ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಮುದ್ದಿನ ಜೀರಂಗಿ

Last Updated 1 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಶಾಲೆಯಿಂದ ಮನೆಗೆ ಬರುವಾಗ ರಸ್ತೆ ಬದಿಯ ಒಂದು ಗಿಡದಲ್ಲಿ ‘ಚಿರ್... ಚಿರ್...’ ಎನ್ನುವ ಶಬ್ದ ಕೇಳಿಸಿತು. ಹತ್ತಿರ ಹೋಗಿ ನೋಡಿದೆ. ಗಿಡದ ಎಲೆಯ ಮೇಲೆ ಜೀರಂಗಿಯೊಂದು ಕುಳಿತಿತ್ತು. ಇನ್ನೊಂದು ಜೀರಂಗಿ ಒಣಗಿದ ಹುಲ್ಲಿನ ಎಸಳಿನ ಮೇಲೆ ಕುಳಿತಿತ್ತು. ಒಂದು ಜೀರಂಗಿ ಚಿರ್... ಚಿರ್... ಎನ್ನುತ್ತಿದ್ದರೆ, ಅದಕ್ಕೆ ಶ್ರುತಿ ನೀಡುವಂತೆ ಮತ್ತೊಂದು ಜೀರಂಗಿ ಸದ್ದು ಮಾಡುತ್ತಿತ್ತು. ನೋಡುತ್ತಿದ್ದಂತೆ ಒಂದು ಕೀಟ ಇನ್ನೊಂದರ ಹತ್ತಿರ ಹಾರಿ ಬಂದು ಕುಳಿತಿತು. ಅವು ಒಂದಕ್ಕೊಂದು ತಮ್ಮ ಕಾಲು–ಮೂತಿಗಳನ್ನು ತಿಕ್ಕಿಕೊಂಡವು. ಅದು ಜೀರಂಗಿಗಳ ಶೃಂಗಾರದ ಸಮಯ! ಜೀರಂಗಿಗಳು ತುಂಬಾ ಚುರುಕಿನ ಜೀವಿಗಳು. ದೂರದಿಂದಲೇ ಬೇರೆ ಪ್ರಾಣಿಗಳ ಸುಳಿವನ್ನು ಗುರ್ತಿಸಬಲ್ಲವು. ನನ್ನ ಚಲನೆಯ ಸಪ್ಪಳವನ್ನು ಗ್ರಹಿಸಿದ ಈ ಹುಳುಗಳು ಶೃಂಗಾರ ಮರೆತು, ತರಗಲೆಗಳ ನಡುವೆ ಅಡಗಿಕೊಂಡವು..

ಅಂದಹಾಗೆ, ಜೀರಂಗಿಗಳು ವಿಶ್ವದ ವಿವಿಧ ಭಾಗಗಳಲ್ಲಿ ಕಾಣಸಿಗುತ್ತವೆ. ಸುಮಾರು 450 ಪ್ರಭೇದಗಳ ಜೀರಂಗಿಗಳಿವೆ. ಗಂಡು-ಹೆಣ್ಣು ನೋಡಲು ಒಂದೇ ರೀತಿ ಕಾಣಿಸುತ್ತವೆ. 5 ರಿಂದ 20 ಮಿ.ಮಿ ಗಾತ್ರದ ಕೀಟಗಳಿವು. ಮೊಟ್ಟೆ ಇಡುವ ಸಂದರ್ಭದಲ್ಲಿ ತೇವಾಂಶ ಇರುವ ಹಾಗೂ ಆಹಾರ ಸಿಗುವ ಸ್ಥಳವನ್ನು ಆರಿಸಿಕೊಳ್ಳುತ್ತವೆ. ತಿಳಿಹಳದಿ ಬಣ್ಣದ 70–80 ಮೊಟ್ಟೆಗಳನ್ನು ಇಡುತ್ತವೆ. ಸಾಮಾನ್ಯವಾಗಿ, ಅಂಜೂರ, ಲಾಂಟಾನಾ ಹಾಗೂ ಜೊಪೊರ್ಟಾ ಗಿಡಗಳ ಎಲೆಗಳ ತಳಭಾಗದಲ್ಲಿ ಮೊಟ್ಟೆ ಇಟ್ಟು ಸಂತತಿಯನ್ನು ಬೆಳೆಸುತ್ತವೆ. ತಿಗಣೆ ಜಾತಿಗೆ ಸೇರಿದ ಈ ಜೀವಿಗಳನ್ನು ಗ್ರಾಮೀಣರು ಹಸಿರುಹುಳು, ಜೀರುಂಡೆ, ನಾಯಿಜೀರಂಗಿ ಇತ್ಯಾದಿ ಹೆಸರುಗಳಿಂದ ಕರೆಯುವುದುಂಟು. ಇವುಗಳು ಹಸಿರು ಗಿಡಗಳ ಎಲೆ, ಕಾಂಡಗಳಲ್ಲಿಯ ದ್ರವವನ್ನು ಸೇವಿಸಿ ಬದುಕುತ್ತವೆ.

ಮಕ್ಕಳು ಜೀರಂಗಿಗಳನ್ನು ಕೈಯಲ್ಲಿ ಹಿಡಿದು, ಗಾಳಿಯಲ್ಲಿ ಹಾರಿಬಿಡುತ್ತಾ ಮಜ ತೆಗೆದುಕೊಳ್ಳುತ್ತಾರೆ. ಅವುಗಳ ಕುತ್ತಿಗೆಗೆ ದಾರ ಕಟ್ಟಿ ಹಾರಾಡಿಸುತ್ತಾರೆ. ಬೆಂಕಿಪೊಟ್ಟಣದೊಳಗೆ ಜಾಲಿ ಸೊಪ್ಪು ಹಾಕಿ ಸಾಕುವುದೂ ಇದೆ.

ವಿಶ್ವವಿದ್ಯಾನಿಲಯವೊಂದರ ಸಂಗ್ರಹಾಲಯದಲ್ಲಿ ಸುಮಾರು 200 ವರ್ಷಗಳ ಹಿಂದಿನ ಮಂಟಪವೊಂದನ್ನು ನಾನು ನೋಡಿರುವೆ. ಇಡೀ ಮಂಟಪ ಹೊಳೆಯುತ್ತಿತ್ತು. ಅದನ್ನು ಸಾವಿರಾರು ಜೀರಂಗಿ ರೆಕ್ಕೆ ಬಳಸಿ ರೂಪಿಸಿದ್ದರು. ಮಂಟಪದ ಚಂದಕ್ಕಿಂತ ಜೀರಂಗಿ ಜೀವಿಗಳ ಸಾವು ಈಗಲೂ ನನ್ನನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT