ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕುಟೀರ ಹುಟ್ಟಿದ ಕತೆ...

Last Updated 22 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಭಾರತದ ಎಲ್ಲಾ ಮಾನವಿಕ ಶಾಸ್ತ್ರಗಳನ್ನು ಒಳಗೊಂಡ ಸಾಂಸ್ಕತಿಕ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ನೀಲನಕ್ಷೆ ರೂಪಿಸಿದ್ದರು. ಬಹುಜನರ ಸಾಮಾಜಿಕ ಬಿಡುಗಡೆ ಉದ್ದೇಶಕ್ಕಾಗಿ ಇದು ಎಂಬ ಕನಸು ಕಂಡಿದ್ದರು. ಅದು ಅವರ ಕಡೆಯ ಕನಸಾಗಿತ್ತು. ಆದರೆ, ಕನಸು ಸಾಕಾರಗೊಳ್ಳಲಿಲ್ಲ. ಅಂಬೇಡ್ಕರ್‍ ಅವರಿಗಿದ್ದ ಸಾಂಸ್ಕೃತಿಕ ನೋಟ ಕಾನ್ಷಿರಾಂ ಅವರಲ್ಲಿತ್ತು. ಆದರೆ ಅದು ಉತ್ತರ ಪ್ರದೇಶದಲ್ಲಿ ಆದ ರಾಜಕೀಯ ಪಲ್ಲಟಗಳಿಂದಾಗಿ ಬದಿಗೆ ಸರಿಯಿತು.

ದಲಿತ ಸಂಘರ್ಷ ಸಮಿತಿ ರಾಜಕೀಯದ ಕಡೆ ಸರಿದಾಗ ಕರ್ನಾಟಕದಲ್ಲಿ ಇಂಥದ್ದೇ ಪ್ರಯತ್ನ ನಡೆಯಿತು. ಇದರ ಭಾಗವಾಗಿ 1991ರಲ್ಲಿ ‘ಜನಕಲಾ ಮೇಳ’ ರೂಪಿಸಲಾಯಿತು. ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಇದರ ರೂವಾರಿಯಾಗಿದ್ದರು. ದಲಿತ ಚಳವಳಿಯನ್ನು ಸಾಂಸ್ಕೃತಿಕ ಚಳವಳಿಯನ್ನಾಗಿ ಕಟ್ಟುವ ಕನಸು ಕಂಡಿದ್ದ ಅವರು ಮತ್ತು ಅವರ ಒಡನಾಡಿಗಳ ಬಳಗ ದಿನಕ್ಕೆ ಒಂದು ರೂಪಾಯಿ ಕೂಡಿಡುವ ನೇಮ ಪಾಲಿಸುತ್ತಿದ್ದರು.

ಹೀಗೆ; ಒಂದು ದಿನ ರಾಮಯ್ಯ ಅವರು, ಮಾಲೂರು ಸಮತಾ ನಗರದ ಜ್ಯೋತಿಬಾ ಫುಲೆ ಶಾಲೆ ಬಳಿಯಿರುವ ಬೇವಿನ ಮರದ ಕೆಳಗೆ ಸಭೆ ಸೇರಿದರು. ಕೋಲಾರದ ಶಿವಗಂಗೆ ಬೆಟ್ಟದ ಮೇಲೆ ‘ಆದಿಮ’ ಕುಟೀರ ಕಟ್ಟುವ ಅಗತ್ಯ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಅವರ ಕನಸಿಗೆ ಕೈ ಕಾಲುಗಳಾಗಿದ್ದು ಮಾಲೂರಿನ ಪದ್ಮಾಲಯ ನಾಗರಾಜು ಮತ್ತು ಅವರ ಸಮಾನ ಮನಸ್ಕ ಶಿಕ್ಷಕರ ಬಳಗ. ಅವರೆಲ್ಲಾ ಸೇರಿ ಕುಟೀರ ಕಟ್ಟಲು ನಕಾಶೆಯೊಂದನ್ನು ರೂಪಿಸಿದರು.

‘ತಲೆಮಾರು ನೆನಪುಗಳ ಕತೆ ಕತೆಯಲ್ಲಿಟ್ಟು

ಸೊಲ್ಲು, ಸೊಲ್ಲಿಗೂ ಕಣ್ಣ ದೀಪ ಬೆಳಗಿಸಿದಂತ

ನುಡಿಯ ಗುಡಿಗಾರರಿಗೆ ಶರಣು

ಅವರ ಮೆಟ್ಟಡಿಯ ಅರಿವಿಗೆ ಶರಣು’.

‘ಕೋಟಿಗಾನಹಳ್ಳಿ ರಾಮಯ್ಯ ಅವರ ಈ ಹಾಡಿನ ಹಿಂದೆ ನಾನೊಂದು ನಡೆದ ಕಥಾನಕವನ್ನು ಈ ಹಾಡಿಗೆ ಹೊಂದಿಸಿ ಆಗಾಗ ಹಾಡಿಕೊಳ್ಳುತ್ತೇನೆ. ಇದು ನನ್ನ ಎದೆಯಲ್ಲಿ ಸದಾ ಮೊಳಗುತ್ತಿರುವ ‘ಆದಿಮ’ದ ಹಾಡೂ ಹೌದು. ಆದಿಮ ಒಂದು ಹಾಡು, ಕಾವ್ಯ, ಬದುಕು, ಸಂಸ್ಕೃತಿ, ಬೆಡಗು ಆಗಿ ರೂಪಾಂತರವಾಗುತ್ತಾ... ಸದಾ ನಿತ್ಯ ನೂತನವಾಗಿ ಬಗೆಬಗೆಯಾಗಿ ಬದಲಾಗುತ್ತಾ... ತಿಳಿಯದಾದ ಜೀವನಾನುಭವದ ಅನುಭೂತಿಗೆ ಸೆಳೆದೊಯ್ಯುತ್ತಲಿರುತ್ತದೆ. ಅದು ಹಾಡಲ್ಲ; ಎಲ್ಲರ ಪಾಡು. ಈ ಪಾಡಿಗೆ ಬಿದ್ದ ಅದೆಷ್ಟೋ ಗುಡಿಕಾರರ ಮಹಾಯಾನವೇ ನಡೆದಿದೆ. ಈ ಮಹಾಯಾನದಲ್ಲಿ ನಾನೂ ಒಬ್ಬ ಭಾಗೀದಾರ’.

ಇದರ ಭಾಗವಾಗಿ ಒಂದು ಕುಟೀರ ಹುಟ್ಟಿದ ಕಥೆ ಹೀಗಿದೆ. ಈಗಾಗಲೇ ನಲವತ್ತು ಜನರಿದ್ದ ಶಿಕ್ಷಕರ ತಂಡ ಮಾಲೂರಿಗೆ ಹತ್ತಿರವಿದ್ದ ಸೀತನಾಯಕನಹಳ್ಳಿ ಗೇಟಿನಲ್ಲಿ ಸೇರಿತ್ತು. ಲಾರಿ ಹೊರಡಲು ಸಿದ್ಧವಾಯಿತು. ಎಲ್ಲರನ್ನೂ ತುಂಬಿಕೊಂಡ ಲಾರಿ ನೇರವಾಗಿ ದಾದಿನಾಯಕನ ದೊಡ್ಡಿ ಕಡೆಗೆ ತಿರುಗಿತು. ಲಾರಿ ಸೀದಾ ಬಿದಿರು ಪೊದೆ ಬಳಿ ನಿಂತಿತು. ಎಲ್ಲರೂ ದೊಡ್ಡಿ ನಾರಾಯಣಸ್ವಾಮಿ ಅವರ ಹೊಲ, ತೋಟವನ್ನೆಲ್ಲಾ ಸುತ್ತಾಡಿ ಬಂದರು. ಅಲ್ಲಿದ್ದ ಪದ್ಮಾಲಯ ನಾಗಾರಾಜ ಮೇಷ್ಟ್ರು ಜೇಬಿನಲ್ಲಿದ್ದ ಬೀಡಿ ತುಂಡನ್ನು ತುಟಿಗೆ ಸಿಕ್ಕಿಸಿ, ಬಿದಿರು ಪೊದೆ ಕಡೆ ಕಣ್ಣು ನೆಟ್ಟರು.

ಬಿದಿರು ತುಂಡುಗಳನ್ನು ಲಾರಿಗೆ ತುಂಬುವಷ್ಟರಲ್ಲಿ ರಾತ್ರಿ ಏಳು ಗಂಟೆಯಾಗಿತ್ತು. ಲಾರಿ ಭರ್ತಿಯಾಯಿತು. ಲಾರಿ ಟಾಪ್‌ ಮೇಲಿದ್ದ ಲಕ್ಕೂರು ಕೃಷ್ಣಪ್ಪ ಅವರ ಹಾಡುಗಾರಿಕೆ ದಾರಿಯುದ್ದಕ್ಕೂ ಸಾಗಿತ್ತು. ಅಂತೂ ಲಾರಿ ಸೀತನಾಯಕನಹಳ್ಳಿಗೆ ಬಂತು. ರಸ್ತೆ ಪಕ್ಕ ಖಾಲಿ ಬಯಲಲ್ಲಿ ಬಿದಿರನ್ನು ಗುಡ್ಡೆ ಹಾಕಲಾಯಿತು. ಅಷ್ಟೊತ್ತಿಗೆ ವೆಂಕಟೇಶ್ (ಕುಟ್ಟಿ) ಎಲ್ಲರಿಗೂ ಟೀ ಕೊಡಿಸಿದರು. ಅಲ್ಲೇ ಇದ್ದ ನಾಗರಾಜ ಮೇಷ್ಟ್ರು ‘ಕುಟೀರಕ್ಕೆ ಬೇಕಿರುವ ಜೊಂಬಿಗೆ ಚನ್ನಸಂದ್ರಕ್ಕೆ ಹೊಗ್ಬೇಕು ಎಲ್ಲರೂ ಬೇಗ ಹೋಗಿ ಮಲಗಿ’ ಎಂದು ಮನೆ ಕಡೆ ಹೊರಟರು. ಅವರ ಮಾತಿನಂತೆ ನಾವೆಲ್ಲ ಮುಂಜಾವಿಗೆ ಬಂದು ಸೇರಿಕೊಂಡೆವು. ಲಾರಿಯಲ್ಲಿ ಮೂವತ್ತು ಜನ ಕೂಲಿಗಳು ಕುಳಿತಿದ್ದರು. ಇದರೊಂದಿಗೆ ಶಿಕ್ಷಕರ ತಂಡವೂ ಸೇರಿಕೊಂಡಿತು. ಮಾರ್ಗ ಮಧ್ಯೆ ಲಕ್ಕೂರಿನ ಕೃಷ್ಣಪ್ಪ ಲಾರಿ ಹತ್ತಿಕೊಂಡರು. ಎಲ್ಲರನ್ನು ಹೊತ್ತ ಲಾರಿ ಚನ್ನಸಂದ್ರ ಕೆರೆ ಬಳಿ ನಿಲ್ಲಿಸಿತು.

ಕೆರೆ ಜೊಂಬಿನಿಂದ ತುಂಬಿಕೊಂಡಿತ್ತು. ಅಲ್ಲಲ್ಲಿ ಕೆಮ್ಮಣ್ಣಿನ ಮಣ್ಣು ಗುಡ್ಡಗಳು ಕಂಡವು. ಎದೆ ಮಟ್ಟ ನಿಂತಿತ್ತು. ಜೊಂಬು, ಕೆರೆ ನೀರು ಕಾಣದಂತೆ ಹಬ್ಬಿಕೊಂಡಿತ್ತು. ಕಣ್ಣು ಅಗಲಿಸಿ ನೋಡಿದಷ್ಟು ಜೊಂಬೇ ಜೊಂಬು! ಎಲ್ಲರಿಗೂ ಹೊಟ್ಟೆ ಹಸಿದಿತ್ತು. ಪರಮಶಿವಯ್ಯ ಚಿತ್ರಾನ್ನದ ತಪ್ಪಲೆ ತಂದು ಮುಂದಿಟ್ಟಿದ್ದರು. ಕುಡಿಯುವ ನೀರು ತುಂಬಾ ದೂರದಲ್ಲಿತ್ತು. ಇದನ್ನರಿತ ಅವರು, ಬೈಕಿನ ಸಹಾಯದಿಂದ ಬಿಂದಿಗೆ ತುಂಬ ನೀರು ತಂದು ಕೊಡುತ್ತಿದ್ದರು.

ಈ ಕೆರೆಗೆ ಬೆಂಗಳೂರಿನಿಂದ ಕೊಳಚೆ ನೀರು ಹರಿದು ಬರುತ್ತಿತ್ತು, ದುರ್ನಾತ ಬೀರುತ್ತಿತ್ತು. ಎಲ್ಲರೂ ಕೆರೆ ದಂಡೆಗೆ ಬಂದು, ಎಳೆ ಮಕ್ಕಳಂತೆ ಬಟ್ಟೆ ಕಳಚಿ ಕೈಗೆ ಕುಡುಗೋಲುಗಳನ್ನು ತೆಗೆದು ಕೊಂಡರು. ಪಾದಗಳನ್ನು ಕೆರೆ ಮಡುವಿಗೆ ಇಳಿಸಿದರು. ಕೈಗಳಲ್ಲಿದ್ದ ಕುಡುಗೋಲುಗಳು ಕುಣಿದ ಬಿರುಸಿಗೆ ಜೊಂಬು ಗುಡ್ಡೆ ಬಿದ್ದಿತು. ಸಣ್ಣ ಹೊರೆಗಳನ್ನು ಕಟ್ಟಿ ಲಾರಿಗೆ ತುಂಬಿದ್ದಾಯಿತು.

ಲಾರಿ ಮೇಲಿದ್ದ ರವಿ ಅವರ ಹಾಡುಗಾರಿಕೆ ಎಲ್ಲರ ದೈಹಿಕ ನೋವು ಮರೆಸಿತು. ದಾರಿಯುದ್ದಕ್ಕೂ ಹಾಡಿನ ಬಂಡಿಯಂತೆ ದಿಬ್ಬಣ ಹೊರಟಿತ್ತು. ಲಾರಿ ಸೀತನಾಯಕನಹಳ್ಳಿ ಗೇಟಿಗೆ ಬಂದಾಗ ರಾತ್ರಿ ಎಂಟು ಗಂಟೆ. ಹೊರೆ ಲಾರಿಯಿಂದ ನೆಲಕ್ಕೆ. ಎಲ್ಲರೂ ಅವರವರ ಊರುಗಳಿಗೆ ಹೋಗಲು ಸಿದ್ಧರಾದರು. ‘ನಾಗರಾಜ ಮೇಷ್ಟ್ರು ನನ್ನ ಕರೆದು, ನೀನು ಬೆಳಿಗ್ಗೆ ನಮ್ಮೂರಿಗೆ ಬರ್ಬೇಕು. ರಂಟಾನ, ಸೂಳಿಕಡ್ಡಿಗಳನ್ನು ಕೊಯ್ಯೋಣ’ ಎಂದು ಹೇಳಿ ಮನೆ ಕಡೆ ಹೊರಟರು. ಆಗ ಬಿ.ಎ ಪರೀಕ್ಷೆ ಹತ್ತಿರವಾಗಿತ್ತು.

ಪರೀಕ್ಷೆ ಬರೆಯುವಾಗ ಬಿದಿರು ಜೊಂಬು ಕೊಯ್ಯುತ್ತಿದ್ದ ಚಿತ್ರಗಳೇ ಕಣ್ಣು ತುಂಬಿಕೊಂಡಿದ್ದವು. ಬೆಟ್ಟಕ್ಕೆ ಹೋಗಿ ಮೇಷ್ಟ್ರ ಜೊತೆ ಇರಬೇಕೆಂದು ಮನಸು ತವಕಿಸುತ್ತಿತ್ತು. ‘ಈ ಪರೀಕ್ಷೆಗಳು ಏತಕ್ಕೆ ಬಂದವೋ’ ಎಂದು ಬೈದುಕೊಂಡೆ. ಅಂತೂ ಪರೀಕ್ಷೆಗಳು ಮುಗಿದವು. ರಜೆಯೂ ಸಿಕ್ಕಿತು. ಗೆಳೆಯ ಡಿ.ಆನಂದ್ ಅವರೊಂದಿಗೆ ಕುಟೀರ ಇರುವ ಆದಿಮ ಬೆಟ್ಟದ ದಾರಿ ಹಿಡಿದೆ. ಅಲ್ಲಿಗೆ ಕಾಲಿಟ್ಟಿದ್ದು ಅದೇ ಮೊದಲು.

ಬೆಟ್ಟದ ಮೇಲಿರುವ ಏಳೂರುಗಳು ಹೇಗೆ ಇರುತ್ತವೆಯೋ ಎಂಬ ಕುತೂಹಲ ಹೆಚ್ಚಾಗಿತ್ತು. ಅಲ್ಲಿನ ಚೆಂದದ ಬೆಟ್ಟದ ಸಿರಿಗೆ ಮನಸ್ಸು ಸೋತಿತು. ಬೆಟ್ಟಗಳು ಬೆಳ್ಳಿ ಬಟ್ಟಲುಗಳಂತೆ ಮಿನುಗುತ್ತಿದ್ದವು. ಕುಟೀರ ಕಟ್ಟುವ ಜಾಗದಲ್ಲಿ ಪುಟ್ಟ ಚಪ್ಪರ ಹಾಕಿದ್ದರು. ಪಕ್ಕದಲ್ಲಿ ಶಿವಗಂಗೆ ಎಂಬ ಹತ್ತು ಮನೆಗಳ ಪುಟ್ಟ ಹಳ್ಳಿ ನನ್ನೂರಿನ ಕೇರಿ ನೆನಪಿಸುವಂತೆ. ಇಳಿಜಾರಿನಲ್ಲಿ ಕಲ್ಯಾಣಿ (ಕೋನೆರಿ) ಇತ್ತು. ಪಕ್ಕದಲ್ಲೇ ಹಳೇ ಕಾಲದ ಪಾಳು ಬಿದ್ದ ಮಠ. ಈ ಕಲ್ಯಾಣಿಗೆ ಎಂಥದ್ದೊ ಪೊದೆ ಹಬ್ಬಿತ್ತು.

ಕುಟೀರ ಕಟ್ಟುವ ಬಲತುದಿ ಇಳಿಜಾರಿಗೆ ಇಳಿಯುತ್ತಿದ್ದಂತೆ ನವಿಲುಗಳು ಚೆದುರಿದ ಹೊಲಗಳಲ್ಲಿ ಕಾಳು ಮೆಲ್ಲುತ್ತಿದ್ದವು. ಅಲ್ಲಲ್ಲಿ ಹಚ್ಚ ಹಸಿರಾಗಿ ಕಾಣುವ ರಾಗಿ ಹೊಲಗಳು. ಉದುರಿ ಬಿದ್ದಂತಿರುವ ಬಂಡೆ ಕಲ್ಲುಗಳು ಸುತ್ತಲೂ ಚಾಚಿದ್ದವು. ಪಾದಗಳು ಈ ಸಿರಿಯನ್ನು ಬಿಟ್ಟು ಕದಲದಂತೆ ನೆಲ ತಬ್ಬಿದ್ದವು. ಆ ಕುಟೀರ ಕಟ್ಟುವ ಜಾಗದಲ್ಲಿ ಯಾರೂ ಇಲ್ಲದ ಕಾರಣ ನಾವು ಮತ್ತೆ ಮಾಲೂರು ಹಾಸ್ಟೆಲ್‌ಗೆ ವಾಪಸಾದೆವು.

‘ಹತ್ತಾರು ಕೂಲಿಕಾರರ ಜೊತೆಗೂಡಿ ನಾಗರಾಜ್‌ ಮೇಷ್ಟ್ರು ಬೆಟ್ಟಕ್ಕೆ ತೆರಳಿದರು. ನಾನು ಜೊತೆಯಾದೆ. ಕುಟೀರದ ಕಾಮಗಾರಿ ಶುರು. ಅಲ್ಲಿ ಪಕ್ಕದಲ್ಲಿ ಜಿಂಕೆ ರಾಮಯ್ಯ ಅಜ್ಜನ ಸಮಾಧಿ ಇತ್ತು. ಬಿಡುವಿನ ಹೊತ್ತಲ್ಲಿ ಆ ಮಠಕ್ಕೆ ಹೋಗುತ್ತಿದ್ದೆ. ಇಲ್ಲಿ ಬಿದಿರಿನ ಕಮಂಡಲ, ಮಣ್ಣಿನ ಮುಂತು, ಎರಡು ಜಿಂಕೆ ಕೊಂಬು, ವಿಭೂತಿ ಉಂಡೆ, ಸೌಟಿನಂತಿದ್ದ ತೆಂಗಿನ ಚಿಪ್ಪು, ಭಿಕ್ಷೆ ಎತ್ತುವ ಜೋಳಿಗೆಯಂತಿದ್ದ ಬಿದಿರು ಬುಟ್ಟಿ, ಜಾಗಟೆ, ಗರಡು ಗಂಬ, ಮಣ್ಣಿನಲ್ಲಿ ಕೆತ್ತಿದ್ದ ಭಂಗಿ ಚಿಲುಮೆಗಳನ್ನು ಕೈಗೆ ತೆಗೆದು ನೋಡುತ್ತಿದ್ದೆ’. ಈ ಮಠದ ಎದುರಿಗೆ ರಾಮಯ್ಯ ಅಜ್ಜ ಹೂ ಬನ ಬೆಳೆಸಿದ್ದರು. ಅವರು ನೆಟ್ಟಿದ್ದ ಸಂಪಿಗೆ ಮರದ ಹೂ ಘಮಲು ಸುತ್ತೆಲ್ಲಾ ಪಸರಿಸಿತ್ತು. ಬೇವು, ಹುಣಸೆ, ಆಲದ ಮರಗಳನ್ನು ಬೆಳೆಸಿದ್ದರು.

ಮಧ್ಯಾಹ್ನದ ಊಟ ಈ ಮರಗಳ ತಂಪಿನಲ್ಲೇ ನಡೀತಿತ್ತು. ನೆಲಕ್ಕೆ ಬಾಳೆಎಲೆ ಹಾಸಿ ಊಟ ಮಾಡಬೇಕಿತ್ತು. ಆದರೆ, ಎಲೆ ಮೇಲೆ ಸಾರು ನಿಲ್ಲುತ್ತಿರಲಿಲ್ಲ. ಇದನ್ನು ಅರಿತ ನಾಗರಾಜ್ ಮೇಷ್ಟ್ರು ಅದೆಲ್ಲಿಂದಲೋ ಉದ್ದವಾದ ಕತ್ತಾಳೆ ಪಟ್ಟೆ ಕೊಯ್ದು ತಂದು ಕೊಟ್ಟರು. ಈ ಕತ್ತಾಳೆ ಪಟ್ಟೆಗಳೇ ನಮಗೆ ಅನ್ನದ ತಟ್ಟೆಗಳು. ಊಟದ ನಂತರ ಈ ತಟ್ಟೆಗಳನ್ನು ತೊಳೆದು ಮತ್ತೆ ರಾತ್ರಿಗೆ ಇದೇ ತಟ್ಟೆಗಳನ್ನು ಎಲ್ಲರೂ ಬಳಸಬೇಕಾಗಿತ್ತು. ಈ ತಟ್ಟೆಯಲ್ಲಿ ತಿನ್ನುವಾಗ ಸಾರು ಎರಡೂ ಕಡೆ ಹರಿದು ಹೋಗದಂತೆ; ರಾಗಿ ಮುದ್ದೆ ತುತ್ತುಗಳನ್ನು ಎರಡೂ ಕಡೆ ಅಡ್ಡಲಾಗಿ ಬ್ರಿಡ್ಜ್ ಕಟ್ಟುತ್ತಿದ್ದೆ. ಆಗ ನಮ್ಮೂರ ಗಂಗಮ್ಮ ಗುಡಿಯ ಅನ್ನದ ಛತ್ರದಲ್ಲಿ ತಿಂದ ನೆನ‍ಪು ಮರುಕಳಿಸುತ್ತಿತ್ತು.

ಎಲ್ಲರಿಗೂ ಊಟ ತಯಾರಿಸುತ್ತಿದ್ದವರು ಕಮಲಿ ಮೇಷ್ಟ್ರು. ಬೇಕಾದ ದಿನಸಿ, ತರಕಾರಿಗಳನ್ನು ಬೀರಮಾನಹಳ್ಳಿ ವಿಜಿಯಣ್ಣ ಎಂಬುವರು ತಂದು ಕೊಡುತ್ತಿದ್ದರು. ಕೆಲವೊಮ್ಮೆ ರಾಗಿ ಮುದ್ದೆ ಕಟ್ಟಲು ಶಿವಗಂಗೆಯ ಹೆಂಗಸರು ಸಹಾಯ ಮಾಡುತ್ತಿದ್ದರು. ಅಡುಗೆ ಪಾತ್ರೆ, ಲೋಟಗಳನ್ನು ನಾರಾಯಣಮ್ಮ, ರಾಮಕ್ಕ ತೊಳೆದಿಡುತ್ತಿದ್ದರು. ಕುಟೀರದ ಬೆನ್ನಿಗೆ ಅಡುಗೆ ಮನೆಯನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಅಲ್ಲಿ ಅದೆಂಥದ್ದೋ ಗಾಳಿ ಕಟ್ಟಿದ ತಡಿಕೆಗಳನ್ನು ಸೀಳಿ ಕೆಡುವುತಿತ್ತು. ನಾಗರಾಜ್‌ಮೇಷ್ಟ್ರು ಹಳೆ ಚಾಪೆಗಳಿಂದ ಪುಟ್ಟ ಅಡುಗೆ ಮನೆ ಸಿದ್ಧಗೊಳಿಸಿದ್ದರು.

ಕುಟೀರ ಕಟ್ಟುವಾಗ ಸೋಮಶೇಖರ್ ಗೌಡ ಎಂಬುವರು ಇಲ್ಲಿನ ಬೆಟ್ಟ ಸುತ್ತಾಡುತ್ತಾ ಹಾಲಿನ ಪಾಕೆಟ್, ಟೀ ಪುಡಿ, ಸಕ್ಕರೆ ತಪ್ಪದೆ ತಂದು ಕೊಡುತ್ತಿದ್ದರು. ಕೆಲ ಗಿಡಮೂಲಿಕೆ ಸಸಿಗಳನ್ನು ಕೈಯ್ಯಲ್ಲಿಡಿದು ನಾಗರಾಜ್‌ ಮೆಷ್ಟ್ರಿಗೆ ನೆಡುವಂತೆ ಕೊಡುತ್ತಿದ್ದರು. ಇಲ್ಲಿ ತುಂಬಾ ಕಾಡುತ್ತಿದ್ದ ಸಮಸ್ಯೆ ಎಂದರೆ ಕುಡಿಯುವ ನೀರು. ಶಿವಗಂಗೆಗೆ ಫರ್ಲಾಂಗು ದೂರದಲ್ಲಿ ಸೇದುವ ಬಾವಿ. ಬಿಂದಿಗೆ ನೀರು ತರಲು ಕನಿಷ್ಠ ಒಂದು ತಾಸು ಬೇಕಿತ್ತು. ಕಾಲು ದಾರಿಯಲ್ಲಿ ಬೆಳೆದು ನಿಂತಿದ್ದ ಮುಳ್ಳು ಪೊದೆಗಳನ್ನು ಅಹನ್ಯದ ಮುನಿಕೃಷ್ಣಪ್ಪ ಕಡಿದು ಸ್ವಚ್ಛಗೊಳಿಸಿದರು. ರಾತ್ರಿ ಹೊತ್ತು ಆ ಮಠದ ಸಮೀಪದಿಂದ ವಿಚಿತ್ರ ಆಲಾಪದ ಸದ್ದು ಕೇಳುತ್ತಿತ್ತು. ಮಠಕ್ಕೆ ಸಂಬಂಧಿಸಿದವರಾರೂ ಇತ್ತಕಡೆ ತಲೆ ಹಾಕುತ್ತಿರಲಿಲ್ಲ. ಕೆಲವೊಮ್ಮೆ ಚಿರತೆಗಳು ವಿಚಿತ್ರ ಸದ್ದು ಮಾಡುತ್ತಿದ್ದವಂತೆ. ಸ್ಥಳೀಯರು ಇವುಗಳನ್ನು ‘ಊನಿ, ತೋಳ’ ಎಂಬಿತ್ಯಾದಿ ಹೆಸರುಗಳಿಂದ ಕರೀತಿದ್ದರು.

ಕುಟೀರ ಕಾಮಗಾರಿ ಸಾಗುತ್ತಿರಲು ನಾಗರಾಜ್‌ಮೇಷ್ಟ್ರು ತಮ್ಮೂರಿಂದ ತಂದಿದ್ದ ದೇವಗನ್ನೇರಿ, ಕಾಡುಮಲ್ಲಿಗೆ, ಕುಂಬಳ, ಚೆಪ್ಪರದ ಬದನೆ ಇತ್ಯಾದಿ...ನಾಟಿ ಬೀಜಗಳನ್ನು ಕುಟೀರ, ಕೋನೆರಿ, ಸುತ್ತಲೂ ನೆಟ್ಟು ನೀರು ಉಣಿಸುತ್ತಿದ್ದರು. ಕುಟೀರದ ಕೆಲಸ ಒಂದು ಹಂತಕ್ಕೆ ಬಂದು ನಿಂತಿತ್ತು. ಈಗ ಕುಟೀರ ಖಾಲಿ ಮೈಯ್ಯಲ್ಲಿ ನಿಂತಂತಿತ್ತು. ಜೊಂಬು ಹಚ್ಚಲು ಪರಿಣತಿ ಪಡೆದ ಕೂಲಿಕಾರರ ಅವಶ್ಯಕತೆ ಇತ್ತು. ಮೇಷ್ಟ್ರು ಮರುದಿನವೇ ಕುಶಲಿಗರನ್ನು ತಮಿಳುನಾಡಿನ ಕಡೆಯಿಂದ ಕರೆಸಿದ್ದರು. ಜೊಂಬು ಕಳೆದೆರಡು ತಿಂಗಳುಗಳಿಂದ ಒಂದೇ ಸಮನೆ ಮಳೆ, ಗಾಳಿಗೆ ಸಿಕ್ಕಿ ಬಲಗುಂದಿತ್ತು. ಜೊಂಬಿನ ಹೊರೆ ಕದಲಿಸಿದರೆ ಅದೆಂಥದ್ದೋ ಪೌಡರಿನಂತೆ ಉದುರುತ್ತಿತ್ತು. ಜೊಂಬು ತೀರ ಶಿಥಿಲಗೊಂಡಿತ್ತು. ಬಂದಿದ್ದ ಕೂಲಿಯವರು ಅವರ ಊರುಗಳಿಗೆ ವಾಪಸಾದರು. ಜೊಂಬಿಗಾಗಿ ನಾವು ಅದೆಷ್ಟು ಶ್ರಮಪಟ್ಟಿಲ್ಲವೆಂಬ ಕೊರಗು ಕಾಡುತ್ತಿತ್ತು. ಕಡೆಗೆ ತಮಿಳುನಾಡಿನ ಬಾದೇ ಕಾಶಿ ಹುಲ್ಲನ್ನು ತರುವ ಮಾತಾಯಿತು. ಮೇಷ್ಟ್ರು ಮತ್ತು ಪರಮಶಿವಯ್ಯ ಅವರು ತಮಿಳುನಾಡಿನ ಕಡೆ ಬೈಕಿನಲ್ಲಿ ಹೊರಟರು. ನಾವೆಲ್ಲ ಹುಲ್ಲಿಗಾಗಿ ಕಾದು ಕುಳಿತೆವು.

ಅಂತೂ ಹುಲ್ಲು ಬೆಟ್ಟಕ್ಕೆ ಬಂತು. ನಮಗಂತೂ ಹೋದ ಜೀವ ಬಂದಂತಾಯಿತು. ಗೋಡೆಗಳಿಗೆ ರಂಟಾನ, ಸೂಳಿಕಡ್ಡಿ, ದಬ್ಬೆಗಳಿಂದ ಕಟ್ಟಿದ್ದ ತಡಿಕೆ ಜೋಡಿಸಲಾಯಿತು. ಹುಲಿಮಂಗಲದ ನಾಗರಾಜು, ಶಿವರಾಜು, ಮುನಿಕೃಷ್ಣ, ಇವರೆಲ್ಲ ಕುಪ್ಪಳ್ಳಿ ಕೆರೆಯಿಂದ ಜೇಡಿ ಮಣ್ಣು ತಂದು ಸುರಿದರು. ಸುತ್ತಾಡಿ ಸಗಣಿ ಕೂಡಿಸಿ ತಂದರು. ಕೆಮ್ಮಣ್ಣು, ಸುದ್ದೆ, ಹುತ್ತದ ಮಣ್ಣು, ಸಗಣಿ ನೀರನ್ನು ಕಲಸಿ ಮಣ್ಣನ್ನು ತುಳಿದು ಹದಗೊಳಿಸಬೇಕಿತ್ತು. ಅಹನ್ಯದ ಮುನಿಕೃಷ್ಣ ಈ ಮಣ್ಣನ್ನು ತುಳಿದ ರಭಸಕ್ಕೆ ಮಣ್ಣು ಹದಗೊಂಡಿತು. ಎಲ್ಲರ ಕೈಗಳಲ್ಲಿದ್ದ ಮಣ್ಣು ಮುದ್ದೆಗಳನ್ನು ತಡಿಕೆಗಳಿಗೆ ಮೆತ್ತಿಸಲಾಯಿತು. ಗೋಡೆಗಳು ಕೆಲವೇ ಹೊತ್ತಿಗೆ ಎದ್ದು ನಿಂತವು. ಕುಟೀರದ ಒಳಗಿನ ಗೋಡೆಗೆ ಜಿಂಕೆ ರಾಮಯ್ಯ ಅಜ್ಜನ ಜೀವ ಪ್ರೀತಿಗೆ ಗುರುತಾಗಿದ್ದ ಜಿಂಕೆಯನ್ನು ಕೆತ್ತಿ ಅದಕ್ಕೆ ಜೀವಂತ ಕೊಂಬುಗಳನ್ನು ಜೋಡಿಸಲಾಯಿತು.

ಅಂತೂ ಕೋಟಿಗಾನಹಳ್ಳಿ ರಾಮಯ್ಯ ಅವರ ಕನಸಿನ ಚಿತ್ರಕ್ಕೆ ಹೃದಯ ಜೋಡಿಸಿದಂತಾಯಿತು. ಉಳಿದಿದ್ದು ಈ ಕುಟೀರ ಉದ್ಘಾಟಿಸುವುದು. ಒಂದು ರಾತ್ರಿ ನಾಗರಾಜ್‌ಮೇಷ್ಟ್ರು, ರಾಮಯ್ಯ ಅವರೊಂದಿಗೆ ಮಾತನಾಡುತ್ತಾ ‘ಸರ್; ನಮ್ಮ ಪೂರ್ವಿಕರು ಹುಣ್ಣಿಮೆ ದಿವಸ ಬೆಳದಿಂಗಳಲ್ಲಿ ಹಾಡು, ಹಸೆ, ತತ್ವಪದ ಹಾಡುವ ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡಿದ್ದಾರೆ. ಅದು ನಮ್ಮ ‘ಭಾರತ ಹುಣ್ಣಿಮೆ’ಯ ಆಚರಣೆಗೆ ಸಂಬಂಧಿಸಿರುವಂತದ್ದು. ಇದು ಬುದ್ಧನ ಮುಂದುವರೆದ ನಡೆ ಅಲ್ಲವೇ; ಈ ಕುಟೀರದ ಉದ್ಘಾಟನೆಯನ್ನು ಹುಣ್ಣಿಮೆ ದಿನವೇ ಮಾಡೋಣ. ಇದಕ್ಕೆ ‘ಹುಣ್ಣಿಮೆ ಹಾಡು ಎಂದು’ ಹೆಸರಿಡೋಣ. ಆ ದಿನ ಅಹೋರಾತ್ರಿ ಹಾಡುಗಾರಿಕೆ ಮೂಲಕವೇ ಕುಟೀರ ಉದ್ಘಾಟನೆಯಾಗಲಿ’, ಈ ಹಾಡು ಎಲ್ಲಾ ಸಮುದಯಾದ ಸಮತೆಯ ಹಾಡಾಗಲಿ’ ಎಂದರು.

ರಾಮಯ್ಯ ಸರಿ ಎಂದರು. ಮುಂದಿನ ಹುಣ್ಣಿಮೆಗೆ ಸಿದ್ಧತೆ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮಕ್ಕೆ ಬರುವವರಿಗೆ ಸಂಪ್ರದಾಯದಂತೆ ಮುದ್ದೆ, ಕಾಳಿನಸಾರು, ಪಾಯಸ ಇರಲೆಂದು ತೀರ್ಮಾನಿಸಲಾಯಿತು. ಆ ಹುಣ್ಣಿಮೆ ಹಾಡು ಹೇಗಿರುತ್ತದೆಂದು ಕಲ್ಪಿಸಿಕೊಂಡು ನಿದ್ದೆಗೆ ಜಾರಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT