ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳೆ ಹಳೆಯದಾದರೇನು? ಬರಹ ಹೊಸದೇ ಅಲ್ಲವೆ...

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಅಲ್ಲಿ ಅಪಾರ್ಟ್‌ಮೆಂಟ್‌ನ ಗೇಟ್‌ಗೆ ತಾಗಿಕೊಂಡಂತೆ ನೋಟ್‌ಬುಕ್‌ಗಳ ರಾಶಿಯೇ ಇತ್ತು. ಅದು ಗುಜರಿ ಅಂಗಡಿಯಲ್ಲಿ ಪೇರಿಸಿ ಇಟ್ಟಂತೆ ಕಂಡಿತು. ಇಬ್ಬರು ಯುವಕರು ಬಂದು ಆ ರಾಶಿಯಿಂದ ಒಂದಿಷ್ಟು ನೋಟ್‌ಬುಕ್‌ಗಳನ್ನು ಹೊತ್ತು ನಡೆದರು. ನಾನು ಅವರನ್ನೇ ಹಿಂಬಾಲಿಸಿದೆ. ಅಲ್ಲಿ ರಸ್ತೆಯಲ್ಲೇ ನೋಟ್‌ಬುಕ್‌ಗಳನ್ನು ಹಿಡಿದು ಹತ್ತಾರು ಯುವಕ, ಯುವತಿಯರು ಕುಳಿತಿದ್ದರು. ನೋಡನೋಡುತ್ತಿದ್ದಂತೆಯೇ ನೂರಾರು ನೋಟ್‌ಬುಕ್‌ಗಳಲ್ಲಿನ ಖಾಲಿಹಾಳೆಗಳನ್ನು ಹರಿದು ಒಂದೆಡೆ ಜೋಡಿಸಿದರು. ಅವರಲ್ಲಿ ಬಹುತೇಕರು ಹಿಂದಿ ಭಾಷಿಕರು ಹಾಗೂ ಕಾಲೇಜೊಂದರ ವಿದ್ಯಾರ್ಥಿಗಳು. ಆಶ್ಚರ್ಯದಿಂದ ವಿಚಾರಿಸುತ್ತಿರುವಾಗ ಅಲ್ಲಿಗೆ ಅಮಿತ್‌ ಅಮರ್‌ನಾಥ್‌ ಬಂದರು.

ಅಮಿತ್‌ ಅಮರ್‌ನಾಥ್‌ ಯೂತ್‌ ಫಾರ್‌ ಪರಿವರ್ತನ್‌ (ವೈಎಫ್‌ಪಿ) ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ. ‘ನಾವು ರಸ್ತೆಬದಿ ಕಸ ಬಿಸಾಡದಂತೆ ಗೋಡೆಗಳಿಗೆ ರಂಗು ತುಂಬಿ ಜಾಗೃತಿ ಮೂಡಿಸುತ್ತಿದ್ದೆವು. ಇದೀಗ ಮಕ್ಕಳ ಬಾಳಲ್ಲಿ ಅಕ್ಷರದ ರಂಗು ತುಂಬುವ ಕಾರ್ಯದಲ್ಲಿದ್ದೇವೆ’ ಎಂದರು ಅಮಿತ್‌. ರಿಸೈಕ್ಲಥಾನ್‌–ಇದು ಈ ಯೋಜನೆಗೆ ಅವರಿಟ್ಟ ಹೆಸರು. ‘ಈ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಬಂದಿದ್ದಾರೆ. ವಾರಾಂತ್ಯದ ಚಟುವಟಿಕೆಗಳನ್ನು ಬದಿಗಿಟ್ಟು ನಮ್ಮ ಜೊತೆ ಕೈಜೋಡಿಸಿದ್ದಾರೆ’ ಎಂದು ರಿಸೈಕ್ಲಥಾನ್‌ ಬಗ್ಗೆ ವಿವರಿಸುತ್ತಾ ಹೋದರು.

ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಯ ಸದಸ್ಯರು ನೋಟ್‌ಬುಕ್‌ ತಯಾರಿಸುತ್ತಿರುವುದು

ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಯ ಸದಸ್ಯರು ನೋಟ್‌ಬುಕ್‌ ತಯಾರಿಸುತ್ತಿರುವುದು

-ಪ್ರಜಾವಾಣಿ ಚಿತ್ರ

ಏನಿದು ರಿಸೈಕ್ಲಥಾನ್‌?

ವೈಎಫ್‌ಪಿ ಪ್ರಕಾರ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ನಗರದಲ್ಲೇ 100 ಕೋಟಿ ಖಾಲಿ ಹಾಳೆಗಳು ಬಳಕೆಯಾಗದೇ ವ್ಯರ್ಥವಾಗುತ್ತಿವೆ. ಇದು 472 ಟನ್‌ ಪೇಪರ್‌ಗೆ ಸಮ. ಇಷ್ಟೊಂದು ಪ್ರಮಾಣದ ಪೇಪರ್‌ ಮಾಡಲು ಎಂಟು ಸಾವಿರ ಮರಗಳು ಬೇಕಾಗುತ್ತವೆ. ಹೀಗೆ ವ್ಯರ್ಥವಾಗಿ ಗುಜರಿ ಸೇರುವ ನೋಟ್‌ಬುಕ್‌ ಹಾಳೆಗಳನ್ನು ಬಳಸಿಕೊಂಡೇ ಹೊಸ ನೋಟ್‌ಬುಕ್‌ಗಳನ್ನು ತಯಾರಿಸುವುದು ರಿಸೈಕ್ಲಥಾನ್‌. 2018–19ರಲ್ಲಿ ರಿಸೈಕ್ಲಥಾನ್‌ ಆರಂಭವಾಗಿತ್ತು. ಆಗ ಸಣ್ಣ ಪ್ರಮಾಣದಲ್ಲಿ ನಡೆದಿದ್ದ ಈ ಯೋಜನೆ ಕೋವಿಡ್‌ ಕಾರಣದಿಂದ ಮೂರು ವರ್ಷ ಸ್ಥಗಿತಗೊಂಡಿತ್ತು. 2023ರಲ್ಲಿ ರಿಸೈಕ್ಲಥಾನ್‌ ಪುನರಾರಂಭಿಸಿದ ಸಂದರ್ಭದಲ್ಲಿ ಏಳು ಸಂಗ್ರಹ ಕೇಂದ್ರಗಳಿಂದ ಎರಡೂವರೆ ಟನ್‌ ನೋಟ್‌ಬುಕ್‌ಗಳು ದಾನವಾಗಿ ಬಂದವು. ಅವುಗಳಲ್ಲಿ 1,350 ಕೆ.ಜಿ. ಬಳಕೆಯಾಗದ ಹಾಳೆಗಳು ಸಿಕ್ಕವು. ಅವನ್ನು ಬಳಸಿಕೊಂಡು 3,300 ಹೊಸ ನೋಟ್‌ಬುಕ್‌ಗಳನ್ನು ತಯಾರಿಸಲಾಗಿತ್ತು. ಈ ಅಂದಾಜಿನ ಪ್ರಕಾರ ಸುಮಾರು 17–20 ಮರಗಳಿಗೆ ಕೊಡಲಿ ಏಟು ಬೀಳುವುದು ತಪ್ಪಿತು. ಆ ನೋಟ್‌ಬುಕ್‌ಗಳು ಚಾಮರಾಜನಗರ ಜಿಲ್ಲೆಯ ಏಳು ಶಾಲೆಗಳು ಸೇರಿ ರಾಜ್ಯದ 26 ಸರ್ಕಾರಿ ಶಾಲೆಗಳ ಮಕ್ಕಳ ಕೈಸೇರಿದವು.

‘ನಾನು ವ್ಯವಸಾಯ ಮಾಡಿಕೊಂಡು ಇಬ್ಬರು ಹೆಣ್ಣುಮಕ್ಕಳನ್ನು ಓದಿಸುತ್ತಿದ್ದೇನೆ. ಹಿರಿಮಗಳು ಸಿದ್ಧಯ್ಯನಪುರದ ಪ್ರೈಮರಿ ಸ್ಕೂಲ್‌ನಲ್ಲಿ ಓದುತ್ತಿದ್ದಾಳೆ. ಕಳೆದ ವರ್ಷ ಆಕೆ ಕೈಸೇರಿದ ಉಚಿತ ನೋಟ್‌ಬುಕ್‌ನಿಂದಾಗಿ ಓದಿಗೆ ಅನುಕೂಲವಾಯಿತು, ನನಗೆ ಕೊಂಚ ಹಣ ಉಳಿತಾಯವಾಯಿತು’ ಎಂದು ಚಾಮರಾಜನಗರ ಜಿಲ್ಲೆಯ ಕೆಂಪನಪುರದ ನಾಗಣ್ಣ ಕೃತಜ್ಞಾಭಾವದಿಂದ ಹೇಳುತ್ತಾರೆ.

ಮರುಬಳಕೆ ಹೇಗೆ?: ಬೆಂಗಳೂರು ನಗರದ ಹನ್ನೊಂದು ಕಡೆ ಇರುವ ಸಂಗ್ರಹ ಕೇಂದ್ರಗಳಿಗೆ ದಾನವಾಗಿ ನೀಡುರುವ ನೋಟ್‌ಬುಕ್‌ಗಳನ್ನು ಸಂಗ್ರಹಿಸಿ ಉತ್ತರಹಳ್ಳಿಯಲ್ಲಿರುವ ವೈಎಫ್‌ಪಿ ಕೇಂದ್ರಕ್ಕೆ ತರಲಾಗುತ್ತದೆ. ಅಲ್ಲಿ ಸ್ವಯಂ ಸೇವಕರು ದಿನಕ್ಕೆ ಎರಡು ಪಾಳಿಯಲ್ಲಿ ಖಾಲಿಹಾಳೆಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಾರೆ. ಈ ಕೆಲಸ ಮುಂದಿನ ನಾಲ್ಕೈದು ವಾರಾಂತ್ಯಗಳಲ್ಲಿ ನಡೆಯಲಿದೆ.

ರಿಸೈಕ್ಲಥಾನ್‌ನಲ್ಲಿ ಸಂಗ್ರಹವಾದ ನೋಟ್‌ಬುಕ್‌ಗಳು

ರಿಸೈಕ್ಲಥಾನ್‌ನಲ್ಲಿ ಸಂಗ್ರಹವಾದ ನೋಟ್‌ಬುಕ್‌ಗಳು

-ಪ್ರಜಾವಾಣಿ ಚಿತ್ರ

ಈ ವರ್ಷ 5 ಸಾವಿರ ಪುಸ್ತಕ ಗುರಿ

ವೈಎಫ್‌ಪಿಗೆ ಈಗಾಗಲೇ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಿಂದ ಎರಡು ಟನ್‌ ನೋಟ್‌ಬುಕ್‌ಗಳು ಬಂದಿವೆ. ಈ ವರ್ಷ ಸಂಗ್ರಹ ಕೇಂದ್ರಗಳು ಹನ್ನೊಂದಕ್ಕೆ ಏರಿಕೆಯಾಗಿವೆ. ಈಗಾಗಲೇ ರಿಸೈಕ್ಲಥಾನ್‌ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಅಂದಾಜು ಐದೂವರೆ ಟನ್‌ ನೋಟ್‌ಬುಕ್‌ಗಳನ್ನು ಸಿದ್ಧಪಡಿಸುವ ವಿಶ್ವಾಸ ಹೊಂದಲಾಗಿದೆ. ಅವುಗಳಲ್ಲಿ ಸುಮಾರು ಎರಡರಿಂದ ಮೂರು ಟನ್‌ ಬಳಕೆಯಾಗದ ಹಾಳೆಗಳು ದೊರೆಯಲಿವೆ. ಅವುಗಳೆಲ್ಲವುದರಿಂದ ತಲಾ 200 ಪುಟಗಳ ಐದು ಸಾವಿರಕ್ಕೂ ಅಧಿಕ ನೋಟ್‌ಬುಕ್‌ಗಳನ್ನು ತಯಾರಿಸುವ ಯೋಜನೆಯಿದೆ. ವೈಎಫ್‌ಪಿಯ ಸ್ವಯಂಸೇವಕರು ಕಲಿತ ಹಳ್ಳಿಗಳ ಸರ್ಕಾರಿ ಶಾಲೆಗಳಿಗೂ ಈ ನೋಟ್‌ಬುಕ್‌ಗಳನ್ನು ಹಂಚಲಾಗಿದೆ. ಈ ಬಾರಿ ನೋಟ್‌ಬುಕ್‌ಗಳನ್ನು ಕರಾವಳಿ ಭಾಗದ ಸರ್ಕಾರಿ ಶಾಲೆಗಳಿಗೆ ನೀಡಲು ನಿರ್ಧರಿಸಿದೆ.

‘ಕಳೆದ ವರ್ಷ ಪುಟಾಣಿಗಳ ಕೈಯಲ್ಲಿ ನೋಟ್‌ಬುಕ್‌ಗಳನ್ನು ಇಟ್ಟಾಗ ಅವರಿಗಾದ ಸಂತೋಷ ಅವರ್ಣನೀಯ. ನೋಟ್‌ಬುಕ್‌ಗಳನ್ನು ಮೇಲಕ್ಕೆ ಎತ್ತಿಹಿಡಿದು ಕುಣಿದು ಕುಪ್ಪಳಿಸಿದಾಗ ಸತತ ನಾಲ್ಕೈದು ವಾರ ನಾವು ಪಟ್ಟ ಶ್ರಮ ಸಾರ್ಥಕ ಎನಿಸಿತು’ ಎಂದು ಅಮಿತ್‌ ಖುಷಿಯಿಂದ ಹೇಳಿದರು.

ಈ ವರ್ಷ ಬೆಂಗಳೂರಿನ ಕೆಲವು ಅಪಾರ್ಟ್‌ಮೆಂಟ್‌ನಲ್ಲಿರುವ ಸಂಘಗಳೂ ಈ ಯೋಜನೆಗೆ ನೂರಾರು ಸಂಖ್ಯೆಯಲ್ಲಿ ನೋಟ್‌ಬುಕ್‌ಗಳನ್ನು ದಾನ ನೀಡಿರುವುದು ವಿಶೇಷ.

ನಗರ ಪ್ರದೇಶಗಳಲ್ಲಿ ಕಸ ಎಸೆಯುತ್ತಿದ್ದ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ರಂಗು ತುಂಬಿ ಬದಲಾವಣೆ ತರುತ್ತಿದ್ದ ವೈಎಫ್‌ಪಿ ಇದೀಗ ಪುಟಾಣಿಗಳ ಬದುಕಿನಲ್ಲಿ ಅಕ್ಷರದ ರಂಗು ತುಂಬುತ್ತಿರುವುದು ಶ್ಲಾಘನೀಯ.

ಕುಣಿದು ಕುಪ್ಪಳಿಸಿದ ಮಕ್ಕಳು

‘ತಮಿಳುನಾಡು ಗಡಿಯಲ್ಲಿರುವ ನಮ್ಮ ಶಾಲೆಗೆ ಬರುವ ಶೇಕಡ 80ರಷ್ಟು ಮಕ್ಕಳ ಪೋಷಕರು ಕೂಲಿ ಕಾರ್ಮಿಕರು. ಅವರಿಗೆ ಒಮ್ಮೆಯೇ ನಾಲ್ಕೈದು ನೋಟ್‌ಬುಕ್‌ಗಳನ್ನು ಖರೀದಿಸುವ ಸಾಮರ್ಥ್ಯವಿಲ್ಲ. ಆದ್ದರಿಂದ ನಾವು ಹೇಳಿದ ಎರಡು ವಾರಗಳ ಬಳಿಕ ನೋಟ್‌ಬುಕ್‌ ತರುತ್ತಿದ್ದವು. ಅಷ್ಟು ದಿನ ಪಾಠ ಬರೆದುಕೊಳ್ಳುತ್ತಿರಲಿಲ್ಲ. ಹೀಗಿರುವಾಗ ಕಳೆದ ವರ್ಷ ವೈಎಫ್‌ಪಿಯಿಂದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತವಾಗಿ 210 ವಿದ್ಯಾರ್ಥಿಗಳಿಗೆ ತಲಾ ಮೂರು ನೋಟ್‌ಬುಕ್‌ಗಳು ಸಿಕ್ಕವು. ಇದು ಅವರ ಶಿಕ್ಷಣದ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ. ಕೆಲ ಮಕ್ಕಳು ಅವುಗಳಲ್ಲಿ ಪೆನ್ಸಿಲ್‌ನಲ್ಲಿ ಬರೆದು, ಹಳೆಯದನ್ನು ಅಳಿಸಿ ಮತ್ತೆ ಮತ್ತೆ ಬಳಸುತ್ತಿದ್ದಾರೆ’ ಎಂದು ಚಾಮರಾಜನಗರ ಜಿಲ್ಲೆಯ ಸಿದ್ಧಯ್ಯನಪುರದ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್‌ ಹೇಳಿದರು.

ವಾರಾಂತ್ಯದಲ್ಲಿ ಗೆಳೆಯರ ಜೊತೆ ತಿರುಗಾಡಲು ಹೋಗಬಹುದು. ಆದರೆ ರಿಸೈಕ್ಲಥಾನ್‌ ಮೂಲಕ ಸಮಾಜಕ್ಕೆ ಸಹಾಯ ಮಾಡುವ ಕನಸು ನನ್ನದು. ಈಗ ನಾನೊಬ್ಬ ಬಂದಿದ್ದು ಮುಂದಿನ ವಾರದಿಂದ ಸ್ನೇಹಿತರನ್ನು ಕರೆದುಕೊಂಡು ಬರಲಿದ್ದೇನೆ.
–ನಾಗಭೂಷಣ್‌, ಬಿಎಂಎಸ್‌ ಕಾಲೇಜು ಎಂಜಿನಿಯರಿಂಗ್‌ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT