ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣದ ಕಾಣಿಕೆ ಆ ಕಿವಿಯೋಲೆ

Last Updated 25 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷಗಳ ಹಿಂದೆ ನಾನು ಆಗ ಹತ್ತನೇಯ ತರಗತಿ ಮುಗಿಸಿದ್ದೆ. ಜೂನ್‌ನಲ್ಲಿ ನಮ್ಮ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಯೊಂದು ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಿದವರಿಗೆ ನಗದು ಬಹುಮಾನ ಕೊಡುವ ಕಾರ್ಯಕ್ರಮ ಇತ್ತು..

ನಾನು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದೆ. ಹೀಗಾಗಿ ಅಂದು ನನಗೆ ಒಟ್ಟು ಕನ್ನಡ, ಗಣಿತ, ಇಂಗ್ಲಿಷ್ ಮತು ಹಿಂದಿ ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಿದ್ದಕ್ಕಾಗಿ 851 ರೂಪಾಯಿ ನಗದು ಬಹುಮಾನ ಬಂದಿತ್ತು. ಬಂಧುಗಳಿಂದಲೂ ಕಾಣಿಕೆಯಾಗಿ ಬಂದ ನಗದು ಬಹುಮಾನ ಒಟ್ಟು 1501ರೂಪಾಯಿಗಳು ಆಗಿದ್ದವು. ಇಪ್ಪತ್ತು ವರ್ಷಗಳ ಹಿಂದೆ 1501 ಎಂದರೆ ಜಾಸ್ತಿನೇ ಆಗಿತ್ತು. ಅಷ್ಟೊಂದು ಹಣದಿಂದ ಏನು ಮಾಡಬೇಕೆಂದು ತೋಚದೇ ಅಮ್ಮನ ಕೈಯ್ಯಲ್ಲಿ ಕೊಟ್ಟಿದ್ದೆ. ಅಮ್ಮ ಅದನ್ನು ಕಾಯ್ದಿಟ್ಟಿದ್ದರು.

ಜುಲೈನಲ್ಲಿ ಬಂದಿತ್ತು ಶ್ರಾವಣ ಮತ್ತು ನಾಗರಪಂಚಮಿ. ಈ  ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಬಳೆ, ಓಲೆ, ಬಟ್ಟೆ ಕೊಡಿಸುವುದು ವಾಡಿಕೆ. ಅದರಂತೆ ಅಮ್ಮ ನನಗೆ ಅದೇ ದುಡ್ಡಿನಿಂದ ಚಿನ್ನದ ಓಲೆ ಕೊಡಿಸುವುದಾಗಿ ಹೇಳಿದಳು. ಚಿನ್ನದ ಮಹತ್ವ ಗೊತ್ತಿಲ್ಲದ ಹಾಗೂ ಅದರ ಬಗ್ಗೆ ಒಲವು ಇರದ ನಾನು, ನನಗೆ ಗಾಜಿನ ಬಳೆ ಬೇಕೆಂದು  ಹೇಳಿದ್ದೆ. ತಂದೆಯವರೊಡನೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಕಿವಿಯೋಲೆ ತಂದಳು.

ಮೊದಲ ಸಲ ಬಿಳಿ ಹರಳನ್ನು ಬಂಗಾರದಲ್ಲಿ ಕೂಡಿಸಿ ಮಾಡಿದ ಆ ಚಿನ್ನದ ಝುಮಕಿ ಮೊದಲ ನೋಟದಲ್ಲೇ ನನ್ನನ್ನು ಆಕರ್ಷಿಸಿತ್ತು. ಆ ಹರಳಿನ ಹೊಳಪು ನನ್ನ ಮನದಲ್ಲಿ ಅಚ್ಚೊತ್ತಿದಂತೆ ಆಗಿತ್ತು. ಮೊದಲ ಸಲ ಆ ಶ್ರಾವಣ ಮಾಸ ನನಗೆ ಬಂಗಾರಮಯವಾಗಿತ್ತು. ಮುಂದಿನ ಪ್ರತಿಯೊಂದು ಹಬ್ಬ ಪ್ರತಿಯೊಂದು ಕಾರ್ಯಕ್ರಮಕ್ಕೂ ಆ ಝುಮಕಿ ಸಾಕ್ಷಿಯಾಯಿತು. ಇಪ್ಪತ್ತು ವರ್ಷ ಕಳೆದರೂ ಅದರ ಹೊಳಪು ಇನ್ನೂ ಮಾಸಿಲ್ಲ. ಆದರೀಗ ಅದು ನನ್ನೊಡನೆ ಇಲ್ಲ. ಅದನ್ನು ಮನೆಗೆ ತಂದ ದಿನದ ಹೊಳಪು ಒಂದಿನಿತೂ ಮಾಸದೇ  ಬ್ಯಾಂಕ್ ಲಾಕರ್‌ನಲ್ಲಿ ಭದ್ರವಾಗಿದೆ.

ಅಮ್ಮ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋದಾಗ ಏಕೋ ಗೊತ್ತಿಲ್ಲ. ಆ ಝುಮಕಿ ಮಾತ್ರ ಬೇಡವಾಯ್ತು. ಪ್ರತಿಕ್ಷಣ ಅಮ್ಮನ ನೆನಪು ತಂದು ಮನದಲ್ಲಿ ವಿಚಿತ್ರ ನೋವು ಪ್ರಾರಂಭವಾಯ್ತು. ಅಂದೇ ಕೊನೆ ಆ ಝುಮಕಿ ಧರಿಸಲೇ ಇಲ್ಲ. ಆದರೆ ಒಂದಂತೂ ನಿಜ, ಪ್ರತಿ ಶ್ರಾವಣ ಬಳೆ ಖರೀದಿಸುವಾಗ ಆ ಓಲೆಯ ನೆನಪು ಆಗದೇ ಇರದು, ನನ್ನ ಮೊದಲ ಸ್ವಂತ ದುಡ್ಡಿನಿಂದ ಖರೀದಿಸಿದ ಬಂಗಾರವೆಂಬ ಖುಷಿಯೋ? ಅಥವಾ ಅದನ್ನು ಬೇಡವೆಂದರೂ ಕೊಡಿಸಿದ ಅಮ್ಮನ ನೆನಪೋ? ಯಾವುದಂತ ಗೊತ್ತಿಲ್ಲ. ಕಣ್ಣೀರ ಹನಿ ಮಾತ್ರ ಪ್ರತಿ ಸಲ ಶ್ರಾವಣದ ಸ್ವಾಗತಕ್ಕೆ ಕೆನ್ನೆ ತೋಯಿಸದೇ ಬಿಡದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT