ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠೆ

Last Updated 21 ಜುಲೈ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಡೀಸೆಲ್ ಸ್ಟ್ರೈಕ್ ಎನ್ನುವಾಗಲೆಲ್ಲ ನನಗೆ ನನ್ನ ಮದುವೆಯ ನೆನಪು ಬರುತ್ತದೆ. ಈಗಾಗಲೇ 35 ವರ್ಷಗಳು ಉರುಳಿವೆ. ನಮ್ಮ ಮದುವೆ ಗೊತ್ತಾದ ಮೇಲೆ ಗಂಡಿನ ಕಡೆಯವರು ನನ್ನ ತಂದೆಯವರ ಬಳಿ ‘ನಿಮ್ಮ ಅನುಕೂಲ ನೋಡಿ ಮದುವೆ ಮಾಡಿ’ ಎಂದರು.

ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಯಿತು ನಮಗೆ. ನನ್ನ ಮದುವೆ ಉಡುಪಿಯಲ್ಲಿ ಗೊತ್ತು ಮಾಡಿದರು. ಮದುವೆಯ ದಿನ ಹತ್ತಿರ ಬಂತು. ಹುಡುಗನ ಮನೆಯವರೆಲ್ಲರೂ ಶುಕ್ರವಾರ ರಾತ್ರಿ ಹೊರಟು ಶನಿವಾರ ಬೆಳಿಗ್ಗೆ ಉಡುಪಿ ತಲುಪುವುದೆಂದು ಕಾಗದ ಬರೆದರು.

ಆ ದಿನವೇ ಸಾಯಂಕಾಲ ವರಪೂಜೆ. ಭಾನುವಾರ ಮುಹೂರ್ತ. ರಾತ್ರಿ ಬೆಂಗಳೂರಿಗೆ ವಾಪಸ್‌ ಎಂದು ಬಸ್ ಗೊತ್ತು ಮಾಡಿದರು. ಎಲ್ಲ ಸಂಬಂಧಿಕರು ಸೋದರತ್ತೆ ಮನೆಯಲ್ಲಿ ಸೇರಿದರು. ಜೋರಾಗಿ ಮಳೆ ಬೇರೆ. ಪತ್ರಿಕೆಯಲ್ಲಿ ಡೀಸೆಲ್ ಸ್ಟ್ರೈಕ್ ಎಂದು ಓದಿ ಎಲ್ಲರಿಗೂ ಆತಂಕ.

ಗಂಡಿನ ಕಡೆಯವರು ಬೆಳಿಗ್ಗೆಯಿಂದ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ವಿಚಾರಿಸಿದರೂ ಡೀಸೆಲ್ ಸಿಗಲಿಲ್ಲ. ರಾತ್ರಿ 8.30ಕ್ಕೆ ಬರಬೇಕಾಗಿದ್ದ ಬಸ್ಸು 12.30ಗೆ ಬಂತು. ಎಲ್ಲರೂ ಕಾದು ಕಾದು ತಮ್ಮ ಸೂಟ್‍ಕೇಸ್ ಜೊತೆ ಕೂತ ಕಡೆಯೇ ನಿದ್ದೆ ಮಂಪರು. ಗಂಡು ನಾಪತ್ತೆ. ಎಲ್ಲರಿಗೂ ತಳಮಳ. ಬಸ್ಸಿನಲ್ಲಿ ಹುಡುಗರು ಬಂದಾಗ ಎಲ್ಲರಿಗೂ ನಿರಾಳ. ಎಲ್ಲರೂ ಬಸ್ ಹತ್ತಿದರು. ಇತ್ತ ಕಡೆ ಉಡುಪಿ ಡಯಾನ ಸರ್ಕಲ್ ಬಳಿ ನಿಂತ ನಮ್ಮ ಮಾವನ ಮಗನಿಗೆ ಕಸಿವಿಸಿ. ಬೆಳಿಗ್ಗೆ 8.30 ಕಳೆದಿತ್ತು.

ಈಗಿನ ತರಹ ಫೋನ್ ಇರಲಿಲ್ಲ. ಬಸ್ಸು ಹೊರಟಿತ್ತು ಎಂದು ತಿಳಿದಿದ್ದಷ್ಟೆ. ಇಲ್ಲಿ ಛತ್ರದಲ್ಲಿ ಅಡುಗೆ ಮನೆಯಿಂದ ಭಟ್ಟರು ‘ಮೂಡೆ ಬಿಸಿ ಇದೆ. ತಣ್ಣಗೆ ತಿಂದು ಸರಿ ಇಲ್ಲವೆಂದು ಹೇಳಬೇಡಿರಿ’ ಎನ್ನುತ್ತಲೇ ಇದ್ದರು.

ಭಟ್ಟರಿಗೆ ಅವರ ಆಲೋಚನೆ. ನನ್ನ ತಂದೆಯವರಿಗೆ ಹುಡುಗನ ಮನೆಯವರ ಬಗ್ಗೆ ಯೋಚನೆ. ಇನ್ನೂ ತಲುಪಿಲ್ಲವಲ್ಲ ಎಂದು. ಅಷ್ಟರಲ್ಲಿ ಪಕ್ಕದ ಮನೆಯ ಮಕ್ಕಳು ‘ಹುಡುಗ ಕೈ ಕೊಟ್ಟ’ ಎಂದು ತಮಾಷೆ ಮಾಡಿದಾಗ ನನ್ನ ಕಣ್ಣಂಚಿನಲ್ಲಿ ನೀರು ತುಂಬಿರುವುದು ಅಮ್ಮನ ಗಮನಕ್ಕೆ ಬಂತು. ವಿಷಯ ತಿಳಿಯಲು ಅಮ್ಮನಿಗೆ ಆತುರ, ಕಾತರ ಇದ್ದರೂ ಉತ್ತರ ಸಿಗದ ಸ್ಥಿತಿ.

ದೇವರಿಗೆ ಹರಕೆ ಹೇಳಿಕೊಂಡೆ. ಮದುವೆ ಹೆಣ್ಣು ತಿಂಡಿ ತಿನ್ನದೇ ತಲೆ ಸುತ್ತಿ ಬಿದ್ದರೆ ಹೇಗೆ ಎಂದು ಅಮ್ಮನ ಗಲಾಟೆ. ಹಾಗೂ ಹೀಗೂ ತಿಂಡಿ ಬಾಯಿಗೆ ಹಾಕಿದ್ದೀನಿ ‘ಬಸ್ ಬಂತು’ ಎಂದು ಚಿಕ್ಕಮ್ಮ ಹೇಳಿದಾಗ ನನ್ನ ಸಂತೋಷಕ್ಕೆ ಮಿತಿಯೇ ಇಲ್ಲ. ಪಕ್ಕದ ಮನೆಯವರು ನನ್ನನ್ನು ತುಂಬಾ ರೇಗಿಸುತ್ತಿದ್ದು, ಅವರನ್ನು ತೀಕ್ಷ್ಣ ನೋಟದಲ್ಲಿ ನೋಡಿದಾಗ ಅವರಿಗೂ ತಪ್ಪಿನ ಅರಿವು ಆಗಿರಬೇಕು.

ಬಸ್ಸಿನಿಂದ ನಮ್ಮವರು ಇಳಿದರು. ಬೆಳಗ್ಗಿನ ಎಳೆ ಬಿಸಿಲು ತೆಂಗಿನ ಗರಿಯಿಂದ ಅಡಗಿ ಹೋಗಿತ್ತು. ನಮ್ಮ ತಂದೆಯವರ ಬಳಿ ಹೊತ್ತು ಮಿರಿ ಬಂದದ್ದಕ್ಕೆ ಕ್ಷಮೆ ಕೇಳಿದರು. ‘ಎಲ್ಲಾ ವಿಷಯ ಆಮೇಲೆ ಮಾತನಾಡೋಣ’ ಎಂದಾಗ ಭಟ್ಟರು ಪುನಃ ‘ಮೂಡೆ ಆರಿಹೋಗುತ್ತದೆ. ಇತ್ಲ ಕಡೆ ಬನ್ನಿ’ ಎಂದಾಗ ಎಲ್ಲರಿಗೂ ನಗು.

ನನಗೂ ಯೋಚನೆ. ಯಾಕೆ ತಡ? ಏನಾಗಿರಬಹುದು? ದಾರಿಯಲ್ಲಿ ತೊಂದರೆಯೇ? ಏನೇನೋ ಯೋಚನೆಗಳ ನಡುವೆ ನಮ್ಮವರು ಬಂದು ತಂದೆಯವರ ಬಳಿ ಕೂತು ‘ಬೆಂಗಳೂರಿನಲ್ಲಿ ಡೀಸೆಲ್ ಸ್ಟ್ರೈಕ್. ಬೆಳಿಗ್ಗೆಯಿಂದ ಕ್ಯೂ ನಿಲ್ಲಿಸಿದರೂ ಎಲ್ಲೂ ಸಿಗಲಿಲ್ಲ. ಒಬ್ಬ ಡ್ರೈವರ್ ನಿಮಗೆ ಯಾಕೆ ಯೋಚನೆ ಸರ್? ಮದುವೆಗೆ ತಾನೇ? ಸಾವಧಾನವಾಗಿ ಕರೆದುಕೊಂಡು ಹೋಗುವೆನು. ಇದು ನನ್ನ ಜವಾಬ್ದಾರಿ’ ಎಂದರಂತೆ.

ಡ್ರೈವರ್ ಕೂಡಲೇ ಕ್ಯಾನ್ ತಗೊಂಡು ಹಾಕಿದ್ದೇನು? ಸೀಮೆಎಣ್ಣೆ!! ನಮ್ಮವರಿಗೆ ಎದೆ ಧಸಕ್ ಎಂದಿತಂತೆ. ವಿಷಯ ಯಾರಿಗೂ ಅದರಲ್ಲೂ ಹೆಂಗಸರಿಗೆ ತಿಳಿಯದ ಹಾಗೆ ಸುಮ್ಮನಿದ್ದು ಉಡುಪಿಗೆ ಬಂದದ್ದು ಸಾಹಸವೇ ಸರಿ. ವಿಷಯ ತಿಳಿದಾಗ ನಮ್ಮವರಿಗೆ ನನ್ನ ಮೇಲಿನ ಪ್ರೀತಿ ಎಷ್ಟಿರಬಹುದು ಅನಿಸಿತು.

ಈಗಲೂ ಡೀಸೆಲ್ ಸ್ಟ್ರೈಕ್ ಹಾಗೂ ಮೂಡೆ ಎಂದಾಗ ಬಸ್ ಚಾಲಕನ ನಿಷ್ಠೆ ಹಾಗೂ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT