ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಬಹಿರಂಗಕ್ಕೆ ತೆರೆ; ಅಂತರಂಗಕ್ಕೆ ಮೊರೆ

* ಕೊನೆಯ ಕ್ಷಣದ ಕಸರತ್ತಿಗೆ ಸಜ್ಜಾದ ಅಭ್ಯರ್ಥಿಗಳು * ಸೋಮವಾರ ಮನೆ, ಮನೆ ಪ್ರಚಾರಕ್ಕೆ ಅವಕಾಶ
Published 5 ಮೇ 2024, 23:58 IST
Last Updated 5 ಮೇ 2024, 23:58 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಸಚಿವರ ಮಕ್ಕಳು, ಕುಟುಂಬದವರು, ಸಂಬಂಧಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಚುನಾವಣಾ ಪ್ರಚಾರ ಭಾನುವಾರ ಸಂಜೆ ಮುಗಿದಿದ್ದು, ಮತದಾರರನ್ನು ಸೆಳೆಯುವ ಒಳತಂತ್ರದ ರಾಜಕಾರಣ ತೆರೆದುಕೊಂಡಿದೆ.

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದ್ದ ಮಾರ್ಚ್‌ 16ರಿಂದಲೇ ಈ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದವು. ಏಪ್ರಿಲ್‌ 12ರಂದು ಈ ಕ್ಷೇತ್ರಗಳಿಗೆ ಚುನಾವಣಾ ಅಧಿಸೂಚನೆ ಪ್ರಕಟವಾಗಿತ್ತು. ಆ ಬಳಿಕ ಪ್ರಚಾರದ ಕಾವು ಏರಿತ್ತು. ಒಂದೂವರೆ ತಿಂಗಳಿನಿಂದಲೂ ಬಹಿರಂಗ ಸಭೆಗಳು, ರೋಡ್‌ ಶೋ ಮೂಲಕ ಮತದಾರರ ಮನವೊಲಿಕೆ ಕಸರತ್ತು ನಡೆದಿತ್ತು.

ಎಲ್ಲ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್‌– ಬಿಜೆ‍ಪಿ ನೇರ ಹಣಾಹಣಿ ಇದೆ. ಏಪ್ರಿಲ್‌ 26ರಂದು ನಡೆದ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಆ  ಬಳಿಕ ಎರಡೂ ಪಕ್ಷಗಳ ರಾಷ್ಟ್ರ ಮತ್ತು ರಾಜ್ಯಮಟ್ಟದ ನಾಯಕರು ಉತ್ತರದ 14 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಧುಮುಕಿದ್ದರು.

ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಸತತವಾಗಿ ಶಿರಸಿ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾವೇರಿ, ಹುಬ್ಬಳ್ಳಿ– ಧಾರವಾಡ, ಕಲಬುರಗಿ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಶಿವಮೊಗ್ಗ, ರಾಯಚೂರು, ಕಲಬುರಗಿಯಲ್ಲಿ ಪ್ರಚಾರ ನಡೆಸಿದ್ದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದಾವಣಗೆರೆ, ಹಾವೇರಿ, ಕಲಬುರಗಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ತಮ್ಮ ಅಳಿಯನನ್ನು ಗೆಲ್ಲಿಸಿಕೊಳ್ಳುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಕ್ಷೇತ್ರದ ಪ್ರಚಾರದಲ್ಲೇ ಹೆಚ್ಚು ಮಗ್ನರಾಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಕೂಡ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಮೊದಲ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ, ಎಲ್ಲ ಕ್ಷೇತ್ರಗಳಲ್ಲಿ ಓಡಾಡಿ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದರು. ಆದರೆ, ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಹೊರಬಂದ ಬಳಿಕ ಅವರು ಮನೆಯಿಂದ ಹೊರಬರಲಿಲ್ಲ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೆಲವೆಡೆ ಪ್ರಚಾರದಲ್ಲಿ ಭಾಗಿಯಾಗಿ, ಮಿತ್ರಪಕ್ಷ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದರು.

ಮೊದಲ ಹಂತಕ್ಕೆ ಹೋಲಿಸಿದರೆ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ತುಸು ಬಿರುಸಿನಿಂದಲೇ ನಡೆಯಿತು. ಬಿಜೆಪಿ– ಕಾಂಗ್ರೆಸ್‌ ನಾಯಕರು ನೇರಾನೇರ ಆರೋಪ– ಪ್ರತ್ಯಾರೋಪಕ್ಕೆ ಇಳಿದಿದ್ದರು. ನಿತ್ಯವೂ ಹೊಸ ವಿಷಯ ತೇಲಿಬಿಟ್ಟು ರಾಜಕೀಯ ಲಾಭ ಪಡೆಯುವ ಪ್ರಯತ್ನವೂ ನಡೆಯಿತು.

ಮನೆ, ಮನೆ ಪ್ರಚಾರ: ಸೋಮವಾರ ಇಡೀ ದಿನ ಮನೆ, ಮನೆ ಪ್ರಚಾರಕ್ಕೆ ಅವಕಾಶವಿದೆ. ಕೊನೆಯ ಕ್ಷಣಗಳಲ್ಲಿ ಮತದಾರರ ಮನವೊಲಿಕೆ ಕಸರತ್ತು ನಡೆಸಲು ಅಭ್ಯರ್ಥಿಗಳು, ಮುಖಂಡರು, ಸ್ಥಳೀಯ ಕಾರ್ಯಕರ್ತರು ಸಜ್ಜಾಗಿದ್ದಾರೆ.

ಅಖಾಡದಲ್ಲಿ ಘಟಾನುಘಟಿಗಳು

ಮಂಗಳವಾರ (ಮೇ 7) ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ ಸೇರಿದಂತೆ ಘಟಾನುಘಟಿ ನಾಯಕರು ಸ್ಪರ್ಧಿಸಿದ್ದಾರೆ.

ರಾಜ್ಯದ ನಾಲ್ವರು ಸಚಿವರ ಮಕ್ಕಳು, ಒಬ್ಬ ಸಚಿವರ ಪತ್ನಿ, ಒಬ್ಬ ಸಚಿವರ ಸಹೋದರಿ, ಹಾಲಿ ಸಂಸದರು, ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿದ್ದಾರೆ. ಅಭ್ಯರ್ಥಿಗಳ ಗೆಲುವಿನ ಜತೆಯಲ್ಲೇ ಹಲವು ನಾಯಕರ ರಾಜಕೀಯ ಭವಿಷ್ಯದ ಪ್ರಶ್ನೆಯೂ ಅಡಗಿದೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಗ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಣ್ಣ ಬಿ.ವೈ. ರಾಘವೇಂದ್ರ ಸ್ಪರ್ಧಿಸಿದ್ದು, ಪ್ರತಿಷ್ಠೆಯ ಕಣವಾಗಿದೆ.

ಏಟು– ಎದಿರೇಟು

ಉತ್ತರದ 14 ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಹಲವು ವಿಷಯಗಳು ಸದ್ದು ಮಾಡಿದವು. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ಆರಂಭದಲ್ಲಿ ಹೆಚ್ಚು ಪ್ರಸ್ತಾಪವಾಗಿತ್ತು. ಈ ವಿಷಯವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ನಾಯಕರು ಯತ್ನಿಸಿದ್ದರು.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಲವು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಚುನಾವಣಾ ಪ್ರಚಾರದ ಕೊನೆಯ ದಿನಗಳಲ್ಲಿ ಹೆಚ್ಚು ಪ್ರತಿಧ್ವನಿಸಿತು. ಈ ಪ್ರಕರಣದ ಕುರಿತು ಜೆಡಿಎಸ್‌ನ ಮಿತ್ರಪಕ್ಷ ಬಿಜೆಪಿಯನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ನಾಯಕರು, ‘ಕಮಲ ಪಾಳಯ’ವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ್ದರು.

ಸದ್ದು ಮಾಡಿದ ವಿಷಯಗಳು

ಕಾಂಗ್ರೆಸ್‌

*ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ

*ಬಿಜೆಪಿ ಮತ್ತೆ ಅಧಿಕಾರ ಹಿಡಿದರೆ ಸಂವಿಧಾನಕ್ಕೆ ಅಪಾಯ
ಎಂಬ ಆರೋಪ

*ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ನಾಯಕರ ಮೌನ ಕುರಿತು ಪ್ರಶ್ನೆ

ಬಿಜೆಪಿ

*ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ

*ಒಬಿಸಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂಬ ಆರೋಪ

*ಹಿಂದೂಗಳ ಆಸ್ತಿಯನ್ನು ವಶಕ್ಕೆ ಪಡೆದು ಅಲ್ಪಸಂಖ್ಯಾತರಿಗೆ ಹಂಚಲು ಕಾಂಗ್ರೆಸ್‌ ಮುಂದಾಗಿದೆ ಎಂಬ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT