ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯಾನ್‌ ಮತ್ತು ಕಾಗದದ ಹೂ!

Last Updated 26 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಸುಮಾರು 250 ವರ್ಷದ ಹಿಂದಿನ ಮಾತು. ‘ಸಮುದ್ರ ದಾಟಬಾರದು’ ಎನ್ನುವ ನಂಬಿಕೆ ಬಲವಾಗಿದ್ದ ದಿನಗಳವು. ಆದರೆ, ಸಾಹಸಿಗಳನ್ನು ಇಂಥ ಯಾವ ನಂಬಿಕೆಗಳು ಕಟ್ಟಿಹಾಕಲು ಸಾಧ್ಯ? ಧೀರರು – ಸಾಹಸಿಗರು ಸಮುದ್ರಯಾನದ ಆಹ್ವಾನಕ್ಕೆ ಆಗಾಗ ತಮ್ಮನ್ನು ಒಪ್ಪಿಸಿಕೊಳ್ಳುತ್ತಿರುತ್ತಾರೆ. ಅಂಥದೊಂದು ವಿಶ್ವ ಪರ್ಯಟನೆಯ ಹಂಬಲ ಜಿಯಾನ್‌ ಬಾರೆ ಎನ್ನುವ ಹೆಣ್ಣುಮಗಳಿಗೂ ಇತ್ತು.

ಜಿಯಾನ್‌ ಫ್ರಾನ್ಸ್‌ನ ಹೆಣ್ಣುಮಗಳು (1740-1807). ಸಸ್ಯಶಾಸ್ತ್ರದಲ್ಲಿ ಆಕೆಗೆ ಅಪಾರ ಆಸಕ್ತಿಯಿತ್ತು. ಇಡೀ ವಿಶ್ವವನ್ನು ನೋಡಬೇಕೆಂಬ ಆಸೆ ಆಕೆಯದು. ಆದರೆ ಪುರುಷರೇ ಸಮುದ್ರ ದಾಟಬಾರದು ಎಂಬ ಕಟ್ಟಳೆ ಇರುವ ಕಾಲದಲ್ಲಿ ತನ್ನ ಆಸೆ ಈಡೇರುವುದು ಸುಲಭವಲ್ಲ ಎನ್ನುವುದು ಅವಳಿಗೆ ಗೊತ್ತಿತ್ತು.

1767ರಲ್ಲಿ ಫ್ರಾನ್ಸ್‌ನ ಆಂಟೊನೆ ಬೋಗನವಿಲ್ಲೆ ಎನ್ನುವವರ ನೇತೃತ್ವದಲ್ಲಿ ‘ಇಟ್ವಾನ್’ ಎಂಬ ಹಡಗು ಸಾಗರಯಾನವನ್ನು ಆರಂಭಿಸಿತು. ಕ್ಯಾಪ್ಟನ್‌ನ ಜೊತೆಗಾರನಾಗಿ ಸಸ್ಯಶಾಸ್ತ್ರದ ಪ್ರಸಿದ್ಧ ವಿಜ್ಞಾನಿ ಕಾಮೆರಸನ್‌ ಸಾಗರಯಾನಕ್ಕೆ ಹೊರಟರು. ಜಗತ್ತಿನಲ್ಲಿಯ ಎಲ್ಲ ಸಸ್ಯಪ್ರಭೇಧಗಳನ್ನು ಫ್ರಾನ್ಸ್‌ಗೆ ತರಬೇಕೆಂಬ ಮಹಾತ್ವಾಕಾಂಕ್ಷೆ ಕಾಮೆರಸನ್‌ ಅವರದು.

ಅವರಿಗೊಬ್ಬ ಚಾಣಾಕ್ಷ ಸಹಾಯಕನ ಅಗತ್ಯವಿತ್ತು. ವಿಷಯ ತಿಳಿದ ಜಿಯಾನ್ ಬಾರೆ ವಿಜ್ಞಾನಿಯನ್ನು ಸಂಪರ್ಕಿಸಿದಳು. ಮಹಿಳೆಯಾದ್ದರಿಂದ ಕಾಮೆರಸನ್ ಹಿಂಜರಿದರು. ಆದರೆ ಕಡಿಮೆ ಸಮಯದಲ್ಲಿ ತಜ್ಞಸಂಶೋಧಕನನ್ನು ಹುಡುಕುವುದು ಅವರಿಗೆ ಕಷ್ಟವಾದುದರಿಂದ, ಷರತ್ತಿನೊಂದಿಗೆ ಜಿಯಾನ್‌ಳನ್ನು ತಮ್ಮ ಸಹಾಯಕಳಾಗಿ ಕಾಮೆರಸನ್‌ ಒಪ್ಪಿಕೊಂಡರು. ಪುರುಷರಂತೆ ವೇಷ ಮರೆಸಿಕೊಳ್ಳುವುದು ಷರತ್ತಿನ ಮುಖ್ಯಾಂಶವಾಗಿತ್ತು.

ತನ್ನ ಇಷ್ಟದ ಸಸ್ಯಶಾಸ್ತ್ರದ ಕೆಲಸ ಹಾಗೂ ಜಗತ್ತು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸದ ಜಿಯಾನ್‌ ಹೊಂದಾಣಿಕೆಗಳಿಗೆ ಸಿದ್ಧಳಾದಳು. ಪುರುಷರಂತೆ ವೇಷಮಾಡಿಕೊಂಡು, ಮೀಸೆಹಚ್ಚಿಕೊಂಡು ವಿಶ್ವಪರ್ಯಟನೆಗೆ ಹೊರಟಳು. ‘ಇಟ್ವಾನ್’ ಹಡಗು ತೇಲಿಕೊಂಡು ಸಮುದ್ರವನ್ನು ಕ್ರಮಿಸಲಾರಂಭಿಸಿತು. ವಿವಿಧ ದೇಶದ ಬಂದರುಗಳಲ್ಲಿ ಒಂದೆರಡು ದಿನ ಇದ್ದು ಹಡಗು ಮುಂದೆ ಪ್ರಯಾಣ ಮಾಡುತ್ತಿತ್ತು. ಆ ಸಮಯದಲ್ಲಿ ಕಾಮೆರಸನ್ ಮತ್ತು ಜಿಯಾನ್ ಅಲ್ಲಿಯ ಸಸ್ಯಸಂಕುಲವನ್ನು ಪರಿಚಯಿಸಿಕೊಂಡು, ಸಂಗ್ರಹಿಸಿಕೊಳ್ಳುತ್ತಿದ್ದರು. ಜಿಯಾನ್ ಬೇಕೆಂದೇ ಒರಟಾಗಿ ವರ್ತಿಸುತ್ತ ತನ್ನ ಹೆಣ್ಣು ವ್ಯಕ್ತಿತ್ವವನ್ನು ಮರೆಮಾಚಿಕೊಂಡಿದ್ದಳು.

ಹಡಗು ಮಾರಿಷಸ್ ದ್ವೀಪ ತಲುಪುವ ಹೊತ್ತಿಗೆ ಕಾಮೆರಸನ್ ಉಸಿರಾಟದ ತೊಂದರೆ ಎದುರಿಸತೊಡಗಿದರು. ಹಡಗು ಕೆಲಕಾಲ ಅಲ್ಲಿ ನಿಲ್ಲಬೇಕಾಯಿತು. ಜಿಯಾನ್ ತನ್ನ ಕೆಲಸವನ್ನು ಮುಂದುವರಿಸುತ್ತ, ಮಡಗಾಸ್ಕರ್ ತನಕ ಒಂಟಿಯಾಗಿ ಹೋಗಿ ಸುಮಾರು 500 ಹೊಸ ಸಸ್ಯಪ್ರಭೇದಗಳನ್ನು ಗುರುತಿಸಿದಳು. ಈ ಸಸ್ಯಗಳಲ್ಲಿ ‘ಬೊಗನ್‌ವಿಲ್ಲಾ’ ಕೂಡ ಒಂದು.

‘ಬೊಗನ್‌ವಿಲ್ಲಾ’ ಕಾಗದದ ಹೂವು ಎಂದೇ ಪ್ರಸಿದ್ಧಿ. ಈ ಕಾಗದದ ಹೂವಿಗೂ ಜಿಯಾನ್‌ಗೂ ಬಲುಸಾಮ್ಯವಿದೆ. ಹೆಣ್ಣಾಗಿಯೂ ಪುರುಷವೇಷ ಧರಿಸಿದವಳು ಜಿಯಾನ್. ಹೂವಾಗಿಯೂ ಕಾಗದ ಎನ್ನಿಸಿಕೊಳ್ಳುವ ‘ಬೊಗನ್‌ವಿಲ್ಲಾ’ ಹೂವಿನದು. ಹೆಣ್ಣಾಗಿಯೂ ಕೋಮಲತೆಯಿಲ್ಲದೆ ವರ್ತಿಸುವ ಜಿಯಾನ, ಹೂವಾಗಿಯೂ ಕೋಮಲತೆ ಇಲ್ಲದೆ ‘ಬೊಗನ್‌ವಿಲ್ಲಾ’!

ವಿಶ್ವಪರ್ಯಟನೆಯ ಯೋಜನೆ ಹೊಂದಿದ್ದ ‘ಇಟ್ವಾನ್’ ಹಡಗು ಬಹುದಿನ ಮಾರಿಷಸ್‌ನಲ್ಲಿ ನಿಲ್ಲುವಂತಿರಲಿಲ್ಲ. ಅದು ಕಾಮೆರಸನ್ ಮತ್ತು ಜಿಯಾನ್‌ಳನ್ನು ಅಲ್ಲಿಯೇ ಬಿಟ್ಟು ಮುಂದೆ ಹೊರಟಿತು. 1773ರಲ್ಲಿ ಕಾಮರಸನ್ ಕಾಯಿಲೆಯಿಂದಾಗಿ ತೀರಿಕೊಂಡ. ಜಿಯಾನ್ ಭರವಸೆಯಿಟ್ಟಿದ್ದ ಏಕೈಕ ಜೀವ ಅವಳ ಕೈಬಿಟ್ಟಿತು. ಆಕೆಯ ದುಃಖಕ್ಕೆ ಕೊನೆಯಿರಲಿಲ್ಲ. ಆದರೆ ನೋವನ್ನು ಮೀರಿ ನಿಲ್ಲಬೇಕಾದ ಅನಿವಾರ್ಯತೆ ಆಕೆಗಿತ್ತು. ಹಿಡಿದ ಕೆಲಸ ಮುಗಿಸಬೇಕಿತ್ತು.

ಅಪರಿಚಿತ ನೆಲ, ಅಪರಿಚಿತ ಜನ, ಅರಿಯದ ಭಾಷೆ, ಇದೆಲ್ಲದರ ಜೊತೆಗೆ ಹಣವೂ ಇಲ್ಲ. ಎಲ್ಲ ಸಮಸ್ಯೆಗಳು ಒಟ್ಟಾಗಿ ತನ್ನ ಮೇಲೆ ಎರಗಿದಂತೆ ಜಿಯಾನ್‌ಗೆ ಅನ್ನಿಸಿರಬೇಕು. ಮಡಗಾಸ್ಕರ್‌ನಲ್ಲಿ ಸಂಚರಿಸುವಾಗ ಜಿಯಾನ್‌ಗೆ ಫ್ರೆಂಚ್ ಸೈನಿಕನೊಬ್ಬನ ಭೇಟಿಯಾಯಿತು. ಅವನ ಸಹಾಯದಿಂದ 1774ರ ಅಂತ್ಯದಲ್ಲಿ ಜಿಯಾನ್ ಬಾರೆ 600ಕ್ಕೂ ಹೆಚ್ಚು ಹೊಸ ಸಸ್ಯಪ್ರಭೇದಗಳೊಂದಿಗೆ ತನ್ನ ತಾಯ್ನಾಡಿಗೆ ಮರಳಿದಳು.

ವಿಶ್ವಸುತ್ತಿದ ಸಮಾಧಾನ, ಹಿಡಿದ ಕೆಲಸ ಕೈಗೂಡಿದ ಖುಷಿ ಅವಳದಾಗಿತ್ತು. ಆದರೆ ಹೆಣ್ಣೆಂಬ ಕಾರಣಕ್ಕೆ ಫ್ರಾನ್ಸ್ ಅವಳನ್ನು ಧೀರೋದಾತ್ತ ನಾಯಕಿಯಂತೆ ಸ್ವಾಗತಿಸಲಿಲ್ಲ. ಆಕೆಗೆ ಸಲ್ಲಬೇಕಾದ ಪ್ರಸಂಶೆ ದೊರೆಯಲಿಲ್ಲ. ಜಿಯಾನ ಕೊನೆಗೂ ಸಾಮಾನ್ಯಳಂತೆ ನಿಟ್ಟುಸಿರುಬಿಡುತ್ತ ಮನೆಸೇರಿದಳು. ಜಿಯಾನ್‌ಳ ಸಾಧನೆಯನ್ನು ಸಸ್ಯವಿಜ್ಞಾನ ಗುರ್ತಿಸಲಿಕ್ಕೆ ಎರಡು ಶತಮಾನ ಬೇಕಾಯಿತು. ಅಂದು ಜಿಯಾನ್ ಗುರುತಿಸಿದ ‘ಬೊಗನ್‌ವಿಲ್ಲಾ’ ಇಂದು ಫ್ರಾನ್ಸ್‌ನ ರಾಷ್ಟ್ರೀಯ ಹೂವು!

ಪ್ರಸ್ತುತ ಅಳಿವಿನಂಚಿನಲ್ಲಿರುವ ಹಲವಾರು ಸಸ್ಯಪ್ರಬೇಧಗಳನ್ನು ದೊರಕಿಸಿಕೊಟ್ಟ ಹೆಮ್ಮೆ ಜಿಯಾನ್ ಬಾರೆಯದು. ಫ್ರಾನ್ಸ್ ಈಗ ‘ಬೊಗನ್‌ವಿಲ್ಲಾ’ ಸಸ್ಯಕ್ಕೆ ಜಿಯಾನ್ ಬಾರೆಯ ಹೆಸರಿಡಲು ಸಿದ್ಧವಾಗಿದೆ. ಜಿಯಾನ್ ಬಾರೆ ಇಂದು ಜಗತ್ತಿನ ಪ್ರತಿದೇಶದ ಮನೆಮನೆಗಳ ಮುಂದೆ ಹೂವಾಗಿ ಅರಳುತ್ತಿದ್ದಾಳೆ. ಇಂತಹ ಅನೇಕ ಮಹಿಳೆಯರು ಅಪರಿಮಿತವಾದ ತ್ಯಾಗಗಳನ್ನು ಮಾಡುತ್ತ ಮನುಕುಲಕ್ಕೆ ಅಪಾರವಾದ ಉಪಕಾರವನ್ನು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT