ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನೇಗಿಲು

ಕವಿತೆ
Last Updated 4 ಜೂನ್ 2016, 19:30 IST
ಅಕ್ಷರ ಗಾತ್ರ

ನಾನು ಒಳ್ಳೆಯವ ನನಗೆ ಕೆಟ್ಟದ್ದು ಮಾಡುವ ಧೈರ್ಯವಿಲ್ಲ
ನಾನು ವಂಚಕನಲ್ಲ ನನಗೆ ವಂಚಿಸುವ ಅವಕಾಶ ಸಿಕ್ಕಿಲ್ಲ
ನಾನು ಲಂಪಟನಲ್ಲ ನನಗೆ ಲಂಪಟನಾಗಲು ಅವರು ಬಿಡಲಿಲ್ಲ
ನಾನು ಸರ್ವಾಧಿಕಾರಿಯಲ್ಲ ನನಗೆ ಸರ್ವಾಧಿಕಾರದ ಅವಕಾಶ ಒದಗಲಿಲ್ಲ
ಒದಗಿದ್ದರೂ ಅದನ್ನು ಹಣ್ಣಾಗಿಸಲು ಕಾಲ ಪಕ್ವವಾಗಿರಲಿಲ್ಲ.

ನಾನು ಕೊಲೆಗಾರ ಕೊಂದದ್ದಕ್ಕೆ ಪುರಾವೆಗಳೇ ಇಲ್ಲ
ಇದ್ದರೂ ಅಧಿಕಾರದ ಆಸಿಡ್ಡಿನಲ್ಲಿ ಅದ್ದಿ ತೊಳೆದಿರುವೆ
ನಾನು ಲೂಟಿಕೋರ  ಆದರೇನಂತೆ
ಲೂಟಿಯನ್ನೇ ನ್ಯಾಯದ ಬೆಳವಣಿಗೆಯೆಂದು ಮಾನ್ಯ ಮಾಡಿಸಿರುವೆ;
ನಾನು ಸರ್ವಾಧಿಕಾರಿ
ಸರ್ವಾಧಿಕಾರ ರಾಜಧರ್ಮವೆಂದು
ಜನರ ನಾಲಿಗೆಗಳ ಮೇಲೆ ಶಾಸನ ಬರೆಸಿರುವೆ;
ಸುಳ್ಳುಗಳೇ ಈ ಕಾಲದ ಸವಿಮಾತೆಂದು ಹಾಡಲು ಕಲಿಸಿರುವೆ;
ಹಾಡುತ್ತ ಹಾಡುತ್ತ ಅವರು ನನ್ನ ಸುತ್ತ
ದಂತಕತೆ ಕಟ್ಟಲು ಏರ್ಪಾಡು ಮಾಡಿರುವೆ
ಹೆಚ್ಚೆಂದರೆ ಇದಕ್ಕೆ ಇನ್ನೊಂದಿಷ್ಟು
ಜನರ ನೆತ್ತರೆಣ್ಣೆ ಹೆಚ್ಚಾಗಬಹುದಷ್ಟೇ;
ಒದಗಿರುವ ಅವಕಾಶವ ಹಣ್ಣಾಗಿಸಿಕೊಳ್ಳದಿದ್ದರೆ ನಾನು ಮೂರ್ಖ!
ಈಗ ನಾನು ಇನ್ನಷ್ಟು ಬಲವಾದ ಉಕ್ಕಿನ ಮನುಷ್ಯನಾಗಬೇಕು.
ಉಕ್ಕನ್ನು ಮನುಷ್ಯರಿಂದಲೇ ಉಚಿತವಾಗಿ ಪಡೆಯಬೇಕು

ಆದರೆ ಧೈರ್ಯವಿದ್ದ ಅವಕಾಶ ಒದಗಿದ್ದ ಲಂಪಟವಾಗಿಸಲು ಸಿದ್ಧರಿದ್ದ
ಸರ್ವಾಧಿಕಾರದ ಸಿಂಹಾಸನದಲಿ ಆಸೀನನಾಗಿದ್ದ
ಅವನು; ಕೋಲಿಲ್ಲದೆ ನಡೆಯುತ್ತಿದ್ದ ಕುಂಟರನ್ನು
ಕೂಳಿಲ್ಲದೆ ಬಳಲಿದ್ದ ಬಡಕಲರನ್ನು
ನೊಗ ಹೊತ್ತು ನೇಗಿಲೆಳೆಯುತ್ತಿದ್ದ ರೈತರನ್ನು
ಹೆಣವಾಗಿ ಸಾಗುತ್ತಿದ್ದ ಹದಿಹರಯದವರನ್ನು
ಅವನಡಿ ಅಪ್ಪಚ್ಚಿಯಾಗಿ ಹರಿಯುತ್ತಿದ್ದ ಅವಳ ನೆತ್ತರನ್ನು
ಹಗಲಲ್ಲಿ ಕಂಡು ಸರಿರಾತ್ರಿಯಲ್ಲಿ ಮನೆ ತೊರೆದು ಯಾಕೆ ಹೊರಟ

ದೇವರಿಲ್ಲದ ಈ ನೆಲದಲ್ಲಿ ದೇವರಾಗಿ
ಸನ್ಯಾಸಿಯಾದರೂ ಸರ್ವಾಧಿಕಾರಿಯಾದರೂ ಕೊನೆಗೆ ಸಂತನಾದರೂ
ಮಣ್ಣಲ್ಲಿ ಮಣ್ಣಾಗುವೆನೆಂಬ ಸತ್ಯ ಗೊತ್ತಿದ್ದರೂ
ಹಗಲಲ್ಲಿ ಕಂಡ ಸತ್ಯ ಹುಡುಕಲು ರಾತ್ರಿ ಯಾಕೆ ಹೊರಟ
ರಾತ್ರಿ ಹೊರಟು ಬೆಳಕಿನತ್ತ ಯಾಕೆ ಹೊರಳಿದ
ಬಾಳ ಬೆಳಕಿನ ಸೆರಗಿಡಿದು ತನ್ನೆದೆಯ ತಂತಿ ಯಾಕೆ ನುಡಿಸಿದ

ದೇವರಿಲ್ಲದ ಈ ನೆಲದಲ್ಲಿ ದೇವರಾಗಿ
ಸಂತನಾದರೂ ಸರ್ವಾಧಿಕಾರಿಯಾದರೂ
ಸಾವೆಂದು ಖಾತ್ರಿಯಿದ್ದರೂ
ಜಗದ ಮನದಲ್ಲಿ ಸಾವಿರದ ಸಾಸಿವೆ
ಬಿತ್ತಲು ಯಾಕೆ ಉತ್ತ
ಈ ನೆಲವ ಯಾಕೆ ಉತ್ತ
ದೇವರಿಲ್ಲದ ಈ ನೆಲವ
ದೇವನೇಗಿಲಾಗಿ ಯಾಕೆ ಉತ್ತ
ಒಲವು ಯಾಕೆ  ಜಗದ ಬಿತ್ತ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT