ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲ ಶಿಶುಗಳು

ಕವಿತೆ
Last Updated 21 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೆಳಕು ಹಾಗೂ ಕತ್ತಲು
ಹಾಗೆಂದರೇನು?
ಅಂತಹವೆರಡು ಇವೆಯೋ ಅಥವ ಬರೀ ಪದಗಳೋ!?

ಗೆರೆ ಗೀಚಿದಷ್ಟೇ ಸಲೀಸಾಗಿ ವ್ಯತ್ಯಾಸವನ್ನು
ಹೇಳಿಬಿಡುವ ನುರಿತ ನಾಲಿಗೆಗಳ ಹಂಗಿಲ್ಲದೆ
ಬದುಕುವ ಬಡಪಾಯಿಗಳಿಗೆ ಎರಡೂ ಒಂದೆ
ಬೆಳಕೆಂದರೆ ಕತ್ತಲು ಕತ್ತಲೆಂದರೆ ಬೆಳಕು

ಲೋಕದ ವ್ಯವಹಾರದಲ್ಲಿ ಕಣ್ಣಿನ ಜತೆಗಷ್ಟೇ
ಸಂಬಂಧವಿರಿಸಿಕೊಳ್ಳುವ ಅವು
ಒಳಗಿಳಿದಾಗ ಒಂದರೊಳಗೊಂದು ಲೀನವಾಗಿ
ಒಂದೇ ಆಗಿರುತ್ತವೆಯಷ್ಟೆ.

ಅಂದು ಅವಳು ಕೇಳಿದ್ದಳು–
‘ನಾಲ್ಕು ಗೋಡೆಗಳ ಒಳಗೇ ಇರುವ ನಮಗೆ
ಹೊರಗೆ ಅಮಾವಾಸ್ಯೆಯಾದರೇನು ಬೆಳದಿಂಗಳಾದರೇನು
ಎರಡೂ ಒಂದೇ...’ ಎಂದು.

ಉತ್ತರಿಸುವ ಗೊಡವೆಗೆ ಹೋಗದ
ನನ್ನನ್ನು ದುರುಗುಟ್ಟುತ್ತಾ ಮತ್ತೆ ನುಡಿದಿದ್ದಳು
‘ಬೆಳಕು ದೇಹದ ಮೇಲೂ ಬೀಳುತ್ತೆ
ಕಣ್ಣಿನ ಒಳಗೂ ಇಳಿಯುತ್ತದೆ
ದೇಹ ಕಾಣುತ್ತದೆ ಕಣ್ಣು ಕಾಣಿಸುತ್ತದೆ
ಆದರೆ ಒಳಗಣ್ಣಿನೊಳಗೆ ಕತ್ತಲು ಬೆಳಕುಗಳು
ಬೆಸೆದುಕೊಂಡು ಬೆಳದಿಂಗಳು ಹುಟ್ಟುತ್ತದೆ’ ಎಂದು.

ನಿರುತ್ತರನಾಗುತ್ತೇನೆ.

ಬೆಳಕಿನ ಹುಡುಕಾಟದಲ್ಲಿ
ಕತ್ತಲ ಎದೆಯ ಮೇಲೆ ಸರಳರೇಖೆಯಂತೆ ಮಲಗಿದ
ಬೆಳಕಿನ ಕೋಲಿಗೆ ಜೋತುಬಿದ್ದು ಜೀಕಾಡುವ ನಮಗೆ
ನಾಲ್ಕು ಗೋಡೆಗಳ ನಡುವೆ ನಿಂತ ಅವಳಷ್ಟು
ಸಲೀಸಾಗಿ ಮಾತನಾಡಲು ಬರುವುದಿಲ್ಲವಷ್ಟೆ.

ಹಾಗೂ ನಾವೆಲ್ಲರೂ
ಮಧುರವಾಗಿ ಒಂದರೊಳಗೊಂದು ಸೇರುವ ಅವರೆಡರ
ಮಿಥುನ ಕ್ರಿಯೆಯಿಂದ ಗರ್ಭಕಟ್ಟಿದ
ಕತ್ತಲ ಹೊಟ್ಟೆಯಿಂದ ಜಾರಿದ ಬೆಳಕಿನ ಭ್ರಮೆಯ ಅಕಾಲ ಶಿಶುಗಳಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT