ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ಸಂದೇಶ ಸಾರಿದ ಸು‍ಪ್ರೀಂ ಕೋರ್ಟ್‌

Last Updated 6 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಋತುಮತಿಯಾಗುವ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಇದ್ದ ನಿಷೇಧ ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೂಲಕ ಸುಪ್ರೀಂ ಕೋರ್ಟ್‌, ವೈಯಕ್ತಿಕ ಘನತೆಗಾಗಿ ಹೋರಾಟ ನಡೆಸಿದ್ದ ಮಹಿಳೆಯರ ಬೆಂಬಲಕ್ಕೆ ನಿಂತಿದೆ.

ಶತಮಾನಗಳ ಇತಿಹಾಸ ಹೊಂದಿರುವ ಶಬರಿಮಲೆಗೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರ ವಿರುದ್ಧ ಹಲವು ಮಹಿಳೆಯರು ಸುಪ್ರೀಂ ಮೆಟ್ಟಿಲೇರಿದ್ದರು. ದೇವರ ಮುಂದೆ ಎಲ್ಲರೂ ಸಮಾನರು ಎಂದು ಪರಿಗಣಿಸಿದ ಕೋರ್ಟ್‌ ದೇವಸ್ಥಾನದೊಳಗೆ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂದು ನಿರ್ದೇಶನ ನೀಡಿದೆ. ಪ್ರವೇಶ ನಿರಾಕರಣೆಯಿಂದಾಗಿ ಹಿಂದೂ ಮಹಿಳೆಯರ ಧಾರ್ಮಿಕ ನಂಬಿಕೆಗೆ ಧಕ್ಕೆ ಬಂದಿತ್ತು. ಅಲ್ಲದೇ, ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಘನತೆ, ಸಮಾನತೆಯ ಆಶಯಗಳಿಗೆ ವಿರುದ್ಧವಾಗಿತ್ತು ಎಂಬುದನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ವಿಶ್ಲೇಷಿಸಿದೆ.

ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ, ‘ಸಂಪ್ರದಾಯದ ಹೆಸರಿನಲ್ಲಿ ನಮ್ಮ ಮೇಲಿನ ಸಂಕೋಲೆಗಳನ್ನು ಕಿತ್ತೆಸೆದು ಎದ್ದು ನಿಲ್ಲಬೇಕು’ ಎಂಬ ಹೇಳಿಕೆಯನ್ನೂ ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಮುಟ್ಟಿನ ಕಾರಣಕ್ಕಾಗಿ ಅಥವಾ ಶುದ್ಧೀಕರಣದ ಹೆಸರಿನಲ್ಲಿ ಬರೀ ಶಬರಿಮಲೆ ಅಷ್ಟೇ ಅಲ್ಲ ಯಾವುದೇ ಸಂಸ್ಥೆಗಳಲ್ಲಿಯೂ ತಾರತಮ್ಯ ಮಾಡುವಂತಿಲ್ಲ. ಬಾಲಕಿಯರು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ವೈಯಕ್ತಿಕ ಘನತೆಯನ್ನು ರಕ್ಷಿಸಬೇಕಿದೆ ಎಂದೂ ಹೇಳಿದೆ.

ಬರೀ ದೇವಸ್ಥಾನ ಅಷ್ಟೇ ಅಲ್ಲದೇ ಮಹಿಳೆಯರು ತಮ್ಮ ಮನೆಯಲ್ಲಿಯೇ ಹಲವು ಬಾರಿ ಅವಮಾನ ಅನುಭವಿಸುವಂತಾಗಿದೆ. ಮನೆಯಲ್ಲಿನ ಕೆಲ ವಸ್ತುಗಳನ್ನು ಮುಟ್ಟಿನ ಸಂದರ್ಭದಲ್ಲಿ ಸ್ಪರ್ಶಿಸುವಂತಿಲ್ಲ. ಇಂತಹ ಹಲವು ಘಟನೆಗಳು ದೇಶದಾದ್ಯಂತ ಮಹಿಳೆಯರಿಗೆ ಅಪಮಾನ ಹಾಗೂ ತಳಮಳಗಳನ್ನು ಮೂಡಿಸಿದೆ. ಇಂತಹ ಪ್ರಕರಣಗಳಿಂದಾಗಿ ವೈಯಕ್ತಿಕ ಘನತೆಗೆ ಸಾಕಷ್ಟು ಘಾಸಿಯಾಗಿತ್ತಲ್ಲದೇ ತಮ್ಮ ಅಸ್ಮಿತೆಯನ್ನು ಮೂಡಿಸಲೂ ತೊಡಕಾಗಿತ್ತು.

ತೀರ್ಪು ಬರೆಯುವ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವಿ.ಚಂದ್ರಚೂಡ್‌ ಅವರು, ಸಾಮಾಜಿಕವಾಗಿ ಅಬಲರಾದ ವ್ಯಕ್ತಿಗಳು ಹಾಗೂ ಸಮುದಾಯಗಳ ಹಕ್ಕುಗಳ ಚಲಾವಣೆಗೆ ಸಂವಿಧಾನವು ಅವಕಾಶ ನೀಡುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವಾಗಿಸಬೇಕಿದೆ. ಮುಟ್ಟಿನ ಕಾರಣಕ್ಕಾಗಿ ವಾತಾವರಣ ಮಲಿನವಾಗುತ್ತದೆ ಎಂಬ ಧೋರಣೆಯು ಒಂದು ಬಗೆಯ ಅಸ್ಪೃಶ್ಯತೆ. ಇದು ಇನ್ನೂ ಮುಂದುವರಿಯಲು ಸಂವಿಧಾನ ಅವಕಾಶ ನೀಡುವುದಿಲ್ಲ. ಮಹಿಳೆ ಎನ್ನುವ ಕಾರಣಕ್ಕಾಗಿ ಆಕೆಯನ್ನು ಧಾರ್ಮಿಕ ವಿಧಿಗಳಿಂದ ಹೊರಗಿಡುವುದು ತಪ್ಪು. ಇಂತಹ ಅಸಮಾನತೆಗಳು ಅಂತಿಮವಾಗಿ ಜಾತಿ ಹಾಗೂ ಲಿಂಗ ತಾರತಮ್ಯದಂತೆಯೇ ಆಗುತ್ತದೆ’ ಎಂದಿದ್ದಾರೆ.

ಭಾರತದಲ್ಲಿನ ಜಾತಿ ವ್ಯವಸ್ಥೆಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಜಾತಿ ವ್ಯವಸ್ಥೆಯನ್ನು ಪೋಷಿಸುವ ರೀತಿಯಲ್ಲಿಯೇ ಮಹಿಳೆಗೆ ಸಮಾನ ಅವಕಾಶಗಳನ್ನು ನೀಡಲು ನಿರಾಕರಿಸಿದ ವಿಚಾರ ಮನುಸ್ಮೃತಿಯಲ್ಲಿದೆ. ಜಾತಿ ವ್ಯವಸ್ಥೆಯನ್ನು ಮಹಿಳೆ ಹಾಗೂ ಅವರ ಲೈಂಗಿಕತೆಯನ್ನು ನಿಯಂತ್ರಿಸುವುದರ ಮೂಲಕ ಮುಂದುವರಿಸಬಹುದಾಗಿದೆ. ಮಹಿಳೆಯನ್ನು ಎಲ್ಲ ವಿಧದಲ್ಲಿಯೂ ಕಟ್ಟಿ ಹಾಕುವ ಮೂಲಕ ತಥಾಕಥಿತ ಜಾತಿ ಪದ್ಧತಿ ಮುಂದುವರಿಯಬೇಕು ಎಂಬ ದುಷ್ಟ ಹುನ್ನಾರ ಇದೆ’ ಎಂದಿದ್ದರು.

ಜಾತಿ ಪದ್ಧತಿಯ ವಿರುದ್ಧದ ಹೋರಾಟವನ್ನು ಅಂಬೇಡ್ಕರ್‌ ಮಾನವ ಘನತೆಯ ಹೋರಾಟವೆಂದೇ ಭಾವಿಸಿದ್ದರು. ಮಾನವ ಘನತೆಗಾಗಿ ನಡೆದ ಹೋರಾಟ ಅವಶ್ಯವಾಗಿ ಶುದ್ಧತೆ ಹಾಗೂ ಮಲಿನತೆಯ ಅಪಸವ್ಯಗಳನ್ನೂ ವಿರೋಧಿಸಬೇಕು. ಏಕೆಂದರೆ, ಇದು ಮಹಿಳೆಯರನ್ನು ಎಲ್ಲ ಆಚರಣೆಗಳಲ್ಲಿಯೂ ಹೊರಗಿಟ್ಟಿರುತ್ತದೆ ಎಂದು ಪ್ರತಿಪಾದಿಸಿದ್ದರು. ಪುರುಷ ಪ್ರಧಾನ ವ್ಯವಸ್ಥೆ ಹಾಗೂ ಜಾತಿ ಪದ್ಧತಿ ಒಂದೇ ನಾಣ್ಯದ ಎರಡು ಮುಖಗಳು. ಇವು ಅಸಮಾನತೆ ಹಾಗೂ ಮಾನವ ಘನತೆಯನ್ನು ಅವಮಾನಿಸುತ್ತವೆ. ಪುರುಷ ಪ್ರಧಾನ ಹೋರಾಟವೂ ಜಾತಿಪದ್ಧತಿ ವಿರೋಧಿಸುವುದಕ್ಕೂ ಮುಂದಾಗಬೇಕು ಎಂದಿದ್ದರು.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ವ್ರತ ಮಾಡುವವರು ಹಾಗೂ ದರ್ಶನ ಪಡೆಯುವವರು ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. 10ರಿಂದ 50 ವರ್ಷ ವಯೋಮಾನದ ಬಾಲಕಿಯರು ಹಾಗೂ ಮಹಿಳೆಯರಿಗೆ ಋತು ಸ್ರಾವ ಆಗುವುದರಿಂದ ಬ್ರಹ್ಮಚರ್ಯ ಪಾಲಿಸಿದ ಅಯ್ಯಪ್ಪಸ್ವಾಮಿ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ಬರುತ್ತದೆ. ಹಾಗಾಗಿ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು ಎಂಬ ವಾದವು ವಿಚಾರಣೆಯ ಸಂದರ್ಭದಲ್ಲಿ ಕೇಳಿ ಬಂದಿತ್ತು.

ಈ ವಾದವನ್ನು ತಳ್ಳಿ ಹಾಕಿದ್ದ ನ್ಯಾಯಪೀಠವು, ಇದು ಊಹೆಯಿಂದ ಕೂಡಿದ ವಾಸ್ತವಕ್ಕೆ ದೂರವಾದ ಮಾತು ಎಂದಿತ್ತು. ಬ್ರಹ್ಮಚರ್ಯೆ ಪಾಲನೆ ಎಂಬ ಭಾರವನ್ನು ಒತ್ತಾಯಪೂರ್ವಕವಾಗಿ ಮಹಿಳೆಯರ ಮೇಲೆ ಹೇರುವುದು ಸಲ್ಲದು ಎಂದಿತು. ಇದು ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಅವರ ಮೇಲೆ ಹಲವು ನಿರ್ಬಂಧಗಳನ್ನು ಹೇರುವ ಹಾಗೂ ಇರುವ ಅಲ್ಪಸ್ವಲ್ಪ ಸ್ವಾತಂತ್ರ್ಯಕ್ಕೂ ಕತ್ತರಿ ಹಾಕುವುದಕ್ಕೆ ಸಮನಾದುದು ಎಂದು ಅಭಿಪ್ರಾಯಪಟ್ಟಿದೆ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಬಳಿಕ ನಡೆದ ಹೋರಾಟವು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಬೇಕು ಎಂಬುದನ್ನೂ ಧ್ವನಿಸಿತ್ತು. ವೈಯಕ್ತಿಕ ಸ್ವಾಯತ್ತತೆ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯೇ ಮಹಿಳೆಯರ ರಕ್ಷಕ ಎಂಬ ಹಳೆಯ ನಂಬಿಕೆಯನ್ನು ತಿರಸ್ಕರಿಸಿತು.

‘26 ಜನವರಿ 1950ರಂದು ನಮ್ಮ ಜೀವನದ ಹಲವು ವೈರುಧ್ಯಗಳನ್ನು ಎದುರಿಸಬೇಕಿದೆ.ರಾಜಕೀಯದಲ್ಲಿ ನಾವು ಸಮಾನತೆ ಸಾಧಿಸಿದ್ದೇವೆ. ಆದರೆ, ಸಾಮಾಜಿಕ ಹಾಗೂ ಆರ್ಥಿಕ ಜೀವನದಲ್ಲಿ ಅಸಮಾನರಾಗಿಯೇ ಮುಂದುವರಿಯಲಿದ್ದೇವೆ’ ಎಂದಿದ್ದರು ಡಾ.ಬಿ.ಆರ್‌. ಅಂಬೇಡ್ಕರ್‌.

ಸಮಾನತೆ, ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನವನ್ನು ನಿಯಂತ್ರಿಸುವ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಮುಖ್ಯಸ್ಥರು ‍ಪತ್ರಿಕೆಗೆ ನೀಡಿದ ಹೇಳಿಕೆಯನ್ನು ನಾವು ನೆನಪಿಸಿಕೊಳ್ಳಬೇಕು. ‘ನನ್ನ ಹೆಣ್ಣು ಮಕ್ಕಳು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ. ಇದು ಅವರ ನಡೆಯ ಕುರಿತಾಗಿ ನನ್ನದೇ ನಿರ್ಧಾರ’ ಎಂದಿದ್ದರು!

ನಾವು ವೈರುಧ್ಯಗಳಿಂದ ಕೂಡಿಸ ಸಮಾಜದಲ್ಲಿದ್ದೇವೆ ಎನ್ನಿಸುವುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಸುಪ್ರೀಂಕೋರ್ಟ್‌ ಮಹಿಳೆಯರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಿದ ಮೇಲೆಯೂ ತಿರುವಾಂಕೂರು ದೇವಸ್ವಂ ಮಂಡಳಿಯು ಮಾಜಿ ಮುಖ್ಯಸ್ಥರ ಈ ಹೇಳಿಕೆಯು ಇನ್ನೂ ಸಮಾಜವು ಹೊಂದಿರುವ ಮನಸ್ಥಿತಿಯನ್ನೇ ಸೂಚಿಸುತ್ತದೆ.

ಸುಪ್ರೀಂಕೋರ್ಟ್‌ ಈ ತೀರ್ಪಿನ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಹಜ ನ್ಯಾಯವನ್ನು ಎತ್ತಿ ಹಿಡಿದಿದೆ. ಆದರೆ, ಸಮಾಜದ ಪೂರ್ವಾಗ್ರಹಗಳು, ತಾರತಮ್ಯ ನೀತಿ, ಹಕ್ಕುಗಳನ್ನು ನಿಗ್ರಹಿಸುವ ಧೋರಣೆ ಇನ್ನಷ್ಟು ಬದಲಾಗಬೇಕಿದೆ.

ಈ ರೀತಿಯಾಗಿ ಸಾಮಾಜಿಕ ಶ್ರೇಣಿಯ ಸಂಕೋಲೆಗಳನ್ನು ಮುರಿಯಲು ಮತ್ತು ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸಹಜ ನ್ಯಾಯವನ್ನು ಖಾತ್ರಿಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಅನುವಾದ: ಮನೋಜ್‌ಕುಮಾರ್‌ ಗುದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT