ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಿಗೆ

ಕಥೆ
Last Updated 1 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅವನು ತಿಂಡಿ ತಿಂದು ಹೆಲ್ಮೆಟ್ ತಲೆಗೇರಿಸಿ ಮನೆಯಿಂದ ಹೊರಡುವಷ್ಟರಲ್ಲಿ ಸಮಯ ಏಳೂವರೆಯಾಗಿತ್ತು. ಹೊರಡುವ ಮುಂಚೆ ಹೆಂಡತಿ ಹಬ್ಬಕ್ಕೆ ಊರಿಗೆ ಹೋಗೋಣವೆ ಎಂದು ಕೇಳಿದ್ದಳು. ಈಗ್ಗೆ ಐದಾರು ವರ್ಷಗಳ ಹಿಂದೆ ಪ್ರತಿ ವರ್ಷ ದೀಪಾವಳಿ, ಯುಗಾದಿ, ಗಣೇಶ... ಹೀಗೆ ಕನಿಷ್ಟವೆಂದರೂ ಮೂರು ಬಾರಿ ಊರಿಗೆ ಹೋಗುವ ರೂಢಿ ಇಟ್ಟುಕೊಂಡಿದ್ದರು.

ಇತ್ತೀಚೆಗೆ ಅವನಿಗೆ ಹಾಗೆ ಹೋಗುವುದು ದುಬಾರಿ ಅನ್ನಿಸಿ ಹಬ್ಬಗಳಿಗೆ ಊರಿಗೆ ಹೋಗುವುದನ್ನು ನಿಲ್ಲಿಸಿದ್ದ. ಹೇಗೂ ವರ್ಷಕ್ಕೆ ಒಂದೆರಡಾದರು ಮದುವೆ, ನಾಮಕರಣ... ಇತ್ಯಾದಿ ಕಾರ್ಯಕ್ರಮಗಳು ಇರುವಂತದ್ದೆ ಆದ್ದರಿಂದ ಅಂತಹ ಸಮಯದಲ್ಲಿ ಹೋದರಾಯಿತೆಂಬ ತೀರ್ಮಾನಕ್ಕೆ ಬಂದಿದ್ದ. ಈಗಲೂ ಹೆಂಡತಿಗೆ ಅದನ್ನೆ ಹೇಳಿ ಹೊರಟಿದ್ದ.

ನಗರವನ್ನು ಅವನು ಅಪ್ಪಿಕೊಂಡ ಬಗೆಯೆ ಹಾಗಿತ್ತು. ಮೊದಮೊದಲು ತನ್ನೂರು ಅವನನ್ನು ಅಗಾಧವಾಗಿ ಕಾಡಿದ್ದುಂಟು. ಆಗೆಲ್ಲ ಮೆದಳು ಪೂರ ನಾಸ್ಟಾಲಜಿಯೆ ತುಂಬಿಕೊಂಡು ನಗರವನ್ನು ಅನುಮಾನದಿಂದಲೊ ಆತಂಕದಿಂದಲೊ ಅಥವಾ ಅಸಹ್ಯಿಸಿಕೊಂಡೊ ನೋಡುತ್ತಿದ್ದುದುಂಟು. ಆದರೆ ಒಮ್ಮೆ ಮಹಾನಗರ ಅವನನ್ನು ತನ್ನ ತೆಕ್ಕೆಗೆ ತೆಗುದುಕೊಂಡ ಮೇಲೆ ಅವನು ಅದನ್ನು ಒಂದು ಕ್ಷಣವೂ ಬಿಟ್ಟಿರಲಾರೆ ಎಂಬಂತೆ ಅಪ್ಪಿಕೊಂಡು ಅದರ ಅಂಗವೆ ಆಗಿಹೋದ.

ಅದರಲ್ಲಿ ಆಪ್ತತೆ, ಅನಿವಾರ್ಯತೆ, ಹೊಂದಾಣಿಕೆ ಎಲ್ಲವೂ ಮಿಳಿತಗೊಂಡು ಅವನ ಎದೆಯ ಗೂಡಿನೊಳಗೆ ಸೇರಿಕೊಂಡು ನರನಾಡಿಗಳಲ್ಲೆಲ್ಲಾ ಹಿತವಾಗಿ ಹರಿದಾಡತೊಡಗಿದೆ.

ಹಾಗಾಗಿಯೆ ಅವನು ಹೊರಡುವ ಮುಂಚೆ ಹೆಂಡತಿಗೆ ಒಂದು ಸಾರಿ ಊರಿಗೆ ಹೋಗಿ ಬರುವ ಖರ್ಚಿನಲ್ಲಿ ವರ್ಷದ ಎಲ್ಲಾ ಹಬ್ಬಗಳನ್ನೂ ಮಾಡಿ ಮುಗಿಸಬಹುದು ಸುಮ್ಮನಿರು ಎಂಬಂತೆ ನುಡಿದಿದ್ದ. ಇತ್ತೀಚಿನ ವರ್ಷಗಳಲ್ಲಿ ಅವನಲ್ಲಾಗುತ್ತಿರುವ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿದ್ದ ಅವಳು ಏನೊಂದೂ ಮಾತನಾಡದೆ ಹಿತವಾದ ಮುಗುಳು ನಗೆ ಬೀರಿ ಸುಮ್ಮನಾಗಿದ್ದಳು.

ಅವನು ತನ್ನ ಸ್ಪ್ಲೆಂಡರ್ ಗಾಡಿಯನ್ನು ಓಡಿಸಿಕೊಂಡು ರಿಂಗ್ ರೋಡ್‌ನ ಕಡೆಗೆ ಸಾಗತೊಡಗಿದ. ಅವನ ಕಂಪೆನಿಯ ಕ್ಯಾಬ್ ಬೆಳಗ್ಗೆ ಏಳು ಗಂಟೆ ಐವತ್ತು ನಿಮಿಷಕ್ಕೆ ವರ್ತುಲ ರಸ್ತೆಯ ಕೆಂಪಾಪುರ ನಿಲ್ದಾಣಕ್ಕೆ ಬರುವುದುಂಟು. ಅವನು ಕೆಲಸದ ದಿನಗಳಲ್ಲಿ ನಿತ್ಯವೂ ಏಳೂವರೆಗೆ ಮನೆಯಿಂದ ಹೊರಟು ರಿಂಗ್ ರೋಡ್ ಬಳಿಯಿರುವ ಹಾಸನ್ ಬೇಕರಿಯ ಮುಂದೆ ಗಾಡಿ ಪಾರ್ಕ್ ಮಾಡಿ, ಅಲ್ಲೇ ಬೇಕರಿಯವನ ಬಳಿ ಇರುವ ದಿನಪತ್ರಿಕೆಯಲ್ಲಿ ಒಂದಷ್ಟು ಕಣ್ಣಾಡಿಸಿ, ಸಾಧ್ಯವಾದರೆ ಒಂದು ಲೆಮನ್ ಟೀ ಕುಡಿದು ನಂತರ ಬಸ್ ನಿಲ್ದಾಣದ ಕಡೆಗೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದ.

ಹಾಗೆ ಅವನು ಆ ಬೇಕರಿಯನ್ನು ತಲುಪಬೇಕಾದರೆ ಕೆಂಪಾಪುರದ ಯೋಗೇಶ್ವರ ಲೇಔಟನ್ನು ದಾಟಿಕೊಂಡು ಹೋಗಬೇಕಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೆಲ ಕಾರಣಗಳಿಂದಾಗಿ ಅದು ನಿತ್ಯವೂ ಗಿಜಿಗುಡುವ ರಸ್ತೆಯಾಗಿ ಬದಲಾವಣೆಗೊಂಡಿತ್ತು. ಅವನು ಯೋಗೇಶ್ವರ ಲೇಔಟ್ ರಸ್ತೆಯ ಶುರುವಿನಲ್ಲಿರುವ ಜೈನ್ ಹೆರಿಟೇಜ್ ಸ್ಕೂಲನ್ನು ದಾಟಿಕೊಂಡು ತುಸು ದೂರ ಚಲಿಸಿದ. ಎಡಗಡೆಗೆ ಶಿಥಿಲಗೊಂಡ ಹಳೆಯ ಮನೆಯ ಹಿಂದಕ್ಕಿರುವ ಸ್ಲಂನ ಮುಂಭಾಗದಲ್ಲಿ ಹೆಂಗಸರಿಬ್ಬರು ಸಣ್ಣಗೆ ಜಗಳ ಶುರುವಿಟ್ಟುಕೊಂಡಿದ್ದರು.

ರಾತ್ರಿಯ ನಶೆಯ ಕೊನೆಯ ಡೋಸ್‌ನ ಸುಖದಲ್ಲಿದ್ದ ಆ ಸ್ಲಂ ನಿಧಾನಕ್ಕೆ ಅವರಿಬ್ಬರ ಜಗಳದ ಸದ್ದಿಗೆ ಮೈ ಮುರಿದು ಎದ್ದು ಆಕಳಿಸುತ್ತಾ ಕಣ್ಣುಜ್ಜಿಕೊಂಡು ನಿಧಾನಕ್ಕೆ ಒಂದು ಹೆಜ್ಜೆ ಮುಂದೆ ಇಟ್ಟಂತಾಯಿತು. ಇನ್ನೂ ಸ್ವಲ್ಪ ಮುಂದಕ್ಕೆ ರಸ್ತೆಯ ನಡುವಿನಲ್ಲಿ ಮ್ಯಾನ್ ಹೋಲೊಂದು ಒಡೆದುಕೊಂಡು ರಸ್ತೆಯ ಅಷ್ಟಗಲಕ್ಕೂ ಕಪ್ಪು ನೀರು ತನ್ನ ಮೈ ಹಾಸಿ ಹರಿಯುತ್ತಿತ್ತು. ಅದರ ವಾಸನೆ ಅವನ ಮೂಗಿಗೆ ರಪ್ಪೆಂದು ಬಡಿಯಿತು.

ಅವನ ಗಾಡಿ ಆ ಅಂತಹ ನೀರನ್ನು ಸೀಳಿಕೊಂಡು ಮುಂದೆ ಸಾಗಿತು. ಹಾಗೆ ಸಾಗುವ ಭರದಲ್ಲಿ ರಸ್ತೆಯ ಇಕ್ಕೆಲೆಗಳಿಗೂ ನೀರನ್ನು ಚಿಮ್ಮಿಸಿ ಅವನ ಗಾಡಿ ಮುಂದೆ ಸಾಗಿತು. ಅಂತಹ ಸಮಯದಲ್ಲಿ ಆ ನೀರು ತನ್ನ ಕಾಲುಗಳಿಗೆ ತಾಕದಿರಲಿ ಎಂಬಂತೆ ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿಕೊಂಡು ಗಾಡಿಯನ್ನು ಬ್ಯಾಲೆನ್ಸ್ ಮಾಡಿಕೊಂಡು ಓಡಿಸಿದ್ದ. ಆ ನೀರನ್ನು ದಾಟಿಕೊಂಡು ತುಸು ದೂರಕ್ಕೆ ಚಲಿಸುತ್ತಿದ್ದಂತೆ ಎಡಬದಿಗೆ ಒಂದಷ್ಟು ಜನ ಬಿಂದಿಗೆ ಬಕೆಟ್ಟುಗಳನ್ನು ಹಿಡಿದುಕೊಂಡು ನಿಂತಿದ್ದರು.

ಚರಂಡಿಯ ಬಳಿ ಹಾದು ಹೋಗಿರುವ ಕಾವೇರಿ ನೀರಿನ ಪೈಪಿಗೆ ಒಂದು ಸಣ್ಣ ಕೊಳಾಯಿಯನ್ನು ಅಳವಡಿಸಲಾಗಿತ್ತು. ಒಬ್ಬರು ನೀರನ್ನು ಹಿಡಿಯುತ್ತಿದ್ದರೆ ಮಿಕ್ಕವರು ತಮ್ಮ ಸರದಿಗಾಗಿ ಗುಂಪು ಕಟ್ಟಿಕೊಂಡು ಕಾಯುತ್ತಿದ್ದರು. ಅಲ್ಲಿಂದ ತುಸುವೆ ದೂರಕ್ಕೆ ಮ್ಯಾನ್ ಹೋಲ್ ಒಡೆದು ಹರಿಯುತ್ತಿರುವ ನೀರು ಚರಂಡಿಯೊಳಕ್ಕೆ ಇಳಿಯುತ್ತಿತ್ತು. ಅವನ ಮನೆಯವರು ಕಾವೇರಿ ನೀರನ್ನು ಕುಡಿಯುವುದು ಬಿಟ್ಟು ಒಂದೆರಡು ವರ್ಷಗಳೆ ಆಗಿವೆ. ಅದರ ಬದಲಿಗೆ ಪ್ಯಾಕೇಜ್ಡ್ ನೀರು ಕುಡಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ.

ತಾವು ಅಂತಹ ನೀರನ್ನು ಕುಡಿಯಲು ತೆಗೆದುಕೊಂಡ ನಿರ್ಧಾರದಿಂದ ಒಳಿತೆ ಆಗಿದೆ ಎಂದುಕೊಳ್ಳುತ್ತಾ ಅವನು ಮುಂದೆ ಸಾಗಿದ. ಅಲ್ಲಿ ಬಲಕ್ಕೆ ಮಾಂಟೆಸ್ಸರಿಯೊಂದು ಹಿಗ್ಗಿನಲ್ಲಿ ಎಳೆ ಬಿಸಿಲಿಗೆ ಹೊಳೆಯುತ್ತಾ ನಿಂತ್ತಿತ್ತು. ಅದರ ಎದುರಿಗೆ ಅಂದರೆ ರಸ್ತೆಯ ಎಡ ಬದಿಗೆ ಲುಂಬಿನಿ ಗಾರ್ಡನ್ನಿನ ಹಿಂಭಾಗಕ್ಕೆ ಪ್ರಿಸ್ಟೇಜ್ ಗ್ರೂಪ್‌ನವರ ಇಪ್ಪತ್ನಾಲಕ್ಕು ಅಂತಸ್ತಿನ ಇನ್ನೂ ಕಾಮಗಾರಿ ಪೂರ್ತಿಯಾಗದ ಮಿಸ್ಟಿ ಹೈಟ್ಸ್ ಭವಿಷ್ಯದ ಸುಂದರ ಸ್ವಪ್ನಗಳನ್ನು ಕಾಣುತ್ತಾ ಕುಳಿತಿರುವ ಹಾಗಿತ್ತು. ಅದರ ಎದುರಿಗೆ ತುಸುವೆ ದೂರಕ್ಕೆ ರಾಜ ಕಾಲುವೆಯೊಂದು ತಣ್ಣಗೆ ಹರಿಯುತ್ತಲಿತ್ತು.

ಅವನು ರಾಜ ಕಾಲುವೆಯ ಸೇತುವೆಯನ್ನು ದಾಟಿಕೊಂಡು ಮುಂದೆ ಸಾಗಿ ಹಾಸನ್ ಬೇಕರಿಯ ಮುಂದೆ ತನ್ನ ಗಾಡಿಯನ್ನು ಪಾರ್ಕ್ ಮಾಡಿದ. ನಂತರ ಬೈಕ್‌ನ ಮುಂಭಾಗಕ್ಕೆ ಬಂಪರ್‌ಗೆ ಅಳವಡಿಸಿರುವ ಹೆಲ್ಮೆಟ್ ಲಾಕ್‌ಗೆ ಹೆಲ್ಮೆಟ್ಟನ್ನು ಸೇರಿಸಿ ಲಾಕ್ ಮಾಡಿ ಬೇಕರಿಯ ಮುಂದೆ ನಿಂತು ಅಲ್ಲೆ ಇದ್ದ ದಿನ ಪತ್ರಿಕೆಯನ್ನು ಕೈಗೆ ತೆಗೆದುಕೊಂಡು ಕಣ್ಣಾಡಿಸತೊಡಗಿದ. ಬೇಕರಿಯಾತ ಲೆಮನ್ ಟೀ ಕೊಡಲೆ ಎಂದು ಕೇಳಿದ. ಅವನು ಬೇಡವೆಂದು ತಲೆಯಾಡಿಸಿದ. ಮತ್ತೆ ಬೇಕರಿಯಾತ ಸರ್ ಫುಲ್ ಟ್ರಾಫಿಕ್ ಜಾಮ್.

ನಾಗವಾರದಿಂದ ಹೆಬ್ಬಾಳ ಫ್ಲೈ ಓವರ್ ತನ್ಕ... ಏನಿಲ್ಲಾಂದ್ರು ಒಂದವರ್ ಬೇಕು ಕ್ಲಿಯರ್ರಾಗಕ್ಕೆ. ಅಷ್ಟೊತ್ತು ಏನ್ ಮಾಡ್ತೀರ ಆರಾಮಾಗಿ ಟೀ ಕುಡೀರಿ ಎಂದು ನುಡಿದ. ಅವನು ಏನಾಗಿದೆ ಎಂದು ಕೇಳಿದ. ಅದಕ್ಕೆ ಬೇಕರಿಯಾತ ಅಯ್ಯೋ ಇನ್ನೇನ್ ಸಾರ್ ಇರುತ್ತೆ ದಿನಾ ಇದ್ದದ್ದೆ... ಅದೇ ಆಕ್ಸಿಡೆಂಟು. ಯಾವನೊ ಟೂವೀಲರ್‌ನವನು ಬಿದ್ದು ಬಿಎಂಟಿಸಿ ಕೆಳಗೆ ಸಿಕ್ಕಾಕೊಂಡವ್ನೆ.

ಎರಡೂ ಕಾಲ್ಗಳು ಔಟಂತೆ. ಪಾಪ ಅದಕ್ಕಿಂತ ಪ್ರಾಣ ಹೋಗಿದ್ರು ಚನ್ನಾಗಿರೋದು. ಈಗ್ನೋಡಿ ಜೀವ್ನ ಪೂರ್ತಿ ನರಕ ಅನುಭವಿಸ್ಬೇಕು. ಇನ್ನೂ ಸ್ಟೂಡೆಂಟಂತೆ ಪಾಪ ಎಂದು ನುಡಿದ. ನಂತರ ಅವನೇ ಮುಂದುವರೆಸಿ ಆದ್ರು ಈ ನನ್ಮಕ್ಕಳ್ಗೆ ಕೊಬ್ಬು ಜಾಸ್ತಿ ನೋಡಿ. ಹೆಂಗಂದ್ರಂಗೆ ಓಡಿಸ್ತಾವೆ. ವಯಸ್ಸು ಸರ್ ವಯಸ್ಸು. ಟೂ ವೀಲರ್ ಕೈಗೆ ಸಿಕ್ರೆ ಸಾಕು ಅಡ್ಡಾದಿಡ್ಡಿ ತೂರಿಸ್ಕೊಂಡು ಗಾಳೀಲೆ ಹಾರಾಡ್ತಾವೆ ಎಂದು ಅವನ ಕಣ್ಣುಗಳನ್ನೆ ದಿಟ್ಟಿಸಿ ನುಡಿದ.

ಈಗ ಅವನಿಗೆ ಬೇಕರಿಯಾತ ತನ್ನನ್ನೆ ಉದ್ದೇಶಿಸಿ ಮಾತನಾಡುತ್ತಿರುವ ಹಾಗನಿಸಿತು. ಜೊತೆಗೆ ಹೆಂಡತಿಯು ಸಹ ಬಹಳ ವೇಳೆ ಸುಮ್ಮನೆ ಟು ವ್ಹೀಲರ್ ಯಾಕೆ ಓಡಿಸೋದು... ಅಪಾಯ ಇದ್ದದ್ದೆ. ಅದಕ್ಕಿಂತ ನಡಕೊಂಡೆ ಹೋಗಬಹುದಲ್ಲ ಒಳ್ಳೆ ವಾಕಿಂಗ್ ಆದ ಹಾಗೆ ಆಗುತ್ತೆ ಎಂದು ನುಡಿದಿದ್ದಳು. ಸುಮಾರು ಎರಡು ಕಿಲೋ ಮೀಟರ್ ನಡೆಯೋದು ಅವನಿಗೆ ಯಾಕೊ ಹಿತವೆನಿಸಿರಲಿಲ್ಲ. ಪ್ರತಿ ದಿನವೂ ಹಾಗೆ ನಡೆಯುವುದು ದೇಹಕ್ಕೆ ಅತಿಯಾದ ಶ್ರಮ ಹಾಕಿದಂತಾಗುತ್ತದೆ ಎಂದು ಭಾವಿಸಿದ್ದ. ಜೊತೆಗೆ ಹಾಗೆ ನಡೆಯದಿರುವುದು ನಗರೀಕರಣದ ಬಹು ಮುಖ್ಯ ಲಕ್ಷಣವೂ ಸಹ ಆಗಿರುವುದರಿಂದ ಅವನ ನಿರ್ಧಾರವನ್ನು ಅವನೂ ಸಹ ಪ್ರಶ್ನೆ ಮಾಡುವ ಹಾಗಿರಲಿಲ್ಲ.

ಸ್ವಲ್ಪ ಹೊತ್ತು ಪೇಪರ್ ಮೇಲೆ ಕಣ್ಣಾಡಿಸಿದ ಅವನು ನಂತರ ಕ್ಯಾಬೇನಾದರು ಇಲ್ಲೆ ಹತ್ತಿರದಲ್ಲೆ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಿರಬಹುದೇನೋ ಎಂದುಕೊಳ್ಳುತ್ತಾ ಅಲ್ಲಿಂದ ಹೊರಟು ಪ್ರಯಾಸದಲ್ಲೆ ವರ್ತುಲ ರಸ್ತೆಯನ್ನು ದಾಟಿ ಇನ್ನೊಂದು ಬದಿಗೆ ನಿತ್ಯವೂ ನಿಲ್ಲುವ ಜಾಗದಲ್ಲಿ ನಿಂತುಕೊಂಡ. ಹಾಗೆ ನಿಂತ ಸ್ವಲ್ಪ ಹೊತ್ತಿಗೆ ಸ್ಯಾಮ್‌ಸಂಗ್ ಜೆ ಸೆವೆನ್ ಫೋನು ರಿಂಗಣಿಸತೊಡಗಿತು. ಆಕಡೆಯಿಂದ ಕ್ಯಾಬ್ ಲೀಡರ್ ಅವನಿಗೆ ಅಲ್ಲಿಂದ ನಡೆದು ಹೆಬ್ಬಾಳ ಫ್ಲೈಓವರ್‌ನ ಮತ್ತೊಂದು ಬದಿಗೆ ನಿಂತಿರಲು ಸೂಚಿಸಿದ.

ಅವನ ಎಂದಿನ ಕ್ಯಾಬು ಟ್ರಾಫಿಕ್ಕಿನ ದೆಸೆಯಿಂದ ಇಂದು ಆರ್‌ಟಿ ನಗರದ ಮೇಲಿಂದ ಹೊರಟು ಹೆಬ್ಬಾಳ ಫ್ಲೈಓವರ್ ತಲುಪಲು ನಿರ್ಧರಿಸಿತ್ತು. ಹಾಗೂ ಅವನಿಗೆ ಕೆಂಪಾಪುರ ನಿಲ್ದಾಣದಿಂದ ಹೆಬ್ಬಾಳ ಫ್ಲೈಓವರ್ ತಲುಪಲು ಹತ್ತರಿಂದ ಹದಿನೈದು ನಿಮಿಷಗಳ ನಡಿಗೆ ಸಾಕಾಗಿತ್ತು. ಆದರೂ ಅವನಿಗೆ ಅಷ್ಟು ದೂರ ನಡೆಯುವುದು ದುಸ್ಸಾಹಸವೆ ಎಂದನಿಸತೊಡಗಿತು. ಜೊತೆಗೆ ನಡೆಯುವುದೊ ಬೇಡವೊ ಎಂಬ ಗೊಂದಲದಲ್ಲೆ ಅವನು ತುಸು ಹೊತ್ತು ಅಲ್ಲೆ ನಿಂತಿದ್ದ.

ಅದೇ ಸಮಯಕ್ಕೆ ಸರಿಯಾಗಿ ಅವನ ಹಿಮ್ಮಡಿಯ ಭಾಗದಲ್ಲಿ ಏನೋ ಕಚ್ಚಿದ ಹಾಗಾಯಿತು. ತುಸು ಪಕ್ಕಕ್ಕೆ ಜರುಗಿ ಕೆಳಗೆ ನೋಡಿದ. ಚದುರಿದ ಕಟ್ಟಿರುವೆ ಸಾಲು. ತುಸು ದೂರಕ್ಕೆ ಕಟ್ಟಿರುವೆ ಸಾಲು ನಿಧಾನಕ್ಕೆ ಚಲಿಸುತ್ತಲಿತ್ತು. ಅವನು ತನ್ನ ಚಪ್ಪಲಿ ತೆಗೆದು ಹಿಮ್ಮಡಿಯನ್ನು ಬಲಗೈಯಿಂದ ಉಜ್ಜಿಕೊಂಡ. ನಂತರ ಚಪ್ಪಲಿ ಏರಿಸಿಕೊಂಡು ಈ ನಗರದಲ್ಲಿ ಇನ್ನೂ ಇಂತ ಇರುವೆಗಳು ಇವೆಯೆ ಎಂದು ಯೋಚಿಸುತ್ತಾ ಕ್ಯಾಬ್ ಲೀಡರ್ ಸೂಚಿಸಿದ ಜಾಗ ತಲುಪಲು ಕಟ್ಟಿರುವೆಯ ಜ್ಞಾನದಲ್ಲೆ ಏಳೆಂಟು ಹೆಜ್ಜೆ ಹಾಕಿದ.

ಹಾಗೆ ನಡೆದ ಮರುಕ್ಷಣಕ್ಕೆ ಅವನಿಗೆ ಮತ್ತಿನ್ನೇನೊ ಹೊಳೆದು ಮೊಬೈಲ್ ಕೈಗೆ ತೆಗೆದುಕೊಂಡು ಕ್ಯಾಬ್ ಲೀಡರ್‌ಗೆ ಫೋನ್ ಮಾಡಿ ತಾನು ಆಫೀಸಿಗೆ ಗಾಡಿಯಲ್ಲಿ ಬರುವುದಾಗಿ ತಿಳಿಸಿದ. ನಂತರ ಒತ್ತರಿಸಿಕೊಂಡು ನಿಂತಿದ್ದ ಗಾಡಿಗಳ ಸಂದಿಗಳಲ್ಲಿ ತೂರಿಕೊಂಡು ರಸ್ತೆಯ ಮತ್ತೊಂದು ಬದಿಗೆ ಚಲಿಸಿ ಪ್ಯಾಂಟಿನ ಜೇಬಿನಲ್ಲಿದ್ದ ಗಾಡಿಯ ಕೀಯನ್ನು ಕೈಯಲ್ಲಿ ಹಿಡಿದುಕೊಂಡು ಹಾಸನ್ ಬೇಕರಿಯ ಕಡೆಗೆ ನಡೆಯತೊಡಗಿದ. ಅವನು ಹಾಗೆ ಅಲ್ಲಿಗೆ ನಡೆಯುತ್ತಿದ್ದಂತೆ ನಾಯಿಯೊಂದು ತನ್ನ ಕಾಲನ್ನು ಮೇಲಕ್ಕೆತ್ತಿ ಹೆಲ್ಮೆಟ್ಗೆ ಬೀಳುವ ಹಾಗೆ ಮೂತ್ರವನ್ನು ಮಾಡುತ್ತಲಿತ್ತು.

ಅವನು ಕೆಳಗಿದ್ದ ಸಣ್ಣ ಕಲ್ಲೊಂದನ್ನು ಕೈಗೆ ತೆಗೆದುಕೊಂಡು ಥೂ ದರಿದ್ರದ್ದೆ... ನನ್ನ ಬೈಕೆ ಬೇಕಿತ್ತೆ ನಿಂಗೆ ಎಂದು ನುಡಿದು ಅದರ ಕಡೆಗೆ ಬೀಸಿದ. ಅದು ಅಷ್ಟೊತ್ತಿಗಾಗಲೆ ತನ್ನ ಕೆಲಸ ಮುಗಿಸಿಯಾಗಿತ್ತು. ಅದು ಅವನ ಕಡೆಗೆ ತಿರುಗಿ ಒಮ್ಮೆ ಬೊಗಳಿ ನಂತರ ರಾಜ ಕಾಲುವೆಯ ಕಡೆಗೆ ಓಡತೊಡಗಿತು. ಬೇಕರಿಯಾತ ಅಯ್ಯೋ ಎಂತಾ ಕೆಲಸ ಆಗೋಯ್ತು ಸಾರ್... ಈ ಮುಂಡೇದಕ್ಕೆ ನಿಮ್ಮ ಬೈಕೆ ಬೇಕಾಗಿತ್ತೆ ಎಂದು ನುಡಿದು ಗಿರಾಕಿಯೊಬ್ಬನಿಗೆ ಟೀ ಕೊಡಲು ಕೈ ಚಾಚಿದ. ಅವನು ಎಲ್ಲಾ ನನ್ನ ಕರ್ಮ ಎಂದು ನುಡಿಯುತ್ತಾ ಹೆಲ್ಮೆಟ್ನ ಹತ್ತಿರ ಬಗ್ಗಿ ನೋಡಿದ. ನಾಯಿಯ ಮೂತ್ರ ಸರಿಯಾಗಿ ಹೆಲ್ಮೆಟ್‌ನ ಒಳಗೆ ಕೂತಿತ್ತು. ಹಾಗೂ ಅದರ ಒಳ ಭಾಗವೆಲ್ಲ ಮೂತ್ರದಿಂದ ಒದ್ದೆಯಾಗಿತ್ತು.

ಬೇಕರಿಯಾತ ಅವನ ಕಷ್ಟವನ್ನು ನೋಡಲಾಗದೆ ಸರ್ ನೀವು ಇಲ್ಲಿಂದ ನಡಕೊಂಡು ಹೆಬ್ಬಾಳ ಫ್ಲೈ ಓವರ್ ಹತ್ರ ಹೋಗಿ, ಜಾಮ್ ಆಗಿರೋದು ಅಲ್ಲಿತನಕ ಮಾತ್ರ. ಅಲ್ಲಿ ನಿಮಗೆ ಬೇಜಾನ್ ಬಸ್ಗಳು ಸಿಗ್ತಾವೆ. ನಾನು ಈಗ ನಿಮ್ಮ ಹೆಲ್ಮೆಟ್ ಮೇಲೆ ಒಂದು ಬಿಂದಿಗೆ ನೀರು ಸುರಿಯುತ್ತೇನೆ. ನೀವು ಸಂಜೆ ಬರುವ ವೇಳೆಗೆ ಅದೆಲ್ಲಾ ಒಣಗಿರುತ್ತೆ ಎಂದು ನುಡಿದ.

ಅವನು ಬೇಕರಿಯವನ ಕಡೆಗೇ ನೋಡತೊಡಗಿದ. ಬೇಕರಿಯಾತ ಅಯ್ಯೋ ಇದಕ್ಕೆಲ್ಲಾ ನೀವು ತಲೆ ಕೆಡಿಸ್ಕೋಬೇಡಿ ಹೋಗಿ ಸಾರ್... ಇದೆಲ್ಲಾನು ಜೀವ್ನಾನೆ ಹೋಗಿ ಹೋಗಿ ಎಂದು ಮತ್ತೆ ನುಡಿದ. ಅವನು ಏನೊಂದೂ ಮಾತನಾಡದೆ ತನ್ನ ಮೊಬೈಲನ್ನು ಕೈಗೆ ತೆಗೆದುಕೊಂಡು ಕಾಲ್ ಲಾಗ್ಸ್ ತೆಗೆದು ಕ್ಯಾಬ್ ಲೀಡರ್‌ನ ನಂಬರ್‌ನ ಮೇಲೆ ಬೆರಳನ್ನು ಒತ್ತಿ ಕಿವಿಯ ಬಳಿ ಇಟ್ಟುಕೊಂಡು ರಿಂಗ್ ರೋಡ್‌ನ ಕಡೆಗೆ ನಡೆಯತೊಡಗಿದ.
***
ಸಂಜೆ ಕೆಲಸ ಮುಗಿಸಿಕೊಂಡು ಮತ್ತೆ ತನ್ನ ಎಂದಿನ ಸ್ಟಾಪಿನಲ್ಲಿ ಇಳಿಯುವ ಹೊತ್ತಿಗೆ ಜೋರು ಮಳೆ ಹೊಯ್ಯುತ್ತಲಿತ್ತು. ಅವನು ಡ್ರೈವರ್‌ನ ಅನುಮತಿ ಪಡೆದು ಕ್ಯಾಬಿನಲ್ಲಿದ್ದ ದಿನ ಪತ್ರಿಕೆಯನ್ನು ತೆಗೆದುಕೊಂಡು ಕೆಳಗಿಳಿದ. ಹಾಗೆ ಇಳಿದವನೆ ದಿನಪತ್ರಿಕೆಯನ್ನು ತಲೆಯ ಮೇಲೆ ಕೊಡೆಯಂತೆ ಹಿಡಿದು ಹಾಸನ್ ಬೇಕರಿಯ ಕಡೆಗೆ ಓಡಿದ. ಹಾಸನ್ ಬೇಕರಿಯ ಮುಂದೆ ಮಳೆಯ ದೆಸೆಯಿಂದ ಜನ ಒತ್ತರಿಸಿಕೊಂಡು ನಿಂತಿದ್ದರು.

ಅಲ್ಲಿದ್ದವರಲ್ಲಿ ಬಹುಪಾಲು ಮಂದಿ ಟೀ ಗ್ಲಾಸನ್ನು ಕೈಯಲ್ಲಿ ಹಿಡಿದು ಸಿಗರೇಟಿನ ಹೊಗೆಯನ್ನು ಹಿತವಾಗಿ ಬಿಡುತ್ತಾ ಮಳೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ಮಳೆಯ ಆರ್ಭಟ ಮತ್ತಷ್ಟು ಜೋರಾಯಿತು. ರಸ್ತೆಯಗಲಕ್ಕೂ ಹರಿಯುತ್ತಿರುವ ನೀರು ಗುಂಡಿಗಳನ್ನು ಮರೆಮಾಚಿ ಸಮತಟ್ಟಿನ ಭ್ರಮೆಯನ್ನು ಹುಟ್ಟುಹಾಕಿತ್ತು. ಅವನು ತನ್ನ ಗಾಡಿಯ ಕಡೆಗೆ ನೋಡಿದ. ಹೆಲ್ಮೆಟ್ ಪೂರ್ತಿ ನೆನೆದು ಒಳಗೆ ನೀರು ತುಂಬಿಕೊಂಡಿತ್ತು.

ಬೆಳಗ್ಗೆ ನಾಯಿಯ ಉಚ್ಚೆಯನ್ನು ಬೇಕರಿಯಾತ ನಿಜವಾಗಲು ತೊಳೆದಿರುವನೆ. ಸದಾ ಬ್ಯುಸಿಯಿರುವ ಅವನಿಗೆ ತನ್ನ ಗಾಡಿಯ ಕಡೆಗೆ ಗಮನಕೊಟ್ಟಿರಲು ಸಾಧ್ಯವೆ ಎಂಬ ಅನುಮಾನ ಕಾಡತೊಡಗಿತು. ಆ ಅನುಮಾನದ ಒಟ್ಟೊಟ್ಟಿಗೆ ಹೇಗೂ ಜೋರು ಮಳೆ ಬೀಳುತ್ತಿದೆಯಲ್ಲ ನಾಯಿಯ ಉಚ್ಚೆಯಲ್ಲ ಕೊಚ್ಚಿಕೊಂಡು ಹೋಗಿರುತ್ತದೆ ಎಂಬುದೂ ಮನಸ್ಸಿಗೆ ಬಂದು ತುಸು ಸಮಾಧಾನಗೊಂಡ. ಹಾಗೆ ಸಮಾಧಾನಿಸಿಕೊಳ್ಳುತ್ತಲೆ ಒತ್ತರಿಸಿಕೊಂಡು ನಿಂತಿರುವ ಜನಗಳ ನಡುವೆ ನಿಧಾನಕ್ಕೆ ತೂರಿಕೊಂಡು ಬೇಕರಿಯ ಷೋಕೇಸಿನ ಮುಂದಕ್ಕೆ ಚಲಿಸಿದ. ಅದಕ್ಕೆ ಆತುಕೊಂಡೆ ನಿಂತುಕೊಂಡು ಮೇಲೆ ಇದ್ದ ಡಬ್ಬಿಯ ಮುಚ್ಚಳ ತೆಗೆದು ಒಂದು ನಿಪ್ಪಟ್ಟನ್ನು ಕೈಗೆ ತೆಗೆದುಕೊಂಡು ಕಡಿಯತೊಡಗಿದ.

ಬೇಕರಿಯಾತ ಸರ್ ನಿಮ್ಮ ಹೆಲ್ಮೆಟ್ಗೆ ಸುಮ್ನೆ ಒಂದು ಬಿಂದಿಗೆ ನೀರು ವೇಸ್ಟ್ ಆಯ್ತು... ಮಳೆ ಬರೋದು ಗೊತ್ತಿದ್ದಿದ್ರೆ ಹಾಕಕ್ಕೆ ಹೋಗ್ತಿರಲಿಲ್ಲ. ಒಂದ್ ಬಿಂದ್ಗೆ ನೀರಂದ್ರೆ ತಮಾಷೇನೆ ಬೆಂಗ್ಳೂರಲ್ಲಿ... ಹುಂ ಎಂದು ನುಡಿದು ತಾನು ಹೆಲ್ಮೆಟ್ಟನ್ನು ತೊಳೆದಿರುವ ವಿಷಯವನ್ನು ಅವನಿಗೆ ಮುಟ್ಟಿಸಿ ನೀರಿನ ಕಡೆಗೆ ತುಸು ಕಾಳಜಿಯನ್ನೂ ವ್ಯಕ್ತಪಡಿಸಿದ.

ಅವನು ಬೇಕರಿಯಾತನ ಮಾತಿಗೆ ಯಾವ ರೀತಿಯ ಭಾವವನ್ನೂ ವ್ಯಕ್ತಪಡಿಸದೆ ಒಂದು ಲೆಮೆನ್ ಟೀ ಕೊಡಲು ಹೇಳಿದ. ನಂತರ ಈ ಹಾಳಾದ ಮಳೆ ಈಗ್ಲೆ ಬರ್‌ಬೇಕಿತ್ತೆ... ರಾತ್ರಿಯೆಲ್ಲ ಬೀಳಬಹುದಿತ್ತಲ್ಲ. ಈ ನಗರದಲ್ಲಿ ಇಂತಾ ಟೈಮಲ್ಲಿ ಬಂದ್ಬಿಟ್ರೆ ಎಂಗೇಳಿ ಎಂದು ನುಡಿದ. ಬೇಕರಿಯ ಮುಂದೆ ಹರಡಿಕೊಂಡಿದ್ದ ಸಿಗರೇಟಿನ ಹೊಗೆ ಅವನ ಮೂಗಿಗೆ ಘಾಸಿ ಮಾಡಿತ್ತು. ಒಂದೇ ಸಮನೆ ಏಳೆಂಟು ಬಾರಿ ಸೀನಿ ಮುಖದ ಮುಂದಿದ್ದ ಹೊಗೆಯನ್ನು ಪಕ್ಕಕ್ಕೆ ಚದುರಿಸುವಂತೆ ಗಾಳಿಯಲ್ಲಿ ಕೈಯಾಡಿಸಿದ.

ನಂತರ ಸುತ್ತಲೂ ಒಮ್ಮೆ ಕಣ್ಣಾಡಿಸಿದ. ಅಲ್ಲಿ ನಿಂತಿದ್ದವರು ದಿನ ಪೂರ್ತಿ ದುಡಿದ ದಣಿವನ್ನು ಸಿಗರೇಟಿನ ಹೊಗೆಯ ಮುಖಾಂತರ ಹೊರ ಹಾಕಿ ನಿರಾಳರಾಗುತ್ತಿದ್ದರು. ಅವರಲ್ಲಿ ಒಬ್ಬ ತನ್ನ ಬಾಸನ್ನು ಮನಸಿಗೆ ತೋಚಿದ ಹಾಗೆ ಬಯ್ಯುತಲಿದ್ದ. ಮತ್ತೊಬ್ಬ ಆಫೀಸಲ್ಲಿ ಒಂದು ರೀತಿಯ ಟೆನ್ಶನ್ನು ಮನೇಲಿ ಮತ್ತೊಂದು ರೀತಿಯ ಟೆನ್ಶನ್ನು... ಹಾಳಾದ ಜನ್ಮ ಸಾಕಾಗಿ ಹೋಗಿದೆ ಎನ್ನುತ್ತಲಿದ್ದ. ಮತ್ತೊಬ್ಬ ಈ ಮಳೆ ನಿಂತ್ರೆ ಸಾಕ್ರಿ... ಪಾಪ ನನ್ಮಗಳು ನಂಗೋಸ್ಕರ ಕಾಯ್ತಿರ್ತಾಳೆ ಎನ್ನುತ್ತ ಆಕಾಶದ ಕಡೆಗೆ ನೋಡುತ್ತಲಿದ್ದ.

ಬೇಕರಿಯಾತ ಅವನಿಗೆ ಲೆಮನ್ ಟೀ ಕೊಟ್ಟು ಸಾರ್ ಮಳೇನ ಬೈಕೊಂಡ್ರೆ ಎಂಗೆ... ಯಾವ ಟೈಮಾದ್ರು ಪರವಾಗಿಲ್ಲ ಮಳೆ ಬರ್‌ಬೇಕು ಸಾರ್... ಬೆಂಗ್ಳೂರು ಕೊಚ್ಕೊಂಡ್ ಹೋದ್ರು ಪರವಾಗಿಲ್ಲ ಮಳೆ ಬರ್‌ಬೇಕು ಸಾರ್... ಮಳೇನ ಬೈಕೊಂಡ್ರೆ ಒಳ್ಳೇದಾಗಾಕಿಲ್ಲ ತಿಳ್ಕಳ್ಳಿ ಎಂದು ನುಡಿದು ಮತ್ಯಾರಿಗೊ ಸಿಗರೇಟ್ ಕೊಡತೊಡಗಿದ. ಅವನು ನಮ್ಮ ಕಷ್ಟ ಇವನ್ಗೇನ್ ಗೊತ್ತು ಎಂದುಕೊಳ್ಳುತ್ತ ಲೆಮನ್ ಟೀ ಕುಡಿಯತೊಡಗಿದ.

ಮಳೆ ಕಮ್ಮಿಯಾಗತೊಡಗಿತ್ತು. ಅವನು ಟೀ ಕುಡಿದು ಗ್ಲಾಸನ್ನು ಒಂದು ಡಬ್ಬದ ಮೇಲಿಟ್ಟು ಮೊಬೈಲ್ ತೆಗೆದು ವಾಟ್ಸ್ ಆಪ್ ಸಂದೇಶಗಳನ್ನು ನೋಡತೊಡಗಿದ. ಅಷ್ಟರಲ್ಲಿ ಮೊಬೈಲ್ ರಿಂಗಣಿಸತೊಡಗಿತು. ಆ ಕಡೆಯಿಂದ ಅವನ ಹೆಂಡತಿ ಗಾಬರಿಯಲ್ಲಿ ರೀ ಹಿಂದಗಡೆ ರೋಡಿನಲ್ಲಿರೊ ಚರ್ಚ್‌ನ ಎದುರಿಗಿರೊ ಕ್ರಿಸ್ತನ ವಿಗ್ರಹಾನ ಯಾರೊ ಹೊಡೆದಾಕಿದಾರಂತೆ... ಈ ಕಡೆಯೆಲ್ಲ ಜೋರು ಗಲಾಟೆ ನಡೀತಿದೆ.

ಪುಟ್ಟ ಆಟ ಆಡೋಕೆ ಅಂತ ಫ್ರೆಂಡ್ ಮನೇಗೆ ಹೋಗಿದ್ದಾನೆ. ಯಾರ ಮನೆ ಅಂತ ಗೊತ್ತಿಲ್ಲ... ಭಯ ಆಗ್ತಿದೆ ಎಂದು ಒಂದೇ ಗುಕ್ಕಿನಲ್ಲಿ ಹೇಳಿದಳು. ಅವನಿಗೆ ಈ ಹಿಂದೆ ಮರಿಯಣ್ಣ ಪಾಳ್ಯದಲ್ಲಿ ಇದೇ ರೀತಿಯ ಘಟನೆಯಿಂದ ಆದ ಗಲಾಟೆ ನೆನಪಿಗೆ ಬಂದು ಒಮ್ಮೆ ಮೈ ಸಣ್ಣಗೆ ಕಂಪಿಸಿತು. ಆಗ ಸರಿ ಸುಮಾರು ಒಂದು ವಾರ ಮನೆಯಿಂದ ಕದಲಲಾಗದಂತ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಉದ್ವಿಗ್ನತೆ ನಾಲಕ್ಕು ಜನರನ್ನು ಬಲಿ ತೆಗೆದುಕೊಂಡಿತ್ತು.

ಅದು ಮತ್ತೆ ಮರುಕಳಿಸುವ ಹಾಗಿದೆಯಲ್ಲ ಎಂದುಕೊಳ್ಳುತ್ತ ಗಾಡಿಯ ಕಡೆಗೆ ನಡೆದ. ಜೊತೆಗೆ ಮಗ ಬೇರೆ ಆಟ ಆಡಲು ಎಲ್ಲಿಗೋ ಹೋಗಿದ್ದಾನೆ ಅಂತ ಹೆಂಡತಿ ಬೇರೆ ತಿಳಿಸಿದ್ದಳು. ಹಾಗಾಗಿ ಅವನ ಮನಸಿನ ತುಂಬಾ ಮಗನೆ ತುಂಬಿಕೊಂಡು ನಾನಾ ರೀತಿಯ ಊಹೆಗಳಿಗೆ ತೆರದುಕೊಳ್ಳತೊಡಗಿದ. ನಡೆಯಬಾರದ್ದು ನಡೆದಿದ್ದರೆ ಅಥವ ನಡೆಯುವ ಹಂತದಲ್ಲಿದ್ದರೆ ಎಂಬ ಆತಂಕ ಅವನನ್ನು ಕಾಡಿ ದಟ್ಟ ಹೊಗೆಯೊಳಗೆ ನೂಕಿ ಉಸಿರು ಕಟ್ಟಿದಂತಾಯಿತು.

ಹೆಲ್ಮೆಟ್ ಅನ್‌ಲಾಕ್ ಮಾಡಿ ತೆಗೆದುಕೊಂಡ. ಅದು ಭಾರವಾಗಿತ್ತು. ಜೊತೆಗೆ ನೀರು ಸುರಿಯುತ್ತಲಿತ್ತು. ಅದನ್ನು ಸೈಡ್ ಮಿರರ್ ಮೇಲೆ ಕೂರಿಸಿದ. ತಲೆಯ ಮೇಲೆ ಇನ್ನೂ ಸಣ್ಣಗೆ ಮಳೆ ಹನಿಗಳು ಉದುರುತ್ತಲಿದ್ದವು. ಸೀಟಿನ ಮೇಲಿನ ನೀರನ್ನು ಒರೆಸುವ ಗೊಡವೆಗೆ ಹೋಗದೆ ಕುಳಿತುಕೊಂಡು ಸ್ಟಾರ್ಟ್ ಮಾಡಿದ. ಅಲ್ಲಿಂದ ಅವನ ಮನೆಯಿರುವುದು ಒಂದೂವರೆ ಕಿಲೊ ಮೀಟರ್ ದೂರದಲ್ಲಿ. ಮೂರ್ನಾಲ್ಕು ನಿಮಿಷದಲ್ಲಿ ಮನೆ ತಲುಪಬಹುದು ಎಂದುಕೊಳ್ಳುತ್ತ ಸಣ್ಣಗೆ ಹನಿಯುತ್ತಿರುವ ಮಳೆಯಲ್ಲಿ ಸಾಗತೊಡಗಿದ.

ತುಸು ದೂರ ಸಾಗಿದ್ದನಷ್ಟೆ. ಅವನನ್ನು ನೋಡಿ ಅಂಗಡಿಯೊಂದರ ಶೆಲ್ಟರ್ ಕೆಳಗಿದ್ದ ವ್ಯಕ್ತಿಯೊಬ್ಬ ರಸ್ತೆಗೆ ಬಂದು ಕೈ ಅಡ್ಡ ಹಾಕಿದ. ಮೊದಲೆ ಆತಂಕದಲ್ಲಿದ್ದ ಅವನು ಆ ವ್ಯಕ್ತಿಯು ಕೈ ಅಡ್ಡ ಹಾಕುತ್ತಿದ್ದಂತೆ ಮತ್ತಷ್ಟು ಭಯಗೊಂಡ. ಏನೋ ಹೆಚ್ಚು ಕಮ್ಮಿ ಆಗಲಿದೆ ಎಂಬ ಊಹೆ ಅವನಿಗೆ ಬೈಕಿನ ವೇಗವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು.

ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು ಮ್ಯಾನ್‌ಹೋಲ್ ಹೊಡೆದು ಹೊರಬರುತ್ತಿರುವ ನೀರನ್ನು ಹೊತ್ತುಕೊಂಡು ಭರದಲ್ಲಿ ಸಾಗುತ್ತಲಿತ್ತು. ತಾನು ಹೊತ್ತಿರುವುದು ಯಾವ ನೀರನ್ನು ಎಂಬ ಗೊಂದಲದಲ್ಲಿ ರಸ್ತೆ ಬಹುತೇಕ ಮರೆಯಾಗಿತ್ತು. ಅವನ ಗಾಡಿಯ ವೇಗ ಆ ಅಂತಹ ನೀರನ್ನು ಸೀಳಿಕೊಂಡು ಇಕ್ಕೆಲೆಗಳಿಗೆ ಮೋಹಕವಾಗಿ ಸಿಡಿಸುತ್ತ ಮುಂದೆ ಸಾಗತೊಡಗಿತು.

ಬಲಗಡೆಗಿದ್ದ ಸ್ಲಮ್ಮಿನ ಗುಡಿಸಲುಗಳು ಮಳೆಗೆ ಮೈತೆರೆದುಕೊಂಡು ಆಗ ತಾನೆ ಮೈ ವದರಿ ಕುಳಿತ ಹಕ್ಕಿಗಳಂತೆ ಪುಳಕದಲ್ಲಿ ಕುಳಿತಿದ್ದವು. ಅವನು ಸುಮಾರು ಇನ್ನೂರು ಮೀಟರ್‌ಗಳಷ್ಟು ದೂರ ಸಾಗುವ ಹೊತ್ತಿಗೆ ಅರೆ ತನಗೆ ಕೈ ಅಡ್ಡ ಹಾಕಿದ್ದು ಪಕ್ಕದ ಮನೆಯ ಜೇಮ್ಸ್ ಅಲ್ಲವೆ ಎಂದು ಹೊಳೆದು ಛೇ! ಎಂತ ಕೆಲಸ ಮಾಡಿಬಿಟ್ಟೆ ಎಂದುಕೊಳ್ಳುತ್ತ ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿ ಹಿಂದಕ್ಕೆ ತಿರುಗಿ ನೋಡಿದ. ಜೇಮ್ಸ್ ಆಟೋ ಒಂದನ್ನು ನಿಲ್ಲಿಸಿ ಹತ್ತುತ್ತಲಿದ್ದ. ಛೇ! ತನ್ನ ದಾವಂತದಲ್ಲಿ ತನಗೆ ಮನುಷ್ಯರ ಗುರುತೆ ಸಿಗುವುದಿಲ್ಲವಲ್ಲ ಎಂದುಕೊಳ್ಳುತ್ತ ಮತ್ತೆ ಮುಂದೆ ಸಾಗತೊಡಗಿದ.

ಅವನು ತನ್ನ ಮನೆಯ ಮುಂದೆ ಗಾಡಿ ನಿಲ್ಲಿಸುವ ವೇಳೆಗೆ ಹೆಂಡತಿ ಗೇಟಿನ ಬಳಿ ನಿಂತಿದ್ದಳು. ಮಳೆ ಸಂಪೂರ್ಣ ನಿಂತಿತ್ತು. ಮೇಲೆ ಫಲಗಟ್ಟಿರುವ ಮೋಡಗಳ ದಟ್ಟಣೆ ಜೋರಾಗಿಯೆ ಇತ್ತು. ಮನೆಯ ಮುಂದಿನ ಹೊಂಗೆ ಮರ ಮಳೆಹನಿಗಳ ಚುಂಬನದಿಂದ ನಾಚಿ ಮುದುಡಿ ಕುಳಿತಿರುವ ಹಾಗಿತ್ತು. ರಸ್ತೆ ಶುಭ್ರಗೊಂಡು ಮತ್ತಷ್ಟು ಕಪ್ಪುಗೊಂಡಿತ್ತು.

ಒಂದೆರಡು ಎರೆ ಹುಳುಗಳು ರಸ್ತೆಯ ಥಾರಿನ ಮೇಲೆ ನಿಧಾನಕ್ಕೆ ತೆವಳುತ್ತಲಿದ್ದವು. ಪಕ್ಕದ ರಸ್ತೆಯಲ್ಲಿ ಹೊಯ್ಸಳ ಜೀಪು ಓಡಾಡುವ ಸದ್ದು ಸ್ಪಷ್ಟವಾಗಿ ಕೇಳಿಸುವಂತಿತ್ತು.ಜೊತೆಗೆ ಒಂದಷ್ಟು ಕೂಗಾಟ. ಬಹುಶ ಚರ್ಚಿನ ಎದುರಿಗೆ ಪ್ರತಿಭಟನೆ ನಡೆಯುತ್ತಿರಬೇಕು ಎಂದುಕೊಂಡ. ಅವನು ಗಾಡಿಯನ್ನು ನಿಲ್ಲಿಸುತ್ತಿದ್ದಂತೆ ಬಳಿಗೆ ಓಡಿ ಬಂದ ಹೆಂಡತಿ ಪುಟ್ಟ ಪಕ್ಕದ ರಸ್ತೆಯ ಜೇಮ್ಸ್‌ನ ಮನೆಯಲ್ಲಿದ್ದಾನಂತೆ.

ಕ್ಯಾಥರಿನ್ ಫೋನ್ ಮಾಡಿದ್ದಳು. ಹೋಗಿ ಕರ್‌್ಕೊಂಡ್ಬನ್ನಿ ಎಂದು ನುಡಿದಳು. ಅವನಿಗೆ ಜೇಮ್ಸ್‌ನ ಹೆಸರು ಕೇಳಿಸುತ್ತಿದ್ದಂತೆ ಮೈ ಒಮ್ಮೆ ಸಣ್ಣಗೆ ಕಂಪಿಸತೊಡಗಿತು. ಮುಖ ತೋರಿಸುವುದಾದರು ಹೇಗೆ ಎಂದು ಅಂಜತೊಡಗಿದ. ತಲೆ ಬಗ್ಗಿಸಿ ನೆಲವನ್ನೆ ಸುಮಾರು ಹೊತ್ತು ನೋಡುತ್ತ ನಿಂತು ಬಿಟ್ಟ. ಹೆಂಡತಿ ಮಗನನ್ನು ಕರೆದುಕೊಂಡು ಬರುವಂತೆ ಮತ್ತೊಮ್ಮೆ ಎಚ್ಚರಿಸಿದಳು. ಅವನ ಮೈ ಮತ್ತೊಮ್ಮೆ ಕಂಪಿಸಿತು.

ಇಷ್ಟೊತ್ತಿಗೆ ಜೇಮ್ಸ್ ತನ್ನ ಮನೆಯನ್ನು ತಲುಪಿರಬಹುದಲ್ಲವೆ. ಅವನನ್ನು ಎದುರುಗೊಳ್ಳದಿರಲು ತನಗೆ ಬೇರೆ ದಾರಿಯೆ ಕಾಣುತ್ತಿಲ್ಲವೆ ಎಂದು ಯೋಚಿಸ ತೊಡಗಿದ. ಹಾಗೇ ನಿಧಾನಕ್ಕೆ ರಸ್ತೆಯ ನಡುವಿಗೆ ಬಂದ. ಒಮ್ಮೆ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರೆಳೆದುಕೊಂಡ.

ಜೇಮ್ಸ್‌ನನ್ನು ಯಾವ ವಿಧದಲ್ಲಿ ಎದುರುಗೊಳ್ಳಬೇಕು ಎಂಬ ಗೊಂದಲವನ್ನು ಹೊತ್ತುಕೊಂಡು ಮುಂದಡಿಯಿಟ್ಟ. ಅವನು ಅಡಿಯಿಟ್ಟ ಜಾಗದ ತುಸು ಪಕ್ಕಕ್ಕೆ ನಿಧಾನಕ್ಕೆ ತೆವಳುತ್ತಲಿರುವ ಎರೆಹುಳು ಅವನಿಗೆ ಸ್ಪಷ್ಟವಾಗಿ ಕಂಡಿತು. ಅವನ ನಡಿಗೆ ವೇಗ ಪಡೆದುಕೊಂಡಿತು. ಅವನು ಸೀದ ಜೇಮ್ಸ್‌ನ ಮನೆಯ ಮುಂದೆ ಬಂದು ನಿಂತ.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT