ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರೀತಿಯ ದಾರಿ

ಮಕ್ಕಳ ಕತೆ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಪ್ರಕಾಶ್‌ ಮೇಷ್ಟ್ರು ಪರಿಸರ ಪ್ರೇಮಿ. ಪಚ್ಚೆ–ಪೈರು ಅಂದ್ರೆ ಬಹಳ ಪ್ರೀತಿ. ಪಾಠದ ಜೊತೆ ಪರಿಸರ ಪ್ರಜ್ಞೆಯನ್ನೂ ಪೇರಿಸೋದು ಅವರ ಪರಿಪಾಠ. ಪಾಟಿ, ಚೀಲ, ಪೆನ್ನು ಪಕ್ಕಕ್ಕಿಡಿಸಿ ಆಗಾಗ್ಗೆ ಗಿಡ ಮರ, ಹಣ್ಣು ಹಂಪಲು, ಕ್ರಿಮಿ ಕೀಟ, ಹಕ್ಕಿಪಕ್ಕಿಗಳನ್ನು ವಿವರಿಸೋದು ಅಂದ್ರೆ ಬಹಳ ಇಷ್ಟ.

ವಾರದಲ್ಲಿ ಒಂದು ಅರ್ಧ ದಿನವಾದರೂ ಶಾಲೆಯ ಸುತ್ತಮುತ್ತ ಗಿಡ ನೆಡಿಸೋದು, ಪಾತಿ ಮಾಡಿಸೋದು, ನೀರು ಹನಿಸೋದು, ಕಳೆ ಕೀಳಿಸೋದು ಮುಂತಾದ ಶ್ರಮದಾನವನ್ನೂ ಮಾಡಿಸ್ತಾ ಇದ್ರು. ಹೀಗಾಗಿ ವಿದ್ಯಾರ್ಥಿಗಳಿಗೆ, ಮುಖ್ಯೋಪಾಧ್ಯಾಯರಿಗೆ, ಊರ ಹಿರಿಯರಿಗೆಲ್ಲ ಅವರೆಂದರೆ ಅಚ್ಚುಮೆಚ್ಚು. ಸರಳ ಜೀವಿ. ಸದಾ ಬಿಳಿ ಶರಟು, ಬಿಳಿ ಪೈಜಾಮಾ ಅವರ ಉಡುಪು.

ಅವರ ವಿಶೇಷತೆ ಏನಂದ್ರೆ ಮನೇಲೂ ಪ್ರಾಣಿ ಪಕ್ಷಿಗಳನ್ನು ಸಾಕಿರೋದು. ಬಗೆ ಬಗೆಯ ನಾಲ್ಕೈದು ಹಾವುಗಳೂ ಇವೆ. ಮನೆಗೆ ಬಂದವರಿಗೆಲ್ಲಾ, ‘ನೋಡಿ, ಈ ಹಾವನ್ನು ಬಾಲ ಹಿಡಿದೇ ಎತ್ತಬೇಕು, ಮತ್ತೆ ಮೇಲಕ್ಕೆ ಜಿಗಿದು ಕಚ್ಚಲು ಇದಕ್ಕೆ ಆಗದು. ಆದರೆ ಈ ಹಾವಿದೆ ನೋಡಿ, ಹೆಡೆಯ ಬಳಿಯೇ ಹಿಡೀಬೇಕು ಎಂದೆಲ್ಲ ವಿವರಿಸಿ ಅವುಗಳ ಲಕ್ಷಣ, ಸ್ವಭಾವ, ಜಾತಿ, ಆಕಾರ ಆಹಾರಗಳನ್ನೆಲ್ಲ ತಿಳಿಸುತ್ತಿದ್ದರು.

ಆಮೆ, ಉಡಗಳು, ಲವ್‌ ಬರ್ಡ್ಸ್, ಬಣ್ಣ ಬಣ್ಣದ ಮೀನು ಹೀಗೆಲ್ಲ ಅರ್ಧ ಮನೆ ತುಂಬ ಅವೇ ಇದ್ದುವು. ಕೆಲವು ಗಾಯಗೊಂಡು ಸಿಕ್ಕಾಗ ಉಪಚರಿಸಿ, ದಾರಿ ತಪ್ಪಿ ಬಂದಾಗ ಆದರಿಸಿ ಅವುಗಳನ್ನೂ ಸಾಕಿಕೊಂಡಿದ್ದರು. ಅವೂ ಕಾಡಿಗೆ ಮರಳದೆ ಉಳಿದುಕೊಂಡಿದ್ದವು! ಪ್ರಕಾಶ್‌ ಮೇಷ್ಟ್ರು ಅಂದ್ರೆ ಮಕ್ಕಳಿಗೂ ಪ್ರಾಣ. ಪ್ರತಿ ವರ್ಷ ಪರೀಕ್ಷೆಗೆ ಸಿದ್ಧವಾಗುವಾಗ ಪಾಠಗಳನ್ನು ಪುನರಾವರ್ತನೆ ಮಾಡಿ ತಲೆಗೆ ಹತ್ತಿಸೋರು.

ಅರ್ಧ ವಾರ್ಷಿಕದಲ್ಲೂ ಯಾರೂ ಅಡ್ಡದಾರಿ ಹಿಡಿಯೋ ಹಾಗಿಲ್ಲ. ಕಿರು ಪರೀಕ್ಷೆಗಳನ್ನೂ ಕಿರುನೋಟದಿಂದ ಕಡೆಗಣಿಸೋ ಹಾಗಿಲ್ಲ. ಪಾಠಗಳನ್ನು ಕವರ್‌ ಮಾಡುವುದರಲ್ಲೂ ಕಳಕಳಿ. ನಮಗಾವ ಕಿರಿಕಿರಿ ಆಗದ ಹಾಗೆ ತಯಾರಿ ಮಾಡಿಬಿಡೋರು. ಪಠ್ಯೇತರ ಚಟುವಟಿಕೆಗಳಲ್ಲೂ ಒಂದು ಕೈ ಮುಂದು!

ಈ ಬಾರಿ ‘ಪರಿಸರ ದಿನ’ ಹತ್ತಿರ ಬರ್ತಾ ಇದ್ದ ಹಾಗೇನೇ ಎಲ್ಲರನ್ನೂ ಹತ್ತಿರ ಕರೆದರು. ಸುತ್ತ ವೃತ್ತಾಕಾರವಾಗಿ ಕೂರಿಸಿಕೊಂಡರು. ನಡುವೆ ನಿಂತು ಹೇಳಿದರು. ‘ನೋಡ್ರಪ್ಪ, ಈ ಸಲ ಪರಿಸರ ದಿನಕ್ಕೆ ಒಂದು ಸ್ಪರ್ಧೆ ಇದೆ. ಹೆಚ್ಚು ಮಂದಿ ಭಾಗವಹಿಸಿ, ಬಹುಮಾನ ಪಡೀರಿ.’

‘ಅದೇನ್‌ ಹೇಳಿ ಸಾರ್‌. ಒಂದು ಕೈ ನೋಡೇ ಬಿಡ್ತೀವಿ’ ಅಂದ ನಾಗ. ‘ಹೂಂ ಸಾರ್‌, ನೀವು ಬೆರಳಿಟ್ಟು ತೋರಿಸಿ ಸಾಕು, ನಾವು ನುಗ್ಗಿಬಿಡ್ತೀವಿ’ ಕೂಗಿದ ಕರಿಯ! ‘ಇದು ಅಷ್ಟು ಸುಲಭ ಅಲ್ಲ ಕಣ್ರಯ್ಯಾ. ಪರಿಸರದಲ್ಲಿ ಸಿಗೋ ಹೂವು ಹಣ್ಣು, ಎಲೆ ಕಾಯಿ, ರೆಂಬೆ ಕೊಂಬೆಗಳನ್ನೇ ಉಪಯೋಗಿಸಿಕೊಂಡು ಕಲಾತ್ಮಕ ವಸ್ತುಗಳನ್ನು, ವಿನ್ಯಾಸಗಳನ್ನು ಮಾಡಿಕೊಂಡು ತರಬೇಕು. ಯಾರು ಚೆನ್ನಾಗಿ ತಯಾರಿಸಿಕೊಂಡು ಬರ್ತಾರೋ ನೋಡೋಣ. ಇದು ನಿಮಗೆ ಸವಾಲು ಅಂತ ತಿಳೀರಿ’ ಅಂದ್ರು ಮೇಷ್ಟ್ರು.

‘ನಿಮ್ಮ ಸವಾಲಿಗೆ ನಾವು ಜವಾಬು ಕೊಡ್ತೀವಿ ಸರ್‌. ಎಷ್ಟು ದಿನ ಕಾಲಾವಕಾಶ?’ ಕೇಳಿದ ಸುಬ್ಬು. ‘ಪರಿಸರದ ದಿನ ಬೆಳಿಗ್ಗೇನೆ ತರಬೇಕು. ಮಧ್ಯಾಹ್ನದವರೆಗೆ ಅವುಗಳನ್ನು ಪ್ರದರ್ಶನಕ್ಕಿಡಲಾಗುತ್ತೆ. ಮಧ್ಯಾಹ್ನ ಮೌಲ್ಯಮಾಪನ. ಸಂಜೆಗೆ ಬಹುಮಾನ ವಿತರಣೆ ಹಾಗೂ ಪರಿಸರದ ದಿನದ ಆಚರಣೆ’ ಅಂದ್ರು ಅವರು.

ಶಾಲೆಯ ನಂತರ ಸಂಜೆ ಮನೆ ಸೇರಿದಾಗಿನಿಂದ ಶುರುವಾಯ್ತು, ಎಲ್ಲರಿಗೂ ಕಾತರ, ಕುತೂಹಲ, ಕಳವಳ. ಗೆಳೆಯರೆಲ್ಲ ಕೂಡಿ ಪರಸ್ಪರ ಚರ್ಚೆ ಮಾಡಿದರು. ಹಿರಿಯರೊಂದಿಗೂ ಚರ್ಚಿಸಿದರು. ಕೆಲವರು ಕುಶಲ ಕರ್ಮಿ ಟೈಲರ್‌ ಆದೆಪ್ಪನಿಗೆ ‘ಪೂಸಿ’ ಹೊಡೆದರು. ಕೆಲವರಂತೂ ಅವನಿಗೆ ದುಂಬಾಲು ಬಿದ್ದರು. ಅವನಿಗೆ ಎಲ್ರೂ ತಿಂಡಿ ತಂದುಕೊಟ್ಟದ್ದೇ ತಂದುಕೊಟ್ಟದ್ದು! ಸುಕ್ಕಿನುಂಡೆ, ಚಕ್ಲಿ, ಕೋಡುಬಳೆ, ಒಗ್ಗರಣೆ ಪುರಿ, ಪಾಕದ ಕಡ್ಲೆ ಹೀಗೇ ಏನೇನೋ. ಅವನಿಗೂ ಹಿಗ್ಗೋ ಹಿಗ್ಗು!

ಹುಡುಗರಲ್ಲಿ ಐದು ಜನರನ್ನು ಅವನು ಆಯ್ಕೆ ಮಾಡಿದ. ಯಾರು ಯಾರು ಹೇಗೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಮಾಡೋ ಕೆಲಸ ಹೊಲಿಗೆ ಆಗಿದ್ದರೂ ಹುಡುಗರ ಜೊತೆ ಆಡೋ ರೂಢಿ ಇದ್ದದ್ದರಿಂದ ಎಲ್ಲರ ಜಾಯಮಾನ ಅವನಿಗೆ ಪರಿಚಿತ. ಕರಿಯ, ನಾಗ, ಸುಬ್ಬು, ಕಮಲ, ವಿಮಲ ಆಯ್ಕೆಯಾದರು. ಅದೆಪ್ಪ ನಾಗನನ್ನು ಕೇಳಿದ.

‘ನಿಮ್ಮ ತೋಟ ಇದೆ ಅಲ್ವೇನೋ? ನೀನು ತೆಂಗಿನ ಗರಿಗಳನ್ನು ತರಬೇಕು.’ ಸುಬ್ಬನಿಗೆ ಹೇಳಿದ, ‘ನೀವು ಗೋಧಿ ಬೆಳೀತೀರಿ ಅಲ್ವೇನೋ? ನೀನು ಗೋಧಿ ಕಡ್ಡಿಗಳನ್ನು ತಗೊಂಡು ಬಾ.’ ಕರಿಯನನ್ನು ಕರೆದ. ‘ಲೋ, ಬೀದಿ ಬದೀಲಿ ತೋಟಗಳ ಹಾದೀಲಿ ಕಡ್ಡಿ ಉದ್ದಕ್ಕೆ ಬೆಳೆದು, ತುದೀಲಿ ದುಂಡನೆ ಹೂವಿರುತ್ತೆ ಗೊತ್ತಲ್ಲ?’

ಕರಿಯ ಕೇಳಿದ, ‘ತಲೆ ಒಡೆಯೋ ಕಾಯಿ, ಬುರುಡೆ ಒಡೆಯೋ ಕಾಯಿ ಅಂತಾರಲ್ಲ, ಅದೇ ತಾನೇ?’ ‘ಹೌದಪ್ಪ, ಆ ಕಡ್ಡಿಗಳನ್ನು ಉದ್ದುದ್ದಕ್ಕೆ ಮುರಿದುಕೊಂಡು ನೀನು ತರಬೇಕು’ ಅಂದ. ಕಮಲಳಿಗೆ ಒಣಗಿದ ಜೋಳದ ಕಡ್ಡಿಗಳನ್ನು ತರಲು ಹೇಳಿದ. ವಿಮಲ, ‘ನಮಗೆ ತೋಟವಿಲ್ಲ, ತುಡಿಕೆ ಇಲ್ಲ. ನಾನೇನು ಮಾಡ್ಲಿ?’ ಎಂದು ಮುಖ ಸಪ್ಪೆ ಮಾಡಿಕೊಂಡಳು. ‘ಚಿಂತೆ ಮಾಡಬೇಡ ಕಣಮ್ಮ, ನಿಮ್ಮ ಮನೇಲಿ ಅಡಿಕೆ, ಉತ್ತುತ್ತೆ, ಗೋಡಂಬಿ ಇವೆಲ್ಲ ಇವೆ ತಾನೇ? ಅವನ್ನೇ ತಾ’ ಎಂದ ಅದೆಪ್ಪ.

ಆತ ಹೇಳಿದ ಹಾಗೆ ಅವರೆಲ್ಲ ಎಲ್ಲವನ್ನೂ ಸಂಗ್ರಹಿಸಿಕೊಂಡು ತಂದೇಬಿಟ್ರು! ‘ನೋಡ್ರಪ್ಪ, ಯಾವುದನ್ನೂ ನಾನು ತಯಾರಿಸಿಕೊಡೋಲ್ಲ. ಬರೀ ತೋರಿಸಿಕೊಡ್ತೀನಿ. ನೋಡ್ತಾ ನೋಡ್ತಾ ನೀವೇ ಸಿದ್ಧ ಮಾಡಬೇಕು, ತಿಳೀತಾ?’ ಎಲ್ರೂ ತಲೆ ತೂಗಿ ಒಪ್ಪಿಗೆ ಕೊಟ್ರು.

ನಾಗ ತಂದಿದ್ದ ತೆಂಗಿನ ಗರಿಗಳನ್ನು ಬಿಡಿಸಿಕೊಂಡ ಅದೆಪ್ಪ ಅವುಗಳಿಂದ ಕೈಗೆ ಕಟ್ಟಿಕೊಳ್ಳುವ ಗಡಿಯಾರ, ಊದಿದಾಗ ಸದ್ದು ಮಾಡುವ ಪೀಪಿ ಹಾಗೂ ಬೆರಳಾಡಿಸಿದಾಗ ಹಿಂದಕ್ಕೆ ಮುಂದಕ್ಕೆ ತಲೆ ಆಡಿಸುವ ಹಾವು ಇವುಗಳನ್ನೆಲ್ಲ ಹೆಣೆದ. ನಾಗ ನೋಡ್ತಾನೇ ತಾನೂ ಅವುಗಳನ್ನೆಲ್ಲ ತಯಾರಿಸಿದ.

ಸುಬ್ಬ ಗೋಧಿ ಕಡ್ಡಿಗಳನ್ನು ಹೊತ್ತುಕೊಂಡು ತಂದಿದ್ದ. ಅದರ ಸಿಪ್ಪೆಯನ್ನು ಸೀಳಿಕೊಂಡು ಅದೆಪ್ಪ ಗೋಡೆಗೆ ತೂಗುಹಾಕುವ ಫೋಟೋಗಳಿಗಾಗಿ ಮನೆ, ತೆಂಗಿನಮರ, ಗುಡಿಸಲು, ಸೂರ್ಯ, ಪಕ್ಷಿಗಳ ಚಿತ್ರಗಳನ್ನೆಲ್ಲ ಆ ಸಿಪ್ಪೆಯ ತುಂಡುಗಳನ್ನು ಅಳತೆಗೆ ತಕ್ಕಂತೆ ಕತ್ತರಿಸಿ ಮೆತ್ತಿದ. ಎರಡು ಸುಂದರವಾದ ಫೋಟೋಗಳಾದವು!

ಬೆರಳಿಂದ ಮೀಟಿ ತಲೆ ಹೊಡೆಯೋ ಹೂವುಗಳ ಕಡ್ಡಿಗಳನ್ನು ಕರಿಯ ಕಿತ್ತುಕೊಂಡು ಕೈತುಂಬ ಜೋಡಿಸಿಕೊಂಡು ತಂದಿದ್ದ. ಆದೆಪ್ಪ ಹೂವುಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸುತ್ತ ಆಯಾ ಕಡ್ಡಿಗಳನ್ನೇ ಪಕ್ಕಕ್ಕೆ ಸರಿಸುತ್ತ ಒಂದು ಆಕರ್ಷಕ ನೆಕ್ಲೆಸ್‌ ತಯಾರಿಸಿದ. ಕತ್ತಿನ ಬಳಿ ಇಟ್ಟುಕೊಂಡರೆ ಅದು ಒಂದು ಒಳ್ಳೆಯ ನೆಕ್ಲೆಸ್‌ ಹಾಗೆಯೇ ಕಾಣುತ್ತಿತ್ತು! ತಾನೂ ಅಂಥದ್ದನ್ನೇ ತಯಾರಿಸಿದ. ಅದನ್ನು ಎತ್ತಿ ಎತ್ತಿ ತೋರಿಸುತ್ತ ಕರಿಯ ಕುಣಿದಾಡಿದ.

ಕಮಲ ತಂದಿದ್ದ ಜೋಳದ ಕಡ್ಡಿಗಳ ಸಿಪ್ಪೆಗಳನ್ನು ಸೀಳಿದರು. ಅವುಗಳ ಜೊತೆ ಒಳತಿರುಳೂ ಬಳಕೆಯಾಗಿ ಗದೆ, ಎತ್ತಿನಗಾಡಿ, ಕನ್ನಡಕಗಳೆಲ್ಲ ಸಿದ್ಧವಾದುವು! ಕಮಲ ಕನ್ನಡಕವನ್ನು ಹಾಕಿಕೊಂಡು ಖುಷಿಯಾಗಿ ಚಪ್ಪಾಳೆ ತಟ್ಟಿದಳು. ಕಮಲ ಅಮ್ಮನಿಂದ ಪಡೆದು ಮನೆಯಿಂದ ತಂದಿದ್ದ ಅಡಕೆ, ಗೋಡಂಬಿ, ಉತ್ತುತ್ತೆಗಳನ್ನೆಲ್ಲ ಉಪಯೋಗಿಸಿಕೊಂಡು ವಾದ್ಯದ ಸೆಟ್‌, ಗಂಡು ಹೆಣ್ಣಿನ ಗೊಂಬೆಗಳನ್ನೆಲ್ಲ ಮಾಡಲಾಯಿತು. ಆ ಬೊಂಬೆಗಳನ್ನು ಕೂರಿಸಿ, ವಾದ್ಯದ ಸೆಟ್‌ನಿಂದ ತುತ್ತೂರಿ ತೆಗೆದುಕೊಂಡು ಊದಿ ವಿಮಲ ಅವುಗಳ ಮದುವೆ ಮಾಡಿದಳು!

‘ಪರಿಸರ ದಿನ’ದಂದು ಅವುಗಳನ್ನು ಶಾಲೆಯಲ್ಲಿ ಪ್ರದರ್ಶನಕ್ಕಿಟ್ಟರು. ಸಂಸ್ಥೆಯ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಪೋಷಕರು ನೋಡಿ ಮೆಚ್ಚಿದರು. ಇದು ನಿಜವಾದ ಪರಿಸರ ದಿನದ ಆಚರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಐದೂ ಜನರಿಗೆ ಬಹುಮಾನ ಕೊಡಲಾಗುವುದು ಎಂದು ಶಿಕ್ಷಕರು ತೀರ್ಪು ನೀಡಿದರು. ಪ್ರಕಾಶ್‌ ಮೇಷ್ಟ್ರು ಮತ್ತು ಅವರಿಗಿಂತ ಹೆಚ್ಚಾಗಿ ಐವರೂ ವಿದ್ಯಾರ್ಥಿಗಳು ಹೆಮ್ಮೆಪಟ್ಟರು. ತಯಾರಿಸಿದ್ದ ವಸ್ತುಗಳನ್ನು ಎಲ್ಲ ವಿದ್ಯಾರ್ಥಿಗಳೂ ಮುಟ್ಟಿ, ನೋಡಿ, ತೊಟ್ಟು ಖುಷಿಪಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT