ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಟಕರತ್ನ’ರ ತವರಿನಲ್ಲಿ ರಂಗಮಂದಿರ

Last Updated 25 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ರಂಗಭೂಮಿಯ ಪಿತಾಮಹ, ನಾಟಕರತ್ನ ಡಾ.ಗುಬ್ಬಿ ವೀರಣ್ಣ ನಮ್ಮ ಸಾಂಸ್ಕೃತಿಕ ಬದುಕಿಗೆ ರಂಗು ತುಂಬಿ, ಅಭಿರುಚಿಗಳನ್ನು ನಿರ್ಮಿಸಿದವರು. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಹುಟ್ಟಿ, ಅಲ್ಲೇ ನಾಟಕ ಕಂಪನಿಯನ್ನು ಕಟ್ಟಿ, ಸಾವಿರಾರು ನಟ–ನಟಿಯರಿಗೆ, ಕಲಾವಿದರ ಕುಟುಂಬಗಳಿಗೆ ಆಶ್ರಯ ನೀಡಿ, ಕನ್ನಡ ರಂಗಭೂಮಿ ಅರಳಿ ಬೆಳೆಯಲು ಶ್ರಮಿಸಿದವರು. ‘ಗುಬ್ಬಿ’ ಎಂದರೆ ವೀರಣ್ಣ, ವೀರಣ್ಣ ಎಂದರೆ, ‘ಗುಬ್ಬಿ ಕಂಪನಿ’ ಎನ್ನುವಷ್ಟರ ಮಟ್ಟಿಗೆ ನಾಟಕ ರಂಗವನ್ನು ಬೆಳೆಸಿದರು.

ಅಂಥ ‘ನಾಟಕರತ್ನ’ರ ತವರಲ್ಲಿ ರಂಗಮಂದಿರವಿರಲಿಲ್ಲ. ಈ ಕೊರಗು ಬಹಳ ವರ್ಷಗಳ ಕಾಲವಿತ್ತು. ಈಗ್ಗೆ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಆ ಕೊರಗು ನೀಗಿತು. ವೀರಣ್ಣನವರ ತವರಿನಲ್ಲಿ ‘ಗುಬ್ಬಿ ವೀರಣ್ಣ ರಂಗಮಂದಿರ’ ತಲೆ ಎತ್ತಿ ನಿಂತಿದೆ. ರಂಗಮಂದಿರದಲ್ಲಿ ಪ್ರತಿ ವರ್ಷ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ರಾಷ್ಟ್ರೀಯ ನಾಟಕೋತ್ಸವ ನಡೆಸುತ್ತಿದೆ. ದೇಶದ ವಿವಿಧ ಭಾಗಗಳಿಂದ ಕಲಾವಿದರು ಬಂದು, ಈ ಥಿಯೇಟರ್‌ನಲ್ಲಿ ನಾಟಕ ಪ್ರದರ್ಶನ ನೀಡಲು ಮುಂದಾಗಿದ್ದಾರೆ.

ಗುಬ್ಬಿ ಕಂಪನಿಯ ಚಿತ್ರ ಗ್ಯಾಲರಿ
ಗುಬ್ಬಿಯಲ್ಲಿ ರಂಗಚಟುವಟಿಕೆಗಳು ಗರಿಗೆದರಲು, ಅವರ ಮೊಮ್ಮಗಳು ರಂಗಕಲಾವಿದೆ ಬಿ.ಜಯಶ್ರೀ ಪ್ರಮುಖ ಕಾರಣ. ತಾವು ರಾಜ್ಯಸಭಾ ಸದಸ್ಯರಾಗಿದ್ದಾಗ ₹2 ಕೋಟಿ ಅನುದಾನ ಬಳಸಿ, ಈ ರಂಗಮಂದಿರ ನಿರ್ಮಾಣಕ್ಕೆ ಮುನ್ನುಡಿ ಬರೆದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಟ್ಟಣ ಪಂಚಾಯಿತಿ, ಆಗಿನ ರಾಜ್ಯಸಭಾ ಸದಸ್ಯರಾಗಿದ್ದ ಪ್ರಭಾಕರ ಕೋರೆ, ಅಶೋಕ್ ಎಸ್.ಗಂಗೂಲಿ, ಎಚ್.ಕೆ.ದುವ, ಎಸ್.ಎಂ.ಕೃಷ್ಣ, ಆಯನೂರು ಮಂಜುನಾಥ್ ಅವರು ನೀಡಿದ ಒಟ್ಟು ₹15 ಕೋಟಿ ಅನುದಾನದಿಂದ ಇಂಥದ್ದೊಂದು ಅದ್ಭುತ ರಂಗಮಂದಿರ ತಲೆ ಎತ್ತಿದೆ.

ಇದು ಕೇವಲ ಥಿಯೇಟರ್‌ ಅಷ್ಟೇ ಆಗಿಲ್ಲ. ಅಲ್ಲಿ ಗುಬ್ಬಿವೀರಣ್ಣರ ಬದುಕು ಸಾಧನೆ ಪರಿಚಯಿಸುವ ವಸ್ತು ಸಂಗ್ರಹಾಲಯವಿದೆ. ಗುಬ್ಬಿ ಕಂಪನಿ ಪ್ರದರ್ಶಿಸಿದ ಮೊದಲ ನಾಟಕದಿಂದ ಇಲ್ಲಿಯವರೆಗೆ ಪ್ರದರ್ಶನಗೊಂಡಿರುವ ನಾಟಕಗಳ ಅಪರೂಪದ ಛಾಯಾ ಚಿತ್ರಗಳ ಗ್ಯಾಲರಿ ಇದೆ. ಒಂದು ಕಡೆ ವೀರಣ್ಣನವವ ವಿವಿಧ ಪಾತ್ರಗಳ ಕಟೌಟ್‌ ಗಳಿವೆ. ಪತ್ರಿಕಾ ಬರಹಗಳ ಪ್ರಕಟಣೆಗಳಿವೆ.

ಡಾ.ಗುಬ್ಬಿ ವೀರಣ್ಣ ಟ್ರಸ್ಟ್‌ನವರು ನಿರ್ವಹಿಸುತ್ತಿರುವ 100*200 ಅಡಿಗಳ ವಿಸ್ತಾರದ ಈ ರಂಗಮಂದಿರದಲ್ಲಿ 350 ಆಸನಗಳಿವೆ. ಅಂತರರಾಷ್ಟ್ರೀಯ ಮಟ್ಟದ ವಾಸ್ತುಶಿಲ್ಪದಿಂದ ಕೂಡಿದೆ. ರಾಷ್ಟ್ರದ ಕೆಲವೇ ರಂಗಮಂದಿರಗಳಲ್ಲಿ ಇದು ಒಂದು ಎಂದು ಬಂದ ಖ್ಯಾತ ರಂಗತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಳಕು, ರಂಗಸ್ಥಳ, ಬಾಲ್ಕನಿ ವಿನ್ಯಾಸ, ಪುರುಷ ಮತ್ತು ಮಹಿಳಾ ಕಲಾವಿದರ ಪ್ರಸಾದನ ಕೊಠಡಿ, ಸುಧಾರಿತವಾದ ಧ್ವನಿವರ್ಧಕಗಳು, ರಂಗಮಂದಿರದ ಸೊಬಗನ್ನು ಇಮ್ಮಡಿಗೊಳಿಸಿವೆ. ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಅಡಿ ಎಲ್ಲ ರಂಗಚಟುವಟಿಕೆಗಳೂ ನಡೆಯುತ್ತಿವೆ.

ಪ್ರತಿ ವರ್ಷ ವಿವಿಧ ಉತ್ಸವಗಳು
ಸರ್ಕಾರದ ಅನುದಾನ ಹಾಗೂ ನಾಟಕೋತ್ಸವದಿಂದ ಬಂದ ಹಣದಲ್ಲಿ ಪ್ರದರ್ಶನಗಳು ನಡೆಯುತ್ತಿವೆ. ಪ್ರತಿವರ್ಷ ಸಂಗೀತೋತ್ಸವ, ನೃತ್ಯೋತ್ಸವ, ಈಶಾನ್ಯೋತ್ತರ ನಾಟಕೋತ್ಸವ, ಪೌರಾಣಿಕ ನಾಟಕೋತ್ಸವ, ಬುಡಕಟ್ಟು ಕಲೋತ್ಸವ ಹಾಗೂ ಬೇಸಿಗೆಯ ಮಕ್ಕಳ ರಂಗತರಬೇತಿ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ಈ ವರೆಗೂ 20ಕ್ಕೂ ಹೆಚ್ಚು ನಾಟಕೋತ್ಸವಗಳು ನಡೆದಿವೆ.

ಆರಂಭದಲ್ಲಿ ಉಚಿತ ಪ್ರವೇಶವಿತ್ತು. ನಂತರ ₹5 ಶುಲ್ಕವಾಯ್ತು. ಈಗ ₹30ಕ್ಕೆ ಬಂದು ನಿಂತಿದೆ. ಟ್ರಸ್ಟ್ ಅಧ್ಯಕ್ಷೆಯಾಗಿ ಬಿ.ಜಯಶ್ರೀ ಯಶಸ್ವಿಯಾಗಿ ಟ್ರಸ್ಟ್ ಮುನ್ನಡೆಸುತ್ತಿದ್ದಾರೆ. ಇವರೊಟ್ಟಿಗೆ ಕಲಾಶ್ರಿ ಡಾ.ಲಕ್ಷ್ಮಣದಾಸ್, ರಂಗನಿರ್ದೇಶಕ ಎಚ್.ಎಂ.ರಂಗಯ್ಯ, ಉದ್ಯಮಿ ಸಿ.ವಿ.ಮಹದೇವಯ್ಯ, ಜಿ.ಸಿ.ಕುಮಾರಸ್ವಾಮಿ, ಕಾಡಶೆಟ್ಟಿಹಳ್ಳಿ ಸತೀಶ್, ರಾಜೇಶ್ ಗುಬ್ಬಿಯವರು ಸಾಥ್ ತೊಡಗಿಸಿಕೊಂಡಿದ್ದಾರೆ. ರಂಗಭೂಮಿಗಾಗಿ ದುಡಿದ ವೀರಣ್ಣರ ಶ್ರಮ ಈ ಮೂಲಕ ಸಾರ್ಥಕವಾಗುತ್ತಿದೆ.

ಏ.11ರಿಂದ ಬೇಸಿಗೆ ರಂಗ ಶಿಬಿರ
ಪ್ರತಿ ವರ್ಷ ಮಕ್ಕಳಿಗಾಗಿ ರಂಗತರಬೇತಿ ಶಿಬಿರ ನಡೆಯುತ್ತದೆ. ಈ ವರ್ಷ ಏಪ್ರಿಲ್ 11ರಿಂದ ಒಂದು ತಿಂಗಳು ಮಕ್ಕಳಿಗಾಗಿ ಬೇಸಿಗೆ ರಂಗಶಿಬಿರ ಆಯೋಜಿಸಲಾಗಿದೆ. 8 ವರ್ಷದಿಂದ 16ವರ್ಷದೊಳಗಿನ ಮಕ್ಕಳಿಗೆ ರಂಗತರಬೇತಿ ಅವಕಾಶ ಕಲ್ಪಿಸಲಾಗಿದೆ. ರಂಗತರಬೇತಿಯ ಜತೆಗೆ, ಮಲ್ಲಕಂಬ ಹತ್ತುವುದು ಹಾಗೂ ಡೊಳ್ಳುಕುಣಿತವನ್ನು ಕಲಿಸಿಕೊಡಲಿದೆ. ಕಲಾವಿದೆ ಸ್ನೇಹ ಜಿ.ಕಪ್ಪಣ್ಣನ ಮಕ್ಕಳಿಗೆ ಜನಪದನೃತ್ಯ ಕಲಿಸಿಕೊಡಲಿದ್ದಾರೆ. ಗೋವಾ ಕಲಾ ಅಕಾಡೆಮಿಯ ಪದ್ಮಶ್ರೀಜೊಸಾಲ್ಕರ್ ಶಿಬಿರದ ನಿರ್ದೇಶಕರಾಗಿದ್ದಾರೆ.

ಖ್ಯಾತ ನಾಮರ ಭೇಟಿ !
ಈ ಗುಬ್ಬಿ ರಂಗಮಂದಿರದಲ್ಲಿ ರಂಗಭೂಮಿ ನಟ ನಾಸಿರುದ್ದೀನ್ ಶಾ ನಿರ್ದೇಶನದ ‘ಇಸ್ಮತ್ ಆಪ್‌ ಕೆ ನಾಮ್’ ನಾಟಕ ಪ್ರದರ್ಶನಗೊಂಡಿದೆ. ಮಹಾರಾಷ್ಟ್ರದ ಲಿಂಗೂನೃತ್ಯ, ತೆಲಂಗಾಣದ ಲಂಬಾಡಿ ನೃತ್ಯ, ಪಶ್ಚಿಮಬಂಗಾಳದ ಮಾಸ್ಕ್ ನೃತ್ಯ ಪ್ರದರ್ಶನವೂ ನಡೆದಿದೆ. ನಾಗಪುರದ ‘ಸೌಥ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್’ನ 120 ಕಲಾವಿದರು 7 ರಾಜ್ಯಗಳ ಬುಡಕಟ್ಟು ಸಂಸ್ಕೃತಿಯನ್ನು ನೃತ್ಯ ಹಾಗೂ ಸಂಗೀತ ಮುಖೇನ ಪ್ರದರ್ಶಿಸಿದ್ದರು. ಛತ್ತಿಸಗಡದ ಗಾಯಕ ರಿತುವರ್ಮ ಪಾಂಡವಾನಿ, ಖ್ಯಾತ ನಾಟಕಕಾರ ಗಿರಿಶ ಕಾರ್ನಾಡ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕಿಕೇಜ್‌ರಂಥ ನೂರಾರು ಖ್ಯಾತನಾಮರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಏ.11ರಿಂದ ಬೇಸಿಗೆ ರಂಗ ಶಿಬಿರ
ಪ್ರತಿ ವರ್ಷ ಮಕ್ಕಳಿಗಾಗಿ ರಂಗತರಬೇತಿ ಶಿಬಿರ ನಡೆಯುತ್ತದೆ. ಈ ವರ್ಷ ಏಪ್ರಿಲ್ 11ರಿಂದ ಒಂದು ತಿಂಗಳು ಮಕ್ಕಳಿಗಾಗಿ ಬೇಸಿಗೆ ರಂಗಶಿಬಿರ ಆಯೋಜಿಸಲಾಗಿದೆ. 8 ವರ್ಷದಿಂದ 16ವರ್ಷದೊಳಗಿನ ಮಕ್ಕಳಿಗೆ ರಂಗತರಬೇತಿ ಅವಕಾಶ ಕಲ್ಪಿಸಲಾಗಿದೆ. ರಂಗತರಬೇತಿಯ ಜತೆಗೆ, ಮಲ್ಲಕಂಬ ಹತ್ತುವುದು ಹಾಗೂ ಡೊಳ್ಳುಕುಣಿತವನ್ನು ಕಲಿಸಿಕೊಡಲಿದೆ. ಕಲಾವಿದೆ ಸ್ನೇಹ ಜಿ.ಕಪ್ಪಣ್ಣನ ಮಕ್ಕಳಿಗೆ ಜನಪದ ನೃತ್ಯ ಕಲಿಸಿ ಕೊಡಲಿದ್ದಾರೆ. ಗೋವಾ ಕಲಾ ಅಕಾಡೆಮಿಯ ಪದ್ಮಶ್ರೀ ಜೊಸಾಲ್ಕರ್ ಶಿಬಿರದ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT