ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಂಗೆ ಎಣ್ಣೆ, ಅಕ್ಕಂಗೆ ಪೆಪ್ಸಿ...

ಮಂದಹಾಸ
Last Updated 12 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮದುವೆಗಿಂತ ಹೆಚ್ಚಾಗಿ ಬೀಗರ ಊಟದ ಸಡಗರ ನಮ್ಮ ಕಡೆ. ನನ್ನ ಅಗಣಿತ ಶಿಷ್ಯವೃಂದದಲ್ಲಿ ಓರ್ವನ ಮದುವೆಯ ಬೀಗರ ಔತಣಕ್ಕೆ ಮಧ್ಯಾಹ್ನ ಒಂದೂವರೆಗೆ ಹೋದರೂ ಇನ್ನೂ ಭೋಜನದ ತಯಾರಿ ನಡೆಯುತ್ತಿತ್ತು. ಒಂದೆಡೆ ಮುದ್ದೆ ಕಟ್ಟುವುದು ಭರದಿಂದ ಸಾಗಿದ್ದರೆ ಇನ್ನೊಂದೆಡೆ ಕರೆಂಟು ಹೋದ ಕಾರಣ ತೆಂಗಿನಕಾಯಿ ಮಸಾಲೆ ಆಡಿಸಲು ಅತ್ತಿಂದಿತ್ತ ಪರದಾಡುತ್ತಿದ್ದರು. ಬೀಗರೂಟಕ್ಕೆ ಬೇಗನೆ ಬಂದಿದ್ದಕ್ಕೆ ನನ್ನನ್ನೇ ಹಳಿದುಕೊಳ್ಳಬೇಕಾದರೆ ಮತ್ತೋರ್ವ ಶಿಷ್ಯ ಧರಣಿ ಕಾಣಿಸಿದ.

ಎದುರಿಗಿದ್ದ ಮನೆಯ ಜಗಲಿಯ ಮೇಲೆ ಕುಳಿತೆವು. ಮಾತು ಮೊನ್ನೆ ನಡೆದ ಪಂಚಾಯ್ತಿ ಚುನಾವಣೆಗಳ ಕಡೆಗೆ ಹೊರಳಿತು. ರಾಜಕೀಯವೆಂದರೆ ಕಿವಿ ನಿಮಿರಿಸುವ ಮಂದಿ ಮಾತುಕತೆಗೆ ಮುಂದಾದರು. ಹಳೆಯ ದಿನಗಳ ನೆನಪಿಸಿಕೊಂಡ ಧರಣಿ ‘ಸಾರ್, ನಿಮ್ಮ ಸ್ಟೂಡೆಂಟ್ಸೆಲ್ಲ ಒಂದಲ್ಲ ಒಂದು ಕಡೆ ಸೆಟಲ್ ಆಗೋವ್ರೆ.

ನನ್ಜೊತೆ ಇನ್ನೊಬ್ಬ ಬರೋನು ಸಾರ್, ಸಣಕಲ ನಾಗ ಅನ್ನಿವ್ರಲ್ಲ. ಅವ್ನೀಗ ಕೆಇಬಿ ಕಂಟ್ರಾಕ್ಟ್ ಮಾಡಿಸ್ಕೊಂಡು ಹೊಟ್ಟೆನಾಗ ಆಗವ್ನೆ. ಎಲ್ಲಾ ಸೊಸೈಟಿ, ಬ್ಯಾಂಕ್, ಸಂಘಗಳಲ್ಲಿ ಮೆಂಬರ್‌ಶಿಪ್ ತಗೊಂಡು ದಿನಾ ರಾತ್ರಿ ಒಂದಲ್ಲ ಒಂದು ಪಾರ್ಟಿ ಮಾಡ್ಕೊಂಡು ಅವನ ಹೊಟ್ಟೆ ಈಗ ಮೊಟ್ಟೆ ಆದಂಗೆ ಆಗೈತೆ. ಮೊನ್ನೆ ತಾನೇ ಊರಲ್ಲಿ ಪರಿಷತ್ ಚುನಾವಣೆ ಅಂಥ ಕ್ಯಾಂಡಿಡೇಟ್ ಕಡೆಯಿಂದ ಪಾರ್ಟಿ ಮಾಡ್ಸಿದ್ದ, ಅಂದು ನನ್ನನ್ನೂ ಬಲ್ವಂತ ಮಾಡಿ ಎಳ್ಕೊಂಡೋದ’ ಎಂದ.

‘ಪರಿಷತ್ತು ಚುನಾವಣೇಗೂ ಪಾರ್ಟಿನಾ?’ ಅಂದೆ ನಾನು.

‘ಕೇಳ್ತಿರಲ್ಲ. ಇದ್ದಿದ್ದು ಹನ್ನೆರಡು ಜನ. ಬಿಲ್ ಹದಿನಾರು ಸಾವಿರ. ಆದ್ರೆ ವೋಟರ್ಸ್ ಇದ್ದಿದ್ದು ಎಂಟು ಮಾತ್ರ. ಉಳಿದದ್ದು ನಾನ್ ಮೆಂಬರ್ಸ್’.

‘ಹದಿನಾರು ಸಾವಿರ ಬಿಲ್, ಏನು ಕುಡಿದು ತಿಂದ್ರಪ್ಪ?’

‘ಡ್ರಿಂಕ್ಸ್ ಯಾವುದು ಅಂತೀರಿ, ಬ್ಲೆಂಡರ್ಸ್ ಸ್ಪ್ರೈಡ್! ಮತ್ತೆ ಕೆಲವರಿಗೆ ಅಂಟಿಕುಟಿ, ಕೆಲವರು ನಾವು ಟೀಚರ್ಸ್ ಅಂಥಾ ಟೀಚರ್ಸ್ ಸ್ಪೆಷಲ್ ತಗೊಂಡ್ರು. ಫಿಷಲ್ಲು ಅಷ್ಟೆ, ಸ್ಪೆಷಲ್ಲೂ. ಅಂಜಲಿ, ಪಾಂಪ್ಲೆಂಟು ಫಿಶ್. ಸಿಂಗಲ್ ಮೀನಿಗೆ ಮುನ್ನೂರು ರೂಪಾಯಿ’.

‘ಏಂಜಲ್ ಪಿಶ್ ಇರ್ಬೇಕು ಕಣೋ ಅದು’.

‘ಹುಂ ಅದೇ, ಚಿಕನ್ ಚಿಲ್ಲಿ – ಮಟನ್ ಮಸಾಲ, ಪೋರ್ಕ್‌ಡ್ರೈ. ಎಲ್ರು ಕೆಚ್ಚಿ ಬಿಸಾಕಿದ್ರೂ. ಯಾರಿಗೆ ಏನು ಬೇಕು ಅದೇ?’.

‘ಬರಿ ಸಿಟೀಲಿ ಅಷ್ಟೆ ಅಲ್ಲ. ಹಳ್ಳೀಲೂ ಇದೇ ಕಥೆ’ ಎಂದು ಜಗಲಿಯ ಮೇಲಿದ್ದವ ಮಾತಿಗಿಳಿದ. ‘ರಿಸರ್ವೇಷನ್ ಇರೋ ಕಡೆ ಕಮ್ಮಿ. ಅದ್ರೆ ಜನರಲ್ ಸೀಟ್ ಇರೋ ಕಡೆ ಅಂಥೂ ಭಯಂಕರ. ಅಣ್ಣಂಗೆ ಎಣ್ಣೆ, ಅಕ್ಕಂಗೆ ಪೆಪ್ಸಿ, ಮಕ್ಕಳಿಗೆ ಪಪ್ಸು– ಅಂಥ ಸ್ಲೊಗನ್ನು ಅಗ್ಬಿಟ್ಟಿತ್ತು. ಕೆಲವು ಕಡೆ ಕಾಮನ್ನಾಗಿ ಎರಡು ಕೇಜಿ ರೆಡಿ ಕೋಳಿ ಹಾಗೂ ಮತ್ತೆ ಕೆಲವು ಕಡೆ ಬಿರಿಯಾನಿನೂ ಕೊಟ್ಟವ್ರೆ’.

‘ಸಾರ್, ಮೊನ್ನೆ ಇಂಟ್ರೆಸ್ಟಿಂಗ್ ಇನ್ಸಿಡೆನ್ಸ್’– ಧರಣಿ ಮಾತು ಮುಂದುವರೆಸಿದ. ‘ರೆಡಿ ಚಿಕನ್ ಎಸ್ಕೊಂಡು ಹೋಗ್ಬೇಕಾದ್ರೆ ಒಬ್ನೂಗೆ ಗೊತ್ತಿಲ್ಲದೆ ಅಪೋಸಿಟ್ ಕ್ಯಾಂಡಿಡೇಟ್ ಮನೇಗೂ ಎಸೆದವ್ನೆ. ಅವ್ನು ಜಗಳಕ್ಕೆ ಬಂದವ್ನೆ. ಅದಕ್ಕೆ ಇವ್ನು– ತಿನ್ನೊಂದಾದ್ರೆ ತಿನ್ನು. ಇಲ್ಲಾ ಅಂದ್ರೆ ನಾಯಿಗಾಕು. ಲೆಕ್ಕ ಮಾಡಿ ಕೊಟ್ಟವ್ರೆ. ನಾವು ಲೆಕ್ಕ ಕೊಡ್ಬೇಕು ಅಂದ್ನಂತೆ. ಎಲ್ಲಾ ಪಾರ್ಟಿಗಳಲ್ಲು ಇದೇ ಕಥೆ’.

‘ಅಲ್ಲಪ್ಪ, ಕೊಡೋರಿಗೆ ಓಟು ಹಾಕ್ತಾರಂಥ ಏನೋ ಗ್ಯಾರಂಟಿ?’ ಎಂದೆ ನಾನು.

‘ದುಡ್ಡಿನ ಜೊತೆಗೆ ಎಲೆ ಅಡಿಕೆ, ಕುಂಕುಮ, ಮಂಜುನಾಥಸಾಮಿ – ವೆಂಕಟ್ರಾಣಸಾಮಿ ಮತ್ತು ಶನಿದೇವ್ರು ಒಟ್ಟಿಗೆ ಇರೋ ಪೋಟೋನು ಕೊಡ್ತಾರೆ. ಮೂರು ದೇವ್ರಲ್ಲಿ ಯಾರಿಗಾದರೂ ಹೆದ್ರಲೇಬೇಕಲ್ವ?’

‘ದುಡ್ಡು ತಗೊಂಡವ್ರು ಏನ್ಮಾಡ್ತಾರಪ್ಪ?’

‘ಸಾರ್, ಅವ್ರು ಅದಕ್ಕೆ ಪರಿಹಾರ ಇಟ್ಟವ್ರೆ. Z.P – T.P ಅಂಥ ಎರಡು ಓಟಲ್ವಾ. ಅದಕ್ಕೊಂದು ಇದಕ್ಕೊಂದು ಅಂಥ ಬೇರೆ ಬೇರೆ ಪಕ್ಷಕ್ಕೆ ಹಾಕ್ತಾರೆ. ಗಂಡ ಒಂದು ಪಾರ್ಟಿಗೆ ಹಾಕಿದ್ರೆ, ಹೆಂಡ್ತಿ ಇನ್ನೊಂದು ಪಾರ್ಟಿಗೆ ಹಾಕಿ ದೇವ್ರ ಭಯ ಕಳ್ಕೊತ್ತಾರೆ. ದುಡ್ಡು ಸಿಗದೆ ಇರೋರು ಕೊನೇಲಿರೋ ನೋಟಿಗೆ ಹಾಕಿ ಬಂದ್ರಂತೆ’.

‘ಅದು ನೋಟು ಅಲ್ಲಪ್ಪಾ, ನೋಟಾ ಅಂಥ. ಮೇಲಿನ ಯಾರಿಗೂ ನನ್ನ ಮತ ಇಲ್ಲ ಅಂಥ ಹಾಕೋದು’.

‘ಹಂಗಾ..., ನೋಟು ಸಿಗದೆ ಇರೋರು ಓಟು ಅಲ್ಲಿಗೆ ಹಾಕೋಬೇಕು ಅಂತ ಅನ್ಕೊಂಬಿಟ್ಟಿದ್ರು ಸಾರ್ ಕೆಲವ್ರು’.

‘ಬನ್ನಿ ಸಾರ್, ಅಂಗಡಿ ಕೇಶವ ತಾಲ್ಲೋಕು ಪಂಚಾಯಿತಿ ಚುನಾವಣೆಗೆ ನಿಂತಿದ್ದ. ಅವ್ನ ಮಾತಾಡ್ಸೋಣ’ ಎಂದು ಧರಣಿ ರಸ್ತೆಯ ಕಾರ್ನರ್‌ನಲ್ಲಿದ್ದ ಅಂಗಡಿಗೆ ಕರೆದೊಯ್ದ. ನನ್ನನ್ನು ಕಂಡೊಡನೆ ಫಾಂಟಾ ಇಲ್ಲವೇ ಮಿರಿಂಡಾದ ಬಾಟಲ್ನಾ ಮುಚ್ಚಳ ಹಾರಿಸದೇ ಬಿಡುವವನಲ್ಲ ಕೇಶವ. ಆದರೆ ಆಕಾಶವೇ ಕಳಚಿ ಬಿದ್ದಂತೆ ಮಂಕಾಗಿದ್ದ.

‘ಏನೋ ಕೇಶವ ಕಥೆ ನಿಂದು’ ಎಂದು ಕೇಳಿದೆ.

‘ಎಲ್ಲಾ ಇಂಥವ್ರಿಂದಲೇ ಆಗಿದ್ದು’ ಧರಣಿ ಕಡೆ ಕೈ ತೋರಿಸಿದ.

‘ಅಂಗಡಿ ಮಡಿಕಂಡು ನೆಮ್ಮದಿಯಾಗಿದ್ದೆ. ರಿಸರ್ವೇಷನ್ ನಿಮ್ ಕ್ಯಾಸ್ಟಿಗೆ ಬಂದಿದೆ ಅಂತ ಪುಸಲಾಯಿಸಿ ಕರ್ಕೊಂಡು ಹೋದ. ಅವರು ತಾಲ್ಲೋಕು ಪಂಚಾಯಿತಿಗೆ ಹತ್ತು ಲಕ್ಷ ಖರ್ಚಾಯ್ತದೆ, ಆಯ್ತದಾ ಅಂದ್ರು. ಆಗಕಿಲ್ಲ ಅಂತ ಬಂದೆ. ಕೊನೆಗೆ ಇತರೆ ಪಾರ್ಟಿಯವರು ಒಬ್ರು ಕುರುಬ್ರಿಗೆ, ಇನ್ನೊಬ್ರು ಆಚಾರ್ರಿಗೆ ಕೊಟ್ರು ಅಂತಾ, ಶೆಟ್ರು ಓಟೆಲ್ಲಾ  ಒಟ್ಟಿಗೆ ನನ್ಗೆ ಬೀಳ್ತಾವಂತಾ ಕೊಟ್ರು.

ಆಮೇಲೆ ಸ್ಟಾರ್ಟಾಯ್ತು ನೋಡಿ, ಎಲೆಕ್ಷನ್. ಹವಾ ತೋರಿಸ್ಬೇಕು ಅಂತ ನಾಮಿನೇಷನ್ ಹಾಕೋ ದಿನವೇ ಎರಡು ಲಾರಿ ಜನ್ರನ್ನ ಕರ್ಕೊಂಡೋದ್ವು. ಅವರಿಗೆ ಊಟ, ಕ್ಯಾನ್ವಾಸ್ ಮಾಡೋರಿಗೆಲ್ಲಾ ಓಡಾಡೋಕೆ ಕಾರು... ಅವರೋ, ಸಾಯಂಕಾಲ ಆಯ್ತು ಅಂದ್ರೆ ಯಾವ್ದಾದ್ರು ಡಾಬಾ, ಬಾರು ಕಾಣಿಸ್ರೆ ಸಾಕು ಗಾಡಿ ಸೈಡಿಗಾಕು ಅಂತ ಸ್ಟಾರ್ಟ್ ಮಾಡೋರು’.

‘ನಾವು ಮನೆ ಮಠ ಬಿಟ್ಟು ನಿಯತ್ತಾಗಿ ಓಡಾಡಿಲ್ವಾ ಹೇಳು ಕೇಶವ’ ಎಂದ ಧರಣಿ.

‘ಹೂ ಕೇಳ್ದೋರೆಲ್ಲಾ ನಿಮ್ಗೆ ಹಾಕ್ತೀವಿ ಅನ್ನೋರು. ಅಂಗಡಿಗೆ ಬಂದವ್ರು ಲೆಕ್ಕ ಬರೆಸಿ ಹೋಗೋಕೆ ಶುರು ಮಾಡಿದ್ರು. ದುಡ್ಡು ಕೇಳುದ್ರೆ ಓಟು ಹೋಯ್ತದಲ್ಲಾ ಅಂತ ನಾನು ಸುಮ್ನಾದೆ. ಆಮೇಲೆ ಎಲೆಕ್ಷನ್ ಹತ್ರ ಬಂದಂತೆ  Z.P. ಕ್ಯಾಂಡಿಡೇಟ್ ಸ್ವಲ್ಪ ಫೈನಾನ್‌ಷಿಯಲಿ ವೀಕು ಅದನ್ನು ನೀನೇ ಕವರ್ ಮಾಡ್ಬೇಕು ಅಂದ್ರು.

ಕೊನೆಗೆ ಓಟಿಗೆ ಇನ್ನೂರರಂತೆ ಹಂಚಿದ್ವು. ಆದ್ರೆ ಬೆಳಕು ಹರಿಯುವಷ್ಟರಲ್ಲಿ ಅಪೋಜಿಷನ್ ಪಾರ್ಟಿಯವ್ರು ಐನೂರೈನೂರು ಹಂಚವ್ರೆ. ನಾವು ಏನಾರು ಮಾಡಣ ಅನ್ನುವಷ್ಟಲ್ಲಿ ಎಲೆಕ್ಷನ್ ಮುಗಿದೋಯ್ತು. ರಿಸಲ್ಟ್ ತೋಪಾಯ್ತು. ಎಲೆಕ್ಷನ್ ಗಾದೆ ಗೊತ್ತಲ್ವ ಸಾರ್?’.

‘ಅದೇ ಯಾರ್ನಾದ್ರು ಹಾಳ್ಮಾಡ್ಬೇಕು ಅಂದ್ರೆ ಹಳೇ ಲಾರಿ ಕೊಡಿಸು, ಇಲ್ಲ ಎಲೆಕ್ಷನ್ನಿಗೆ ನಿಲ್ಲಿಸು ಅಂತಾರಲ್ಲ ಅದಾ’.

‘ಅದು ಹಳೇದು. ಎಲೆಕ್ಷನಲ್ಲಿ ಗೆದ್ದೋನು ಸೋತ, ಸೋತೋನು ಸತ್ತ’ ಅಂದ ಕೇಶ್ವ.

‘ತೀರಾ ನಿರಾಶನಾಗ್ಬೇಡ. ಯಾವ್ದಾದ್ರು ಕಾಂಟ್ರಾಕ್ಟ್ ಕೊಡ್ಸೋಣ ಬಿಡು, ಮುಂದಕ್ಕೆ ಮೇನ್ಟೇನ್ ಆಗುತ್ತೆ’ ಅಂದ ಧರಣಿ.

‘ಏನಾಗುತ್ತೋ ಸಾರ್. ಅಂಗಡಿ ಸಾಮಾನೆಲ್ಲಾ ಖಾಲಿಯಾಗೈತೆ. ಒಂದ್ಲಕ್ಷ ಇದ್ರೆ ಕೊಟ್ಟಿರಿ. ಉಗಾದಿಗೆ ಅಡ್ಜೆಸ್ಟ್ ಮಾಡ್ತೀನಿ’ ಅಂದ ಕೇಶವ.

ಯಾಕೋ ಮಾತು ನನ್ನ ಬುಡಕ್ಕೆ ಬಂದಿದ್ದು ಅರಿವಾದೊಡನೆ ‘ನನ್ನ ಪರಿಚಯದವ್ರು ಹೋಲ್ ಸೇಲ್ ಅಂಗಡಿ ಇಟ್ಟವ್ರೆ. ಅವ್ರಿಗೆ ಹೇಳ್ತೀನಿ. ಸಾಮಾನು ತಗೋ, ನಿಯತ್ತಾಗಿ ವಾಪಸ್ ಮಾಡು’ ಅಂದೆ.

ಅಷ್ಟರಲ್ಲಿ ಮನೆಯ ಪಕ್ಕದ ಶಾಮಿಯಾನದೆಡೆಗೆ ಬೆಲ್ಲಕ್ಕೆ ನೊಣ ಅಮರುವಂತೆ ಜನ ಮುತ್ತುತ್ತಿರುವುದನ್ನು ಕಂಡು, ತಡವಾದರೆ ಚೇರ್ ಹಿಂದೆ ಗೂಟದಂತೆ ಊಟಕ್ಕೆ ನಿಲ್ಲಬೇಕಾದ ದೃಶ್ಯ ನೆನೆದು ಧರಣಿಯ ಕೈಹಿಡಿದು ಅತ್ತ ಧಾವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT