ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಹೆಸರಲ್ಲೇನಿದೆ ಅಂತೀರಾ?

Last Updated 10 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಈ ಅಡ್ಡ ಹೆಸರು ಅಥವಾ ಸರ್ ನೇಮ್ ಎನ್ನುವ ಪದ ನನಗಂತೂ ಬಹಳ ಕಡೆ ಪೇಚಾಟಕ್ಕೆ ಸಿಲುಕಿಸಿದೆ. ಅಡ್ಡ ಹೆಸರಿನಿಂದ ಬಹಳ ಉದ್ದುದ್ದ ಅನುಭವಗಳಾಗಿವೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಈಗ ಎಲ್ಲ ಊರಿನ ಜನರೂ ಎಲ್ಲ ಕಡೆ ಕೆಲಸ, ವಿದ್ಯಾಭ್ಯಾಸಕ್ಕೆ ಹೋಗುತ್ತಿರುವುದರಿಂದ ಅಡ್ಡ ಹೆಸರಿನ ಫಜೀತಿ ಅಷ್ಟು ಗೊತ್ತಾಗಲಿಕ್ಕಿಲ್ಲ.

ಆದರೆ ಈಗ ಇಪ್ಪತ್ತೈದು ವರ್ಷದ ಕೆಳಗೆ ಹಾಗಿರಲಿಲ್ಲ. ಚಿತ್ರದುರ್ಗದವರಾದ ನಮಗೆ ಅಡ್ಡ ಹೆಸರೆಂಬುದೊಂದು ಇರುತ್ತದೆ ಎಂದೇ ಗೊತ್ತಿರಲಿಲ್ಲ. ನಮ್ಮ ನಮ್ಮ ಹೆಸರಿನ ಮುಂದೆ ಅಥವಾ ಹಿಂದೆ ಅಪ್ಪನ ಅಥವಾ ಅದರ ಜೊತೆ ಅಜ್ಜನ ಇನಿಷಿಯಲ್ಸ್ ಇಟ್ಟರೆ ಹೆಸರು ಪೂರ್ಣವಾದಂತೆ. ಯಾವಾಗ ಅಪ್ಪನಿಗೆ ಹುಬ್ಬಳಿಗೆ ವರ್ಗವಾಗಿ ನಮ್ಮನ್ನು ಹುಬ್ಬಳ್ಳಿಯ ಕನ್ನಡ ಶಾಲೆಗೆ ಹಚ್ಚಿದರೋ ಶುರುವಾಯಿತು ನೋಡಿ ಫಜೀತಿ.

ಮೊದಲ ದಿನ ಕ್ಲಾಸಿನಲ್ಲಿ ಗುರುಗಳು ‘ನಳಿನಿ. ಟಿ’ ಅಂದ್ರ ಯಾರವ್ವಾ ಅಂತಾ ಕೂಗಿದರು. ನಾನೇ ಎಂದು ಗಾಬರಿಯಿಂದ ಎದ್ದು ನಿಂತೆ.

‘ನಿನ್ನ ಪೂರ್ತಿ ಹೆಸರು ಹೇಳವ್ವಾ’ ಎಂದರು.

‘ನಳಿನಿ. ಟಿ’ ಎಂದು ಉತ್ತರಿಸಿದೆ.

‘ನಿಮ್ಮ ಸರ್ ನೇಮ್ ಹೇಳವ್ವಾ’ ಅಂದರು. ಆಗ ತಲೆ ಕೆರೆದುಕೊಳ್ಳುವಂತಾಯಿತು.

‘ನಮ್ಮೂರಿನ ಶಾಲೆಯಲ್ಲಿ ಎಲ್ಲ ವಿಷಯ ಪಾಠ ಮಾಡಲೂ ಸರ್‌ಗಳಿದ್ದರು, ಯಾವ ಸಾರ್ ಹೆಸರು ಹೇಳಬೇಕು’ ಎನ್ನುತ್ತಿದ್ದಂತೆ ಕ್ಲಾಸಿನವರೆಲ್ಲರೂ ನಗಲು ಶುರು ಮಾಡಿದರು. ಕೊನೆಗೆ ಶಿಕ್ಷಕರು ನಿಮ್ಮ ‘ಮನೀತನದ ಹೆಸರು ಹೇಳವ್ವಾ’ ಎನ್ನುತ್ತಿದ್ದಂತೆ ‘ನನ್ನ ಹೆಸರು ಇಷ್ಟೇ ಸರ್’ ಎನ್ನುವಾಗ ಅದೇನೋ ಘೋರ ತಪ್ಪಾಗಿದೆ ಎಂಬಂತೆ ಕಣ್ಣೀರು ಒತ್ತಿ ಬಂದಿತ್ತು.

ಹೋಗಲಿ ‘ಟಿ’ ಇನಿಷಿಯಲ್ ಅರ್ಥ ಏನು ಎಂದಾಗ ‘ಅದು ಅಪ್ಪನ ಹೆಸರು ತಿಪ್ಪೇಸ್ವಾಮಿ’ ಎಂದು ಹೇಳಿದ್ದೆ. ಅಂದಿನಿಂದ ಪಾಟೀಲ, ಬದಿ, ಮಿರಜಕರ್, ಹೆಗಡೆ, ಭಟ್ ಅಂತಾ ಗೆಳತಿಯರ ಅಡ್ಡ ಹೆಸರು ಕೂಗುವ ಹಾಗೆ ನನ್ನ ಪ್ರೈಮರಿ ಸ್ಕೂಲು ಮುಗಿಯುವ ತನಕವೂ ನನ್ನ ಹೆಸರನ್ನು ತಿಪ್ಪೇಸ್ವಾಮಿ ಎಂದೇ ಕೂಗುತ್ತಿದ್ದರು. ಆಗೆಲ್ಲಾ ತುಂಬಾ ಸಿಟ್ಟು ಬರುತ್ತಿತ್ತು. ಇನ್ನು ನನ್ನ ತಂಗಿಗೂ ಇಂಥಹದ್ದೇ ಅನುಭವವಾಗಿತ್ತು. ಶಾಲೆಯಲ್ಲಿ ಹೆಸರು, ಅಡ್ಡ ಹೆಸರು ಬರೆಯಲು ಕೊಟ್ಟಾಗ ಅಡ್ಡ ಹೆಸರಿನ ಸ್ಥಳದಲ್ಲಿ ಮನೆಯ ಅಡ್ರೆಸ್ ಅನ್ನು ನೀಟಾಗಿ ತುಂಬಿ ಬಂದಿದ್ದಳು.

ಈಗೊಂದು ನಾಲ್ಕು ವರ್ಷದ ಕೆಳಗೆ ಫೇಸ್‍ಬುಕ್ಕಿನಲ್ಲಿ ಅಕೌಂಟ್ ಓಪನ್ ಮಾಡುವಾಗ ಸುಮ್ಮನೆ ಕುತೂಹಲಕ್ಕೆ ನಳಿನಿ ಎನ್ನುವವರ ಹೆಸರಿಗೆ ಸರ್ಚ್ ಕೊಟ್ಟೆ. ಧುಮ್ಮಿಕ್ಕುವ ಜಲಪಾತದಂತೆ ಸಾವಿರಾರು ನಳಿನಿ ಹೆಸರಿನ ಅಕೌಂಟುಗಳು ಸಾಲು ಸಾಲಾಗಿ ಮೂಡಿಬರತೊಡಗಿದವು. ನನ್ನ ಹೆಸರೂ ಇದರಲ್ಲಿ ಮುಳುಗಿ ಹೋಗುವ ಭಯದಲ್ಲಿ ಹೆಸರಿನ ಮುಂದೆ ಯಜಮಾನರ ಹೆಸರನ್ನು ಅಡ್ಡವಾಗಿ ಸೇರಿಸಿಕೊಂಡು ನಳಿನಿಭೀಮಪ್ಪ ಎಂದು ನಮೂದಿಸಿದ್ದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT