ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಲ್ಲೇನಿದೆ ಅಂತೀರಾ...?

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಗುಲಾಬಿಯೇ ಎಂಬ ಮಾತೇನೋ ಸರಿ. ಅದರ ಪರಿಮಳ, ಬಣ್ಣ, ಅದರ ಗಿಡದಲ್ಲಿ ತುಂಬಿರುವ ಮುಳ್ಳು ಜೀವನಕ್ಕೆ ಒಂದು ರೂಪಕದಂತಿದೆ, ನಿಜ. ಆದರೂ... ಗುಲಾಬಿಯನ್ನು, ಅದು ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದರೂ  ಗುಲಾಬಿ ಎಂದು ಕರೆದರೆ ಅದರ ಸೊಗಸೇ ಬೇರೆ. ಹೂವಿಗೊಂದು ಹೆಸರು, ಅದಕ್ಕೊಂದು ಕಥೆ, ಹಿನ್ನೆಲೆ, ಅರ್ಥ ಇರುವ ಈ ಬಾಳಿನಲ್ಲಿ ರಕ್ತ- ಮಾಂಸ- ಎಲುಬು- ಮೆದುಳು- ಹೃದಯ- ಮನಸ್ಸು ಮತ್ತು ಆತ್ಮ ಎಲ್ಲವೂ ಇರುವ ಮನುಷ್ಯರಿಗೆ ಹೆಸರು ಬೇಡವೇ! ಬೇಕು. ಧರ್ಮ- ದೇಶ- ಭಾಷೆ- ಗಂಡು- ಹೆಣ್ಣು- ಜಾತಿ ಎಲ್ಲವನ್ನೂ ಗಮನಿಸಿಯೇ ಹೆಸರಿಡುತ್ತಾರೆ, ಹೆಚ್ಚಿನ ಸಂದರ್ಭದಲ್ಲಿ!

ನಾನು ಈಗ ನಿಮ್ಮಡನೆ ಹಂಚಿಕೊಳ್ಳುವ ಮುಖ್ಯ ವಿಷಯ ಹೆಸರುಗಳ ವಿಶಿಷ್ಟತೆಯ ಬಗ್ಗೆ ಅಲ್ಲ. ಇದು ಪೀಠಿಕೆ ಅಷ್ಟೆ. ಮೊನ್ನೆ ಏನಾಯ್ತು ಅಂದರೆ, ನನ್ನ ಸ್ತ್ರೀ ವಿರೋಧಿ ಪರಿಚಿತ ಪುರುಷರೊಬ್ಬರು ಕೇಳಿದರು `ನೀವು ಮಹಿಳೆಯರು ಸ್ವಾತಂತ್ರ್ಯ- ಸಮಾನತೆ ಅಂತೆಲ್ಲ ಗಲಾಟೆ ಮಾಡುತ್ತೀರಿ, ನಿಮ್ಮ ಹೆಸರಿನ ಜೊತೆ ಗಂಡನ ಹೆಸರನ್ನೇಕೆ ಇಟ್ಟುಕೊಳ್ಳುತ್ತೀರಿ?' ಎಂದರು. `ನೀವು ನಿಮ್ಮ ಹೆಸರಿನ ಜೊತೆ ಅಪ್ಪನ, ಊರಿನ, ಕೆಲವರು ಜಾತಿ ಸೂಚಕ ಹೆಸರು ಜೋಡಿಸಿಕೊಳ್ಳುವುದಿಲ್ಲವೇ ಹಾಗೆ' ಎಂದೆ. `ಅದು ನಮ್ಮ ಹುಟ್ಟಿನಿಂದ ತಂದೆ- ತಾಯಿ ಕೊಟ್ಟದ್ದು, ನೀವ್ಯಾಕೆ ಮದುವೆ ಆದ ಮೇಲೆ ಹೆಸರು ಬದಲಾಯಿಸಿಕೊಂಡು, ಗಂಡನ ಹೆಸರಿನ ಹಿಂದೆ ಬಾಲದಂತೆ ಬದುಕುತ್ತೀರಿ?' ಎಂದು ಪ್ರಶ್ನಿಸಿದರು. ಅವರಿಗೆ ಏನೋ ಒಂದು ಉತ್ತರ ಕೊಟ್ಟೆ. ಆದರೆ ನನ್ನ ಮನಸ್ಸು ಈ ಹೆಸರುಗಳ ಸುತ್ತಲೂ ಗಿರಕಿ ಹೊಡೆಯತೊಡಗಿತ್ತು.

ನಾನು ಹುಟ್ಟಿ ಬೆಳೆದ ಉತ್ತರ ಕನ್ನಡದ ಶಿರಸಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಹೆಸರು, ತಂದೆ ಹೆಸರು, ಅಡ್ಡ ಹೆಸರು (ಸರ್‌ನೇಮ್) ಇರಲೇಬೇಕಾಗಿತ್ತು. ಉದಾಹರಣೆಗೆ ಕೃಪಾ ಎಂಬುದು ವಿದ್ಯಾರ್ಥಿನಿಯ ಹೆಸರಾದರೆ `ನಿನ್ನ ಹೆಸರೇನು?' ಎಂದಾಗ ಅವಳು ಪೂರ್ತಿಯಾಗಿ `ಕೃಪಾ ಕೃಷ್ಣಮೂರ್ತಿ ಹೆಗಡೆ' ಎಂದು ಹೇಳಬೇಕಾಗಿತ್ತು. ಹಾಗೆ ಹೇಳದಿದ್ದರೆ ಅವಳು ದಡ್ಡಿ, ರೀತಿ ನೀತಿ ಗೊತ್ತಿಲ್ಲದವಳು ಎಂದೇ ಭಾವಿಸುತ್ತಿದ್ದರು. ಕೆಲವು ಗುರುಗಳಂತೂ ಕೇವಲ `ಕೃಪಾ' ಎಂದರೆ `ಏನಮ್ಮೋ, ಅಪ್ಪನ ಹೆಸರು ಹೇಳಲು ನಾಚಿಕೆಯಾ? ಈಗಲೇ ಹೀಗಾದರೆ ಮುಂದೆ ಗತಿ?' ಅಂತ ಗದರಿಸಿಯೇ ಬಿಡುತ್ತಿದ್ದರು.

ನಾನು ಹೈಸ್ಕೂಲ್‌ನಲ್ಲಿದ್ದಾಗ ನಮ್ಮ ಊರಿಗೆ ಸಿದ್ಧಾಪುರದಿಂದ `ನಿಮ್ಮಿ' ಎಂಬ ಹುಡುಗಿ ಬಂದು ನಮ್ಮ ಸ್ಕೂಲ್ ಸೇರಿದ್ದಳು. ಅವಳನ್ನು ಯಾವ ಅಧ್ಯಾಪಕರೂ ನಿನ್ನ ಪೂರ್ತಿ ಹೆಸರು ಹೇಳು ಎನ್ನುತ್ತಿರಲಿಲ್ಲ. ಉಳಿದ ಹುಡುಗಿಯರು ಅವಳ ವಿಷಯವಾಗಿ ಗುಸುಗುಸು ಮಾತನಾಡುತ್ತಿದ್ದರು. ನನ್ನ ತರಗತಿಯಲ್ಲೇ ಓದುತ್ತಿದ್ದ ಸ್ವಲ್ಪ ದೊಡ್ಡ ಹುಡುಗಿ ಮೇರಿ ಒಂದು ದಿನ ಗುಟ್ಟಾಗಿ ನನ್ನ ಬಳಿ ಹೇಳಿದಳು.

`ಶಾಲೆಯ ದಾಖಲಾತಿ ಪುಸ್ತಕದಲ್ಲಿ ಆ ನಿಮ್ಮಿ ಹೆಸರಿನ ಮುಂದೆ ಏನಿದೆ ಗೊತ್ತಾ? ನಿಮ್ಮಿ ಕಮಲಮ್ಮ ಸಾನಿ ಅಂತ' ಅಂದಳು. ಹಾಗೆ ಯಾಕಿದೆ ಅಂತ ನನಗೆ ಆಗ ಗೊತ್ತಾಗಲಿಲ್ಲ. ಅಂಥ ವಿಷಯಗಳ ಬಗ್ಗೆ ಅನುಭವಿಗಳಾದ ಹಿರಿಯ ಗೆಳತಿಯರು ಹೇಳಿದರು. `ನಿಮ್ಮಿಗೆ ಅಪ್ಪ ಇಲ್ಲ ಅಥವಾ ಯಾರು ಅಂತ ಗೊತ್ತಿಲ್ಲ, ತಾಯಿ ಮಾತ್ರ ಇದ್ದಾಳೆ, ಆಕೆ ಸೂಳೆ. ಅದಕ್ಕೆ...' ಎಂದು ನಕ್ಕರು. ಪಾಪ, ನಿಮ್ಮಿ ಒಳ್ಳೆ ಹುಡುಗಿ, ಚೆಂದದ ಹುಡುಗಿ, ಜಾಣೆಯೂ ಹೌದು. ಅವಳಿಗ್ಯಾಕೆ ಅಪ್ಪ ಇರಬಾರದು ಅಥವಾ ಅವಳ್ಯಾಕೆ ತನ್ನ ಹೆಸರಿನ ಮುಂದೆ ಅಮ್ಮನ ಹೆಸರು ಇಟ್ಟುಕೊಳ್ಳಬೇಕು? ಯಾವುದೂ ಅರ್ಥವಾಗಲಿಲ್ಲ.

ಅಡ್ಡ ಹೆಸರಿನಿಂದಲೇ ತಮ್ಮ ಜಾತಿ ಘೋಷಿಸಿಕೊಳ್ಳುವ ಗೌಡ, ಭಟ್ಟ, ಶೆಟ್ಟಿ, ಹೆಗಡೆ, ಶ್ಯಾನಭಾಗ ಹುಡುಗ ಹುಡುಗಿಯರು ಬೇಕಷ್ಟು ಇದ್ದರು. ಕೆಲವು ಅಡ್ಡ ಹೆಸರುಗಳಿಗೆ ಜಾಸ್ತಿ ಗೌರವ. ಕೆಲವು ಅವಹೇಳನಕ್ಕೆ ಗುರಿಯಾಗುತ್ತಿದ್ದವು. `ಭಟ್ಟ ಭಟ್ಟ ಕೋಳಿ ಸುಟ್ಟ, ಊರಿಗೆಲ್ಲ ನಾತ ಕೊಟ್ಟ, ಯಾರಿಗೂ ಕೊಡದೇ ತಾನೇ ತಿಂದ' ಎಂದೋ `ನೀನು ಹಳ್ಳಿ ಗೌಡ ಹೋಗಲೇ' ಎಂದೋ `ನೀನು ದೊಡ್ಡ ಹೆಗಡೆ' ಎಂದೋ ಸ್ನೇಹಿತರು, ಶಿಕ್ಷಕರು ಗೇಲಿ ಮಾಡುವುದಿತ್ತು. ನಮ್ಮ ಅಪ್ಪ ಬ್ರಾಹ್ಮಣರಾದರೂ ಜಾತಿ ಸೂಚಕವಾದ ಅಡ್ಡ ಹೆಸರು ಇಟ್ಟುಕೊಳ್ಳದೆ ದಕ್ಷಿಣ ಕನ್ನಡದ ತಮ್ಮ ಮೂಲ ಗ್ರಾಮ `ಶಿರೂರ' ಅಂತ ಅಡ್ಡ ಹೆಸರು ಇಟ್ಟುಕೊಂಡಿದ್ದರು. ಆದರೆ ಮೇಲು ಜಾತಿ, ಕೆಳ ಜಾತಿ, ಕೀಳು ಜಾತಿ ಅಂತ ತುಂಬಾ ತಾರತಮ್ಯವಿದ್ದ ಕಾಲ ಅದು. ಹಾಗಾಗಿ ಅದೇ ಅಡ್ಡ ಹೆಸರಿನ ಕೊಂಕಣಿ, ಹರಿಜನರಂತಹ ಬೇರೆ ಬೇರೆ ಜಾತಿಯವರು ಇದ್ದರು. `ನೀವು ಆ ಜಾತಿಯವರಾ?' ಅಂತ ಯಾರಾದರೂ ಕೇಳಿದರೆ ಅಪಮಾನವಾಗುತ್ತಿತ್ತು. ನಾವು `ಹವ್ಯಕ ಬ್ರಾಹ್ಮಣರು' ಅಂತ ಗರ್ವದಿಂದ ಹೇಳುತ್ತಿದ್ದೆ. (ಈಗ ಗರ್ವಭಂಗವಾಗಿದೆ, ಅದು ಬೇರೆ ಮಾತು!) ಈಗಂತೂ ಜಾತಿ ಸೂಚಕವಾದ ಭಟ್ಟ, ಹೆಗಡೆ ಬಿಟ್ಟು ಅಪ್ಪ ತನ್ನ ಮೂಲ ಗ್ರಾಮದ ಹೆಸರು ಇಟ್ಟುಕೊಂಡ ಬಗ್ಗೆ ಹೆಮ್ಮೆ ಎನಿಸುತ್ತಿದೆ (ಎಲ್ಲ ಕಾಲದ ಮಹಿಮೆ)
ಹೈಸ್ಕೂಲ್ ಮುಗಿಸಿ ಕಾಲೇಜು ಮೆಟ್ಟಿಲು ಏರಿದೆವು. ಆಗ ಹೆಸರುಗಳ ಬಗ್ಗೆ ಇನ್ನಷ್ಟು ಕುತೂಹಲ ಮೂಡಿತು. ಶಾಲೆಗಳಲ್ಲಿ ಒಬ್ಬರನ್ನೊಬ್ಬರು ಹೆಸರು ಕರೆದೇ ಮಾತನಾಡುವ ಪದ್ಧತಿ. ಕಾಲೇಜಿನಲ್ಲಿ ನಮ್ಮ ಹೆಸರು, ಅಂದರೆ ಫಸ್ಟ್ ನೇಮ್‌ನ್ನು ಕರೆಯುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಗಂಡು ಮಕ್ಕಳೆಲ್ಲ ಹೆಗಡೆ, ಭಟ್ಟ, ಕಾಮತ್, ರಾವ್, ಶೆಟ್ಟಿ... ಅಂತ ಕರೆಸಿಕೊಂಡರೆ, ಹೆಣ್ಣು ಮಕ್ಕಳನ್ನು `ಮಿಸ್' ಸೇರಿಸಿ ಕರೆಯುವುದು ಪದ್ಧತಿ. ಉದಾಹರಣೆಗೆ `ಮಿಸ್ ನಾಯ್ಕ, ಮಿಸ್ ರಾವ್, ಮಿಸ್ ಕಾಮತ್... ಹೀಗೆ. ಅತಿ ಆತ್ಮೀಯರಾದರೆ ಮಾತ್ರ ಹೆಸರಿಡಿದು ಕರೆಯಬಹುದಿತ್ತು.

ಇದೇ ಸಮಯದಲ್ಲಿ ನನ್ನ ಸಂಬಂಧಿಕರಲ್ಲಿ ನಾನೊಂದು ವಿಚಿತ್ರ ಗಮನಿಸಿದೆ. ಮಾವ ಶಂಭು- ಅತ್ತೆ ಗೌರಿ, ಚಿಕ್ಕಪ್ಪ ವಿಶ್ವನಾಥ- ಚಿಕ್ಕಮ್ಮ ಗಿರಿಜಾ, ಅಜ್ಜ ವೆಂಕಟರಮಣ- ಅಜ್ಜಿ ಲಕ್ಷ್ಮಿ, ದೊಡ್ಡಮ್ಮ ರಾಧಾ- ದೊಡ್ಡಪ್ಪ ಕೃಷ್ಣ... ಹೀಗೆ. ಅಪರೂಪಕ್ಕೆ ಗಂಡ- ಹೆಂಡತಿ ಹೆಸರು ಹೀಗೆ ಹೊಂದಿದರೆ ಅದು ಆಕಸ್ಮಿಕ ಎನ್ನಬಹುದು. ಆದರೆ ಸಂಬಂಧದ ಎಲ್ಲ ಗಂಡ-ಹೆಂಡಿರ ಹೆಸರೂ ಹೀಗೆ ಇರಲು ಹೇಗೆ ಸಾಧ್ಯ? ಆಮೇಲೆ ಗೊತ್ತಾಯಿತು ಈ ಗೌರಿ, ಗಿರಿಜಾ, ಲಕ್ಷ್ಮಿ, ರಾಧಾ, ಸೀತಾರ ಮದುವೆಯ ಮೊದಲಿನ ಹೆಸರು ಬೇರೆ ಇತ್ತು. ಮದುವೆ ಆದ ಕೂಡಲೇ ಗಂಡನ ಹೆಸರಿಗೆ ಸರಿಯಾಗಿ ಈ ಹೆಣ್ಣುಗಳಿಗೆ ಬೇರೆ ಹೆಸರು ಇಡಲಾಗಿದೆ ಎಂದು. ಎಲ್ಲ 13-14ರ ವಯಸ್ಸಿನಲ್ಲಿ ಮದುವೆಯಾದವರು.

ಬಾಲ್ಯದ ತಮ್ಮ ಜನ್ಮ ನಾಮವನ್ನು ಮರೆತೇ ಬಿಟ್ಟಿರುತ್ತಿದ್ದರು. ತವರು ಮನೆಯಲ್ಲಿ ಗುಂಡಮ್ಮ, ವೆಂಕಮ್ಮ, ತಿಪ್ಪಮ್ಮ, ಶೇಷಮ್ಮ ಎಂಬೆಲ್ಲ ಹೆಸರುಗಳನ್ನು ಹೊಂದಿರುತ್ತಿದ್ದ ಹುಡುಗಿಯರಿಗೆ ಈ ಹೊಸ ಹೆಸರುಗಳಿಂದ ಖುಷಿಯೇ ಆಗುತ್ತಿತ್ತು. ನಾನು ಮದುವೆಯಾದ ಮೇಲೆ ತುಂಬಾ ಸುಂದರವಾದ ಹೆಸರು ಇಟ್ಟುಕೊಳ್ಳಬೇಕು ಅಂದುಕೊಳ್ಳುತ್ತಿದ್ದೆ. ಅಕಸ್ಮಾತ್ ಗಂಡನ ಹೆಸರು ಗುಂಡಪ್ಪ, ತಿಮ್ಮಪ್ಪ ಎಂದೆಲ್ಲ ಇದ್ದು ಬಿಟ್ಟರೆ ಅಂತ ಹೆದರಿಕೆಯೂ ಆಗುತ್ತಿತ್ತು.

ಹೀಗೇ ಒಂದು ದಿನ ಕಾಲೇಜಿನಿಂದ ಬರುವಾಗ ನಮ್ಮ ಅಜ್ಜನ ಇಬ್ಬರು ಸ್ನೇಹಿತರು  ನನ್ನ ಜೊತೆಗೇ ಮಾತನಾಡುತ್ತಾ ಬಂದರು.

ಅವರಿಬ್ಬರೂ ಸಂಜೆಯ ವಾಕಿಂಗ್‌ಗೆ ಹೊರಟಿದ್ದರು. ಹಲವಾರು ಚರ್ಚಾ ಕೂಟಗಳಲ್ಲಿ ನನಗೆ ಬಹುಮಾನ ಬಂದದ್ದು ಅವರಿಗೆ ಗೊತ್ತಿತ್ತು. ಸ್ತ್ರೀ ಪರವಾದ ನನ್ನ ನಿಲುವುಗಳನ್ನು ಹಲವಾರು ಪ್ರಶ್ನೆ ಹಾಕಿ, ಉತ್ತರ ಪಡೆದು ಸಂತಸಪಟ್ಟರು. ನಂತರ ಹೇಳಿದರು `ನೋಡು ಮಗು, ಸ್ತ್ರೀಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ನಮ್ಮ ಧರ್ಮ- ಪುರಾಣ ಅದನ್ನೇ ಹೇಳುತ್ತವೆ. ಮೊದಲು ಗಿರಿಜೆ ಆಮೇಲೆ ಶಂಕರ, ಪಾರ್ವತಿ- ಪರಮೇಶ್ವರ, ಲಕ್ಷ್ಮಿ- ನಾರಾಯಣ, ಅರುಂಧತಿ- ವಸಿಷ್ಠ, ಶಚಿ- ಇಂದ್ರ, ಸೀತಾ- ರಾಮ ಹೀಗೆ ಹೆಣ್ಣೇ ಮೊದಲು, ನಂತರ ಗಂಡು' ಎಂದು ನಕ್ಕರು. ನಂಗೂ ಖುಷಿಯಾಯ್ತು. ನನ್ನ ಮದುವೆಯಾದ ಮೇಲೆ ನನ್ನ ಗಂಡನ ಹೆಸರನ್ನೇ ಬದಲು ಮಾಡಿದರೆ ಹೇಗೆ ಎಂಬ ವಿಚಾರ ಬಂತು.

ಮನೆಗೆ ಬಂದ ಮೇಲೂ ವಿಶಾಲ ಮನೋಭಾವದ ಆ ಹಿರಿಯರು ಹೇಳಿದ ವಿಷಯಗಳು ನೆನಪಾಗುತ್ತಲೇ ಇದ್ದವು. ಪುರಾಣದ ಹೆಸರುಗಳು  ಈಗಿನ ರೂಢಿಗೆ ವಿರುದ್ಧವಾಗಿ ಇದ್ದುದನ್ನು ಗಮನಿಸಿದೆ. ಗೌರೀಶಂಕರ ಎಂದರೆ ಅದು ಶಂಕರನ ಹೆಂಡತಿಯನ್ನು ಸೂಚಿಸುವುದಿಲ್ಲ. ಅದು ಗೌರಿಯ ಪತಿಯಾದ ಶಂಕರನನ್ನೇ ವರ್ಣಿಸುತ್ತದೆ. ಹಾಗೆ ಲಕ್ಷ್ಮಿನಾರಾಯಣ ಎಂದರೆ ಅದು ನಾರಾಯಣನನ್ನು ಸೂಚಿಸುತ್ತದೆ. ಬಹುಶಃ ಲಕ್ಷ್ಮಿ, ಸರಸ್ವತಿ, ಪಾರ್ವತಿಯರನ್ನು ಇಂತಹವರ ಹೆಂಡತಿ ಎಂದು ಗುರುತಿಸಬೇಕಾದದ್ದೇ ಇಲ್ಲ, ಹಾಗೆಯೇ ಅವರು ಸುವಿಖ್ಯಾತರು ಅಲ್ಲವೇ?

ಯಾರು ಯಾರಿಗೆ ಪ್ರಿಯರೋ ಅವರ ಹೆಸರನ್ನು ತಮ್ಮ ಹೆಸರಿನ ಜೊತೆ ಹೇಳುವುದು ಪುರಾಣದ ರೀತಿ. ಅದಕ್ಕೆ ಗಂಡ ಹೆಂಡತಿಯೇ ಆಗಬೇಕಿಲ್ಲ. ದಾಶರಥಿಯೆಂದರೆ ದಶರಥನ ಮಗ ರಾಮ. `ಸೌಮಿತ್ರಿ' ಎಂದರೆ ಸುಮಿತ್ರೆಯ ನಂದನ ಲಕ್ಷ್ಮಣ. ಜಾನಕಿ ಎಂದರೆ ಜನಕರಾಜನ ಪುತ್ರಿ. ವೈನತೇಯ ಎಂದರೆ ವಿನತೆಯ ಪುತ್ರ. ಗೆಳೆಯರ ಜೊತೆ, ಒಡೆಯರ ಜೊತೆ ತಮ್ಮ ಹೆಸರನ್ನು ಗುರುತಿಸಿಕೊಂಡವರೂ ಇದ್ದಾರೆ. ರಾಮಭಂಟ ಎಂದರೆ ಹನುಮಂತ, ಅರ್ಜುನನ ಸಾರಥಿ ಕೃಷ್ಣ... ಹೀಗೆ. ಇನ್ನೂ ವಿಚಿತ್ರವೆಂದರೆ ವೈರಿಗಳ ಹೆಸರಿನ ಜೊತೆ ತಮ್ಮ ಹೆಸರನ್ನು ಜೋಡಿಸಿಕೊಂಡವರೂ ಇದ್ದಾರೆ! `ಮುರಾರಿ' ಎಂದರೆ ಮುರ ಎಂಬ ರಾಕ್ಷಸನನ್ನು ಕೊಂದವನು ಎಂದಲ್ಲವೇ?

ಹೀಗೆ ಪುರಾಣದ ಹೆಸರಿನ ಪ್ರಸಂಗಗಳನ್ನು ನೆನೆಸಿಕೊಳ್ಳುತ್ತಾ ಸಂಸ್ಕೃತ ಪಂಡಿತರು ಹೇಳಿದ ಸತ್ಯಕಾಮ ಜಾಬಾಲಿಯ ಕಥೆ ನೆನಪಾಗಿಬಿಟ್ಟಿತು. ಜಾಬಾಲಿ ಒಬ್ಬ ವಿದ್ವಾಂಸರ ಮನೆಯ ದಾಸಿ. ಮನೆಗೆ ಬರುವ ಅತಿಥಿಗಳ ಎಲ್ಲ ಕಾಮನೆ ಪೂರೈಸಬೇಕಾದದ್ದು ಅವಳ ಕರ್ತವ್ಯವಾಗಿತ್ತು. ಹಾಗೆ ಹುಟ್ಟಿದವನೇ ಅವಳ ಮಗ ಸತ್ಯಕಾಮ. ವಿದ್ಯಾಕಾಂಕ್ಷಿಯಾಗಿ ಋಷಿಗಳ ಬಳಿ ಈ ಮಗು ಹೋದಾಗ ಅವರು `ನಿನ್ನ ತಂದೆ ಯಾರು ಪ್ರವರ ಹೇಳು' ಎಂದಾಗ ಅರಿಯದ ಅವನು ತಾಯಿ ಬಳಿ ಮರಳಿ ಏನು ಉತ್ತರಿಸಬೇಕೆಂದು ಕೇಳುತ್ತಾನೆ. `ಸತ್ಯವನ್ನೇ ಹೇಳು, ನೀನು ಜಾಬಾಲಾಳ ಮಗ ಅಷ್ಟೆ' ಎನ್ನುತ್ತಾಳೆ. ಮಗು ಹೇಳಿದ ಸತ್ಯ ಕೇಳಿದ ಋಷಿ `ನೀನು ಸತ್ಯಕಾಮ ಜಾಬಾಲಿ' ಎಂದು ಹರಸುತ್ತಾನೆ, ವಿದ್ಯಾದಾನ ಮಾಡುತ್ತಾನೆ. ಎಷ್ಟು ಅರ್ಥಪೂರ್ಣ ಕಥೆ ಅಲ್ಲವೇ?

ನಮ್ಮ ಹೆಸರಿನ ಜೊತೆ ಯಾರ ಹೆಸರನ್ನು ಜೋಡಿಸಿಕೊಳ್ಳುತ್ತೇವೆ ಎಂಬುದು ಅವರವರ ರೂಢಿಗೆ ಸೇರಿದ ಮಾತು. ಆದರೆ ಹಾಗೆ ಸೇರಿಸಿಕೊಂಡವರ ವ್ಯಕ್ತಿತ್ವ, ಬದುಕು ಕೂಡ ಮುಖ್ಯ. ನಮ್ಮ ಮಕ್ಕಳು, ತಂದೆ- ತಾಯಿಯ ಹೆಸರು ಸೇರಿಸಿಕೊಂಡು ಹೆಮ್ಮೆಯಿಂದ ನಾವು `ಇಂಥವರ ಮಕ್ಕಳು' ಎಂದು ಹೇಳಿಕೊಳ್ಳುವ ಹಾಗೆ ನಾವು ಬದುಕಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ತಮ್ಮ ಅನನ್ಯತೆಗಾಗಿ ಹಾಗೇ ಕೃತಜ್ಞತಾ ಸೂಚಕವಾಗಿ ತಂದೆ- ತಾಯಿಯ ಹೆಸರನ್ನು ಜೊತೆಗಿಟ್ಟುಕೊಂಡರೆ ತಪ್ಪೇನು? ಅದರಂತೆ ಹೆಂಡತಿ ಅಥವಾ ಗಂಡ ಜೀವನ ಸಂಗಾತಿಯ ಹೆಸರನ್ನು ಸೇರಿಸಿಕೊಂಡರೆ ಅದು ಕೇವಲ ಮೂಢ- ರೂಢಿಗತ ಪದ್ಧತಿಯಾಗದೇ ದಂಪತಿಗಳ ಅನ್ಯೋನ್ಯತೆ- ಅಭಿನ್ನತೆಯನ್ನು ತೋರುವ ರೀತಿಯಾದರೆ ಸ್ವಾಗತಾರ್ಹವೇ ಅಲ್ಲವೇ? ಪುರಾಣ ಕಾಲದಲ್ಲಿ ಗಿರಿಜಾ ಶಂಕರನೆಂದರೆ ಶಂಕರನಾದರೆ, ಈ ಕಾಲದಲ್ಲಿ ಗಿರಿಜಾ ಶಂಕರ ಎಂದರೆ ಅದು ಗಿರಿಜೆಯನ್ನು ಸೂಚಿಸುತ್ತದೆ ಎನ್ನುವುದೇ ವ್ಯತ್ಯಾಸ!

ಇತ್ತೀಚೆಗೆ ಮಕ್ಕಳ ಹೆಸರಿನ ಮುಂದೆ ತಂದೆ-ತಾಯಿ ಇಬ್ಬರ ಹೆಸರಿನ (ಮನೆತನದ ಹೆಸರೂ ಆಗಬಹುದು) ಅಕ್ಷರಗಳನ್ನೂ (ಇನಿಷಿಯಲ್ಸ್)  ಕೊಡುವ ರೀತಿ ಕೂಡ ಚಾಲ್ತಿಯಲ್ಲಿದೆ. ಉದಾಹರಣೆಗೆ ತಾಯಿ ಪಾರ್ವತಿ, ತಂದೆ ಶಂಕರ, ಮಗ ಸ್ಕಂದನಾದರೆ ಪಿ.ಎಸ್.ಸ್ಕಂದ ಎಂದು ಹೇಳಿಕೊಳ್ಳುತ್ತಾರೆ. ಸಮಾನತೆಯ ಹಾದಿಯಲ್ಲಿ ಇದೂ ಒಂದು ಹೆಜ್ಜೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT