ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜ್ಜರ್ ಹತ್ಯೆ ಪ್ರಕರಣ: ಆರೋಪಿಗಳ ಛಾಯಾಚಿತ್ರ ಬಿಡುಗಡೆ ಮಾಡಿದ ಕೆನಡಾ ಪೊಲೀಸರು

Published 4 ಮೇ 2024, 4:29 IST
Last Updated 4 ಮೇ 2024, 4:29 IST
ಅಕ್ಷರ ಗಾತ್ರ

ಒಟ್ಟಾವಾ: ಖಾಲಿಸ್ತಾನಿ ಪ್ರತ್ಯೇಕವಾದಿ ನಾಯಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತ ಮೂಲದ ಮೂವರು ಆರೋಪಿಗಳ ಛಾಯಾಚಿತ್ರವನ್ನು ಕೆನಡಾ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.

ಈ ಕುರಿತಂತೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (ಆರ್‌ಸಿಎಂಪಿ) ಹೇಳಿಕೆ ಬಿಡುಗಡೆ ಮಾಡಿದ್ದು, ‘ಆಲ್ಬರ್ಟಾದ ಎಡ್ಮಂಟನ್ ನಗರದಲ್ಲಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಕರಣ್‌ಪ್ರೀತ್ ಸಿಂಗ್(28), ಕಮಲ್‌ಪ್ರೀತ್ ಸಿಂಗ್(22) ಮತ್ತು ಕರಣ್ ಬ್ರಾರ್(22) ಎಂದು ಗುರುತಿಸಲಾಗಿದೆ’ ಎಂದು ತಿಳಿಸಿದೆ.

ಮೂವರ ಛಾಯಾಚಿತ್ರದ ಜೊತೆಗೆ ಕೊಲೆ ಮಾಡುವ ಸಮಯದಲ್ಲಿ ಆರೋಪಿಗಳು ಬಳಸಿದ್ದಾರೆಂದು ಶಂಕಿಸಲಾದ ಕಾರಿನ ಛಾಯಾಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಸಿಎಂಪಿ ಸಹಾಯಕ ಪೊಲೀಸ್‌ ಆಯುಕ್ತ ಡೇವಿಡ್ ಟೆಬೋಲ್, ‘ನಿಜ್ಜರ್‌ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರು ಶಂಕಿತರನ್ನು ಬಂಧಿಸಲಾಗಿದೆ. ಸಾಕ್ಷ್ಯದ ಸ್ವರೂಪದ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನಿಜ್ಜರ್ ಹತ್ಯೆಯ ಉದ್ದೇಶದ ಹಿಂದಿನ ಕಾರಣವನ್ನು ಹೇಳಲು ಇದೀಗ ಅಸಾಧ್ಯ’ ಎಂದು ಹೇಳಿದರು.

ಮೂವರ ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.

ಕಳೆದ ವರ್ಷ ಜೂನ್ 18ರಂದು ಸುರ್ರೆ ಬಿ.ಸಿಯ ಗುರುದ್ವಾರದ ಬಳಿ ನಿಜ್ಜರ್‌ನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕೊಲೆಯಲ್ಲಿ ಭಾರತ ಸರ್ಕಾರದ ಹಸ್ತಕ್ಷೇಪ ಇದೆ ಎಂದು ಕೆನಡಾ ಆರೋಪಿಸಿತ್ತು. ಆದರೆ ಭಾರತ ಈ ಆರೋಪವನ್ನು ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT