ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆ

ಕತೆ
Last Updated 12 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

‘ಹರ ತನ್ನ ಭಕ್ತರ ತಿರಿವಂತೆ ಮಾಡುವ...’ ಎಂದು ದೊಡ್ಡ ಧ್ವನಿಯಲ್ಲಿ ಹಾಡುತ್ತಾ ತುಂಬಿದ ಕೊಡ ಹೊತ್ತು ಬರುತ್ತಿದ್ದ ರಾಮನಾಥ. ‘ಆ ಬಾನಿ ತುಂಬಲ್ಲೆ ಇನ್ನೂ ಎರಡು ಕೊಡ ನೀರು ಬೇಕು. ಬೇಗ್ತನ್ನಿ, ನಿಂತೋದ್ರೆ ಕಷ್ಟ’ ಎಂದು ಅವಸರಿಸಿದಳು ಸೀತಕ್ಕ. ‘ಸಾಕು ಬಿಡೆ. ಅಲ್ಲಿ ನಾಣಿ ನೀರ್ ಕಟ್ಟಿದ್ದ. ಹಂಗೆ ಬೇಕಾದ್ರೆ ಬಾವಿಲ್ಲಿ ನೀರಿದ್ದು’ ಎನ್ನುತ್ತಾ ಉಸ್ಸಪ್ಪಾ ಎಂದು ಕುಳಿತ ರಾಮನಾಥ. ತಮ್ಮ ಮನೆಯ ಬಾವಿಯಲ್ಲಿ ಸಾಕಷ್ಟು ನೀರಿಲ್ಲದಿದ್ದರಿಂದ ಪಂಚಾಯಿತದ ನಲ್ಲಿಯಿಂದ ನೀರು ಹಿಡಿದು ಕಂಡ-ಕಂಡ ಬಕಿಟ್ಟು, ಬಾನಿ, ಪಾತ್ರೆ, ಚೊಂಬುಗಳಿಗೆಲ್ಲಾ ತುಂಬುವುದು ಅವರ ನಿತ್ಯದ ಕಾಯಕ. ಆಗಲೇ ತಗ್ಗಿನಲ್ಲಿದ್ದ ತೋಟದಿಂದ ಚಿನಕುರಳಿಯಂತೆ ಮೆಟ್ಟಿಲು ಹತ್ತುತ್ತಾ ಅಂಗಳಕ್ಕೆ ಅಡಿಯಿಟ್ಟಳು ಆತನ ತಾಯಿ ನಾಗ್ವೇಣಜ್ಜಿ.

‘ಗನಾ ಹೊಂಬಾಳೆ. ತೊಳಕಂಡ್ರೆ ಊಟಕ್ಕೂ ಬತ್ತು. ಆನು ಸತ್ತ ಮೇಲೆ ಈ ತ್ವಾಟದಲ್ಲಿ ಹೊಂಬಾಳೆ ಹೆಕ್ಕವ್ವೂ ಯಾರಿಲ್ಯೇನ. ಬೆಳಗಂಬತ್ಲೆ ಭೂತನ್ಹಾಂಗೆ ನೀರು ತುಂಬಲ್ಲೆ ಹದಾ ಆಗ್ತು ರಾಮುಂಗೆ. ಈಗಂತೂ ನಮ್ಮನೆ ನಳದಲ್ಲಿ ನೀರ್ ಬತ್ತಿಲ್ಲೆ ಹೇಳಿ ಮಂದಿ ಮನಿಗ್ಹೋಗಿ ನೀರ್  ತಿರಿದು ತರವ್ವು! ನೀರು ಹೊತ್ತ್ ಹೊತ್ತ್ ಹೈರಾಣಪ್ಪದೇಯ. ಇಪ್ಪ ಮೂರ್ಮಂದಿಗೆ ಎಷ್ಟು ನೀರ್ ಬೇಕು? ಎಷ್ಟು ಮಿಂದ್ರೂ ಕರಿ ಕಾಗೆಯೇನು ಬೆಳೀಕಾಗ್ತಿಲ್ಲೆ...’ ಎಂದು ಸ್ವಗತದ ಧ್ವನಿಯಲ್ಲಿ ಆದರೆ ಎಲ್ಲರಿಗೂ ಕೇಳುವಂತೆ ವಟಗುಟ್ಟುತ್ತಾ ಕೈಯಲ್ಲಿದ್ದ ಅಡಿಕೆ ಮರದ ಹಾಳೆಯ ಹೊರೆಯನ್ನು ಬದಿಗಿರಿಸಿ ಜಗುಲಿಯ ಬೆಂಚಿನ ಮೇಲೆ ಕೂತಳು ಆಕೆ.

‘ಹೇಳವ್ವು ಯಾರೂ ಸಾಯತ್ವಿಲ್ಲೆ. ಸಾಯವ್ವು ಹೇಳತ್ವಿಲ್ಲೆ. ಹೊಂಬಾಳೆ ಹೆಕ್ಕದಿದ್ರೆ ಮನೆ ಮುಳುಗಿ ಹೋಗ್ತಿಲ್ಲೆ’ ಎಂದು ತನ್ನತ್ತೆಯ ಮೇಲೆ ಧುಮುಗುಟ್ಟಿದಳು ಸೀತಕ್ಕ.

‘ಮನೆ ಜನಕ್ಕೆ ಬ್ಯಾಡದಿದ್ರೆ, ಕೊಟ್ಟಿಗೆ ದನಕ್ಕಾದ್ರೂ ಆಗ್ತು ಹೇಳಿ ತಂದಿ ಹೊಂಬಾಳೆನ. ರಾಮುಂಗೆ ಆಸರಿಗೆ ಕೊಂಬಲ್ಲೆ ಆತನೇ... ನೀರು ಹೊತ್ ಹೊತ್ ಸಾಕಾಗಿರ್ತು ಅವಂಗೆ’ ಎಂದು ಸೊಸೆಯ ಮುಂದಿನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತಾನೇ ಅಡಿಗೆ ಮನೆಯತ್ತ ಧಾವಿಸಿದಳು ನಾಗ್ವೇಣಜ್ಜಿ.
***
ಸಕ್ರೆಬೈಲೆಂಬ ಅರೆ ಮುದುಕರ ಹಳ್ಳಿಯಲ್ಲಿ ಇವರದ್ದೊಂದು ಪೂರಾ ಮುದುಕರ ಮನೆ. ಅಂದ್ರೆ, ಎಂಬತ್ತು ದಾಟಿದ ನಾಗ್ವೇಣಜ್ಜಿ, ಅರವತ್ತು ದಾಟಿದ ರಾಮನಾಥ ಹಾಗೂ ಅರವತ್ತು ಸಮೀಪಿಸಿರುವ ಸೀತಕ್ಕ ಸದ್ಯಕ್ಕೆ ಈ ಮನೆಯ ನಿವಾಸಿಗಳು. ಮನೆಯ ಉಳಿದವರೆಲ್ಲಾ ಎಲ್ಲಿ ಅಂದರೆ... ಅವರವರ ಬದುಕಿನ ದಾರಿ ಹಿಡಿದು ಹೋಗಿದ್ದಾರೆ, ಏನು ಸಕ್ರೆಬೈಲಿನಲ್ಲೇ ಗೂಟ ಬಡಿದು ಕೂರಲಿಕ್ಕಾದೀತೆ! ಹಾಗೆಂದೇ ಪೇಟೆ-ಪಟ್ಟಣ, ದೇಶ-ವಿದೇಶಗಳಲ್ಲೂ ಇವರ ಕುಟುಂಬದ ಸದಸ್ಯರು ವ್ಯಾಪಿಸಿದ್ದಾರೆ. ನಾಗ್ವೇಣಜ್ಜಿಗೆ ರಾಮನಾಥನೊಬ್ಬನೇ ಮಗ. ಉಳಿದವರೆಲ್ಲಾ ಹೆಣ್ಣುಮಕ್ಕಳು.

ರಾಮನಾಥನಿಗೆ ಇದ್ದೊಬ್ಬ ಮಗ ಅಮೆರಿಕದಲ್ಲಿದ್ದರೆ, ಇರುವೊಬ್ಬ ಮಗಳು ಈಗ ಬೆಂಗಳೂರಿನವಳು. ಒಂದು ಕಾಲದಲ್ಲಿ ತನ್ನ ಮನೆಯ ಮೊಮ್ಮಕ್ಕಳ ಜೊತೆ, ಶಾಲೆಗೆ ಹೋಗಲೆಂದು ಇದ್ದ ಹೆಣ್ಣುಮಕ್ಕಳ ಮಕ್ಕಳೂ ಸೇರಿ ಗಿಜಿಗುಡುವ ಮನೆಯನ್ನು ನೋಡಿದ್ದ ನಾಗ್ವೇಣಜ್ಜಿಯನ್ನು ‘ಈಗ ಬೇಜಾರು ಬತ್ತಿಲ್ಯ’ ಎಂದು ಕೇಳಿ ನೋಡಿ. ‘ಅಯ್ಯೋ, ಪುರುಶೊತ್ತಿಲ್ಲೆ! ಬೆಳಗಂಬತ್ತಿಗೆ ತ್ವಾಟಕ್ಕೆ ಹೋಗಿ ಬಂದು, ಆಸ್ರೀಗೆ ಕೊಂಡು, ಬಿಸಿಲು ಅಪ್ಪದ್ರೊಳಗೆ ಹಿತ್ತಲಿಗೆ ಹೋಗಿ ಬಂದು, ಪದಾರ್ಥಕ್ಕೆ ಹೆಚ್ಚಿ, ಮಿಂದು, ಪೂಜೆ ಮಾಡಿ, ಉಂಡು, ಅಡ್ಡಾಗಿ, ಮಗ್ಗೆ ಕೊಯ್ದು, ದಂಡೆ ಕಟ್ಟಿ, ದ್ವಾಸೆ ಅಕ್ಕಿ ಬೀಸಿ...’ ಕೇಳಿದ ನಾವೇ ಸುಸ್ತಾಗಬೇಕೆ ಹೊರತು ಅವಳಲ್ಲ. ಎಂಬತ್ತು ವರ್ಷ ಆಗಿದ್ದು ತನಗಲ್ಲವೇ ಅಲ್ಲ ಎಂಬಂತಿತ್ತು ಅವಳ ಮನಸ್ಸು, ಶರೀರವೂ ನೆರವಾಗುತ್ತಿತ್ತೆನ್ನಿ.

ಇನ್ನು ಸಕ್ರೆಬೈಲಿನ ಸೊಸೈಟಿಯಲ್ಲಿ ಗುಮಾಸ್ತನಾಗಿ ಈಗ ನಿವೃತ್ತಿಯಾಗಿರುವ ರಾಮನಾಥ, ಅಪ್ಪನಿಂದ ಬಂದ ಒಂದೆಕರೆ ತೋಟ, ಎರಡೆಕರೆ ಗದ್ದೆಯನ್ನೂ ರೂಢಿಸಿಕೊಂಡವನು. ತನ್ನ ಸಂಸಾರದ ಜೊತೆ ಮನೆಯ ನಾಲ್ಕೈದು ಅಕ್ಕತಂಗಿಯರ ಬದುಕಿನ ಬಂಡಿ ಎಳೆಯುವುದಕ್ಕೂ ನೆರವಾಗಿ, ಯಾವುದಕ್ಕೂ ಹೆಚ್ಚು ಮಾತನಾಡದೆ ಬದುಕಿದವನು. ರಾಮನಾಥನನ್ನು ನೋಡಿಯೇ ಆ ಭಗವಂತ ಸೀತಕ್ಕನನ್ನು ಜೋಡಿ ಮಾಡಿರಬೇಕು. ಇವನೆಷ್ಟು ಮೌನಿಯೋ ಅವಳಷ್ಟೇ ವಾಚಾಳಿ; ಇವನೆಷ್ಟು ಶಾಂತವೋ ಅವಳದಷ್ಟೇ ಗಡಿಬಿಡಿ; ಇವನು ತನ್ನಷ್ಟಕ್ಕೆ ತಾನಾದರೆ ಅವಳಿಗೆ ಊರೆಲ್ಲಾ ಬೇಕು; ಇವನು ತನ್ನ ಕಾಯಿಲೆಗೂ ವೈದ್ಯರ ಬಳಿ ಹೋಗಲಾರ, ಅವಳು ನೆರೆಮನೆಯವಳ ಕಾಯಿಲೆಗೂ ಮದ್ದು ಮಾಡಿಯಾಳು. ಇವನೆಷ್ಟು ವ್ಯವಹಾರದಲ್ಲಿ ಜಾಗೃತನೋ ಅವಳಲ್ಲಿ ಅಷ್ಟೇ ಭಾವುಕತೆ.

ಆದರೆ ಊರ ಮಂದಿಗೆಲ್ಲಾ ಇವರ ಜೋಡಿಯನ್ನು ನೋಡುವುದಕ್ಕಿಂತ ಅತ್ತೆ-ಸೊಸೆ ಜೋಡಿಯನ್ನು ನೋಡುವುದೇ ಮೋಜು. ಸೀತಕ್ಕನಿಗೆ ಮನೆಯ ನಾಯಿ-ಬೆಕ್ಕು, ಕೊಟ್ಟಿಗೆಯ ಹಸು-ಕರು, ಅಂಗಳದ ಗುಬ್ಬಿ-ಕಾಗೆ ಎಲ್ಲವನ್ನೂ ಮಾತಾಡಿಸಬೇಕು. ಆಚೆ ಮನೆಯ ಅತ್ತಿಗೆ, ಈಚೆ ಮನೆಯ ಚಿಕ್ಕಿ, ಮೇಲಿನ ಮನೆಯ ಗೆಳತಿ, ಕೆಳಗಿನ ಮನೆಯ ದೊಡ್ಡಮ್ಮ ಎಲ್ಲರ ಕುಶಲವನ್ನೂ ಕೇಳಬೇಕು. ದಿನಕ್ಕೊಮ್ಮೆಯಾದರೂ ಇವರೆಲ್ಲರನ್ನೂ ಕಂಡು ಮಾತನಾಡಿಸಬೇಕು.

ಆದರೆ ನಾಗ್ವೇಣಜ್ಜಿಯ ಪಾಲಿಗೆ ಸೊಸೆ ಮಾಡುವುದೆಲ್ಲವೂ ಬ್ರಹ್ಮದಂಡ! ‘ಕಾಕೆ-ಕುನ್ನಿ ಜೊತಿಗೆ ಮಾತಾಡ್ತಾ ಕುಂತ್ರೆ ಹ್ಯಾಂಗೆ? ಹುಲ್ಲು-ಅಕ್ಕಚ್ಚಿನಿಂದ ನಮ್ಮ ಹೊಟ್ಟೆ ತುಂಬ್ತಿಲ್ಲೆ’ ಎಂದು ಸೊಸೆಗೆ ಟಾಂಗ್ ಕೊಡುತ್ತಾ ಒಗ್ಗರಣೆಯ ಸಾಸಿವೆಯಂತೆ ಚಟಪಟ ಕೆಲಸ ಮಾಡುತ್ತಿದ್ದಳು. ಸೀತಕ್ಕನಿಗೆ ಎಲ್ಲವೂ ಒಪ್ಪ-ಓರಣ, ಹಿಂದಿನ ಕಾಲದಿಂದಲೂ ಸ್ನಾನಕ್ಕೂ ಇಂಥದ್ದೇ ಸೋಪು ಬೇಕೆಂಬಷ್ಟು ನೀತಿ-ನಿಯಮ. ನಾಗ್ವೇಣಜ್ಜಿಗೆ ಒಟ್ಟು ಕೆಲಸ ಆದರಾಯಿತು, ತಲೆ ಕೂದಲಿಗೆ ರಿನ್ ಸೋಪು ಹಾಕಿ ತಿಕ್ಕಿದರೂ ಸೈ! ಒಮ್ಮೆ ತನ್ನ ಮೊಮ್ಮಗಳಿನ, ಅಂದರೆ ಮಗಳ ಮಗಳಿನ ಮದುವೆಗೆ ತಯಾರಾಗುತ್ತಿದ್ದಳು ನಾಗ್ವೇಣಜ್ಜಿ. ಹಳೆಯದಾದರೂ ಒಪ್ಪವಾಗಿದ್ದ ತನ್ನ ರೇಷ್ಮೆ ಸೀರೆಯನ್ನು ಸೀತಕ್ಕ ಒತ್ತಾಯದಿಂದ ಅತ್ತೆಯ ಕೈಗಿಟ್ಟಳು. ಕಲ್ಯಾಣಮಂಟಪಕ್ಕೆ ಹೊರಡುವ ಹೊತ್ತಿಗೆ ಮಾಳಿಗೆಯ ಕತ್ತಲಿಗೆ ಸರಿದ ನಾಗ್ವೇಣಜ್ಜಿ ಎರಡು ಘಳಿಗೆಯಲ್ಲಿ ಸೀರೆಯನ್ನೇನೋ ಉಟ್ಟು ಬಂದಿದ್ದಳು, ಪೂರಾ ತಿರುಗುಮುರುಗಾಗಿ! ಮೊಮ್ಮಗಳ ಮದುವೆಯನ್ನು ಹಾಗೆಯೇ ಸಾಗಿಸಿದ್ದಳು ಪುಣ್ಯಾತ್ಗಿತ್ತಿ.

ಮನೆಯಲ್ಲಿ ತನ್ನ ಇರುವಿಕೆಯೇ ತಿಳಿಯದಷ್ಟು ಮೌನಿಯಾಗಿರುವ ರಾಮನಾಥನ ಬಗ್ಗೆ ಕಾಳಜಿ ವಹಿಸಲು ಅತ್ತೆ-ಸೊಸೆಯರಲ್ಲಿ ಕೆಲವೊಮ್ಮೆ ಪೈಪೋಟಿ ಏರ್ಪಡುವುದೂ ಇತ್ತು. ‘ಏ ಸೀತೆ... ರಾಮೂಂಗೆ ಮಜ್ಜಿಗೆ ಹನಿಸಿಟ್ಟಿದ್ಯನೇ? ಆನು ಇಪ್ಪಲ್ಲಿವರಿಗೆ ಯನ್ನ ಮಗಂಗೆ ವಾಗಾತಿ. ದನ-ಕರಕ್ಕೆ ಹುಲ್ಲು ಹಾಕಿದಷ್ಟಾದ್ರೂ ಯನ್ನ ಮಗಂಗೆ ಹೊಟ್ಟಿಗೆ ಹಾಕಿದ್ದಿದ್ರೆ ಈ ಬಡವೆ...’ ಎಂದು ನಾಗ್ವೇಣಜ್ಜಿ ಸೊಸೆಯನ್ನು ಕುರಿತು ಗೊಣಗುವುದಕ್ಕೂ ಬೆಲ್ಲ-ಮಜ್ಜಿಗೆ ಕುಡಿದ ಲೋಟವನ್ನು ರಾಮನಾಥ ಬಚ್ಚಲಿಗೆ ತಂದಿಡುವುದಕ್ಕೂ ಸರಿಹೋಗುತ್ತಿತ್ತು.

ಅಡುಗೆಗೆ ತರಕಾರಿ ಹೆಚ್ಚಲು ಅಜ್ಜಿ ಕೂತರೂ ಅಷ್ಟೆ, ‘ಆನು ಇಪ್ಪಲ್ಲಿವರಿಗೆ ಯನ್ನ ಮಗಂಗೆ ಪಲ್ಯ. ಕಡೀಗೆಲ್ಲ ಕುಂತು ಹೆಚ್ಚವ್ವು ಯಾರು? ಹಿತ್ತಲಲ್ಲಿ ತರಕಾರಿ ಬೆಳೆದ್ರೆ ಆಜಿಲ್ಲೆ, ಮಾಡಿ ಹಾಕವ್ವಲಿ ಈ ಪ್ರಾಣಿ’ ಎಂದು ತನ್ನಷ್ಟಕ್ಕೆ ಸೊಸೆಯ ಬಗ್ಗೆ ಅಲವತ್ತುಕೊಳ್ಳುತ್ತಿದ್ದಳು. ‘ಹೊಸ ತಲೆ ಬೆಳದಾಂಗೆ ಹಳೆ ತಲೆ ಅಳೀತಡ ಅತ್ತೇರೆ. ನಿಂಗ ಹೋದ್ಮೇಲೆ ನಿಂಗಳ ಮಗನ್ನ ಹ್ಯಾಂಗಾದ್ರೂ ಸಾಕ್ತಿ ಬಿಡಿ’ ಎಂದು ಆಗೆಲ್ಲಾ ಸೀತಕ್ಕ ಅತ್ತೆಯನ್ನು ಛೇಡಿಸುತ್ತಿದ್ದಳು. ತಾನು ಬೆಳಗ್ಗೆದ್ದು ಗಡಿಬಿಡಿ ಮಾಡಿ ತುಂಬುವ ನೀರಿನಿಂದಲೇ ಈ ಹಿತ್ತಲಿನಲ್ಲಿ ತರಕಾರಿ ಬೆಳೆಯುತ್ತಿರುವುದು ಎಂದು ಅತ್ತೆಗೆ ನೆನಪಿಸಿ, ತನ್ನ ಕೆಲಸದ ಮಹಾತ್ಮೆಯನ್ನು ಸಾರುತ್ತಿದ್ದಳು.
***
ಇಂತಿಪ್ಪ ನಾಗ್ವೇಣಜ್ಜಿಗೆ ದಿನವಿಡೀ ಕೆಲಸ ಮಾಡುವುದನ್ನು ಬಿಟ್ಟರೆ ಇದ್ದಿದ್ದು ಇನ್ನೊಂದೇ ಚಟ– ಹೊಸ ಪಾತ್ರೆ ಒಟ್ಟುಮಾಡುವುದು. ಅಪರೂಪಕ್ಕೆಲ್ಲಾದರೂ ಪೇಟೆಗೆ ಹೋಗಲಿ, ಮನೆ ಬಾಗಿಲಿಗೆ ಯಾರೇ ಪಾತ್ರೆ ಮಾರುವವರು ಬರಲಿ, ಎಲ್ಲಾದರೂ ನೆಂಟರ ಮನೆಗೆ ಹೋಗಲಿ... ಅಲ್ಲಿರುವ ಪಾತ್ರೆಗಳನ್ನು ನೋಡುವುದು, ಹೊಸತೇನಾದರೂ ಕಂಡರೆ ಹೇಗಾದರೂ ಪೈಸೆ ಪೈಸೆ ಜೋಡಿಸಿ ಖರೀದಿಸುವುದು. ಮೊದಲೆಲ್ಲಾ ತನ್ನದೇ ಅರ್ಧ ಡಜನ್ ಮಕ್ಕಳ ಕಾರ್ಯಕ್ಕೆಂದು ಪಾತ್ರೆ ಕೂಡಿಡುತ್ತಿದ್ದಳು. ಮನೆಯಲ್ಲೇ ಮದುವೆ–ಮುಂಜಿ ಮಾಡುತ್ತಿದ್ದ ದಿನಗಳವಾದ್ದರಿಂದ ಹೆಚ್ಚಿನ ಪಾತ್ರೆಗಳ ಅಗತ್ಯವೂ ಬೀಳುತ್ತಿತ್ತೆನ್ನಿ.

ಜೊತೆಗೆ ಐವರು ಹೆಣ್ಣುಮಕ್ಕಳಿಗೆ ಬಳುವಳಿಯಾಗಿ ಪಾತ್ರೆಗಳನ್ನು ನೀಡಬೇಕಿತ್ತಲ್ಲಾ. ಹಾಗಾಗಿ ಯಾವುದಕ್ಕೂ ಇರಲಿ ಎಂಬುದಾಗಿತ್ತು ಅವಳ ಲೆಕ್ಕ, ಆದರೀಗ ಹೆಚ್ಚಿನ ಪಾತ್ರೆಗಳೆಲ್ಲಾ ಅಟ್ಟ ಏರಿದ್ದವು. ಆದರೂ ಪಾತ್ರೆ ಕೊಳ್ಳುವ ಚಟ ಮಾತ್ರ ನಾಗ್ವೇಣಜ್ಜಿಗೆ ಬಿಟ್ಟಿರಲಿಲ್ಲ. ‘ನಮ್ಮನೆ ಶೋಭಿ, ಅದೇ… ರಾಮುನ್ನ ಮಗಳು, ಬೆಂಗ್ಳೂರಲ್ಲಿ ನೌಕ್ರಿ ಮಾಡ್ತಿದ್ದು. ಈ ಸಾರಿಯಾದ್ರೂ ಕೂಸಿನ ಜಾತಕ ಹೊರಗೆ ಹಾಕವ್ವು ಹೇಳ್ತಿದ್ದಿ. ಅದರ ಕಾರ್ಯಕ್ಕಾದ್ರೂ ಬೇಕು’ ಎನ್ನುವುದು ಆಕೆಯ ತರ್ಕ.

ಇದೇ ತರ್ಕವನ್ನು ಮೊಮ್ಮಗ, ಅಂದ್ರೆ ರಾಮನಾಥನ ಮಗನ ಮೇಲೂ ಉಪಯೋಗಿಸಿದ್ದಳು. ಆದರೆ ಅಮೆರಿಕ ಸೇರಿದ ಮಾಣಿ, ಅಲ್ಲಿ ತನ್ನದೇ ಆಫೀಸಿನ ಗುಜರಾತಿ ಹುಡುಗಿಯನ್ನು ಮದುವೆಯಾಗುವ ಮೂಲಕ ತನ್ನಜ್ಜಿಯ ಪಾತ್ರೆಗಳನ್ನು ಅಟ್ಟದಿಂದ ಇಳಿಯಲೇ ಬಿಡಲಿಲ್ಲ. ಇದೇ ವಿಷಯವಾಗಿ ಅತ್ತೆ ಸೊಸೆಯ ನಡುವೆ ವಾಗ್ಯುದ್ಧ ನಡೆಯುವುದೂ ಇತ್ತು. ‘ಎಲ್ಲಾ ಪಾತ್ರೆ ಅಟ್ಟಕ್ಕೆ ಕುಂತು ಜಂಗು ಬಡೀತು ಅತ್ತೇರೆ. ಮತ್ತೆಂತಕ್ಕೆ ಹೊಸ ಪಾತ್ರೆ?’ ಎಂದು ಸೊಸೆ ಗೊಣಗುತ್ತಿದ್ದಳು. ‘ನೋಡು ಸೀತೆ, ಎಲ್ಲರಿಗೂ ಒಂದಲ್ಲಾ ಒಂದು ಮಾಯೆ ಇರ್ತಡ. ಅದು ಬಿಟ್ಟಿಕ್ಕೆ ಹೋಪದು ನಾವು ಕಾಯ ಬಿಟ್ಟಾಗ್ಲೇಯ.

ಸನ್ಯಾಸಿಗಳನ್ನೂ ಬಿಡದ್ ಮಾಯೆ ಇನ್ನು ನಮ್ಮನ್ನೆಲ್ಲಾ ಬಿಡ್ತ? ಅದೂ ಅಲ್ದೆ, ಆನು ಇಷ್ಟೆಲ್ಲಾ ಜಾಗ್ರತೆ ಮಾಡಿದ್ದಕ್ಕೆ ಇವತ್ತು ಈ ಸಂಸಾರದ ರಥ ನೆಡೀತಿದ್ದು. ಅಟ್ಟದ್ ಮೇಲಿಂದು ಯಾವ್ದಕ್ಕೂ ಬ್ಯಾಡಾಂದ್ರೆ ಕಡಿಗೆ ಯನ್ನ ಚಟ್ಟಕ್ಕೆ ಹಾಕು ಅಥ್ವಾ ಆನು ಸತ್ಮೇಲೆ ದಾನ ಕೊಡು’ ಎಂದೆಲ್ಲಾ ಮಾತಾಡಿ ಸೊಸೆಯ ಬಾಯಿ ಮುಚ್ಚಿಸುತ್ತಿದ್ದಳು ನಾಗ್ವೇಣಜ್ಜಿ. ‘ಏತಕೆ ಮರುಳಾದೆ ತರಳೆ...’ ಎಂದೇನೋ ರಾಮನಾಥನ ಗುಣುಗುಣು ಹಾಡು ಹೌದೋ ಅಲ್ಲವೋ ಎಂಬಂತೆ ಕೇಳಿಸುತ್ತಿತ್ತು.

ನಾಗ್ವೇಣಜ್ಜಿಯಂತೆ ಬಾಯಿ ಬಿಟ್ಟು ಹೇಳದಿದ್ದರೂ, ಸೀತಕ್ಕನ ಮನದಲ್ಲಿ ಇದ್ದಿದ್ದೂ ಅದೇ, ಮಗಳು ಶೋಭಿಗೊಂದು ಮದುವೆ ಮಾಡಬೇಕು ಎಂಬುದು. ವರ್ಷ 27 ಆದರೂ ಶೋಭ ಮಾತ್ರ ಮನೆಯವರು ತೋರಿಸುವ ಯಾವ ಹುಡುಗನನ್ನೂ ನೋಡಲು ಒಪ್ಪಿರಲಿಲ್ಲ. ಮಗನ ಮದುವೆಯಲ್ಲಿ ತಮ್ಮದು ವಿಶೇಷ ಪಾತ್ರವೇನೂ ಇರಲಿಲ್ಲ. ಈಗ ಮಗಳ ಮದುವೆಗಾದರೂ ಸಂಭ್ರಮದಿಂದ ಓಡಾಡಬೇಕು, ಯಾರ್ಯಾರಿಗೆ ಸೀರೆ ಕೊಡಬೇಕು, ಮಗಳಿಗೆ ಏನೆಲ್ಲಾ ಒಡವೆ ಹಾಕಬೇಕು ಎಂದೆಲ್ಲಾ ಸೀತಕ್ಕ ಲೆಕ್ಕ ಹಾಕುತ್ತಿದ್ದಳು.

ಯಾರಾದರೂ ಲಗ್ನಪತ್ರಿಕೆ ಹಿಡಿದು ಕರೆಯಲು ಬಂದರೆ, ‘ನಮ್ಮನೆ ಕೂಸಿನ್ ಮಂಗಲಪತ್ರ ಹೀಂಗೆ ಮಾಡ್ಸಲಿಲ್ಲೆ’ ಎಂದು ಮನದಲ್ಲೇ ವಿನ್ಯಾಸ ಮಾಡುತ್ತಿದ್ದಳು. ಮೊಮ್ಮಗಳಿಗೆ ಬಳುವಳಿಗೆಂದು ಪಾತ್ರೆ ಖರೀದಿಸಿ ಪೇರಿಸುತ್ತಿದ್ದ ಅತ್ತೆಗೆ ‘ಈಗೆಲ್ಲಾ ಈ ನಮ್ನಿ ಪಾತ್ರೆ ಯಾರು ಕೊಡ್ತ ಬಳಿವಾರಿಗೆ? ಕುಕ್ಕರು, ಮಿಕ್ಸರು, ಇನ್ಡಕ್ಷನ್ ಒಲೆ ಪಾತ್ರೆ... ಇಂಥದ್ನೇ ಕೊಡ್ತ’ ಎಂದು ಕಿವಿಮಾತು ಹೇಳುತ್ತಿದ್ದಳು. ಊರಿನವರು ‘ಸೀತಕ್ಕ... ಒಂದೊಳ್ಳೆ ಮಾಣಿದ್ದ. ಜಾತಕ ಕೊಡ್ತ್ರಾ?’ ಎಂದು ಕೇಳಿದಾಗ ಮನದಲ್ಲೇ ಮಿಡುಕುತ್ತಿದ್ದಳು. ‘ವರ್ಷ ಕೂರ್ತಿಲ್ಲೆ ಕೂಸಿಗೆ. ಈ ದೀಪಾವಳಿಗಾದ್ರೂ ಜಾತಕ ಕೊಡಿ’ ಎಂದು ಕೇರಿಯವರು ಹೇಳಿದಾಗ ಗಾಬರಿ ಬೀಳುತ್ತಿದ್ದಳು. ಆದರೆ ಇದ್ಯಾವುದರ ಬಗ್ಗೆಯೂ ರಾಮನಾಥನದ್ದು ಮಾತ್ರ ದಿವ್ಯ ಮೌನ. ಇದಕ್ಕೆ ಕಾರಣವೂ ಇತ್ತೆನ್ನಿ.

ಶೋಭ ತನ್ನದೇ ಆಫೀಸಿನ ಯಾರೊಂದಿಗೋ ಮದುವೆ ಮಾಡಿಕೊಂಡಿದ್ದಾಳೆ ಎಂಬ ಬಗ್ಗೆ ಗುಸುಗುಸು ಇತ್ತು. ಆಕೆ ಮದುವೆ ಮಾಡಿಕೊಂಡಿದ್ದಾಳೋ ಇಲ್ಲವೋ, ಒಟ್ಟಿನಲ್ಲಿ ಆ ವ್ಯಕ್ತಿಯೊಟ್ಟಿಗೆ ಆಕೆ ಒಂದೇ ಅಪಾರ್ಟ್‌ಮೆಂಟಿನಲ್ಲಿ ವಾಸಿಸುತ್ತಿರುವುದನ್ನು ರಾಮನಾಥ ಖಚಿತಪಡಿಸಿಕೊಂಡಿದ್ದ. ಮದುವೆ ಬಗ್ಗೆ ಮಾತೆತ್ತಿದರೆ ಹಣ, ಕರಿಯರ್, ಗೋಲ್ ಎಂದೆಲ್ಲಾ ಶೋಭ ಮಾತಾಡುತ್ತಿದ್ದಳು. ಮದುವೆಗೆ ಒತ್ತಾಯ ಮಾಡಿದರೆ ‘ಮದುವೆ ಎಲ್ಲಾ ವೇಸ್ಟ್. ನಿಂಗೆ ಅದೆಲ್ಲಾ ಅರ್ಥ ಆಗ್ತಿಲ್ಲೆ’ ಎಂದು ರೇಗುತ್ತಿದ್ದಳು. ಮಗಳ ಮಾತಿನ ಪ್ರಕಾರ ಮದುವೆಯಲ್ಲಿ ಯಾವ ಭಾಗ ದಂಡ ಎಂಬುದು ರಾಮನಾಥನಿಗೆ ಕಡೆಗೂ ಬಗೆಹರಿದಿರಲಿಲ್ಲ. ಒಟ್ಟಿನಲ್ಲಿ ಆಕೆಯ ಜೀವನದ ಕಥೆ ಏನು ಎಂಬುದು ರಾಮನಾಥನಿಗೆ ಸರಿಯಾಗಿ ಗೊತ್ತಿಲ್ಲವಾದರೂ ಸುಸೂತ್ರವಾಗಿಲ್ಲ ಎಂಬುದು ಅರ್ಥವಾಗಿತ್ತು. ಹಾಗಾಗಿ ಮನೆಯಲ್ಲಿ ಮಡದಿ ಮತ್ತು ತಾಯಿ ಎಷ್ಟೇ ಒತ್ತಾಯಿಸಿದರೂ ಮಗಳ ಮದುವೆಯ ಬಗ್ಗೆ ರಾಮನಾಥ ವಿಶೇಷ ಪ್ರಯತ್ನ ಮಾಡುತ್ತಿರಲಿಲ್ಲ. ಮತ್ತೂ ಕೇಳಿದರೆ, ‘ಕೂಸು ಒಪ್ಪಿದರೆ, ಮದುವೆ ಮಾಡದೇ ಸೈ’ ಎಂದು ನುಡಿದು ಜಾಗ ಖಾಲಿಮಾಡುತ್ತಿದ್ದ.

ಆದರೆ ದಿನದಿಂದ ದಿನಕ್ಕೆ ರಾಮನಾಥ ಅಂತರ್ಮುಖಿಯಾಗುತ್ತಿದ್ದ. ಮೊದಲೇ ಅತನ ಮಾತು ಕಡಿಮೆ, ಈಗಂತೂ ಕೇಳಲೇಬೇಡಿ. ಯಾರ ಸುಖಕ್ಕಾಗಿ ತಾನಿಲ್ಲಿ ಆಸ್ತಿ ಮನೆಯನ್ನು ರೂಢಿಸುತ್ತಿದ್ದೇನೆ ಎಂಬುದು ಆತನಿಗೆ ಆರ್ಥವಾಗುತ್ತಿರಲಿಲ್ಲ. ತೋಟದಲ್ಲಿರುವ ಹಾಳೆಯ ಚೂರುಗಳನ್ನೂ ಬಿಡದೆ ನಾಗ್ವೇಣಜ್ಜಿ ಹೆಕ್ಕಿ ತರುವಾಗ, ‘ಸಾಕು ಬಿಡೆ ಆಯಿ. ಅದನ್ನೆಲ್ಲಾ ಮನಿಗೆ ತಪ್ಪದಕ್ಕಿಂತ ಮಣ್ಣಲ್ಲೇ ಬಿದ್ರೆ ಕೊಳೆತು ಗೊಬ್ರಾದ್ರೂ ಆಗ್ತು’ ಎನ್ನುತ್ತಿದ್ದ. ಬಾವಿ ಮನೆ ಭದ್ರ ಮಾಡಬೇಕು, ಬಚ್ಚಲಿನ ಪಡಿಮಾಡು ಸೋರುತ್ತಿದೆ, ಕೊಟ್ಟಿಗೆ ಗೋಡೆ ಬಿಗಿ ಮಾಡಬೇಕು ಎಂದು ತಾಯಿ ಹೇಳುವಾಗ ಈ ಹಳೆಮನೆಗಿನ್ನೇಕೆ ಶೃಂಗಾರ ಎನಿಸುತ್ತಿತ್ತು ಆತನಿಗೆ. ಕ್ಷಣಕ್ಕೊಮ್ಮೆ ‘ಆನು ಸತ್ತ ಮೇಲೆ’ ಎಂದು ಹೆದರಿಸುತ್ತಾ ಮಕ್ಕಳ-ಮೊಮ್ಮಕ್ಕಳ ಮುಂದಿನ ಬದುಕಿಗೆ ಸದಾ ಸಿದ್ಧತೆ ನಡೆಸುತ್ತಿದ್ದ ತಾಯಿಯನ್ನು ಕಂಡು ‘ಬಿದ್ದೀಯಬ್ಬೆ ಮುದುಕಿ ಬಿದ್ದೀಯಬ್ಬೆ’ ಎಂದು ಹಾಡಿಕೊಳ್ಳುತ್ತಿದ್ದ.

ಹಾಗೆಂದು ತನ್ನ ಆಂತರ್ಯವನ್ನು ಸೀತಕ್ಕನೆದುರಿಗೂ ಬಿಚ್ಚಿಡಲಾರದೆ ಒದ್ದಾಡುತ್ತಿದ್ದ. ‘ಹೋಯ್... ಸುಗುಣತ್ಗೆ ಮಗಳು ಧಾತ್ರಿ ಸುದ್ದಿ ಕೇಳಿದ್ರಾ? ಮದುವೆಯಾಗಿ ಮೂರು ವರ್ಷಕ್ಕೀಗ ಡೈವೋರ್ಸ್ ಮಾಡದಡ ಮಾರಾಯ್ರೇ! ನಿನ್ನೆ ಸುಗುಣತ್ಗೆ ಫೋನ್ ಮಾಡಿಕ್ಯಂಡು ಸ್ವಲ್ಪಾ ಬೇಜಾರ್ ಮಾಡ್ತ. ಅಂವನ ಜೊತಿಗೆ ಹೊಂದಿಕೆ ಆಗ್ತಿಲ್ಲೆ ಅಂಬಡ. ಪಾಪ! ಹೀಂಗೆ ಅಪ್ಪದಲ್ಲ’ ಎಂದು ಸೀತಕ್ಕ ಅಲವತ್ತುಕೊಂಡಾಗ ಬೆಚ್ಚುತ್ತಿದ್ದ. ಮದುವೆಯಾಗಿ ಜೊತೆಗೆ ಬದುಕುವವರ ಕತೆಯೇ ಹೀಗಾದರೆ, ಆಗದೆಯೇ ಬದುಕುವವರ ಕತೆ ಇನ್ನೇನೊ ಎಂದು ತಲ್ಲಣಿಸುತ್ತಿದ್ದ. ತನ್ನ ಹಳೆಯ ರೇಡಿಯೋವನ್ನು ಪುರುಸೊತ್ತು ಇದ್ದಾಗೆಲ್ಲಾ ಇನ್ನಷ್ಟು ರಿಪೇರಿ ಮಾಡುತ್ತಿದ್ದ. ಅದರ ಗೊರಗೊರ ಶಬ್ದ ಕಡಿಮೆಯಾದರೆ ಖುಷಿಯಿಂದ ತಾನೂ ಅದರೊಟ್ಟಿಗೆ ಹಾಡುತ್ತಿದ್ದ. ಈಗೀಗ ಸೀತಕ್ಕನಂತೆ ತಾನೂ ಬೆಕ್ಕು-ನಾಯಿ, ಹಸು-ಕರುಗಳನ್ನು ಮಾತಾಡಿಸುತ್ತಿದ್ದ. ಅವುಗಳು ಪ್ರೀತಿ ತೋರಿಸುವಾಗ ಆವರಿಸುವ ಭದ್ರತೆಯ ಭಾವ ಕಂಡು ಕಣ್ತುಂಬಿಕೊಳ್ಳುತ್ತಿದ್ದ.
***
ಧಾತ್ರಿ ಡಿವೋರ್ಸ್ ತೆಗೆದುಕೊಳ್ಳುತ್ತಿರುವ ಸುದ್ದಿ ನಾಗ್ವೇಣಜ್ಜಿಯ ಕಿವಿಗೂ ಬಿದ್ದಿತ್ತು. ಧಾತ್ರಿಯೂ ಆಕೆಯ ಮೊಮ್ಮಗಳೇ, ತನ್ನ ಮಗಳಾದ ಸುಗುಣನ ಮಗಳು. ಡಿವೋರ್ಸ್ ತೆಗೆದುಕೊಳ್ಳುವವರ ಸುದ್ದಿಗಳು ಊರಲ್ಲಿ ಹೊಸದಲ್ಲವಾದರೂ, ನಾಗ್ವೇಣಜ್ಜಿಯ ಕುಟುಂಬದಲ್ಲಿ ಹೊಸತೇ. ‘ಈಗಿನ ಹುಡುಗರ ತಲಿಯೇ ಪೂರಾ ಹಾಳು. ನೆಗಡಿ ಆತು ಹೇಳಿ ಮೂಗು ಕೊಯ್ಯದಾ! ಔಷಧಿ ತಗಳವ್ವು. ಯಾರ್ ಕೇಳಿದ್ರೂ ಡೈವೋರ್ಸು... ಅಪ್ಪ-ತಾಯಿಗೆ ಇನ್ನೂ ಮದುವೆ ಮಾಡಿದ್ ಖರ್ಚಿನ ಬಿಶಿ ಆರದ್ರೊಳಗೇ ಇವರದ್ದು ನಂಬ್ರ ಶುರು. ಓದಿದವ್ವೆಲ್ಲಾ ಬುದ್ಧಿವಂತ್ರಾಗ್ತ ಹೇಳಿ ಯಾರ್ ಹೇಳಿದವ್ವು? ಯಂಗವ್ವೆಲ್ಲಾ ಓದಗಿದ್ದೇ ಹೋದ್ರೂ ಬದುಕು ಮಾಡಿದ್ವಿಲ್ಯಾ...’ ಎಂದು ವಟಗುಟ್ಟುತ್ತಾ ನಾಗ್ವೇಣಜ್ಜಿ ಅಡಿಗೆಗೆ ತರಕಾರಿ ಹೆಚ್ಚುತ್ತಿದ್ದಳು.

‘ಹೌದಪ! ಹಂಗೆ ಡೈವರ್ಸ್ ಕೊಟ್ಟ ಕೂಡ್ಲೇ ಎಲ್ಲಾ ಮುಗಿದೋಗ್ತ’ ಅತ್ತೆಯ ವಿಶ್ಲೇಷಣೆಗೆ ಸೀತಕ್ಕನೂ ಧ್ವನಿಗೂಡಿಸಿದಳು.
‘ಅಯ್ಯೋ ಬಿಡೆ, ಎಲ್ಲಾ ಮುಗಿದ ಮೇಲೆ ಈಗಿನ ಒಂದೊಂದ್ ಹುಡುಗ್ರು ಮದ್ವೆ ಮಾಡ್ಕಂಬದಡಲೆ ಸೀತೆ! ಅದಕ್ಕೆ ನಾಕು ದಿನಕ್ಕೆ ಗಂಡ-ಹೆಂಡ್ತಿಗೆ ಒಬ್ಬರಿಗೊಬ್ರು ಬ್ಯಾಜಾರು ಬತ್ತ, ಹೊಂದಿಕಿಲ್ಲೆ, ಮಣ್ಣಿಲ್ಲೆ-ಮಶಿಯಿಲ್ಲೆ’.

‘ಇದನ್ನೆಲ್ಲಾ ಯಾರ್ ಹೇಳ್ತ ನಿಂಗಕ್ಕೆ?’
‘ಎಲ್ಲಾ ಗೊತ್ತಿದ್ದು. ಯಂಗಕ್ಕೆಲ್ಲಾ ಲಗ್ನಾಗಿ ತಿಂಗಳಾದ್ರೂ ಗಂಡನ ಮುಖ ನೋಡಲ್ಲೆ ಶಿಕ್ತಿತ್ತಿಲ್ಲೆ. ಯಂಗಳ ಮದುವೆ ಮರುದಿನ ಅಪ್ಪನ ಮನಿಗೆ ಕಳಶಿದಿದ್ವ ಯನ್ನ... ಪರತ್ ಬಸ್ಸಿಗೆ ಬಪ್ಪಕ್ಕಾರೆ ಆನು ಒಬ್ಬಳೇಯ. ಆಗೆಲ್ಲಾ ಪ್ಯಾಟೆಲ್ಲಿ ಬಸ್ಸಿಳಿದು ಮೂರ್ನಾಕು ಮೈಲು ಒಳಗೆ ನೆಡಿಯವ್ವು. ಅದಕ್ಕೆ ಯನ್ನ ಕರ್ಕಂಡು ಹೋಪಲ್ಲೆ ಇವ್ರು ಬತ್ತ ಹೇಳಿ ಬಸ್ ಹತ್ಸಿದ್ದ. ಎಂತಾ ಮಾಡಿದ್ರೂ ಇವ್ರ ಮುಖವೇ ನೆನಪಾಗ್ತಿಲ್ಲೆ ಯಂಗೆ... ಸಮಾ ನೋಡಿದ್ರಲ್ದ! ಬಸ್ ಇಳಿದ್ಮೇಲೆ ಇವ್ರ ಗುರ್ತು ಶಿಗದಿದ್ರೆ ಯಂತ ಮಾಡದು ಹೇಳು, ತೀಡುವಾಂಗ ಆತು. ಆದ್ರೆ ಬಸ್ ಇಳಿದ್ಕೂಡ್ಲೆ ಇವ್ರೇ ಯನ್ನ ಗುರ್ತು ಹಿಡಿದು ಕರ್ಕಂಡುಹೋದ, ಹಾಂಗಾಂಗಿ ಅಡ್ಡಿಲ್ಲೆ’.

‘ಹಿಹ್ಹಿಹ್ಹಿ... ಮನೆಲ್ಲಿ ಗೊತ್ತಾಗಿದ್ರೆ ಈ ಕೂಸು ದಡ್ಡ ಹೇಳ್ತಿದ್ವೇನ ಅತ್ತೇರೆ’ ಕಾಲೆಳೆದಳು ಸೀತಕ್ಕ.
‘ನಿಂಗದೇ ಖುಷಿ... ಹೌದಾ! ಆನು ಯಂತದೂ ಮಾತೇ ಆಡ್ತಿದ್ನಿಲ್ಲೆ. ಅದ್ಕೇ ಬದುಕಿದ್ದು ಈ ಮನೆಲ್ಲಿ. ನಿನ್ಹಾಂಗೆ ವಟವಟ ಮಾಡಿದ್ರೆ ಏನೋ ಆಗ್ತಿತ್ತು’.
‘ಹೌದೌದು! ಈ ಗುಮ್ಮನಗುಸ್ಕಂದಿರ ಸಂತಿಗೆ ಇಪ್ಪ ಕಷ್ಟ ಯಂಗೇ ಗೊತ್ತು’.

‘ಓಹೋ! ನಿನ್ನ ಬೆಕ್ಕು, ಕಾಕೆ, ಕುನ್ನಿ ಎಲ್ಲಾ ಮಾತಾಡತ್ವನೇ ಸೀತೆ. ಯಾವಾಗ್ಲೂ ಅವ್ರ ಸಂತಿಗೇ ಇರ್ತೆ’ ಕೆಣಕಿದಳು ನಾಗ್ವೇಣಜ್ಜಿ.
‘ಮಾತಾಡಲ್ಲೆ ಬರದ್ದೆ ಹೋದ್ರಿಲ್ಲೆ, ಒಗ್ಗರಣೆ ಕೊಡತ್ವಿಲ್ಲೆ ಅವೆಲ್ಲಾ’.

‘ಅಲ್ದ ಮತ್ತೆ! ನಿನ್ ಮಾತು ಕೇಳಲ್ಲೆ ಜನ ಇದ್ರಾತು. ಅವು ಮಾತಾಡ ಹೇಳಿಲ್ಲೆ ನಿಂಗೆ. ಯಮ್ಮನೆ ರಾಮು ಆಗಿದ್ದಕ್ಕೆ ಅಡ್ಡಿಲ್ಲೆ. ಇಲ್ಲದಿದ್ರೆ ನಿಂದೂ ಡೈವೋರ್ಸೆಯ. ತಿಳತ್ತಾ?’.

‘ಹಂಗೆ ಡೈವೋರ್ಸ್ ಕೊಡದಿದ್ರೆ ಮೊದ್ಲು ನಿಂಗಕ್ಕೆ ಕೊಡ್ತಿದ್ದಿ ಆನು!’.
‘ಪೂರಾ ಮಳ್ಳು ನಿಂಗೆ! ಕಟ್ಟಿಕ್ಯಂಡ ಸಂಬಂಧಕ್ಕೊಂದೇ ಡೈವೋರ್ಸು. ಯಂದು-ನಿಂದು ಕಟ್ಟಿಕ್ಯಂಡಿದ್ದಲ್ಲ, ಆದ ಸಂಬಂಧ’.
‘ಹೂಂ. ಒಟ್ನಲ್ಲಿ ಬಿಡುಗಡೆ ಇಲ್ಲೆ ಅಂತಾತು’.

‘ಎಲ್ಲಾ ಮಾಯೆ ಸೀತೆ. ಹಾಂಗೆಲ್ಲಾ ಸಸಾರಕ್ಕೆ ಬಿಡುಗಡೆ ಶಿಕ್ತಾ’ ಎಂದು ವೇದಾಂತ ಹೇಳುತ್ತಾ ಎದ್ದ ನಾಗ್ವೇಣಜ್ಜಿ, ತರಕಾರಿ ಸಿಪ್ಪೆ ಹಿಡಿದು ಗೊಬ್ಬರದ ಗುಂಡಿಯತ್ತ ನಡೆದರು.
***
ಈ ಬಾರಿ ಹಬ್ಬಕ್ಕೆ ಶೋಭ ಬಂದಾಗ ಅವಳನ್ನು ಹಿಡಿದು ಮದುವೆಗೆ ಒಪ್ಪಿಸಲೇಬೇಕು ಎಂದು ತೀರ್ಮಾನ ಮಾಡಿದ್ದಳು ಸೀತಕ್ಕ. ಎಲ್ಲರ ಕೊಂಕು ನುಡಿಗಳು, ನಡುವೆ ತನ್ನದೇ ಆತಂಕ, ಅಲ್ಲಿಲ್ಲಿ ಹರಿದಾಡುವ ಏನೇನೋ ಸುದ್ದಿಗಳು ಎಲ್ಲದರಿಂದ ಆಕೆಯ ಒಳಗುದಿ ಹೆಚ್ಚುತ್ತಿತ್ತು. ಇದಕ್ಕೆ ತಕ್ಕಂತೆ ಕೊಟ್ಟಿಗೆಯಲ್ಲಿರುವ ಭಾಗ್ಯನ ಬಳಿ ಸೀತಕ್ಕ ತನ್ನ ಕಷ್ಟ ಹೇಳಿಕೊಂಡಾಗ, ಅದೂ ತಲೆ ಹಾಕಿ ಅನುಮೋದನೆ ನೀಡಿತ್ತು. ಈ ಬಾರಿ ಶೋಭ ಬಂದಾಗ ಅವಳನ್ನು ಮದುವೆಗೆ ಒಪ್ಪಿಸುವ ಕೆಲಸ ತನ್ನದೆಂದೂ, ಗಂಡು ಹುಡುಕಿ ಮುಂದಿನ ತಯಾರಿ ನಡೆಸಬೇಕೆಂದೂ ಗಂಡನಿಗೆ ತಾಕೀತು ಮಾಡಿದ್ದಳು. ಆತ ಎಂದಿನಂತೆ ಮೌನವಾಗಿ ತನ್ನ ರೇಡಿಯೋ ರಿಪೇರಿ ಕೆಲಸದಲ್ಲಿದ್ದ.

‘ನಾಳೆ ಸೊನಗಾರ ಶೆಟ್ಟಿ ಹತ್ರ ಹೋಪನ ಕೂಸೆ. ನಿಂಗೆ ಯಾನಮ್ನಿ ಬಳೆ ಅಡ್ಡಿಲ್ಲೆ ನೋಡು. ಈಗೆಲ್ಲ ಚಿನ್ನದ ರೇಟು ಹನಿ ಸೋವಿಯಾಜಲ್ಲೆ’– ಹಬ್ಬದ ದಿನ ಊಟವಾದ ಮೇಲೆ ಅವಕಾಶ ನೋಡಿ ಮಗಳ ಬಳಿ ಪೀಠಿಕೆ ಹಾಕಿದ್ದಳು ಸೀತಕ್ಕ.

‘ಯಂಗೆಂತಕ್ಕೆ ಚಿನ್ನ! ನಿಂಗೆ ಬೇಕಾದ್ರೆ ತಗ, ನಾನೇ ದುಡ್ಡು ಕೊಡ್ತಿ’ ಮಗಳು ಪ್ರತಿನುಡಿದಳು.
‘ಯಂಗಲ್ಲ, ನಿಂಗೇಯ. ಇನ್ನೂ ಬ್ಯಾಡ ಹೇಳ್ತ ಕುಂತಿದ್ರೆ ವರ್ಷ ಕಡಿಮೆ ಅಲ್ಲ ಕೂಸೆ. ಗುರು ಭಟ್ರ ಷಡ್ಡಕನ ಮಗ ಅಮೆರಿಕದಲ್ಲಿದ್ನಡ. ಚೋಲೊ ಕೆಲ್ಸನಡ. ಗುರುಭಟ್ರೆ ಮೊನ್ನೆ ಬಂದು ಜಾತಕ ಕೇಳಿದ್ರು, ದೀಪಾವಳಿ ಮರುದಿನ ಕೊಡ್ತ್ಯ ಹೇಳಿದ್ದಿ. ಸುಮ್ನೆ ಹೇಳಿದ್ ಕೇಳು. ನಿನ್ ಕೆಲ್ಸನೆಲ್ಲ ಎಲ್ಲಿ ಹೋದ್ರೂ ಮಾಡಲಕ್ಕು...’ ಸೀತಕ್ಕ ಶುರು ಹಚ್ಚುತ್ತಿದ್ದಂತೆ ನಾಗ್ವೇಣಜ್ಜಿ ಮುಂದುವರೆಸಿದಳು.

‘ಯಂಗೂ ವರ್ಷಾತು ತಂಗಿ. ಇನ್ನೆಷ್ಟ್ ದಿನವೇನ. ಜೀವಿದ್ದಾಗ್ಲೇ ನಿಂದೊಂದ್ ಮದುವೆ ಕಾಣ್ತಿ. ನಮ್ಮ್ ಮಾತೇ ಆಡಲ್ಲೆ ಬರದ್ದಂತ ಸೊಸೆ ತಗಂಬಂದ ನಿನ್ನಣ್ಣ. ಆ ಧಾತ್ರಿ ನೋಡಿರೆ ಇನ್ನೊಂದ್ ನಮ್ನಿ. ನೀನು ಹಿಂಗ್ ಮಾಡಿದ್ರೆ ಹೆಂಗೆ?...’

‘ಅಯ್ಯೋ ದೇವ್ರೆ! ಈಗೆಂತದು? ಮದ್ವೀಗೆ ಒಪ್ಪಿದ್ರೆ ಸಮಾಧಾನವಾ? ಸರಿ, ಎಂತಾ ಬೇಕಾ ಮಾಡಿ’ ಎಂದು ಹೇಳಿದ ಶೋಭ ಸರಕ್ಕನೆ ಎದ್ದು ಹೊರಹೋದಳು. ಅತ್ತೆ, ಸೊಸೆಗೆ ಹಿಗ್ಗೋ ಹಿಗ್ಗು. ಕೊಟ್ಟಿಗೆಯಲ್ಲಿ ದನಕ್ಕೆ ಅಕ್ಕಚ್ಚು ತೋರಿಸುತ್ತಿದ್ದ ಗಂಡನ ಬಳಿಗೆ ಓಡಿದ ಸೀತಕ್ಕ, ಮಗಳ ಒಪ್ಪಿಗೆಯನ್ನು ಅರುಹಿದಳು. ಈಗ ಕಕ್ಕಾಬಿಕ್ಕಿ ಆಗುವ ಸರದಿ ರಾಮನಾಥನದ್ದು. ‘ಒಪ್ಪಿದ್ದಿ ಅಂತ್ಲೇ ಹೇಳ್ತ ಶೋಭಿ?’ ಎಂದು ಮತ್ತೆ ಮತ್ತೆ ಕೇಳಿದ ಆತ. ‘ಹೌದು ಮತ್ತೆ! ನಾಳೆ ಕೂಸಿನ್ನ ಸೊನಗಾರ ಶೆಟ್ಟಿ ಹತ್ರ ಕರ್ಕಂಡು ಹೋಗವ್ವು’ ಎಂದು ಸೀತಕ್ಕ ಸಂಭ್ರಮದಿಂದ ನಡೆದಳು.

ಸೀತಕ್ಕ ಎಷ್ಟೇ ಹೇಳಿದರೂ ರಾಮನಾಥನ ಸಂಶಯ ಪರಿಹಾರ ಆಗಿರಲಿಲ್ಲ. ಹಾಗಾದರೆ ಈಗ ಕರಿಯರ್, ಹಣ ಎಲ್ಲವೂ ಬೇಡವೆ? ಮದುವೆ ದಂಡವಲ್ಲವೇ? ಇಷ್ಟು ದಿನ ಆಕೆ ಇದ್ದಿದ್ದು ಯಾರ ಜೊತೆಗೆ? ಅದೆಲ್ಲ ಏನು ಎಂಬುದು ಆತನಿಗೆ ಬಗೆ ಹರಿಯಬೇಕಿತ್ತು. ಯಾವುದಕ್ಕೂ ತಾನೇ ಒಮ್ಮೆ ಮಾತನಾಡಿದರಾಯಿತು ಎಂದು ಮಗಳನ್ನು ಮನೆಯಲ್ಲೆಲ್ಲಾ ಹುಡುಕಾಡಿದ. ಆಕೆ ತೋಟದ ಕಡೆ ಹೋಗಿದ್ದಾಳೆ ಎಂಬ ಉತ್ತರ ಬಂತು. ಅವಳನ್ನು ಅರಸಿಕೊಂಡು ತೋಟದ ಕಡೆಗೇ ನಡೆದ. ತೋಟದ ಪಂಪ್ ಮನೆಯ ಪಕ್ಕದಲ್ಲಿ ನಿಂತು ಯಾರೊಂದಿಗೂ ಫೋನ್‌ನಲ್ಲಿ ಮಾತಾಡುತ್ತಿದ್ದಳು ಶೋಭ. ಅವಳ ಮಾತು ಮುಗಿಯಲಿ ಎಂದು ತುಸು ಹಿಂದೆ ಕಾಯುತ್ತಾ ನಿಂತ.

‘ನೋಡೆ ಧಾತ್ರಿ, ಎಂಡ್ ಆಫ್ ದ ಡೇ, ಎಲ್ಲರೂ ಅಷ್ಟೇಯ. ಈ ಸತ್ಯ ನಿಂಗೆ ಮದ್ವೆ ಆದ ಮೇಲೆ ಅರ್ಥ ಆತು. ಯಂಗೆ ಮೊದಲೇ ಅರ್ಥ ಆತು. ಈಗ ಸದ್ಯಕ್ಕೆ ಒಂದು ಪೀಜಿಗೆ ಶಿಫ್ಟ್ ಮಾಡಿಕ್ಕೆ ಬಂಜಿ. ಬೇರೆ ಕೆಲ್ಸಾನೂ ನೋಡ್ತಿದ್ದಿ. ಆಫೀಸಲ್ಲಿ ಅವನ ಮುಖ ಕಂಡ್ರೂ ಕರ್ಕರೆ ಆಗ್ತು. ಮನೆಲ್ಲಿ ಇದೆಲ್ಲಾ ಹೇಳಿದ್ರೆ ಅರ್ಥ ಆಗ್ತಿಲ್ಲೆ ಮಾರಾಯ್ತಿ....’ ಶೋಭ ಮಾತಾಡುತ್ತಲೇ ಇದ್ದಳು. ಕಾಲು ಸೋತಂತಾಗಿ ಅಲ್ಲೇ ಕುಸಿದು ಕುಳಿತ ರಾಮನಾಥ. ಆಗಷ್ಟೇ ಅವನು ರಿಪೇರಿ ಮಾಡಿಟ್ಟಿದ್ದ ರೇಡಿಯೋದಿಂದ ಅಕ್ಕನ ವಚನವೊಂದು ತೇಲಿ ಬರುತ್ತಿತ್ತು.
‘ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT