ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬೊಂಬೆಯಾಟವಯ್ಯ...

ನೆನಪಿನ ಗಣಿ ಎಂ.ಆರ್. ರಂಗನಾಥ ರಾವ್
Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಮಾಗಡಿ ಹತ್ತಿರದ ದೊಡ್ಡಮುದಗೆರೆ ನನ್ನ ಊರು. ಅಪ್ಪ ರಂಗಯ್ಯ ವೃತ್ತಿಯಿಂದ ಶಾನುಭೋಗರು. ಅಮ್ಮ ಪುಟ್ಟಲಕ್ಷ್ಮಮ್ಮ. ನಾವು ಒಟ್ಟು 9 ಜನ ಮಕ್ಕಳು. ನಾನೇ ಕೊನೆಯವನು. ನಾನು ಮೂರು ವರ್ಷದವನಿರುವಾಗ ಅಮ್ಮ ತೀರಿಕೊಂಡರು. ಅಮ್ಮನ ಸಾವಿನಿಂದ ಅಪ್ಪ ಜೀವನದಲ್ಲಿ ಆಸಕ್ತಿ ಕಳೆದುಕೊಂಡರು. ಬಾಲ್ಯದಲ್ಲೇ ನನ್ನ ಬದುಕು ಅಲೆಮಾರಿಯಂತಾಯಿತು. ಮಾಗಡಿಯಲ್ಲಿ ಮಿಡ್ಲಸ್ಕೂಲ್‌, ಹೈಸ್ಕೂಲ್ ಓದಿದೆ. 19ನೇ ವರ್ಷಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾದೆ. ಕನಕಪುರ, ರಾಮನಗರ, ಹೊಸಕೋಟೆ ಶಾಲೆಗಳಲ್ಲಿ ಪಾಠ ಮಾಡಿದೆ. 

ಬೆಂಗಳೂರಿನ ಆಕರ್ಷಣೆಗೆ ಒಳಗಾಗಿ ವರ್ಗಾವಣೆ ಮಾಡಿಕೊಂಡೆ. ಹನುಮಂತನಗರದಲ್ಲಿ ವಾಸವಿದ್ದೆ. ಡಿವಿಜಿ, ಅನಕೃ, ಮಾಸ್ತಿ ಅವರ ಸಂಪರ್ಕ ದೊರೆಯಿತು. ಮುಖ್ಯವಾಗಿ ನನ್ನ ಮೇಲೆ ಪ್ರಭಾವ ಬೀರಿದವರು ದೇವುಡು ಕೃಷ್ಣ ಶಾಸ್ತ್ರಿಗಳು.
 
ಬೆಂಗಳೂರಿಗೆ ಬಂದಾಗ ‘ರವೀಂದ್ರ ಕಲಾಕ್ಷೇತ್ರ’ ಕಟ್ಟುತ್ತಿದ್ದರು. ನನಗೆ ನಾಟಕ ನೋಡುವ ‘ಹುಚ್ಚು’. ಗುಬ್ಬಿ ವೀರಣ್ಣನವರ ನಾಟಕಗಳು ಅಚ್ಚುಮೆಚ್ಚು. ಇದೇ ಸಮಯದಲ್ಲಿ ಪದವಿ ಪಡೆಯುವ ಹಂಬಲ ಕಾಡುತ್ತಿತ್ತು. ನನ್ನ ಅದೃಷ್ಟಕ್ಕೆ ಬಸವನಗುಡಿಯ ಆಚಾರ್ಯ ಪಾಠಶಾಲೆಯಲ್ಲಿ ಸಂಜೆ ಕಾಲೇಜು ಆರಂಭವಾಯಿತು. ಪಂಪ, ರನ್ನರ ಸಾಹಿತ್ಯ ಓದಿದ್ದ ಕಾರಣ ಹಳಗನ್ನಡ ತಿಳಿಯಲು  ಕನ್ನಡ ಮೇಜರ್ ಆಯ್ದುಕೊಂಡೆ. ಉಪನ್ಯಾಸಕ ಚಂದ್ರಶೇಖರ್ ನನ್ನ ಆಸಕ್ತಿಗೆ ನೀರೆರೆದರು. ಕನ್ನಡ ಪದವಿ ನನ್ನದಾಯಿತು. 
 
ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕದ ಪದವಿ ಆರಂಭಿಸಲಾಗಿತ್ತು. ಅದಕ್ಕೂ ಅರ್ಜಿ ಹಾಕಿದೆ. ಆಯ್ಕೆ ಸಮಿತಿಯಲ್ಲಿದ್ದ ದಿವಂಗತ ಮೇಕಪ್ ನಾಣಿ, ಭಾರತೀಯ ವಿದ್ಯಾ ಭವನದ ನಿರ್ದೇಶಕರಾಗಿದ್ದ ಎಚ್.ಕೆ. ರಂಗನಾಥ್ ಆತ್ಮೀಯರಾಗಿದ್ದರು. ನಾಟಕದ ಪದವಿ ತರಗತಿಗೆ ಆಯ್ಕೆಯಾದ ಹತ್ತು ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ. ರಜೆ ಹಾಕಿ ರಂಗಭೂಮಿ ತರಗತಿಗಳಿಗೆ ಹಾಜರಾಗಿ ಪದವಿ ಪಡೆದೆ. ಬಳಿಕ ‘ಕಲೀವುಲ್ಲಾ’, ‘ದ್ವಾದಶ ರಾತ್ರಿಗಳು’, ‘ಸಿಂಡ್ರೆಲ್ಲಾ’ ನಾಟಕಗಳನ್ನು ನಿರ್ದೇಶಿಸಿದೆ. ಆ ವೇಳೆಗೆ ಬಿ.ವಿ. ಕಾರಂತ, ಪ್ರಸನ್ನರ ನಾಟಕಗಳು ಜನಪ್ರಿಯವಾಗುತ್ತಿದ್ದವು. ಹೀಗಾಗಿ ನಿರ್ದೇಶನದಲ್ಲಿ ಮುಂದುವರಿಯಲು ಹಿಂಜರಿಕೆಯಾಯಿತು.
ಕಮಲಾದೇವಿ ಚಟ್ಟೋಪಾಧ್ಯಾಯರ ಮಾರ್ಗದರ್ಶನ
ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತೀಯ ಕರಕುಶಲ ಮಂಡಳಿ’ ಸಂಸ್ಥಾಪಕಿ ಕಮಲಾದೇವಿ ಚಟ್ಟೋಪಾಧ್ಯಾಯ ಭಾಗವಹಿಸಿದ್ದರು. ಅವರು  ಭಾಷಣದಲ್ಲಿ, ‘ಕರ್ನಾಟಕದಲ್ಲಿ ಸಲಾಕಿ ಬೊಂಬೆಯಾಟ ಇತ್ತಂತೆ. ನರಸಿಂಗ ರಾವ್ ಎಂಬುವವರು ಅದ್ಭುತವಾಗಿ  ನಡೆಸಿಕೊಡುತ್ತಿದ್ದರಂತೆ. ಅವರು ಎಲ್ಲಿದ್ದಾರೆ? ಗೊತ್ತಿಲ್ಲ’ ಎಂದರು. ಭಾಷಣ ಮುಗಿದ ಬಳಿಕ ಕಮಲಾದೇವಿ ಅವರ ಬಳಿ ಹೋಗಿ – ‘ಮೇಡಂ, ನಾನು ನರಸಿಂಗ ರಾವ್ ಅವರ ಮೊಮ್ಮಗ. ನನ್ನ ತಾಯಿಯ ತಂದೆ ಅವರು. ಈಗ ಅವರಿಲ್ಲ. ಅವರು ರಚಿಸಿದ ಬೊಂಬೆಗಳು ದೊಡ್ಡಮುದಗೆರೆಯಲ್ಲಿವೆ’ ಎಂದೆ. ಕಮಲಾದೇವಿ ಸಂತಸಪಟ್ಟರು. ‘ಆ ಊರು ಎಷ್ಟು ದೂರ?’ ಎಂದು ಕೇಳಿದರು. ‘50 ಕಿ.ಮೀ ದೂರವಾಗುತ್ತದೆ’ ಎಂದೆ. ‘ನಾಳೆ ಅಲ್ಲಿಗೆ ಹೋಗೋಣ’ ಎಂದರು. ನಮ್ಮೂರಿಗೆ ಬರಲಿಕ್ಕಾಗಿ ಮರುದಿನ ಬೆಳಿಗ್ಗೆ ದೆಹಲಿಗೆ ಹಿಂತಿರುಗುವ ಕಾರ್ಯಕ್ರಮವನ್ನು ಅವರು ರದ್ದುಪಡಿಸಿದ್ದರು. ಅಂಥ ದೊಡ್ಡ ವ್ಯಕ್ತಿಯನ್ನು ಹಳ್ಳಿಗೆ ಹೇಗೆ ಕರೆದುಕೊಂಡು ಹೋಗಲಿ ಎಂದು ಯೋಚನೆಯಾಯಿತು. ಆಗ ಟ್ಯಾಕ್ಸಿಗಳಿದ್ದವು. ಅದರ ವೆಚ್ಚ ನನ್ನ ಕೈಗೆಟಕುತ್ತಿರಲಿಲ್ಲ. ಅಳುಕುತ್ತಲೇ, ‘ಮೇಡಂ, ಬಸ್ಸಿನಲ್ಲಿ ಹೋಗೋಣ’ ಎಂದೆ. ‘ಇಲ್ಲ, ಕಾರು ಇದೆ. ಇಂದಿರಾನಗರದಲ್ಲಿ ತಂಗಿದ್ದೇನೆ. ಬೆಳಿಗ್ಗೆ ಅಲ್ಲಿಗೆ ಬಾ’ ಎಂದು ವಿಳಾಸ ಕೊಟ್ಟರು. 
 
ನನ್ನ ತಾತ ನರಸಿಂಗ ರಾವ್ ಬೊಂಬೆಗಳನ್ನು ರೂಪಿಸುತ್ತಿದ್ದರು ಹಾಗೂ ಬೊಂಬೆಯಾಟದಲ್ಲಿ ಹೆಸರು ಮಾಡಿದ್ದರು. ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಬೊಂಬೆಯಾಟ ಮುಂದುವರಿಸಲಿಕ್ಕಾಗಿ ನನ್ನ ಅಣ್ಣನನ್ನು ಮನೆಯಲ್ಲಿ ಇರಿಸಿಕೊಂಡಿದ್ದರು. ಆದರೆ, ಅವನು ಸ್ವಲ್ಪ ಕಲಿತು ಬಿಟ್ಟುಬಿಟ್ಟಿದ್ದ. ತಾತ ನಿಧನರಾದಾಗ ನನಗೆ ನಾಲ್ಕು ವರ್ಷ.  
 
ತಾತನ ಬೊಂಬೆಗಳ ಅಪೂರ್ವ ಲೋಕ ನೋಡಿ ಕಮಲಾದೇವಿ ಸಂತಸಪಟ್ಟರು. ‘ಬೊಂಬೆಯಾಟ ಶುರುಮಾಡಿ ಕಾಗದ ಬರಿ’ ಎಂದು ತಮ್ಮ ವಿಜಿಟಿಂಗ್ ಕಾರ್ಡ್ ಕೊಟ್ಟರು. 
 
ತಾತನ ಎಲ್ಲ ಬೊಂಬೆಗಳನ್ನು ಬೆಂಗಳೂರಿಗೆ ತಂದೆ. ಅಲ್ಲಿಂದ ಆರಂಭವಾಯಿತು ಬೊಂಬೆಗಳ ಜೊತೆ ನನ್ನ ಪಯಣ. ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ್ದಾಯ್ತು.
ಪುತ್ಥಳಿ ಹೋಯಿತು, ರಂಗ ಉಳಿಯಿತು!
 
ತಾತ ‘ಭಾಮ ಕಲಾಪ’ ಸಂಪ್ರದಾಯದಲ್ಲಿ ಕೃಷ್ಣ ಪಾರಿಜಾತ ಆಡಿಸುತ್ತಿದ್ದರು. 150 ವರ್ಷ ಹಿಂದಿನ ಅದರ ಪ್ರಸಂಗ ನನ್ನಲ್ಲಿದೆ. ಕರ್ನಾಟಕದಲ್ಲಿ ಬೊಂಬೆಯಾಟವನ್ನು ಮೂಡಲಪಾಳ್ಯ ಶೈಲಿಯಲ್ಲಿ ಆಡಿಸುತ್ತಿದ್ದರು. ಅದು ಪ್ರಭಾವಿಯಾಗಿರಲಿಲ್ಲ. ‘ಭಾಮ ಕಲಾಪ’ದ ಅಧ್ಯಯನದ ಜೊತೆಗೆ ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ‘ಕೃಷ್ಣ ಪಾರಿಜಾತ’ ನಾಟಕ ಕೃತಿ ತಂದು ಓದಿದೆ. ಬಳಿಕ ನನ್ನದೇ ಆದ ‘ಕೃಷ್ಣಪಾರಿಜಾತ’ ಬೊಂಬೆಯಾಟದ ಕಥನ ಸಿದ್ಧವಾಯಿತು.
 
ನರಹರಿ ಶಾಸ್ತ್ರಿಗಳ ಮನೆಯ ಮಕ್ಕಳ ಮೂಲಕ ನನ್ನ ಬೊಂಬೆಯಾಟ ಶುರವಾಯಿತು. ಇದು ‘ರಂಗಪುತ್ಥಳಿ’ ಸಂಪ್ರದಾಯ ಎಂದೇ ಹೆಸರುವಾಸಿ. 
 
ಈ ನಡುವೆ, ಇದ್ದಕ್ಕಿದ್ದಂತೆ ಅಣ್ಣ ಬಂದು ತಾತನ ಎಲ್ಲ ಬೊಂಬೆಗಳನ್ನೂ ತೆಗೆದುಕೊಂಡು ಹೋದರು. ಪುತ್ಥಳಿ ಹೋಯಿತು, ರಂಗ ಉಳಿಯಿತು ಎಂದು ಸುಮ್ಮನಾದೆ. ಆದರೆ, ‘ಬೊಂಬೆಯಾಟ ನಡೆಸಿಕೊಡಿ’ ಎನ್ನುವ ಒತ್ತಾಯ ಹಲವರಿಂದ ಬಂತು.  ನಾನೇ ಬೊಂಬೆಗಳನ್ನು ತಯಾರಿಸಬಾರದೇಕೆ ಎಂದು ಅನಿಸಿತು.
 
ಮಾರುಕಟ್ಟೆಯಿಂದ ಮರದ ತುಂಡುಗಳನ್ನು ತಂದೆ. ತಾತ ತಯಾರಿಸಿದ ಸತ್ಯಭಾಮೆ ಬೊಂಬೆ ಫೋಟೊ ನನ್ನಲ್ಲಿತ್ತು. ಅದರ ಶಾಸ್ತ್ರಬದ್ಧ ಸೂಕ್ಷ್ಮತೆ ಅರಿಯುತ್ತ ಸಾಗಿದಂತೆ ನಿರ್ಮಾಣ ಕಲೆ ಒಲಿಯಿತು. 
 
ಮುಖದ ಭಾಗಕ್ಕೆ ಮರದಪುಡಿ ಮತ್ತು ಫೆವಿಕಾಲ್ ಸೇರಿಸಿ ಕಲೆಸಿ ಅಚ್ಚು ಹಾಕಿಸುತ್ತಿದ್ದೆ. ಉಳಿದ ಭಾಗಗಳನ್ನು ಆಲೆಮರದ ತುಂಡಿನಲ್ಲಿ ಯಂತ್ರದಲ್ಲಿ ಮಾಡಿಸುತ್ತಿದ್ದೆ. ಇವೆರಡನ್ನು ಸೇರಿಸಿ, ಸೀರೆ ಉಡಿಸಿ, ಆಭರಣ ತೊಡಿಸಿ, ಅಲಂಕರಿಸಿದರೆ ಸತ್ಯಭಾಮೆ ಭಾವತುಂಬಿ ನಲಿಯುತ್ತಿದ್ದಳು!
 
ಆಟಕ್ಕೆ ಬೇಕಾದ ಪಾತ್ರಗಳ ಬೊಂಬೆಗಳನ್ನೆಲ್ಲ ಮಾಡುವುದನ್ನು ಕಲಿತೆ. ಈಗಲೂ ಮಾಡುವೆ, ಆಸಕ್ತರಿಗೆ ಮಾಡಿಕೊಡುವೆ. ಮನೆಯವರೆಲ್ಲ ಬೊಂಬೆಯಾಟ ಕಲಿತಿದ್ದಾರೆ. ನನ್ನ ಶಿಷ್ಯರ ಐದು ತಂಡಗಳಿವೆ. 1981ರಲ್ಲಿ ನನಗೆ ಕೇಂದ್ರ ಸಂಗೀತ–ನಾಟಕ ಅಕಾಡೆಮಿ ಪ್ರಶಸ್ತಿ ಬಂತು. ಕಮಲಾದೇವಿ ಚಟ್ಟೋಪಾಧ್ಯಾಯ ಅವರು ದೆಹಲಿಗೆ  ಕರೆದರು. 
 
ಹನುಮಂತನಗರದ ವಿವೇಕಾನಂದ ಶಾಲೆಯ ಮಕ್ಕಳಿಗೆ ‘ಹನುಮದ್ವಿಲಾಸ’ ಬೊಂಬೆಯಾಟ ಕಲಿಸಿಕೊಟ್ಟಿದ್ದೇನೆ. ಕವಿ ತಿಪ್ಪಣ್ಣ ಹರಿ  ಬರೆದ ಹಳೆಯ ಯಕ್ಷಗಾನ ಹಾಡುಗಳನ್ನು ಇದಕ್ಕೆ ಅಳವಡಿಸಿದ್ದೇನೆ. ಮಕ್ಕಳ ‘ಹನುಮದ್ವಿಲಾಸ’ ಪ್ರಸಂಗ 280 ಪ್ರದರ್ಶನ ಕಂಡಿದೆ.  ‘ಕೃಷ್ಣಪಾರಿಜಾತ’, ‘ಕೃಷ್ಣ ತುಲಾಭಾರ’, ‘ನರಕಾಸುರ’, ‘ಗಿರಿಜಾ ಕಲ್ಯಾಣ’, ‘ಕುಮಾರಸಂಭವ’, ‘ಹನುಮದ್ವಿಲಾಸ’, ‘ನಳ ದಮಯಂತಿ’, ‘ಶೂರ್ಪನಖಿ’, ‘ರಾಜಸೂಯಯಾಗ’, ‘ಸಮುದ್ರ ಮಂಥನ’ ಪ್ರಸಂಗಗಳನ್ನು ಬರೆದಿದ್ದೇನೆ. ‘ಸಮುದ್ರ ಮಂಥನ’ ಪ್ರಸಂಗವು ಸೂತ್ರದಬೊಂಬೆ, ತೊಗಲಬೊಂಬೆ ಹಾಗೂ ನೆರಳಿನ ಬೊಂಬೆಯಾಟಗಳ ಸಮ್ಮಿಶ್ರಣ.
 
ವಿಕ್ಟೋರಿಯಾ ಮ್ಯೂಸಿಯಂಗೆ ಬೊಂಬೆಯಾನ
35 ವರ್ಷಗಳ ಹಿಂದೆ ಹೈದರಾಬಾದಿನಲ್ಲಿ  ನಡೆದ ಬೊಂಬೆ ಕಾರ್ಯಾಗಾರದಲ್ಲಿ ಇಂಗ್ಲೆಂಡಿನ ‘ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂ’ನ ಕ್ಯೂರೇಟರ್ ಬಂದಿದ್ದರು. ‘ಬೊಂಬೆಗಳನ್ನು ಮ್ಯೂಸಿಯಂಗೆ ಕೊಡುತ್ತೀರಾ?’ ಎಂದರು. ಕೃಷ್ಣ, ಸತ್ಯಭಾಮೆ, ರುಕ್ಮಿಣಿ, ನಾರದ, ಸೂತ್ರಧಾರ, ಕೊರವಂಜಿ, ಇಂದ್ರ, ಶಚಿ ಮತ್ತು ಸಖಿಯರ ಸಹಿತ ಸುಮಾರು 15 ಬೊಂಬೆಗಳನ್ನು ಕೊಟ್ಟೆ. ಕ್ಯೂರೇಟರ್ ಸಾವಿರ ರೂಪಾಯಿ ಕೊಟ್ಟರು. ತುಂಬಾ ಖುಷಿಯಾಯಿತು. ವಾಪಸ್ ಬಂದು ಎಲ್ಲ ಬೊಂಬೆಗಳನ್ನು ತಯಾರಿಸಿದೆ. 
 
1988ರ ಸಮಯ. ಪ್ರತಿಷ್ಠಿತ ಜಪಾನ್ ಬೊಂಬೆಯಾಟ ಉತ್ಸವಕ್ಕೆ ಭಾರತದಿಂದ ನಮ್ಮ ತಂಡ ಆಯ್ಕೆಯಾಯಿತು. ‘ವಿಮಾನಯಾನ ವೆಚ್ಚ ನೀವೇ ಭರಿಸಬೇಕು’ ಎಂದು ಅಲ್ಲಿನ ಅಧಿಕಾರಿಗಳಿಂದ ಕಾಗದ ಬಂತು. ಹಣಕಾಸಿನ ಸಮಸ್ಯೆಯನ್ನು ಪತ್ರಮುಖೇನ ಸಮಿತಿಗೆ ತಿಳಿಸಿದೆ. ‘ಉತ್ಸವ ಸಮಿತಿಯ ಅಧಿಕಾರಿಗಳು ಬೆಂಗಳೂರಿಗೆ ಬರುತ್ತಾರೆ. ಸಮಸ್ಯೆ ಪರಿಹರಿಸುತ್ತಾರೆ’ ಎನ್ನುವ ಉತ್ತರ ಬಂತು. ಅದರಂತೆ ಭೇಟಿಯಾದ ಅಧಿಕಾರಿಗಳು, ‘ಏಳು ಜನರ  ವೆಚ್ಚ ಭರಿಸುತ್ತೇವೆ’ ಎಂದರು. 
 
ಎಚ್‌.ಕೆ. ರಂಗನಾಥ್‌ ಸಹಿತ ನಮ್ಮ ತಂಡದಲ್ಲಿ 10 ಮಂದಿ ಇದ್ದೆವು. ಮೂವರು ಸಾಲ ಮಾಡಿ ಉತ್ಸವಕ್ಕೆ ಬಂದರು. ಜಪಾನಿನಲ್ಲಿ ಒಂದು ತಿಂಗಳು ಕಳೆದೆವು. ಅಲ್ಲಿನ ಪ್ರಸಿದ್ಧ ಕೇಂದ್ರದಲ್ಲಿ ಪ್ರದರ್ಶನ ನೀಡಲು ವರ್ಷಗಟ್ಟಲೇ ಕಾಯಬೇಕು. ಯಾರದೋ ಕಾರ್ಯಕ್ರಮ ರದ್ದುಪಡಿಸಿ ನಮಗೆ ಅವಕಾಶ ನೀಡಿದರು. ಒಂದು ವಾರದ ಅವಧಿಯಲ್ಲಿ ದಿನಕ್ಕೆ ಮೂರು ಪ್ರದರ್ಶನ ನೀಡಿದ್ದು ಮರೆಯಲಾಗದ ನೆನಪು. ಲಾಸ್ ಏಂಜಲೀಸ್‌ನಲ್ಲೂ ಬೊಂಬೆಯಾಟ ನಡೆಸಿದ್ದೇವೆ. ಜಪಾನಿನಲ್ಲಿ 40 ದೇಶಗಳ ಬೊಂಬೆಯಾಟ ಕಲಾವಿದರ ಪರಿಚಯವಾಗಿತ್ತು. ಅವರ ತಂತ್ರಗಳೂ ತಿಳಿದವು. ಯುನೆಸ್ಕೊ ಮನ್ನಣೆಯ ‘ಯುನಿಮಾ’ ಸದಸ್ಯತ್ವ ಪಡೆದ ಮೇಲೆ ಪ್ರತಿಷ್ಠಿತ ಬೊಂಬೆಯಾಟ ಉತ್ಸವಗಳ ಮಾಹಿತಿ ದೊರೆತು ವಿದೇಶಗಳಲ್ಲಿ ಬೊಂಬೆಯಾಟ ನಡೆಸಲು ಅನುಕೂಲವಾಯಿತು.  
 
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಐದು ವರ್ಷ
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಐದು ವರ್ಷ ಇದ್ದು, ಆ ದೇಶದಾದ್ಯಂತ ಬೊಂಬೆಯಾಟ ನಡೆಸಿಕೊಟ್ಟೆ. ಕಲಾವಿದ ಬೆನ್ಶೆಂಟ್ ಲಾರ್ ನನ್ನನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಸ್ವಿಟ್ಜರ್‌ಲ್ಯಾಂಡ್‌ಗೆ ಮೊದಲ ಬಾರಿ ಹೋದಾಗ ‘ಆಸ್ಟ್ರಿಯಾ ಬೊಂಬೆಯಾಟ ಉತ್ಸವ’ ಸನಿಹದಲ್ಲಿತ್ತು. ಅಲ್ಲಿಗೆ ಹೋದಾಗ ವಿಯೆನ್ನಾಗೆ ಕರೆ ಬಂತು. ಅಮೆರಿಕ, ಸಿಂಗಪುರ, ಜರ್ಮನಿ, ಇಂಗ್ಲೆಂಡ್‌ ಸೇರಿದಂತೆ ಹತ್ತಾರು ದೇಶಗಳಲ್ಲಿ ನನ್ನ ‘ಸತ್ಯಭಾಮೆ’ ನಾಟ್ಯವಾಡಿದಳು. 
 
ವಿದೇಶಗಳಲ್ಲಿ ಪ್ರದರ್ಶನ ನೀಡಿದ ಬಳಿಕ ಹಲವರು ಬೊಂಬೆಗಳನ್ನು ಕೇಳುತ್ತಿದ್ದರು. ತಯಾರಿಸಿ ಮಾರುತ್ತಿದ್ದೆ. ಆ ದುಡ್ಡು ಮುಂದಿನ ವಿದೇಶಯಾನಕ್ಕೆ ಆಗುತ್ತಿತ್ತು. 
 
ಗೊಂಬೆಗಳ ಜೊತೆ...
ಬೊಂಬೆಯಾಟದ ಸಮಗ್ರ ಸಂಸ್ಥೆ ಕಟ್ಟಬೇಕೆಂಬ ನನ್ನ ಆಶಯಕ್ಕೆ  ಮುಳಬಾಗಿಲಿನಲ್ಲಿರುವ ಹರಿದಾಸ ಪೀಠದಲ್ಲಿ ಅವಕಾಶ ಸಿಕ್ಕಿದೆ. ಈ ಕೇಂದ್ರವನ್ನು ನೀನಾಸಮ್ ಮಟ್ಟಕ್ಕೆ ತರುವ ಯತ್ನ ನನ್ನದು.
 
ಈವರೆಗೆ ನಾನು ಮೂರು ಸಾವಿರಕ್ಕೂ ಹೆಚ್ಚಿನ ಬೊಂಬೆಗಳನ್ನು ತಯಾರಿಸಿದ್ದೇನೆ. ನಾಟ್ಯಶಾಸ್ತ್ರ ಅಧ್ಯಯನ ಮಾಡಿದ್ದೇನೆ. ಸಂಗೀತ ತಿಳಿದಿದ್ದೇನೆ. ಬೊಂಬೆಯಾಟದಲ್ಲಿ ರಾಗ ಅಳವಡಿಸಿ, ಹಾಡುತ್ತೇನೆ. ಕೆಲವರು ಹೆಣ್ಣುಬೊಂಬೆಗೆ ಮಾತ್ರ ಸಲಾಕೆ ಅಳವಡಿಸಿ, ಉಳಿದವನ್ನು ಸೂತ್ರದಲ್ಲೇ ಆಡಿಸುತ್ತಾರೆ. ನಾನು ಎಲ್ಲ ಬೊಂಬೆಗಳಿಗೂ ಸಲಾಕೆ ಅಳವಡಿಸುತ್ತೇನೆ. 
 
ಹಿಂದೆ 3 ಅಡಿ ಎತ್ತರದ ಸತ್ಯಭಾಮೆ ಬೊಂಬೆಗೆ 16 ಮೊಳದ ಸೀರೆ ಉಡಿಸಲಾಗುತ್ತಿತ್ತು. ಈಗ ಅಷ್ಟು ಉದ್ದದ ಸೀರೆ ಸಿಗೊಲ್ಲ. 6 ಗಜದ ಸೀರೆ ಉಡಿಸುತ್ತೇನೆ. ಹಿಂದಿನ ಬೊಂಬೆ 7 ರಿಂದ 8 ಕೆ.ಜಿ. ಭಾರವಿರುತ್ತಿತ್ತು. ನಿರಂತರವಾಗಿ 2 ಗಂಟೆ  ಕುಣಿಯುತ್ತ ಆಡಿಸುತ್ತಿದ್ದರು. ಸಿಕ್ಕಾಪಟ್ಟೆ ಬೆವರಿಳಿಯುತ್ತಿತ್ತು. ಕಲಾವಿದರು ಕೇವಲ ಚಡ್ಡಿ ಧರಿಸುತ್ತಿದ್ದರು. ಅವರು ವೀಕ್ಷಕರಿಗೆ ಕಾಣುತ್ತಿರಲಿಲ್ಲ. ಆಗಿನ ಕಲಾವಿದರಿಗೆ ಶಕ್ತಿಯೂ ಇತ್ತು. ಈಗ 5 ಕೆ.ಜಿ. ಭಾರದ ಬೊಂಬೆ ಬಳಸುತ್ತಾರೆ. ಆಗ ಬೊಂಬೆಗಳಿಗೆ ಬೂರಗ, ಹಾಲವಾಣ ಮರ ಬಳಸುತ್ತಿದ್ದರು. ಈಗ ಅವು ದುರ್ಲಭ. ಮರದಪುಡಿ ಮತ್ತು ಫೆವಿಕಾಲ್ ಬಳಸಿ ಬೊಂಬೆ ಸಿದ್ಧಪಡಿಸುತ್ತೇನೆ. ಕಿನ್ನಾಳ ಗೊಂಬೆತಂತ್ರ ಬಳಸುತ್ತೇನೆ. ಅವರು ಹುಣಸೆಬೀಜದ ಸರಿ ಉಪಯೋಗಿಸುತ್ತಾರೆ. ನಾನು ಫೆವಿಕಾಲ್ ಬಳಸುತ್ತೇನೆ.
 
**
150 ವರ್ಷದ ‘ಸುಂದರಿ ಸತ್ಯಭಾಮೆ’
ನನ್ನ ತಾತ ನರಸಿಂಗ ರಾವ್ ಅವರು ರೂಪಿಸಿದ್ದ 150 ವರ್ಷದ ಹಿಂದಿನ ‘ಸತ್ಯಭಾಮೆ’ ಬೊಂಬೆ ಈಗಲೂ ದೊಡ್ಡಮುದಗೆರೆಯಲ್ಲಿ ನಳನಳಿಸುತ್ತಿದೆ. 
 
ಒಮ್ಮೆ ಮೈಸೂರು ಅರಮನೆಗೆ ನರಸಿಂಗ ರಾವ್ ಅವರನ್ನು ಕರೆಸಿ ‘ಕೃಷ್ಣಪಾರಿಜಾತ’ ಆಡಿಸಿದ್ದರು. ಪ್ರದರ್ಶನದ ಬಳಿಕ ‘ಸತ್ಯಭಾಮೆ ಬೊಂಬೆಗೆ ಪ್ರತಿಯಾಗಿ ಒಂದು ಊರು ನೀಡುತ್ತೇವೆ’ ಎಂದು ಅಧಿಕಾರಿಗಳು ಹೇಳಿದರಂತೆ. ನರಸಿಂಗರು, ‘ಬೊಂಬೆಯೇ ಬೇಕು’ ಎಂದು ಹಟ ಹಿಡಿದಾಗ – ಆ ಬೊಂಬೆಗೆ ಮೂರು ದಿನ ಕನಕಾಭಿಷೇಕ ನೆರವೇರಿಸಿ, ನರಸಿಂಗ ರಾವ್ ಅವರಿಗೆ ‘ಸೂತ್ರಬ್ರಹ್ಮ ಅಭಿನಯ ಕೇಸರಿ’ ಬಿರುದಿನೊಂದಿಗೆ ಕೈಗೆ ಚಿನ್ನದ ತೋಡ ಹಾಕಿ ಗೌರವಿಸಲಾಯಿತಂತೆ. ಈಗಲೂ ಈ ಬೊಂಬೆಯನ್ನು ಪ್ರದರ್ಶನಗಳಲ್ಲಿ ಆಡಿಸಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT