ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಗಂಧರ್ವಲೋಕ

Last Updated 12 ಡಿಸೆಂಬರ್ 2015, 19:36 IST
ಅಕ್ಷರ ಗಾತ್ರ

ಮರಾಠಿ ಸಂಗೀತ ನಾಟಕ ಪರಂಪರೆಯಲ್ಲಿ ಇತಿಹಾಸ ಸೃಷ್ಟಿಸಿ ಅಜರಾಮರವಾದ ನಾಟಕ ‘ಕಟ್ಯಾರ್ ಕಾಳಜಾತ್ ಘುಸಲಿ’. ಹೀಗೆಂದರೆ, ಎದೆಗೆ ಹೊಕ್ಕ ಖಡ್ಗ ಎಂದರ್ಥ. ಮಂತ್ರಮುಗ್ಧಗೊಳಿಸುವ ಹಾಡುಗಳ ಜೊತೆಗೆ, ಸಂಗೀತ ಲೋಕದ ಒಳಜಗತ್ತಿನ ಸುಂದರವಾದ ಅನಾವರಣ ಈ ನಾಟಕದಲ್ಲಿದೆ.

‘ಸಂಗೀತ ನಾಟಕ’ ಎಂಬುದು ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಮಹಾರಾಷ್ಟ್ರದಲ್ಲಿ ಹುಟ್ಟಿ, ಮನೆ-ಮನೆಯನ್ನೂ ತಲುಪಿ ಪ್ರಸಿದ್ಧಿ ಪಡೆದ ರಂಗಪ್ರಕಾರ. ಇದು ಜನಸಾಮಾನ್ಯರಿಗೂ ಶಾಸ್ತ್ರೀಯ ಸಂಗೀತದೊಳಕ್ಕೆ ಪ್ರವೇಶ ನೀಡಿತು. ಇಂದಿಗೂ ಮಹಾರಾಷ್ಟದಲ್ಲಿ ಜನಪ್ರಿಯತೆ ಹೊಂದಿರುವ ‘ಸಂಗೀತ ನಾಟಕ’ಗಳ ಈ ಭವ್ಯ ಪರಂಪರೆ ಆರಂಭವಾಗುವುದು 1879ರಿಂದ– ‘ನಳ ದಮಯಂತಿ’ ಎಂಬ ನಾಟಕದ ಮೂಲಕ. ಸಂಗೀತ ನಾಟಕಗಳಲ್ಲಿ ಕಥೆ ಹೇಳುವ ಮಾಧ್ಯಮ ಸಂಭಾಷಣೆಯ ಬದಲಿಗೆ ಹಾಡುಗಳಾಗಿರುತ್ತದೆ.

ಪ್ರತಿಯೊಂದು ನಾಟಕದಲ್ಲಿ 30ಕ್ಕೂ ಹೆಚ್ಚಿನ ಹಾಡುಗಳಿರುತ್ತವೆ. ಸಂಗೀತಪ್ರಿಯರಿಗೆ ಇದೊಂದು ದಿವ್ಯ ಅನುಭವ, ಕಿವಿಗೆ ರಸದೌತಣ. ಇಲ್ಲಿನ ಪಾತ್ರಧಾರಿಗಳೂ ತಾವೇ ಹಾಡಿಕೊಳ್ಳುತ್ತಾ ನಟಿಸುವವರಾದ್ದರಿಂದ ಎಲ್ಲರೂ ಒಳ್ಳೆಯ ಸಂಗೀತ ಶಿಕ್ಷಣ ಪಡೆದವರೇ ಆಗಿರುತ್ತಿದ್ದರು. ಬಾಲ ಗಂಧರ್ವ, ಮಾಸ್ಟರ್ ಕೃಷ್ಣರಾವ್, ಗೋವಿಂದ ರಾವ್ ಟೇಂಬೆ, ವಸಂತರಾವ್ ದೇಶಪಾಂಡೆ ಮುಂತಾದ ಹಿರಿಯ ಸಂಗೀತಗಾರರೆಲ್ಲ ಸಂಗೀತ ನಾಟಕಗಳಿಂದಲೇ ಮೂಡಿ ಬಂದವರು. ‘ಸಂಗೀತ ಸೌಭದ’, ‘ರಾಮರಾಜ್ಯವಿಯೋಗ’, ‘ಶಕುಂತಲಾ’, ‘ಏಕಚ್ ಪ್ಯಾಲಾ’, ‘ಮಾನಾಪಮಾನ್’ ಮುಂತಾದವುಗಳು ಈ ಸಂಗೀತಗಾರರು ನಾಟಕ ಪ್ರಪಂಚಕ್ಕೆ ನೀಡಿದ ಅನರ್ಘ್ಯ ರತ್ನಗಳು.

ಇದೇ ಸಾಲಿಗೆ ಸೇರುವ ವಿಶಿಷ್ಟ ನಾಟಕ ‘ಕಟ್ಯಾರ್ ಕಾಳಜಾತ್ ಘುಸಲಿ’. 1967ರಲ್ಲಿ ಶ್ರೀ ಪುರುಷೋತ್ತಮ ದಾರ್‌ವೇಕರ್ ಅವರು ರಚಿಸಿದ ಈ ನಾಟಕ, ಗಾನ ಗಾರುಡಿಗ ಪಂ. ಜಿತೇಂದ್ರ ಅಭಿಶೇಕಿ ಅವರ ಸಂಗೀತ ಸಂಯೋಜನೆಯಲ್ಲಿ ತೆರೆಯ ಮೇಲೆ ಬಂದಿತು. ಮೂಲ ನಾಟಕದಲ್ಲಿ ಖಾನ್ ಸಾಹೇಬರ ಪಾತ್ರಧರಿಸಿ ಸಂಗೀತದ ಜಾದೂ ಮಾಡಿದ ಹಿರಿಮೆ ಪಂ. ವಸಂತರಾವ್ ದೇಶಪಾಂಡೆ ಅವರದು. ಇದರಲ್ಲಿನ ‘ಘೆ ಛಂದ ಮಕರಂದ’, ‘ಸುರತ ಪಿಯಾ ಕೆ’, ‘ಕರಜ್ವಾ ಲಾಗೆ ಕಟ್ಯಾರ್’, ‘ಹೆ ಮುರಲೀಧರ ಶಾಮ್’ ಮುಂತಾದ ಹಾಡುಗಳು ಸಂಗೀತಪ್ರಿಯರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿವೆ.

ಕಿವಿಗೆ ಹಿತವಾದ ಸಂಗೀತ ನೀಡುವ ‘ಕಟ್ಯಾರ್ ಕಾಳಜಾತ್ ಘುಸಲಿ’ ನಾಟಕ ನಮಗೆ ಮುಖ್ಯ ಅನಿಸುವುದು,ಅದು ನೀಡುವ ಸಂಗೀತ ಲೋಕದ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮಗ್ಗುಲುಗಳ ಒಳನೋಟದಿಂದ. ಇಲ್ಲಿ ಎರಡು ಘರಾಣೆಗಳ ಮಧ್ಯದ ಸಂಘರ್ಷವಿದೆ, ಸ್ಥಾನಮಾನ ಪಡೆಯುವಲ್ಲಿ ನಡೆಯುವ ರಾಜಕೀಯವಿದೆ. ರಾಜನ ಆಶ್ರಯದಲ್ಲಿ ಬಹುದೊಡ್ಡ ಬಹುಮಾನ ಪಡೆದಿದ್ದರೂ ದಾಸನಾಗಿ ಬದುಕುವ ಕಲಾವಿದನ ಒಳತೋಟಿಯಿದೆ. ಗುರುಕುಲ ಪದ್ಧತಿಯಲ್ಲಿನ ಗುರುಶಿಷ್ಯರ ಆಪ್ತ ಸಂಬಂಧವಿದೆ. ಜಾತಿ-ಧರ್ಮದ ಹಂಗಿಲ್ಲದೆ ಮೂಡಿ ಬರುವ ಮಧುರ ಪ್ರೀತಿಯಿದೆ.

ವಿಶ್ರಾಮಪುರದ ರಾಜನ ಆಸ್ಥಾನದಲ್ಲಿ ನಡೆದ ಒಂದು ಸಂಗೀತದ ಸ್ಪರ್ಧೆಯ ಉಲ್ಲೇಖದೊಂದಿಗೆ ಈ ನಾಟಕ ಆರಂಭವಾಗುತ್ತದೆ. ಹಲವಾರು ವರ್ಷಗಳಿಂದ ಈ ಸ್ಪರ್ಧೆಯಲ್ಲಿ ಗೆದ್ದು, ರಾಜ ಗಾಯಕನಾಗಿ ಗೌರವ ಪಡೆದಿದ್ದ ಪಂ. ಭಾನುಶಂಕರ ಶಾಸ್ತ್ರಿ, ಈ ಬಾರಿಯ ಸ್ಪರ್ಧೆಯಲ್ಲಿ ತಮ್ಮ ಧ್ವನಿಯನ್ನು ಕಳೆದುಕೊಂಡು ಹಾಡಲಾಗದೆ ಅಖಾಡದಿಂದ ಹೊರಗೆ ಬಂದಿದ್ದಾರೆ. ಆನಂತರ ಉಸ್ತಾದ್ ಅಫ್‌ತಾಬ್ ಹುಸೇನ್ ಬರೇಲಿವಾಲೆ ಅವರು ರಾಜ ಗಾಯಕರಾಗಿ ಗೌರವ ಪಡೆದದ್ದು ಶಾಸ್ತ್ರಿಗಳಿಗೆ ತಿಳಿಯುತ್ತದೆ. ರಾಜ ಗಾಯಕನಿಗೆ ಆಸ್ಥಾನದಿಂದ ದೊರೆಯುವ ಹವೇಲಿಯಲ್ಲಿ ಖಾನ್ ಸಾಹೇಬರು, ತಮ್ಮ ಮಗಳು ಜ಼ರೀನಾ ಹಾಗೂ ಇಬ್ಬರು ಶಿಷ್ಯರೊಡನೆ ವಾಸವಾಗಲು ಬರುತ್ತಾರೆ.

ಇಲ್ಲಿ ಖಾನ್ ಸಾಹೇಬರು, ರಾಜನ ಆಸ್ಥಾನ ಕವಿಯಾದ ಬನ್‌ಕೆ ಬಿಹಾರಿ ಕವಿರಾಜನೊಡನೆ ನಡೆಸುವ ಸಂಭಾಷಣೆಯಲ್ಲಿ– ಖಾನ್ ಸಾಹೇಬರಿಗೆ ಪಂಡಿತ್ ಭಾನುಶಂಕರರ ಗಾಯನದ ಬಗ್ಗಿರುವ ಮೆಚ್ಚುಗೆ ಹಾಗೂ ತನ್ನ ಗಾಯನಕ್ಕೆ ಸಿಗದಿರುವ ಬಗ್ಗೆ ಬೇಸರ ವ್ಯಕ್ತವಾಗುತ್ತದೆ. ಪಂಡಿತರು ಹಾಡದೆ ಇದ್ದ ಕಾರಣ ಗೆಲುವು ತನಗೆ ಸಿಕ್ಕ ಸತ್ಯದ ಅರಿವು ಅವರ ಮಾತುಗಳಲ್ಲಿದೆ. ಮನೆ ಬಿಟ್ಟು ಹೊರಡುವ ಧಾವಂತದಲ್ಲಿರುವ ಪಂಡಿತ್‌ಜೀ ಮಗಳು ಉಮಾ ಹಾಗೂ ಅವಳ ಸಂಗೀತದ ಪರಿಚಯವೂ ಇಲ್ಲಾಗುತ್ತದೆ. ಈ ಸಂದರ್ಭದಲ್ಲೇ ಸ್ಪರ್ಧೆ ಗೆದ್ದ ರಾಜಗಾಯಕನಿಗೆ ಬಹುಮಾನವಾಗಿ ಕೊಡುವ ಖಡ್ಗವನ್ನು (ಕಟ್ಯಾರ್) ಖಾನ್‌ಸಾಹೇಬರಿಗೆ ಒಪ್ಪಿಸಲು ಮಂತ್ರಿ ಆಗಮಿಸುತ್ತಾರೆ. ನಾಟಕದ ಹಂದರದಲ್ಲಿ ಈ ಖಡ್ಗಕ್ಕೆ ಬಹುಮುಖ್ಯ ಸ್ಥಾನವಿದೆ. ರಾಜಗಾಯಕ ತನ್ನ ಆತ್ಮರಕ್ಷಣೆಗಾಗಿ ಹತ್ಯೆ ಮಾಡಬೇಕಾಗಿ ಬಂದರೂ ಅದನ್ನು ಕ್ಷಮಿಸುವ ವಿಶೇಷವಾದ ಸವಲತ್ತಿನೊಂದಿಗೆ ಗಾಯಕನಿಗೆ ಕೊಡಮಾಡುವ ಖಡ್ಗವಿದು.

ಹವೇಲಿಯೊಳಕ್ಕೆ ತಂಬೂರದೊಂದಿಗೆ ಪ್ರವೇಶ ಮಾಡುವ ಸದಾಶಿವನೊಂದಿಗೆ ನಾಟಕ ತಿರುವನ್ನು ಪಡೆಯುತ್ತದೆ. 12 ವರ್ಷಗಳ ಹಿಂದೆ ಮಿರಜ್‌ನ ಶಿವನ ದೇವಾಲಯದಲ್ಲಿ, ಪಂಡಿತ್‌ಜೀಯ ಗಾಯನವನ್ನು ಕೇಳಿ, ಕೆಲವೇ ದಿನಗಳ ಕಾಲ ಅವರಿಂದ ಸಂಗೀತ ಕಲಿತು, ಅವರ ಅನುಪಸ್ಥಿತಿಯಲ್ಲೂ ಅದನ್ನೇ ಮನನ ಮಾಡಿಕೊಂಡು, ಅನಾರೋಗ್ಯದಿಂದ ನರಳುತ್ತಿದ್ದ ತನ್ನ ತಂದೆಯ ಕಾಲಾನಂತರ ಗುರುಗಳನ್ನು ಅರಸಿಕೊಂಡು ಸದಾಶಿವ ಹವೇಲಿಗೆ ಬಂದಿರುತ್ತಾನೆ.

ಪಂಡಿತ್‌ಜೀ ಹಾಡಲಾರದ್ದನ್ನು ತಿಳಿದು ಹತಾಶನಾದ ಸದಾಶಿವ, ಖಾನ್ ಸಾಹೇಬರ ಬಳಿ ತನ್ನನ್ನು ಶಿಷ್ಯನಾಗಿ ಸ್ವೀಕರಿಸುವಂತೆ ಪ್ರಾರ್ಥಿಸುತ್ತಾನೆ. ಸದಾಶಿವನ ಕಂಠದ ಅನುಕೂಲವನ್ನು ತಿಳಿಯಲು ಏನಾದರೂ ಹಾಡಿ ತೋರಿಸುವಂತೆ ಖಾನ್ ಸಾಹೇಬರು ಕೇಳುತ್ತಾರೆ. ಪಂಡಿತ್‌ಜೀಗೆ ಪ್ರಿಯವಾದ ‘ಘೆ ಛಂದ ಮಕರಂದ’ವನ್ನು ಸದಾಶಿವ ಹಾಡುತ್ತಾನೆ. ಪಂ. ಜಿತೇಂದ್ರ ಅಭಿಷೇಕಿ ಅವರ ಸಂಯೋಜನೆಯ ಈ ಹಾಡು ಸಾಲಗವರಾಳಿ ರಾಗದ್ದು. ಸಂಪೂರ್ಣವಾಗಿ ಪಂಡಿತ್‌ಜೀಯ ಗಾಯನದ ಛಾಪನ್ನು ಸದಾಶಿವನ ಹಾಡಿನಲ್ಲಿ ಕಂಡ ಖಾನ್ ಸಾಹೇಬ್, ಆತನನ್ನು ಶಿಷ್ಯನಾಗಿ ಸ್ವೀಕರಿಸಲು ಒಪ್ಪುವುದಿಲ್ಲ.

ವರ್ಷಗಳ ಕಾಲ ಸತತ ಮನನ– ಚಿಂತನ– ಅಭ್ಯಾಸಗಳಿಂದ ರೂಢಿಸಿಕೊಂಡ ಹಾಡುವ ಶೈಲಿಯನ್ನು ಎಷ್ಟು ತಿದ್ದಿದರೂ ಬದಲಾಯಿಸಲಾಗುವುದಿಲ್ಲ ಎಂಬ ಸಂಗೀತ ಲೋಕದ ಸತ್ಯವನ್ನು ಇಲ್ಲಿ ಖಾನ್ ಸಾಹೇಬರ ಬಾಯಿಯಿಂದ ಕೇಳುತ್ತೇವೆ. ಹಾಗೆಯೇ ಸದಾಶಿವನ ಯೋಗ್ಯತೆ, ಶ್ರದ್ಧೆಗಳ ಬಗ್ಗೆ ಗೊತ್ತಿದ್ದರೂ ತನ್ನ ಘರಾಣೆಯವರಿಗೆ ಬಿಟ್ಟು ಹೊರಗಿನವರಿಗೆ ವಿದ್ಯೆ ನೀಡುವ ಮುಕ್ತ ಮನಸ್ಸಿನ ಕೊರತೆಯೂ ಇಲ್ಲಿ ಕಾಣುತ್ತದೆ.

ನಿರಾಶೆಗೊಂಡ ಸದಾಶಿವ, ಉಮಾಳ ಬಳಿ ಆಶ್ರಯ ಪಡೆದು ಪಂಡಿತ್‌ಜೀ ಹಲವು ವರ್ಷಗಳಿಂದ ರಾಗಗಳನ್ನು ಬರೆದು ಇರಿಸಿದ್ದ ಗ್ರಂಥದ ನೆರವಿನೊಂದಿಗೆ ಅಭ್ಯಾಸ ಮುಂದುವರಿಸುವ ಪ್ರಯತ್ನಿಸುತ್ತಾರೆ. ಆಗ ಅವನ ನೆರವಿಗೆ ಬರುವ  ಜ಼ರೀನಾ– ಹವೇಲಿಯ ಸೇವಕ ಬದರಿ ಪ್ರಸಾದ್ ರಜೆ ಪಡೆದು ತನ್ನ ಊರಿಗೆ ಹೋದಾಗ ಅವನ ವೇಷ ಧರಿಸಿ, ಖಾನ್ ಸಾಹೇಬರ ಗಾಯನವನ್ನು, ಬಂದಿಶ್‌ಗಳನ್ನು ಕದ್ದು ಕೇಳಿ ಕಲಿಯುವ ಅವಕಾಶ ಕಲ್ಪಿಸಿ ಕೊಡುತ್ತಾಳೆ.

ಅಂದಿನಿಂದ ಇಂದಿನವರೆಗೂ ಸಂಗೀತ ಲೋಕದಲ್ಲಿ ನಡೆದಾಡುವ ಚರ್ಚೆ, ಖಾನ್ ಸಾಹೇಬರುಗಳ ಗಾಯನ ಹಾಗೂ ಹಿಂದೂ ಪಂಡಿತ್‌ಜೀಗಳ ಗಾಯನಕ್ಕಿರುವ ವ್ಯತ್ಯಾಸ ನಾಟಕದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಬರುತ್ತದೆ. ಯಾವುದೇ ಶೈಲಿಯ ಹಾಗೂ ವ್ಯಕ್ತಿಯ ಮೇಲೆ ದೋಷಾರೋಪಣೆ ಮಾಡದೆ ಇರುವುದನ್ನು ಇದ್ದಂತೆ ಕಣ್ಣಿಗೆ ಕಟ್ಟಿಸುತ್ತದೆ. ಖಾನ್ ಸಾಹೇಬರು ಥಳಥಳಿಸುವ ಬಟ್ಟೆ, ಮಕಮಲ್ಲಿನ ಟೋಪಿ ಹಾಕಿ, ಕೈಗೆ ಮಲ್ಲಿಗೆ ಹೂವಿನ ಮಾಲೆ ಸುತ್ತಿಕೊಂಡು, ಅದನ್ನು ಆಗಾಗ ಮೂಸುತ್ತಾ ಉರ್ದು-ಹಿಂದಿ ಮಿಶ್ರಿತ ಮರಾಠಿಯಲ್ಲಿ ಮಾತಾಡುತ್ತಾರೆ. ಅವರ ಶಿಷ್ಯರಂತೂ ಎಷ್ಟು ಬಾರಿ ಶಾಸ್ತ್ರೀಯ ಗಾಯನದೆಡೆಗೆ ಎಳೆದು ತಂದರೂ, ಕೈ ಬಿಟ್ಟ ಕೂಡಲೇ ಚಪ್ಪಾಳೆ ಹಾಕುತ್ತಾ ಕವ್ವಾಲಿ ಹಾಡುವ ಚಂಚಲ ಮನಸ್ಸಿನವರು.

ಖಾನ್ ಸಾಹೇಬರ ಗಾಯನ, ತುಂಬಾ ಕಸರತ್ತಿನಿಂದ ಕೂಡಿದ್ದು. ಕಠಿಣ ಅಭ್ಯಾಸದಿಂದ ಪಡೆದ ಪಾದರಸದಂತೆ ತಿರುಗುವ ಕಂಠ ಸಾಹೇಬರದ್ದು. ಪಂಡಿತ್‌ಜಿಯ ಜನಪ್ರಿಯವಾದ ಅತ್ಯಂತ ಶಾಂತವಾದ ಸಾಲಗವರಾಳಿಯ ‘ಭಜನ್ ಘೆ ಛಂದ ಮಕರಂದ’ಕ್ಕೆ ಎದುರಾಗಿ ಖಾನ್ ಸಾಹೇಬರು ಭೀಂಪಲಾಸಿಯಲ್ಲಿ ಹಾಡುವ ಅದೇ ಹಾಡು ಮಿಂಚಿನ ಸಂಚಾರವುಳ್ಳದ್ದು. (ಮೂಲ ನಾಟಕದಲ್ಲಿ ಪಂ.ವಸಂತರಾವ್ ದೇಶಪಾಂಡೆಯವರು ಹಾಡಿದ ಈ ಹಾಡು ಅದ್ಭುತವನ್ನೇ ಸೃಷ್ಟಿಸಿಬಿಟ್ಟಿದೆ). ಇದರ ಪ್ರತಿಯೊಂದು ತಾನು ಕೂಡಾ ಶ್ರಮದ ಅಭ್ಯಾಸವನ್ನು ಬಯಸುವಂತಹದ್ದು.

ದೇವರಿಗಾಗಿಯೇ ಹಾಡುವಂತಿರುವ ಪಂಡಿತ್‌ಜೀಯ ಪ್ರಶಾಂತವಾದ ಗಾಯನದಲ್ಲಿ ಪ್ರದರ್ಶನಾತ್ಮಕತೆಯೇ ಇಲ್ಲ. ಗಂಟಲಿನ ಚಮತ್ಕಾರವೂ ಇಲ್ಲ. ಹೀಗಿದ್ದರೂ ಪಂಡಿತ್‌ಜೀಯ ಗಾಯನ ಅಷ್ಟು ಪ್ರಸಿದ್ಧವಾಗಲು ಕಾರಣವಾದರೂ ಏನು ಎಂಬುದು ಖಾನ್ ಸಾಹೇಬರಿಗೆ ಬಗೆಹರಿಯದ ಒಗಟು. ಸಾಹೇಬರ ಗಾಯನದ ಬಗ್ಗೆ ಪಂಡಿತ್‌ಜೀಗೆ ಒಳ್ಳೆಯ ಅನಿಸಿಕೆಯೇ ಇದ್ದರೂ ಸಾಹೇಬರ ಗಾಯನ ಕೆಲವೊಂದು ನ್ಯೂನತೆಗಳಿಂದ ಅಪೂರ್ಣವಾಗೇ ಉಳಿದಿದೆ ಎಂಬ ಪಂಡಿತ್‌ಜೀಯ ಅನಿಸಿಕೆ ಉಮಾಳ ಮಾತಿನಿಂದ ತಿಳಿಯುತ್ತದೆ. ಸದಾಶಿವ ಹಾಗೂ ಜ಼ರೀನಾ ಮಧ್ಯೆ ಪ್ರೀತಿ ಅಂಕುರಿಸುವುದು ಕಥೆಯ ಮತ್ತೊಂದು ತಿರುವು.

ಸಂಗೀತದಲ್ಲಿ ತಾನು ಬಯಸಿದ ಎತ್ತರಕ್ಕೇರುವವರೆಗೆ ಪ್ರೇಮ ಸಾಧ್ಯವಿಲ್ಲ ಎಂಬುದನ್ನು ಅರಿತ ಸದಾಶಿವ, ತಾನು ಮರೆಯಲ್ಲಿಯೇ ಕಲಿತ ವಿದ್ಯೆಗೆ ಪ್ರತಿಯಾಗಿ ಗುರುದಕ್ಷಿಣೆ ನೀಡಲು, ಖಾನ್ ಸಾಹೇಬರ ಚಿತ್ರಪಟವೊಂದನ್ನು ಕಟ್ಟುಹಾಕಿಸಿ ತರುತ್ತಾನೆ. ಆದರೆ, ದಕ್ಷಿಣೆ ನೀಡಿ ನಮಸ್ಕರಿಸುವ ಮೊದಲೇ ಮುಂದಿನ ಘಟನೆಗಳು ಸಿನಿಮೀಯ ರೀತಿಯಲ್ಲಿ ನಡೆಯುತ್ತವೆ. ಅವೆಲ್ಲವನ್ನು ‘ಕಟ್ಯಾರ್ ಕಾಳಜಾತ್ ಘುಸಲಿ’ ಸಿನಿಮಾ ನೋಡಿಯೇ ಅನುಭವಿಸಬೇಕು.

ಈ ಚಲನಚಿತ್ರದ ನಿರ್ಮಾಣ, ಇಡೀ ಚಲನಚಿತ್ರ ಕ್ಷೇತ್ರದಲ್ಲಿ ಮೈಲಿಗಲ್ಲಾಗಬಹುದಾದ ಬಹುದೊಡ್ಡ ಸಾಧನೆ. ಹಲವು ವರ್ಷಗಳ ಕಾಲ ರಂಗಭೂಮಿಯನ್ನು ಪ್ರಭಾವಿಸಿದ ನಾಟಕವನ್ನು ಚಿತ್ರಪಟದ ಮೇಲೆ ತರುವ ಸಾಹಸಕ್ಕೆ ಕೈಹಾಕಿದ ಸುಭೋದ್ ಭಾವೆ ಅವರ ಧೈರ್ಯ ಮೆಚ್ಚುವಂತದ್ದು. 2010ರಲ್ಲಿ ವಸಂತರಾವ್ ದೇಶಪಾಂಡೆ ಅವರ ಮೊಮ್ಮಗ, ರಾಹುಲ್ ದೇಶಪಾಂಡೆ ಅವರು ಮತ್ತೊಮ್ಮೆ ಇದರ ರಂಗ ಪ್ರದರ್ಶನ ಮಾಡಿದ್ದರೂ, ಈಗ ತೆರೆಕಂಡಿರುವ ಚಲನಚಿತ್ರ ಅದ್ಭುತವನ್ನೇ ಸೃಷ್ಟಿಸಿದೆ. ‘ಯುನೆಸ್ಕೋ’ದ ‘ಫೆಲೆನಿ ಮೆಡಲ್’ನ ಪಟ್ಟಿಗೆ ಇದು ಈಗಾಗಲೇ ಆಯ್ಕೆಯಾಗಿದೆ.

ಚಿತ್ರದಲ್ಲಿ ಖಾನ್ ಸಾಹೇಬರಾಗಿ ಸಚಿನ್ ಪಿಳಗಾಂಕರ್ ಅವರದು ಅತ್ಯದ್ಭುತ ನಟನೆ. ಪಂಡಿತ್‌ಜಿಯ ಪಾತ್ರ ವಹಿಸಿದ ಗಾಯಕ ಶಂಕರ್ ಮಹಾದೇವನ್ ಸಂಗೀತ– ನಟನೆ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದಾಶಿವನ ಪಾತ್ರ ಮಾಡಿದ ಯುವ ನಿರ್ದೇಶಕ ಸುಭೋದ್ ಭಾವೆ ಪ್ರಶಂಸಾರ್ಹರು. ನಾಟಕದಲ್ಲಿನ ಕೆಲವು ಹಳೆಯ ಹಾಡುಗಳೊಂದಿಗೆ, ಸಿನಿಮಾಗೆ ಹೊಂದುವ ಹೊಸ ಹಾಡುಗಳನ್ನು ಶಂಕರ್-ಎಶಾನ್-ಲೊಯ್ ಸಂಯೋಜಿಸಿದ್ದಾರೆ. ಇಲ್ಲಿನ ಎಲ್ಲ ಹಾಡುಗಳಿಗೆ ರಾಹುಲ್ ದೇಶಪಾಂಡೆ, ಶಂಕರ್ ಮಹಾದೇವನ್ ಹಾಗೂ ಮಹೇಶ ಕಾಳೆ ದನಿಯಾಗಿದ್ದಾರೆ. ತಾರಾ ವರ್ಚಸ್ಸಿನ ನಾಯಕ ನಾಯಕಿಯರಿಲ್ಲದ, ಸಂಗೀತವೇ ಪ್ರಮುಖ ಪಾತ್ರವಾದ ಈ ಸಿನಿಮಾ ಸಂಗೀತ ಪ್ರಿಯರು ಮಾತ್ರವಲ್ಲದೆ, ಹೊಸತನ್ನು ಬಯಸುವ ಎಲ್ಲರೂ ನೋಡಬೇಕಾದ ಕಲಾಕೃತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT