ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಶಕ್ತಿ ದೇವಸ್ಥಾನದ ರಾಜಗೋಪುರ ಪ್ರತಿಷ್ಠಾಪನೆ

Published 4 ಮೇ 2024, 5:50 IST
Last Updated 4 ಮೇ 2024, 5:50 IST
ಅಕ್ಷರ ಗಾತ್ರ

ರಾಮನಗರ: ನಗರದ ರಾಮದೇವರ ಬೆಟ್ಟದ ರಸ್ತೆಯ ಕೊಂಕಾಣಿದೊಡ್ಡಿಯಲ್ಲಿರುವ ಗ್ರಾಮದೇವತೆ ಆದಿಶಕ್ತಿ ಅಮ್ಮನವರ ದೇವಾಲಯದ ನೂತನ ರಾಜಗೋಪುರ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಗ್ರಾಮದೇವತೆ ಆದಿಶಕ್ತಿ ಸೇವಾ ಸಂಘವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಶುಭ ಮುಹೂರ್ತದಂದ ಬೆಳಿಗ್ಗೆ 5.30ಕ್ಕೆ ಅಮ್ಮನವರ ಕಳಸ ಪ್ರತಿಷ್ಠಾಪನೆ, ನಂತರ ಪ್ರತಿಷ್ಠಾಪನಾ ಹೋಮ, ಪೂರ್ಣಾಹುತಿ ಹಾಗೂ ಪೂರ್ಣ ಕುಂಭಾಭಿಷೇಕ ಕಾರ್ಯಕ್ರಮಗಳು ಬ8.30ರವರೆಗೆ ನಡೆದವು. 10 ಗಂಟೆಗೆ ಸ್ವಸ್ತಿವಾಚನ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ನೆರವೇರಿತು. ಅಮ್ಮನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಬೆಳಿಗ್ಗೆ ಧಾರ್ಮಿಕ ವಿಧಿ –ವಿಧಾನಗಳು ಮುಗಿದ ಬಳಿಕ ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 7 ಗಂಟೆಗೆ ಕೊಂಕಾಣಿದೊಡ್ಡಿಯ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಮೂರ್ತಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಡೋಲು, ನಗಾರಿ, ತಮಟೆ ಹಾಗೂ ಜಾನಪದ ಕಲಾವಿದರು ಮೆರವಣಿಗೆಗೆ ಮೆರಗು ತಂದರು. ನಗರ ಹಾಗೂ ಗ್ರಾಮೀಣ ಭಾಗದದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ರಾಜಗೋಪುರ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದ ಹಿಂದಿನ ದಿನವಾದ ಗುರುವಾರ ಸಂಜೆ 5.20ಕ್ಕೆ ರಾಜಗೋಪುರ ಕಳಸದ ಉತ್ಸವ ಜರುಗಿತು. ಮಹಿಳೆಯರು ಗಂಗಾಪೂಜೆ ಮಾಡಿದರು. ನಂತರ ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಸ್ಥಾಪನೆ ನಡೆಯಿತು. ನಂತರ ವಿವಿಧ ಪೂಜೆಗಳೊಂದಿಗೆ ಹೋಮ ಮಾಡಲಾಯಿತು. ಈ ವೇಳೆ ಜನಪ್ರಿಯ ಕಲಾವಿದ ಡೊಳ್ಳು ಚಂದ್ರ ಅವರ ತಂಡವು ಪೂಜಾ ಕುಣಿತ, ಡೊಳ್ಳು ಕುಣಿತ ಹಾಗೂ ವೀರಗಾಸೆ ಕುಣಿತ ಪ್ರದರ್ಶಿಸಿತು.

ಸೇವಾ ಸಂಘದ ಅಧ್ಯಕ್ಷ ಪಿ. ಸಿದ್ದರಾಜು, ರವಿಕುಮಾರ್, ಜಯರಾಜು, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT