ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್ ಟೀ

ಕಥೆ
Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ಕಾರ್ಕೋಟಕವೆಂದೇ ಭಾವಿಸಿ ಯಾವಾಗಲೂ ಕಹಿ ಗುಳಿಗೆ ನುಂಗಿದಂತೆ ಮುಖ ಸಿಂಡರಿಸುತ್ತಿದ್ದವ ಅವತ್ತು ಗ್ರೀನ್ ಟೀಯನ್ನು ಪಾನಕದಂತೆ ಸುಮ್ಮನೆ ಗಂಟಲೊಳಗೆ ಇಳಿಸುತ್ತಿದ್ದ ಚನ್ನಬಸವಯ್ಯ. ನಾಲಗೆ ಅದರ ರುಚಿಯನ್ನು ಕಂಡುಹಿಡಿಯದೇ ಹೋಗಿತ್ತು. ಆಫೀಸ್ ಕ್ಯಾಂಟೀನಿನ ಒಂದು ಮೂಲೆಯ ಕಿಟಕಿ ಬಳಿಯ ಆ ಟೇಬಲ್ ಮೇಲೆ ಕುಳಿತ ಇಬ್ಬರದೂ ಮೊದಲ ಭೇಟಿಯಾದರೂ ಅದರ ಯಾವ ರೂಹುಗಳು ಅವನ ಚಹರೆ ಮೇಲೆ ಕಾಣುತ್ತಿರಲಿಲ್ಲ. ಅಪರಾಧಿ ಕಣ್ಣುಗಳು ಬೇರೇನನ್ನೋ ನೆಪಸಾಧಿಸಿ ನೋಡುತ್ತಿದ್ದವು.

‘ಚ್ಯನ್ನ, ನೀವು ಇಂಥೋರು ಅಂತ ಅಂದುಕೊಂಡಿರಲಿಲ್ಲ. ಇರದಿದ್ದರೆ ನಾನು ಇಷ್ಟು ದೂರ ಬರುತ್ತಲೇ ಇರಲಿಲ್ಲ. ಯೂ ಹ್ಯಾವ್ ಹರ್ಟ್ ಮೀ’. ಗುಂಡು ಹೊಡೆದಂತೆ ಲಿಝ್ ಬಾಯಿಂದ ಬಂದ ಮಾತುಗಳು ಅವನ ಅಸ್ತಿತ್ವವನ್ನೇ ಕದಡಿದವು. ‘ಹೌದು, ನಂದೇ ತಪ್ಪು. ಬರಿ ಮಿಶೆಲ್ ಒಬ್ಳೆ ಯೂ.ಕೆ. ಹೆಡ್ ಆಫೀಸಿಂದ ಇಲ್ಲಿಗೆ ಸೈಟ್ ವಿಸಿಟ್‌ಗೆ ಬರಬೇಕಿತ್ತು. ಆದರೆ ಅಷ್ಟೂ ದಿನದ ನಮ್ಮ ಸ್ನೇಹ, ಚ್ಯಾಟಿಂಗ್‌ನಲ್ಲಿ ನನ್ನ ದೇಶ, ಜನ, ಸಂಸ್ಕೃತಿ ಬಗ್ಗೆ ಕೊಚ್ಚಿಕೊಂಡ ಮಾತು ಹಾಗೂ ಲಿಝ್‌ನನ್ನು ಕಣ್ಣಾರೆ ನೋಡಬೇಕೆನ್ನುವ ಸಣ್ಣ ಸ್ವಾರ್ಥವೂ ಸೇರಿಕೊಂಡು ಒತ್ತಾಯ ಮಾಡಿ ಕರೆಸಿಕೊಂಡಿದ್ದೆ. ಜೊತೆಗೆ ಕರೆದುಕೊಂಡು ಓಡಾಡಿ ಕನ್ನಡ ನಾಡಿನ ಸುಂದರ ಅನುಭವವನ್ನು ಕೊಡುತ್ತೇನೆಂದು ಪ್ರಾಮಿಸ್ ಕೂಡ ಮಾಡಿದ್ದೆ.

ಅವಳು ಬಂದ ದಿನ ಡಿ.ಸಿ.ಜಿ.ಐ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಯಿಂದ ಬಂದ ಇ-ಮೇಲ್ ಆಫೀಸಲ್ಲಿ ಎಲ್ಲರ ಕಣ್ಣು ಕೆಂಪಗಾಗಿಸಿತ್ತಾದರೂ ಕ್ಲಿನಿಕಲ್ ಟ್ರಯಲ್ ಹೆಡ್ ನಾನೇ ಇದ್ದದ್ದರಿಂದ ಅದರ ಉಸಾಬರಿಯನ್ನು ನನ್ನ ತಲೆಗೆ ಕಟ್ಟಿ ನಿರುಮ್ಮಳರಾಗಿದ್ದರು. ಚನ್ನನ ತಲೆ ಕುದ್ದು ಹೋಗಿತ್ತು. ಕೈ-ಕಾಲು ಫಿಟ್ಸ್ ಬಂದಂತೆ ಅದರುತ್ತಿದ್ದವು. ಅದೂ ಸರಿಯೆ, ಇದ್ದಕ್ಕಿದ್ದಂತೆ ಮೇಲ್ ಮಾಡಿ ನಮ್ಮ ಕಂಪನಿ ಶುರುವಾದಾಗಿಂದ ಇಲ್ಲಿಯವರೆಗೆ ಎಷ್ಟು ಟ್ರಯಲ್ಸ್ ನಡೆದಿವೆ, ಅದರಲ್ಲಿ ಎಷ್ಟು ಸೀರಿಯಸ್ ಸೈಡ್ ಎಫೆಕ್ಟ್ ಹಾಗೂ ಮರಣಗಳು ಸಂಭವಿಸಿವೆ, ಮತ್ತು ಆ ರೋಗಿಗಳಿಗೆ ನಮ್ಮ ಕಂಪನಿಯಿಂದ ಎಷ್ಟು ಪರಿಹಾರ ನೀಡಲಾಗಿದೆ, ಈ ಎಲ್ಲದರ ವರದಿಯನ್ನು ಇನ್ನು ಇಪ್ಪತ್ತೇ ದಿನಗಳಲ್ಲಿ ಕೊಡಬೇಕು, ಇಲ್ಲದಿದ್ದರೆ ಭಾರೀ ದಂಡ ತೆರಬೇಕಂತೆ! ಉಹುಂ, ಈ ವಿವರಗಳನ್ನು ಕ್ರೋಡೀಕರಿಸಬೇಕೆಂದರೆ ನಾನೀಗ ಖಗೋಳ ಶಾಸ್ತ್ರಜ್ಞನೇ ಆಗಬೇಕು.

ಸಾವಿರಾರು ಕ್ಲಿನಿಕಲ್ ಟ್ರಯಲ್ಗಳು, ಅದರಲ್ಲಿ ಪ್ರತಿಯೊಬ್ಬ ರೋಗಿಯ ವಿವರಗಳನ್ನು ಹೆಕ್ಕಿ ಸೈಡ್ ಎಫೆಕ್ಟ್ ಆಗಿದೆಯೆ ಇಲ್ಲವೆ, ಆಗಿದ್ದರೆ ಅದಕ್ಕೆ ಪರಿಹಾರ ಕೊಟ್ಟಿದ್ದಾರೆಯೆ, ಕೊಟ್ಟಿದ್ದರೆ ಎಷ್ಟು!? (ಈ ದಾಖಲೆಗಳು ದಕ್ಕುವುದು ವಿರಳಾತಿವಿರಳ, ಯಾಕೆಂದರೆ ಕ್ಲಿನಿಕಲ್ ಟ್ರಯಲ್‌ನಲ್ಲಿ ನಡೆಯುವ ಜಾಣ ಅವ್ಯವಹಾರಗಳು ಅವನಿಗೆ ತಿಳಿದಿಲ್ಲವೆಂದಿಲ್ಲ). ಎಲ್ಲ ವಿವರಗಳನ್ನು ಕಲೆಹಾಕಲು ಕನಿಷ್ಠ ಆರು ತಿಂಗಳಾದರೂ ಬೇಕು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಮತ್ತೊಂದು ತುರ್ತು– ಲಿಝ್. ತಲೆ ಹೋಳಾಗುವುದಷ್ಟೇ ಬಾಕಿ. ಅವಳನ್ನು ವೀಕೆಂಡಲ್ಲಿ ಮೈಸೂರಿಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಕೊನೆಗೆ ಆಫೀಸ್ ಕ್ಯಾಬ್ ಡ್ರೈವರ್ ರಮೇಶ್ ಜೊತೆ ಒಬ್ಳನ್ನೆ ಕಳಿಸಿದ್ದೆ. ಛೆ, ಅದೇ ಅಲ್ಲವೆ ನಾನು ಮಾಡಿದ ತಪ್ಪು, ಆ ಲೋಫರ್ ನನ್ಮಗ ರಮೇಶ್ ನಿನ್ನೆ ಸರಿ ರಾತ್ರಿ ಮನೆಗೆ ಬಂದು ನನ್ನ ಕಾಲಿಗೆ ಬಿದ್ದು ಹೊರಳಾಡ್ಕೊಂಡು, ‘ನನ್ನ ಕ್ಷಮಿಸಿ ಸಾ... ಹೇಲ್ ತಿನ್ನೊ ಕೆಲ್ಸಾ ಮಾಡಿದ್ದೀನಿ. ನಿಮ್ಮ ನಂಬಿಕೆಗೆ ದ್ರೋಹ ಮಾಡಿದ್ದೀನಿ, ದಯವಿಟ್ಟು ಈ ಪಾಪಿನ ಕ್ಷಮಿಸಿ’ ಎಂದ.

‘ಏನಾಯ್ತೋ, ಆಗ್ಲೆ ಲಿಝ್ ಹತ್ರ ಮಾತಾಡಿದೆ, ಟೂರ್ ಚೆನ್ನಾಗಿತ್ತು ಅಂದ್ಲು. ಮತ್ತೆ ನಿಂದೇನು ಗೋಳು?’ ಎಂದು ಒಂದ್ ಹೆಜ್ಜೆ ಹಿಂದೆ ಸರಿದು ಕೇಳಿದೆ. ‘ನಂಗೆ ಮೊದ್ಲಿಂದಾನು ಫಾರಿನ್ ಲೇಡೀಸ್ ಮೇಲೆ ತುಂಬಾ ಆಸೆ ಸಾ... ಆ ಮೇಡಂನ ನಿನ್ನೆ ರಾತ್ರಿ ಅನುಭವಿಸಬೇಕು ಅಂತ ಮುಗಿಬಿದ್ದೆ. ಆದ್ರೆ ದೇವತೆ ಆ ಮೇಡಮ್, ನಾನೇನು ಮಾಡಿದ್ರೂ ಎಲ್ಲ ಸಹಿಸ್ಕೊಂಡು ಸುಮ್ನೆ ಇದ್ದು ಆಮೇಲೆ ಇಂಗ್ಲೀಷಲ್ಲಿ ಏನೇನೋ ಹೇಳಿದ್ರು, ನನ್ನ ಕೈಗೆ ಒಂದಿಷ್ಟು ದುಡ್ಡೂ ಕೊಟ್ರು. ನಂಗೆ ಏನೂ ಅರ್ಥ ಆಗ್ಲಿಲ್ಲ. ಆದ್ರೆ ಅವರ ಮುಖಭಾವ ಕಣ್ಣು ನೋಡಿದ್ರೆ ಅವರು ನನಗೆ ಬುದ್ಧಿ ಹೇಳ್ತಿದ್ದಾರೆ ಅನ್ನೋದು ಗೊತ್ತಾಗ್ತಿತ್ತು. ನನ್ನೊಳಗಿನ ಕಾಮ ಕಡಿಮೆಯಾಗುತ್ತಿದ್ದಂತೆ ನನ್ನ ಬಗ್ಗೆ ನನಗೇ ಅಸಹ್ಯ ಭಾವನೆ ಬಂದು ಆ ಮೇಡಮ್ ಕಾಲಿಗೆ ಬಿದ್ದು ಕ್ಷಮೆ ಕೇಳಿದೆ.

ನಿನ್ನೆಯಿಂದ ಮನಸಿಗೆ ನೆಮ್ಮದಿಯಿಲ್ಲ ಸಾ... ಹೆಂಡ್ತಿ ಮಕ್ಕಳ ಮುಖ ನೋಡೋಕೂ ಹೆದರಿಕೆಯಾಗ್ತಿದೆ. ದಯ್ವಿಟ್ಟು ಆ ಮೇಡಂಗೆ ನನ್ನ ಕ್ಷಮಿಸೋಕೆ ಹೇಳಿ ಸಾ...’. ಅಲ್ಲೇ ಕೊಂದು ಬಿಡುವಷ್ಟು ಸಿಟ್ಟು ಬಂದರೂ ತಡೆದುಕೊಂಡು ಟೇಬಲ್ ಮೇಲೆ ಜೋರಾಗಿ ಗುದ್ದಿದ.
ಚಿಕ್ಕವನಿದ್ದಾಗ ನಮ್ಮ ಸೋದರಮಾವ, ಮನೆಗೆ ಬಂದಿದ್ದ ನಮ್ಮ ತಾಯಿಯ ಕಡೆಯ ಹತ್ತಿರದ ಸಂಬಂಧಿಯೊಬ್ಬರ ಚಿಕ್ಕ ಹುಡುಗಿಯೊಬ್ಬಳನ್ನು ಎಳೆದಾಡಿ ತನ್ನ ತೃಷೆ ತೀರಿಸಿಕೊಳ್ಳುವಾಗ ನನ್ನ ತಾಯಿಯ ಕೈಗೆ ಸಿಕ್ಕಿಬಿದ್ದು ಆಮೇಲೆ ಕ್ಷಮೆಗಾಗಿ ಗೋಗರೆದಾಗ ನನ್ನ ತಾಯಿಯ ಕಣ್ಣೀರಲ್ಲಿದ್ದ ಭಾವವನ್ನು ಓದಲಾಗಿರಲಿಲ್ಲ; ಈಗ ಅನುಭವಿಸುವ ಸರದಿ ಬಂದಿದೆ. ಇಂಥೋರನ್ನೆಲ್ಲ ಗುಂಡಿಕ್ಕಿ ಕೊಂದುಬಿಡಬೇಕು. ಬ್ಲಡಿ ಡರ್ಟಿ ಮೈಂಡ್ಸ್!
ಗ್ರೀನ್ ಟೀ ಬ್ಯಾಗ್ ಸದ್ದಿಲ್ಲದೆ ತನ್ನೊಳಗಿನ ಸತ್ವವವನು ನೀರಿನೊಡನೆ ಬೆರೆಸಿ ವಿಚಿತ್ರ ನಮೂನೆಯ ಬಣ್ಣವಾಗಿ ತೋರುತ್ತಿತ್ತು.
***

‘ಹೇ ಚ್ಯನ್ನ, ವಾಟ್ ಆರ್ ಯೂ ಥಿಂಕಿಂಗ್? ಐ ವಾಸ್ ಜಸ್ಟ್ ಕಿಡ್ಡಿಂಗ್. ತುಂಬಾ ಸೀರಿಯಸ್ಸಾಗಬೇಡ. ಖುಷಿಯಾಗಿರು’ ಎಂದು ನಕ್ಕಳು ಲಿಝ್. ಚನ್ನ ಇನ್ನೂ ಕುಸಿದ. ಆ ನಗುವಿಗೇನು ಹೆಸರು? ಇವರಿಗೆ ಸೆಕ್ಸ್ ಕಾಮನ್ ವಿಷಯವಾದರೂ ಇಷ್ಟು ದಿನದ ತನ್ನ ಒಡನಾಟದಲ್ಲಿ ಲಿಝ್ ಆ ಥರದ ಹೆಣ್ಣಲ್ಲ ಎಂಬುದು ಖಾತ್ರಿಯಾಗಿತ್ತು. ನನ್ನ ಬಾಲ್ಯದ ಗೆಳತಿಯಂತೆಯೇ ಕಂಡಿದ್ದಾಳೆ. ನನ್ನ ದೇಶದಲ್ಲಿ ಹುಟ್ಟಬೇಕಾದವಳು ನೀನು, ತಪ್ಪಿ ಅಲ್ಲಿ ಹುಟ್ಟಿದ್ದೀಯ ಎಂದು ಕಾಡಿಸುವಷ್ಟು ಸೂಕ್ಷ್ಮ ಹುಡುಗಿ. ಅಂದಮೇಲೆ ನಿನ್ನೆ ನಡೆದ ಘಟನೆ? ಇವಳಿಗೆ ಏನೂ ಅನಿಸಿಲ್ಲದಿರುವುದಕ್ಕೆ ಹೇಗೆ ಸಾಧ್ಯ?

ಎ.ಸಿ.ಯ ತಂಗಾಳಿ ನನ್ನ ಬಿಸಿಯುಸಿರಿನಿಂದ ಮೈ ಕಾಯಿಸಿಕೊಳ್ಳುತ್ತಿತ್ತು; ಮತ್ತೂ ಬೇಡುತ್ತಿತ್ತು. ಬರೋಬ್ಬರಿ ಒಂದೂವರೆ ವರ್ಷದಿಂದ ನಾನು ಕ್ಲಿನಿಕಲ್ ಟ್ರಯಲ್ ಹೆಡ್ ಆದಾಗಿನಿಂದ ಅವಳ ಜೊತೆ ನಡೆಸುತ್ತಿದ್ದ ಸಂವಾದ, ಸಂಭಾಷಣೆ, ಅಲ್ಲಿವರೆಗೂ ಹೃದಯವಿರದ ಕಾರ್ಪೋರೇಟ್ ಸಂಸ್ಕೃತಿ ಹುಟ್ಟಿಸಿದ್ದ ರೇಜಿಗೆ ತಂತಾನೆ ತೊಲಗಿ ಹೊಸ ಆತ್ಮವಿಶ್ವಾಸ ಹುಟ್ಟಿಸಿತ್ತು. ನಾನು ಪ್ರಾಜೆಕ್ಟ್‌ ಅನ್ನು ನಿರ್ವಹಿಸುವ ರೀತಿ ಅವಳಿಗೂ ತುಂಬಾ ಇಷ್ಟವಾಗಿ ಆಫೀಸಲ್ಲಿ ಯಾರಿಗೂ ತೋರಿಸದ ಮರ್ಯಾದೆಯನ್ನು ನನಗೆ ತೋರಿಸುತ್ತಿದ್ದಳು. ಇದರಾಚೆಗೂ ಸಾಕಷ್ಟು ಮೀಟಿಂಗ್‌ಗಳಲ್ಲಿ ಹರಟೆ, ಜೋಕ್ಸ್, ಇಬ್ಬರ ದೇಶಾವಾರಿ ಗಮ್ಯತೆ, ತೀರ ಅಲ್ಲದಿದ್ದರೂ ಕೆಲವೊಂದು ವೈಯಕ್ತಿಕ ವಿವರಗಳನ್ನು ಬಾಯಿಂದ ಬಾಯಿಗೆ ಹಂಚಿಕೊಂಡಿದ್ದೇವೆ. ಮಾತು ಬಾಯಿ ಚಪಲವಾದರೂ ಅವು ಆಳದಲ್ಲಿ ಮೂಡಿಸಿರುವ ಛಾಪು ಯಾವ ಅನ್ಯೋನ್ಯ ಸಂಬಂಧಕ್ಕೂ ಕಡಿಮೆಯಿರಲಿಲ್ಲ. ಇವತ್ತು ನೋಡುತ್ತಿರುವ ಲಿಝ್ ಯಾಕೋ ಮನಸಿಗೆ ಇನ್ನೂ ಇಷ್ಟವಾದಳು.

ಅವಳ ಸೌಂದರ್ಯ, ಅದನ್ನು ಇಮ್ಮಡಿಸಿದ ಅವಳ ಬಟ್ಟೆ, ಮಾತಾಡುವಾಗಿನ ಅವಳ ದೇಹ ಭಾಷೆ, ನಗು ಎಲ್ಲವೂ ಎಂದೂ ಕಂಡಿರದ ಲಿಝ್‌ನನ್ನು ನನಗೆ ಪರಿಚಯ ಮಾಡಿಸುತ್ತಿದ್ದವು. ಅವಳೂ ತನ್ನಿಷ್ಟದ ಗ್ರೀನ್ ಟೀ ಕುಡಿಯುತ್ತಿದ್ದಾಳೆ. ಆ ಕಪ್ ಅನ್ನು ನಾಜೂಕಾಗಿ ಹಿಡಿದ ಅವಳ ಬೆರಳಿಗೆ ಹಚ್ಚಿದ ನೇಲ್ ಪಾಲಿಶ್‌ನಷ್ಟೇ ಸುಂದರವಾಗಿ ನನ್ನ ಮನಸಲ್ಲಿ ರಂಗಿನ ಚಿತ್ತಾರ ಮೂಡಿಸುತ್ತಿದ್ದಾಳೆ. ಆದರೆ ಅವಳ ಕಣ್ಣ ಕೆಳಗಿನ ಕಪ್ಪು ಈಗ್ಗೆ ಒಂದು ತಿಂಗಳ ಹಿಂದೆ ನಡೆದ ಘಟನೆಯನ್ನು ಮರಳಿಸುತ್ತಿತ್ತು: ಆ ತಡ ರಾತ್ರಿಯಲಿ ಕಾಲ್ ಮಾಡಿ ‘ಹ್ಯಾಪಿ ಬರ್ತ್ ಡೇ ಲಿಝ್’ ಎಂದೆ. ‘ಚ್ಯನ್ನ...’ ಎಂದು ಸುಮ್ಮನಾಗಿ ಆಮೇಲೆ ಅಳಲು ಶುರುಮಾಡಿದಳು.

‘ಚ್ಯನ್ನ, ನಾನಿವತ್ತು ನಮ್ಮಪ್ಪನ್ನ ಕಳ್ಕೊಂಡೆ. ಮೈ ಲವ್ಲಿ ಫಾದರ್. ತಂದೆ ತಾಯಿ ಎಲ್ಲ ಆಗಿ ನನ್ನ ಬೆಳೆಸಿದವರು. ಲಂಡನ್‌ನಲ್ಲಿ ಫೇಮಸ್ ಗಿಟಾರಿಸ್ಟ್. ಇವತ್ತು ನನ್ನ ಬರ್ತಡೇಗೆ ಕೇಕ್ ತರೋಕೆ ಹೋದಾಗ ಅಲ್ಲಿ ಅಭಿಮಾನಿಗಳು ಒತ್ತಾಯಿಸಿದ್ದಕ್ಕೆ, I sing for her, I live for her, my only angel, my daughter Elizabeth... ಎಂದು ಹಾಡುತ್ತ ಅಲ್ಲೇ ಕುಸಿದು ಪ್ರಾಣ ಬಿಟ್ಟರು. ಚ್ಯನ್ನ, ನಿನಗೆ ಗೊತ್ತಿರಬೇಕು, 1960ರ ಆಸುಪಾಸಿನಲ್ಲಿ ‘ಥ್ಯಾಲಿಡೊಮೈಡ್ ಟ್ರ್ಯಾಜಿಡಿ’ ಸಂಭವಿಸಿತು. ನಿದ್ರಾಹೀನತೆಗೆಂದು ವಿಶ್ವಾದ್ಯಂತ ಎಷ್ಟೊಂದು ಗರ್ಭಿಣಿಯರು ಥ್ಯಾಲಿಡೊಮೈಡ್ ಔಷಧಿ ತೆಗೆದುಕೊಂಡಿದ್ದರ ಪರಿಣಾಮ ಸಾವಿರಗಟ್ಟಲೆ ಮಕ್ಕಳು ಜಗತ್ತು ನೋಡುವ ಮೊದಲೇ ಪ್ರಾಣಬಿಟ್ಟವು, ಜಗತ್ತಿಗೆ ಕಾಲಿಟ್ಟ ಎಷ್ಟೊಂದು ಮಕ್ಕಳು ಕೈ ಕಾಲುಗಳಿಲ್ಲದ ಅಂಗವಿಕಲರಾಗಿ ಹುಟ್ಟಿದರು.

ಅಂತಹ ಸಾವಿರ ಮಕ್ಕಳಲ್ಲಿ ನಮ್ಮಪ್ಪನೂ ಒಬ್ಬ. ಅವನಿಗೆ ಕೈಗಳೇ ಬೆಳೆದಿರಲಿಲ್ಲ. ಹೆತ್ತವರಿಗೆ ಬೇಡವಾದ ನನ್ನಪ್ಪನನ್ನು ನೋಡಿಕೊಂಡಿದ್ದು ಈಗಿನ ನನ್ನ ಅಜ್ಜಿ ಸೂಸನ್. ಚರ್ಚ್‌ನಲ್ಲಿ ನನ್ ಆಗಿದ್ದರೂ ನನ್ನಪ್ಪ ರಿಚರ್ಡ್‌ನಿಗೆ ಆತ್ಮವಿಶ್ವಾಸ ತುಂಬಿ ಬೆಳೆಸಿದರು. ಅದಕ್ಕೇ ನನ್ನ ತಂದೆ ಕಾಲಿನಲ್ಲಿ ಗಿಟಾರು ನುಡಿಸಿ ಹಾಡುವುದನ್ನು ಇಡೀ ಯೂ.ಕೆ. ಶರಣಾಗಿ ನೋಡುತ್ತಿತ್ತು. ಫಾರ್ಮಾಕೊವಿಜಿಲನ್ಸ್ (ಔಷಧೀಯ ಜಾಗರೂಕತಾ ವಿಜ್ಞಾನ) ಎಂಬ ಹೊಸ ಕ್ಷೇತ್ರದ ಉಗಮಕ್ಕೆ ಕಾರಣವಾದ ‘ಥ್ಯಾಲಿಡೋಮೈಡ್ ಟ್ರ್ಯಾಜಿಡಿ’ಯನ್ನು ನೆನೆದಾಗೆಲ್ಲ ಮೈಜುಮ್ಮೆನ್ನುತ್ತದೆ. ಅದೇ ಕಾರಣವೂ ಹೌದು, ನಾನು ಈ ಕ್ಷೇತ್ರವನ್ನು ಆರಿಸಿಕೊಂಡಿದ್ದು.

ಕನಿಷ್ಠ ಪಕ್ಷ ಈ ಮೂಲಕವಾದರೂ ಔಷಧಿಗಳಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ಅಭ್ಯಾಸ ಮಾಡಿ ಮುಂದೆ ಜನ ಅವುಗಳಿಂದ ಹೇಗೆ ಸುರಕ್ಷಿತವಾಗಿರಬಹುದೆಂಬುದನ್ನು ತಿಳಿಸಬೇಕೆಂಬ ಆಶಯ ಹೊತ್ತು ಬಂದಿದ್ದೇನೆ. ಮಗಳಾಗಿ ನನ್ನ ತಂದೆಗೆ ನಾನು ಮಾಡುವ ಕರ್ತವ್ಯ ಎಂತಲೂ ಭಾವಿಸಿದ್ದೇನೆ. ಆದರೆ ಈಗ ಅವರೇ ಇಲ್ಲ. ತುಂಬಾ ಒಂಟಿ ಅನ್ನಿಸ್ತಿದೆ ಚ್ಯನ್ನ... ಮನಸು ಪೂರ್ತಿ ಅತ್ತುಬಿಡಬೇಕು, ನನಗೊಂದು ಹೆಗಲು ಬೇಕು...’. ತ್ರಿಕಾಲಗಳನ್ನು ಒಂದೇ ಓಘದಲ್ಲಿ ಹೇಳಿ ಅಳುತ್ತಿದ್ದ ಲಿಝ್‌ನನ್ನು ನೆನೆದು ಮನಸು ವಿಹ್ವಲಗೊಂಡಿತು. ಅವಳ ದುಃಖಕ್ಕಾಗದ ನನ್ನ ಹೆಗಲು ವ್ಯರ್ಥ ಎನಿಸಿತು. ‘ನಾನಿದ್ದೀನಿ, ಡೋಂಟ್ ವರಿ’ ಎಂದು ಧೈರ್ಯ ಹೇಳಿ ಆರ್ದ್ರಗೊಂಡ ಹೃದಯ ಇವತ್ತು ಅವಳ ಮೋಡಿಗೆ ಶರಣಾಗುತ್ತಿದೆ.

‘ಚ್ಯನ್ನ, ನೋಡಿದ್ಯಾ ನಿನ್ನನ್ನೂ ಕೂಡ ಗ್ರೀನ್ ಟೀ ಕುಡಿಯೋ ಥರ ಮಾಡಿದೆ. ಯಾವಾಗ್ಲೂ ಆಸಾಂ ಚಹಾನೆ ಗ್ರೇಟ್ ಅಂತಿದ್ದೆ?’– ಲಿಝ್ ಎಚ್ಚರಿಸಿದಳು. ಹೌದು, ನನ್ನ ಈ ಸಂದಿಗ್ಧತೆಗೆ ಒಂದಿಷ್ಟು ಕಹಿ ಬೇಕಿತ್ತು. ಅದನ್ನವಳಿಗೆ ತೋರಗೊಡದೆ, ‘ಹೌದು, ಈ ಗ್ರೀನ್ ಟೀ ಕೂಡ ನಮ್ಮ ದೇಶದ್ದೆ. ಸಾವಿರಾರು ವರ್ಷಗಳ ಹಿಂದೆಯೇ ರಾಮಾಯಣದಲ್ಲಿ ಸಂಜೀವಿನಿ ಅಂತ ಇದನ್ನು ಬಳಸುತ್ತಿದ್ದರು. ಅದೇ ಈಗ ಗ್ರೀನ್ ಟೀ ಆಗಿದೆ’ ಎಂದು ನನ್ನ ಇತ್ತೀಚಿನ ಯಾವುದೊ ಒಂದು ತಲೆಬುಡವಿಲ್ಲದ ತರ್ಕ ಹೇಳಿ ಸಮರ್ಥಿಸಲೆತ್ನಿಸಿದೆ. ‘ಇದೆಲ್ಲ ಚೆನ್ನಾಗ್ ಗೊತ್ತು ನಿಮಗೆ, ಅದು ಆರೊಗ್ಯಕ್ಕೆ ಒಳ್ಳೇದು ಅಂತ ಗೊತ್ತಿದ್ರೂ ಬಳಸ್ತಿರ್ಲಿಲ್ಲ. ನಿಮ್ಮಲ್ಲಿ ಎಲ್ಲಾ ಇದೆ, ಆದ್ರೆ ಅದನ್ನ ಹೇಗೆ ಉಪಯೊಗಿಸ್ಬೇಕು ಅನ್ನೋದು ಗೊತ್ತಿಲ್ಲ.

ಈಗ ನೀವು ನಿಮ್ಮ ಫ್ರೆಂಡ್ ಸೂರ್ಯ ಜೊತೆ ಗುಟ್ಟಾಗಿ ನಡಸ್ತಿರೊ ಓಜಸ್ ಫಾರ್ಮಾದಲ್ಲಿ ತಯಾರಾಗೊ ಎಷ್ಟು ಔಷಧಿಗಳಿಗೆ ಸೂಕ್ತ ದಾಖಲೆ ಇದೆ? ನಿಮ್ಮ ಸರ್ಕಾರಕ್ಕೆ ಇದರ ಬಗ್ಗೆ ಪೂರ್ತಿ ಮಾಹಿತಿ ಕೊಟ್ಟೀದ್ದೀರ? ಬರಿ ಆಯುರ್ವೇದಿಕ್ ಔಷಧಿ ಅಂತ ಹೇಳಿ ಎಷ್ಟು ಅಮಾಯಕರನ್ನ ನಿಮ್ಮ ದುಡ್ಡಿನ ಬಲೆಯಲ್ಲಿ ಬೀಳಿಸ್ಕೋತೀರ? ಲೆಕ್ಕಕ್ಕೆ ಸಿಗದಷ್ಟು ಔಷಧಿ ಕಂಪನಿಗಳು, ಔಷಧಿಗಳು ತಯಾರಾಗ್ತಿವೆ ಇಲ್ಲಿ. ಇವು ಯಾರನ್ನ ಉದ್ಧಾರ ಮಾಡೊಕೆ ಅಂತ ಗೊತ್ತಿಲ್ಲ. ನನಗೇ ಅಲ್ಲ, ತಯಾರು ಮಾಡೋರಿಗೂ ಅದರ ಉದ್ದೇಶ, ಆಳ ಗೊತ್ತಿಲ್ಲ. ಆಯುರ್ವೇದದ ಬಗ್ಗೆ ನಂಗೆ ತುಂಬಾ ಗೌರವ ಇದೆ. ಆದರೆ ಅದನ್ನ ಸರಿಯಾಗಿ ಬಳಸಿ, ವೈಜ್ಞಾನಿಕ ಆಕಾರ ಕೊಟ್ಟು ತಿಳಿ ಹೇಳಿದರೆ ಇಡೀ ಜಗತ್ತೇ ಭಾರತದ ಕಾಲ್ಕೆಳಗೆ ಬೀಳತ್ತೆ. ನೀನು ಹೇಳ್ತಿಯ, ನಿಮ್ಮ ಮಾತ್ರೆ ಸೇವಿಸಿದ್ರೆ ಮಕ್ಕಳು ಎತ್ತರ ಬೆಳಿತಾರೆ, ಬುದ್ಧಿಶಾಲಿ ಆಗ್ತಾರೆ, ಇವಕ್ಕೆಲ್ಲ ಏನಾಧಾರ ಇದೆ? ಬರಿ ದುಡ್ಡಿಗೆ ನೀನಿದನ್ನು ಮಾಡ್ತಿದ್ದಿಯ ಅಂದ್ರೆ ಅದನ್ನ ಮೊದ್ಲು ವಿರೋಧಿಸೋಳು ನಾನೇ. ಥಿಂಕ್ ಬಿಗ್ ಚ್ಯನ್ನ...’.
ಗ್ರೀನ್ ಟೀ ಕಹಿ ಈಗ ನಾಲಿಗೆಗೆ ತಟ್ಟಿತು.
***

ಮೊಬೈಲ್ ಬೀಪ್ ಶಬ್ದ ಮಾಡುತ್ತಿದ್ದಂತೆಯೆ ಕಳವಳಗೊಂಡ ಚನ್ನನ ನೋಡಿ ಲಿಝ್, ‘ಯಾಕಿಷ್ಟು ಗಾಬರಿ, ಏನಾಯ್ತು?’ ಎಂದಳು.
‘ಏನಿಲ್ಲ, ಇದು ನಾನು ಮಾತ್ರೆ ತೆಗೆದುಕೊಳ್ಳುವ ಸಮಯ’.
‘ಯಾವ ಮಾತ್ರೆ, ಏನಕ್ಕೆ?’
‘ನಾನು ಸ್ವಲ್ಪ ಸೈಕಲಾಜಿಕಲ್ಲಿ ಡಿಸ್ಟರ್ಬ್ ಆಗಿದ್ದಾಗ ಡಾಕ್ಟರ್ ನನಗೆ ಮಾತ್ರೆ ಕೊಟ್ಟಿದ್ದಾರೆ. ಅದನ್ನು ತಪ್ಪದೇ ತೆಗೆದುಕೊಳ್ಳಬೇಕು’.
‘ನಾನು ನೋಡಿದ ಹಾಗೆ ನೀನು ತುಂಬಾ ಸ್ಟ್ರಾಂಗ್, ಶಿಸ್ತಿನ ಮನುಷ್ಯ. ಯಾವುದೇ ಕೆಲಸ ಇದ್ದರೂ ಅದನ್ನು ಹೆಗಲ ಮೇಲೆ ಹಾಕಿಕೊಂಡು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತೀಯ. ಅಂಥದ್ರಲ್ಲಿ ಮೆಂಟಲಿ ಡಿಸ್ಟರ್ಬ್ ಆಗೊಂಥದ್ದು ಎನಾಯ್ತು?’
‘ಹೋಗ್ಲಿ ಬಿಡು ಲಿಝ್, ಅಂಥದ್ದೇನಿಲ್ಲ’

‘ಹೋಗ್ಲಿ ಬಿಡು ಅಂದ್ರೆ ಏನ್ ಚ್ಯನ್ನ, ನನ್ಹತ್ರಾನು ಹೇಳ್ಬಾರ್ದಾ? ಇಷ್ಟು ದಿನದ ನಮ್ಮ ಸ್ನೇಹಕ್ಕೆ ಅವಮಾನ ಮಾಡ್ತಿದ್ದೀಯ ಅನ್ನಿಸ್ತಿದೆ. ನೀನು ಹೀಗಿರೊದು ನೋಡೊಕ್ಕಾಗಲ್ಲ ಚ್ಯನ್ನ, ಹೇಳು ಏನಾಯ್ತು?’ ಎಂದು ಲಿಝ್ ಕೈ ಹಿಡಿದಾಗ ಆ ಸ್ಪರ್ಶಕ್ಕೆ ಮನಸು ಮರುಳಾಗಿ ಅವಳ ಮಡಿಲಲಿ ಮಲಗಿ ನನ್ನೆಲ್ಲ ನೋವನ್ನು ಒದರಿಬಿಡಲೆ ಎನಿಸಿತು. ನನ್ನ ಅವಳ ಕೈ ಮೇಲೆ ನನ್ನ ಮತ್ತೊಂದು ಕೈಯಿರಿಸಿ ಆ ಕಣ್ಣುಗಳ ಆರ್ದ್ರತೆಯನ್ನು ಕುಡಿಯುತ್ತ ಬಾಯಿ ಶುರುವಿಟ್ಟಿತು; ಗ್ರೀನ್ ಟೀ ತನ್ನ ಘಮವ ತೋರುತ್ತ ಪಕ್ಕದಲಿ ಕುಳಿತಿತ್ತು.

‘ಲಿಝ್, ಚಿಕ್ಕವನಿದ್ದಾಗಲೆ ನಂಗೆ ಹಾಟ್ ವಾಟರ್ ಎಪಿಲೆಪ್ಸಿ ಇತ್ತು. ತಲೆ ಮೇಲೆ ಸ್ವಲ್ಪ ಬಿಸಿ ನೀರು ಸುರುವಿದರೂ ಫಿಟ್ಸ್ ಬರುತಿತ್ತು. ಅದಕ್ಕೆ ಬಿಟ್ಟೂ ಬಿಡದೆ ನಂಗೆ ಹತ್ತನ್ನೆರಡು ವರ್ಷಗಳವರೆಗೆ ತಪ್ಪದೆ ಮಾತ್ರೆ ತಗೋಬೇಕಾಗಿ ಬಂತು. ಅದರಿಂದ ರೋಗ ಏನೋ ಹತೋಟಿಗೆ ಬಂತು. ಆದರೆ ಮೆಂಟಲಿ ನಾನು ತುಂಬಾ ಅಶಕ್ತನಾದೆ. ಓದುವುದರಲ್ಲಿದ್ದ ನನ್ನ ಹಸಿವು ಮಾತ್ರ ಕಮ್ಮಿ ಆಗ್ಲಿಲ್ಲ. ನನ್ನ ತಂದೆ ಜೋಳಿಗೆ ಹಿಡಿದು ಮನೆ ಮನೆಗೆ ಭಿಕ್ಷೆಗೆ ಹೋಗಿ, ಕರೆದವರ ಮನೆಗೆ ಹೋಗಿ ಪೂಜೆ ಮಾಡಿ, ಮಂಗಳಾರತಿ ಹಾಡಿ ದಕ್ಷಿಣೆ ಇಸ್ಕೊಂಡ್ ಬಂದು ಸಂಸಾರ ನಡೆಸೋರು. ನನಗೆ ಅದು ಬೇಡವಾಗಿತ್ತು.

ನಾನು, ಚನ್ನಬಸವಯ್ಯ ವೀರಸಂಗಯ್ಯ ಸಂಭಾಳಮಠ, ಸಾಕಿನ್-ಕಮಲಾಪೂರ, ಜಿಲ್ಲಾ-ಗುಲ್ಬರ್ಗ ಎಂಬ ಕುಲನಾಮದ ಹಿಂದಿನ ಬಳುವಳಿಯನ್ನು ಮನಸಾರೆ ಕಿತ್ತು ಈ ಜಗತ್ತಿನ ಜೊತೆ ಓಡಬೇಕೆಂದು ಕಷ್ಟ ಪಟ್ಟು ಓದಿ ಇಲ್ಲಿಯವರೆಗೂ ಬಂದವನು. ನನಗೆ ಒಂದು ಚಿಕ್ಕ ವಿಷಯವೂ ತಲೆಗೇರಿತೆಂದರೆ ಅದು ಗಿರಣಿಗೆ ಹಾಕಿದಂತೆ ಸುತ್ತಿ ಸುತ್ತಿ ಅದರಿಂದ ಹೊರಬರುವಷ್ಟರಲ್ಲಿ ನಾನೆಲ್ಲಿದ್ದೆ ಎಂದು ನನಗೇ ಗೊತ್ತಿರುವುದಿಲ್ಲ.

ನನ್ನ ಮದುವೆ ವಿಚಾರದಲ್ಲಿ ಮನೆಯವರ ಒತ್ತಡ ಇರಬಹುದು, ಕಾರ್ಪೋರೇಟ್ ಜಗತ್ತಿನಲ್ಲಿ ನರಳುತ್ತಿರೋ ನಮ್ಮ ಭಾಷೆ ಇರಬಹುದು, ಬೆಂಗಳೂರು ಸುತ್ತ ಮುತ್ತ ಓಡಾಡೊ ಕಾರುಗಳ ಮೇಲೆ ರಾರಾಜಿಸುವ... ಡಾಸ್, ಬಾಸ್... ಎಂಬ ಜಾತಿಯ ನಾಮಫಲಕ ಕಂಡಾಗ, ಆಫೀಸ್‌ಗಳ ಹತ್ರ ನಿಂತು ಸಿಗರೇಟು ಸೇದುತ್ತ ಫಾರಿನ್ ಕಲ್ಚರ್ ಬಗ್ಗೆ ಮಾತಾಡೊ ಸಾಫ್ಟ್‌ವೇರ್ ಮಂದಿಯ ನೋಡಿದಾಗ, ಯಾರಾದ್ರೂ ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂದ್ರೆ, ಯಾರಾದ್ರೂ ನೀವು ಜೋಳಿಗೆ ವಂಶದವರಾ ಅಂತ ಕೇಳಿದಾಗ, ಇನ್ಯಾವುದೇ ಇರ್ಲಿ, ಅದು ನನ್ನ ಮನಸನ್ನ ತುಂಬಾ ಕಾಡತ್ತೆ... ಒಂದೊಂದ್ಸಲ ಒಬ್ಬೊಬ್ನೆ ಮಾತಾಡ್ತಿರ್ತೀನಿ ಅಂತ ಕೆಲವರು ಹೇಳ್ತಾರೆ.

ಆದ್ರೆ ನನಗೆ ಅದರ ಅರಿವೆ ಇರುವುದಿಲ್ಲ. ಮೊನ್ನೆ ಸಾಯಿಬಾಬಾ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಆ ಮೂರ್ತಿ ಜೊತೆ ಮಾತಾಡ್ತಿದ್ನಂತೆ. ನನಗೆ ಆ ವಿಷಯ ತಿಳಿಯದು. ಇನ್ನೊಂದಿನ ಊರಿಂದ ಬಸ್ಸಿನಲ್ಲಿ ಬರುವಾಗ ರಸ್ತೆ ಬದಿಯ ಒಂದು ಮರದ ಮೇಲೆ ಹಾಕಿದ್ದ ಬ್ಯಾನರ್ ಅನ್ನು ಚಿಕ್ಕ ಮುಸ್ಲಿಂ ಹುಡುಗಿಯೊಂದು ಓದುತ್ತಿತ್ತು, ಅ..ಅಲ್.. ಅಲ್ಲ.. ಮ.. ಅಲ್ಲಮ.. ಪ್ ಪ್ರ..ಭುಗ..ಳ.. ಜಯಂತಿ... ನಿ ನಿ..ಮಿತ್ತ ದಾ..ಸೋಹ.. ದಾಸೋಹ.. ‘ಅಮ್ಮಿ, ದಾಸೋಹ ಬೊಲೆ ತೊ ಕ್ಯಾ?’ ಎಂದು ಅವರ ಅಮ್ಮನ ಕೇಳಿತು. ನನ್ನ ಮನಸು ಎಷ್ಟು ಹಿಗ್ಗಿತೆಂದರೆ ಮುಂದೆ ಅವರ ತಾಯಿ ಕೊಡೊ ಉತ್ತರದ ಮೇಲೆ ಕುತೂಹಲಗೊಂಡಿತು. ಆದರೆ ಅವರಮ್ಮ, ‘ಕುಛ್ ನಹಿ ಭೇಟಿ ಆಜಾ ತು’ ಎಂದಳು.

‘ಅಮ್ಮಿ, ಬೊಲೊನಾ’ ಎಂದು ಹಟ ಹಿಡಿದರೂ ಆ ತಾಯಿ ಉತ್ತರ ಕೊಡದೆ ಅವಳಿಗೆ ಚೆನ್ನಾಗಿ ಹೊಡೆದು, ‘ತೇರೆ ಅಬ್ಬಾ ಸೆ ಪೂಛ್’ ಎಂದು ದರದರನೆ ಎಳೆಕೊಂಡು ಹೋದಳು. ನನ್ನ ಮನಸು ವಿಲವಿಲಗೊಂಡಿತು. ಬೇರೆಯವರಿಗೆ ಅದು ಚಿಕ್ಕ ವಿಷಯ ಇರಬಹುದು, ಆದ್ರೆ ನಂಗೆ ತುಂಬಾನೆ ಘಾಸಿಮಾಡಿತು. ಇಂಥ ವಿಷಯಗಳಿಗೆ ಮನಸು ಹಿಂಡಿದಂತಾಗುತ್ತದೆ. ಡಾಕ್ಟರ್‌ಗೆ ತೋರ್ಸಿದೆ, ಅವರು ಏನೂ ಇಲ್ಲ, ತುಂಬಾ ಸೆನ್ಸಿಟಿವ್ ಇದ್ದೀರಿ. ಬಹುಶಃ ಅಷ್ಟು ವರ್ಷ ನೀವು ತೆಗೆದುಕೊಂಡ ಮಾತ್ರೆಯ ಪ್ರಭಾವವೂ ಇರಬಹುದು, ಜಾಸ್ತಿ ಸ್ಟ್ರೆಸ್ ಮಾಡ್ಕೋಬೇಡಿ ಅಂತ ಮಾತ್ರೆ ಕೊಟ್ರು. ನನ್ನ ಮನೆಯವರಿಗೆ ಇದು ಯಾವ್ದೂ ಅರ್ಥ ಆಗೊದಿಲ್ಲ. ಲಿಝ್, ನನಗೀಗ ಎಲ್ಲವೂ ಜೀವ ಕಳ್ಕೊಂಡಿರೊ ಚಿತ್ರಪಟದಂತೆ ತೋರುತ್ತವೆ. ಸದ್ಯಕ್ಕೆ ನನ್ನ ಮನಸಿಗೆ ನೀನೊಬ್ಳೆ ಜೀವಂತ ಬೊಂಬೆಯಂತೆ ಕಾಣ್ತಿದ್ದಿಯ’ ಅಂದಾಗ ಲಿಝ್ ಕೆಂಪೇರಿದ್ದನ್ನ ನನ್ನಿಡೀ ಜನ್ಮಕ್ಕಾಗುವಷ್ಟು ಸವಿದೆ! ಸುತ್ತ ಯಾರೂ ಇಲ್ಲದ್ದನ್ನು ಖಾತ್ರಿ ಮಾಡ್ಕೊಂಡು ಟೀ ಕುಡಿಯುವ ನೆಪದಲ್ಲಿ ಲಿಝ್ ಎದೆಯೊಳಗೆ ನಾನು ಇಳಿಯಬಹುದಾದ ಜಾಗ ಎಲ್ಲಿದೆ ಎಂದು ಆಸೆಗಣ್ಣ ಹರಿಸಿದೆ. ಗ್ರೀನ್ ಟೀ ನನ್ನ ಆಸೆಗಳಿಗೆ ಹೊಸ ರುಚಿ ತುಂಬಿ ಒಳಗಿಳಿಯಿತು.
***

ಕಣ್ಣಿಗೆ ಇಂಜೆಕ್ಷನ್ ಚುಚ್ಚಿಸಿಕೊಂಡಂತೆ ಬಂದು ತೇಕುತ್ತ, ‘ಹೇ ಇಲ್ಲಿದ್ದೀಯಾ, ಛಲೋ ಆತ. ಚನ್ನೂ, ವೀಕ್ನೆಸ್ಸಿಗೆ ಕನ್ನಡದಾಗ ಏನಂತಾರೊ?’– ನನ್ನ ಓಜಸ್ ಫಾರ್ಮಾದ ಪಾರ್ಟ್ನರ್ ಸೂರ್ಯಕಾಂತ ಅಲಿಯಾಸ್ ಸೂರ್ಯಾನ ಈ ಅಧಿಕಪ್ರಸಂಗಿತನದ ಪ್ರಶ್ನೆಗೆ ಮೈ ಉರಿ ಉರಿ ಉರಿಯಿತು. ಇಲ್ಲಿ ಲಿಝ್ ಇದ್ದಾಳೆ, ಹೇಗೆ ವರ್ತಿಸಬೇಕೆಂಬ ಕಾಮನ್ ಸೆನ್ಸ್‌ ಇಲ್ದಿರೊ ಮನುಷ್ಯ, ಅಲ್ಲ ಪ್ರಾಣಿ ನನ್ಮಗ.  ‘ಅದ್ಯಾಕ್ಲೆ ಈಗ?’ ಎಂದೆ. ‘ಹೇ, ಜಲ್ದಿ ಹೇಳೊ ಮಾರಾಯಾ, ರೀಬಾನ ಜೋಡಿ ಜಿದ್ದ ಕಟ್ಟೇನಿ. ಇನ್ನ ಐದ ನಿಮಿಷದಾಗ ಹೇಳಬೇಕ’ ಅಂದ. ‘ಅದಕ್ಕ ದೌರ್ಬಲ್ಯ ಅಂತಾರಲೇ. ಕನ್ನಡ ಮೀಡಿಯಂ ಕಲ್ತಿದಿ, ಅಷ್ಟೂ ಗೊತ್ತಾಗುದಿಲ್ಲೆನ? ಸಾಲಿ ಮುಂದ ಹೋಗಿದ್ಯೊ ಹಿಂದ ಹೋಗಿದ್ಯೊ? ಬೆಂಗಳೂರಾ, ಎಂ ಎನ್ ಸಿ ಕಂಪನಿಯಂದ್ರ ಎಲ್ಲಾ ಮರ್ತ ಬಿಡೂದನ?’ ಎಂದೆ. ‘ಥ್ಯಾಂಕ್ಸ್ ಲೇ‘ ಎಂದು ನಾಚಿಕೆ ಇಲ್ಲದವನಂತೆ ಹೊರಟೆ ಹೋದ. ಲಿಝ್ ಕಣ್ಣರಳಿಸಿ ನಗುವಿನಳತೆಗೆ ತುಟಿಗಳನು ಹಿಗ್ಗಿಸಿ ಕುತೂಹಲದಿಂದ ನೋಡುತ್ತಿದ್ದಳು.
***

‘ಸುತ್ತ ಆಫೀಸಿನ ಯಾವ ತಲೆನೋವಿನ ತಲೆಗಳೂ ಸುಳಿಯುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡು, ‘ಔಷಧಿ ಎಂಬುವು ಹುಟ್ಟಿಕೊಂಡಾಗಲೇ ದುಷ್ಪರಿಣಾಮಗಳೂ ಹುಟ್ಟಿಕೊಂಡವು. ಅದನ್ನ ನಾವು ತಿಳ್ಕೊಳ್ಳೊದಕ್ಕೆ ಥ್ಯಾಲಿಡೊಮೈಡ್ ಟ್ರ್ಯಾಜಿಡಿ ಎಂಬ ಸುನಾಮಿ ಅಪ್ಪಳಿಸಬೇಕಾಯಿತು. ಅಲ್ಲಿಯವರೆಗೆ ಎಲ್ಲರೂ ಅದರ ಎಫೆಕ್ಟ್ ಬಗ್ಗೆ ಕಾತರರಾಗಿದ್ದರೆ ವಿನಾ ಸೈಡ್ ಎಫೆಕ್ಟ್ ಬಗ್ಗೆ ಚಿಂತಿಸಲೇ ಇಲ್ಲ. ಅದು, ಮಗುವೊಂದು ಹುಟ್ಟಿದಾಗ ಮುಂದೆ ಡಾಕ್ಟರೊ, ಇಂಜಿನಿಯರೊ, ವಿಜ್ಞಾನಿಯೊ ಆಗುತ್ತದೆಂದು ಕನಸು ಕಾಣುತ್ತೇವೆಯೇ ಹೊರತು ಆ ಮಗುವಿನಿಂದ ಮುಂದೆ ತಪ್ಪುಗಳೂ ಜರುಗಬಹುದೆಂಬ ಸತ್ಯವನ್ನು ನಮ್ಮ ಜಾಣ ಬುದ್ಧಿ ಹೇಳಿಕೊಡುವುದಿಲ್ಲ. ಇಲ್ಲಿ ಪ್ರತಿಯೊಂದಕ್ಕೂ ಗುಣ ಇದ್ದಂತೆ ಅವಗುಣವೂ ಇದೆ.

ಹಾಗೆಂದು ಅವಗುಣಕ್ಕೇ ಪ್ರಾಶಸ್ತ್ಯ ಸಿಗಬೇಕೆಂದು ಹೇಳುತ್ತಿಲ್ಲ. ಅದರ ಅರಿವು ಇಟ್ಟುಕೊಂಡು ಗುಣ ವಿಶೇಷಣವನ್ನು ಅನುಭವಿಸಬೇಕು. ನಮಗೆ ಕಾಯಿಲೆ ಬಂದು ಡಾಕ್ಟರ್ ಹತ್ರ ಹೋದಾಗ ಅವರು ಔಷಧಿಗಳ ಬಗೆಗೆ ಕೊಡುವ ಮಾಹಿತಿಯನ್ನು ಶ್ರದ್ಧೆಯಿಂದ ಪಾಲಿಸುತ್ತೇವೆ. ಔಷಧಿ ಕಡಿಮೆಯಾಯಿತೊ ಕಾಯಿಲೆ ವಾಸಿಯಾಗುವುದಿಲ್ಲ, ಹೆಚ್ಚಾಯಿತೊ ಅದರಿಂದಲೇ ಇನ್ನೊಂದೇನೋ ಸಮಸ್ಯೆಯಾಗುವ ಸಾಧ್ಯತೆ. ಇದೊಂದು ಎರಡಲಗಿನ ಕತ್ತಿ ಪ್ರಯೋಗ. ಕಾಯಿಲೆಗೆ ತಕ್ಕಂತೆ ಸರಿಯಾದ ಔಷಧಿ, ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ ನಮ್ಮ ದೇಹ ಸಹಿಸುವುದಿಲ್ಲ. ಅದು ಮನಸಿಗಿಂತಲೂ ಮೃದು, ಅಷ್ಟೇ ಸಂಕೀರ್ಣ’. 

‘ಇದು ಅರ್ಧ ಸತ್ಯ ಸರ್, ಹೊಸ ಔಷಧಿಗಳ ಆವಿಷ್ಕಾರ ಹೆಚ್ಚಿದಂತೆಲ್ಲ ಪೈಪೋಟಿಗೆ ಬಿದ್ದಂತೆ ರೋಗಗಳ ಜನನ ಪ್ರಮಾಣವೂ ಏರುತ್ತಿದೆ. ನಮ್ಮ ದೇಶದಲ್ಲಿ ಏನಿಲ್ಲವೆಂದರೂ ಮೂವತ್ತು ಸಾವಿರಕ್ಕೂ ಹೆಚ್ಚು ಔಷಧಿಗಳು, ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಂಪನಿಗಳಿವೆ. ಹೊಸದನ್ನು ಕಂಡು ಹಿಡಿಯಲು ಬಳಸುವ ಅರ್ಧದಷ್ಟು ದುಡ್ಡನ್ನು ಮೂಲಭೂತ ಅವಶ್ಯಕತೆಗಳ ಸುಧಾರಣೆಗೆ ಕೊಟ್ಟರೆ ರೋಗವನ್ನೇ ನಾವು ತಡೆಯಬಹುದಲ್ಲ? ಇಲ್ಲಿ ಬರುವ ಎಷ್ಟೊಂದು ಎಮ್.ಎನ್.ಸಿ ಕಂಪನಿಗಳು ಆವಿಷ್ಕಾರಕ್ಕೆ ಮತ್ತು ವಾಣಿಜ್ಯಾತ್ಮಕವಾಗಿ ತಮ್ಮ ಅಧಿಪತ್ಯ ಸ್ಥಾಪಿಸಲು ಬರುತ್ತಾರೆಯೇ ವಿನಾ ಇಲ್ಲಿನ ಜನರ ಜೀವನ ಸುಧಾರಿಸುವ ಗೋಜಿಗೆ ಹೋಗುವುದಿಲ್ಲ’.
‘ಲಿಝ್, ಎಂಥ ತಮಾಷೆ ನೋಡು, ಇದನ್ನ ಹೇಳಿದಾಗ ನಮ್ಮ ಮೇಷ್ಟ್ರಿಗೆ ಉತ್ತರ ಕಾಣದೆ ಸುಮ್ಮನಾಗಿ ಗುರಾಯಿಸ್ಕೊಂಡು ಹೋಗಿದ್ದರು’.

ಲಿಝ್‌ನನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ನನ್ನ ಸಾಧನೆಯನ್ನು ಹೇಳಿದೆ. ಅದು ಅವಳಿಗೆ ನಾನಿನ್ನೂ ಈ ವಿಷಯದಲ್ಲಿ ಬಚ್ಚಾ ಅನಿಸಿರಬೇಕು! ಒಂದು ನಗುವನೆಸೆದು, ‘ಚ್ಯನ್ನ, ನನಗೆ ಗೊತ್ತು, ನೀನು ಎಲ್ಲ ತಿಳ್ಕೊಂಡಿದ್ದಿಯ. ಆದರೆ ನೀನು ಕೂಡ ಅದರ ಒಂದು ಭಾಗವಾಗಿದ್ದೀಯ ಈಗ. ಫಾರ್ಮಾಸಿಸ್ಟ್ ಆಗೋವಾಗ ನೀನು ತೆಗೆದುಕೊಂಡ ಪ್ರತಿಜ್ಞೆ ಮರೆತುಬಿಟ್ಯಾ? ಇಲ್ಲಿ ಸಮಸ್ಯೆ ಇದೆ, ಅದನ್ನು ಸರಿಪಡಿಸೋಕೆ ಒಬ್ಬ ಲೀಡರ್‌ನ ಕೊರತೆ ಕೂಡ ಇದೆ. ನೀನು ಒಳ್ಳೆಯ ಫಾರ್ಮಾಸಿಸ್ಟ್ ಆಗು, ನಿನ್ನ ಜೊತೆ ನಾನಿರ್ತೀನಿ’.
ಲಿಝ್ ನನ್ನ ಎಲ್ಲ ಮನಸಿನ ಎಲ್ಲ ಗಾಯಗಳಿಗೆ ಔಷಧಿಯಾಗುವಂತೆ ಕಂಡಳು.

ಇಂಥವಳನ್ನೇ ಅಲ್ಲವೇ, ನನ್ನ ಮನಸು ಹುಡುಕುತ್ತಿದ್ದುದು. ಅವಳನ್ನು ನೋಡುತ್ತಿದ್ದಂತೆ ಜೀವನಕ್ಕೊಂದು ಹೊಸ ಕಸುವು ಬರುತ್ತಿದೆ, ಇನ್ನು ಇವಳು ನನ್ನ ಸಂಗಾತಿಯಾದರೆ ನನ್ನಷ್ಟು ಅದೃಷ್ಟವಂತ ಯಾರೂ ಇರಲಿಕ್ಕಿಲ್ಲ. ಹೌದು, ಇಷ್ಟು ದಿನ ಅವಳ ಜೀವನದಲ್ಲಿ ಏನು ನಡೆಯಿತು, ನನ್ನ ಜೀವನ ಹೇಗೆ ಕಳೆಯಿತೊ ಅದನ್ನೆಲ್ಲ ಗಂಟು ಕಟ್ಟಿ ಮೂಲೆಗೆಸೆದು ನಮ್ಮ ಅಭಿರುಚಿ ಆಸಕ್ತಿಗಳ ಹೊಸದೊಂದು ಜೀವನ ಕಟ್ಟಿ ಯಶಸ್ವಿಯಾಗಬೇಕು. ಇಬ್ಬರ ಮುದ್ದಿನ ಗ್ರೀನ್ ಟೀ ನಮಗೆ ಟಾನಿಕ್ ಆಗುವುದೆಂಬ ವಿಶ್ವಾಸ ಮೂಡಿತು. ಈ ಸಂತಸಕ್ಕೆ ಕಾಲು ತಕತಕ ಕುಣಿಯುತ್ತಿದ್ದವು... ಲಿಝ್‌ಗೆ ನನ್ನ ಈ ನಿರ್ಧಾರ ಹೇಳಬೇಕು. ಅವಳೂ ನನ್ನೊಂದಿಗೆ ಹೆಜ್ಜೆ ಹಾಕುತ್ತಾಳೆಂಬ ವಿಶ್ವಾಸ ಇದೆ. ನನ್ನ ಬದುಕನ್ನು ಕಟ್ಟಿಕೊಳ್ಳುವ ಈ ಅಮೃತ ಗಳಿಗೆಯನ್ನು ಬಿಡಬಾರದು. ಎಲಿಝಬೆತ್ ನನ್ನ ರಾಣಿಯಾಗಬೇಕು, ಅದನ್ನವಳಿಗೆ ಹೇಳಬೇಕು... ಹೇಳಲೇಬೇಕು... ಈಗಲೇ... ಹ್ಞೂ...
***

ಓಡುತ್ತ ಬಂದ ಸೂರ್ಯಾ, ‘ಇಲ್ಲಿ ಒಬ್ನ ಕುತ್ಗೊಂಡ್ ಏನ್ಮಾಡಾಕತ್ತಿಲೇ ಚೆನ್ನ್ಯಾ? ಸುದ್ದಿ ಗೊತ್ತಾತನ್?’.
‘ಒಬ್ನ ಅಲ್ಲ, ಇಲ್ಲಿ ಲಿಝ್ ಜೋಡಿ ಮಾತಡಾಕತ್ತಿದ್ನಿ’.
‘ಅಲ್ಲೆಲ್ಲಿ ಲಿಜ್ಝಾ? ಅಕಿ ನಿನ್ನೆ ರಾತ್ರಿನ ನಿದ್ದಿ ಗುಳಿಗಿ ತುಗೊಂಡ್ ಇವತ್ತ ಐಸೀಯೂದಾಗ ಅಡ್ಮಿಟ್ ಆಗ್ಯಾಳ. ಕೋಮಾದಾಗ ಅದಾಳಂತ. ಬರ್ತಿಯೇನ ನೋಡ್ಕೊಂಡ್ ಬರೂನು?’.
ಆ ಸೀಟಿನತ್ತ ತಿರುಗಿ ನೋಡುವುದಕ್ಕೆ ಭಯ, ಚನ್ನನ ಆಳದ ವರ್ಣತಂತುಗಳೂ ಕೂಡ ಬೆವರಿ ಮೈ ತಣ್ಣಗಾಯಿತು; ಗ್ರೀನ್ ಟೀ ಬ್ಯಾಗೂ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT