ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಮನಸಿನ ವೇದನೆ

Last Updated 22 ಜನವರಿ 2016, 19:47 IST
ಅಕ್ಷರ ಗಾತ್ರ

ದೆವ್ವದ ಬಗೆಗಿನ ಕಲ್ಪನೆಗಳು ಸತ್ಯವೋ ಸುಳ್ಳೋ ಅನ್ನುವುದಕ್ಕಿಂತ ಹೆಚ್ಚಾಗಿ ನೆಮ್ಮೆಲ್ಲರನ್ನೂ ಕಾಡುವ ‘ಭಯ’ ಎಂಬ ಭೂತ, ಅದು ನಿಜ ಎಂಬುದನ್ನು ನಂಬುವಂತೆ ಮಾಡುತ್ತದೆ. ಜೊತೆಗೆ ಕಾಕ ತಾಳೀಯವೆಂಬಂತೆ ಮಾನಸಿಕ ಅತಿರೇಕಗಳು ಆ ಕಲ್ಪನೆಯನ್ನು ದೃಢೀಕರಿಸುತ್ತವೆ. ನಾನು ಮದುವೆಯಾದ ಹೊಸತರಲ್ಲಿ ನಮ್ಮ ಅತ್ತೆಅವರ ತವರಿಗೆ ಹೋಗಿದ್ದೆ.

ಆ ಮನೆ, ತುಂಬಾ ಹಳೆಯ ಕಾಲದ್ದು ದನ ಕಟ್ಟುವ ಮನೆ, 100 ಜನ ಮಲಗಬಹುದಾದ ದೊಡ್ಡ ಪಡಸಾಲೆ, ಅಟ್ಟದ ಮೇಲೆ ಸಾಲಾಗಿ ಕೋಣೆಗಳು ಬಾಳೆಗೊನೆ ಇಡಲೊಂದು ಕೋಣೆ, ಮಾವಿನ ಹಣ್ಣು ಅಡಿ ಹಾಕಲೊಂದು ಕೋಣೆ, ಪುಸ್ತಕಗಳನ್ನು ಸಂಗ್ರಹಿಸಿಡುವ ಕೋಣೆ, ಅತಿಥಿಗಳು ಬಂದರೆ ವಿಶ್ರಾಂತಿಗೆಂದು ಮತ್ತೊಂದು ಹೀಗೆ ಮನೆ ಎಲ್ಲಾ ಸುತ್ತು ಹಾಕಿ ಬರುವಷ್ಟರಲ್ಲಿ ಅರ್ಧ ಗಂಟೆ ಹಿಡಿಯಿತು ದೊಡ್ಡ ಬಚ್ಚಲು ಮನೆ, ಅಲ್ಲಿ 8-10 ಕೊಡ ನೀರು ಹಿಡಿಯುವ ದೊಡ್ಡ ಹಂಡೆ. ಮೂಲೆಯಲ್ಲಿ ಪೇರಿಸಿಟ್ಟ ತಾಮ್ರದ ಕೊಡಗಳು ನಾನು ಖಾಲಿ ಕೊಡವನ್ನು ಎತ್ತಿದೆ ಉಸ್ಸಪ್ಪಾ ಎಂದು ನೆಲಕ್ಕಿರಿಸಿದೆ. ನಮ್ಮ ಅತ್ತೆ ಅವರಿಗೆ ‘ಏನಿದು ಇಷ್ಟು ಭಾರ ಇದೆಯಲ್ಲಾ’ ಎಂದೆ ಅದಕ್ಕೆ ಅವರು  ಅದರ ಹಿಂದಿನ ವಿಷಾದದ ಕಥೆಯನ್ನು ವಿವರಿಸಿದರು.

ಮೂವತ್ತು ವರ್ಷಗಳ ಹಿಂದೆ ಆ ಮನೆ ನಂದನವನವಾಗಿತ್ತು. ಪಡಸಾಲೆಯಲ್ಲಿ ಸಾಲಾಗಿ ನಾಲ್ಕು ತೊಟ್ಟಿಲು ತೂಗುತ್ತಿದ್ದವು. ಮನೆ ತುಂಬಾ ಜನ ಯಾವುದಕ್ಕೂ ಕೊರತೆ ಇರದ ಜಮೀನ್ದಾರಿಕೆಯ ಕುಟುಂಬ ಆಗೆಲ್ಲಾ ಹೆಣ್ಣು ಮಕ್ಕಳಿಗೆ 15 ತುಂಬುವ ಮೊದಲೆ ಮದುವೆ ಮಾಡುತ್ತಿದ್ದರು. ಚಿಕ್ಕಪ್ಪನ ಮಗಳಿಗೆ 14ರ ಪ್ರಾಯ ಸಂಬಂಧಿಯೊಬ್ಬರು ಬಂದು ಒಳ್ಳೆಯ ಮನೆತನದ ಹುಡುಗ ವಿದ್ಯಾವಂತ ಸಾಕಷ್ಟು ಜಮೀನಿದೆ ಜಾತಕ ಕೊಡಿ ಎಂದರು. ಜಾತಕ ಕೂಡಿ ಬಂದು ಹುಡುಗಿ ನೋಡುವ ಶಾಸ್ತ್ರವೂ ಆಯಿತು. ವಿಜೃಂಭಣೆಯಿಂದ ಮದುವೆಯೂ ಆಯಿತು.

ಮದುವೆಯಾಗಿ 8 ವರ್ಷ ಕಳೆದರೂ ಇವಳಿಗೆ ಮಕ್ಕಳ ಭಾಗ್ಯ ಸಿಗಲಿಲ್ಲ ಬೀಗರಿಗೆ ತಿಳಿಸದೆ ಅಳಿಯನಿಗೆ ಎರಡನೆಯ ಮದುವೆ ಮಾಡಿ ಮಗಳನ್ನು ತವರಿನಲ್ಲಿ ಬಿಟ್ಟು ಹೋದರು. ಇವಳು ಮಂಕಾಗಿ ಬಾವಿಕಟ್ಟಿ ಹತ್ತಿರ ಅಳುತ್ತಾ ಕೂರುತ್ತಿದ್ದಳು. ಒಂದು ದಿನ ಇದ್ದಕ್ಕಿದ್ದಂತೆ ಅಲ್ಲಿದ್ದ ಕೊಡದಿಂದ ನೀರು ಸೇದಿ ಒಂದೇ ಕೈಯಿಂದ ಎತ್ತಿ ತಲೆ ಮೇಲೆ ನೀರು ಸುರಿದು ಕೊಂಡಳು ಇದು ಪುನರಾವರ್ತನೆ ಆಗತೊಡಗಿತು ಮನೆಯವರಿಗೆಲ್ಲ ಗಾಭರಿ, ಮಾತನಾಡಿಸಿದರೆ ಗಂಡಸರ ಧ್ವನಿ ಹೆದರುವಂಥ ವಿಲಕ್ಷಣ ಮುಖ ಭಾವ, ಮಕ್ಕಳೆಲ್ಲ ಓಡಿ ಹೋಗುತ್ತಿದ್ದರು. ನಾಲ್ಕು ಜನ ಗಂಡಸರು ಹಿಡಿದರೂ ವಶವಾಗುತ್ತಿರಲಿಲ್ಲ ಅಟ್ಟದಲ್ಲಿನ ಕೋಣೆಯಲ್ಲಿ ಕೂಡಿ ಹಾಕಿದರು.

ಏನು ಮಾಡುತ್ತಿರಬಹುದು ಎಂದು ಇಣುಕಿ ನೋಡಿದರೆ ಶಾಂತಚಿತ್ತದಿಂದ ಕುಳಿತು ಮಧುರವಾದ ಧ್ವನಿಯಲ್ಲಿ ಸೀತಾ ಕಲ್ಯಾಣವನ್ನು ಒಂಚೂರು ತಪ್ಪದೆ ಇಡಿಯಾಗಿ ಹೇಳುತಿದ್ದಳು. ವಿಚಿತ್ರವೆಂದರೆ ಅವಳಿಗೆ ಸೀತಾ ಕಲ್ಯಾಣ ಶ್ಲೋಕದ ಬಗ್ಗೆ ತಿಳಿದೇ ಇರಲಿಲ್ಲ. ಜ್ಯೋತಿಷ್ಯರಲ್ಲಿ ವಿಚಾರಿಸಿದಾಗ ಅವಳಿಗೆ 2 ದೆವ್ವ ಮೆಟ್ಟಿಕೊಂಡಿವೆ ಒಂದು ಗಂಡು ದೆವ್ವದ್ದು. ಮತ್ತೊಂದು ಅಟ್ಟದ ಮೇಲಿನ ಹೆಣ್ಣು ದೆವ್ವದ್ದು ಎಂದರು.

ಒಂದು ದಿನ ದೆವ್ವ ಬಿಡಿಸಲು ಬಂದವರು ಬೇವಿನ ಜರಲೆಯಿಂದ ಹೊಡೆದದ್ದು ನೋಡಿ ಕರುಳು ಚುರ್ ಎಂದಿತು ಆದರೂ ಅವಳ ವರ್ತನೆಯಲ್ಲಿ ಬದಲಾವಣೆ ಕಾಣಲಿಲ್ಲ. ಕಡೆಗೆ ಮನೋವೈದ್ಯರ ಹತ್ತಿರ ತೋರಿಸಿ ತಿಂಗಳಾನುಗಟ್ಟಲೆ ಔಷಧೋಪಚಾರ ಮಾಡಿಸಿ ಮನೆಯವರೆಲ್ಲರ ಅಂತಃಕರಣದ ಕಾಳಜಿಯಿಂದ ಮತ್ತೆ ಮೊದಲಿನಂತಾಗಿ ಗಂಡನ ಮನೆಗೆ ಹೋಗಿ ಮಗುವನ್ನು ಹೆತ್ತು ಲವಲವಿಕೆಯಿಂದ ನಮ್ಮೆಲ್ಲರೊಳ ಗೊಂದಾದಳು. ಇದಕ್ಕೆ ಏನೆನ್ನಬೇಕು ಸೂಕ್ಷ್ಮ ಮನಸ್ಸಿನ ವೇದನೆಯೋ? ದೆವ್ವದ ಕಾಟವೋ? ಇದು ಎಲ್ಲರನ್ನೂ ಕಾಡುವ ಯಕ್ಷ ಪ್ರಶ್ನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT