ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜಿಸಿ ತಾಯ್ತನವ

Last Updated 2 ಜನವರಿ 2015, 19:30 IST
ಅಕ್ಷರ ಗಾತ್ರ

ಸುರಕ್ಷಿತ ತಾಯ್ತನ, ಆರೋಗ್ಯವಂತ ಶಿಶು ಇವೆರಡೂ ನಿಮ್ಮ ಗುರಿಯಾಗಿದ್ದಲ್ಲಿ ಗರ್ಭಧಾರಣೆಯನ್ನು ಯೋಜಿಸಿ. ಗರ್ಭಧರಿಸುವ ಮುನ್ನವೇ ದೈಹಿಕವಾಗಿಯೂ, ಮಾನಸಿಕವಾಗಿಯೂ ಸಿದ್ಧರಾಗಿ. ಆಹಾರ ಪದ್ಧತಿಯಲ್ಲಿ ಬದಲಾವಣೆ ಬರಲಿ. ಚೈತನ್ಯಯುತ ಜೀವನ ಸುರಕ್ಷಿತ ತಾಯ್ತನಕ್ಕೆ ರಹದಾರಿಯಾಗುವುದು.

ವಿವಾಹಿತೆಯು ತನ್ನ ಗರ್ಭಾವಸ್ಥೆಯನ್ನು ಮುಂಚಿತವಾಗಿಯೇ ಯೋಜಿಸಬೇಕು, ಯೋಜಿಸದಿದ್ದರೆ ಆಗುವ ದುಷ್ಪರಿಣಾಮಗಳ ವಿವರ ಇಲ್ಲಿದೆ.
ಗರ್ಭಧಾರಣೆಯ ಮುಂಚಿನ ಯೋಜನೆಗಳು
* ರಕ್ತ ತಪಾಸಣೆ ಮಾಡಿಸಿಕೊಂಡು, ರಕ್ತದ ಅಂಶ ಕಡಿಮೆಯಿದ್ದಲ್ಲಿ ಸೂಕ್ತವಾದ ಆಹಾರ ಕ್ರಮವನ್ನೂ, ಔಷಧಿಯನ್ನು ತೆಗೆದುಕೊಳ್ಳಬೇಕು. ಮಾಂಸ, ಮೊಟ್ಟೆ, ಹಸಿರು ಸೊಪ್ಪು ತರಕಾರಿ, ಬೆಲ್ಲವನ್ನು ಪ್ರತಿನಿತ್ಯ ಉಪಯೋಗಿಸಬೇಕು.
* ಟೀ, ಕಾಫಿ, ಮದ್ಯಪಾನ, ತಂಬಾಕು ಸೇವನೆಯನ್ನು ನಿಲ್ಲಿಸಬೇಕು.
* ಜಂತುವಿನ ಮಾತ್ರೆಯನ್ನು ತೆಗೆದುಕೊಳ್ಳಬೇಕು.
* ರಕ್ತ ವೃದ್ಧಿಸುವ ಔಷಧಿಯನ್ನು ತಗೆದುಕೊಳ್ಳಬೇಕು.
* ಸ್ಥೂಲಕಾಯವು ಗರ್ಭಾವಸ್ಥೆಯಲ್ಲಿ ಹಲವು ತೊಂದರೆಗಳನ್ನು ಉಂಟುಮಾಡುತ್ತದೆ.
* ದೀರ್ಘಾವಧಿಯ ಆರೋಗ್ಯದ ತೊಂದರೆಗಳಾದ ದಮ್ಮು, ಮಧುಮೇಹ, ಫಿಟ್ಸ್, ಹೃದಯದ ತೊಂದರೆ,ರಕ್ತದೊತ್ತಡ, ಮಾನಸಿಕ ತೊಂದರೆ  ಖಿನ್ನತೆ, ಉದ್ರೇಕ, ಸ್ಥೂಲಕಾಯವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ಸಲಹೆಯನ್ನು ಪಡೆಯಬೇಕು.

ಗರ್ಭಿಣಿಯರಿಗೆ ಆರೋಗ್ಯಕರವಾದ ಆಹಾರ
ಗರ್ಭಿಣಿಗೆ ಬೇಕಾದ ಪೌಷ್ಠಿಕಾಂಶಗಳೆಲ್ಲವೂ ಸಾಮಾನ್ಯವಾದ ಊಟದಲ್ಲಿಯೇ ದೊರೆಯುತ್ತದೆ.  ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಹೆಚ್ಚು ಹಸಿವಾಗುತ್ತದೆ. ಆದರೆ 2 ಜೀವಕ್ಕೆ ಬೇಕಾಗುವ ಆಹಾರವನ್ನು ಸೇವಿಸಬೇಕಾಗಿಲ್ಲ. ಗರ್ಭದಲ್ಲಿ ಅವಳಿ, ತ್ರಿವಳಿಯೇ ಇರಲಿ ಹೆಚ್ಚು ಆಹಾರ ಸೇವಿಸುವ ಅವಶ್ಯಕತೆ ಇರುವುದಿಲ್ಲ.
ಒಳ್ಳೆಯ ಆಹಾರವೆಂದರೆ ನೀವು ಸೇವಿಸುವ  ಆಹಾರವನ್ನೇ ವೈವಿಧ್ಯಮಯವಾಗಿಸಿಕೊಳ್ಳಬೇಕು.  ಆದರೆ ಮಧುಮೇಹಿ ಗರ್ಭಿಣಿಯರು ತಮ್ಮ ಆಹಾರವನ್ನು ಸರಿಯಾಗಿ ಯೋಜಿಸಿ ಸೇವಿಸಬೇಕಾಗಿರುತ್ತದೆ.
* ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಗರ್ಭಿಣಿಯರು ಸೇವಿಸಬೇಕಾಗಿರುತ್ತದೆ. ಇದರಿಂದ ಹೆಚ್ಚು ಪೌಷ್ಟಿಕತೆಯು ಸಿಗುತ್ತದೆ. ಜೀರ್ಣ ಶಕ್ತಿಯನ್ನು ಸರಿಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ.
* ದಿನದ ಆಹಾರದಲ್ಲಿ ಕನಿಷ್ಟ 5ನೇ ಒಂದು ಭಾಗ ಹಣ್ಣು ಮತ್ತು ತರಕಾರಿ ಇರಬೇಕು. ತಾಜಾ ಹಣ್ಣು, ತರಕಾರಿ, ಒಣಗಿಸಿರುವ ಹಣ್ಣುಗಳು, ಹಣ್ಣು ತರಕಾರಿಯ ರಸ ಯಾವ ರೂಪದಲ್ಲಿಯಾದರೂ ಇದನ್ನು ನಾವು ಸೇವಿಸಬಹುದು.
* ಪ್ರತಿ ನಿತ್ಯ 10 ಒಣ ದ್ರಾಕ್ಷಿಯನ್ನು ಸೇವಿಸುವುದು ಒಳಿತು.
* ತರಕಾರಿಯನ್ನು ಸ್ವಲ್ಪ ಹುರಿದು ಪಲ್ಯಮಾಡಿ ಸೇವಿಸ ಬಹುದು. ಆದರೆ ಹಣ್ಣುಗಳೇ ಆಗಲಿ, ತರಕಾರಿಯೇ ಆಗಲಿ ಸರಿಯಾಗಿ ತೊಳೆದು ಉಪಯೋಗಿಸುವುದು ಒಳಿತು.

ಪಿಷ್ಟಾನ್ನಗಳು
* ಅಕ್ಕಿ, ಗೋದಿ, ರಾಗಿ, ಜೋಳ, ಮುಂತಾದವುಗಳನ್ನು ನಾವು ಪಿಷ್ಟಾನ್ನವೆನ್ನುತ್ತೇವೆ. ಪಿಷ್ಟಾನ್ನಗಳಲ್ಲಿ ನಮಗೆ ನಾರು ಮತ್ತು ಪೌಷ್ಟಿಕಾಂಶವು ದೊರಕುವುದು. ಆದ್ದರಿಂದ ಇದು ನಮ್ಮ ಆಹಾರದ ಮುಖ್ಯಭಾಗವಾಗಿರಬೇಕು. ಯಾವುದೇ ಧಾನ್ಯವನ್ನು ಉಪಯೋಗಿಸಿದರೂ ಸಂಪೂರ್ಣ ಧಾನ್ಯವನ್ನೇ ಉಪಯೋಗಿಸಬೇಕು.

ಪೌಷ್ಟಿಕಾಂಶಗಳ ಆಹಾರ
* ಮಾಂಸ, ಮೀನು, ಕೋಳಿ, ಮೊಟ್ಟೆ, ಹುರುಳಿ ಕಾಯಿ, ಕಾಳುಗಳು ಇವುಗಳಲ್ಲಿ ಪೌಷ್ಟಿಕಾಂಶ ಹೇರಳವಾಗಿರುತ್ತದೆ. ಇವುಗಳಲ್ಲಿ ಕೆಲವನ್ನು ಪ್ರತಿ ದಿನ ಉಪಯೋಗಿಸಲೇ ಬೇಕಾಗಿರುತ್ತದೆ. ಯಾವುದೇ ಮಾಂಸಾಹಾರವನ್ನು ಸೇವಿಸಿದರೂ ಸರಿಯಾಗಿ ಬೇಯಿಸಿ ಸೇವಿಸಬೇಕು. ವಾರದಲ್ಲಿ 2 ಸಲವಾದರೂ ಮೀನು ಸೇವಿಸುವುದು ಉತ್ತಮ. ಪ್ರತಿ ನಿತ್ಯ ಕಾಳುಗಳನ್ನು ಮೊಳಕೆ ಕಟ್ಟಿಸಿ ಸೇವಿಸಬೇಕು ಅದರಲ್ಲೂ ಹೆಸರು ಕಾಳು ಅತ್ಯುತ್ತಮ.

ಸಮತೋಲಿತ ಆಹಾರ, ಸ್ಥೂಲಕಾಯಕ್ಕೆ ಪರಿಹಾರ
ಗರ್ಭಧರಿಸುವುದನ್ನು ನಾವು ಮುಂಚಿತವಾಗಿಯೇ ಯೋಜಿಸಬೇಕಾಗಿರುತ್ತದೆ. ಆ ಸಮಯದಲ್ಲಿ ಒಳ್ಳೆಯ ಆಹಾರವನ್ನು ಸೇವಿಸುವುದಲ್ಲದೆ ತೂಕವನ್ನು ಕೂಡ ಸರಿಯಾಗಿ ಇರಿಸಿಕೊಳ್ಳಬೇಕಾಗಿರುತ್ತದೆ. ತೂಕವನ್ನು ಇಳಿಸಿಕೊಂಡ ನಂತರವೇ ಮಗುವನ್ನು ಪಡೆಯುವ ಬಗ್ಗೆ ಯೋಚಿಸಬೇಕಾಗಿರುತ್ತದೆ. ಆದರೆ ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಮಾಡಿಕೊಳ್ಳಬಾರದು. ಸ್ಥೂಲಕಾಯದವರಾಗಿದ್ದು ಗರ್ಭದರಿಸಿದಲ್ಲಿ ಆಹಾರದ ನಿಯಂತ್ರಣ ಹಾಗು ವ್ಯಾಯಾಮವನ್ನು ತೀವ್ರವಾಗಿ ಮಾಡಬಾರದು ಆದರೆ ಪ್ರತಿನಿತ್ಯ ನಡಿಗೆ, ಈಜುವುದು ಒಳಿತು.

ಸ್ಥೂಲಕಾಯಕಾಯದವರಿಗೆ ಗರ್ಭಾವಸ್ಥಯಲ್ಲಿ ಬರಬಹುದಾದ ತೊಂದರೆಗಳು
* ಗರ್ಭಪಾತ
* ಗರ್ಭಾವಸ್ಥೆಯಲ್ಲಿ ಮಧುಮೇಹ ಹೆಚ್ಚುವುದು
* ಪ್ರಸವದ ಸಮಯದಲ್ಲಿ ಅತಿಯಾದ ರಕ್ತಸ್ರಾವ
* ರಕ್ತ ಹೆಪ್ಪುಗಟ್ಟುವುದು
* ಸೋಂಕುಗಳು
* ಸ್ಥನ್ಯಪಾನದಲ್ಲಿ ತೊಂದರೆ
* ಹೆಚ್ಚು ತೂಕದ ಮಗುವಿನ ಜನನ
* ಮಗು ಸತ್ತು ಹುಟ್ಟುವುದು
* ಮಗುವಿಗೆ ಹುಟ್ಟುವಾಗಲೇ ಆರೋಗ್ಯದ ತೊಂದರೆಗಳು.

ಹಾಲು ಮತ್ತು ಹಾಲಿನ ಉತ್ಪನ್ನ
ಹಾಲು, ಮೊಸರು, ಬೆಣ್ಣೆ, ಕೆನೆ, ಮಜ್ಜಿಗೆ, ತುಪ್ಪಗಳಾಗಿರುತ್ತವೆ. ಹಾಲಿನ ಉತ್ಪನ್ನಗಳು ಗರ್ಭಿಣಿಯರಿಗೆ ಅತ್ಯಾವಶ್ಯಕವಾಗಿರುತ್ತದೆ. ಇದರಲ್ಲಿ ಸುಣ್ಣದಂಶವು, ಮತ್ತು ಹಲವು ಪೌಷ್ಟಿಕಾಂಶವು ಇರುತ್ತದೆ. ಆದರೆ ಗರ್ಭಿಣಿಯರು ಸ್ಥೂಲಕಾಯವನ್ನು ತಡೆಯಲು, ಜೀರ್ಣ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಹಾಲು, ಕಡೆದ ಮಜ್ಜಿಗೆ, ತುಪ್ಪವನ್ನು ಉಪಯೋಗಿಸಬೇಕು. ಮೊಸರು, ಬೆಣ್ಣೆ, ಕೆನೆ, ಚೀಸ್, ಪೇಡಗಳನ್ನು ಉಪಯೋಗಿಸುವುದು ಒಳಿತಲ್ಲ.

ಸಕ್ಕರೆ ಅಂಶ ಮತ್ತು ಕೊಬ್ಬಿನಂಶವಿರುವ ಆಹಾರಗಳು
ಎಲ್ಲಾ ಜಿಡ್ಡಿನ ವಸ್ತುಗಳು, ಎಣ್ಣೆಗಳು, ಕೆನೆ, ಚಾಕಲೇಟ್, ಕರೆದ ಪದಾರ್ಥಗಳು, ಬಿಸ್ಕೇಟ್ಸ್‌, ಕೇಕ್, ಐಸ್‌ಕ್ರೀಂ, ತಂಪು ಪಾನೀಯ ಇವೆಲ್ಲವೂ ಹೆಚ್ಚು ಸಕ್ಕರೆ ಅಂಶ ಮತ್ತು ಕೊಬ್ಬಿನಾಂಶವನ್ನು ಹೊಂದಿರುತ್ತದೆ. ಈ ಎಲ್ಲಾ ಆಹಾರಗಳನ್ನು ನಾವು ಬಹಳ ಅಲ್ಪ ಪ್ರಮಾಣದಲ್ಲಿ ಉಪಯೋಗಿಸಬೇಕು. ಇವುಗಳಲ್ಲಿ ಕೊಬ್ಬಿನ ಅಂಶವು ಅತೀಹೆಚ್ಚಿದ್ದು ಯಾವುದೇ ಪೌಷ್ಟಿಕಾಂಶವಿರುವುದಿಲ್ಲ. ಇದರಿಂದ ನಮ್ಮ ತೂಕ ಹೆಚ್ಚಿ ದೇಹಕ್ಕೂ, ಮಗುವಿನ ಆರೋಗ್ಯಕ್ಕೂ ತೊಂದರೆ ಆಗುತ್ತದೆ. ಇದರಿಂದ ಹೃದಯದ ತೊಂದರೆ, ಮಧುಮೇಹ, ರಕ್ತದೊತ್ತಡ ಬರಬಹುದು. ಅದರ ಬದಲಾಗಿ ತುಪ್ಪವನ್ನು ಮಿತ  ಪ್ರಮಾಣದಲ್ಲಿ ಉಪಯೋಗಿಸುವುದು ಒಳಿತು.

ಗರ್ಭಿಣಿಯರು ಗಮನಿಸಬೇಕಾದ ಆಹಾರ ನಿಯಮಗಳು
* ಖಾಲಿ ಹೊಟ್ಟೆಯನ್ನು ಬಿಡಬಾರದು
* ಸಣ್ಣ ಸಣ್ಣ ಪ್ರಮಾಣದಲ್ಲಿಆಹಾರವನ್ನು ಪ್ರತಿ 2 ಗಂಟೆಗೊಮ್ಮೆಯಾದರೂ ಸೇವಿಸಬೇಕು.
* ಅರೆ ಬೆಂದ ಅಥವ ಹಸಿ ಮೊಟ್ಟೆಯನ್ನು ಸೇವಿಸಬಾರದು
* ಫ್ರಿಜ್‌ನಲ್ಲಿ ಇರುವ ಆಹಾರವನ್ನು ಸೇವಿಸುವ ಮುನ್ನ ಸರಿಯಾಗಿ ಬಿಸಿಮಾಡಬೇಕು
* ಮಾಂಸದಲ್ಲಿನ ಯಕೃತ್ ಮಗುವಿಗೆ ಹಾನಿಯುಂಟಾಗಿಸುತ್ತದೆ
* ವಿಟಮಿನ್‌ ಎ ಹೆಚ್ಚಿರುವ ಮಲ್ಟಿವಿಟಮಿನ್, ಲಿವರ್ (ಯಕೃತ್) ಸೇವಿಸಬಾರದು.
* ಮೊಸರು, ಐಸ್‌ಕ್ರೀಂಗಳನ್ನು ಉಪಯೋಗಿಸುವುದು ಒಳಿತಲ್ಲ.
* ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಸೇವಿಸಿದರೆ ಗರ್ಭಪಾತವಾಗುವ ಸಂಭವವಿರುತ್ತದೆ, ಮಗುವಿನ ತೂಕ ಕಡಿಮೆಯಾಗುತ್ತದೆ.
* ರಕ್ತವೃದ್ಧಿಸಲು ಔಷಧಿಯನ್ನು ಗರ್ಭಿಣಿಯರು ಸೇವಿಸಬೇಕಾಗಿರುತ್ತದೆ.
* ವಿಟಮಿನ್‌ ‘ಡಿ’ ಕೂಡ ನಮ್ಮ ದೇಹಕ್ಕೆ ಮತ್ತು ಮಗುವಿನ ಬೆಳವಣಿಗೆಗೆ ಅತ್ಯಾವಶ್ಯಕವಾಗಿರುತ್ತದೆ. ಆದ್ದರಿಂದ ಔಷಧಿಯನ್ನೋ ಅಥವ ಬೆಳಗ್ಗಿನ ಎಳೆ ಬಿಸಿಲಿಗೆ ಹೋಗುವುದು ಒಳಿತು. ಮೊಟ್ಟೆ, ಕಾಳುಗಳು ಮತ್ತು ಹಾಲಿನ ಉತ್ಪನ್ನಗಳಲ್ಲಿ ನಾವು ವಿಟಮಿನ್ ‘ಡಿ’ ಪಡೆಯಬಹುದು.
* ವಿಟಮಿನ್‌ ‘ಸಿ’ ನಮ್ಮ ಜೀವಕೋಶದ ಆರೋಗ್ಯಕ್ಕಾಗಿ ಅತ್ಯಾವಶ್ಯಕ ಆದ್ದರಿಂದ ನಿಂಬೆ, ಕಿತ್ತಲೆ ಮೋಸುಂಬಿಗಳನ್ನು ಪ್ರತಿ ನಿತ್ಯ ಉಪಯೋಗಿಸುವುದು ಉತ್ತಮ.
* ಕ್ಯಾಲ್ಶಿಯಂ ಕೂಡ ಮಗುವಿನ ಬೆಳವಣಿಗೆಗೆ, ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ಅತ್ಯಾವಶ್ಯಕ. ಆದ್ದರಿಂದ ಹಾಲು, ಮಜ್ಜಿಗೆಯನ್ನು ಪ್ರತಿನಿತ್ಯ ಉಪಯೋಗಿಸಬೇಕು, ಹಸಿರು ಸೊಪ್ಪು ತರಕಾರಿಗಳಲ್ಲಿಯೂ ಕೂಡ ಇದು ನಮಗೆ ಸಿಗುತ್ತದೆ.
* ಸಸ್ಯಾಹಾರಿಗಳು ವಿಟಮಿನ್ ಬಿ12 ಅನ್ನು ಔಷಧಿಯ ಮೂಲಕ ತೆಗೆದುಕೊಳ್ಳುವುದು ಒಳಿತು. ಏಕೆಂದರೆ ಸಸ್ಯಾಹಾರದಲ್ಲಿ ಇದು ದೊರೆಯುವುದಿಲ್ಲ.
ಹೀಗೆ ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದಲ್ಲಿ ಗರ್ಭಿಣಿಯರು ಸ್ವಸ್ಥವಾಗಿರಬಹುದು ಹಾಗು ಸ್ವಸ್ಥ ಮಗುವಿಗೆ ಜನನ ನೀಡಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT