ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಕಾಡು

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ತಿಳಿನೀಲಿ ಸಮವಸ್ತ್ರದ ಅಜಾನುಬಾಹು ಕಾವಲುಗಾರ ಕಬ್ಬಿಣದ ಗೇಟಿನ ಪಕ್ಕದ ಸಣ್ಣ ಗೋಪುರದೊಳಗೆ ವಿಗ್ರಹದಂತೆ ನಿಂತಿದ್ದ. ಗೇಟಿನ ಹೊರಗೆ ಕಾಯುತ್ತ ನಿಂತಿದ್ದ ಯಂಕಣ್ಣನನ್ನು ಗಡಸು ಮುಖದ ಅವನು ಅಲ್ಲಿಂದ ಹೋಗುವಂತೆ ಸನ್ನೆ ಮಾಡಿದ. ಕದಲದೆ ನಿಂತ ಯಂಕಣ್ಣನ ಹಠಮಾರಿತನಕ್ಕೆ ವ್ಯಗ್ರನಾದ ಅವನು ವಿಳಾಸ ವಿಚಾರಿಸಲು ನಿಂತಿರಬಹುದೆಂದು ಯೋಚಿಸಿ ತುಸು ಸಹನೆಯಿಂದ ‘ಏನು ಬೇಕಪ್ಪ?’ ಎಂದು ವಿಚಾರಿಸಿದ.
 
ಯಂಕಣ್ಣ ದೇವರ ದರ್ಶನವಾದಂತೆ ಮುಷ್ಟಿ ಬಿಚ್ಚಿ ಮುದ್ದೆಯಾದ ವಿಳಾಸ ಬರೆದ ಚೀಟಿ ತೋರಿಸಿದ. ಕೃಪೆ ತೋರುವವನಂತೆ, ‘ಫಾರೆಸ್ಟ್ ಆಫ್ ಟೈಮ್ ಅಂದರೆ ಇದೇನೆ. ಬಂದದ್ದು ಯಾಕೆ?’ ಅಪರಾಧಿಯನ್ನು ವಿಚಾರಿಸುವಂತೆ ಸೆಟೆದ ಭಂಗಿಯಲ್ಲಿ ನಿಂತು ಕೇಳಿದ. ಅನಾಥ ಭಾವದಲ್ಲಿ ತಲ್ಲಣಿಸಿಹೋದ ಯಂಕಣ್ಣ, ‘ಈ ಕಂಪ್ನೀಲಿ ನಮ್ಮೂರು ಪ್ರಭಾಕರ ಇದ್ದಾನೆ. ಊರಿಗೆ ಬಾರದೆ ಐದಾರು ವರ್ಷ ಆಯ್ತು. ಮನೇಲಿ ಇರುವವಳು ಅವನ ಮುದಿ ತಾಯಿ ಮಾತ್ರ. ಸದ್ಯ ಹಾಸಿಗೆ ಹಿಡಿದಿದ್ದಾಳೆ. ಸಾಯೋಕ್ಕಿಂತ ಮುಂಚೆ ಮಗನ ಮೋರೆ ನೋಡ್ಬೇಕು ಎಂದು ನರಳ್ತಿದ್ದಾಳೆ. ಪತ್ರ ಬರೆಯೋದಿಲ್ಲ; ಫೋನು ಎತ್ತೋದಿಲ್ಲ. ಹೊಸ ಮನೆ ಕಟ್ಟಿದ್ದಾನಂತೆ. ಒಂದ್ಸಲವೂ ಕರೀಲಿಲ್ಲ ಅವಳನ್ನು. ಸುದ್ದಿ ತಲಿಪಿಸೋದಕ್ಕೆ ಖುದ್ದು ನಾನೇ ಬರಬೇಕಾಯ್ತು’ ಎಂದ.
 
‘ಹಣ ಕಳಿಸ್ತಾ ಇಲ್ವಾ?’
‘ಹಣದ ವ್ಯವಸ್ಥೆ ಮಾಡಿದ್ದಾನೆ. ಅಷ್ಟೇ ಸಾಕಾ?’
‘ಅದಕ್ಕಿಂತ ಹೆಚ್ಚಿಗೆ ಮಾಡೋದಕ್ಕೆ ಇಲ್ಲಿಯವರಿಗೆ ಯಾರಿಗೂ ಪುರಸೊತ್ತಿಲ್ಲ’.
‘ನನಗೆ ಪ್ರಭಾಕರನ ಭೇಟಿ ಮಾಡ್ಸಿ’ ಬೇಡಿಕೊಂಡ.
 
‘ಇಲ್ಲಿ ಸಾವಿರಾರು ಜನ ಉದ್ಯೋಗದಲ್ಲಿದ್ದಾರೆ. ಬರ್ತಾರೆ ಬಿಟ್ಟು ಬೇರೆ ಕಂಪ್ನಿಗೆ ಹೋಗ್ತಾರೆ. ಪ್ರಭಾಕರ ಯಾರೆಂದು ನನಗೆ ಗೊತ್ತಿಲ್ಲ. ಬೇಕಾದ್ರೆ ನೀನು ನನ್ನ ಸೆಕ್ಯುರಿಟಿ ರೂಮಿನಲ್ಲಿ ನಿಂತ್ಕಳ್‌ಭೌದು. ಒಬ್ಬೊಬ್ಬರೆ ಬರುವ ಸಮಯ ಆಯ್ತು ಈಗ’.
 
ಯಂಕಣ್ಣ ಹಿಂಜರಿಕೆ, ತಳಮಳದಲ್ಲೆ ಒಳಗೆ ಬಂದು ನಿಂತ. ‘ಗುರುತಿನ ಚೀಟಿ ಇಲ್ದಿದ್ರೆ ಒಳಗೆ ಯಾರನ್ನೂ ತಗಳೋದಿಲ್ಲ ಗೊತ್ತಾ’ ಎಂದು ತನ್ನ ಉಪಕಾರವನ್ನು ಆಯುಷ್ಯವಿಡೀ ನೆನಪಿಡು ಎನ್ನುವಂತೆ ನೋಡಿದ ಹುರಿ ಮೀಸೆಯ ಕಾವಲುಗಾರ. 
 
ಯಂಕಣ್ಣ ಕುಳಿತಲ್ಲಿಂದ ಅಭೇದ್ಯ ಗೋಡೆಯ ನಡುವೆ ನಿಂತ ಬೃಹತ್ ಮಹಲ್ಲುಗಳ ಸಮುಚ್ಚಯವನ್ನು ನೋಡಿದ. ಬಿಸಿಲು ಬೆಳಕನ್ನು ಕಡೆದು ನಿಲ್ಲಿಸಿದ ವಜ್ರದಂತೆ ಹೊಳೆಯುವ ಬಾನಿಗೆ ಚಿಮ್ಮಿದ ಗಾಜಿನ ಕಟ್ಟಡಗಳು; ಅಂಗೈ ಮೇಲಿನ ನುಣುಪಾದ ಗೆರೆಗಳಂತಹ ರಸ್ತೆಗಳು; ಲಾನಿನ ಹುಲ್ಲುಗಳು, ಅಂಚಿನ ಗಿಡ–ಮರಗಳು ಪ್ಲ್ಯಾಸ್ಟಿಕ್ಕಿನಿಂದ ನಿರ್ಮಿಸಿದಂತೆ ಭಾಸವಾದವು; ಬಣ್ಣದ ಕಾಗದದಿಂದ ಮಾಡಿದಂತಿರುವ ಹಕ್ಕಿಗಳು ಮತ್ತು ಮೊಬೈಲ್ ರಿಂಗ್ ಸದ್ದಿನಂತ ಅವುಗಳ ಹಾಡು ವಿಚಿತ್ರ ಎನಿಸಿತು. ಗೇಟಿನಿಂದ ಒಂದೊಂದಾಗಿ ಕಾರುಗಳು ನಿಂತು ಹೊರಡತೊಡಗಿದವು. ಯಂಕಣ್ಣ ಇಣುಕಿ ನೋಡಿದ. ಎಲ್ಲವೂ ಒಂದೇ ರೀತಿಯ ಕಾರುಗಳು; ಅದರೊಳಗಿನ ಮೇಣದ ಯಂತ್ರದಂತ ಕಪ್ಪು ಕನ್ನಡಕದ ಮನುಷ್ಯರು. ಯಂಕಣ್ಣ ಬೆವರಿ ಅಸ್ವಸ್ಥನಾದ.
 
‘ಇಲ್ಲಿ ಯಾರ ಪರಿಚಯವೂ ಅಷ್ಟೊಂದು ಯಾರಿಗೂ ಇರೋದಿಲ್ಲ. ನನ್ನ ಬಾಸ್‌ನ್ನು ಕಣ್ಣಾರೆ ನಾನೇ ಇಲ್ಲಿವರೆಗೆ ನೋಡಿಲ್ಲ. ಬೇರೆಯವರು ಹೇಳಿದ ಕಥೆಯನ್ನು ಕೇಳಿದ್ದೇನೆ: ತೀರ ಬಡತನದಲ್ಲಿ ಹುಟ್ಟಿದ ಹುಡುಗ. ಭಯಂಕರ ಹಸಿವು. ಮನೆಯಲ್ಲಿ ಬೇಯಿಸಿದ ಎಲ್ಲ ಅನ್ನ ಅವನಿಗೆ ಬೇಕಿತ್ತಂತೆ. ಹೊಟೇಲಲ್ಲಿ ಕೆಲ್ಸಕ್ಕಿದ್ದಾಗ್ಲೂ ಬಕಾಸುರನಾಗಿದ್ದನಂತೆ. ರಸ್ತೆ ಮೇಲೆ ನಿಂತು ಲಾರಿಯವರ ಕಾಡಿ ಬೇಡಿ ಕಾಸು ಕೂಡಿಸಿ ತಿಂತಿದ್ದ. ಯಾವನೋ ಒಬ್ಬ ಲಾರಿಯವ ಇವನ ಕಾಟ ತಡೀಲಾರದೆ ಬೆಂಗಳೂರಿಗೆ ತಂದು ಬಿಟ್ಟ. ಲಾಟರೀಲಿ ದುಡ್ಡು ಸಿಕ್ತು. ಬಿಸ್ನೆಸ್ ಸುರುಮಾಡ್ದ. ಊರಿಗೆ ಹೋಗಿ ಗದ್ದೆ, ನದಿ ನೀರು, ಮರ, ಮರಳು, ಮನೆ ಎಲ್ಲ ನುಂಗಿ ಬಂದ. ತನದೇ ಒಂದು ಕಂಪನಿ ಸುರುಮಾಡಿ ಕೆಲ್ಸಕ್ಕೆ ಕರೆದ. ಸಂದರ್ಶನಕ್ಕೆ ಬಂದವರ ನೆರಳ ಹಿಡಿದು ಕಟ್ಟಿಹಾಕಿದ. ಅವರ ನೆರಳುಗಳನ್ನು ಒಂದು ಕತ್ತಲ ಕೋಣೆಯಲ್ಲಿ ಮೊಳೆ ಹೊಡೆದು ನೇತುಹಾಕಿದ್ದಾನಂತೆ. ಅವು ಅಲ್ಲಿ ಅಳುತ್ತ ಓಡಾಡುತ್ತವಂತೆ. ನೆರಳು ಬೇಕಾದವರಿಗೆ ಅವರವರ ಶರೀರಕ್ಕೆ ತಕ್ಕಂತೆ ಹೊಂದಿಸಿ, ದರ್ಜಿಯಂತೆ ಹೊಲಿದು ಮಾರಾಟ ಮಾಡ್ತಾನೆ. ಇಲ್ಲಿಂದ ತಪ್ಪಿಸಿಕೊಂಡು ಹೋಗುವವರಿಗೆ ನೆರಳೇ ಇರೋದಿಲ್ಲ! ನೀನೇ ನೋಡುವಿಯಂತೆ ಬಾ’ ಎಂದು ರಾತ್ರಿ ಪಾಳಿಯ ಕಾವಲುಗಾರ ನೇತು ಹಾಕಿದ ವಸ್ತ್ರವನ್ನು ಯಂಕಣ್ಣನಿಗೆ ತೊಡಿಸಿ ಬೆಳಕಿನ ಲೋಕದೊಳಗೆ ನಡೆದ.
 
ಎಂಟನೇ ಅಂತಸ್ತಿನಲ್ಲಿ ತಾರಾಲಯದಂತಹ ಗೋಳ. ಅದರ ಕೆಳಗೆ ಬಗೆ ಬಗೆಯ ಯಂತ್ರಗಳನ್ನಿಟ್ಟುಕೊಂಡ ಮನುಷ್ಯರು. ಅಲ್ಲಿ ದಶದಿಕ್ಕುಗಳಿಂದ ಚೆಲ್ಲುವ ಬೆಳಕು. ಯಾರಿಗೂ ನೆರಳಿಲ್ಲ. ಅವರು ಸದ್ಯ ಸಂಪರ್ಕದಲ್ಲಿರುವುದು ಭೂಮಿಯ ಇನ್ನೊಂದು ಪಾರ್ಶ್ವದ ಕಗ್ಗತ್ತಲ ಆಕಾಶ ಎಂದ ಜತೆಗಿದ್ದ ಕಾವಲುಗಾರ. ಅನಂತ ದೂರದ ರಾತ್ರಿ ನಕ್ಷತ್ರಗಳನ್ನು ಅವರು ಮೊಬೈಲ್ ಪರದೆಯ ಮೇಲಿನ ಬೊಟ್ಟುಗಳನ್ನು ಬೆರಳಿಂದ ಗೀರಿ ರಹಸ್ಯ ಖಾನೆಯ ಬೀಗವನ್ನು ತೆರೆಯುವಂತೆ ಸರಿಸಿ ವಿವಿಧ ವಿನ್ಯಾಸಗಳಲ್ಲಿ ತಾರಾಮಂಡಲವನ್ನು ಜೋಡಿಸುತ್ತಿದ್ದರು.
 
ಏಳು ಸುತ್ತಿನ ಕೋಟೆಯಂತ ಚಕ್ರವ್ಯೂಹ ಸ್ವರ್ಗವೊ ನರಕವೊ ಎಂದು ಗೊಂದಲವಾಯಿತು.
 
ಮತ್ತಷ್ಟು ಅಸ್ವಸ್ಥನಾದ ಯಂಕಣ್ಣ, ‘ಅವನಿಗೆ ರಜೆ ಯಾವಾಗ?’ ಎಂದ.
 
‘ಅವರಿಗೆ ಹಗಲು–ರಾತ್ರಿ ಭೇದವಿಲ್ಲ; ನಿಃಶ್ಯಬ್ದವಾದ, ಕತ್ತಲಿರುವ ರಾತ್ರಿಯೇ ಇರದ ಅವರಿಗೆ ನಿದ್ರೆ ಕನಸುಗಳಿಲ್ಲ. ಬಿಡುವಿನಲ್ಲಿ ಔಟಿಂಗ್–ರಿಸಾರ್ಟ್‌, ಗಿರಿಧಾಮಗಳಿಗೆ. ಮನರಂಜನೆಗೆ ಅನ್ಯಗ್ರಹದ ಅನ್ಯ ಜೀವಿಗಳ ಪುರಾಣ ಸಾಹಿತ್ಯ. ಅರ್ಥವಾಗದ ಭಾಷೆಯಲ್ಲಿ ವ್ಯವಹಾರ. ನಮಗಿಂತ ಅವರು ಐದುನೂರು ವರ್ಷವಾದರೂ ಮುಂದಿರಬಹುದು. ಅವರಿಗೆ ತಮ್ಮ ಊರು ಪೂರ್ತಿ ಮರೆತು ಹೋಗಿದೆ. ನೆರಳು ಕಳಚಿಕೊಂಡ ಪ್ರಭಾಕರ ಊರಿಗೆ ಬಂದು ತಾಯಿಗೆ ಏನು ಮಾಡಿಯಾನು?’.
 
ಕಾವಲುಗಾರ ತನ್ನ ಸಮವಸ್ತ್ರ ಕಳಚಿಟ್ಟ. ಬುತ್ತಿಯಲ್ಲಿ ಕಟ್ಟಿಕೊಂಡು ಬಂದ ಉಪ್ಪಿಟ್ಟಿನ ಪಾಲನ್ನು ತಿನ್ನಲು ನೀಡಿದ. ತಾನು ಬರುವ ತನಕ ತನ್ನ ಡ್ಯೂಟಿ ಜಾಗದಲ್ಲಿ ಧರಿಸಿದ ವಸ್ತ್ರದಲ್ಲಿಯೇ ಇರಬೇಕೆಂದು ತಾಕೀತು ಮಾಡಿ ಗೇಟು ಮುಚ್ಚಿ ಹೋದ. ಕಾವಲುಗಾರ ಹೇಳಿದ ಕಥೆಯ ಬಾಸ್ ಪ್ರಭಾಕರನೇ ಇದ್ದಿರಬಹುದೆ ಎಂದು ಬೆವರಿದ.
 
ಅದಾಗಲೆ ಹೊತ್ತು ಪಶ್ಚಿಮಕ್ಕೆ ವಾಲಿತ್ತು. ಬೃಹತ್ ವಸಾಹತುವಿನೆದುರು ಜಂತುವಿನಂತೆ ನಿಂತಿದ್ದ ಯಂಕಣ್ಣನಿಗೆ ಭಯವಾಯಿತು. ಹೊರಗೆ ಬಂದು ಯಾರಿಲ್ಲವೆಂದು ಖಚಿತಪಡಿಸಿ ಪಾರಾಗುವ ಉಪಾಯ ಯೋಚಿಸಿದ. ಅದಾಗಲೇ ಹುಲ್ಲು ಹಾಸಿನ ಮೇಲೆ ಚಾಚಿದ ಅವನ ಉದ್ದನೆಯ ನೆರಳನ್ನು ಅದೃಶ್ಯ ಹಸ್ತವೊಂದು ಎಳೆಯುತ್ತಿತ್ತು. ಕ್ಷಣ ಮಾತ್ರದಲ್ಲಿ ಅವನ ದೇಹ ಪೊರೆ ಕಳಚಿದಂತೆ ನೆರಳಿನಿಂದ ಬೇರೆಯಾಯಿತು. ವಜ್ರದಂತೆ ಮಿಂಚುತ್ತಿರುವ ಕಾಲದ ಕಾಡಿನ ಮಾಯೆ ಅವನನ್ನು ಆವರಿಸಿ ಮುದಿ ಜೀವ ನರಳುವುದನ್ನು ಮರೆತು ಅತ್ಯಂತ ಹೊಸ ವೇಷದ ನಟನೆಯ ಮನುಷ್ಯನಾಗಿ ಕಾವಲು ಕೊಠಡಿಯ ಕುರ್ಚಿಯ ಮೇಲೆ  ಸುಖವಾಗಿ ಕುಳಿತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT