ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಆರೋಗ್ಯ ವಿಮೆ ನಿಯಮ ಬದಲಾವಣೆ; ಪ್ರಾಧಿಕಾರದ ನಡೆ ಸ್ವಾಗತಾರ್ಹ

Published 25 ಏಪ್ರಿಲ್ 2024, 20:36 IST
Last Updated 25 ಏಪ್ರಿಲ್ 2024, 20:36 IST
ಅಕ್ಷರ ಗಾತ್ರ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ‍್ರಾಧಿಕಾರವು (ಐಆರ್‌ಡಿಎಐ) ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಈ ಮೂಲಕ ಅದು ವಿಮಾ ಸೇವೆಗಳು ಇನ್ನಷ್ಟು ಜನರನ್ನು ಒಳಗೊಳ್ಳುವಂತೆ ಮಾಡಿದೆ. ನಿಯಮಗಳಲ್ಲಿನ ಈ ಬದಲಾವಣೆಗಳು ವಿಮಾ ಗ್ರಾಹಕರಿಗೆ ಅನುಕೂಲಕರವಾಗಿವೆ. ನಿಯಮಗಳಲ್ಲಿನ ಬದಲಾವಣೆಯ ಕಾರಣದಿಂದಾಗಿ, ವಿಮಾ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ತರಬೇಕಾಗುತ್ತದೆ.

ಒಂದು ಪ್ರಮುಖ ಬದಲಾವಣೆಯೆಂದರೆ, ವಿಮಾ ಕಂಪನಿಗಳು ಎಲ್ಲ ವಯೋಮಾನದವರಿಗೂ ಆರೋಗ್ಯ ವಿಮೆಯ ಸೌಲಭ್ಯವನ್ನು ಒದಗಿಸಬೇಕಾಗುತ್ತದೆ. ಇದುವರೆಗೆ ಆರೋಗ್ಯ ವಿಮೆಯ ಸೌಲಭ್ಯವನ್ನು ಪಡೆಯಲು 65 ವರ್ಷ ವಯಸ್ಸಿನ ಮಿತಿಯನ್ನು ಹೇರಲಾಗಿತ್ತು. ಹೊಸ ನಿಯಮವು ಈ ಮಿತಿಯನ್ನು ಇನ್ನಷ್ಟು ಹಿರಿದಾಗಿಸುವ ಕೆಲಸ ಮಾಡುತ್ತದೆ. ಇನ್ನೊಂದು ಬದಲಾವಣೆಯು ಆರೋಗ್ಯ ವಿಮೆಯ ಸೌಲಭ್ಯ ಪಡೆದವರಿಗೆ, ಸೌಲಭ್ಯ ಪಡೆಯುವುದಕ್ಕೂ ಮೊದಲು ಇದ್ದ ಕಾಯಿಲೆಗಳಿಗೆ ವಿಮಾ ರಕ್ಷಣೆಯನ್ನು ಪಡೆಯಲು ಇದ್ದ ಕಾಯುವಿಕೆಯ ಅವಧಿಯನ್ನು 48 ತಿಂಗಳ ಬದಲು 36 ತಿಂಗಳಿಗೆ ಇಳಿಸುತ್ತದೆ. ಇದು ಕೂಡ ಹಲವಾರು ಮಂದಿಗೆ ಅನುಕೂಲಕರ ಆಗಲಿದೆ. ಏಕೆಂದರೆ, ವಿಮಾ ಸೌಲಭ್ಯ ಪಡೆದುಕೊಳ್ಳುವ ಸಂದರ್ಭದಲ್ಲೇ ಇರುವ ಆರೋಗ್ಯ ಸಮಸ್ಯೆಗಳಿಗೆ ವಿಮೆಯ ರಕ್ಷಣೆಯನ್ನು ಮೊದಲಿಗಿಂತ ಬೇಗನೆ ಪಡೆಯಲು ಸಾಧ್ಯವಾಗುತ್ತದೆ. ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹೊಸ ಬದಲಾವಣೆಯಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ದೇಶದ ಜನಸಂಖ್ಯೆಯ ಸ್ವರೂಪವು ಬದಲಾಗುತ್ತಿರುವ ಸಂದರ್ಭದಲ್ಲಿ, ಆರೋಗ್ಯಸೇವೆಗಳ ವೆಚ್ಚವು ದುಬಾರಿ ಆಗಿರುವಾಗ ಆರೋಗ್ಯ ವಿಮೆಯ ವ್ಯಾಪ್ತಿಗೆ ಹೆಚ್ಚಿನವರನ್ನು ತರುವುದು ಬಹಳ ಮುಖ್ಯವಾಗುತ್ತದೆ. ಈಗಿನ ಬದಲಾವಣೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿ ಇರುವ ನಿಯಮಗಳಿಗೆ ಅನುಗುಣವಾಗಿ ಇವೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯ ಸೌಲಭ್ಯವು ಅತ್ಯಗತ್ಯ. ಆದರೆ ಅವರಿಗೆ ಹೊಸ ಆರೋಗ್ಯ ವಿಮೆಯನ್ನು ಖರೀದಿಸಲು ನಿರ್ಬಂಧ ಇತ್ತು. ಆರೋಗ್ಯ ವಿಮೆಯು ಒಂದು ಅಗತ್ಯ ಎಂಬುದು ಹೆಚ್ಚಿನ ಜನರಿಗೆ ತೀರಾ ಈಚೆಗಷ್ಟೇ ಮನದಟ್ಟಾಗಿರುವ ಕಾರಣ, 65 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಹಲವರು, ಆ ವಯಸ್ಸು ದಾಟುವ ಮೊದಲು ಆರೋಗ್ಯ ವಿಮೆ ಖರೀದಿಸಿರುವ ಸಾಧ್ಯತೆ ಕಡಿಮೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆಯು ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ಹೀಗಾಗಿ, ಅವರನ್ನು ಆರೋಗ್ಯ ವಿಮಾ ಸೌಲಭ್ಯದ ವ್ಯಾಪ್ತಿಗೆ ತರುವುದು ಅಗತ್ಯವಾಗಿತ್ತು.

ದೇಶದ ಸರ್ಕಾರಿ ಆರೋಗ್ಯಸೇವಾ ವ್ಯವಸ್ಥೆಯು ಸಮರ್ಪಕವಾಗಿ ಇಲ್ಲ. ದೇಶದಲ್ಲಿನ ಖಾಸಗಿ ಆರೋಗ್ಯಸೇವಾ ವ್ಯವಸ್ಥೆಯು ದುಬಾರಿ, ಹೆಚ್ಚಿನ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಬಹಳ ದೊಡ್ಡ ಹೊರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ನಿಯಮವು ಹೆಚ್ಚಿನ ಪ್ರಯೋಜನ ತಂದುಕೊಡಲಿದೆ. ಕುಟುಂಬವನ್ನು ನೆಚ್ಚಿಕೊಂಡಿದ್ದ ಸಾಂಪ್ರದಾಯಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯು ಇಂದು ದುರ್ಬಲಗೊಳ್ಳುತ್ತಿದೆ. ಹೀಗಾಗಿ, ಹಿರಿಯ ನಾಗರಿಕರಿಗೆ ಇಂತಹ ಆಯ್ಕೆಗಳ ಅಗತ್ಯ ಇತ್ತು.

ವಿಮಾ ಸೌಲಭ್ಯ ಪಡೆಯುವ ಮೊದಲೇ ಇದ್ದ ಕಾಯಿಲೆಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ತರಲಾಗಿರುವ ಬದಲಾವಣೆಯು ಕೂಡ ಬಹಳ ಅನುಕೂಲಕರ. ಏಕೆಂದರೆ, ಈ ನಿಯಮಗಳ ಅಡಿಯಲ್ಲಿಯೇ ಬಹಳಷ್ಟು ವಿಮಾ ಕಂಪನಿಗಳು ವಿಮಾ ಸೌಲಭ್ಯವನ್ನು ಹಲವರಿಗೆ ನಿರಾಕರಿಸುತ್ತಿದ್ದವು.

ವಿಮಾ ಪಾಲಿಸಿಯನ್ನು ಖರೀದಿಸುವ ಸಂದರ್ಭದಲ್ಲಿ ಗ್ರಾಹಕನು ತಾನು ಅದಾಗಲೇ ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆಗಳ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ನೀಡಿರಲಿಲ್ಲ ಎಂಬ ಕಾರಣ ನೀಡಿ, ಕಂಪನಿಗಳು ವಿಮಾ ಕ್ಲೇಮ್‌ಗಳನ್ನು ತಿರಸ್ಕರಿಸುತ್ತಿದ್ದವು. ಇದು ವಿಮಾ ಕಂಪನಿಗಳಿಗೆ ವಿಮೆಯ ಸೌಲಭ್ಯವನ್ನು ನಿರಾಕರಿಸಲು ಹಲವು ಮಾರ್ಗಗಳನ್ನು ಒದಗಿಸಿಕೊಡುತ್ತಿತ್ತು. ಈಗ ನಿಯಮಗಳನ್ನು ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ, ಮುಂದೆ ಈ ರೀತಿ ಆಗದಂತೆ ನಿಗಾ ವಹಿಸಬೇಕು. ಅದೇ ರೀತಿಯಲ್ಲಿ, 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ವಿಮಾ ಪಾಲಿಸಿಗಳು ಬಹಳ ದುಬಾರಿ ಆಗದಂತೆಯೂ ಕಾಳಜಿ ವಹಿಸಬೇಕು. ಒಂದು ವೇಳೆ, ಅವು ದುಬಾರಿ ಆದಲ್ಲಿ, 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಹೊಸದಾಗಿ ಆರೋಗ್ಯ ವಿಮೆ ಖರೀದಿಸಲು ಅನುವಾಗಿಸುವ ನಿಯಮವೇ ಹಲವರ ಪಾಲಿಗೆ ನಿರುಪಯುಕ್ತ ಆಗಿಬಿಡಬಹುದು. ದೇಶದ ಆರೋಗ್ಯ ವಿಮಾ ವಲಯವು ಪಾರದರ್ಶಕತೆಯ ಕೊರತೆಯ ಕಾರಣದಿಂದಾಗಿಯೇ ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಅಲ್ಲದೆ, ಅಲ್ಲಿನ ನಿಬಂಧನೆಗಳು ಎಲ್ಲರಿಗೂ ಸುಲಭಕ್ಕೆ ಅರ್ಥವಾಗುವುದಿಲ್ಲ, ಕ್ಲೇಮ್‌ ಪ್ರಕ್ರಿಯೆ ಕೂಡ ಸುಲಭವಲ್ಲ. ಹೊಸ ನಿಯಮಗಳು ಈ ಸಮಸ್ಯೆಗಳಿಗೆ ಕೂಡ ಪರಿಹಾರ ಒದಗಿಸಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT