ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ 'ರಾಜಕುಮಾರ' ಎಂದ ಮೋದಿಗೆ 'ಚಕ್ರವರ್ತಿ' ಎಂದು ಕಾಲೆಳೆದ ಪ್ರಿಯಾಂಕಾ ಗಾಂಧಿ

Published 4 ಮೇ 2024, 11:29 IST
Last Updated 4 ಮೇ 2024, 11:29 IST
ಅಕ್ಷರ ಗಾತ್ರ

ಲಖಾನಿ (ಗುಜರಾತ್): ರಾಹುಲ್ ಗಾಂಧಿ ಅವರನ್ನು ‘ಶಹಜಾದ’ ಎಂದದ್ದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ಮೋದಿ ಅವರು ಜನರಿಂದ ದೂರವಾಗಿ ಅರಮನೆಯಲ್ಲಿ ವಾಸಿಸುವ ‘ಶಹನ್‌ಶಾ’ (ರಾಜರ ರಾಜ) ಎಂದು ಟೀಕಿಸಿದ್ದಾರೆ.

ಬನಾಸ್‌ಕಾಂಠಾ ಲೋಕಸಭಾ ಕ್ಷೇತ್ರದ ಲಖಾನಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದ ಅವರು, ‘ಪ್ರಧಾನಿ ನನ್ನ ಸಹೋದರನನ್ನು ‘ಶಹಜಾದ’ ಎಂದು ಕರೆಯುತ್ತಾರೆ. ಈ ಶಹಜಾದ ನಿಮ್ಮ ಜನರ ಸಮಸ್ಯೆ ಕೇಳಲು, ನನ್ನ ಸಹೋದರ ಸಹೋದರಿಯರು, ರೈತರು, ಕಾರ್ಮಿಕರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂದು ಕೇಳಿ ತಿಳಿಯಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4 ಸಾವಿರ ಕಿ.ಮೀ. ಯಾತ್ರೆ ಕೈಗೊಂಡರು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.

‘ಇನ್ನೊಂದು ಕಡೆ, ನಿಮ್ಮ ಶಹನ್‌ಶಾ ನರೇಂದ್ರ ಮೋದಿ ಇದ್ದಾರೆ. ಅವರು ಅರಮನೆಯಲ್ಲಿ ವಾಸ ಮಾಡುತ್ತಾರೆ. ನೀವು ಎಂದಾದರೂ ಅವರನ್ನು ಟಿ.ವಿಯಲ್ಲಿ ನೋಡಿದ್ದೀರಾ? ದೂಳಿನ ಸಣ್ಣ ಕಲೆಯೂ ಇಲ್ಲದ ಶುಭ್ರ ಬಟ್ಟೆ, ನೀಟಾದ ಕೂದಲು. ಅವರು ಎಂದಾದರೂ ನಿಮ್ಮ ಶ್ರಮದ ದುಡಿಮೆ, ಬೇಸಾಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ? ಹಣದುಬ್ಬರದಿಂದ ಹೆಚ್ಚಾಗಿರುವ ನಿಮ್ಮ ಸಮಸ್ಯೆಗಳನ್ನು ಅವರು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ?’ ಎಂದರು.

ಮೋದಿ ಗುಜರಾತ್‌ನಿಂದ ಸ್ಪರ್ಧಿಸದೆ, ವಾರಾಣಸಿಯಿಂದ ಏಕೆ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ‘ಇಲ್ಲಿನ ಜನರಿಂದ ದೂರವಾಗದೇ ಇದ್ದರೆ ಅವರೇಕೆ ಗುಜರಾತ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ’ ಎಂದು ಹೇಳಿದರು.

ಪ್ರಿಯಾಂಕಾ ಗಾಂಧಿ ಹೇಳಿದ್ದು..

* ಚುನಾವಣೆ ನಡೆಯುತ್ತಿರುವುದು ಭಾರತದಲ್ಲಿ, ಆದರೆ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿಯಿಂದ ಇಷ್ಟು ಕೀಳುಮಟ್ಟದ ಮಾತೇ?

* ಜನ ಎಚ್ಚೆತ್ತುಕೊಂಡಿದ್ದಾರೆ ಮತ್ತು ಚುನಾವಣೆಯಲ್ಲಿ ಹಿಂದೂ ಮುಸ್ಲಿಂ ವಿಚಾರ ತರಬೇಡಿ ಎನ್ನುತ್ತಿದ್ದಾರೆ. ಅದರ ಬದಲಿಗೆ ವಿದ್ಯುತ್, ನೀರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ ಎಂದು ಕೇಳುತ್ತಿರುವುದರಿಂದ ಪ್ರಧಾನಿ ಇಂಥ ಹೇಳಿಕೆ ನೀಡುತ್ತಿದ್ದಾರೆ.

* ಕಾಂಗ್ರೆಸ್ ಸರ್ಕಾರವು ರೈತರ ಅಭಿವೃದ್ಧಿಗಾಗಿ ಅಮುಲ್‌, ಬನಾಸ್ ಡೇರಿಯಂಥ ಸಹಕಾರಿ ಸಂಸ್ಥೆಗಳನ್ನು ರೂಪಿಸಿತು. ಆದರೆ, ಬಿಜೆಪಿ ಮುಖಂಡರು ಆ ವಲಯವನ್ನು ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.

* ಸಮಾನತೆಯ ತತ್ವವನ್ನು ಸಂವಿಧಾನದಲ್ಲೇ ಅಳವಡಿಸಲಾಗಿದೆ. ಆದರೆ, ಇಂದು ಸಮಾನತೆಗಾಗಿ ಹೋರಾಡುವುದು ಅಸಾಂವಿಧಾನಿಕ ಎಂದು ಪ್ರಧಾನಿಯೇ ಹೇಳುತ್ತಿದ್ದಾರೆ. ನಿಮ್ಮನ್ನು ಹೇಗೆ ದಾರಿತಪ್ಪಿಸಲಾಗಿದೆ ಎನ್ನುವುದನ್ನು ನೀವು ಅರಿಯಬೇಕಿದೆ.

* ಈಗ ದೇಶದ ಎಲ್ಲ ಆಸ್ತಿಗಳೂ ಕೋಟ್ಯಧಿಪತಿಗಳಿಗೆ ಸೇರಿವೆ. ಎಲ್ಲ ನೀತಿನಿಯಮಗಳನ್ನೂ ಅವರಿಗಾಗಿಯೇ ಮಾಡಲಾಗುತ್ತಿದೆ. ಕೋಟ್ಯಧಿಪತಿಗಳ ಯಶಸ್ಸು ಮತ್ತು ಸಮೃದ್ಧಿಗಾಗಿ ಸಾಧ್ಯವಿರುವುದನ್ನೆಲ್ಲ ಮಾಡುವುದೇ ಮೋದಿ ಅವರ ಅತಿ ದೊಡ್ಡ ನೀತಿಯಾಗಿದೆ.

ಗುಜರಾತ್‌ನಿಂದ ನರೇಂದ್ರ ಮೋದಿ ಏಕೆ ಸ್ಪರ್ಧಿಸುವುದಿಲ್ಲ...?

‘ಗುಜರಾತ್ ಮೂಲದವರೇ ಆದ ಮೋದಿ, ಗುಜರಾತ್‌ನ ಕ್ಷೇತ್ರದಿಂದ ಏಕೆ ಸ್ಪರ್ಧಿಸುತ್ತಿಲ್ಲ ಎಂಬುದನ್ನು ನೀವೆಲ್ಲರೂ ಯೋಚಿಸಬಹುದು. ಏಕೆಂದರೆ ಗುಜರಾತ್‌ ಜನರನ್ನು ಬಳಸಿಕೊಂಡ ಅವರು, ಅವರನ್ನು ಮರೆತಿದ್ದಾರೆ. ಮೋದಿ ಅವರನ್ನು ಅಧಿಕಾರದ ಅಹಂಕಾರ ಆವರಿಸಿದೆ. ಹೀಗಾಗಿ ನಿಮ್ಮನ್ನು ಅವರು ಎಂದೂ ಪರಿಗಣಿಸಿಲ್ಲ. ಹೀಗಾಗಿ ಉತ್ತರ ಪ್ರದೇಶದ ವಾರಾಣಸಿಯಿಂದ ಅವರು ಸ್ಪರ್ಧಿಸುವ ಮೂಲಕ, ಗುಜರಾತ್ ಜನರೊಂದಿಗಿನ ಸಂಪರ್ಕವನ್ನು ತುಂಡರಿಸಿಕೊಂಡಿದ್ದಾರೆ’ ಎಂದಿದ್ದಾರೆ.

‘ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಮಂಗಳಸೂತ್ರ ಕಸಿಯುವ, ಭಾರತ–ಪಾಕಿಸ್ತಾನದಂತ ಅಸಂಬದ್ಧ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಪ್ರಧಾನಿಯಾದವರು ದೇಶದ ಗೌರವವನ್ನು ಕಾಪಾಡಬೇಕು. ಇಡೀ ದೇಶದ ಪ್ರತಿನಿಧಿಯಾದ ಅವರು ಸಾಮಾನ್ಯ ಪ್ರಜ್ಞೆ ಹೊಂದಿರಬೇಕು. ಆದರೆ ಮೋದಿ ಕೇವಲ ಸುಳ್ಳುಗಳನ್ನಷ್ಟೇ ಆಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕಾಂಗ್ರೆಸ್ ಸರ್ಕಾರ ಇದ್ದಾಗ ಗುಜರಾತ್‌ನ ರೈತರ ಅನುಕೂಲಕ್ಕಾಗಿ ಸಹಕಾರ ಸಂಸ್ಥೆಗಳಾದ ಅಮೂಲ್ ಹಾಗೂ ಬನಾಸ್ ಡೈರಿ ಆರಂಭಿಸಿತು. ಆದರೆ ಇದನ್ನು ವಶಕ್ಕೆ ಪಡೆಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಸಂವಿಧಾನದಲ್ಲಿ ಸಮಾನತೆಯನ್ನು ಎತ್ತಿಹಿಡಿಯಲಾಗಿದೆ. ಆದರೆ ಸಮಾನತೆಯ ವಿಷಯ ಮಾತನಾಡಿದರೆ, ಅವರನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ. ಹೇಗೆ ಇವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದನ್ನು ಗಮನಿಸಿ’ ಎಂದಿದ್ದಾರೆ.

ಬನಸ್ಕಾಂತಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ರೇಖಾ ಚೌಧರಿ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT