ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಮೂರ್ತ–ಅಮೂರ್ತಗಳ ಭ್ರಮಾಲೋಕದಲ್ಲಿ ರಮೇಶ ಕಲಾಪಯಣ
Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ
ರಷ್ಯಾದ ಕಲುಗಾ ಪ್ರದೇಶದ ಬೊರೊ‌ವ್ಸ್ಕ್ ನಗರದಲ್ಲಿ ಏಪ್ರಿಲ್‌ 29 ರಿಂದ ಆರಂಭವಾಗಿದ್ದು ಮೇ 10ರವರೆಗೆ ನಡೆಯುವ ಅಂತರರಾಷ್ಟ್ರೀಯ ಕಲಾಶಿಬಿರ ಮತ್ತು ಕಲಾಕೃತಿಗಳ ಪ್ರದರ್ಶನದಲ್ಲಿ ಚಿತ್ರಕಲಾವಿದ ಕನ್ನಡಿಗ ರಮೇಶ ತೇರದಾಳ ಭಾಗವಹಿಸಿದ್ದು ಆ ಕಲಾಶಿಬಿರಕ್ಕೆ ಅವರು ಭಾರತದಿಂದ ಆಯ್ಕೆಯಾಗಿರುವ ಏಕೈಕ ಕಲಾವಿದರಾಗಿದ್ದಾರೆ. ‘ಎಕ್ಸ್‌ಪ್ರೆಶನ್ಸ್’ ಸರಣಿಯಡಿ ಚಿತ್ರಿಸಿದ ಎಂಟು ಪೇಂಟಿಂಗ್ಸ್‌ಗಳನ್ನು ಅವರು ಅಲ್ಲಿ ಪ್ರದರ್ಶಿಸುವರು...

ಮೀನಿನಂಥ ಮೀನೊಳಗೊಂದು ಬ್ರಹ್ಮಾಂಡಲೋಕ, ಬಟಾಬಯಲಿನಲ್ಲಿ ಒಂಟಿಮರದಂಥ ಮರದಲ್ಲಿ ಉಲಿಯುವ ಹಕ್ಕಿ, ಬೇಟೆಗೆ ಹೊಂಚು ಹಾಕಿದಂತೆ ಕಾಣುವ ಜೋಡಿರೆಕ್ಕೆಗಳ ಹೆಬ್ಬುಲಿ, ಬಾನಿಗೆ ಚಾಚಿದ ಹಕ್ಕಿಯ ಉದ್ದಕತ್ತಿನ ತುದಿಯಲ್ಲೊಂದು ಪುರುಷಾಕೃತಿ, ಭಾವಲೋಕದ ತೀರದಲ್ಲಿ ಯುವತಿಯೊಬ್ಬಳ ಅಸ್ಪಷ್ಟ ಮುಖ, ಬಲಿಷ್ಠ ಯೌವ್ವನಿಗನೊಳಗೆ ಕುದುರೆಯ ಹೇಷಾರವ... ಇಲ್ಲಿನ ಚಿತ್ರದೊಳಗಿನ ಆಕಾರಗಳೆಲ್ಲವೂ ಕನಸಿನಲ್ಲಿ ಕಂಡಂತೆ ಅಸ್ಪಷ್ಟ ಹಾಗೂ ಅಮೂರ್ತ. ಮನೋಲೋಕದ ಸಂಕೇತಗಳ ಚುಂಗು ಹಿಡಿದು ಪಳಗಿಸಿ ವಿನ್ಯಾಸಗೊಳಿಸಿದ ಕುಂಚಕಾವ್ಯ.

ಬೆನೆಡೆಟೊ ಕ್ರೋಚೆ ಎಂಬ ಪಾಶ್ಚಾತ್ಯ ಕಲಾಚಿಂತಕ ಹೇಳಿದಂತೆ, ‘ಯಾವುದೇ ಆಕಾರ ನಮ್ಮ ಮನಸ್ಸಿನೊಳಗೆ ಅಸ್ಪಷ್ಟವಾಗಿರುತ್ತದೆ. ಅಸ್ಪಷ್ಟ ಅಮೂರ್ತ ಭಾವನೆಗಳೇ ಪರಿಪೂರ್ಣ ಅಭಿವ್ಯಕ್ತಿ. ಸ್ಪಷ್ಟವಾಗಿ ಅಭಿವ್ಯಕ್ತಿಸುವುದು ಕೇವಲ ದಾಖಲೆಗಾಗಿ ಮಾತ್ರ’. ಈ ಮಾತಿನಲ್ಲಿ ನಂಬಿಕೆಯಿಟ್ಟು, ಚಾಚೂ ತಪ್ಪದೇ ಅನುಸರಿಸುತ್ತ ಅಂತರರಾಷ್ಟ್ರೀಯ ಮಟ್ಟಕ್ಕೇರಿದವರು ಕಲಾವಿದ ರಮೇಶ ತೇರದಾಳ.

ರಿಯಲಿಸ್ಟಿಕ್ ಪೇಂಟರ್‌ ಆಗಿ ಚಿತ್ರಿಸುತ್ತಿದ್ದಾಗ ಅಮೂರ್ತ ಚಿತ್ರ ರಚನೆ ಹೇಗೆ? ಕನಸಿನಲ್ಲಿ ಕಂಡಂತೆ ಅಸ್ಪಷ್ಟವಾಗಿ ಚಿತ್ರಿಸಬಾರದೇಕೆ? ಎಂಬ ಜಿಜ್ಞಾಸೆ ಮನದಲ್ಲಿ. ‘20ನೇ ಶತಮಾನದ ಕಲಾವಿದರಾದ ಅಮೆರಿಕದ ಪಾಲ್ ಜಾಕ್ಸನ್‌ ಪೋಲಾಕ್ ಮತ್ತು ಸ್ಪೇನ್ ಕಲಾವಿದ ಆ್ಯಂಟೋನಿ ಟ್ಯಾಪೀಸ್ ಎಷ್ಟೋ ವರ್ಷಗಳಿಂದ ನನ್ನೊಳಗೆ ಕಾಡುತ್ತಿದ್ದರು. ಅವರು ಅಮೂರ್ತ ರೂಪದ ಆಕಾರಗಳನ್ನು ಸೃಷ್ಟಿಸಿ, ವಸ್ತುಗಳನ್ನು ಬಳಸಿ ಕಲಾಕೃತಿ ರಚಿಸಿದ್ದರು. ಅವರ ಬಣ್ಣ ಎರಚುವಿಕೆ ನೋಡುತ್ತ ನೋಡುತ್ತ ಅವರಂತೆ ನಾನೂ ಚಿತ್ರಿಸಬೇಕು ಎನ್ನುವ ತುಡಿತಕ್ಕೆ ಬಿದ್ದೆ. ಅವರಂತೆ ನಾನೂ ರಚಿಸಲು ಸಾಧ್ಯವೇ ನೋಡಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಪ್ರಯತ್ನಿಸಿದೆ. ಈಗ ನನ್ನದೇ ಆದ ದಾರಿಯಲ್ಲಿ ಒಂದಿಷ್ಟು ದೂರ ಸಾಗಿ ಬಂದಿದ್ದೇನೆ’ ಎನ್ನುವ ಅವರ ಮಾತಲ್ಲಿ ಹೆಮ್ಮೆಯಿತ್ತು.

ರಮೇಶ ತೇರದಾಳ ಅವರ ‘ಎಕ್ಸ್‌ಪ್ರೆಶನ್ಸ್‌’ ಸರಣಿ ಕಲಾಕೃತಿ
ರಮೇಶ ತೇರದಾಳ ಅವರ ‘ಎಕ್ಸ್‌ಪ್ರೆಶನ್ಸ್‌’ ಸರಣಿ ಕಲಾಕೃತಿ

ಪ್ರಯೋಗಶೀಲತೆಯೇ ಜೀವಾಳ...

‘ಯಾವುದೇ ಪೇಂಟಿಂಗ್ ಆರಂಭಿಸುವ ಕ್ಷಣದವರೆಗೂ ನನ್ನಲ್ಲಿ ಹೀಗೆಯೇ ಮಾಡಬೇಕೆನ್ನುವ ಸ್ಪಷ್ಟತೆ ಇರುವುದಿಲ್ಲ. ನನ್ನ ಉದ್ದೇಶ ಪ್ರಯೋಗಶೀಲತೆ. ಏನನ್ನೂ ಯಥಾವತ್ತಾಗಿ ಚಿತ್ರಿಸುವುದಿಲ್ಲ. ನನ್ನ ಚಿತ್ರಗಳೆಂದರೆ ಕನಸಿನಂತೆ. ಎಲ್ಲವನ್ನೂ ಇದ್ದ ಹಾಗೇ ಚಿತ್ರಿಸಿದರೆ ಪೋಸ್ಟರ್ ಅನ್ನಿಸುತ್ತವೆ. ಪೇಂಟಿಂಗ್‌ಗಳು ಪೋಸ್ಟರ್‌ಗಳಲ್ಲ! ಅವು ಕಲಾವಿದನ ಸೂಕ್ಷ್ಮ ಅಭಿವ್ಯಕ್ತಿ. ನೋಡುಗನಲ್ಲಿ ಕುತೂಹಲ ಮೂಡಿಸಬೇಕು, ಆಲೋಚನೆಗೆ ಹಚ್ಚಬೇಕು. ದೊಡ್ಡ ಕ್ಯಾನ್ವಾಸ್ ಹರಡಿಕೊಂಡು ಅದರ ಮೇಲೆಲ್ಲ ಬಣ್ಣಗಳನ್ನು ಸುರಿದು, ಹಂದರ ಸೃಷ್ಟಿಸಿ ಅದಕ್ಕೊಂದು ಆಕಾರ ಕೊಡುತ್ತ, ಮೈವಳಿಕೆ ಮೂಡಿಸಿ ಮೂರ್ತ–ಅಮೂರ್ತಗಳ ನಡುವೆ ಸೃಜಿಸುವ ಭ್ರಮಾಲೋಕ ನನ್ನ ಪೇಂಟಿಂಗ್!’

ರಮೇಶ ತೇರದಾಳ ಅವರ ‘ಎಕ್ಸ್‌ಪ್ರೆಶನ್ಸ್‌’ ಸರಣಿ ಕಲಾಕೃತಿ
ರಮೇಶ ತೇರದಾಳ ಅವರ ‘ಎಕ್ಸ್‌ಪ್ರೆಶನ್ಸ್‌’ ಸರಣಿ ಕಲಾಕೃತಿ

ಕಲೆಯೇ ಬದುಕು, ಅದುವೇ ಜೀವನ...

‘ಬಾಲ್ಯದಲ್ಲಿ ನಾನಂತೂ ಕಲಾವಿದ ಆಗಬೇಕು ಅಂದುಕೊಂಡವನಲ್ಲ. ಆದರೆ ಈಗ ಪೂರ್ಣಾವಧಿ ಕಲಾವಿದ. ಇದೇ ನನ್ನ ಬದುಕು, ನನ್ನುಸಿರು. ಅಪ್ಪ, ಅಣ್ಣ ಕಲಾವಿದರಾಗಿದ್ದರಿಂದ ಮನೆಯಲ್ಲಿ ಕಲಾ ಪರಿಸರವಿತ್ತು. ಗದಗದ ವಿಜಯ ಕಲಾ ಮಂದಿರದಲ್ಲಿ ಬಿಎಫ್‌ಎ ಪದವಿ. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಫೈನ್‌ ಆರ್ಟ್ಸ್‌ ನಲ್ಲಿ ಸ್ನಾತಕೋತ್ತರ ಪದವಿ, ಬಳಿಕ ಬೆಂಗಳೂರಿನಲ್ಲಿಯೇ ವಾಸ, ಹೊಸತನದ ಹುಡುಕಾಟ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರಸಂಕಿರಣಗಳಲ್ಲಿ ಭಾಗಿಯಾದೆ. ಹತ್ತಾರು ಪ್ರಶಸ್ತಿಗಳು, ಫೆಲೋಶಿಪ್‌ಗಳು ಸಂದವು. ನನ್ನ ಪರಿಶ್ರಮ, ತ್ಯಾಗ, ಬದ್ಧತೆ ಇಲ್ಲಿಯವರೆಗೆ ಕರೆತಂದಿದೆ’ ಎನ್ನುವ ಅವರಿಗೆ 2016ರಲ್ಲಿ ಹಂಗೆರಿ ದೇಶದಿಂದ ‘ಗ್ಲೋಬಲ್ ಆರ್ಟಿಸ್ಟ್’ ಎಂಬ ಗೌರವವೂ ಸಂದಿದೆ.

‘ನನ್ನದೇ ದಾರಿ; ನನ್ನದೇ ಬದುಕು. ಅಷ್ಟಾಗಿಯೂ ನಾನಷ್ಟೇ ಈ ಕ್ಷೇತ್ರದಲ್ಲಿ ಬೆಳೆಯುವುದಲ್ಲ, ನನ್ನೊಟ್ಟಿಗೆ ಯುವ ಕಲಾವಿದರನ್ನೂ ಬೆಳೆಸುವುದು ಗುರಿ. ನನ್ನದೇ ‘ನಿರ್ವಾಣ ಆರ್ಟ್ ಫೌಂಡೇಷನ್ ’ ಇದೆ. ಹತ್ತಾರು ಯುವ ಕಲಾವಿದರನ್ನು ಸೇರಿಸಿ ನನ್ನದೇ ಹಣ ಖರ್ಚು ಮಾಡಿ ಪ್ರದರ್ಶನ ಏರ್ಪಡಿಸುತ್ತೇನೆ. ವಿದೇಶಗಳ ಪ್ರದರ್ಶನಕ್ಕೂ ಅವರನ್ನು ಕರೆದೊಯ್ಯುತ್ತೇನೆ’ ಎನ್ನುತ್ತಾರೆ ಅವರು. 

ರಮೇಶ ತೇರದಾಳರ ಅಮೂರ್ತ ಕಲಾಕೃತಿ
ರಮೇಶ ತೇರದಾಳರ ಅಮೂರ್ತ ಕಲಾಕೃತಿ

‘ರಿಯಲಿಸ್ಟಿಕ್ ಪೇಂಟರ್’

ಸುಮಾರು 30 ವರ್ಷಗಳಿಂದ ಪೂರ್ಣಾವಧಿ ಕಲಾವಿದರಾಗಿರುವ ಗದಗದ ರಮೇಶ ಈವರೆಗೆ ಸುಮಾರು 17 ರಾಷ್ಟ್ರಗಳನ್ನು ಸುತ್ತಿ, ಹತ್ತಾರು ಕಲಾಶಿಬಿರ, ಕಾರ್ಯಾಗಾರ, ಏಕವ್ಯಕ್ತಿ, ಸಮೂಹ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಬೆಂಗಳೂರಿನ ಜೆ.ಪಿ.ನಗರದಲ್ಲಿ‘ನಿರ್ವಾಣ ಆರ್ಟ್ ಫೌಂಡೇಷನ್’ ಸ್ಥಾಪಿಸಿದ್ದಾರೆ. ಇವರು ಮೂಲತಃ ‘ರಿಯಲಿಸ್ಟಿಕ್ ಪೇಂಟರ್’. ಇವರಿಗೆ ವಿದೇಶಿ ಕಲಾವಿದ ಸ್ನೇಹಿತರ ದೊಡ್ಡ ಬಳಗವಿದೆ. ಅವರೊಂದಿಗೆ ಒಡನಾಟ,  ಅವರ ಕಲಾ ಬದುಕು, ಅವರ ವಿಚಾರಧಾರೆಗಳು ಪ್ರಭಾವಿಸಿವೆ.  ಅವರ ಮೂಲಕವೇ ಅಂತರರಾಷ್ಟ್ರೀಯ ಕಲಾಶಿಬಿರಗಳ ಮಾಹಿತಿ ಪಡೆಯುತ್ತಾರೆ. ತಾವು ರಚಿಸಿದ ಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಚಿತ್ರಗಳ ಪಕ್ಕದಲ್ಲಿಟ್ಟು ಅವರಿಂದ ಅಭಿಪ್ರಾಯ ಪಡೆಯುತ್ತಾರೆ, ಚರ್ಚಿಸುತ್ತಾರೆ. ಕಲಾವಿದರ ಪ್ರೊಫೈಲ್, ಕಲಾಕೃತಿಯ ಗುಣಮಟ್ಟ ನೋಡಿ ಆಯ್ಕೆ ಮಾಡುತ್ತಾರೆ. ಮೊದಲ ಬಾರಿಗೆ ರಷ್ಯಾದ ಕಲಾಶಿಬಿರ, ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಅಪಾರ ಕುತೂಹಲವನ್ನು ರಮೇಶ್‌ ಹೊಂದಿದ್ದಾರೆ.

ರಮೇಶ ತೇರದಾಳರ ಅಮೂರ್ತ ಕಲಾಕೃತಿ
ರಮೇಶ ತೇರದಾಳರ ಅಮೂರ್ತ ಕಲಾಕೃತಿ
ರಮೇಶ ತೇರದಾಳರ ಅಮೂರ್ತ ಕಲಾಕೃತಿ
ರಮೇಶ ತೇರದಾಳರ ಅಮೂರ್ತ ಕಲಾಕೃತಿ
ರಮೇಶ ತೇರದಾಳ ಅವರ ‘ಎಕ್ಸ್‌ಪ್ರೆಶನ್ಸ್‌’ ಸರಣಿ ಕಲಾಕೃತಿ
ರಮೇಶ ತೇರದಾಳ ಅವರ ‘ಎಕ್ಸ್‌ಪ್ರೆಶನ್ಸ್‌’ ಸರಣಿ ಕಲಾಕೃತಿ
ರಷ್ಯಾದ ಕಲಾಶಿಬಿರದಲ್ಲಿ ಕಲಾವಿದ ರಮೇಶ ತೇರದಾಳ ಪೇಂಟಿಂಗ್ ಮಾಡುತ್ತಿರುವುದು
ರಷ್ಯಾದ ಕಲಾಶಿಬಿರದಲ್ಲಿ ಕಲಾವಿದ ರಮೇಶ ತೇರದಾಳ ಪೇಂಟಿಂಗ್ ಮಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT