ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದ ನೀಲ ಪರ್ವತಗಳು

Last Updated 23 ಮೇ 2015, 19:30 IST
ಅಕ್ಷರ ಗಾತ್ರ

ಪ್ರವಾಸಿಗರ ತಂಡದ ಜತೆಗೆ ಆಸ್ಟ್ರೇಲಿಯಾ ಪ್ರವಾಸ ಹೋದವರು ನಾವು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಸಿದ್ಧ ಸ್ಥಳಗಳನ್ನು ನೋಡಿದ ಬಳಿಕ ಎಲ್ಲ ಪ್ರವಾಸಿಗರಿಗೂ ವೈಯಕ್ತಿಕ ಶಾಪಿಂಗ್‌ಗೆಂದು  ಒಂದು ದಿನ ನಿಗದಿ ಮಾಡಲಾಗಿತ್ತು. ಶಾಪಿಂಗ್‌ ಮಾಡುವ ಆಸಕ್ತಿ ಇಲ್ಲದ ನಾವು ಕೆಲವರು ಆ ಅವಕಾಶವನ್ನು ಉಪಯೋಗಿಸಿಕೊಂಡು ಸ್ವಂತ ವೆಚ್ಚದಿಂದ ನೀಲಿ ಪರ್ವತಗಳನ್ನು (ಬ್ಲೂ ಮೌಂಟನ್ಸ್) ನೋಡಲು ಹೊರಟೆವು.

ನೀಲಿ ಪರ್ವತಗಳ ದಾರಿಯಲ್ಲಿ ಸಿಗುವ ವಿಶೇಷ ಮುಕ್ತ ಮೃಗಾಲಯದಲ್ಲಿ (ಫೆದರ್‌ಡೇಲ್) ಕಾಂಗರೂಗಳ ನಡುವೆ ಓಡಾಡಿದೆವು. ಒಂದು ಮರಿ ಕಾಂಗರೂ ಬಳಿ ಬಂದು ತಿಂಡಿಗಾಗಿ ಅಪೇಕ್ಷಿಸಿದ್ದು ನನಗೆ ಅನಿರೀಕ್ಷಿತವೇ ಆಗಿತ್ತು. ಆಸ್ಟ್ರೇಲಿಯಾದ ವಿಶಿಷ್ಟ ಪ್ರಾಣಿಗಳ ಜತೆಗೆ ಫೋಟೋ ಸೆಶನ್‌ ಖಂಡಿತಾ ಖುಷಿ ಕೊಡುತ್ತದೆ. ಕೆಲವೆಡೆ ವಾಹನ ಸಂಚಾರ, ಇನ್ನು ಕೆಲವೆಡೆ ಕಾಲ್ನಡಿಗೆ. ಕಣಿವೆಯನ್ನು ಮೇಲಿನಿಂದ ದಾಟಲು ವಿಶೇಷವಾದ ಕಾರಿತ್ತು. ಕಾರಿನ ಎರಡೂ ಬದಿ ಮತ್ತು ತಳದಲ್ಲೂ ಗಾಜಿನ ಹಲಗೆ. ಮೇಲಿನಿಂದ ನೋಡಿದಾಗ ಜಲಪಾತ ಮೋಹಕವಾಗಿ ಕಾಣಿಸಿತು. ಒಟ್ಟಿಗೇ ಇರುವ ಮೂರು ಶಿಖರಗಳ (ಥ್ರೀ ಸಿಸ್ಟರ್ಸ್‌) ನೋಟ ಮನಕ್ಕೆ ಮುದ ನೀಡಿತು.

ಟ್ರೆಕ್ಕರ್‌ಗಳಿಗೆ ನಿಜಕ್ಕೂ ಇದೊಂದು ಸ್ವರ್ಗವೇ ಸರಿ. ಶತಮಾನಗಳ ಹಿಂದಿನ ಮರಗಳನ್ನೂ, ಗಣಿಗಾರಿಕೆಯ ಮಾದರಿ ವಿನ್ಯಾಸಗಳನ್ನು ನೋಡುತ್ತಾ ಮೆಟ್ಟಿಲು ಇಳಿದೆವು. ಅಲ್ಲಿಂದ ಮೇಲಕ್ಕೆ ಬರಲು ಪ್ರಪಂಚದಲ್ಲೇ ಅತ್ಯಂತ ಕಡಿದಾದ (ಸ್ಟೀಪ್ ಗ್ರೇಡಿಯಂಟ್) ಕೇಬಲ್ ಕಾರಿನ ಸೇವೆಯಿತ್ತು.
ಅಲ್ಲೊಂದು ಅಂಗಡಿಯಲ್ಲಿ ಸ್ಮರಣಿಕೆಗಳನ್ನು ಗಮನಿಸುತ್ತಿದ್ದಾಗ ಕನ್ನಡದ ಮಾತುಗಳು ಕೇಳಿಸಿದೆವು.

ಇಬ್ಬರು ಹುಡುಗಿಯರು ವಸ್ತುಗಳನ್ನು ಖರೀದಿಸುತ್ತಿದ್ದರು. ವಿಚಾರಿಸಿದರೆ ಆಸ್ಟ್ರೇಲಿಯಾದಲ್ಲಿ ಓದಲು ಬಂದವರು. ಖುಷಿಯಾಯಿತು. ಅಷ್ಟೇ ಖುಷಿ ‘ಎಕೊ ಪಾಯಿಂಟ್’ ಎಂಬ ಸ್ಥಳದಲ್ಲಿ ಒಬ್ಬ ಆದಿವಾಸಿಯನ್ನು ಕಂಡಾಗಲೂ ಆಯಿತು. ಆತ ಒಂದು ಪ್ರಾಣಿಯ ಮೂಳೆಯ ಭಾಗವನ್ನು ನಳಿಕೆಯಂತೆ ಉಪಯೋಗಿಸಿಕೊಂಡು ಊದುತ್ತಿದ್ದನು. ನಮ್ಮ ಹಾಗೆಯೇ ಕಂದು ಬಣ್ಣದವನಾಗಿದ್ದ. ನೀಲಿ ಪರ್ವತಗಳ ತಪ್ಪಲಲ್ಲಿ ಕಂಡ ಆ ದೃಶ್ಯಗಳು ನಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಿದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT