ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕೇಯನೊಂದಿಗಿನ ಒಡನಾಟ ಮತ್ತು ಕೊಳದ ನೀರೊಳಗಿನ ಮುಳುಗಾಟ

ಪ್ರಬಂಧ
Last Updated 9 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಎಸ್ಸೈ ತರಬೇತಿಗೆಂದು ಮೈಸೂರಿನ ಅಕಾಡೆಮಿಗೆ ಹೊರಟಾಗಲೇ ಸ್ನೇಹಿತರು ಹೇಳಿದ್ದರು ತುಮಕೂರಿನ ಮೈದಾನಗಳಲ್ಲಿ ಕ್ರಿಕೆಟ್ಟು ಟೂರ್ನಮೆಂಟುಗಳನ್ನಾಡಿ ಸಂಜೆಯ ಹೊತ್ತು ಪಾನೀಪುರಿ ತಿಂದುಕೊಂಡು ಅಡ್ಡಾಡಿದ ಹಾಗಲ್ಲ ಎಂದು. ಗೆಳೆಯ ಮಧುಸೂದನನಂತೂ ಅದು ನಿನ್ನಂತವರಿಗಲ್ಲ ಬಿಡು... ಟ್ರೇನಿಂಗು ಪೂರೈಸಲಾಗದೆ ವಾಪಸು ಓಡಿಬಂದ ಇಬ್ಬರು ನಮ್ಮ ಊರಿನಲ್ಲೇ ಮಾಸ್ತರು ಕೆಲಸ ಮಾಡಿಕೊಂಡಿದ್ದಾರೆ.

ಭಾರೀ ಶಿಸ್ತು ಪಾಲನೆ ಮಾಡ್ಬೇಕಂತೆ.. ಮುಲಾಜು ಗಿಲಾಜು ಇಲ್ವಂತೆ... ನೋಡು, ಯೋಚನೆ ಮಾಡು.. ಆಮೇಲೆ ನಗೆ ಪಾಟಲಿಗೆ ಈಡಾಗೋದು ಬೇಡ... ಅಂದಿದ್ದು ನನ್ನ ಬಗೆಗಿನ ಅವನ ಕಾಳಜಿ ತೋರಿಸುತ್ತಿತ್ತು. ಎಂದಿನಂತೆ ಎಲ್ಲರ ಕಾಮೆಂಟುಗಳನ್ನು ಉಡಾಫೆ ಶೈಲಿಯಲ್ಲೇ ಸ್ವೀಕರಿಸಿದ್ದಲ್ಲದೆ ಒಂದು ಕೈ ನೋಡಿಯೇ ಬಿಡೋಣ ಅಂತ ನಿರ್ಧರಿಸಿ ಗಂಟುಮೂಟೆ ರೆಡಿ ಮಾಡಿಕೊಂಡೆ.
ನಿಜ, ಅಂದುಕೊಂಡಂತೆ ತರಬೇತಿ ಕಠಿಣವಾಗಿತ್ತು.

ನಸುಕಿನ ಐದು ಗಂಟೆಗೆ ಎದ್ದು ಕಾಲಿಗೆ ಬೂಟು ಸಿಕ್ಕಿಸಿಕೊಂಡು ವಿಶಾಲವಾದ ಮೈದಾನವನ್ನು ಆರು ಸುತ್ತು ಓಡಬೇಕಿತ್ತು. ಒಳಾಂಗಣ, ಹೊರಾಂಗಣ ತರಬೇತಿಗಳಲ್ಲದೆ ದೈಹಿಕ ವ್ಯಾಯಾಮಗಳಂತಹ ಚಟುವಟಿಕೆಗಳು ನಮ್ಮಲ್ಲಿನ ಎನರ್ಜಿಯನ್ನೆಲ್ಲಾ ಹೀರಿಬಿಡುತ್ತಿದ್ದವು. ಯಾವಾಗ ರಾತ್ರಿಯಾಗಿ ಹಾಸಿಗೆ ಮೇಲೆ ಮೈಚಾಚುತ್ತೇವೋ ಎಂದು ಕಾಯುವಂತಾಗುತ್ತಿತ್ತು. ಮಲಗಿದರೂ ನೆಮ್ಮದಿಯಿಲ್ಲ, ಮತ್ತೆ ಮುಂಜಾವಿಗೇ ಎದ್ದು ಓಡಬೇಕಲ್ಲ ಎನ್ನುವ ಚಿಂತೆ.

ಅದೊಂದು ದಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದ್ದ ಮೌಂಟೆಡ್ ಪೊಲೀಸು ಕೇಂದ್ರಕ್ಕೆ ನಮ್ಮನ್ನು ಕರೆದೊಯ್ದು ನಾಳೆಯಿಂದ ನಿಮಗೆ ಕುದುರೆ ಸವಾರಿಯ ತರಬೇತಿ ಎಂದು ಘೋಷಿಸಿದರು. ಅದುವರೆಗೂ ನಮ್ಮೂರಿನ ಜಟಕಾ ಬಂಡಿಯಲ್ಲಿ ಓಡುತ್ತಿದ್ದ ಬಡಕಲು ಕುದುರೆಗಳನ್ನಷ್ಟೆ ನೋಡಿದ್ದ ನಾವು ಅಲ್ಲಿನ ಕುದುರೆಗಳನ್ನು ಕಂಡು ಸುಸ್ತು ಹೊಡೆದುಹೋದೆವು. ದಷ್ಟಪುಷ್ಟ ಖಂಡಗಳಿಂದ ಮೈದುಂಬಿಕೊಂಡಿದ್ದ ಅವುಗಳನ್ನು ನೋಡಿದೊಡನೆ ಎಂಥವರಿಗೂ ರೋಮಾಂಚನವಾಗುತ್ತಿತ್ತು.

ಹತ್ತಿರ ಹೋದೊಡನೆ ಬಳಿ ಬಂದವರಾರು ಎಂದು ಕಣ್ಣುಗುಡ್ಡೆಗಳನ್ನು ತಿರುಗಿಸುತ್ತಲೇ ಗಮನಿಸುತ್ತಿದ್ದವು. ಬಹುದೂರದಿಂದಲೇ ಅವುಗಳ  ಉಸಿರಾಟದ ಸದ್ದು ಕೇಳುತ್ತಿತ್ತು. ತಮ್ಮ ಮುಂಗಾಲುಗಳನ್ನು ಅತ್ತಿಂದಿತ್ತ ಎತ್ತಿ ಹಾಕುತ್ತಾ ಗಾಳಿಯಲ್ಲಿ ಬಾಲಗಳನ್ನಾಡಿಸುತ್ತಾ ಅವು ಅತಿಯಾದ ಚಟುವಟಿಕೆಯನ್ನು ಪ್ರದರ್ಶಿಸುತ್ತಿದ್ದವು. ಕುದುರೆ ಸವಾರಿಗೂ ನಮ್ಮ ತರಬೇತಿಗೂ ಯಾವ ರೀತಿಯ ಸಂಬಂಧವಪ್ಪಾ ಎಂದು ನಾವು ತಲೆ ಕೆಡಿಸಿಕೊಳ್ಳುತ್ತಾ ಆ ದಿನ ವಾಪಸು ಬಂದೆವು.

ಮರುದಿನ ಬೆಳಗ್ಗೆ ತರಬೇತಿಯ ಮುಖ್ಯಸ್ಥರೂ ಆಗಿದ್ದ ಹಿರಿಯ ಅಧಿಕಾರಿಯೊಬ್ಬರು ‘ಬಹಳ ಜನಕ್ಕೆ ಗೊತ್ತಿಲ್ಲ, ಕುದುರೆ  ಸೂಕ್ಷ್ಮ ಸಂವೇದನೆಯುಳ್ಳ ಪ್ರಾಣಿ. ಮಾತ್ರವಲ್ಲ ಅತಿ ಚಾಲಾಕಿತನದ ಬುದ್ಧಿಮತ್ತೆಯ ಪ್ರಾಣಿಯೂ ಹೌದು. ಸುಮ್ಮನೆ ಏರಿ ಕುಳಿತುಬಿಟ್ಟರೆ ಅದು ನಿಮ್ಮ ಮಾತು ಕೇಳುತ್ತದೆ ಅಂದುಕೊಳ್ಳಬೇಡಿ. ಅದರ ಮುಂದೆ ನಿಮ್ಮ ಆಟಗಳು ನಡೆಯುವುದಿಲ್ಲ. ಏರುವ ಮೊದಲು ಕುತ್ತಿಗೆಯನ್ನು ನೇವರಿಸುವುದು, ಕ್ಯಾರೆಟ್ಟುಗಳಂತಹ ತರಕಾರಿಗಳನ್ನು ನಿಮ್ಮ ಕೈಯಾರೆ ತಿನ್ನಿಸಿ ಅವುಗಳ ಸ್ನೇಹ ಸಂಪಾದಿಸುವುದು ತುಂಬ ಮುಖ್ಯ.

ತನ್ನ ಸವಾರನನ್ನು ಕುದುರೆಯು ನೆನಪಿನಲ್ಲಿಟ್ಟುಕೊಂಡಿರುತ್ತದೆ. ಹಿಂದಿನ ಕಾಲದಲ್ಲಿ ರಾಜಮಹಾರಾಜರು ತಮ್ಮ ಕುದುರೆಯ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದಿರುತ್ತಿದ್ದರು. ಎಷ್ಟೋ ಪಟ್ಟದ ಕುದುರೆಗಳು ತಮ್ಮ ರಾಜರಿಗಾಗಿ ಪ್ರಾಣತ್ಯಾಗ ಮಾಡಿದ ನಿದರ್ಶನಗಳಿವೆ. ಯುದ್ಧಗಳಲ್ಲಿ ಕುದುರೆಗಳು ತಮ್ಮ ಒಡೆಯ ಮೂರ್ಛೆ ಅಥವಾ ಗಾಯಗೊಂಡು ನಿತ್ರಾಣನಾದರೆ ತಕ್ಷಣ ಅರ್ಥೈಸಿಕೊಂಡು ಅವನನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದು ಪ್ರಾಣ ಕಾಪಾಡುತ್ತಿದ್ದವು...’ ಎಂದು ತಮ್ಮ ಮಾತುಗಳನ್ನು ಯಾರನ್ನೋ ದಿಟ್ಟಿಸುತ್ತಾ ಮೊಟಕುಗೊಳಿಸಿದರು.

ನಮ್ಮ ಬ್ಯಾಚಿನ ಕೆಲವು ಮಹಿಳಾಮಣಿಗಳು ಇವರ ಮಾತುಗಳತ್ತ ಗಮನ ಕೊಡದೇ ತಮ್ಮದೇ ಸಂಭಾಷಣೆಯಲ್ಲಿ ಮುಳುಗಿದ್ದರು. ಸುತ್ತಲಿನ ಪ್ರಕೃತಿಯ ಹಸಿರು ಹುಲ್ಲುಹಾಸು, ಗಿಡಮರಗಳು ಹಕ್ಕಿಗಳ ಕಲರವ ಅವರನ್ನು ಸೆಳೆದಿತ್ತು. ದೂರದ ಬೆಟ್ಟವನ್ನು ನೋಡುತ್ತಾ ಯಾವುದೋ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆಂದು ತೋರುತ್ತದೆ. ನೋಡಿ ಮನಸ್ಸು ಅನ್ನುವುದು ಹೀಗೇ.. ಕುದುರೆ ಇದ್ದಂತೆ. ಕಡಿವಾಣವಿಲ್ಲದಿದ್ದರೆ ಅದರ ಇಷ್ಟ ಬಂದತ್ತ ಓಡುತ್ತಲೇ ಇರುತ್ತದೆ.

ಮೊದಲು ನಾವು ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹೊಂದಬೇಕು. ಜೀವನದಲ್ಲಿ ಮೇಲೇರಿದವರೆಲ್ಲ ಮನೋನಿಗ್ರಹ  ಸಾಧಿಸಿದವರೇ. ಚಂಚಲ ಚಿತ್ತನಾದವನ ಆತ್ಮವಿಶ್ವಾಸವನ್ನೂ ಮನಸ್ಸಿನ ಹತೋಟಿ ಸಾಧಿಸಿದವನ ಆತ್ಮವಿಶ್ವಾಸವನ್ನೂ ಯಾವತ್ತಾದರೂ ಹೋಲಿಸಿ ನೋಡಿದ್ದೀರಾ..? ಈ ಪ್ರಶ್ನೆ ಎಲ್ಲರಿಗೆ ಕೇಳಿದರೂ ಅದರ ಕಾರಣ ತಾವೇ ಎಂಬುದು ಮಾತಿನಲ್ಲಿ ಮುಳುಗಿದ್ದವರಿಗೆ ಗೊತ್ತಾಯಿತು.
ಇವು ನಿಮ್ಮೂರಿನ ರಸ್ತೆಬದಿಗಳಲ್ಲಿ ಹುಲ್ಲು ಮೇಯುತ್ತಾ ನಿಂತಿರುವ ಸಾಧಾರಣ ಕುದುರೆಗಳಲ್ಲ.

ಅತಿ ಮುತುವರ್ಜಿಯಿಂದ ಇವುಗಳನ್ನು ಸಾಕಲಾಗಿದೆ.  ಮಾತ್ರವಲ್ಲ ವಿಶೇಷ ತರಬೇತಿಯನ್ನು ನೀಡಲಾಗಿದೆ. ಪರೇಡುಗಳಲ್ಲಿ ಇವು ನಿಮಗಿಂತ ಆಸಕ್ತಿಯಿಂದ  ಪಾಲ್ಗೊಳ್ಳಬಲ್ಲವು. ಯಾವುದೇ ರಾಜ್ಯಕ್ಕೆ ಹೆಮ್ಮೆ ಗೌರವ ತರುವಂತಹ ಪ್ರಾಣಿಗಳಿವು. ನಿಮಗೆ ಕುದುರೆ ಸವಾರಿಯ ತರಬೇತಿ ನೀಡುತ್ತಿರುವ ಕಾರಣ ಇಷ್ಟೆ. ಮುಂದೆ ನೀವೆಲ್ಲಾ ಅಧಿಕಾರಿಗಳಾಗುವವರು. ನಾಯಕತ್ವದ ಗುಣ ನಿಮ್ಮಲ್ಲಿ ಮೈಗೂಡಬೇಕು.

ಎಂತಹ ಸಂದರ್ಭವನ್ನಾದರೂ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಬಹು ಮುಖ್ಯ. ನಿಮ್ಮ ಕೆಳಗಿನ ಸಿಬ್ಬಂದಿಗಳ ಸಹಕಾರ ಪಡೆಯುವುದರ ಜೊತೆಗೆ  ಅವರಿಂದ ಹೇಗೆ ಮತ್ತು ಯಾವ ರೀತಿಯ ಕೆಲಸ ತೆಗೆದುಕೊಳ್ಳಬೇಕೆಂದು ನಿಮಗೆ ಚೆನ್ನಾಗಿ ಗೊತ್ತಿರಬೇಕು. ಇವೆಲ್ಲ ಆಶಯಗಳೂ ಈ ತರಬೇತಿಯಲ್ಲಿ ಅಡಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ... ಅನ್ನುತ್ತಾ ಮಾತು ಮುಗಿಸಿದರು.
ಬೋಧನೆ ನಂತರ ಸಹಾಯಕರು ಸಾಲಾಗಿ ನಿಲ್ಲಿಸಿಕೊಂಡಿದ್ದ ಕುದುರೆಗಳತ್ತ ಹೆಜ್ಜೆಹಾಕಿದೆವು. ಅತಿ ವಿಧೇಯತೆಯಿಂದ ತಲೆ ತಗ್ಗಿಸಿ ನಿಂತಿದ್ದ ಅವುಗಳನ್ನು ನೋಡಿ ಧೈರ್ಯ ಬಂದಂತಾಯಿತು.

ನನಗೆ ಮೀಸಲಿರಿಸಿದ್ದ ಕುದುರೆಯ ಬಣ್ಣ ಕಪ್ಪಗಿತ್ತು. ಬೇರೆಲ್ಲವೂ ತಿಳಿ ಕಂದು ಬಣ್ಣದ್ದವಾದ್ದರಿಂದ ಇದು ಪ್ರತ್ಯೇಕವಾಗಿ ಕಾಣುತ್ತಿತ್ತು. ಪ್ರತಿಯೊಂದು ಕುದುರೆಗೂ ಒಂದೊಂದು ಹೆಸರಿಡಲಾಗಿದೆಯೆಂದು ನಿನ್ನೆಯೇ ತಿಳಿದುಕೊಂಡಿದ್ದೆ. ಸಹಾಯಕರ ಬಳಿ ಇದರ ಹೆಸರೇನೆಂದು ಕೇಳಿದ್ದಕ್ಕೆ ಕಾರ್ತಿಕೇಯ  ಅಂದರು. ಒಳಗೆ ಅಳುಕಿದ್ದರೂ ತೋರಿಸಿಕೊಳ್ಳದೆ ಪಕ್ಕದಲ್ಲಿಯೇ ನಿಂತು ಗಜ್ಜರಿಯನ್ನು ತಿನ್ನಿಸಿ ಅದರ ಕುತ್ತಿಗೆಯನ್ನು ನವಿರಾಗಿ ಸವರಿದೆ. ಕತ್ತು ತಿರುಗಿಸಿ ಒಮ್ಮೆ ದುರುಗುಟ್ಟಿ ನೋಡಿದಂತಾಯಿತು. ಸಹಾಯಕ ಗಂಗರಾಜು ಗಾಬರಿಯಾಗ್ಬೇಡಿ ಸಾ.. ಅದು ನಿಮ್ಮ ಮುಖ ನೋಡ್ಕೊತೈತೆ ಅಷ್ಟೆಯಾ.. ತಗಳ್ಳಿ ಈ ಕಡಿವಾಣ ಭದ್ರವಾಗಿ ಹಿಡ್ಕೊಂಡು ಮೇಲೆ ಹತ್ತಿ.. ಎನ್ನುತ್ತಾ ಕಡಿವಾಣ ಕೈಗೆ ಕೊಟ್ಟು ಇಳಿಬಿದ್ದಿದ್ದ ರಿಕಾಪುಗಳ ಮೇಲೆ ಕಾಲಿಟ್ಟು ಹತ್ತಲು ಸಹಾಯ ಮಾಡಿದ.

ಕಡಿವಾಣವನ್ನು ಸ್ವಲ್ಪ ಬಿಗಿ ಮಾಡಿ ನಿಮ್ಮ ಕಾಲಿನ ಹಿಮ್ಮಡಿಯನ್ನು ಅದರ ಹೊಟ್ಟೆಗೆ ತಾಕಿಸಬೇಕು. ಅದು ಕುದುರೆಗೆ ಮುಂದುವರಿಯಲು ನೀಡುವ ಸೂಚನೆ... ಅಂದ ಗಂಗರಾಜುವಿನ ಮಾತನ್ನು ಯಥಾವತ್ತಾಗಿ ಪಾಲಿಸಿದೆ. ನಾನು ಕೊಟ್ಟ ಸೂಚನೆಯೇ ಹಾಗಿತ್ತೋ ಅಥವಾ ಕುದುರೆಯೇ ಅದನ್ನು ಅಪಾರ್ಥ ಮಾಡಿಕೊಂಡಿತೋ ನಿಧಾನವಾಗಿ ಹೆಜ್ಜೆ ಹಾಕಬಹುದೆಂದೆಣಿಸಿದ್ದ ಕಾರ್ತಿಕೇಯ ತನ್ನ ಹೆಸರಿಗೆ ತಕ್ಕಂತೆ ಹುರುಪಿನಿಂದ ಓಡತೊಡಗಿದ್ದೇ ಒಂದು ಕ್ಷಣ ಗಂಗರಾಜುವೂ ಬೆಪ್ಪಾಗಿ ನಿಂತುಬಿಟ್ಟ.

ಕುದುರೆಗಳೇನಾದರೂ ನಿಯಂತ್ರಣ ಮೀರಿ ವರ್ತಿಸಿದರೆ ಕಡಿವಾಣವನ್ನು ಬಿಗಿಯಾಗಿ ಹಿಡಿದು ಬೆನ್ನ ಮೇಲೆಯೇ ಆದಷ್ಟು ನಿಯಂತ್ರಣ ಸಾಧಿಸಿ ಕೂರಬೇಕೆಂದು ಹೇಳಿಕೊಟ್ಟಿದ್ದ ಸೂಚನೆಯೂ ಮರೆತುಹೋಯಿತು. ಕೈಯಲ್ಲಿದ್ದ ಕಡಿವಾಣ ಯಾವ ಮಾಯದಲ್ಲೋ ಬಿಟ್ಟುಬಿಟ್ಟಿದ್ದೆ. ಹುಷಾರು ಸಾರ್...   ಎಂದು ಗಂಗರಾಜು ಹಿಂದಿನಿಂದ ಕೂಗುತ್ತಿದ್ದುದು ಕಿವಿಗೆ ಬೀಳುತ್ತಿತ್ತು. ಮುಂದೆ ಹೋಗುಹೋಗುತ್ತಿದ್ದಂತೆ ಎರಡೂ ಕಾಲುಗಳನ್ನು ಮೇಲೆತ್ತಿಕೊಂಡು ಕುದುರೆಯಿಂದ ನೆಲಕ್ಕೆ ಬಿದ್ದಿದ್ದಕ್ಕೂ ಹಿಂಬದಿಯಿಂದ ಓಡಿಬಂದ ಸಹಾಯಕರೆಲ್ಲರೂ ಸೇರಿ ನನ್ನನ್ನು ಸುತ್ತುವರಿದಿದ್ದಕ್ಕೂ ಸರಿಹೋಯಿತು.

ಹುಲ್ಲುಹಾಸಿನ ಮೇಲೆ ಬಿದ್ದ ಕಾರಣ ಹೆಚ್ಚೇನೂ ಪೆಟ್ಟಾಗಿರಲಿಲ್ಲ. ಮಂಡಿ ಹಾಗೂ ಕಾಲಿನ ಮೀನಖಂಡ ಕೆಲವೆಡೆ ತರಚಿಕೊಂಡಿದ್ದು ಸೊಂಟವೂ ಕೊಂಚ ಉಳುಕಿದಂತೆ ಅನಿಸುತ್ತಿತ್ತು. ಕ್ರಿಕೆಟ್ ಆಡುವಾಗ ಡೈವ್ ಹೊಡೆಯುವ ಟೆಕ್ನಿಕ್ಕುಗಳು ಈಗ ಉಪಯೋಗಕ್ಕೆ ಬಂದಿತ್ತು. ದೇಹದ ಗಾಯಗಳಿಗಿಂತಲೂ ಬಿದ್ದಿದ್ದ ಗಾಬರಿಗೆ ಶಾಕ್ ಆಗಿತ್ತು. ನಮ್ಮದೇ ತಂಡದ ಇತರ ಇಬ್ಬರಿಗೂ ಅವರು ಏರಿದ್ದ ಕುದುರೆಗಳು ಭಯಾತಂಕ ಹುಟ್ಟಿಸಿದ್ದವು. ಕೇಶವಮೂರ್ತಿ ಹತ್ತಿದ್ದ ಕುದುರೆಯು ಅವನು ಕೊಂಚ ದೂರ ಸಾಗುತ್ತಿದ್ದಂತೆ ಇಡೀ ಮೈಯನ್ನು ಅಲುಗಾಡಿಸಿ ಅವನು ತಾನಾಗಿ ಕೆಳಕ್ಕೆ ನೆಗೆಯುವಂತೆ ಮಾಡಿತ್ತು.

ಮಹ್ಮದ ರಫಿಯ ಕುದುರೆಯು ಈತ ಏರಿ ಕುಳಿತು ಏನೇ ಸರ್ಕಸ್ಸು ಮಾಡಿದರೂ ಮುಂದೆ ಹೋಗದೆ ಮುಷ್ಕರ ಹೂಡಿತ್ತು. ಅಲ್ಲದೆ ಮುಂಗಾಲುಗಳನ್ನೆತ್ತಿ ಇವನನ್ನು ಕೆಲಕಾಲ ತ್ರಿಶಂಕು ಸ್ಥಿತಿಯಲ್ಲಿಟ್ಟಿತ್ತು. ಯಾವುದೇ ತಂಟೆ ತಾಪತ್ರಯಗಳಿಲ್ಲದೆ ಸವಾರಿ ಮಾಡಿ ಬಂದವರೇನು ಭಯಮುಕ್ತರಾಗಿರಲಿಲ್ಲ. ಎಲ್ಲರೂ ತಮ್ಮ ಮೊದಲ ದಿನದ ಅನುಭವಗಳನ್ನು ಹೇಳಿಕೊಳ್ಳುವವರೇ. ಎಲ್ಲರೂ ಕುದುರೆಗಳ ವಿವಿಧ ಮನೋಸ್ಥಿತಿಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದವರೇ. ಮುಂದಿನ ತರಬೇತಿಯಲ್ಲಿ ತೆಗೆದುಕೊಳ್ಳಬೇಕಾದ ಹೆಚ್ಚುವರಿ ಸುರಕ್ಷಾಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದವರೇ. ಒಟ್ಟಾರೆ ಈ ಕುದುರೆ ಸವಾರಿ ನಮ್ಮ ಬ್ಯಾಚಿನ ಹುಡುಗರಲ್ಲಿ ತಳಮಳಗಳನ್ನು ಸೃಷ್ಟಿಸಿದ್ದಂತೂ ಹೌದು.

ಮುಂದಿನ ದಿನಗಳಲ್ಲಿ ಕುದುರೆಗಳ ಚಾಳಿ, ವರ್ತನೆಗಳಿಗೆ ನಾವೂ ನಿಧಾನಕ್ಕೆ ಹೊಂದಿಕೊಂಡೆವು. ಮುಂಚಿನ ರೀತಿ ಅವು ನಮ್ಮಲ್ಲಿ ಗಾಬರಿ ಹುಟ್ಟಿಸುತ್ತಿರಲಿಲ್ಲ. ಏನಾದರೂ ವ್ಯತಿರಿಕ್ತವಾಗಿ ವರ್ತಿಸಿದರೆ ತಕ್ಕ ಮುಂಜಾಗ್ರತೆ ವಹಿಸಿ ನಮ್ಮ ಸುರಕ್ಷತೆ ನಾವು ಮಾಡಿಕೊಳ್ಳಲಾರಂಭಿಸಿದೆವು. ಅನುಭವ ಎಲ್ಲವನ್ನೂ ಕಲಿಸುತ್ತದೆ ಎನ್ನುವುದು ಇದಕ್ಕೇ. ಕೆಲವು ಸ್ನೇಹಿತರು ಮಂಡಿಕವಚಗಳನ್ನು ಖರೀದಿಸಿದರೆ ಇನ್ನು ಕೆಲವರು ಮೊಣಕೈ ಮೊಣಕಾಲುಗಳು ತರಚದಂತೆ ಬಟ್ಟೆಗಳನ್ನು ಸುತ್ತಿಕೊಂಡೋ ಪ್ಯಾಡುಗಳನ್ನು ಕಟ್ಟಿಕೊಂಡೋ ಸವಾರಿ ಕಲಿಯುವುದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಾಣತೊಡಗಿದರು.

ಪ್ರತಿದಿನವೂ ಒಬ್ಬೊಬ್ಬರಿಗೆ ಒಂದೊಂದು ಕುದುರೆಯನ್ನು ಬದಲಾಯಿಸಲಾಗುತ್ತಿತ್ತು. ಹೀಗಾಗಿ ಎಲ್ಲ ಕುದುರೆಗಳ ಪರಿಚಯವೂ ನಮಗಾದಂತಾಯಿತು. ಅದಕ್ಕೆ ತಕ್ಕನಾಗಿ ಕುದುರೆಗಳೂ ನಮಗೆ ಹೊಂದಿಕೊಂಡಂತೆ ಅನ್ನಿಸತೊಡಗಿತು. ಮೊದಲಿನಂತೆ ಸಂಭವಿಸುತ್ತಿದ್ದ ಅವಘಡಗಳ ಸಂಖ್ಯೆ ಕಡಿಮೆಯಾಯಿತು. ನಂತರದಲ್ಲಿ ತಿಳಿದುಬಂದುದೇನೆಂದರೆ ನಾನು ಮೊದಲ ದಿನ ಹತ್ತಿದ್ದ ಕಾರ್ತಿಕೇಯ ತಂಟೆಕೋರ ಕುದುರೆಯಾಗಿತ್ತು. ಯಾರಾದರೂ ಹೊಸ ಸವಾರರು ಬೆನ್ನೇರಿದರೆ ಅವರನ್ನು ಗೋಳುಹುಯ್ದುಕೊಳ್ಳದೆ ಅದು ಬಿಡುತ್ತಿರಲಿಲ್ಲ.

ಏನೇ ಸವಾರಿಯಲ್ಲಿ ಪಳಗಿದರೂ ಕಾರ್ತಿಕೇಯನನ್ನು ಹತ್ತಬೇಕೆಂದರೆ ಸಾಕು, ನಮ್ಮವರಿಗೆ ಚಳಿಜ್ವರ ಶುರುವಾಗುತ್ತಿತ್ತು. ಅದರ ಚಾಳಿಯೇ ಅಷ್ಟು ಸಾರ್... ಸವಾರ ಕೂರುವ ರೀತಿ, ಕಡಿವಾಣ ಹಿಡಿಯುವ ರೀತಿಯಿಂದಲೇ ತನ್ನನ್ನು ಓಡಿಸುವವರು ಅನುಭವಿಗಳಾ ಇಲ್ಲವಾ ಎಂಬುದನ್ನು ಕುದುರೆಗಳು ಗೊತ್ತುಮಾಡಿಕೊಳ್ತವೆ. ಹೊಸ ಸವಾರರಾದರರೆ ಮತ್ತು ತನ್ನನ್ನು ನಿಯಂತ್ರಿಸುವವರು ಹತ್ತಿರ ಇಲ್ಲವೆಂದಾದರೆ ಕೆಲವು ಕುದುರೆಗಳು ಈ ತರಹ ರಂಗ್‌ಬೀರಂಗಿ ಆಟ ಆಡಲಿಕ್ಕೆ ಶುರು ಮಾಡ್ತವೆ... ಅಂದಿದ್ದ ಗಂಗರಾಜು.

ಇದಕ್ಕೆ ಅಪವಾದ ಎನ್ನುವಂತೆ ತುಂಬಾ ಸೌಮ್ಯ ಸ್ವಭಾವದ ಕುದುರೆಗಳೂ ಇರುತ್ತವೆ. ಸವಾರ ಹೊಸಬ ಎನ್ನುವುದು ಅವುಗಳಿಗೆ ಗೊತ್ತಾದರೆ ಅವನು ನೀಡಬಹುದಾದ ಸೂಚನೆಗಳನ್ನು ಮುಂಚಿತವಾಗಿಯೇ ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳುವುದಲ್ಲದೆ ಅಗತ್ಯ ಸಹಕಾರವನ್ನು ನೀಡುತ್ತವೆ. ಜಮುನ ಅನ್ನುವ ಕುದುರೆ ಇದಕ್ಕೆ ಒಳ್ಳೆಯ ಉದಾಹರಣೆ. ಪ್ರಾಣಿಗಳಲ್ಲಿ ಸಾಧುತನವನ್ನು ಕಣ್ಣಾರೆ ಕಾಣಬೇಕೆಂದರೆ ಜಮುನಳನ್ನು ನೋಡಿದರೆ ಸಾಕು.  ನಾಲ್ಕು ವರ್ಷದ ಕೂಸು ತನ್ನನ್ನೇರಿ ಕುಳಿತರೂ ಬೀಳಿಸದಂತೆ ನಾಜೂಕಾಗಿ ಕರೆತರುವಷ್ಟು ಕೌಶಲ್ಯವನ್ನು ಅದು ಬೆಳೆಸಿಕೊಂಡಿತ್ತು.

ಅದನ್ನು ಓಡಿಸಲು ನನ್ನ ಸ್ನೇಹಿತರು ನಾಮುಂದು ತಾಮುಂದು ಎಂದು ಸಾಲುಗಟ್ಟುತ್ತಿದ್ದುದು ಇದೇ ಕಾರಣಕ್ಕಲ್ಲವೆ? ಆದರೆ ತನ್ನ ವಿಚಿತ್ರ ನಡವಳಿಕೆಯಿಂದ ಮೊದ ದಿನವೇ ನನ್ನ ಮೈಗೆ ಮಣ್ಣು ಮೆತ್ತಿಸಿದ್ದ ಕಾರ್ತಿಕೇಯ ನನ್ನ ಚಿತ್ತವನ್ನು ಅಪಹರಿಸಿಬಿಟ್ಟಿದ್ದ. ಬೇರೆ ಬೇರೆ ಕುದುರೆಗಳನ್ನು ಓಡಿಸುತ್ತಿದ್ದಾಗಲೂ ಅದರತ್ತ ಒಂದು ಕಣ್ಣಿಟ್ಟುಕೊಂಡೇ ಇರುತ್ತಿದ್ದೆ. ಜೀವನದಲ್ಲೆಂದೂ ಮರೆಯಲಾಗದ ಅನುಭವ ನೀಡಿದ ಹಾಗೂ ತನ್ನ ವಿಕ್ಷಿಪ್ತ ವರ್ತನೆಗಳಿಗಾಗಿ ಇತರ ಕುದುರೆಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತಿದ್ದ ಕಾರ್ತಿಕೇಯ ಕುದುರೆ ಅನ್ನುವ ಪ್ರಾಣಿಗಳ ಕಡೆಗೆ ತೀರಲಾರದ ಮೋಹ ಹುಟ್ಟಿಸಿದ್ದು ಮಾತ್ರ ಸತ್ಯ.

ಒಂದು ತಿಂಗಳ ಕುದುರೆ ಸವಾರಿಯನ್ನು ಮುಗಿಸುವಷ್ಟರಲ್ಲಿ ನಾವೆಲ್ಲಾ ಅವುಗಳನ್ನು ಭಾವನಾತ್ಮಕವಾಗಿ  ಹಚ್ಚಿಕೊಂಡುಬಿಟ್ಟಿದ್ದೆವು. ಮುಂದೆ ಅವುಗಳನ್ನು ಬಿಟ್ಟು ಇರಬೇಕೆಂಬ ಸಂಗತಿಯೇ ಅರಗಿಸಿಕೊಳ್ಳಲು ಕಷ್ಟವಾಯಿತು. ನಮ್ಮ ಸರ್ವೀಸಿನುದ್ದಕ್ಕೂ ಮೆಲುಕು ಹಾಕುವ ಸವಿನೆನಪುಗಳ ಬುತ್ತಿಯನ್ನು ಈ ಮೂಕ ಪ್ರಾಣಿಗಳು ಕಟ್ಟಿಕೊಟ್ಟಿದ್ದವು. ಕುದುರೆಗಳ ಪಕ್ಕ ನಿಂತು, ಅವುಗಳ ಮೇಲೆ ಕೂತು, ತಬ್ಬಿಕೊಂಡು, ಒರಗಿಕೊಂಡು ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ತೆಗೆಸಿಕೊಂಡಿದ್ದಾಯಿತು. ನಾಳೆಯಿಂದ ಮುಂದೇನು..? ಎಂದು ಯಾರೋ ಕೇಳಿದ್ದಕ್ಕೆ ಈಜು ಕಲಿಸುವುದಕ್ಕಾಗಿ ನಿಮ್ಮನ್ನು ಸರಸ್ವತಿಪುರಂದಲ್ಲಿನ ಈಜುಕೊಳಕ್ಕೆ ಕರೆದೊಯ್ಯುತ್ತಿದ್ದೇವೆ.. ಎನ್ನುವ ಉತ್ತರ ಬಂದಿತು. ಮತ್ತು ಅದೇ ಉತ್ತರ ನನ್ನೊಳಗೆ ನಡುಕ ಮೂಡಿಸುವುದಕ್ಕೂ ಕಾರಣವಾಯಿತು.

ಅಸಲಿಗೆ ಈಜು ಎಂಬುದು ನನಗೆ ಇವತ್ತಿನವರೆಗೆ ಹುಳಿದ್ರಾಕ್ಷಿಯೇ. ಯಾವತ್ತಿಗಾದರೂ ಮೀನಿನಂತೆ ಸುಲಲಿತವಾಗಿ ಈಜಬಲ್ಲೆನೆಂಬ ವಿಶ್ವಾಸವೇ ನನಗಿಲ್ಲ. ಸ್ವಿಮ್ಮಿಂಗು ಸ್ಪರ್ಧೆಗಳಲ್ಲಿ ಮೇಲಿಂದ ಮೇಲೆ ಚಿನ್ನ ಬೆಳ್ಳಿಯ ಪದಕ ಗೆಲ್ಲುವವರನ್ನು ಕಂಡಾಗ ಹೊಟ್ಟೆಕಿಚ್ಚುಪಡುವಂತಾಗುತ್ತದೆ. ನೀರಿನಲ್ಲಿಯೇ ಹುಟ್ಟಿ ಬೆಳೆದವರೇನೋ ಎಂಬಂತೆ ಜಲಚರಗಳನ್ನು ಮೀರಿಸುವ ರೀತಿಯಲ್ಲಿ ಮುಳುಗೇಳುವವರಲ್ಲಿ ಯಾವುದೋ ದೈವದತ್ತವಾದ ಪ್ರತಿಭೆ ಇರುವುದಂತೂ ನಿಜ. ಇಲ್ಲವಾದರೆ ಒಂದು ತಂಬಿಗೆ ತಣ್ಣೀರು ಮೈಮೇಲೆ ಸುರಿದುಕೊಂಡರೆ ಉಸಿರುಗಟ್ಟಿದಂತಾಗುವ ನಾವೆಲ್ಲಿ..? ಮುಳುಗು ಹಾಕಿದರೆ ನಿಮಿಷಗಟ್ಟಲೇ ಮೇಲೆ ಬಾರದೆ ತಳವನ್ನು ಮುಟ್ಟಿ ಬರುವ ಅವರೆಲ್ಲಿ..?

ಈಜು ಎಂಬುದು ಕಲಿಯುವ ಮುನ್ನವೇ ದಿಗಿಲು ಹಿಡಿಸಿತು. ಇದಕ್ಕಿಂತ ಕುದುರೆ ಸವಾರಿಯೇ ಚೆನ್ನಿತ್ತಲ್ಲವೆ? ಎಂದು ಸಾವಿರ ಸಲ ಅನ್ನಿಸಿತು. ಇದೊಂದು ಹಂತವನ್ನು ದಾಟಿದರೆ ತರಬೇತಿ ಯಶಸ್ವಿಯಾಗಿ ಮುಗಿಸಿದಂತೆಯೇ ಅನ್ನುವುದು ನಿಚ್ಚಳವಾಯಿತು. ಒಂದೇ ಸಮಾಧಾನವೆಂದರೆ ಈಜು ಬಾರದ ನನ್ನಂತಹ ಅನೇಕರು ಜೊತೆಗಿದ್ದರು. ಅವರಿಗಿಲ್ಲದ ತಳಮಳ ನನಗೇಕಾಗಬೇಕು..? ಎಲ್ಲರಿಗೂ ಏನಾಗುತ್ತದೆಯೋ ನನಗಾಗುವುದೂ ಅದೇ ತಾನೆ, ಎಂದು ಧೈರ್ಯ ತಂದುಕೊಂಡೆ.

ಅಕಾಡೆಮಿಗೆ ಬರುವ ಮುಂಚೆಯೇ ಈಜು ಕಲೆಯಲ್ಲಿ ಪ್ರವೀಣರಾಗಿದ್ದ ಕೆಲವು ಗೆಳೆಯರಿದ್ದರು. ಗ್ರಾಮೀಣ ಹಿನ್ನೆಲೆಯಿಂದ ಬಂದವರಾದ್ದರಿಂದ ಈಜುವುದು ಅಂದರೆ ಅವರಿಗೆಲ್ಲ ಪಾಯಸ ಕುಡಿದಷ್ಟೇ ಸುಲಭವಾಗಿತ್ತು. ಅವರೆಲ್ಲ ಈಜುಕೊಳ ಪ್ರವೇಶಿಸುತ್ತಿದ್ದಂತೆ ಪಟಪಟನೆ ಬಟ್ಟೆ ಕಳಚಿ ಥೇಟು ಕಪ್ಪೆಗಳಂತೆ ಒಬ್ಬರ ಹಿಂದೊಬ್ಬರು ಛಂಗನೆ ಹಾರಿ ನಮ್ಮ ಗಾಬರಿಯನ್ನು ಹೆಚ್ಚಿಸಿದ್ದಲ್ಲದೆ ನೀರಿನೊಳಗೆ ಇಳಿದು ಬರುವಂತೆ ನಮ್ಮನ್ನು ಕರೆಯುತ್ತಾ ಇಳಿಯಲಾರದ ನಮ್ಮ ಅಸಹಾಯಕತೆಯನ್ನು ನೋಡಿ ಎಂಜಾಯ್ ಮಾಡಲಾರಂಭಿಸಿದರು. ಈಜು ಬಾರದವರನ್ನೆಲ್ಲಾ ಒಂದು ಕಡೆ ನಿಲ್ಲಿಸಿಕೊಂಡ ತರಬೇತುದಾರರು ಮೊದಲು ಆಳ ಕಡಿಮೆ ಇರುವ ಕಡೆ ಇಳಿದು ಕೊಳದುದ್ದಕ್ಕೂ ಇರುವ ಕಂಬಿಗಳನ್ನು ಹಿಡಿದುಕೊಂಡು ನೀರಿನಲ್ಲಿ ಕಾಲುಗಳನ್ನು ಬಡಿಯುವಂತೆ ಹೇಳಿದರು.

ಈಜುತ್ತಿರುವಾಗ ಮಹತ್ವದ ಪಾತ್ರ ವಹಿಸುವುದು ನಮ್ಮ ಕಾಲುಗಳ ಚಲನೆಯೇ. ನಾವು ಕಾಲುಗಳನ್ನು ಬಡಿಯುತ್ತಿದ್ದಷ್ಟು ಹೊತ್ತೂ ಮೇಲೆಯೇ ಇರುತ್ತಿದ್ದ ನಮ್ಮ ದೇಹ ನಿಲ್ಲಿಸಿದೊಡನೆ ನೀರಿನೊಳಗೆ ಇಳಿಯುತ್ತಿತ್ತು. ಎರಡು ಮೂರು ನಿಮಿಷ ಕಾಲುಗಳನ್ನಾಡಿಸುವುದರೊಳಗೆ ನಮ್ಮ ತಾಕತ್ತು ಮುಗಿದುಹೋಗುತ್ತಿತ್ತು. ಕೊಳದ ನೀರು ಕಿವಿ ಮೂಗುಗಳಿಗೆಲ್ಲಾ ಹೋಗಿ  ಉಸಿರುಗಟ್ಟಿದಂತಾಗುತ್ತಿದ್ದುದಲ್ಲದೆ ಕ್ಲೋರಿನ್‌ಯುಕ್ತ ನೀರು ಕಣ್ಣುಗಳೊಳಗೆ ಸೇರಿ ಕೆಂಪಾಗುತ್ತಿದ್ದವು. ಕೇವಲ ಅರ್ಧ ಗಂಟೆಯ ತರಬೇತಿ ನಮ್ಮನ್ನು ಸಂಪೂರ್ಣ ನಿತ್ರಾಣರನ್ನಾಗಿ ಮಾಡಿಬಿಡುತ್ತಿತ್ತು.

ಈಜಿಗಿಂತ ಒಳ್ಳೆಯ ವ್ಯಾಯಾಮ ಯಾವುದೂ ಇಲ್ಲ... ದೇಹದ ಎಲ್ಲಾ ಭಾಗಗಳಿಗೆ ಸಮಾನವಾಗಿ ಶ್ರಮ ಕೊಡುವ ವ್ಯಾಯಾಮ ಇದು. ಮೊದಲಿಗೆ ಬಹಳ ಕಷ್ಟ ಅನ್ನಿಸಿದರೂ ಮನಸ್ಸು ಮತ್ತು ದೇಹ ಎರಡನ್ನೂ ಚೈತನ್ಯಗೊಳಿಸುವ ಶಕ್ತಿ ಇದೆ ಇದಕ್ಕೆ. ಹಾಗಾಗಿಯೇ ಎಳೆಯರಿಂದ ಮುದುಕರವರೆಗೂ ಎಲ್ಲರೂ ಇದಕ್ಕೆ ಅಷ್ಟು ಪ್ರಾಮುಖ್ಯತೆ ಕೊಡೋದು.. ಎಂದಿದ್ದರು ತರಬೇತುದಾರ ಸುಂದರ್ ಬನಹಟ್ಟಿ.
ಅದು ಎಷ್ಟು ನಿಜ ಎಂಬದು ಕೆಲವೇ ದಿನಗಳಲ್ಲಿ ಗೊತ್ತಾಯಿತು. ನಾವು ತರಬೇತಿ ಪಡೆಯುತ್ತಿದ್ದ ಸಮಯದಲ್ಲೇ ಈಜಲು ಕೆಲವು ಸಾರ್ವಜನಿಕರೂ ಬರುತ್ತಿದ್ದರು. ಅದರಲ್ಲಿ ವಯಸ್ಸಾದವರೂ ಇದ್ದರು.

ನಾವೆಲ್ಲಾ ಏದುಸಿರು ಬಿಟ್ಟುಕೊಂಡು ಕೈಕಾಲು ಬಡಿಯುತ್ತಿದ್ದರೆ ಇವರು ಹಾಸಿಗೆಯ ಮೇಲೆ ಮಲಗಿದಂತೆ ಆರಾಮವಾಗಿ ಶವಾಸನ ಹಾಕಿಕೊಂಡು ನೀರಿನ ಮೇಲೆ ತೇಲುತ್ತಿದ್ದರು. ಆಗೀಗ ಕೈಕಾಲು ಅಲುಗಾಡಿಸಿದಂತೆ ಕಾಣಿಸುತ್ತಿತ್ತಾದರೂ ನಾವು ಹಾಕುತ್ತಿದ್ದ ಶ್ರಮದಲ್ಲಿ ಕಾಲುಭಾಗದಷ್ಟನ್ನೂ ಅವರು ಹಾಕುತ್ತಿರಲಿಲ್ಲ. ನಮಗೆ ಇವರೆಲ್ಲಾ ಮ್ಯಾಜಿಕ್ಕು ಮಾಡುತ್ತಿದ್ದಾರೋ ಹೇಗೆ ಅನ್ನುವ ಅನುಮಾನ ಬರುತ್ತಿತ್ತು.  ಸುಂದರ ಬನಹಟ್ಟಿಯವರು ಅದೆಲ್ಲಾ ಅನುಭವದ ಮೇಲೆ ಬರೋದು.. ನೀರಿನ ಬಗ್ಗೆ ಇರುವ ಭಯವನ್ನು ಮೊದಲು ಬಿಟ್ಟುಬಿಡಬೇಕು.

ಮೊದಮೊದಲು ನೀರು ಕುಡಿಯೋದು ಉಸಿರುಗಟ್ಟೋದು ಎಲ್ಲಾ ಸಾಮಾನ್ಯ. ಚಿಕ್ಕವರಿದ್ದಾಗ ಸೈಕಲ್ಲು ತುಳಿದಿರುತ್ತೀರಲ್ಲವಾ... ಆವಾಗ ಬೀಳದೆ ಏಳದೇ ಸೈಕಲ್ಲು ಕಲಿಯೋದು ಸಾಧ್ಯವಾಯಿತಾ..? ಇದೂ ಹಾಗೇ. ನಿಮಗೆ ಏನೂ ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳಲು ನಾವೆಲ್ಲಾ ಇದ್ದೇವಲ್ಲಾ... ಇಲ್ಲಿ ಈಜುವ ಪ್ರತಿಯೊಬ್ಬರನ್ನೂ ಗಮನಿಸುತ್ತಾ ಇರ‍್ತೀವಿ. ಅದಕ್ಕೋಸ್ಕರವೇ ನಮಗೆ ಇಲ್ಲಿ ಸಂಬಳ ಕೊಟ್ಟು ಇಟ್ಟುಕೊಂಡೀರೋದು. ಈಜು ಕಲಿಯಲಿಕ್ಕೆ ಇದಕ್ಕಿಂತಾ ಒಳ್ಳೆ ಅವಕಾಶ ಸಿಕ್ಕುವುದಿಲ್ಲ.

ನಿಜಕ್ಕೂ ಇವೆಲ್ಲಾ ಕಲೆಯ ಪ್ರಕಾರಗಳು. ಹಿಂದೆ ರಾಜಮಹಾರಾಜರು ತಮ್ಮ ಮಕ್ಕಳು ವಯಸ್ಸಿಗೆ ಬಂದ ತಕ್ಷಣ ಅವರಿಗೆ ಕುದುರೆ ಸವಾರಿ, ಶಸ್ತ್ರಾಸ್ತ್ರ ತರಬೇತಿ, ಈಜು ಎಲ್ಲವನ್ನೂ ಕಲಿಸಬೇಕೆಂದು ಸೂಕ್ತ ಗುರುಗಳನ್ನು ನೇಮಿಸುತ್ತಿದ್ದರು. ಈಗಲೂ ಇವನ್ನೆಲ್ಲಾ ಹೊರಗಿನವರು ಕಲಿಯಬೇಕೆಂದರೆ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಅಂತಹ ಅವಕಾಶ ನಿಮಗೆ ತಾನಾಗಿ ದೊರೆತಿದೆ. ಅದೂ ಸಂಬಳದ ಸಮೇತ. ಆ ದೃಷ್ಟಿಯಿಂದ ನೀವು ಅದೃಷ್ಟಶಾಲಿಗಳೆಂದು ತಿಳಿಯಿರಿ... ಅಂದದ್ದು ನಮ್ಮ ಹೆಮ್ಮೆಗೆ ಕಾರಣವಾಗಿದ್ದಲ್ಲದೆ ಈಜುವುದನ್ನು ಚೆನ್ನಾಗಿ ಕಲಿಯಬೇಕೆಂಬ ನಮ್ಮ ನಿರ್ಧಾರ ಇನ್ನೂ ಗಟ್ಟಿಯಾಯಿತು.

ಈಜುಕೊಳಕ್ಕೆ  ಬರುತ್ತಿದ್ದ ಕೆಲವು ಮಕ್ಕಳು ನೀರಿನೊಳಕ್ಕೆ ಇಳಿದುವೆಂದರೆ ಗಂಟೆಗಟ್ಟಲೇ  ಈಜುತ್ತಿದ್ದವು. ಪುಟ್ಟ ಮಕ್ಕಳ ಈ ಸಾಮರ್ಥ್ಯದ ಗುಟ್ಟು ನಮಗೆ ಒಗಟಾಗಿತ್ತು. ಅಷ್ಟಿದ್ದರೆ ಪರವಾಗಿರಲಿಲ್ಲ, ಹತ್ತಿರದಲ್ಲೇ ಇದ್ದ ಏಳೆಂಟು ಅಡಿ ಎತ್ತರದ ಫ್ಲಾಟ್‌ಫಾರಂ ಏರಿ ಅಲ್ಲಿಂದ ತಲೆಕೆಳಗಾಗಿ ದುಢುಮ್ಮನೇ ಬೀಳುತ್ತಿದ್ದವು. ಹಾಗೆ ಬಿದ್ದವರು ನಿಮಿಷಗಟ್ಟಲೆ ಮೇಲೆ ಬರುತ್ತಲೇ ಇರಲಿಲ್ಲ.

ನನಗೆ ಎದೆ ಢವಢವನೆ ಹೊಡೆದುಕೊಳ್ಳುತ್ತಿದ್ದರೆ ಅವುಗಳ ಪಾಲಕರು ಅದೊಂದು ಸಂಗತಿಯೇ ಅಲ್ಲವೆಂಬಂತೆ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ನಿಲ್ಲುತ್ತಿದ್ದರು. ಏನ್ರಪ್ಪಾ ಇದು ವಿಷಯ.. ಅಂದರೆ ತರಬೇತುದಾರರು ಎಷ್ಟಾದರೂ ಮಕ್ಕಳಲ್ವಾ ಸ್ವಾಮಿ.. ಬಲೇ ಚೂಟಿ, ಬೆರಳು ತೋರಿಸಿದರೆ ಹಸ್ತಾನೆ ನುಂಗಿಬಿಡ್ತವೆ... ಅನ್ನುತ್ತಿದ್ದರು. ಅಂತೂ ಕೊನೆಯವರೆಗೆ ಏನೇ ಪ್ರಯತ್ನಿಸಿದರೂ ಈಜಿನಲ್ಲಿ ಪಾಸಾಗಲು ಕನಿಷ್ಟ ಅರ್ಹತೆ ಏನಿತ್ತೋ ಅಷ್ಟನ್ನು ಬಿಟ್ಟು ಹೆಚ್ಚಿನದೇನನ್ನು ಸಾಧಿಸಲು ನನ್ನಿಂದ ಸಾಧ್ಯವಾಗಲಿಲ್ಲವೆಂಬುದು ಬೇರೆ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT