ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಮೆಚ್ಚಿನ ಬೆನಕಪ್ಪ ಡಾಕ್ಟ್ರು

Last Updated 1 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಕ್ಕಳ ತಜ್ಞರಾಗಿ ಡಾ. ಡಿ.ಜಿ. ಬೆನಕಪ್ಪನವರ ಸೇವೆ ಈ ರಾಜ್ಯ ಎಂದೂ ನೆನಪಿನಲ್ಲಿಡುವಂತಹುದು. ಕೊನೆಯುಸಿರಿನ ತನಕವೂ  ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಅನುಪಮವಾದುದಾಗಿದೆ.

ಸಾಯುವ ಒಂದು ತಿಂಗಳ ಮೊದಲೂ ಅವರು ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಬೆಂಗಳೂರಿನಲ್ಲಿರುವ ‘ಇಂದಿರಾಗಾಂಧಿ ಮಕ್ಕಳ ಆರೋಗ್ಯ ವಿಜ್ಞಾನ ಸಂಸ್ಥೆ’ ಅವರ ಕನಸಿನ ಕೂಸು. ಮಕ್ಕಳಿಗಾಗಿಯೇ ಪ್ರತ್ಯೇಕ ಆರೋಗ್ಯ ವಿಜ್ಞಾನ ಸಂಸ್ಥೆಯ ಅಗತ್ಯ ಮನಗಂಡು ಅದನ್ನು ಸಾಕಾರಗೊಳಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ತಮ್ಮ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಮತ್ತು ಸಜ್ಜನಿಕೆಗಳಿಂದ ಮಕ್ಕಳಿಂದ ದೊಡ್ಡವರವರೆಗೂ ಪ್ರೀತಿಪಾತ್ರರಾದವರು ಬೆನಕಪ್ಪ. ಆಗಿನ ಕಾಲಕ್ಕೆ ರಾಜ್ಯದಲ್ಲಿ ಸಚಿವರಾಗಿದ್ದ ಎಲ್. ಸಿದ್ದಪ್ಪ, 1957ರಲ್ಲಿ ಬೆನಕಪ್ಪನವರಿಗೆ ತಮ್ಮ ಮಗಳು ಸುವರ್ಣಮ್ಮನವರನ್ನು ಕೊಟ್ಟು ಮದುವೆ ಮಾಡಿದ್ದರು.

ಬೆನಕನಹಳ್ಳಿಯಲ್ಲಿ ವಿದೇಶದಲ್ಲಿ ಓದಿದ ಮೊದಲ ವ್ಯಕ್ತಿ ಬೆನಕಪ್ಪ. 1963ರಲ್ಲಿ ಲಂಡನ್‌ನಲ್ಲಿ ವಿದ್ಯಭ್ಯಾಸ ಮುಗಿಸಿ ಬೆನಕನಹಳ್ಳಿಗೆ ಬಂದಾಗ ಊರಿನ ಜನ ಅವರನ್ನು 8 ಕಿಮೀ ದೂರದ ಹೊನ್ನಾಳಿಯಿಂದ ಬೆನಕನಹಳ್ಳಿವರೆಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಕರೆತಂದಿದ್ದರಂತೆ. ಅವರ ತಂದೆ ದೊಡ್ಡವೀರಪ್ಪಗೌಡ, ಚಿಕ್ಕಪ್ಪನವರಾದ ಶಂಕ್ರಪ್ಪಗೌಡ ಮತ್ತು ಸಿದ್ದಪ್ಪಗೌಡರ ಆಗಿನ ಕಾಲದಲ್ಲಿ ಸಮಾಜ ಸೇವೆಗೆ ಹೆಸರಾದವರು. ಆ ಕುಟುಂಬ ಈಗಲೂ ಲೋಕಸೇವೆಯಲ್ಲಿ ನಿರತ.  

ಬೆನಕಪ್ಪನವರು ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಲ್ಲಿ 1930ರ ಮೇ 18ರಂದು ಜನಿಸಿದರು. ವೈದ್ಯರಾಗಿ, ವೈದ್ಯ ಪ್ರಾಧ್ಯಾಪಕರಾಗಿ ಅವರ ಹೆಸರು ತುಂಬಾ ದೊಡ್ಡದು.ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಲ್ಲಿ ನಂಬಿಗೆ ಇಟ್ಟಿದ್ದ ಅವರು ತಮ್ಮ ಕೊನೆಯುಸಿರಿನವರೆಗೂ ವೈದ್ಯರಾಗಿ, ವೈದ್ಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬೆನಕಪ್ಪ ಹದಿವಯಸ್ಸಿನ ಹುಡುಗ. ಶಿವಮೊಗ್ಗದಲ್ಲಿ ಓದುತ್ತಿದ್ದಾಗಲೇ ಸ್ವಾತಂತ್ರ್ಯಕ್ಕೆ ಹೋರಾಡಿ ಸೆರೆಮನೆಗೂ ಹೋಗಿ ಬಂದಿದ್ದ ದೇಶಪ್ರೇಮಿ ಅವರು.

ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಾಧ್ಯಾಪಕರಾಗಿದ್ದ ಅವರು, 1963ರಿಂದ 1988ರವರೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯ, ಸಹಾಯಕ ಪ್ರಾಧ್ಯಾಪಕ, ಅಧೀಕ್ಷಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಆ ಅವಧಿಯಲ್ಲಿ ಅಲ್ಲಿ ಅನೇಕ ಅತ್ಯಾಧುನಿಕ ಸೌಲಭ್ಯ, ಉಪಕರಣಗಳನ್ನು ಅಳವಡಿಸುವಲ್ಲಿ ಶ್ರಮ ವಹಿಸಿದರು. ನಂತರ ಮೈಸೂರು ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕರಾಗಿ, ಅಲ್ಲಿನ ವೈದ್ಯಕೀಯ  ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ವೈದ್ಯ ಪದವಿ ಮುಗಿಸಿದ ತಕ್ಷಣವೇ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಒಂದು ವರ್ಷ ಕಿರಿಯ ವೈದ್ಯರಾಗಿ, ಹುಣಸೂರಿನ ಕ್ಲಿನಿಕ್‌ನಲ್ಲಿ ಸೇವೆ. 1957ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯರಾಗಿ ಸೇವೆ.

ನಮ್ಮೂರಿನಲ್ಲಿ ಯಾರಾದರೂ ಹುಡುಗರು ತಮ್ಮ ಪೋಷಕರನ್ನು ‘ಬೈಕ್ ಕೊಡ್ಸಿ’ ಅಂತಾ ಕೇಳಿದರೆ – ‘ಬೆನಕಪ್ಪ ಡಾಕ್ಟ್ರು, ಫಾರಿನ್‌ನಲ್ಲಿ ಓದಿಬಂದು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರೂ ಬೆಂಗಳೂರಿನಲ್ಲಿ ಸೈಕಲ್ ಮ್ಯಾಲೆ ಕೆಲಸಕ್ಕೆ ಹೋಗ್ತಾರಂತೆ ಗೊತ್ತಾ’ ಎಂದು ಹೇಳುತ್ತಿದ್ದುದು ನನಗೆ ಈಗಲೂ ನೆನಪಿದೆ. ಸರಳತೆ-ಸಜ್ಜನಿಕೆಗೆ ಮತ್ತೊಂದು ಹೆಸರೇ ಆಗಿದ್ದರು ಬೆನಕಪ್ಪ ಡಾಕ್ಟ್ರು.

ಮಕ್ಕಳ ಆರೋಗ್ಯ ಸಂಸ್ಥೆ ಸ್ಥಾಪನೆ
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗವಿತ್ತು. ಆದರೆ ಮಕ್ಕಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವುದು ಅವರ ಗುರುಗಳಾಗಿದ್ದ ಡಾ. ಬೋಪಯ್ಯ ಮತ್ತು
ಡಾ. ಸಂಪತ್ ಲೋಕನಾಥನ್ ಅವರ ಕನಸಾಗಿತ್ತು. ಅವರ ಶಿಷ್ಯರಾಗಿದ್ದ ಬೆನಕಪ್ಪನವರಿಗೂ ಇದು ಕನಸಾಯಿತು. ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾಗಿದ್ದಾಗ, ಮಕ್ಕಳ ಪ್ರತ್ಯೇಕ ಆರೋಗ್ಯ ಸಂಸ್ಥೆ ಸ್ಥಾಪನೆಗೆ  ಆ ಕಾಲದಲ್ಲೇ ಮೂರು ಕೋಟಿ ರೂ.ಗಳಷ್ಟು ದೇಣಿಗೆ ಸಂಗ್ರಹಿಸುತ್ತಾರೆ ಬೆನಕಪ್ಪ.

ಕೆಲ ಸಂಸದರು ಆಗ ನೆರವು ನೀಡಿದ್ದನ್ನು ಸ್ಮರಿಸುತ್ತಿದ್ದ ಬೆನಕಪ್ಪ, ಉತ್ತರ ಕರ್ನಾಟಕ ಭಾಗದಿಂದ ಶಿಕ್ಷಕರೊಬ್ಬರು ಅದಕ್ಕಾಗಿ 500 ರೂ. ದೇಣಿಗೆ ಕಳಿಸಿದ್ದನ್ನು ಆ ವಿಚಾರ ಪ್ರಸ್ತಾಪವಾದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದುದುಂಟು. 1989ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಹಕಾರದಿಂದ ‘ಕರ್ನಾಟಕ ಮಕ್ಕಳ ಆರೋಗ್ಯ ವಿಜ್ಞಾನ ಸಂಸ್ಥೆ’ ಪ್ರಾರಂಭವಾಯಿತು.

ಬೆನಕಪ್ಪನವರ ಪುತ್ರಿಯಾದ ಡಾ. ಆಶಾ ಬೆನಕಪ್ಪ ಈಗ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರಾಂತ ಮಕ್ಕಳ ತಜ್ಞೆ ಹಾಗೂ ತಂದೆಯ ಹಾದಿಯಲ್ಲೇ ನಡೆಯುತ್ತಿರುವ ಸಮಾಜಮುಖಿ ವೈದ್ಯೆ.

ತಮ್ಮ ಹುಟ್ಟೂರು ಬೆನಕನಹಳ್ಳಿಗೆ ವರ್ಷಕ್ಕೆ ಒಂದೆರೆಡು ಬಾರಿ ಡಾ.  ಬೆನಕಪ್ಪ ಬಂದರೆ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಬೆನಕಪ್ಪನವರಿಗೆ ತೋರಿಸಿಕೊಂಡು ಹೋಗುತ್ತಿದ್ದುದುಂಟು. ಗ್ರಾಮದ ಕಟ್ಟೆ ಇಲ್ಲವೇ ದೇವಾಲಯದಲ್ಲಿ ತಮ್ಮ ವಯಸ್ಸಿನವರೊಂದಿಗೆ ಕುಳಿತು ಹರಟುತಿದ್ದಾಗ, ಮಕ್ಕಳನ್ನು ಪೋಷಕರು ಕರೆತಂದರೆ, ಪ್ರತಿಯೊಂದು ಮಕ್ಕಳನ್ನು ಮುಟ್ಟಿ ನೋಡಿ ಚಿಕಿತ್ಸೆ ನೀಡುತ್ತಿದ್ದರು. ಬೆನಕಪ್ಪ ಡಾಕ್ಟ್ರು ಮುಟ್ಟಿದ್ದಾರೆಂದರೆ, ನಮ್ಮೂರಿನ ಆರಾಧ್ಯ ದೈವ ಬೆನಕೇಶನೇ ನಮ್ಮ ಮಕ್ಕಳನ್ನು ಮುಟ್ಟಿದ್ದಾನೆ ಎಂದು ಜನ ಹರ್ಷಗೊಳ್ಳುತ್ತಿದ್ದರು.

ನನಗೂ ಒಬ್ಬ ಮಗಳು ಜನಿಸಿದಾಗ, ನನ್ನ ಮಗಳನ್ನು ಒಮ್ಮೆಯಾದರೂ ನನ್ನೂರಿನ ಬೆನಕಪ್ಪ ಡಾಕ್ಟ್ರ ಬಳಿ ತೋರಿಸಲೇಬೇಕೆಂದು ಜಯನಗರದ ಅವರ ಮನೆಗೆ ಹೋಗಿದ್ದೆ.ಅವರ ಚಿಕಿತ್ಸಾ ಟೇಬಲ್ ಮೇಲಿನ ಗೋಡೆಯಲ್ಲಿ ಆಬ್ದುಲ್ ಕಲಾಂ ಅವರಿಂದ ಅವರು ಪ್ರಶಸ್ತಿ ಸ್ವೀಕರಿಸುತ್ತಿದ್ದ ಫೋಟೋ ನೋಡಿದ ನನ್ನ ಮಗಳು ಸಿಂಚನಾ – ‘ನಿಮಗೆ ಅಬ್ದುಲ್ ಕಲಾಂ ಪರಿಚಯನಾ, ಅವರು ನಿಮಗೆ ಏನೋ ಕೊಡ್ತಿದ್ದಾರೆ’ ಎಂದು ಕೇಳಿದ್ದಳು. ‘ನಿಮ್ಮಂತಹ  ಮಕ್ಕಳ ಸೇವೆ ಮಾಡಿದ್ದಕ್ಕೆ ನನಗೆ ಅವರು ಪ್ರಶಸ್ತಿ ಕೊಟ್ಟಿದ್ದಾರೆ ಮಗಳೇ’ ಎಂದವರು ಅವಳ ಕೆನ್ನೆಗೆ ನಯವಾಗಿ ತಟ್ಟಿದ್ದರು.

ಮೊನ್ನೆ ಅವರು ತೀರಿಕೊಂಡ ಸುದ್ದಿ ಗೊತ್ತಾದಾಗ ಬೆಂಗಳೂರಿನಲ್ಲಿ ನನ್ನೊಂದಿಗಿರುವ ಅನಕ್ಷರಸ್ಥೆ ನನ್ನವ್ವನಿಗೆ ತಿಳಿಸಿದಾಗ – ‘ಅಯ್ಯೋ ಬೆನಕಪ್ಪ ಡಾಕ್ಟ್ರು ಸತ್‌ಬಿಟ್ರಾ, ನೀನು ಚಿಕ್ಕವನಿದ್ದಾಗ, ಅವರು ಊರಿಗೆ ಬಂದಿದ್ರು, ಅವರು ನಿನ್ನನ್ನು ನೋಡಿದ ಮೇಲೇನೇ ನಿನ್ನ ಹೊಟ್ಟೆ ಕಾಯಿಲೆ ಗುಣವಾಗಿತ್ತಪ್ಪ’ ಎಂದು ನೆನಪಿನಾಳಕ್ಕೆ ಇಳಿದಿದ್ದಳು ನನ್ನವ್ವ.ಭೌತಿಕವಾಗಿ ಅಳಿದರೂ ಜನರ ಮನಸ್ಸಿನಲ್ಲಿ ಬೆನಕಪ್ಪನವರು ಶಾಶ್ವತವಾಗಿ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT