ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಉತ್ಸವಗಳಲ್ಲಿನ ಡಿ.ಜೆ. ಮಹಾಶಬ್ದದ ಮಡುವು

Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಆ ಪುಟ್ಟ ಗ್ರಾಮದಲ್ಲಿ ಹೊಳೆಗೆ ಗೌರಿ ಬಿಡುವ ಸಂಭ್ರಮವಿತ್ತು. ಒಂಬತ್ತು ದಿನಗಳ ಆರಾಧನೆ ಬಳಿಕ ನೀರಿನಲ್ಲಿ ಗೌರಿಯನ್ನು ವಿಸರ್ಜಿಸುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದಕ್ಕೂ ಮುನ್ನ ಊರ ತುಂಬಾ ಮೆರವಣಿಗೆ. ಗೋಧೂಳಿ ಸಮಯದಲ್ಲಿ ಈ ಸಂಭ್ರಮಕ್ಕೆ ಚಾಲನೆ ದೊರೆತರೆ, ಮಧ್ಯರಾತ್ರಿವರೆಗೂ ಆಚರಣೆಗಳು ಮುಗಿಯುವುದಿಲ್ಲ. ಆದರೆ, ಈ ಬಾರಿ ಕತ್ತಲಾದರೂ ದೇವಸ್ಥಾನದಿಂದ ಮೆರವಣಿಗೆ ಹೊರಡಲಿಲ್ಲ. ಕಾರಣವಿಷ್ಟೆ: ಡಿ.ಜೆ.ಗೆ ಬೇಕಾಗಿದ್ದ ಜನರೇಟರ್ ಬಂದಿರಲಿಲ್ಲ. ದೂರದ ನಗರ ಪ್ರದೇಶದಿಂದ ಜನರೇಟರ್‌ ತರಿಸುವವರೆಗೂ ಟ್ರ್ಯಾಕ್ಟರ್‌ ಮೇಲೆ ಕುಳಿತು ಎರಡು ತಾಸು ಕಾಯುವ ಸ್ಥಿತಿ ‘ಗೌರಿ’ಗೂ ಒದಗಿತ್ತು.

ಸರಿಯಾಗಿ ಬಸ್‌ ವ್ಯವಸ್ಥೆಯನ್ನೇ ಕಾಣದ ಆ ಗ್ರಾಮದಲ್ಲೀಗ ಗೌರಿ ಬಿಡಲು ಡಿ.ಜೆ. ಸದ್ದು ಬೇಕೇಬೇಕು. ಡಿ.ಜೆ. ನಮ್ಮ ನಾಡಿನ ಬಹುತೇಕ ಕಡೆಗೆ ವ್ಯಾಪಿಸಿರುವ ರೀತಿಯನ್ನು ಅರಿಯಲು ಇಂದೊಂದು ಉದಾಹರಣೆಯಷ್ಟೆ. ‘ಡಿ.ಜೆ... ಡಿ.ಜೆ...’ ಎನ್ನುವ ಕೂಗು ಹಳ್ಳಿ ಹಳ್ಳಿಗಳಲ್ಲೂ ಅನುರಣಿಸುತ್ತಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ, ಉತ್ಸವಗಳಿರಲಿ, ಜಾತ್ರೆ, ಔತಣಕೂಟವಿರಲಿ ಡಿ.ಜೆ.ಯ ಸದ್ದನ್ನು ಯುವಮನ ಬಯಸುತ್ತಿದೆ. ಎಲ್ಲ ಧರ್ಮಗಳ ಉತ್ಸವಗಳಲ್ಲೂ ಡಿ.ಜೆಯದ್ದೇ ‘ಸದ್ದು’. ಡಿ.ಜೆ. ಇದ್ದರೇನೆ ಅದಕ್ಕೊಂದು ಮೆರುಗು ಎನ್ನುವಷ್ಟರಮಟ್ಟಿಗೆ ಉತ್ಸವಗಳು ಮಗ್ಗಲು ಹೊರಳಿಸಿವೆ.

ಈಗಂತೂ ಎಲ್ಲೆಡೆ ಗಣೇಶೋತ್ಸವದ ಗುಂಗು. ವಿಸರ್ಜನೆ ಸಮಯದಲ್ಲಿ ನಡೆಯುವ ಮೆರವಣಿಗೆಗೆ ಕಿವಿಗಡಚಿಕ್ಕುವ ಅಬ್ಬರದ ಸಂಗೀತ ಇಲ್ಲದಿದ್ದರೆ ಗಣೇಶೋತ್ಸವ ಸಂಪನ್ನಗೊಳ್ಳದು. ಅಬ್ಬರದ ಸಂಗೀತದ ಲಯಕ್ಕೆ ಯುವಕರ ಭಲೇ ಕುಣಿತ ಮಾಮೂಲಿ ಎಂಬಂತಾಗಿದೆ. ಭಕ್ತಿ ಪ್ರಧಾನ ಹಾಡುಗಳ ಸ್ಥಾನದಲ್ಲಿ ಸಿನಿಮಾ ಗೀತೆಗಳ ಅನುರಣನ ಕೇಳತೊಡಗಿ ದಶಕಗಳೇ ಉರುಳಿವೆ. ಆದರೀಗ ಗಣೇಶೋತ್ಸವಕ್ಕೆಂದೇ ಸೃಷ್ಟಿಯಾದ ಹಾಡುಗಳಿಗೂ ಡಿ.ಜೆ. ಮಿಕ್ಸ್‌ ಮಾಡಿ ಲಯವನ್ನು ಕೊಟ್ಟುಕೊಳ್ಳುವ ಹೊಸತನ. ಈ ರೀತಿಯ ಡಿ.ಜೆ. ಬಳಕೆ ಬರೀ ಗಣೇಶೋತ್ಸವದಲ್ಲಷ್ಟೇ ಅಲ್ಲ, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಆಚರಣೆಗಳ ಭಾಗವೂ ಆಗಿಹೋಗಿದೆ. ಇಷ್ಟಕ್ಕೂ ಡಿ.ಜೆ. ಬಳಸಲು ಉತ್ಸವಗಳು ಒಂದು ನೆಪವಷ್ಟೇ.

ಡಿ.ಜೆ. ಅಂದರೆ ಡಿಸ್ಕ್‌ ಜಾಕಿ ಎನ್ನುವುದರ ಸಂಕ್ಷಿಪ್ತ ರೂಪ. ಹಾಡುಗಳನ್ನು ಆಯ್ದು, ಸಂದರ್ಭಕ್ಕೆ ಅನುಗುಣವಾಗಿ ದೊಡ್ಡ ಧ್ವನಿಯಲ್ಲಿ ಕೇಳುವಂತೆ ಮಾಡುವ ವ್ಯಕ್ತಿಗೆ ಡಿ.ಜೆ. ಎನ್ನುತ್ತಿದ್ದರು. ಆದರೆ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಸ್ಪೀಕರ್‌ಗಳನ್ನು ಇಟ್ಟು, ಹಾಡುಗಳನ್ನು ಹಾಕುವುದನ್ನೇ ಡಿ.ಜೆ. ಎಂದು ಕರೆಯುವುದು ರೂಢಿಯಾಗಿದೆ. ಕಿವಿಗಡಚಿಕ್ಕುವ ಸ್ಪೀಕರ್‌ಗಳ ಬಳಕೆಯನ್ನೇ ಡಿ.ಜೆ. ಎಂದು ಹಳ್ಳಿ ಹಳ್ಳಿಗಳಲ್ಲೂ ಕರೆಯುತ್ತಾರೆ.

ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಡಿ.ಜೆ. ಸಂಗೀತಕ್ಕೆ ಹುಚ್ಚೆದ್ದು ಕುಣಿದ ಯುವಸಮೂಹ

ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಡಿ.ಜೆ. ಸಂಗೀತಕ್ಕೆ ಹುಚ್ಚೆದ್ದು ಕುಣಿದ ಯುವಸಮೂಹ

ಚಿತ್ರ: ವಿ.ಚಂದ್ರಪ್ಪ

‘ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಳಸುವ ಡಿ.ಜೆ.ಯಲ್ಲಿ 10ರಿಂದ 12 ಸೌಂಡ್‌ ಬಾಕ್ಸ್‌ಗಳನ್ನು ಹಾಕಲಾಗುತ್ತದೆ. ನಾಲ್ಕು ಟಬ್‌, ನಾಲ್ಕು ಬೇಸ್‌ ಹಾಗೂ ನಾಲ್ಕು ಟಾಪ್‌ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ನಗರ ಪ್ರದೇಶಗಳ ದೊಡ್ಡ ದೊಡ್ಡ ಉತ್ಸವಗಳಲ್ಲಿ ಬಳಸುವ ಸ್ಪೀಕರ್‌ಗಳ ಸಂಖ್ಯೆ ಇದಕ್ಕಿಂತ ಮೂರು ಪಟ್ಟು ಹೆಚ್ಚು. ಒಂದೊಂದು ಸ್ಪೀಕರ್‌ನಲ್ಲೇ ನಾಲ್ಕು ಬಾಕ್ಸ್‌ಗಳನ್ನು ಅಳವಡಿಸಲಾಗಿರುತ್ತದೆ’ ಎಂದು ‘ಡಿ.ಜೆ ಸ್ಪೀಕರ್‌’ಗಳನ್ನು ಒದಗಿಸುವ ಚಳ್ಳಕೆರೆಯ ನರಸಿಂಹ ನೀಡುವ ವಿವರಣೆ ಕಣ್ಣರಳಿಸುವಂತೆ ಮಾಡುತ್ತದೆ.

ದಶಕದಿಂದೀಚೆಗೆ ‘ಡಿ.ಜೆ ಸಂಸ್ಕೃತಿ’ ಶುರುವಾದರೂ ಅದರ ಈಗಿನ ಚಾಚು ಅಚ್ಚರಿಗೊಳಿಸುವಂಥದ್ದು. ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ನಡೆಯುತ್ತಿದ್ದ ಇಂತಹ ಸಂಗೀತೋನ್ಮಾದ ನಮ್ಮ ನಾಡಿನಲ್ಲೂ ಆವರಿಸಿದೆ. ಈ ಅಬ್ಬರದ ಡಿ.ಜೆ ಸದ್ದು ಮಕ್ಕಳು, ವೃದ್ಧರು, ಹರೆಯದವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದಕ್ಕೂ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. ಶ್ರವಣ ಸಮಸ್ಯೆ, ರಕ್ತದೊತ್ತಡ, ಹೃದಯದ ತೊಂದರೆ, ಆತಂಕ, ಉದ್ವೇಗ, ಮಾನಸಿಕ ಖಿನ್ನತೆ ಮೊದಲೇ ಹೆಚ್ಚಾಗಿರುವ ಕಾಲಘಟ್ಟವಿದು. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಡಿ.ಜೆ. ಸದ್ದು ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸೆ. 27ರಂದು ನಡೆದ ಗಣೇಶೋತ್ಸವದಲ್ಲಿ ಡಿ.ಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಎಂಜಿನಿಯರ್‌ ನಾಗರಾಜ್‌ ಪತ್ತಾರ್‌ (30) ಸ್ಥಳದಲ್ಲೇ ಕುಸಿದುಬಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹೃದಯಸ್ತಂಭನದಿಂದ ಮೃತಪಟ್ಟರು. ಇಂಥದ್ದೇ ಘಟನೆ ಅ.9ರಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲೂ ನಡೆದಿದೆ. ಮೆರವಣಿಗೆ ವೇಳೆ ಯುವಕ ಸುದೀಪ್‌ ಸಜ್ಜನ್‌ (23) ಹಠಾತ್‌ ಕುಸಿದು ಸಾವನ್ನಪ್ಪಿದರು. ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲೂ ಗಣೇಶ ವಿಸರ್ಜನೆ ವೇಳೆ ಇಂತಹ ಘಟನೆಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. 

ರಾಯಚೂರಿನಲ್ಲಿ 19 ದಿನಗಳ ಹಸುಗೂಸು ಮಲಗಿದಲ್ಲೇ ಮೃತಪಟ್ಟಿತ್ತು. ಆ ಸಮಯದಲ್ಲಿ ಮನೆಯ ಸಮೀಪ ‘ಗಣೇಶೋತ್ಸವದ ಡಿಜೆ’ ಮೆರವಣಿಗೆ ಹಾದುಹೋಗಿತ್ತು. ಗ್ರಾಮಸ್ಥರು, ಪೋಷಕರು ಮಗುವಿನ ಸಾವಿಗೆ ಡಿ.ಜೆ ಸದ್ದೇ ಕಾರಣ ಎಂದು ಆರೋಪಿಸಿದರು. ಡಿ.ಜೆ ಸದ್ದಿನಿಂದಲೇ ಮಗು ಮೃತಪಟ್ಟಿದೆ ಎನ್ನುವುದು ವೈದ್ಯಕೀಯವಾಗಿ ದೃಢಪಟ್ಟಿಲ್ಲವಾದರೂ ಇಂತಹ ಘಟನೆಗಳು ಡಿ.ಜೆ ಸಂಸ್ಕೃತಿಗೆ ಸಾರ್ವಜನಿಕರಿಂದ ಪ್ರತಿರೋಧ ವ್ಯಾಪಕವಾಗಲು ಕಾರಣವಾಗುತ್ತಿವೆ. ‘ಡಿ.ಜೆ. ಸಂಗೀತ ಆಲಿಸಿ ಕಿವಿ ಸಮಸ್ಯೆಯಿಂದ ಆಸ್ಪತ್ರೆಗೆ ಎಡತಾಕುವವರ ಸಂಖ್ಯೆ ಹೆಚ್ಚುತ್ತಿದೆ. ತಲೆ ಸುತ್ತು, ನಿದ್ರಾಹೀನತೆ, ಕಿವಿಯಲ್ಲಿ ಯವಾಗಲೂ ಗುಂಯ್‌ ಎನ್ನುವ ಶಬ್ದ ಕೇಳುವಂತಾಗುವುದು ಅನೇಕರನ್ನು ಬಾಧಿಸುತ್ತಿವೆ. ಕೆಲವರಿಗೆ ತಕ್ಷಣಕ್ಕೆ ಅದು ಅರಿವಿಗೆ ಬರುತ್ತದೆ. ಇನ್ನು ಕೆಲವರಿಗೆ ಬಹಳ ದಿನಗಳ ಬಳಿಕ ಅರಿವಿಗೆ ಬರುತ್ತದೆ’ ಎನ್ನುತ್ತಾರೆ ದಾವಣಗೆರೆಯ ಡಾ.ವೀರೇಶ್‌ ಎ.ಆರ್‌.

ಡಾ.ವೀರೇಶ್‌ ಎ.ಆರ್‌.
ಡಾ.ವೀರೇಶ್‌ ಎ.ಆರ್‌.

ದಾವಣಗೆರೆಯ ಗ್ರಾಮವೊಂದರಲ್ಲಿ ನಡೆದ ಉತ್ಸವದಲ್ಲಿ ಡಿ.ಜೆ, ಸ್ಪೀಕರ್‌ಗಳನ್ನು ಹೊತ್ತ ಟ್ರ್ಯಾಕ್ಟರ್‌ ಚಲಾಯಿಸಿದ ಚಾಲಕ ಕಿವಿ ಕೇಳದಂತಾಗಿ ವೈದ್ಯರ ಬಳಿಗೆ ಬಂದರು. ಅತಿಯಾದ ಶಬ್ದ ನಿರಂತರವಾಗಿ ಚಾಲಕನ ಕಿವಿಯ ಮೇಲೆ ಬಿದ್ದಿದ್ದರಿಂದ ಒಂದು ಕಿವಿಯ ತಮಟೆಗೆ ಹಾನಿಯಾಗಿತ್ತು. 70 ಡೆಸಿಬಲ್‌ ಒಳಗಿನ ಶಬ್ದ ಕಿವಿಗೆ ಸಹನೀಯ. 88 ಡೆಸಿಬಲ್‌ವರೆಗಿನ ಶಬ್ದವನ್ನು ನಾಲ್ಕು ಗಂಟೆಗಳಷ್ಟು ಮಾತ್ರ ಕೇಳಿಸಿಕೊಳ್ಳಲು ಸಾಧ್ಯ. 91 ಡೆಸಿಬಲ್‌ ಶಬ್ದವನ್ನು ಎರಡು ಗಂಟೆ, 97 ಡೆಸಿಬಲ್‌ವರೆಗಿನ ಶಬ್ದವನ್ನು ಅರ್ಧ ಗಂಟೆ, 100 ಡೆಸಿಬಲ್‌ವರೆಗಿನ ಶಬ್ದವನ್ನು 15 ನಿಮಿಷ ಕೇಳಿಸಿಕೊಳ್ಳಬಹುದು. ಅದಕ್ಕಿಂತಲೂ ಹೆಚ್ಚು ಡೆಸಿಬಲ್‌ ಶಬ್ದ ಕಿವಿ ಮೇಲೆ ಬಿದ್ದರೆ ಅದು ಶ್ರವಣ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಶಬ್ದ ಹೊಮ್ಮುವ ಸ್ಥಳದಿಂದ ಎಷ್ಟು ಅಂತರದಲ್ಲಿ ಇದ್ದೇವೆ ಎನ್ನುವುದನ್ನೂ ಅವಲಂಬಿಸಿರುತ್ತದೆ. ಡಿ.ಜೆ. ಸ್ಪೀಕರ್‌ಗಳು 120ರಿಂದ 130 ಡೆಸಿಬಲ್‌ವರೆಗೆ ಶಬ್ದವನ್ನು ನಿರಂತರವಾಗಿ ಹೊರಹೊಮ್ಮಿಸುತ್ತವೆ.

‘ಶಬ್ದಮಾಲಿನ್ಯವನ್ನು ಎರಡು ಬಗೆಯಲ್ಲಿ ಗುರುತಿಸುತ್ತೇವೆ. ಆಕ್ಯುಪೇಶನ್‌ ಹಾಗೂ ರಿಕ್ರಿಯೇಷನ್‌. ಒಂದು, ಕೆಲಸದ ಸ್ಥಳದಲ್ಲಿ ಆಗುವಂತಹ ಶಬ್ದ. ಮತ್ತೊಂದು, ಮನರಂಜನೆಗಾಗಿ ಬಳಸುವ ಶಬ್ದ. ಈಗೀಗ ರಿಕ್ರಿಯೇಷನ್‌ನಿಂದಾದ ಕಿವಿ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕಾಲೇಜ್ ಫೆಸ್ಟ್‌, ಉತ್ಸವಗಳಲ್ಲಿನ ಅಬ್ಬರದ ಸಂಗೀತದಿಂದ ಶ್ರವಣ ಸಮಸ್ಯೆಗೆ ಒಳಗಾಗುತ್ತಿದ್ದಾರೆ’ ಎಂದು ವಿವರಿಸಿದರು ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ (AIISH ) ಶ್ರವಣ ಶಾಸ್ತ್ರಜ್ಞ ಪ್ರೊ.ಅಜಿತ್‌ಕುಮಾರ್‌.

ಎರಡನೇ ಮಹಾಯುದ್ಧದ ಬಳಿಕ ಅಮೆರಿಕದಲ್ಲಿ ‘ಡಿಸ್ಕ್ ಜಾಕಿ’ ಅನೇಕ ರೇಡಿಯೊ ಕೇಂದ್ರಗಳ ಪ್ರಮುಖ ಆದಾಯದ ಮೂಲವಾಗಿತ್ತು. ಇಲ್ಲಿ ಸಾಮಾನ್ಯವಾಗಿ ಡಿಸ್ಕ್ ಜಾಕಿ ರೆಕಾರ್ಡ್ ಮಾಡಲಾದ ಸಂಗೀತವನ್ನು ಹಾಕಿ, ಹಾಡಿನ ನಡುವೆ ಮಾತನಾಡುತ್ತಾ ಜನರನ್ನು ರಂಜಿಸುತ್ತಾನೆ. ಕಾಲಾನಂತರ ಅದು ಸಂಗೀತವನ್ನು ಆಸ್ವಾದಿಸುವ ಮಾಧ್ಯಮವಾಗಿ ಪರಿವರ್ತಿತವಾಯಿತು. ಆದರೆ ಉತ್ಸವಗಳಲ್ಲಿ ಬಳಸುವ ಡಿ.ಜೆ. ಈ ಮಾದರಿಯದ್ದಾಗಿರುವುದಿಲ್ಲ.

‘ಹೃದಯ ಸಂಬಂಧಿ ಸಮಸ್ಯೆ ಮೊದಲೇ ಇದ್ದವರಿಗೆ ಅತಿಯಾದ ಶಬ್ದದಿಂದ ಎದೆಬಡಿತ ಇನ್ನಷ್ಟು ಏರಿಕೆಯಾಗುತ್ತದೆ. ನೃತ್ಯ ಮಾಡುತ್ತಿರುವಾಗ ಎದೆಬಡಿತ ಒಮ್ಮೆಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎದೆಬಡಿತ ಏಕಾಏಕಿ 250–300ರವರೆಗೂ ತಲುಪಬಹುದು. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ‘ವಿಟಿ’ (ವೆಂಟ್ರಿಕ್ಯುಲರ್‌ ಟಕ್ಯಾರ್ಡಿಯ) ಎಂದು ಕರೆಯುವರು. ಹೀಗಾದಾಗ ಹೃದಯ ಬಡಿತ ಒಮ್ಮೆಲೆ ನಿಂತುಹೋಗುವ ಸಾಧ್ಯತೆಯೇ ಹೆಚ್ಚು. ಶಬ್ದದಿಂದಲೇ ಸಾವು ಸಂಭವಿಸುವುದಿಲ್ಲ’
ಮಾಲತೇಶ್‌ ಕೆ.ಎಂ., ಹೃದ್ರೋಗ ತಜ್ಞ, ದಾವಣಗೆರೆ
ಡಾ.ಮಾಲತೇಶ್‌ ಕೆ.ಎಂ.
ಡಾ.ಮಾಲತೇಶ್‌ ಕೆ.ಎಂ.

ಭಜನೆಯಿಂದ ಡಿಜೆವರೆಗೆ...

‘ಗಣೇಶೋತ್ಸವ’ ಸಂಸ್ಕೃತಿಯನ್ನು ಅನಾವರಣಗೊಳಿಸುವ ಹಬ್ಬ. ಭಕ್ತಿಯೊಂದಿಗೆ ಸಂಗೀತ, ನೃತ್ಯ, ಆರಾಧನೆ ಬೆರೆತು ಹೊಸ ಅನುಭೂತಿ ನೀಡುವ ಉತ್ಸವ. ಭಕ್ತಿ–ಭಾವ ಸ್ಫುರಿಸುವ, ಕರ್ಣಾನಂದ ಉಂಟು ಮಾಡುವ, ಶಾಂತಚಿತ್ತತೆಯಿಂದ ಗಣೇಶನನ್ನು ನೀರಿನಲ್ಲಿ ವಿಸರ್ಜಿಸುವ ಈ ಸಂಭ್ರಮದಲ್ಲಿ ಈಗ ದೊಡ್ಡ ಪರಿವರ್ತನೆಯಾಗಿದೆ. ಮೆರವಣಿಗೆಯುದ್ದಕ್ಕೂ ಭಕ್ತಿ ಗೀತೆ ಹಾಡುತ್ತಿದ್ದ ಭಜನಾ ತಂಡದ ಜಾಗವನ್ನು ಡಿಜೆ ಆವರಿಸಿಕೊಂಡಿದೆ.

ಈಗಲೂ ಮೈಸೂರಿನ ‘ವಿ.ವಿ. ಮೊಹಲ್ಲಾದ 8ನೇ ಕ್ರಾಸ್‌ ಗಣಪತಿ’ ಉತ್ಸವ ತನ್ನ ಚಹರೆಯನ್ನು ಕಳಚಿಕೊಂಡಿಲ್ಲ. ಈ ಉತ್ಸವಕ್ಕೆ ಈಗ ಬರೋಬ್ಬರಿ ಆರು ದಶಕದ ಸಂಭ್ರಮ. ಮೈಸೂರಿನ ಈ ಒಂದು ಬೀದಿ ನೀಡುವ ಸನ್ಮಾನ, ಚಪ್ಪಾಳೆಗೆ ಸಂಗೀತ ಲೋಕದ ದಿಗ್ಗಜರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಪಾರಂಪರಿಕ ಸಂಗೀತದ ರಸದೌತಣ ನೀಡುವ ಈ ಉತ್ಸವ ‘ಡಿ.ಜೆ ಗಣೇಶೋತ್ಸವವನ್ನು’ ಅಣಕಿಸುತ್ತ ತನ್ನ ಗತಕಾಲದ ಇತಿಹಾಸವನ್ನು ಸಾರುತ್ತ ಕಣ್ಣು ಮಿಟುಕಿಸುವಂತೆ ಭಾಸವಾಗುತ್ತದೆ.

‘ಶಬ್ದಮಾಲಿನ್ಯದಿಂದ ಸಾವು ಸಂಭವಿಸದು’

ಅಬ್ಬರದ ಡಿಜೆ ಸದ್ದಿಗೆ ಸಾರ್ವಜನಿಕರಿಂದ ಹಲವು ಆರೋಪ ವಿರೋಧಗಳು ವ್ಯಕ್ತವಾದರೂ ಅತಿಯಾದ ಶಬ್ದದಿಂದ ಸಾವು ಸಂಭವಿಸುವುದನ್ನು ವೈದ್ಯರು ತಳ್ಳಿಹಾಕಿದ್ದಾರೆ. ಆದರೆ ಶಬ್ದಮಾಲಿನ್ಯದಿಂದ ಉಂಟಾಗುವ ಪರಿಣಾಮಗಳಿಂದ ಅವಘಡಗಳು ಘಟಿಸುತ್ತವೆ ಎನ್ನುವುದನ್ನು ಒಪ್ಪುತ್ತಾರೆ. ‘ಹೃದಯ ಸಂಬಂಧಿ ಸಮಸ್ಯೆ ಮೊದಲೇ ಇದ್ದವರಿಗೆ ಅತಿಯಾದ ಶಬ್ದದಿಂದ ಎದೆ ಬಡಿತ ಇನ್ನಷ್ಟು ಏರಿಕೆಯಾಗುತ್ತದೆ. ಕಿವಿಗಡಚಿಕ್ಕುವ ಸಂಗೀತದ ಉನ್ಮಾದದಲ್ಲಿ ನೃತ್ಯ ಮಾಡುತ್ತಿರುವಾಗ ಎದೆಬಡಿತ ಒಮ್ಮೆಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮಿಷಕ್ಕೆ 70ರಿಂದ 80 ಇರುವ ಎದೆಬಡಿತ ಏಕಾಏಕಿ 250– 300ರವರೆಗೂ ತಲುಪಬಹುದು. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ‘ವಿಟಿ’ ಎಂದು ಕರೆಯುವರು. (ವೆಂಟ್ರಿಕ್ಯುಲರ್‌ ಟಕ್ಯಾರ್ಡಿಯ) (Ventricular Tachycardia). ಹೃದಯ ಬಡಿತ ಒಮ್ಮೆಲೆ ಹೆಚ್ಚಾಗುತ್ತ ನಿಂತುಹೋಗುವ ಸಾಧ್ಯತೆಯೇ ಹೆಚ್ಚು. ಆಗ ವ್ಯಕ್ತಿ ಕುಸಿದು ಬೀಳುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಹೃದಯಸ್ತಂಭನ ಉಂಟಾಗುತ್ತದೆ. ಸಾಮಾನ್ಯವಾಗಿ ಶಬ್ದ ಮಾಲಿನ್ಯದಿಂದ ಈ ರೀತಿ ಪರಿಣಾಮ ಉಂಟಾಗುತ್ತದೆ. ಶಬ್ದದಿಂದಲೇ ಸಾವು ಸಂಭವಿಸುವುದಿಲ್ಲ’ ಎನ್ನುವುದು ದಾವಣಗೆರೆಯ ಬಾಪೂಜಿ ಆಸ್ಪತ್ರೆ ಹೃದ್ರೋಗ ತಜ್ಞ ಮಾಲತೇಶ್‌ ಕೆ.ಎಂ ಅವರ ಸ್ಪಷ್ಟ ಮಾತು.

ಭಜನೆಯಿಂದ ಡಿಜೆವರೆಗೆ...

‘ಗಣೇಶೋತ್ಸವ’ ಸಂಸ್ಕೃತಿಯನ್ನು ಅನಾವರಣಗೊಳಿಸುವ ಹಬ್ಬ. ಭಕ್ತಿಯೊಂದಿಗೆ ಸಂಗೀತ ನೃತ್ಯ ಆರಾಧನೆ ಬೆರೆತು ಹೊಸ ಅನುಭೂತಿ ನೀಡುವ ಉತ್ಸವ. ಭಕ್ತಿ–ಭಾವ ಸ್ಫುರಿಸುವ ಕರ್ಣಾನಂದ ಉಂಟು ಮಾಡುವ ಶಾಂತಚಿತ್ತತೆಯಿಂದ ಗಣೇಶನನ್ನು ನೀರಿನಲ್ಲಿ ವಿಸರ್ಜಿಸುವ ಈ ಸಂಭ್ರಮದಲ್ಲಿ ಈಗ ದೊಡ್ಡ ಪರಿವರ್ತನೆಯಾಗಿದೆ. ಮೆರವಣಿಗೆಯುದ್ದಕ್ಕೂ ಭಕ್ತಿ ಗೀತೆ ಹಾಡುತ್ತಿದ್ದ ಭಜನಾ ತಂಡದ ಜಾಗವನ್ನು ಡಿಜೆ ಆವರಿಸಿಕೊಂಡಿದೆ. ಈಗಲೂ ಮೈಸೂರಿನ ‘ವಿ.ವಿ. ಮೊಹಲ್ಲಾದ 8ನೇ ಕ್ರಾಸ್‌ ಗಣಪತಿ’ ಉತ್ಸವ ತನ್ನ ಚಹರೆಯನ್ನು ಕಳಚಿಕೊಂಡಿಲ್ಲ. ಈ ಉತ್ಸವಕ್ಕೆ ಈಗ ಬರೋಬ್ಬರಿ ಆರು ದಶಕದ ಸಂಭ್ರಮ. ಮೈಸೂರಿನ ಈ ಒಂದು ಬೀದಿ ನೀಡುವ ಸನ್ಮಾನ ಚಪ್ಪಾಳೆಗೆ ಸಂಗೀತ ಲೋಕದ ದಿಗ್ಗಜರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಪಾರಂಪರಿಕ ಸಂಗೀತದ ರಸದೌತಣ ನೀಡುವ ಈ ಉತ್ಸವ ‘ಡಿ.ಜೆ ಗಣೇಶೋತ್ಸವವನ್ನು’ ಅಣಕಿಸುತ್ತ ತನ್ನ ಗತಕಾಲದ ಇತಿಹಾಸವನ್ನು ಸಾರುತ್ತ ಕಣ್ಣು ಮಿಟುಕಿಸುವಂತೆ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT