ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಪ್ರಚಾರಕ್ಕೆ ಹಣ ಇಲ್ಲ: ಟಿಕೆಟ್‌ ಮರಳಿಸಿದ ಕಾಂಗ್ರೆಸ್‌ ಅಭ್ಯರ್ಥಿ

Published 4 ಮೇ 2024, 7:27 IST
Last Updated 4 ಮೇ 2024, 7:27 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಚರಿತಾ ಮೊಹಂತಿ ಅವರು ಸ್ಪರ್ಧಿಸಲು ನಿರಾಕರಿಸಿದ್ದು, ಪಕ್ಷದ ಟಿಕೆಟ್‌ಅನ್ನು ವಾಪಸ್‌ ಮಾಡಿದ್ದಾರೆ.

ಚುನಾವಣಾ ಪ್ರಚಾರದ ಖರ್ಚಿಗೆ ಪಕ್ಷದ ನಿಧಿಯಿಂದ ಹಣ ನೀಡಲು ನಿರಾಕರಿಸಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತಳಾಗಿ ಮುಂದುವರಿತ್ತೇನೆ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಬ್ರಿಜ್‌ಮೋಹನ್‌ ಮೊಹಂತಿ ಅವರ ಪುತ್ರಿಯಾಗಿರುವ ಸುಚರಿತಾ ಸ್ಪಷ್ಟಪಡಿಸಿದ್ದಾರೆ. 

‘ಹಣದ ಕೊರತೆಯಿಂದಾಗಿ ಪ್ರಚಾರ ನಡೆಸಲು ಆಗುತ್ತಿಲ್ಲ. ಪಕ್ಷದ ನಿಧಿಯಿಂದ ಹಣ ಬರದಿದ್ದರೆ ಪುರಿಯಲ್ಲಿ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ನಾನು ವಿಷಾದಿಸುತ್ತೇನೆ. ಆದ್ದರಿಂದ ಪುರಿ ಲೋಕಸಭಾ ಕ್ಷೇತ್ರದ ಪಕ್ಷದ ಟಿಕೆಟ್‌ಅನ್ನು ವಾಪಸ್‌ ಮಾಡುತ್ತೇನೆ’ ಎಂದು ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಒಡಿಶಾ ಉಸ್ತುವಾರಿ ಅಜಯ್‌ ಕುಮಾರ್, ‘ಚುನಾವಣಾ ಪ್ರಚಾರಕ್ಕೆ ಪಕ್ಷದ ನಿಧಿಯಿಂದ ಹಣ ನೀಡಿಲ್ಲ ಎಂದು ಮೊಹಂತಿ ಹೇಳುತ್ತಿದ್ದಾರೆ. ಅಭ್ಯರ್ಥಿಯು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಚಾರ ಆರಂಭಿಸಿದ ಬಳಿಕವಷ್ಟೇ ಪಕ್ಷವು ತನ್ನ ನಿಧಿಯಿಂದ ಹಣ ನೀಡುತ್ತದೆ’ ಎಂದಿದ್ದಾರೆ.

‘ಪುರಿ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಲು ಪಕ್ಷವು ಈ ಮೊದಲೇ ನಿರ್ಧರಿಸಿದ್ದು, ಅದಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ಹೊಸ ಅಭ್ಯರ್ಥಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ಹೇಳಿದರು.

ಪುರಿ ಕ್ಷೇತ್ರದಲ್ಲಿ ಮೇ 25ರಂದು ಮತದಾನ ನಡೆಯಲಿದೆ. ಇಲ್ಲಿ ಬಿಜೆಪಿಯ ಸಂಬಿತ್‌ ಪಾತ್ರ ಮತ್ತು ಬಿಜೆಡಿಯ ಅರೂಪ್‌ ಪಟ್ನಾಯಕ್‌ ಅವರು ಕಣದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT