ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟೆ ಬಂದದ್ದು ಸುಳ್ಳೇ?

ಕವಿತೆ
Last Updated 24 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಆಷಾಢದ ಕಂಬಳಿಹುಳು ಶ್ರಾವಣದ ಲಗ್ನಸಂಭ್ರಮಕ್ಕೆ
ಅಂಟಿಸಿಕೊಂಡು ಇಕ್ಕೆಗಲ ರೆಕ್ಕೆ ಚುರುಕು ಮೀಸೆ-
ಯಾಡಿಸುತ್ತಾ ತೆರೆದ ಕಿಟಕಿಯ ಮೂಲಕ
ಒಮ್ಮೆ ನನ್ನ ಮನೆಯ ರೂಮೊಂದಕ್ಕೆ ಹಾರಿ
ಬಂದುಬಿಡಬಹುದೇ ಹಾಗೇ?

ಮೇಜಿನ ಮೇಲೆ ಅರ್ಧ ಬರೆದಿಟ್ಟ
ಕವಿತೆಯ ಕೊನೆಗೆ ಅದೇನು ಬರೆದದ್ದು?
ಗೋಡೆಗೆ ನೇತುಹಾಕಿದ್ದ ಚಿತ್ರಪಟದ
ಅವಳ ತುಟಿಯ ಮೇಲೆ ಹೋಗಿ ಕುಳಿತದ್ದು!
ಕನ್ನಡಿಯಲ್ಲಿ ಮುಖ ನೋಡಿ ನಕ್ಕದ್ದು!
ಕಪಾಟಿನಲ್ಲಿದ್ದ ಹಳದಿ ಹೂವಿನ ಸೀರೆಯ
ಮೇಲೆ ಕುಳಿತು ಕಸೂತಿ ಹಾಕಿದ್ದು!
ಏನಿದರ ಆಟ ಮಾಟ? ಪ್ರಶ್ನಿಸಿ ನಕ್ಕೆ.

ಉತ್ತರವೆಂಬಂತೆ ಹಾಸಿದ ಪಲ್ಲಂಗದ
ಹಾರಿಕೊಂಡು ಬಂದು ಕುಳಿತು ಸೀದಾ
ಪಟ್ಟಾಂಗ ಹೊಡೆಯುವುದೇ?
ಅರೆರೇ, ಅರ್ಥವಾದವಳಂತೆ ಕೂಡಲೇ
ಕೈ ಬೀಸಿದೆ- ‘ಅತಿಯಾಯಿತು ಚೇಷ್ಟೆ,
ಹೋಗು ಹೋಗೆಲೆ ಚಿಟ್ಟೆ, ಒಡೆದು ಹೋಗೆನ್ನ
ಆಸೆಮೊಟ್ಟೆ’.

ಅಷ್ಟೇ ನೋಡಿ... ಹಾರಿದೆ ಮೂಲೆಯಲ್ಲಿದ್ದ
ದೀಪದ ಮಲ್ಲಿಯ ದೀಪದೊಳಕ್ಕೆ
ಚಿಟ್ಟೆಯಾದ ಸುಖವಿತ್ತು ಅದಕ್ಕೆ
ಕಂದುಬಣ್ಣದ ಮೇಲೆ ಕಪ್ಪುಚುಕ್ಕೆ
‘ಬೇಸರವಾಯಿತೆ? ನಿಲ್ಲು ನಿಲ್ಲು
ನಿನ್ನನೇ ನೀನು ಸುಟ್ಟುಕೊಳ್ಳುವಿಯೇಕೆ?’
ಬಳಿಸಾರಿ ತಡವಿದೆ ಮತ್ತೊಮ್ಮೆ ಮಗದೊಮ್ಮೆ
ಕಾಣುತ್ತಿಲ್ಲವಲ್ಲ ಚಿಟ್ಟೆ, ಇಲ್ಲೇ ಅವಿತಿದ್ದಲ್ಲವೇ?
ಹೋಗಿದ್ದೆಲ್ಲಿಗೆ?
ಇದೇನು ಜಾದೂವೆ? ಕಣ್ಣಾಮುಚ್ಚಾಲೆಯೇ?
ಮಾಯೆಯೇ?
ಒಳಬಂದ ಚಿಟ್ಟೆ ಹೊರಗೆ ಹಾರಲಿಲ್ಲವಲ್ಲ
ಒಳಗೂ ಇಲ್ಲ, ಓಹ್!
ಹಾಗಾದರೆ ಚಿಟ್ಟೆ ಬಂದದ್ದು ಸುಳ್ಳೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT