ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆಗಿಂತ ಗ್ಯಾರಂಟಿಗಳ ಅಲೆ ದೊಡ್ಡದಿದೆ.. ಗಡ್ಡದೇವರಮಠ ಸಂದರ್ಶನ

ಆನಂದಸ್ವಾಮಿ ಗಡ್ಡದೇವರಮಠ ಸಂದರ್ಶನ
Published 4 ಮೇ 2024, 8:03 IST
Last Updated 4 ಮೇ 2024, 8:03 IST
ಅಕ್ಷರ ಗಾತ್ರ

l ಚುನಾವಣಾ ಪ್ರಚಾರ ಹೇಗೆ ನಡೆದಿದೆ?

ಕಾರ್ಯಕರ್ತರು, ನಾಯಕರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಜನರು ಒಲವು ಕೂಡ ಕಾಂಗ್ರೆಸ್‌ ಕಡೆಗೆ ಇದೆ. ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮನೆಮನೆಗೆ ಶಕ್ತಿ ತುಂಬುವ ಕೆಲಸ ಆಗಿದೆ. ಹಾಗಾಗಿ, ಹೋದಲ್ಲೆಲ್ಲಾ ಜನರು ಬಹಳ ವಿಶ್ವಾಸದಿಂದ ಮಾತನಾಡಿಸುತ್ತಾರೆ. ಈ ಚುನಾವಣೆಯಲ್ಲಿ ಆಶೀರ್ವದಿಸುವುದಾಗಿ ಹೇಳುತ್ತಿದ್ದಾರೆ.

l ದೇಶದಲ್ಲಿ ಮೋದಿ ಅಲೆ ಇದೆ ಅಂತ ಬಿಜೆಪಿಯವರು ಹೇಳುತ್ತಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ?

ಚುನಾವಣಾ ಕಣದಲ್ಲಿರುವ ಪ್ರತಿಯೊಬ್ಬರೂ ಒಂದೊಂದು ಪ್ರಚಾರ ತಂತ್ರ ಬಳಸುತ್ತಾರೆ. ಅವರದ್ದೇ ಆದ ರಣತಂತ್ರ ಇರುತ್ತದೆ. ಅದಕ್ಕಾಗಿ ಬಿಜೆಪಿಯವರು ಆ ರೀತಿ ಹೇಳಬಹುದು. ಆದರೆ, ಈ ಬಾರಿ ಜನರ ಒಲವು, ಅಭಿಪ್ರಾಯ ಕಾಂಗ್ರೆಸ್‌ ಮೇಲಿದೆ. ಹಳ್ಳಿಗಳಿಗೆ ಪ್ರಚಾರಕ್ಕೆ ಹೋದಾಗ ಅದೆಲ್ಲವೂ ಗೊತ್ತಾಗಿದೆ. ಕಾಂಗ್ರೆಸ್‌ ಪಕ್ಷದ ಶಾಸಕರು, ಸಚಿವರು ಮಾಡಿದ ಅಭಿವೃದ್ಧಿ ಕೆಲಸಗಳ ಜತೆಗೆ ಗ್ಯಾರಂಟಿ ಅಲೆ ದೊಡ್ಡ ಮಟ್ಟದಲ್ಲಿದೆ. ನಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಇದೆ ಎಂದು ನನಗಂತೂ ಅನ್ನಿಸಿಲ್ಲ.

l ‘ಮಹಾಲಕ್ಷ್ಮಿ’ ಬಿಜೆಪಿಗರ ನಿದ್ದೆಗೆಡಿಸಿದೆ ಅಂತ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ, ಹೌದೇ?

ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಬಿಜೆಪಿಗರು ಹಿಂದೆ ಕೂಡ ಬಿಟ್ಟಿ ಭಾಗ್ಯ, ಅದು ಇದು ಅಂತೆಲ್ಲಾ ಜರಿದರು. ಆದರೆ, ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಆರ್ಥಿಕ ಶಕ್ತಿ ಬಂದಿದೆ. ಹಾವೇರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ವಹಿವಾಟು ಶೇ 25ರಷ್ಟು ಹಿಗ್ಗಿದೆ. ಸಣ್ಣ ಸಣ್ಣ ಉದ್ಯೋಗಗಳು ಸೃಷ್ಟಿಯಾಗಿವೆ. ಇದಕ್ಕೆಲ್ಲಾ ಗೃಹಲಕ್ಷ್ಮಿ ಯೋಜನೆಯೇ ಕಾರಣ. ಮಹಿಳೆಯರು ಆರ್ಥಿಕವಾಗಿ ಸಬಲರಾಗದ ಹೊರತು ಮಾರುಕಟ್ಟೆಯಲ್ಲಿ ಕ್ರಾಂತಿ ಅಸಾಧ್ಯ. ಅದಕ್ಕಾಗಿಯೇ, ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಹೆಣ್ಣುಮಕ್ಕಳಿಗೆ ‘ಮಹಾಲಕ್ಷ್ಮಿ’ ಯೋಜನೆ ಪ್ರಕಟಿಸಿದ್ದು, ಇದು ಮಹಿಳೆಯರಿಗೆ ಮತ್ತಷ್ಟು ಬಲ ತುಂಬಲಿದೆ.

l ಜನರು ನಿಮಗೆ ಯಾಕೆ ಮತ ಹಾಕಬೇಕು?

ನನಗೆ ಅನ್ನುವುದಕ್ಕಿಂತ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾನು ಜನರ ಮುಂದೆ ಬಂದಿರುವೆ. ಕಾಂಗ್ರೆಸ್‌ ಕೇವಲ ಆಶ್ವಾಸನೆ ನೀಡುವ ಸರ್ಕಾರ ಅಲ್ಲ. ನುಡಿದಂತೆ ನಡೆಯುತ್ತದೆ ಎಂಬ ನಂಬಿಕೆ ಈಗ ಜನರಿಗೆ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದರ ಜತೆಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡಲಾಗುತ್ತದೆ. ಇದೆಲ್ಲದರ ಜತೆಗೆ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಅನೇಕ ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಅಂಶಗಳೆಲ್ಲವೂ ನನಗೆ ಶ್ರೀರಕ್ಷೆಯಾಗಿ ನಿಲ್ಲಲಿವೆ. ಜನಸೇವೆ ಮಾಡುವ ಇಚ್ಛೆ ಇರುವುದರಿಂದ ಜನರ ಮತ ಅವಶ್ಯಕವಾಗಿ ಬೇಕಿದೆ.

l ಚುನಾವಣೆಯಲ್ಲಿ ನೀವು ಎದುರಿಸುತ್ತಿರುವ ಸವಾಲುಗಳೇನು?

ಚುನಾವಣೆ ಅಂದ ಮೇಲೆ ಸವಾಲುಗಳು ಸಹಜ. ಆದರೆ, ಅವೆಲ್ಲವನ್ನೂ ಮೀರಿ ನಿಲ್ಲಲು ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರ ಬೆಂಬಲ ಇದೆ. ಹಾಗಾಗಿ, ಈ ಚುನಾವಣೆಯಲ್ಲಿ ಯಾವುದೊಂದು ದೊಡ್ಡ ಸವಾಲು ಅಂತ ಅನಿಸಿಲ್ಲ.

l ಕ್ಷೇತ್ರದ ಅಭಿವೃದ್ಧಿ ಬಗ್ಗೆ ನೀವು ಇಟ್ಟುಕೊಂಡಿರುವ ಕನಸು, ನಿರೀಕ್ಷೆಗಳೇನು?

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಅನೇಕ ಕೆಲಸಗಳು ಆಗಬೇಕಿವೆ. ಈ ಕ್ಷೇತ್ರ ರಾಜ್ಯಕ್ಕೆ ದೊಡ್ಡ ಸ್ಥಾನಮಾನ ಕೊಟ್ಟಿದೆ. ಆದರೂ ಮತದಾರರ ಸ್ಪಂದನೆ ಆಗಿಲ್ಲ. ಕೋಳಿವಾಡ ಅವರು ನಿರುದ್ಯೋಗ ಮುಕ್ತ ರಾಣೆಬೆನ್ನೂರು ಸಂಕಲ್ಪ ಮಾಡಿದ್ದಾರೆ. ಅದಕ್ಕೆ ಕೈಜೋಡಿಸುವೆ. ಹಿರೇಕೆರೂರು ತಾಲ್ಲೂಕಿಗೆ ಸಮಗ್ರ ನೀರಾವರಿ ಯೋಜನೆ ಮಾಡುವ ಕನಸಿದೆ. ಬ್ಯಾಡಗಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ವಿಸ್ತರಣೆ, ಮೇಲ್ದರ್ಜೆಗೇರಿಸುವುದು, ಮಾನೆ ಅವರು ಸಕ್ಕರೆ ಕಾರ್ಖಾನೆ ಸ್ಥಾಪನೆ ಸಲಹೆ ನೀಡಿದ್ದಾರೆ. ಹಾವೇರಿಗೆ ಕುಡಿಯುವ ನೀರಿನ ಸೌಲಭ್ಯ, ಉದ್ಯೋಗ ಸೃಷ್ಟಿ, ರಿಂಗ್‌ ರೋಡ್‌, ಶಿರಹಟ್ಟಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌, ರೋಣದಲ್ಲಿ ಮತ್ತಷ್ಟು ಕೆರೆಗಳ ನಿರ್ಮಾಣಕ್ಕೆ ಕೈಜೋಡಿಸುವುದು ಹೀಗೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವ ಕನಸಿದೆ.

l ಚುನಾವಣೆಯಲ್ಲಿ ಗೆದ್ದರೆ, ನಿಮ್ಮ ಮೊದಲ ಆದ್ಯತೆ ಏನಿರಲಿದೆ?

ವಾಡಿ–ಗದಗ, ಮುಂಡರಗಿ– ಹರಪನಹಳ್ಳಿ ರೈಲ್ವೆ ಟ್ರ್ಯಾಕ್‌ ನಿರ್ಮಾಣ. ಗದುಗಿನಿಂದ ಯಲವಿಗಿ ಮಾರ್ಗವಾಗಿ ಬೆಂಗಳೂರು ತಲುಪುವ ರೈಲು ಮಾರ್ಗ ಯೋಜನೆ ನನೆಗುದಿಗೆ ಬಿದ್ದಿದ್ದು, ಅದನ್ನು ಪೂರ್ಣಗೊಳಿಸಲು ಶ್ರಮಿಸುವೆ. ರಾಣೆಬೆನ್ನೂರು– ಶಿವಮೊಗ್ಗ ರೈಲು ಮಾರ್ಗ ಸೇರಿದಂತೆ ಒಟ್ಟಾರೆಯಾಗಿದೆ ಸಮಗ್ರ ರೈಲ್ವೆ ಸಂಪರ್ಕ ಹೊಂದಿಸುವ ಕೆಲಸಗಳಿಗೆ ಮೊದಲ ಆದ್ಯತೆ ನೀಡುವೆ. ಅದೇರೀತಿ, ಮಹದಾಯಿ ಅನುಷ್ಟಾನಕ್ಕಾಗಿ ಸಂಸತ್‌ನಲ್ಲಿ ಗಟ್ಟಿ ಧ್ವನಿ ಎತ್ತುವೆ.

l ನಿಮ್ಮ ಎದುರು ಹಿರಿಯರು, ರಾಜಕಾರಣದಲ್ಲಿ ಅನುಭವ ಉಳ್ಳವರು ಸ್ಪರ್ಧಿಸಿದ್ದಾರೆ. ಅವರ ಬಗ್ಗೆ ಏನು ಹೇಳುವಿರಿ?

ನಾನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವೆ. ಎದುರಾಳಿ ಅಭ್ಯರ್ಥಿಯನ್ನು ಹಗುರವಾಗಿ ತೆಗೆದುಕೊಂಡಿಲ್ಲ. ಇಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯೇ ಪ್ರತಿಸ್ಪರ್ಧಿ. ಅದಕ್ಕಿಂತ ಹೆಚ್ಚೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT