ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದ ಆಕರ ಕೋಶ: ಜರ್ಮನಿಯ ದಾನಿ ಭೇಟಿಯಾದ ಬಾಲಕ

Published 10 ಮೇ 2024, 15:47 IST
Last Updated 10 ಮೇ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ರಕ್ತ ಸಂಬಂಧಿ ಸಮಸ್ಯೆಯಾದ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ಇಲ್ಲಿನ 17 ವರ್ಷದ ಬಾಲಕನಿಗೆ ಜರ್ಮನಿಯ 29 ವರ್ಷದ ಯುವಕ ರಕ್ತದ ಆಕರ ಕೋಶ ದಾನ ಮಾಡುವ ಮೂಲಕ ಚೇತರಿಕೆಗೆ ನೆರವಾಗಿದ್ದಾರೆ. ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ನೆರವಿನಿಂದ ಈ ಇಬ್ಬರೂ ಏಳು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. 

ಬಾಲಕ ಚಿರಾಗ್‌ಗೆ ರಕ್ತದ ಆಕರ ಕೋಶ ಒದಗಿಸಲು ದಾನಿಗಾಗಿ ಕುಟುಂಬದ ಸದಸ್ಯರು ಹತ್ತು ವರ್ಷಗಳಿಂದ ಹುಡುಕಾಡಿದ್ದರು. ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ನೋಂದಣಿಯ ಆಧಾರದಲ್ಲಿ ಜರ್ಮನಿಯ ರೋಮನ್ ಸಿಮ್ನಿಝ್ಕಿ ಎಂಬುವರನ್ನು ಸಂಪರ್ಕಿಸಿ, ರಕ್ತದ ಆಕರ ಕೋಶ (ಬ್ಲಡ್‌ ಸ್ಟೆಮ್‌ ಸೆಲ್‌) ಒದಗಿಸಿದೆ. ಇದರಿಂದಾಗಿ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ವಿಶ್ವ ಥಲಸ್ಸೇಮಿಯಾ ದಿನದ ಪ್ರಯುಕ್ತ ಫೌಂಡೇಷನ್ ದಾನಿಯ ಭೇಟಿಗೆ ಕಲ್ಪಿಸಿದ್ದ ವೇದಿಕೆಯಲ್ಲಿ ಬಾಲಕ ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾನೆ.

‘ರಕ್ತದ ಆಕರ ಕೋಶ ದಾನ ಮಾಡಿದ ವ್ಯಕ್ತಿಯನ್ನು ಭೇಟಿ ಮಾಡಿದ್ದು ಅದ್ಭುತ ಅನುಭವ. ಅವರು ನನಗೆ ಕೇವಲ ರಕ್ತದ ಆಕರ ಕೋಶ ದಾನ ಮಾಡದೆ, ನನಗೆ ಮರುಜೀವ ನೀಡಿದ್ದಾರೆ’ ಎಂದು ಬಾಲಕ ಚಿರಾಗ್ ತಿಳಿಸಿದ್ದಾನೆ. 

‘ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನಿಗೆ ನೆರವಾಗಿ, ಆತನ ಚೇತರಿಕೆಗೆ ಕಾರಣವಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಇದಕ್ಕಿಂತ ಖಷಿಯ ಸಂಗತಿ ಬೇರೊಂದಿಲ್ಲ’ ಎಂದು ದಾನಿ ರೋಮನ್ ಸಿಮ್ನಿಝ್ಕಿ ಸಂತಸ ವ್ಯಕ್ತಪಡಿಸಿದ್ದಾರೆ. 

ಬಾಲಕನಿಗೆ ಚಿಕಿತ್ಸೆ ನೀಡಿದ ಅಪೋಲೊ ಆಸ್ಪತ್ರೆಯ ಡಾ.ರೇವತಿ ರಾಜ್, ‘ಥಲಸ್ಸೇಮಿಯಾ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸುತ್ತಲೇ ಈ ಸಮಸ್ಯೆ ಹೊಂದುತ್ತಿದ್ದಾರೆ. ಈ ಸಮಸ್ಯೆ ಇರುವವರಿಗೆ ನಿಯಮಿತವಾಗಿ ರಕ್ತ ನೀಡುತ್ತಾ ಇರಬೇಕಾಗುತ್ತದೆ. ರಕ್ತದ ಆಕರ ಕೋಶ ಕಸಿಯೇ ಇದಕ್ಕೆ ಪರಿಹಾರ. ಆದ್ದರಿಂದ ಜನರು ರಕ್ತದ ಆಕರ ಕೋಶ ದಾನಕ್ಕೆ ಮುಂದಾಗಬೇಕು’ ಎಂದು ಹೇಳಿದ್ದಾರೆ. 

ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍, ‘ರಕ್ತದ ಕ್ಯಾನ್ಸರ್‌ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರಕೋಶ ದಾನ ಮಾಡುವ ಮೂಲಕ ರೋಗಿಗಳ ಚೇತರಿಕೆಗೆ ನೆರವಾಗಬೇಕು. ದಾನಿಗಳಿಂದ ಪಡೆದ ರಕ್ತದ ಆಕರ ಕೋಶಗಳನ್ನು ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ರಕ್ತದ ಆಕರ ಕೋಶ ಅಗತ್ಯವಿರುವ ರೋಗಿಗಳಿಗೆ ಕುಟುಂಬದಲ್ಲಿ ಹೊಂದಾಣಿಕೆಯಾಗಬಲ್ಲ ದಾನಿಗಳು ಸಿಗುವುದು ಶೇ 30 ರಷ್ಟು ಮಾತ್ರ. ಉಳಿದವರು ಸಂಬಂಧಿಗಳಲ್ಲದ ದಾನಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT