ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆಯೊಡಲ ಪಾಪ ತೊಳೆಯಲು ಬದುಕನ್ನೇ ಮುಡಿಪಾಗಿಟ್ಟ ‘ಮಹಾಂತ’

Last Updated 1 ಜನವರಿ 2017, 16:01 IST
ಅಕ್ಷರ ಗಾತ್ರ

‘ಸುನೀಲ್ ಸರ್ಕಾರ್’.–ಗಂಗೆ ಮತ್ತು ಅಸಿ ನದಿಯ ಸಂಗಮದಲ್ಲಿ ಬಲೆ ಬೀಸಲು ಸಿದ್ಧವಾಗಿ ನಿಂತಿದ್ದ ಬಡಕಲು ದೇಹದ ಆ ವ್ಯಕ್ತಿಯ ಹಿಂದೆ ಹೋಗಿ ನಿಂತು ‘ಹೆಸರೇನು?’ ಎಂದು ಕೇಳಿದಾಗ ಸಿಕ್ಕ ಉತ್ತರ. ಸೊಂಟದ ಸುತ್ತೊಂದು ಲುಂಗಿ. ಮೇಲೊಂದು ಹರಿದ ಬನಿಯನ್. ಕೈಯಲ್ಲೊಂದು ಬಲೆ. ಅಸಿ ಮತ್ತು ಗಂಗೆಯ ಸಂಗಮದಲ್ಲೊಬ್ಬ ಒಂಟಿ ಬೆಸ್ತ! ನಡು ಮಧ್ಯಾಹ್ನ ಬಲೆ ಬೀಸುತ್ತಿದ್ದ!

ಸರ್ಕಾರ್ ಬಳಿ, ‘ಯಾವ ಊರು? ನಿಮ್ಮ ಸಂಸಾರದಲ್ಲಿ ಯಾರ್‍್ಯಾರು ಇದ್ದಾರೆ? ಇಲ್ಲಿ ಮೀನು ಹಿಡಿದು ದಿನಕ್ಕೆ ಎಷ್ಟು ಸಂಪಾದನೆ ಮಾಡುತ್ತೀರಿ?’ ಎಂದು ಪ್ರಶ್ನಿಸಿದೆ. ‘ಕೋಲ್ಕತ್ತದಿಂದ ಬಂದು ಇಲ್ಲಿಯೇ ಗುಡಿಸಲಲ್ಲಿ ಬದುಕುತ್ತಿದ್ದೇನೆ. ದಿನಕ್ಕೆ 50–60 ರೂಪಾಯಿ ಸಂಪಾದನೆ ಮಾಡುತ್ತೇನೆ. ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ’ ಎಂದು ಸರ್ಕಾರ್ ಹೇಳಿದಾಗ ಮಹಾಂತರು ಹೇಳಿದ ‘35 ಕೋಟಿಗೂ ಮೀರಿದ ಗಂಗೆಯ ಸುಪುತ್ರರು’ ಎಂಬ ಮಾತುಗಳು ನೆನಪಾದವು.
 
ಸಾವಿನ ಆಡಂಬೋಲದಲ್ಲಿಯೇ ಬದುಕಿನ ಸೌಂದರ್ಯ ಮತ್ತು ಮಹತ್ವವನ್ನು ತೋರುವ ಜಗತ್ತಿನ ಏಕೈಕ ‘ಪುಣ್ಯಸ್ಥಳ’ ವಾರಾಣಸಿ. ಇಲ್ಲಿ ಸಾವಿನ ನಡುವೆಯೇ ಬದುಕು ಅರಳುತ್ತದೆ. ನಿತ್ಯ ನರಕದ ನಡುವೆಯೇ ಸ್ವರ್ಗದ ಕನಸುಗಳು ಕುಡಿಯೊಡೆಯುತ್ತವೆ. ಮಣಿಕರ್ಣಕಾ, ಹರಿಶ್ಚಂದ್ರ ಘಾಟ್‌ನ ಸಾಲು–ಸಾಲು ಚಿತೆಗಳು ಉಗುಳುವ ಬೆಂಕಿಯ ನಡುವೆಯೇ ಬದುಕಿನ ಬಗ್ಗೆ ಭರವಸೆಗಳು ಚಿಗುರೊಡೆಯುತ್ತವೆ. ಒಮ್ಮೆ ಗಂಗೆಯ ತಟದ ಈ ನಗರಿಗೆ ಕಾಲಿಟ್ಟರೆ, ಅದು ಯಾರನ್ನಾದರೂ ತನ್ನೊಳಗೆ ಸೆಳೆದುಕೊಂಡು ಬಿಡುತ್ತದೆ. ಗಂಗಾಮಾತೆಯ ಈ ನೆಲದಲ್ಲಿ ಅದೇನೋ ಆಕರ್ಷಣೆ! 
 
ಅಂತಹ ಸೆಳವಿನ ನಡುವೆಯೇ, ಸೆಪ್ಟೆಂಬರ್ 2008ರ ನಡುಮಧ್ಯಾಹ್ನ ಒಂಟಿಯಾಗಿ ಹೆಜ್ಜೆ ಹಾಕುತ್ತಿದ್ದೆ. ತಲೆಯ ಮೇಲೆ ಉರಿಯುತ್ತಿದ್ದ ಸೂರ್ಯ ಬೆಂಕಿ ಕಾರುತ್ತಿದ್ದ. ತುಳಸಿಘಾಟ್‌ನಿಂದ ಹೊರಟವ ಬೆವರಿನಿಂದ ತೊಪ್ಪೆಯಾಗಿ ಕೊನೆಗೂ ಹುಡುಕಿ–ಹುಡುಕಿ ಅಸಿ ನದಿ ಗಂಗೆಯನ್ನು ಸೇರುವ ಸ್ಥಳ ತಲುಪಿದೆ. ಮೂಲ ಉದ್ದೇಶ ಸುನೀಲ್ ಸರ್ಕಾರ್ ಭೇಟಿ ಮಾಡುವುದಾಗಿರಲಿಲ್ಲ! ಗಂಗೆ ಮತ್ತು ಅಸಿ ನದಿಯ ಸಂಗಮದ ಪರಿಸ್ಥಿತಿಯನ್ನು ನೋಡುವುದಾಗಿತ್ತು. 
 
ಅದಕ್ಕೆ ಕಾರಣ ದಶಕಗಳಿಂದ ಗಂಗೆಯ ಕೊಳೆ ತೊಳೆಯುವ ಕಾರ್ಯದಲ್ಲಿ ತನ್ನನ್ನೇ ತಾನು ಒಡ್ಡಿಕೊಂಡಿದ್ದ ‘ಸಂಕಟ ಮೋಚನ ಟ್ರಸ್ಟ್’ನ ಮಹಾಂತ ಮತ್ತು ‘ಫೌಂಡೇಷನ್‌’ನ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ವೀರ ಭದ್ರ ಮಿಶ್ರ. ಅವರ ಜೊತೆಗಿನ ಭೇಟಿ ನಡೆದದ್ದು ಸುಮಾರು ಒಂಬತ್ತು ವರ್ಷಗಳ ಹಿಂದೆ. ನಾನಾಗ ನವದೆಹಲಿಯಲ್ಲಿ ಪತ್ರಕರ್ತನಾಗಿ ನೆಲೆ ನಿಂತಿದ್ದೆ. ಜೀವದ ಗೆಳೆಯ ಪಿ. ಶೇಷಾದ್ರಿ, ‘‘ವಿಮುಕ್ತಿ ಚಿತ್ರಕ್ಕಾಗಿ ವಾರಾಣಸಿಗೆ ಲೊಕೇಷನ್ ಪರಿಶೀಲನೆ ಮಾಡಲು ಬರುತ್ತಿದ್ದೇನೆ. ನೀವು ಕೂಡ ಜೊತೆಗೆ ಬರಬೇಕು. ನಾನು ದೆಹಲಿಗೆ ಬರುತ್ತೇನೆ. ಅಲ್ಲಿಂದ ನಾವಿಬ್ಬರೂ ರೈಲಿನಲ್ಲಿ ವಾರಣಾಸಿಗೆ ಹೋಗೋಣ’’ ಎಂದು ನನ್ನನ್ನು ಹೊರಡಿಸಿದ್ದರು. ನಾವಿಬ್ಬರೂ ರೈಲಿನಲ್ಲಿ ವಾರಾಣಸಿ ತಲುಪಿದೆವು. ನಮ್ಮಿಬ್ಬರ ಮತ್ತೊಬ್ಬ ಗೆಳೆಯ ಲಕ್ಷ್ಮೀಪತಿ ಕೋಲಾರ ಅವರು ಕ್ಯಾಮೆರಾಮನ್‌ಗಳ ಜೊತೆ ಬೆಂಗಳೂರಿನಿಂದ ನೇರವಾಗಿ ವಾರಾಣಸಿ ತಲುಪಿದರು. 
 
ಲೊಕೇಷನ್ ಪರಿಶೀಲನೆಯೊಂದಿಗೆ, ಶೇಷಾದ್ರಿ ಅಲ್ಲಿರುವ ‘ಮುಕ್ತಿಧಾಮ’ದ ಕುರಿತು ಒಂದು ಸಾಕ್ಷ್ಯಚಿತ್ರ ಮಾಡುವುದು. ನಾನು ‘ಗಂಗಾ ಆಕ್ಷನ್ ಪ್ಲಾನ್’ ಬಗ್ಗೆ, ಕೆಲಸ ಮಾಡುತ್ತಿದ್ದ ನಿಯತಕಾಲಿಕಕ್ಕೆ ಒಂದು ಕವರ್ ಸ್ಟೋರಿ ಸಿದ್ಧ ಮಾಡುವುದು ಎಂದು ಮೊದಲೇ ನಿರ್ಧಾರವಾಗಿತ್ತು. ನವದೆಹಲಿಯ ಗೆಳೆಯರೊಬ್ಬರು, ‘ನೀನು ಗಂಗಾ ಆಕ್ಷನ್ ಪ್ಲಾನ್ ಬಗ್ಗೆ ಸ್ಟೋರಿ ಮಾಡುವುದಾದರೆ ಪ್ರೊಫೆಸರ್ ವೀರ ಭದ್ರ ಮಿಶ್ರ ಅವರನ್ನು ಭೇಟಿ ಮಾಡಿ ಬರಲೇಬೇಕು’ ಎಂದು ತಾಕೀತು ಮಾಡಿದ್ದರು. ಬರುವ ಮೊದಲೇ ದೂರವಾಣಿ ಕರೆ ಮಾಡಿ ಮಿಶ್ರ ಅವರ ಭೇಟಿಗೆ ಸಮಯ ನಿಗದಿ ಮಾಡಿಕೊಂಡಿದ್ದೆ. 
 
ಮೊದಲ ದಿನ ನಿಗದಿಯಾದಂತೆ ಲೊಕೇಷನ್ ಪರಿಶೀಲನೆ ಮಾಡಿದ ಶೇಷಾದ್ರಿ, ಹರಿಶ್ಚಂದ್ರ ಘಾಟ್ ಬಳಿ ಚಿತ್ರೀಕರಣ ಮಾಡುವ ನಿರ್ಧಾರ ಮಾಡಿದರು. ಅದೇ ದಿನ ನಾವು ಅಲ್ಲಿನ ಮುಕ್ತಿಧಾಮವೊಂದಕ್ಕೆ ಭೇಟಿ ಮಾಡಿ ಅಲ್ಲಿ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಯಿತು. ಮರುದಿನ ನಾನು ಮಿಶ್ರ ಅವರ ಮನೆಯಿದ್ದ ತುಳಸಿಘಾಟ್‌ಗೆ ಹೊರಟು ನಿಂತಾಗ, ಶೇಷಾದ್ರಿ ಕೂಡ ಕ್ಯಾಮೆರಾಮನ್ ಜೊತೆ ಬಂದರು. ‘‘ಹೇಗೂ ‘ಟೈಮ್’ ನಿಯತಕಾಲಿಕ 1992ರಲ್ಲಿ ‘ಹೀರೋ ಆಫ್ ದಿ ಪ್ಲಾನಟ್’ ಎಂದು ಗುರುತಿಸಿದ, ಗಂಗೆಯ ಉಳಿವಿಗಾಗಿ ಜೀವವನ್ನೇ ತೇಯುತ್ತಿರುವ ಮಹಾನ್ ವ್ಯಕ್ತಿಯನ್ನು ಭೇಟಿ ಮಾಡಿ, ಸಂದರ್ಶನ ಮಾಡುತ್ತಿದ್ದೀರಿ. ಅದನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಳ್ಳೋಣ’’ ಎನ್ನುವುದು ಶೇಷಾದ್ರಿ ನಿರ್ಧಾರವಾಗಿತ್ತು.
 
‘ರಾಮಚರಿತ ಮಾನಸ’ ರಚಿಸಿದ ತುಳಸಿ ದಾಸರ ವಂಶಸ್ಥರಾಗಿದ್ದ ವೀರ ಭದ್ರ ಮಿಶ್ರ ಸುಮಾರು 400 ವರ್ಷ ಹಳೆಯದಾದ ಮೂಲಮನೆಯ ಪಕ್ಕದಲ್ಲಿಯೇ ವಾಸವಾಗಿದ್ದರು. ತುಳಸಿ ದಾಸರು ಪೂಜಿಸುತ್ತಿದ್ದ ಹನುಮಾನ್ ವಿಗ್ರಹ ಮತ್ತು ಅವರ ಚರಣ ಪಾದುಕೆ ಈಗ ಕೂಡ ಆ ಮೂಲ ಮನೆಯಲ್ಲಿಯೇ ಇದೆ. ಅದೀಗ ದೇವಾಲಯವಾಗಿದೆ. 
 
ಬಾಗಿಲ ಬಳಿ ಬಂದು ನಮ್ಮನ್ನು ಎದುರುಗೊಂಡ ಮಿಶ್ರ ಅವರನ್ನು ಕಂಡ ಕೂಡಲೇ ‘ದೇವಮಾನವ’ನ ದರ್ಶನವಾದಂತೆನಿಸಿತು. ಶುಭ್ರ ಬಿಳಿಯ ಪಂಚೆ. ಮೇಲೋಂದು ಬಿಳಿಯ ಜುಬ್ಬಾ. ಸದಾ ನಗು. ಆತ್ಮೀಯ ಮನೋಭಾವ. ಬಹಳ ಎತ್ತರದ ವ್ಯಕ್ತಿತ್ವ. ಮನೆಯೊಳಗಿದ್ದ ಜಗಲಿಯ ಮೇಲೆ ಅವರು ಕೂತರು. ನಾನು, ಶೇಷಾದ್ರಿ ಎದುರು ಕೂತೆವು. ಉಭಯಕುಶಲೋಪರಿಯ ನಂತರ ಸಂದರ್ಶನ ಆರಂಭವಾಯಿತು. ಕ್ಯಾಮೆರಾ ಕೂಡ ಚಾಲೂ ಆಯಿತು. 
 
‘ಈಗ ಸಂಕಟ ಮೋಚನ ದೇವಾಲಯ ಇರುವ ಸ್ಥಳದಲ್ಲಿ ಆಗ ದಟ್ಟ ಕಾಡಿತ್ತು. ಅದೇ ಕಾನನದ ನಡುವೆ ಹನುಮಾನ್ ಪ್ರತ್ಯಕ್ಷನಾಗಿ ತುಳಸಿ ದಾಸರಿಗೆ ದರ್ಶನ ನೀಡಿದ್ದು. ಅದೇ ಜಾಗದಲ್ಲಿ ಅವರು ಸಂಕಟ ಮೋಚನ ದೇವಸ್ಥಾನ ಸ್ಥಾಪಿಸಿದರು. ಸಂಪ್ರದಾಯದಂತೆ ನಮ್ಮ ಕುಟುಂಬಸ್ಥರೇ ಸಂಕಟ ಮೋಚನ ದೇವಾಲಯ ಟ್ರಸ್ಟ್‌ನ ಮುಖ್ಯಸ್ಥ ಅಂದರೆ ಮಹಾಂತರಾಗುತ್ತಾರೆ. ನನಗೆ 14 ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡರು. ಕುಟುಂಬದ ಏಕೈಕ ಗಂಡು ಮಗುವಾಗಿದ್ದ ಕಾರಣ ಎಳೆಯ ವಯಸ್ಸಿನಲ್ಲಿಯೇ ಮಹಾಂತ ಪಟ್ಟ ಒದಗಿ ಬಂತು’ ಎಂದು ಮಿಶ್ರ ಅವರು ತುಳಸಿ ದಾಸರು, ಸಂಕಟ ಮೋಚನ ದೇಗುಲ, ಗಂಗೆ, ಬನಾರಸ್ ವಿಶ್ವವಿದ್ಯಾಲಯ, ವಾರಾಣಸಿ, 25 ವರ್ಷಗಳಷ್ಟು ದೀರ್ಘದ ಗಂಗೆಯನ್ನು ಉಳಿಸುವ ಯತ್ನ... ಎಲ್ಲವನ್ನೂ ಹೇಳುತ್ತಾ ಸಾಗಿದರು. ವಾರಾಣಸಿಯ ಇತಿಹಾಸವೇ ನಮ್ಮೆದುರು ತೆರೆದುಕೊಂಡಿತು.
 
‘ಕಳೆದ ಐದು ದಶಕಗಳ ಅವಧಿಯಲ್ಲಿ ಗಂಗೆಯೊಂದಿಗಿನ ಸಂಬಂಧ ಎಷ್ಟು ಗಟ್ಟಿಯಾಗಿದೆಯೆಂದರೆ, ನನ್ನ ಮೈ–ಮನಸ್ಸಿನ ಕಣಕಣವೂ ಗಂಗೆಯೇ ಆಗಿಹೋಗಿದ್ದಾಳೆ. ನನಗೆ ಬುದ್ಧಿ ಬಂದ ದಿನದಿಂದ ಪ್ರತಿದಿನ ಬೆಳಿಗ್ಗೆ ತುಳಸಿ ಘಾಟ್‌ನಲ್ಲಿ ಸಂಧ್ಯಾವಂದನೆ ಮಾಡಿ, ಗಾಯತ್ರಿ ಜಪ ಹೇಳಿ, ತಲೆಯ ಮೇಲೆ ಗಂಗೆಯ ನೀರನ್ನು ಹನಿಸಿಕೊಳ್ಳುವ ಮೂಲಕವೇ ದಿನ ಆರಂಭವಾಗುವುದು. ಸಂಸ್ಕೃತ, ರಾಮಚರಿತ ಮಾನಸ, ಕುಸ್ತಿ ಮತ್ತು ಸಂಗೀತವೇ ನಮ್ಮ ಕುಟುಂಬದ ಎಲ್ಲರ ಬದುಕು. ಆ ಸಂಪ್ರದಾಯದ ಚೌಕಟ್ಟಿನೊಳಗಿದ್ದೇ ನಾನು ಬನಾರಸ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದೆ. ನಂತರ ಹೈಡ್ರಾಲಿಕ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಡಾಕ್ಟರೇಟ್ ಕೂಡ ಮಾಡಿದೆ. ಅಲ್ಲಿಯೇ ಅಧ್ಯಾಪಕ ವೃತ್ತಿ ಮಾಡಿ ನಿವೃತ್ತನಾದೆ’. 
 
‘ಗಂಗೆಯನ್ನು ಉಳಿಸುವ ನಿಮ್ಮ ಯತ್ನ ಯಾವಾಗ ಆರಂಭವಾಯಿತು? ಈಗ ಎಲ್ಲಿಗೆ ಬಂದು ನಿಂತಿದೆ?’
 
‘1960ರಿಂದ ಗಂಗೆಯ ರೂಪ ಬದಲಾಗಲಾರಂಭಿಸಿತು. 1980ರ ಹೊತ್ತಿಗೆ ಗಂಗೆ ಸಂಪೂರ್ಣ ಕಲುಷಿತಗೊಂಡಿದ್ದಳು. ಪ್ರತಿದಿನ ಸಂಧ್ಯಾವಂದನೆ ಮಾಡುವಾಗ ಗಂಗೆಯಲ್ಲಿ ಮುಳುಗು ಹಾಕಲೇಬೇಕಿತ್ತು. ಅದೂ ಕಲುಷಿತಗೊಂಡ ನೀರಿನಲ್ಲಿ. ಸಂಪ್ರದಾಯ ಮುಳುಗು ಎಂದರೆ, ವೈಜ್ಞಾನಿಕ ಮನೋಭಾವ ಬೇಡ ಎನ್ನುತ್ತಿತ್ತು. ನನ್ನ ಬದುಕು ಸಾಂಪ್ರದಾಯಿಕ ಚೌಕಟ್ಟಿನಲ್ಲಿಯೇ ಇದ್ದರೂ, ಆಧುನಿಕ ವಿದ್ಯಾಭ್ಯಾಸ ಪಡೆದ ಪರಿಣಾಮವಾಗಿ ಗಂಗೆ ಎಷ್ಟು ಮತ್ತು ಯಾವ ಕಾರಣದಿಂದ ಮಲಿನಗೊಂಡಿದ್ದಾಳೆ ಎಂಬ ಅರಿವಿತ್ತು. ಕಲುಷಿತಗೊಂಡ ಗಂಗೆಯನ್ನು ಶುದ್ಧ ಮಾಡಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಸಂಕಟ ಮೋಚನ ಫೌಂಡೇಷನ್ ಸ್ಥಾಪನೆ ಮಾಡಿದೆವು. ನಮ್ಮ ಪ್ರಯತ್ನದ ಫಲವಾಗಿಯೇ ಇಂದಿರಾ ಗಾಂಧಿ ಮತ್ತು ನಂತರ ರಾಜೀವ್ ಗಾಂಧಿ ಗಂಗಾ ಆಕ್ಷನ್ ಪ್ಲಾನ್ ಜಾರಿಗೆ ತಂದರು. ಆ ಮೂಲಕ ಗಂಗೆಯನ್ನು ಚೊಕ್ಕ ಮಾಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಗಂಭೀರ ಪ್ರಯತ್ನಗಳು ಆರಂಭವಾದವು’.
 
ಮಿಶ್ರ ಅವರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿರಲಿಲ್ಲ. ಈ ಮಹಾಂತರ ಪ್ರಯತ್ನದ ಫಲವಾಗಿಯೇ ಗಂಗೆಯ ಕೊಳೆ ತೊಳೆಯುವ ಯತ್ನ ಆರಂಭವಾಗಿದ್ದು. ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಈಗಲೂ ನಡೆಯುತ್ತಿರುವುದು. 
 
‘ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ನೀವು ನಿರಂತರವಾಗಿ ಗಂಗೆಯ ಕೊಳೆ ತೊಳೆಯುವ ಯತ್ನ ಮಾಡುತ್ತಿದ್ದೀರಿ. ಕೇಂದ್ರ ಸರ್ಕಾರ ಕೂಡ ಗಂಗಾ ಆಕ್ಷನ್ ಪ್ಲಾನ್‌ ಅಡಿಯಲ್ಲಿ ಸುಮಾರು 12,000 ಕೋಟಿ ರೂಪಾಯಿಗಳು ತೊಳೆದುಹೋಗಿದೆ. ಆದರೂ ಗಂಗಾ ನದಿಯ ಮಾಲಿನ್ಯದ ಮಟ್ಟ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ಕೊನೆಯಿಲ್ಲವೇ?
 
‘ನನ್ನ ಪ್ರಕಾರ ಇದಕ್ಕೆ ಕೊನೆಯಿದೆ. ಆದರೆ, ಪ್ರಾಮಾಣಿಕ ಪ್ರಯತ್ನ ನಡೆದಲ್ಲಿ ಮಾತ್ರ. 2000 ಕಿಲೋ ಮೀಟರ್ ಹರಿಯುವ ಜೀವನದಿ ಗಂಗೆಯ ತಟದಲ್ಲಿ ಸುಮಾರು 40 ಕೋಟಿ ಜನರು ಬದುಕುತ್ತಿದ್ದಾರೆ. ಐದು ಬೃಹತ್ ನಗರಗಳಾದ ಕಾನ್ಪುರ, ಅಲಹಾಬಾದ್, ವಾರಾಣಸಿ, ಪಟ್ನಾ ಮತ್ತು ಕೋಲ್ಕತ್ತದ ಕೊಳೆಯೆಲ್ಲವೂ ಹರಿಯುವುದು ಗಂಗೆಯ ಒಡಲಿಗೆ. ಇನ್ನೂ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ 111 ಪಟ್ಟಣಗಳು ಗಂಗೆಯ ತಟದಲ್ಲಿವೆ. ಆ ಎಲ್ಲ ಪಟ್ಟಣಗಳ ಕೊಳೆ ಕೂಡ ಇವಳ ಮಡಿಲಿಗೇ ಸೇರುವುದು. ಬನಾರಸ್ ಹಿಂದೂ ವಿಶ್ವವಿಶ್ವವಿದ್ಯಾಲಯ ಮತ್ತು ಸಂಕಟ ಮೋಚನ ಫೌಂಡೇಷನ್ ಜೊತೆಯಾಗಿ ಮಲಿನ ನೀರು ನದಿಗೆ ಸೇರುವ ಮೊದಲೇ ಅದನ್ನು ಸಂಸ್ಕರಿಸುವ ಹೊಸ ತಂತ್ರಜ್ಞಾನ ಆವಿಷ್ಕಾರ ಮಾಡಿದೆವು. ಕೇಂದ್ರ ಸರ್ಕಾರ ಮತ್ತು ಯೋಜನೆಯನ್ನು ಜಾರಿಗೆ ತಂದ ರಾಜ್ಯ ಸರ್ಕಾರಗಳು ನಾವು ಎಷ್ಟೇ ಹೇಳಿದರೂ, ನಮ್ಮ ತಂತ್ರಜ್ಞಾನವನ್ನು ಬಳಸಲು ಮೊದಲ ಹಂತದಲ್ಲಿ ಮುಂದಾಗಲಿಲ್ಲ. ಎರಡನೇ ಹಂತದಲ್ಲಿ ಅರೆ ಮನಸ್ಸು ಮಾಡಿದರು. ಇನ್ನೇನು ಅವರು ಒಪ್ಪಿಕೊಂಡರು ಎನ್ನುವಾಗಲೇ ಯೋಜನೆ ಶಾಶ್ವತವಾಗಿ ಕೊನೆಗೊಂಡಿತು. ಆ ಕಾರಣದಿಂದಾಗಿಯೇ ಗಂಗಾ ಆಕ್ಷನ್ ಪ್ಲಾನ್ ಸಂಪೂರ್ಣವಾಗಿ ವಿಫಲವಾಯಿತು’.
 
‘ಹಾಗಿದ್ದರೆ ಗಂಗೆಯ ಜೀವವನ್ನು ಉಳಿಸಲು ಯಾರ ಕೈಯಿಂದಲೂ ಸಾಧ್ಯವೇ ಇಲ್ಲವೇ?’
 
‘ನಿಮ್ಮ ಈ ಪ್ರಶ್ನೆಯೇ ಸಾಧುವಲ್ಲ. ಗಂಗೆ ಸತ್ತಿಲ್ಲ. ಸಾಯುವುದೂ ಇಲ್ಲ. ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ. ನಾವು ಮನುಷ್ಯರೇ ಅದಕ್ಕೆ ಕಾರಣ. ಈಗ ನಾವೇ ಅದಕ್ಕೆ ಸೂಕ್ತ ಪರಿಹಾರ ಹುಡುಕಬೇಕು. ಇದು ಕೇವಲ ಸರ್ಕಾರ ಅಥವಾ ಸಂಕಟ ಮೋಚನ ಫೌಂಡೇಷನ್ ಕೈಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸ್ಥಳೀಯ ಸಂಸ್ಥೆಗಳು, ಜನ ಸಾಮಾನ್ಯರು ಕೂಡ ಈ ಪ್ರಯತ್ನದಲ್ಲಿ ಕೈ ಜೋಡಿಸಬೇಕು. ಅಂತಹ ಸಾಮೂಹಿಕ ಪ್ರಯತ್ನ ನಡೆದಲ್ಲಿ ಮಾತ್ರ ಗಂಗೆಯ ಕೊಳೆಯನ್ನು ತೊಳೆಯಲು ಸಾಧ್ಯವಾಗುತ್ತದೆ’. ಸುಮಾರು ಎರಡು ಗಂಟೆಗಳಷ್ಟು ದೀರ್ಘ ಕಾಲ ನಮ್ಮೊಂದಿಗೆ ಮಾತನಾಡಿದ ಮಿಶ್ರ ಅವರು ಕೊನೆಗೆ ವಾರಾಣಸಿಯ ಹೆಸರು ಹೇಗೆ ಉದ್ಭವವಾಯಿತು ಎಂದು ಕೂಡ ಹೇಳಿದರು.
 
‘ವರುಣ ಮತ್ತು ಅಸಿ ಎಂಬ ಎರಡು ಉಪನದಿಗಳು ಗಂಗೆಗೆ ಬಂದು ಸೇರುವ ನಡುವಿನ ತಾಣವೇ ವಾರಾಣಸಿಯಾಯಿತು’ ಎಂದು ಹೇಳಿದ ಅವರು, ‘ನೀವು ಆ ಎರಡೂ ತಾಣಗಳನ್ನು ಹೋಗಿ ನೋಡಿ’ ಎಂದು ಒತ್ತಾಯ ಮಾಡಿದ್ದರು. 2008ರಲ್ಲಿ, ಅಂದರೆ ಅವರನ್ನು ಭೇಟಿ ಮಾಡಿದ ಸಂಜೆಯೇ ನಾನು ವರುಣ ಮತ್ತು ಅಸಿ ಎರಡೂ ನದಿ ಸಂಗಮಗಳಿಗೆ ಭೇಟಿ ನೀಡಿದ್ದೆ. ಅಕ್ಷರಶಃ ಅವೆರಡೂ ನದಿಗಳಾಗಿರಲಿಲ್ಲ. ವಾರಾಣಸಿ ನಗರದ ಕೊಳೆಯನ್ನೆಲ್ಲ ಹೊತ್ತು ತಂದು ಗಂಗೆಗೆ ಸುರಿಯುವ ತೊರೆಗಳಾಗಿದ್ದವು. 
 
ಆ ಭೇಟಿಯ ನಂತರ ಮಿಶ್ರ ಮತ್ತು ಸಂಕಟ ಮೋಚನ ಫೌಂಡೇಷನ್‌ನ ಉಳಿದ ಪದಾಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದೆ. ಕ್ರಮೇಣ ಮಿಶ್ರ ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಏರುಪೇರಾಗುತ್ತಿದೆ ಎಂಬ ಮಾತು ಆಗಾಗ ಕೇಳುತ್ತಿದ್ದೆ. ಆದರೂ, ಗಂಗೆಯ ಕೊಳೆ ತೊಳೆಯುವ ಅವರ ಯತ್ನ ಮುಂದುವರಿದೇ ಇತ್ತು ಎಂದು ಸಹವರ್ತಿಗಳು ಹೇಳುತ್ತಿದ್ದರು. 2013ರ ಮಾರ್ಚ್ 13ರ ಸಂಜೆ ‘ಪ್ರೊಫೆಸರ್ ವೀರ ಭದ್ರ ಮಿಶ್ರ ಇನ್ನಿಲ್ಲ’ ಎಂಬ ಸುದ್ದಿ ಬಂದು ಅಪ್ಪಳಿಸಿತು. 75ನೇ ವಯಸ್ಸಿನಲ್ಲಿ ಗಂಗೆಯ ಸುಪುತ್ರ ಆಕೆಗೆ ವಿದಾಯ ಹೇಳಿದ್ದರು.
 
ಪರಿಸರದ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಸಕ್ರಿಯವಾಗಿರುವ ಹಲವಾರು ಮಂದಿ ಮತ್ತು ಸಂಸ್ಥೆಗಳು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದರು. ಇಡೀ ವಾರಾಣಸಿಯೇ ಶೋಕದಲ್ಲಿ ಮುಳುಗಿಹೋಗಿತ್ತು. ಏಕೆಂದರೆ ಮಿಶ್ರ ಅವರು ಕೇವಲ ಗಂಗೆಯ ಉಳಿವಿಗಾಗಿ ಹೋರಾಟ ನಡೆಸಿರಲಿಲ್ಲ. ಕಾಶಿಯ ಅತ್ಯಂತ ಪ್ರಮುಖ ಧಾರ್ಮಿಕ ಅಖಾಡಕ್ಕೆ ಸೇರಿದ ಸಂಕಟ ಮೋಚನ ಟ್ರಸ್ಟ್‌ನ ಮಹಾಂತರಾಗಿದ್ದ ಅವರು ಅಲ್ಲಿನ ಸಂಸ್ಕೃತಿ, ಸಂಗೀತ, ಕುಸ್ತಿ ಮತ್ತು ಕೋಮುಸೌಹಾರ್ದಕ್ಕೆ ತಮ್ಮ ಜೀವವನ್ನೇ ಮೀಸಲಿಟ್ಟಿದ್ದರು. 
 
2006ರ ಮಾರ್ಚ್ 7ರಂದು ವಾರಾಣಸಿ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಆಗ ಸಂಕಟ ಮೋಚನ ದೇಗುಲ ಮತ್ತು ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು 28 ಮಂದಿ ಸತ್ತಿದ್ದರು. 100ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಪ್ರೊಫೆಸರ್ ವೀರ ಭದ್ರ ಮಿಶ್ರ ಇಲ್ಲದೇ ಹೋಗಿದ್ದರೆ ವಾರಾಣಸಿ ಕೋಮು ಗಲಭೆಯ ದಳ್ಳುರಿಯಲ್ಲಿ ಉರಿದು ಹೋಗಿರುವ ಸಾಧ್ಯತೆ ಇತ್ತು. ಅವರದೇ ದೇವಾಲಯದಲ್ಲಿ ಬಾಂಬ್ ಸ್ಫೋಟಗೊಂಡಿದ್ದರೂ, ಮುಂದಾಲೋಚನೆ ಮಾಡಿದ ಅವರು, ಮರುದಿನವೇ ಹಿಂದೂ–ಮುಸ್ಲಿಂ ಕೋಮಿನ ನಾಯಕರನ್ನು ಒಟ್ಟುಗೂಡಿಸಿ ಶಾಂತಿಸಭೆ ಏರ್ಪಡಿಸಿದರು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ವಾರಾಣಸಿಯ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಮೆರವಣಿಗೆ ಮಾಡಿದರು. ಸತತ ಪ್ರಯತ್ನದ ಫಲವಾಗಿ ಇಡೀ ಪಟ್ಟಣದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಯಶಸ್ವಿಯಾದರು.
 
ವಾರಾಣಸಿಗೆ ಹೋಗುವ ಅವಕಾಶ ಸಿಕ್ಕಿದ ಕೂಡಲೇ ಎರಡೂ ಕೈಯಿಂದ ಬಾಚಿಕೊಳ್ಳುವ ನನ್ನ ಪಾಲಿಗೆ ಆ ನೆಲದಲ್ಲಿ ಜನ್ಮ ತಳೆದು ಬಾಳಿ ಬದುಕಿ ಮರೆಯಾದ ಇಬ್ಬರು ಮಹನೀಯರು ದೇವಮಾನವರು. ಒಂದು ಪ್ರೊಫೆಸರ್ ವೀರ ಭದ್ರ ಮಿಶ್ರ. ಮತ್ತೊಂದು ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್. ಕಳೆದೊಂದು ದಶಕದ ಅವಧಿಯಲ್ಲಿ ಅಲ್ಲಿಗೆ ಹಲವು ಬಾರಿ ಹೋಗಿದ್ದರೂ, ಕಾಶಿ ವಿಶ್ವನಾಥನ ದರ್ಶನ ಮಾಡಿದ್ದು ಕೇವಲ ಒಂದು ಬಾರಿ. ಆದರೆ, ಪ್ರತಿ ಬಾರಿಯೂ ವೀರ ಭದ್ರ ಮಿಶ್ರ ಮತ್ತು ಬಿಸ್ಮಿಲ್ಲಾ ಖಾನ್ ಬಾಳಿ ಬದುಕಿದ ಮನೆಗಳೆದುರು ಹೋಗಿ ಒಂದಿಷ್ಟು ಹೊತ್ತು ಕೂತು ಬರುವುದು ಕಡ್ಡಾಯ. 
 
2016ರ ಜೂನ್‌ನಲ್ಲಿ ವಾರಾಣಸಿಗೆ ಹೋಗಿದ್ದಾಗ ಮಿಶ್ರ ಅವರ ಮನೆಗೆ ಹೋಗಿ ತುಳಸಿ ಘಾಟ್‌ನಲ್ಲಿ ಕೆಲ ಕಾಲ ಕೂತು ಬಂದೆ. ಅದೇ ಸಂಜೆ ಮತ್ತೆ ಅಸಿ ನದಿಯ ಸಂಗಮದ ಬಳಿ ಹೋಗಿ ನಿಂತಿದ್ದೆ. 2014ರ ರಾಜಕೀಯ ಸ್ಥಿತ್ಯಂತರದ ನಂತರದ ವಾರಾಣಸಿಯ ಘಾಟ್‌ಗಳಲ್ಲಿ ಒಂದಿಷ್ಟು ಸ್ವಚ್ಛತೆ ಮೂಡಿದ್ದರೂ, ಅಸಿಯ ಸಂಗಮದಲ್ಲಿ ಅಂತಹ ಬದಲಾವಣೆ ಮೂಡಿರಲಿಲ್ಲ. ಕಣ್ಣೆದುರೇ ಕೊಳಕನ್ನು ಹೊತ್ತ ಅಸಿ ಎಂದಿನಂತೆಯೇ ಗಂಗೆಯೊಳಗೆ ಲೀನವಾಗುತ್ತಿದ್ದಳು.
 
‘40 ಕೋಟಿ ಜನರು ಗಂಗೆಯನ್ನು ಆಶ್ರಯಿಸಿದ್ದಾರೆ. ಆ ಪೈಕಿ ಕನಿಷ್ಠ 35 ಕೋಟಿ ಜನರು ಒಂದು ಹೊತ್ತಿನ ಅನ್ನ ಕೂಡ ಗಳಿಸುತ್ತಿರುವುದು ಈ ಗಂಗೆಯಿಂದಲೇ. ಕೃಷಿ, ಮೀನುಗಾರಿಕೆ... ಹೀಗೆ ಯಾವುದೇ ಕ್ಷೇತ್ರದಲ್ಲಿ ದುಡಿಯುತ್ತಿದ್ದರೂ ಅವರೆಲ್ಲ ಗಂಗೆಯ ಮಕ್ಕಳೇ. ಈ ತಾಯಿ ನಮ್ಮೆಲ್ಲರಿಗೆ ಬದುಕು ನೀಡುತ್ತಿದ್ದಾಳೆ. ನನ್ನ ಈ ದೀರ್ಘ ಧರ್ಮ ಯುದ್ಧ ನಮ್ಮೆಲ್ಲರ ಹೆತ್ತು, ಪೋಷಿಸುತ್ತಿರುವ ತಾಯಿಯನ್ನು ಉಳಿಸುವ ಸಲುವಾಗಿಯೇ ನಡೆಯುತ್ತಿರುವುದು. ಅಕಸ್ಮಾತ್ ನಾವು ಈ ಯುದ್ಧದಲ್ಲಿ ಸೋತರೆ, ನಮ್ಮ ತಾಯಿ ಸೋತು ನಿಂತರೆ, ಕುಸಿದುಹೋದರೆ ಅವಳನ್ನು ಆಶ್ರಯಿಸಿದ ಎಲ್ಲ ಮಕ್ಕಳ ಬದುಕು ಕುಸಿಯುತ್ತದೆ’ ಎಂದು ಪ್ರೊಫೆಸರ್ ವೀರ ಭದ್ರ ಮಿಶ್ರ ಅಂದು ಹೇಳಿದ್ದರು. ಸುನೀಲ್ ಸರ್ಕಾರ್ ಚಿತ್ರ ಕಣ್ಣೆದುರು ಬಂದು ನಿಂತಿತು! ಜೊತೆಗೆ ಸರ್ಕಾರ್ ತರಹದ ಕೋಟಿ ಕೋಟಿ ಜನಸಾಮಾನ್ಯರ ಬದುಕಿನ ಭವಿಷ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT