ್ಟಿಕೊಳ್ಳುವ ಮನಃಸ್ಥಿತಿಯ ಹೆಣ್ಣಿಗೆ ಆತ್ಮಶಕ್ತಿಯು ತಾನಾಗೇ ಒಳಿತಾದ ವಲಯವನ್ನು ಕಟ್ಟಿಕೊಡುತ್ತದೆ. ಅದು ಅವಳ ಸಾರ್ವಕಾಲಿಕ ಗೆಲುವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಮುಖ್ಯವಾಗಿ ಹೆಣ್ಣಿಗೆ ಬೇಕಿರುವುದು ಸರಿಯಾದ ಶಿಕ್ಷಣ.  ಅದು ಅವಳ ಸಬಲತೆ ಮತ್ತು ದುರ್ಬಲತೆ ಎರಡನ್ನೂ ಅವಳಿಗೆ ತಿಳಿಸಿ ಕೊಡಬೇಕು. ‘ಸ್ತ್ರೀ’ ಪ್ರಕೃತಿಯಂತೆ ಎನ್ನುವುದು ಸುಲಭ.  ಆದರೆ ಅವಳಲ್ಲಿ ಪ್ರಕೃತಿಯಲ್ಲಿ ಇರುವ ಸಕಲ ಸೂತ್ರಗಳೂ, ನಿಯಮಗಳೂ ಇವೆ ಎಂಬುದನ್ನು ಅರಿಯುವುದು ಸುಲಭವಲ್ಲ.

ಗರ್ಭವನ್ನು ಹೊತ್ತ ಹೆಣ್ಣಿಗೆ.. ಯಾವುದೇ ಆಕಾರವಿಲ್ಲದ ಅಂಶಕ್ಕೆ ಸರಿಯಾದ ಆಕಾರ ನೀಡುವ ಸಾಮರ್ಥ್ಯವನ್ನು ಅವಳ ಜೈವಿಕತೆಯೇ ನೀಡಿದೆ.  ಕಣ್ಣು, ಮೂಗು, ಬಾಯಿಯಿಂದ, ಕೂದಲು, ಉಗುರುಗಳವರೆಗೂ, ದೇಹದ ಪ್ರತಿಯೊಂದು ವ್ಯವಸ್ಥೆಯೂ, ಉಸಿರಾಟ, ರಕ್ತಪರಿಚಲನೆ– ಎಲ್ಲ ಅಂಗಗಳನ್ನು ಹುಟ್ಟುಹಾಕುವ, ಬೆಳೆಸುವ, ಕಾರ್ಯ ನಿರ್ವಹಿಸುವ, ಕೊನೆಗೆ ಆ ಮಗುವಿಗೆ ಜೀವವನ್ನು ನೀಡುವಂತಹ ಉದಾತ್ತವಾದ ಕಾರ್ಯವನ್ನು ನಿಸರ್ಗವೇ ಅವಳಿಗೆ ಒಪ್ಪಿಸಿದೆ. ಇದನ್ನು ಅವಳೂ ಅರಿಯಬೇಕು, ಸಮಾಜವೂ ತಿಳಿಯಬೇಕು. 

ಹೆಣ್ಣು ಎಂದರೆ ರಕ್ಷಣೆ, ಜೀವಂತಿಕೆ ಮತ್ತು ಸಮಾಜದ ಉಸಿರು ಅವಳು. ಸ್ತ್ರೀಶೋಷಣೆ ಅವಳದೇ ದೌರ್ಬಲ್ಯ.  ಅವಳು ಅದನ್ನು ಮೆಟ್ಟಬೇಕು.  ಅವಳು ಶಕ್ತಿಹೀನಳಾಗುವುದೇ ಈ ನಿಟ್ಟಿನಲ್ಲಿ.  ಅದಕ್ಕೆ ಚಿಕಿತ್ಸೆಯನ್ನು ವ್ಯವಸ್ಥೆಯೇ ನೀಡಬೇಕು.

ಸಮಾಜದ ಔನ್ನತ್ಯ ಇರುವುದೇ ಇಂತಹ ಕಾರ್ಯಗಳಲ್ಲಿ.  ಪ್ರಕೃತಿಯನ್ನು ವಶಪಡಿಸಿಕೊಳ್ಳುತ್ತೇವೆ, ದಬ್ಬಾಳಿಕೆ ನಡೆಸುತ್ತೇವೆ ಎಂದು ಹೊರಟ ಯಾರೇ ಆಗಲಿ, ಗಂಡಾಗಲಿ, ಹೆಣ್ಣಾಗಲಿ ಎಂದೆಂದಿಗೂ ಸೋಲನ್ನೇ ಉಣ್ಣಬೇಕಾಗುತ್ತದೆ.

ತಾತ್ಕಾಲಿಕ, ಮೇಲುನೋಟದ ಗೆಲುವನ್ನು ಗೆಲುವು ಎಂದು ಭ್ರಮಿಸಿಕೊಳ್ಳುವವರಿಗೆ ಕಾಲವೇ ಉತ್ತರಿಸುತ್ತದೆ.  ಹೇಗೆ ಪ್ರಕೃತಿಯಲ್ಲಿ ಒಂದಾಗಿ ಬಾಳಬೇಕೋ ಹಾಗೆಯೇ ಹೆಣ್ಣಿನ ಜೊತೆಯಲ್ಲಿಯೂ ಒಂದಾಗಿ ಬಾಳಬೇಕಾದ ಜವಾಬ್ದಾರಿ ಗಂಡಿಗೂ, ಸಮಾಜಕ್ಕೂ, ಕುಟುಂಬಕ್ಕೂ ಇದೆ.  ಹೇಗೆ ಗಾಳಿ, ನೀರು ಜಗತ್ತಿಗೆ ಆಧಾರವೋ ಹಾಗೆಯೇ ಹೆಣ್ಣು ಸಮಾಜದ ಆಧಾರಸ್ತಂಭ.  ಸಮಾಜವು ಇಂತಹುದನ್ನು ಕಲಿಸುವ ವ್ಯವಸ್ಥೆಯನ್ನು ಬೆಳೆಸಬೇಕು. 

ಹೆಣ್ಣಿನ ಚಿಂತನೆಗಳು ಉನ್ನತವಾಗುತ್ತ ಹೋಗಬೇಕು.  ಅವಳು ಇನ್ನೂ ‘ನಾನೇ ಏಕೆ ಅಡುಗೆ ಮಾಡಬೇಕು? ನಾನೇ ಏಕೆ ಕಸ ಗುಡಿಸಬೇಕು?’ ಎಂಬ ಅಪ್ರಬುದ್ಧ ಚಿಂತನೆಗಳಿಂದ ಮೇಲೇರಬೇಕು.  ಏಕೆಂದರೆ ಶುಭ್ರತೆ, ಜೀವಚೈತನ್ಯ, ಅಂದ, ಅಲಂಕಾರ ಎಲ್ಲವೂ ಒಂದು ಗೃಹದ ಶೋಭೆಯನ್ನು ಹೆಚ್ಚಿಸುತ್ತವೆ.

ಅದನ್ನು ಎಲ್ಲರೂ ಅನುಭವಿಸುತ್ತಾರೆ ಹಾಗೂ ಅದು ಕುಟುಂಬಕ್ಕೆ ಹಿತಕಾರಿಯಾದ ನಡವಳಿಕೆ ಎಂಬುದನ್ನು ಅವಳೂ ಅರಿಯಬೇಕಿದೆ. ಸ್ವಾಭಿಮಾನ ಎಂಬ ಶಬ್ದವು ಅವಳಲ್ಲಿರುವ ಹಟ, ಅಹಂಕಾರಗಳನ್ನು ಬಲಪಡಿಸಿಕೊಳ್ಳುವ ತಂತ್ರವಷ್ಟೆ. ಪಕ್ವಚಿಂತನೆಗಳನ್ನು ಅವಳು ಅಳವಡಿಸಿಕೊಳ್ಳದೇ ಹೋದರೆ ಅವಳ ಚಿಂತನೆಗಳೇ ಅವಳನ್ನು ದಬ್ಬಾಳಿಕೆ ಮಾಡುತ್ತವೆ.

ಅದಕ್ಕೆ ಹೊರಗಿನವರ ಅಗತ್ಯವೇ ಬರುವುದಿಲ್ಲ. ತನಗೆ ತಾನೇ ಶೋಷಿತಳಾಗುತ್ತಾಳೆ, ಕೀಳರಿಮೆಯಿಂದ ನರಳುತ್ತಾಳೆ. ಕೊನೆಗೆ ತನ್ನ ಸುತ್ತಲೂ ಅಂತಹುದೇ ಚಿಂತನೆಯ ಅಲೆಗಳನ್ನು ಬಿತ್ತುತ್ತಾ ಹೋಗುತ್ತಾಳೆ.  ಅವಳು ಬದುಕನ್ನು ಸ್ಪರ್ಧೆ ಎಂದು ಸ್ವೀಕರಿಸದೇ, ಅದು ಅದ್ಭುತ ಕಾರ್ಯಕ್ಷೇತ್ರ ಎಂದು ಚಿಂತಿಸುವ ಅಗತ್ಯವಿದೆ.

ಹೆಣ್ಣಿನ ಇಷ್ಟೆಲ್ಲ ಸಬಲತೆಗಳ ನಡುವೆಯೂ ಜೈವಿಕ ಅಶಕ್ತತೆ ಅವಳನ್ನು ಕಾಡುತ್ತದೆ. ಅದು ಅವಳ ದೈಹಿಕ ಅತಂತ್ರತೆ. ಅದಕ್ಕೆ ಅವಳಿಗೆ ರಕ್ಷಕರು ಯಾರೂ ಇರುವುದಿಲ್ಲ, ಸಿಗುವುದೂ ಇಲ್ಲ. ಅವಳು ಸದಾಕಾಲ ಚಿಂತಿಸುವ ಅಂಶಗಳಲ್ಲಿ ಇದೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಕುಟುಂಬ ಮತ್ತು ಸಮಾಜವೇ ಎಚ್ಚೆತ್ತು ಪರಿಹಾರ ಕಂಡುಕೊಳ್ಳಬೇಕು.

ಪ್ರತಿ ಹೆಣ್ಣು, ತನ್ನ ಬಾಲ್ಯದಿಂದಲೇ ಪ್ರೌಢಶಾಲೆಗೆ ಬರುವವರೆಗೆ ಕನಿಷ್ಠ ಎಂಟು, ಹತ್ತು ವರುಷಗಳಲ್ಲಿ ಯೋಗ, ಕರಾಟೆ, ಧ್ಯಾನ ಮುಂತಾದವುಗಳ ಸತತ ಅಭ್ಯಾಸದಿಂದ ಎಂತಹ ಅದ್ಭುತವಾದ, ಸುರಕ್ಷಿತವಾದ ಸಮಾಜವನ್ನು ನಿರ್ಮಾಣ ಮಾಡಬಲ್ಲಳು ಎಂಬ ಅರಿವನ್ನು ಸಮಾಜ ಕಣ್ಣು ತೆರೆದು ನೋಡಬೇಕಿದೆ.

ಒಬ್ಬ ಹೆಣ್ಣು ಕನಿಷ್ಠ ನಾಲ್ಕು ಮಂದಿ ದುಷ್ಕರ್ಮಿಗಳಿಗೆ ಇದಿರಾಗಿ ನಿಲ್ಲುವ ದೈಹಿಕ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಬೆಳೆಸಿಕೊಂಡಾಗ ಸಮಾಜ ಎಷ್ಟು ನಿರಾಳವಾಗಿ ಉಸಿರಾಡಲು ಸಾಧ್ಯ; ಮತ್ತು ಆ ಗಾಳಿ ಎಷ್ಟು ಆರೋಗ್ಯ ಪೂರ್ಣ ಎಂಬುದನ್ನು ವ್ಯವಸ್ಥೆ ಅರಿಯಬೇಕಿದೆ.

ಆದರೆ ಕಾಲದಿಂದ ಕಾಲಕ್ಕೆ ಅವ್ಯವಸ್ಥೆಯನ್ನೇ ಬೆಳೆಸಿಕೊಂಡು ಮತ್ತಷ್ಟು ಅವ್ಯವಸ್ಥೆಗಳನ್ನು ನಿರ್ಮಾಣ ಮಾಡುವ ಪ್ರಯತ್ನಗಳೇ ಹೆಚ್ಚಾಗಿಬಿಟ್ಟಿವೆ.  ಮನೆಯಲ್ಲಿ ತಂದೆ, ಅಣ್ಣ, ಚಿಕ್ಕಪ್ಪ, ತಮ್ಮ.. ಹೀಗೆ ಎಲ್ಲರಿಂದ ಹೊಡೆತಗಳನ್ನು ತಿಂದೇ ಬದುಕಿದ ಹೆಣ್ಣಿಗೆ ಗಂಡ, ಮಾವ, ಮೈದುನರು ಹೊಡೆದರೆ ಏನೂ ಅನ್ನಿಸದ ಸ್ಥಿತಿಗೂ ಅವಳು ತಲುಪಿಬಿಟ್ಟಿದ್ದಾಳೆ.

ಹೊಡೆತ ಅವಳ ಬದುಕಿನ ಅವಿಭಾಜ್ಯ ಅಂಗ ಎಂದೂ ಸ್ವೀಕರಿಸಿ ಬಿಡುತ್ತಾಳೆ. ಹೇಗೆಂದರೆ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿ ಅದಕ್ಕೆ ಹೊಂದಿಕೊಂಡು ಬಿಟ್ಟರೆ ಅದರ ಜೊತೆಯಲ್ಲಿಯೇ ಬದುಕಿ ಬಿಡುತ್ತಾನೆ. ಅವಳಿಗೆ ಈ ಕುರಿತ ಪ್ರಜ್ಞೆಯನ್ನು, ರಕ್ಷಣೆಯನ್ನು ನೀಡುವುದು ಹೆಣ್ಣಿನ ಕೆಲಸವೇ ಆಗಿರುತ್ತದೆ.  ಗಂಡಿನಿಂದ ಅದನ್ನು ಬಯಸುತ್ತೇವೆ ಎಂದು ಕೊಂಡರೆ ಅದು ಹೆಣ್ಣಿನ ಮೂರ್ಖತನ.

ಯಾವುದೇ ಸಮಸ್ಯೆಯೂ ಉತ್ತರದಿಂದ ದೂರವಾಗಿರುವುದಿಲ್ಲ.  ಉತ್ತರಗಳು ಸಮಸ್ಯೆಯ ಒಳಗೇ ಮನೆ ಮಾಡಿರುತ್ತವೆ. ಆದರೆ ಸಮಸ್ಯೆಯನ್ನು ತೆರೆದ ಮನಸ್ಸಿನಲ್ಲಿ ನೋಡುವ, ಅದಕ್ಕೆ ತೆರೆದುಕೊಳ್ಳುವ, ಅದಕ್ಕೆ ಆಪ್ತವಾಗಿಸಿಕೊಳ್ಳುವ ಮನಃಸ್ಥಿತಿಯ ಅಗತ್ಯವಿದೆ. 

ತನ್ನನ್ನು ತಾನು ಅರಿಯಲೆಂದೇ ಒಬ್ಬ ವ್ಯಕ್ತಿ ಹಾಡುವುದು, ಬರೆಯುವುದು, ಕವನ ರಚಿಸುವುದು, ಚಿತ್ರಿಸುವುದು, ನರ್ತಿಸುವುದು..ಎಲ್ಲವನ್ನೂ ಮಾಡುವುದು.  ಇಂದು ಸಮಾಜದಲ್ಲಿ ಇದಕ್ಕೆಲ್ಲ ವಿಪುಲ ಅವಕಾಶಗಳಿವೆ. ಆದರೆ ಹೆಣ್ಣು ತಾನೇ ತನ್ನ ಚಿಂತನೆಗಳ ಭಾರವನ್ನು ಪ್ರೀತಿಸತೊಡಗಿದ್ದಾಳೆ.  ಅವಳೇ ಪೂಜೆ, ಪುನಸ್ಕಾರ, ಮಡಿ, ಮೈಲಿಗೆ, ಅರಶಿನ, ಕುಂಕುಮ.. ಬಳೆಗಳಿಂದ ಬಂಧಿಸಿಕೊಳ್ಳುತ್ತಾಳೆ.

ಆದರೆ ಅಲ್ಲಿಯ ಸಣ್ಣ ಪುಟ್ಟ ಲೋಪದಲ್ಲೆಲ್ಲ ದೋಷಗಳನ್ನು ಕಂಡುಕೊಂಡು, ಸಮಸ್ಯೆಯಲ್ಲಿಯೇ ಇದ್ದೇನೆ ಎಂದು ಭ್ರಮಿಸುತ್ತಾ  ಅದನ್ನು ಇಷ್ಟಪಡತೊಡಗುತ್ತಾಳೆ. ಹಾಗೂ ಅಂತಹ ಭ್ರಮೆಯನ್ನು ಎಲ್ಲರಿಗೂ ಹಂಚುತ್ತಾ ಸಮಾಜ, ಕುಟುಂಬದ ಸ್ವಾಸ್ಥ್ಯವನ್ನೇ ಕೆಡಿಸಿಬಿಡುತ್ತಾಳೆ.

ಅವಳು ಐಡೆಂಟಿಟಿಯ ಹಿಂದೆ ಬಿದ್ದಿದ್ದಾಳೆ. ಅದು ಸ್ವಾತಂತ್ರ್ಯ ಅಲ್ಲ. ಅವಳು ತನ್ನನ್ನು ತಾನೇ ಇಂತಹ ಅಪಾಯದ ಸ್ಥಿತಿಯಿಂದ ಹೊರಗೆ ಕರೆತರಬೇಕಿದೆ.  ಅವಳ ಕಲಿಕೆ ಅವಳ ಚಿಂತನೆಗಳಲ್ಲಿ ಪಕ್ವತೆಯನ್ನು ತರಬೇಕಿದೆ.

ನಾವು ಹೆಣ್ಣು, ಗಂಡು ಎಂದೆಲ್ಲ  ಭೇದಗಳನ್ನು ಬೆಳೆಸುತ್ತಿರುವುದೇ ಹಿಂಸೆಯ ಲಕ್ಷಣ. ಅದು ಮಾನವೀಯತೆಯ ಕ್ರೌರ್ಯ. ಇದರಿಂದ ಪಾರಾಗಲು ವಿಚ್ಛೇದನ ಒಂದು ಪರಿಹಾರ ಎಂಬ ಭ್ರಮೆಗೆ ಇಂದಿನ ಸಮಾಜ ಒಗ್ಗಿಕೊಂಡುಬಿಟ್ಟಿದೆ. ಆದರೆ ಒಬ್ಬ ಗಂಡನಿಂದ ವಿಚ್ಛೇದನ ಪಡೆಯಬಹುದು. ಬದುಕನ್ನು ವಿಚ್ಛೇದನಗಳಿಂದಲೇ ತುಂಬಿಸಲು ಸಾಧ್ಯವಿಲ್ಲ. ಅಥವಾ ಅದು ಬದುಕು ಆಗಲಾರದು. ಒಂದು ಉದ್ಯೋಗಕ್ಕೆ ರಾಜೀನಾಮೆ ನೀಡಬಹುದು. 

ಆದರೆ ಉದ್ಯೋಗವನ್ನೇ ತಿರಸ್ಕರಿಸಿ ಜೀವಿಸಲು ಸಾಧ್ಯವಿಲ್ಲ. ಅಥವಾ ಉದ್ಯೋಗವನ್ನು ಪಡೆದರೂ ಅದು ಪರಿಪೂರ್ಣವಲ್ಲ. ಹೆಣ್ಣು ತನ್ನೊಳಗಿನ ಸತ್ಯವನ್ನು ಅರಿಯಬೇಕು. ತನಗೆ ಬೇಕಾಗಿರುವುದು ಏನು ಎಂಬುದನ್ನು ಗುರುತಿಸಿ ಪಡೆಯುವ ಮಾರ್ಗವನ್ನು, ಅನುಸರಿಸಬೇಕಾದ ಕ್ರಮವನ್ನು, ವಹಿಸಬೇಕಾದ ಜವಾಬ್ದಾರಿಗಳನ್ನು ತಿಳಿಯಬೇಕು. 

ಆದರೆ ಅದಕ್ಕೆ ವ್ಯತಿರಿಕ್ತವಾಗಿ ಬೇರೆಯವರ ವರ್ತನೆಗಳಲ್ಲಿ ಭೇದವನ್ನು ಕಲ್ಪಿಸಿ, ಅವರ ಬೆನ್ನು ಹತ್ತಿ ಅವರ ತೇಜೋವಧೆ ಮಾಡುವುದನ್ನು ಬಿಡಬೇಕು.   ಸತ್ಯದ ಅರಿವಿನಿಂದ ಮುಕ್ತಿಯೇ ಹೊರತು ಹುಸಿ ಪ್ರಯತ್ನಗಳಿಂದ ಮುಕ್ತಿ ದೊರಕುವುದಿಲ್ಲ. ಅವಳ ಚಿಂತನೆಗಳಲ್ಲಿ ಶ್ರೀಮಂತಿಕೆ ಬರುವವರೆಗೆ ಅವಳಿಗೆ ಸ್ವಾತಂತ್ರ್ಯವು ದೊರಕುವುದಿಲ್ಲ.

ಈಗ ಮಾನವೀಯತೆ ಅಪಾಯದಲ್ಲಿದೆ. ವ್ಯವಹಾರಿಕತೆಯ ಒತ್ತಡ ಹೆಚ್ಚಾಗಿದೆ. ಈ ಕುರುಡು ಸಮಾಜ ಅನೇಕ ಸ್ಯಾಡಿಸ್ಟ್‌ಗಳನ್ನು ಸೃಷ್ಟಿಸುತ್ತಿದೆ. ಮನೆ, ಶಾಲೆಗಳಲ್ಲಿಯೂ ಅಂತಹವರು ಕಂಡುಬರುತ್ತಿದ್ದಾರೆ. ಸೃಷ್ಟಿದಾಯಿ ಎಂಬ ವಿಶೇಷ ಶಕ್ತಿ ಇರುವ ಮಹಿಳೆ ನಿಸರ್ಗದಲ್ಲಿ ನದಿಗೆ ಹೋಲಿಸಲ್ಪಡುತ್ತಾಳೆ. 

ಮನುಷ್ಯನಿಲ್ಲದ ಸೃಷ್ಟಿ ಇರಬಹುದು. ನದಿ ಇಲ್ಲದೆ ಮನುಷ್ಯ ಇರಲಾರ. ಈಗಲೂ ಯಾವಾಗಲೂ ಮಹಿಳೆಯೇ ಸಮಾಜದ ಉಳಿವಿಗೆ, ಉನ್ನತಿಗೆ ಬುನಾದಿ.  ಇದನ್ನು ಅವಳು ಅರಿಯಬೇಕು, ಮರೆಯಬಾರದು.

ಅವಳು ಸ್ವಾತಂತ್ರ್ಯ ಎಂಬ ಭ್ರಮೆಯಿಂದ ಹೊರಗೆ ಬಂದು, ಅದರ ಮಿತಿಗಳನ್ನು ಅರಿಯಬೇಕಿದೆ. ಸಮಾಜದಲ್ಲಿ ಮಾನವೀಯತೆಯನ್ನು ಹುಟ್ಟು ಹಾಕುವ ಮಾತೃಸಂಹಿತೆಯನ್ನು ಮಹಿಳೆಯೇ ಜವಾಬ್ದಾರಿಯಿಂದ ಹೊರಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT