ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ | ಬಿರು ಬಿಸಿಲು: ಕುಡಿಯುವ ನೀರಿಗೆ ಹಾಹಾಕಾರ

Published 7 ಮೇ 2024, 4:55 IST
Last Updated 7 ಮೇ 2024, 4:55 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಜೀವನದಿ ಹೇಮಾವತಿಯ ಹರಿವು ಕುಸಿದಿದ್ದು, ವಿತರಣಾ ನಾಲೆಗಳಲ್ಲಿ ನೀರು ಹರಿಯದೆ ಕೆರೆ- ಕಟ್ಟೆಗಳಲ್ಲಿ ನೀರು ತುಂಬಿಲ್ಲ. ಇದರಿಂದ, ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಂಕಷ್ಟ ಪರಿಹರಿಸಲು ಸ್ಥಳೀಯ ಆಡಳಿತವು ಹೆಣಗಾಡುತ್ತಿದೆ.

ಅಂತರ್ಜಲ ಮಟ್ಟ ಕುಸಿದಿದ್ದು, ಏಪ್ರಿಲ್ ಮದ್ಯ ಭಾಗದವರೆಗೂ ಕುಡಿಯುವ ನೀರು ಪೂರೈಸಿಕೊಂಡು ಬಂದ ಬಹುತೇಕ ಗ್ರಾಮ ಪಂಚಾಯಿತಿಗಳು ಈಗ ವಾರಕ್ಕೆರಡು ಬಾರಿ ಮಾತ್ರ ನೀರು ಪೂರೈಸುವ ಸ್ಥಿತಿ ತಲುಪಿವೆ. ಸತತ ಸುಡುವ ಬಿರು ಬಿಸಿಲು ಮತ್ತು ಮಳೆ ಬಾರದಿರುವದೇ ಕಾರಣವಾಗಿದೆ.

ಹೇಮಾವತಿ ನದಿ ಅಂಚಿನ ಅಕ್ಕಿಹೆಬ್ಬಾಳು, ಕಸಬಾ ಮತ್ತು ಕಿಕ್ಕೇರಿ ಹೋಬಳಿಯ ಕೆಲವು ಭಾಗ ಹೇಮಾವತಿ ನೀರು ಅವಲಂಬಿಸಿದ್ದರೆ, ಉಳಿದಂತೆ ಕೆಲವು ಪ್ರದೇಶಗಳು ಹೇಮಾವತಿ ಜಲಾಶಯದ ಎಡದಂಡೆ ನಾಲೆಯಿಂದಾಗಿ ಅರೆ ನೀರಾವರಿಗೆ ಒಳಪಟ್ಟಿವೆ. ಸಂತೇಬಾಚಹಳ್ಳಿ, ಶೀಳನೆರೆ ಮತ್ತು ಬೂಕನಕೆರೆ ಹೋಬಳಿಗಳು ಸಂಪೂರ್ಣ ಮಳೆಯಾಶ್ರಿತವಾಗಿವೆ. ಹೇಮೆಯ ನೀರಿನಿಂದ ತಾಲ್ಲೂಕಿನ ಕೆರೆಕಟ್ಟೆಗಳನ್ನು ತುಂಬಿಸುತ್ತಿದ್ದ ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿರಲಿಲ್ಲ. ಆದರೆ, ಪ್ರಸಕ್ತ ಸಾಲಿನಲ್ಲಿ ಹೇಮೆಯ ನೀರು ತಾಲ್ಲೂಕಿನ ಕೆರೆ-ಕಟ್ಟೆಗಳಿಗೆ ಹರಿಯಲಿಲ್ಲ. ಇದರಿಂದ, ಅಂತರ್ಜಲ ಮಟ್ಟ ಕುಸಿದು ಗ್ರಾಮಿಣ ಪ್ರದೇಶದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲ ಸಂಕಷ್ಟಕ್ಕೆ ಸಿಲುಕಿದೆ.

‘ರಾಜ್ಯ ಸರ್ಕಾರ ಒಂದು ಟ್ಯಾಂಕರ್ ನೀರು ಪೂರೈಕೆಗೆ ₹800- ₹850 ನಿಗದಿಪಡಿಸಿದೆ. ಸಮರ್ಪಕವಾಗಿ ಟ್ಯಾಂಕರ್ ಪೂರೈಕೆ ಆಗುತ್ತಿಲ್ಲ. ಈಗ  ಪೂರೈಕೆ ಮಾಡುತ್ತಿರುವ ನೀರು ಜನರಿಗೇ ಸಾಕಾಗುತ್ತಿಲ್ಲ. ಹೀಗಾಗಿ ರೈತರ ಜಾನುವಾರುಗಳು ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿವೆ. ಜನರ ಜೊತೆಗೆ ಜಾನುವಾರುಗಳ ಕುಡಿಯುವ ನೀರಿಗೂ ರಾಜ್ಯ ಸರ್ಕಾರ ಕ್ರಮವಹಿಸಬೇಕು’ ಎಂದು ರೈತಸಂಘದ ತಾಲ್ಲೂಕು ಅಧ್ಯಕ್ಷ ಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದರು.

ಸೂಕ್ತ ವ್ಯವಸ್ಥೆ: ತಾಲ್ಲೂಕಿನಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಪೂರೈಕೆ, ಹೊಸತಾಗಿ ಬೋರ್‌ವೆಲ್ ಕೊರೆಸಲು ಸೂಚಿಸಲಾಗಿದೆ. ನೀರು ಪೂರೈಸಲು ಹಣಕಾಸಿನ ಕೊರತೆ ಇಲ್ಲ. ಆದ್ದರಿಂದ ತಾಲ್ಲೂಕಿನ ಜನತೆಗೆ ತೊಂದರೆಯಾಗದಂತೆ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತಿದ್ದೇನೆ’ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಕೆಲವು ಗ್ರಾಮ ಪಂಚಾಯಿತಿಗಳ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದೆ. ಇಂತಹ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು, ಅಗತ್ಯವಿದ್ದರೆ ಕೊಳವೆ ಬಾವಿ ಕೊರೆಸಲು ಪಿಡಿಒಗಳಿಗೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣ ಅಧಿಕಾರಿ ಸತೀಶ್ ತಿಳಿಸಿದರು.

14 ಪಂಚಾಯಿತಿಗಳಲ್ಲಿ ಸಮಸ್ಯೆ: ತಾಲ್ಲೂಕಿನಲ್ಲಿ 34 ಗ್ರಾಮ ಪಂಚಾಯತಿಗಳಿದ್ದು, ಸುಮಾರು 14 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.

ತಾಲ್ಲೂಕಿನ ನಾಡಬೋಗನಹಳ್ಳಿ, ಮಾಂಡಲೀಕನಹಳ್ಳಿ, ದೇವರಹಳ್ಳಿ, ಜಕ್ಕನಹಳ್ಳಿ, ಬೋಳಮಾರನಹಳ್ಳಿ, ಚೀಕನಹಳ್ಳಿ ಕೊಪ್ಪಲು, ವೆಂಕಟರಾಜಪುರ, ಅಂಚೆಮುದ್ದನಹಳ್ಳಿ, ಗಂಜೀಗೆರೆ, ಕರುಬರ ಬಸ್ತಿ ಮತ್ತು ರಾಜೇನಹಳ್ಳಿ, ಮಡುವಿನಕೋಡಿ, ಹೊಸಕೋಟೆ, ಬಿಲ್ಲೇನಹಳ್ಳಿ, ಗೊರವಿ ಮತ್ತು ದೊಡ್ಡಹಾರನಹಳ್ಳಿ, ಚೌಡೇನಹಳ್ಳಿ, ಶೆಟ್ಟಿಹಳ್ಳಿ, ರಾಮನಹಳ್ಳಿ ಮತ್ತು ಜಕ್ಕನಹಳ್ಳಿ, ಆಲೇನಹಳ್ಳಿ, ಬೇವಿನಹಳ್ಳಿ, ಅರಳಕುಪ್ಪೆ, ಗೊಲ್ಲರಹಳ್ಳಿ, ಕಾಳೇನಹಳ್ಳಿ, ಚಿಲ್ಲದಹಳ್ಳಿ, ಬೊಮ್ಮನಾಯಕನಹಳ್ಳಿ, ಮೆಣಸ, ಗುಡ್ಡೇನಹಳ್ಳಿ ಮತ್ತು ಬೊಪ್ಪನಹಳ್ಳಿ, ಬಲ್ಲೇನಹಳ್ಳಿ

ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಲ್ಲದಹಳ್ಳಿಯಲ್ಲಿ ಟ್ಯಾಂಕರ್ ನೀರಿಗೆ ಗ್ರಾಮಸ್ಥರು ಮುಗಿಬಿದ್ದಿರುವುದು
ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಲ್ಲದಹಳ್ಳಿಯಲ್ಲಿ ಟ್ಯಾಂಕರ್ ನೀರಿಗೆ ಗ್ರಾಮಸ್ಥರು ಮುಗಿಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT