ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರೋಭ್ರಮಣ ಸುತ್ತ...

Last Updated 7 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಶಿರೋಭ್ರಮಣ (VERTIGO), ತಲೆತಿರುಗುವಿಕೆ/ತಲೆ ಸುತ್ತುವಿಕೆಯ ಹಲವು ಪ್ರಭೇದಗಳಲ್ಲಿ ಒಂದು. ಕಿವಿಯ ಒಳಭಾಗದಲ್ಲಿರುವ ‘ವೆಸ್ಟಿಬುಲರ್’ ಅಪರೇಟಸ್‌’ ಎಂಬ ಅಂಗದ ಕಾರ್ಯಕ್ಷಮತೆ ದೋಷದಿಂದ ಶಿರೋಭ್ರಮಣ ಸಮಸ್ಯೆ ಉಂಟಾಗುತ್ತದೆ. ಪರಿಣಾಮವಾಗಿ ಈ ರೋಗಿಗಳಿಗೆ ತಮ್ಮ ಸುತ್ತಲಿನ ಪರಿಸರ ಒಂದೇ ಸಮನೆ ಭ್ರಮಿಸುತ್ತಿರುವ ಅನುಭವವಾಗುತ್ತದೆ. ಜೊತೆಗೆ ವಾಕರಿಕೆ, ವಾಂತಿ ಮತ್ತು ನಿಯಂತ್ರಣ ತಪ್ಪಿದಂತೆನಿಸಿ ನಿಲ್ಲಲು, ಓಡಾಡಲು ಕಷ್ಟಪಡುತ್ತಾರೆ.

ಹೆಚ್ಚಿನ ಪ್ರಕರಣಗಳಲ್ಲಿ ಶಿರೋಭ್ರಮಣಕ್ಕೆ ಯಾವುದೇ ಚಿಕಿತ್ಸೆಯ ಅವಶ್ಯವಿರುವುದಿಲ್ಲ ಮತ್ತು ಅದು ತಂತಾನೇ ಸರಿಹೋಗುತ್ತದೆ. ಶಿರೋಭ್ರಮಣ ಎಲ್ಲ ವಯೋಮಾನದಲ್ಲಿಯೂ ಕಾಣಿಸಿಕೊಳ್ಳಬಹುದು. ಆದರೂ, ಯುವಕರು/ ನಡುವಯಸ್ಸಿನವರಿಗಿಂತ (17%) ಹಿರಿಯರಲ್ಲಿ (80 ವರ್ಷ ಮೇಲ್ಪಟ್ಟವರಲ್ಲಿ 39%) ಹೆಚ್ಚು ಮತ್ತು ಗಂಡಸರಿಗಿಂತ ಹೆಂಗಸರಲ್ಲಿ 2–3 ಪಟ್ಟು ಅಧಿಕ ಎಂಬುದು ತಿಳಿದುಬಂದಿದೆ.

ದೇಹದ ಯಾವ ಭಾಗದ ಊನ/ ಅನಾರೋಗ್ಯದಿಂದ ಶಿರೋಭ್ರಮಣ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಆಧರಿಸಿ, ಇದನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ:

1. ಒಳಕಿವಿಯಲ್ಲಿರುವ ‘ವೆಸ್ಟಿಬ್ಯುಲರ್‌ ಅಂಗಕ್ಕೆ’, ಶೀತ, ಕೆಮ್ಮು, ನೆಗಡಿಯಿಂದ ಸೋಂಕು ಹಬ್ಬಿ, ಅದರ ಕಾರ್ಯಕ್ಷಮತೆ ತಗ್ಗಿದಾಗ ‘ಬಾಹ್ಯ’ (Peripheral) ರೀತಿಯ ಶಿರೋಭ್ರಮಣ ತಲೆದೋರುತ್ತದೆ. ಒಳ ಕಿವಿಯಲ್ಲಿರುವ ಶಬ್ದಗ್ರಹಣಕ್ಕೆ ಕಾರಣವಾದ ನರಕ್ಕೆ ಧಕ್ಕೆಯಾದಾಗ, ಕೆಲವೊಂದು ಮಾತ್ರೆಗಳ ಸೇವನೆ, ಕಿವಿಗೆ ಬಿದ್ದ ಬಲವಾದ ಹೊಡೆತದಿಂದಲೂ ಈ ರೀತಿಯ ಶಿರೋಭ್ರಮಣ ಕಾಣಿಸಿಕೊಳ್ಳುತ್ತದೆ.

ವಾಂತಿ, ತೂರಾಟ, ಕಣ್ಣಿನಲ್ಲಿ ಸೆಳೆತ, ಕಿವಿಯಲ್ಲಿ ಗುಂಯ್‌ಗುಡುವಿಕೆ, ಕಿವುಡುತನ ಮತ್ತು ಕಿವಿ ನೋವಿನಿಂದ ನರಳುತ್ತಾರೆ. ಮುಖದ ಸ್ನಾಯುಗಳ ದೌರ್ಬಲ್ಯವೂ ಕಾಡಬಹುದು. ಕಿವಿಗೆ ಯಾವುದೇ ರೀತಿಯ ತೊಂದರೆಯಿಲ್ಲದೆ, ಮೆದುಳಿನಲ್ಲಿರುವ ಸಮತೋಲನ ಕಾಪಾಡುವ ಕೇಂದ್ರಕ್ಕೆ ಯಾವುದೇ ರೀತಿಯ ಹಾನಿಯಾದಾಗ (ಮೆದುಳು ಗಡ್ಡೆ, ರಕ್ತಸ್ರಾವ, ಪೆಟ್ಟುಬಿದ್ದಾಗ), ಕೇಂದ್ರೀಯ  ರೀತಿಯ ಶಿರೋಭ್ರಮಣ ಕಾಣಿಸಿಕೊಳ್ಳುತ್ತದೆ.

ಅಪಸ್ಮಾರದಿಂದ ನರಳುವವರು, ಕತ್ತಿನ ಭಾಗದ ಮೂಳೆಗಳ ಸವೆತ(ಸ್ಪಾಂಡೈಲೋಸಿಸ್), ಮೈಗ್ರೇನ್, ಪಾರ್ಕಿನ್‌ಸನ್‌ ಕಾಯಿಲೆ ಮತ್ತಿತರ ನರರೋಗಗಳಿಂದ ನರಳುವವರಲ್ಲಿಯೂ ಈ ರೀತಿಯ ಶಿರೋಭ್ರಮಣ ಕಾಣಿಸಿಕೊಳ್ಳುತ್ತದೆ. ಈ ಗುಂಪಿನ ರೋಗಿಗಳು ಹೆಚ್ಚಾಗಿ ತೊದಲು ಮಾತು, ದ್ವಿ–ದೃಷ್ಠಿ, ಕಣ್ಣಿನ ಸೆಳೆತ ಮತ್ತು ತೀವ್ರ ರೀತಿಯ ಸಮತೋಲನ ತೊಂದರೆ ಅನುಭವಿಸುತ್ತಾರೆ. ಮೆದುಳಿನ ಹಾನಿಯಿಂದಾಗಿ ಕೆಲವರಲ್ಲಿ ನಿಲ್ಲಲೂ, ನಡೆದಾಡಲೂ ಕಷ್ಟವಾಗಬಹುದು. ಇದು ಗುಣವಾಗಲು ಹೆಚ್ಚು ಸಮಯ ಬೇಕು, ಗುಣವಾಗದೆಯೂ ಇರಬಹುದು.

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಒಳ ಕಿವಿಯಲ್ಲಿನ ಮೂಳೆಗಳ ಸವೆತವುಂಟಾಗಿ ಬಹುಕಾಲದವರೆಗೆ ಶಿರೋಭ್ರಮಣ ಕಾಡಬಹುದು. 
ತಲೆಸುತ್ತುವ ಅನುಭವ ಸಾಮಾನ್ಯವಾದರೂ, ಕೆಲವವರಿಗೆ ಸುತ್ತಲಿನ ಪರಿಸರ ತಿರುಗುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ವೈದ್ಯಲೋಕದಲ್ಲಿ ಆಬ್ಜೆಕ್ಟಿವ್‌/ವಾಸ್ತವವಾದ ಶಿರೋಭ್ರಮಣ ಎನ್ನುತ್ತಾರೆ.

ಕೆಲವರಿಗೆ ತಾವೇ ತಿರುಗುತ್ತಿರುವಂತೆ ಭಾಸವಾಗುತ್ತದೆ. ಇದಕ್ಕೆ ಸಬ್ಜೆಕ್ಟಿವ್‌/ಕಾಲ್ಪನಿಕ ಶಿರೋಭ್ರಮಣ ಎನ್ನುತ್ತಾರೆ. ಕೆಲವೊಮ್ಮೆ ರಕ್ತದೊತ್ತಡ ಅಥವಾ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಾಗ, (ರಕ್ತದೊತ್ತಡ/ಸಕ್ಕರೆ ಕಾಯಿಲೆಯಿಂದ ನರಳುವವರನ್ನು ಔಷಧಿಯ ಪ್ರಮಾಣ ಹೆಚ್ಚಾದಾಗ) ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದಲೂ ಈ ತೊಂದರೆ ಕಾಣಿಸುತ್ತದೆ. ಇವರು ‘ಹುಸಿ ಶಿರೋಭ್ರಮಣ’ದಿಂದ ನರಳುತ್ತಾರೆ.

ವಾಂತಿ, ವಾಕರಿಕೆ, ಕಿವಿಯಲ್ಲಿ ಗುಂಯ್‌ಗುಡುವುದು, ತೊದಲು ಮಾತು, ದ್ವಿ–ದೃಷ್ಟಿ ದೋಷವಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಇವು ಇಲ್ಲದೇ ಸಮತೋಲನ ತೊಂದರೆ ಮಾತ್ರ ಆಗುತ್ತಿದ್ದರೆ ‘ಹುಸಿ ಶಿರೋಭ್ರಮಣ’ವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಶಿರೋಭ್ರಮಣದ ಜೊತೆಗೆ ಮೇಲೆ ಹೇಳಿದ ಯಾವುದೇ ಚಿಹ್ನೆಗಳಿದ್ದಲ್ಲಿ ಅದನ್ನನುಸರಿಸಿ ಕಿವಿ ಮತ್ತು ಮೆದುಳಿಗೆ ಸಂಬಂಧಪಟ್ಟ ಪರೀಕ್ಷೆಗಳನ್ನು ಮಾಡಿ ದೃಢಪಡಿಸಿಕೊಳ್ಳಲಾಗುತ್ತದೆ ಮತ್ತು ಅದಕ್ಕೆ ತಕ್ಕ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಬಹುತೇಕ ಪ್ರಕರಣಗಳಲ್ಲಿ ಶಿರೋಭ್ರಮಣ ತಂತಾನೆ ಸರಿಹೋಗುತ್ತದೆ. ರೋಗಿಗೆ ಮಾಹಿತಿ ಮತ್ತು ಧೈರ್ಯ ನೀಡ ಬೇಕು. ಸಮತೋಲನ ತೊಂದರೆ ಕಾಣಿಸಿಕೊಳ್ಳುವ ಸೂಚನೆ ದೊರೆತಾಗ ಆದಷ್ಟೂ ಜಾಗರೂಕರಾಗಿದ್ದು ವಿಶ್ರಾಂತಿಗೆ ಸೂಚಿಸಲಾಗುತ್ತದೆ.

ಕೆಲ  ವ್ಯಾಯಾಮಗಳಿಂದಲೂ ಇದನ್ನು ತಡೆಯಬಹುದು. ಅಧಿಕ ರಕ್ತದೊತ್ತಡ, ಇನ್ಸುಲಿನ್‌ ತೆಗೆದುಕೊಳ್ಳುವ ಮಧುಮೇಹಿಗಳು ಮತ್ತು ಹೃದ್ರೋಗಿಗಳಿಗೆ ಇದರ ಬಗ್ಗೆ ತಿಳಿವಳಿಕೆ ಹೇಳಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೆ ಸಮತೋಲನ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ.
(ಸಲಹೆ: ಡಾ. ನರಸಿಂಹರಾವ್‌, ಇಎನ್‌ಟಿ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT