ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವಕ್ಕೆ ದೀಪ್ತಿಯಾದ ಬರವಣಿಗೆ

Last Updated 18 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮದುವೆಯಾದ ಹೊಸತರಲ್ಲಿ ಯಜಮಾನರೊಟ್ಟಿಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ತಮ್ಮ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಪರಿಚಯಿಸಿದರು. ಮಾತು, ನಗು, ಹಾಸ್ಯದೊಂದಿಗೆ ಊಟ ಸಾಗಿತ್ತು. ಇಂಗ್ಲೀಷ್‌ನಲ್ಲಿಯೇ ಸಂಭಾಷಣೆ ನಡೆದಿತ್ತು.

ಕೆಲವರಿಗೆ ಬೇರೆಯವರನ್ನು ಅವಮಾನಿಸುವ, ಟೀಕೆ ಮಾಡುವ ಕುಹಕ ಮಾಡಿ ನಗುವ ವಿಲಕ್ಷಣ ಗುಣ ಹಾಸು ಹೊಕ್ಕಾಗಿರುತ್ತದೆ. ನನ್ನವರ ಸ್ನೇಹಿತರೊಬ್ಬರು ಇದೇ ಜಾತಿಗೆ ಸೇರಿದವರು. ‘ನಿಮ್ಮ ಮಿಸಸ್‌ಗೆ ಇಂಗ್ಲೀಷ್ ಬರೋದಿಲ್ವಾ? ಯಾರ ಮಾತಿಗೂ ಉತ್ತರ ನೀಡದೆ ಸುಮ್ಮನಿದ್ದಾರೆ’ ಎಂದು ಅಪಹಾಸ್ಯದ ನಗು ಬೀರಿದರು.

ದಿನವಿಡೀ ಅದೇ ವಿಷಯದ ಬಗ್ಗೆ ಕೀಳರಿಮೆ ಕಾಡತೊಡಗಿತು. ಸ್ನಾತಕೋತ್ತರ ಪದವಿ ಪಡೆದಿದ್ದರೂ ನಾನು ಅನಕ್ಷರಸ್ಥೆಯೇನೋ ಎಂಬಂತೆ ಖಿನ್ನತೆ ಆವರಿಸಿತು. ತಕ್ಕ ಮಟ್ಟಿಗೆ ಇಂಗ್ಲೀಷ ಭಾಷಾ ಜ್ಞಾನ ಇದ್ದು, ಓದಲು, ಬರೆಯಲು ಸಮಸ್ಯೆ ಇರಲಿಲ್ಲ. ಸರಾಗವಾಗಿ ಇಂಗ್ಲೀಷ್ ಮಾತನಾಡಲು ಬಾರದಿರುವುದು ಇಷ್ಟೊಂದು ಹಿಂಸೆಯಾಗಬಹುದು ಎಂದೆನಿಸಿರಲಿಲ್ಲ.

ನನ್ನ ಆತ್ಮೀಯ ಗೆಳತಿ ಬಳಿ ನನ್ನ ಸಂಕಟವನ್ನು ಹೇಳಿಕೊಂಡೆ. ‘ಯಾರೋ ಏನೋ ಹೇಳಿದರು ಅಂತ ಇಷ್ಟೊಂದು ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ. ಒಬ್ಬಳೆ ಕುಳಿತು ಕೆಲಸಕ್ಕೆ ಬಾರದ ವಿಷಯ ಚಿಂತಿಸಿ ತಲೆ ಹಾಳು ಮಾಡ್ಕೋಬೇಡ. ಸದ್ಯಕ್ಕೆ ಆ ಆಲೋಚನೆ ಬಿಟ್ಟು ನಿನ್ನ ಹವ್ಯಾಸಗಳತ್ತ ಗಮನ ಹರಿಸು. ಈಗ ಅವಕಾಶಗಳು ಸಾಕಷ್ಟಿವೆ. ನಿನ್ನಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಬೇಕಾದಷ್ಟು ವೇದಿಕೆಗಳಿವೆ. ನಿನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾದ ಬರವಣೆಗೆಯನ್ನು ಮುಂದುವರೆಸು’ ಎಂದು ಪ್ರೇರೇಪಿಸಿದಳು. 

ಅದೇನು ಸ್ಫೂರ್ತಿ ಬಂತೋ ಗೊತ್ತಿಲ್ಲ. ಪೆನ್ನು ಪೇಪರು ಹಿಡಿದು ಕುಳಿತೆ. ನನ್ನ ಭಾವನೆಗಳನ್ನು ಬರಹ ರೂಪಕ್ಕಿಳಿಸಿದೆ, ಸಣ್ಣ ಪುಟ್ಟ ಲೇಖನಗಳು ಪ್ರಕಟಗೊಳ್ಳತೊಡಗಿದವು. ನನ್ನವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಜೊತೆಗೆ ಸಂಭಾವನೆಯ ರೂಪದಲ್ಲಿ ಬಂದ ಹಣ ಮತ್ತಷ್ಟು ಖುಷಿ ಕೊಟ್ಟಿತು. ಕೆಲವೊಂದು ಸಲ ಹೆಸರಿನ ಜೊತೆ ಭಾವಚಿತ್ರವೂ ಪತ್ರಿಕೆಗಳಲ್ಲಿ ಬಂದಾಗ ಹಿತೈಷಿಗಳು ಕರೆ ಮಾಡಿ ಶುಭಾಷಯ ಕೋರಿದರು.

ಆಗ ನನಗಾದ ಸಂತೋಷ ಹೇಳತೀರದು. ಅಂದು ಆರಂಭವಾದ ಹನ್ನೆರಡು ವರ್ಷಗಳ ಸುದೀರ್ಘ ಪಯಣ ಇಂದು ಕಥಾ ಸಂಕಲನವೊಂದನ್ನು ಮುದ್ರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ’ಪ್ರಜಾವಾಣಿ’, ’ಸುಧಾ’ ಇನ್ನೂ ಕೆಲ ಪ್ರಚಲಿತ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ನೋಡಿ, ಸಲಹೆ ನೀಡಿದ ಆತ್ಮೀಯರು, ಹಿರಿಯರು ನನ್ನ ಬರವಣಿಗೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳುವಲ್ಲಿ ಸಹಕಾರಿಯಾದರು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.

ಬರವಣಿಗೆ ನನ್ನ ಕೈ ಹಿಡಿದಾಗಿನಿಂದ ಸಮಯದ ಮಹತ್ವದ ಅರಿವಾಗಿದೆ. ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಇತರೆ ಮನೆಕೆಲಸಗಳ ಜೊತೆಗೆ ಬರವಣಿಗೆಯೂ ಸಹ ದಿನಚರಿಯ ಒಂದು ಭಾಗವಾಗಿದೆ. ನೆಮ್ಮದಿ, ಶಾಂತಿಯ ಜೊತೆಗೆ ಸಂತೋಷವನ್ನು ನೀಡುವ ಸಂಗಾತಿಯಾಗಿದೆ.

ನಮಗೆ ಗೊತ್ತಿಲ್ಲ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ,  ಪ್ರತಿಭೆಗೆ ಒಂದು ರೂಪ ಕೊಟ್ಟು ಬೆಳೆಸಬೇಕು. ಯಶಸ್ಸು ಖಂಡಿತ ನಮ್ಮ ಮುಡಿಗೇರುತ್ತದೆ.
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಹೆದರಿದೊಡೆ ಎಂತಯ್ಯ ಎಂಬ ಅಕ್ಕನ ವಚನ ಸರ್ವಕಾಲಕ್ಕೂ ಸಲ್ಲುವಂಥದ್ದು.

ಸಂಘಜೀವಿಯಾದ ಮನುಷ್ಯ ಕುಹಕ ನುಡಿಗಳಿಗೆ ಮುನ್ನುಗ್ಗಬೇಕು. ಮನಸ್ಸನ್ನು ಹಗುರಾಗಿಸಲು, ನಮ್ಮ ಮನಸ್ಸಿನ ಕಹಿ ನೆನಪುಗಳನ್ನು ಬರೆಯುತ್ತಾ ಹೋಗುವುದು ಮನಃಶಾಸ್ತ್ರಜ್ಞರ ಪ್ರಕಾರ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಕಾರಿ. ನಿಜಕ್ಕೂ ನನ್ನ ಪ್ರಕಾರ ಅದು ನೂರಕ್ಕೆ ನೂರರಷ್ಟು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT