ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಯಲ್ಲಿ ಸ್ಪರ್ಧೆ ಉಂಟಾಗಲಿ: ಡಾ.ಸಿ.ಎನ್. ಮಂಜುನಾಥ್

ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅಭಿಮತ
Published 10 ಮೇ 2024, 15:42 IST
Last Updated 10 ಮೇ 2024, 15:42 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾಜ ಸೇವೆ ಹೊರತುಪಡಿಸಿ ಎಲ್ಲ ವಲಯಗಳಲ್ಲಿಯೂ ಸ್ಪರ್ಧೆಯಿದೆ. ಈ ವಲಯದಲ್ಲಿಯೂ ಸ್ಪರ್ಧೆ ಉಂಟಾಗಬೇಕಾದರೆ ದಾನಿಗಳನ್ನು ಸಮಾಜದಲ್ಲಿ ಗುರುತಿಸುವ ಕೆಲಸವಾಗಬೇಕು’ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. 

ರೋಟರಿ ಬೆಂಗಳೂರು ಉದ್ಯೋಗ್ ಸಹಯೋಗದಲ್ಲಿ ರವಿ ಕಿರ್ಲೋಸ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ ಡಯಾಲಿಸಿಸ್ ಘಟಕಕ್ಕೆ ಶುಕ್ರವಾರ ಚಾಲನೆ ನೀಡಿ, ಮಾತನಾಡಿದರು. 

‘ದಾನಿಗಳ ನೆರವಿನಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬಡ ಕುಟುಂಬಗಳ ರೋಗಿಗಳಿಗೂ ಸಂಕೀರ್ಣ ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಾಯಿತು. ಶೇ 30ರಷ್ಟು ಆರೋಗ್ಯ ಸೌಲಭ್ಯ ಮಾತ್ರ ಸರ್ಕಾರಿ ವ್ಯವಸ್ಥೆಯಡಿ ಸಿಗುತ್ತಿದೆ. ಇನ್ನುಳಿದ ಶೇ 70 ರಷ್ಟು ಆರೋಗ್ಯ ಸೌಲಭ್ಯವನ್ನು ಖಾಸಗಿ ವಲಯ ಒದಗಿಸುತ್ತಿದೆ. ಆದ್ದರಿಂದ ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯ ದೊರೆಯುವಂತಾಗಲು ದಾನಿಗಳ ನೆರವು ಅತ್ಯಗತ್ಯ’ ಎಂದು ತಿಳಿಸಿದರು. 

‘ದತ್ತಿ ದಾನಿಗಳ ನೆರವಿನಿಂದ ನಡೆಯುತ್ತಿರುವ ಕೆಲ ಸಂಸ್ಥೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸವಾಲಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯಕೀಯ ಸೇವೆಗೆ ಆದ್ಯತೆ ನೀಡಬೇಕು. ಕಟ್ಟಡಗಳು ಮತ್ತು ವೈದ್ಯಕೀಯ ಉಪಕರಣಗಳಿಂದ ಮಾತ್ರ ಗುಣಮಟ್ಟದ ಸೇವೆ ಸಾಧ್ಯವಿಲ್ಲ. ತಂತ್ರಜ್ಞರು ಸೇರಿ ಅಗತ್ಯ ಮಾನವ ಸಂಪನ್ಮೂಲವೂ ಮುಖ್ಯವಾಗುತ್ತದೆ’ ಎಂದು ಹೇಳಿದರು. 

ರೋಟರಿ ಬೆಂಗಳೂರು ಉದ್ಯೋಗ್‌ನ ಅಧ್ಯಕ್ಷ ಪಂಚನಾಥನ್ ಎಸ್., ‘ಈ ಡಯಾಲಿಸಿಸ್ ಘಟಕವು ಪೀಣ್ಯ ಕೈಗಾರಿಕೆ ವಲಯ, ದಾಸರಹಳ್ಳಿ ಹಾಗೂ ಸುತ್ತಮುತ್ತಲಿನ ಬಡ ಮತ್ತು ಕೆಳ ಮಧ್ಯಮ ವರ್ಗದ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಒದಗಿಸಲಿದೆ’ ಎಂದು ತಿಳಿಸಿದರು.  

ಘಟಕವು ಐದು ಡಯಾಲಿಸಿಸ್ ಯಂತ್ರ, ಒಂದು ಎಕ್ಸ್–ರೇ ಯಂತ್ರ ಮತ್ತು ವೆಂಟಿಲೇಟರ್ ಒಳಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT