ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮದ ದೃಷ್ಟಿಯ ಫಲ

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಲಿಂಗಾಯತವೆಂಬುದು ಪ್ರತ್ಯೇಕ ಧರ್ಮ ಎಂಬ ಮಾನ್ಯತೆ ಪಡೆಯಬೇಕು ಎಂಬ ಬೇಡಿಕೆ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಹಲವು ಸೂಕ್ಷ್ಮ ಪ್ರಶ್ನೆಗಳೂ ಎದ್ದಿವೆ. ವೀರಶೈವ ಮತ್ತು ಲಿಂಗಾಯತ ಎಂದರೆ ಒಂದೇಯೋ ಅಥವಾ ಬೇರೆಬೇರೆಯೋ ಅನ್ನುವುದು ಅಂಥ ಒಂದು ಪ್ರಶ್ನೆ. ಅದೇ ರೀತಿ ಇದು ಲಿಂಗಾಯತರಿಗೆ ಸಂಬಂಧಿಸಿದ ವಿಚಾರವಾದ್ದರಿಂದ ಇದರ ಬಗ್ಗೆ ಬೇರೆ ಸಮುದಾಯದವರಿಗೆ ಮಾತಾಡುವ ಹಕ್ಕಿಲ್ಲ ಎಂಬ ಮಾತುಗಳೂ ಇವೆ. ಹಾಗೆಯೇ ಇಂಗ್ಲಿಷಿನ ‘ರಿಲಿಜನ್’ ಎನ್ನುವುದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಧರ್ಮ’ ಎನ್ನುವ ಪದವನ್ನು ಬಳಸುವುದರಲ್ಲೂ ಗೊಂದಲವಿರುವ ಬಗ್ಗೆ ಈಗಾಗಲೇ ಬೇಕಾದಷ್ಟು ಚರ್ಚೆ ನಡೆದಿದೆ. ಈ ಲೇಖನದಲ್ಲಿ ಇಂಥ ಸೂಕ್ಷ್ಮ ಅಂಶಗಳ ಅಥವಾ ಪರಿಭಾಷೆಗಳ ಚರ್ಚೆಯನ್ನು ಮಾಡಲು ಹೋಗದೆ ಈ ರೀತಿಯ ಬೇಡಿಕೆಗಳಿಗೆ ಕಾರಣವಾಗುವ ಅಂಶಗಳೇನು ಮತ್ತು ಇಂಥ ಬೇಡಿಕೆಗಳನ್ನು ಈಡೇರಿಸುತ್ತ ಹೋಗುವುದು ಎಷ್ಟು ತೊಡಕಿನ ಸಂಗತಿ ಎಂಬ ಬಗೆಗಿನ ಯೋಚನೆಗಳನ್ನು ಹಂಚಿಕೊಳ್ಳಲಾಗಿದೆ.

ಈಗಿನ ಬೇಡಿಕೆ ಪ್ರತ್ಯೇಕ ‘ಧರ್ಮ’ಕ್ಕಾಗಿಯೇ ಇರುವುದರಿಂದ ಈ ಲೇಖನದಲ್ಲಿ ಧರ್ಮ ಎನ್ನುವ ಪದವನ್ನು ಬಳಸಲಾಗಿದೆಯಾದರೂ, ಪ್ರತ್ಯೇಕ ಧರ್ಮವಾಗಿ ಮಾನ್ಯತೆ ಸಿಗಬೇಕು ಎನ್ನುವಾಗ ಇಸ್ಲಾಂ, ಕ್ರೈಸ್ತ ಮುಂತಾದ ರಿಲಿಜನ್‍ಗಳಂತೆಯೇ ಒಂದು ಪ್ರತ್ಯೇಕ ರಿಲಿಜನ್ ಆಗಿ ಮಾನ್ಯತೆ ಸಿಗಬೇಕು ಎಂಬ ಬೇಡಿಕೆಯೇ ಇರುವುದು ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಬಸವಣ್ಣನವರನ್ನು ತಮ್ಮ ಧರ್ಮದ ಪ್ರವರ್ತಕರೆಂದೂ ವಚನಗಳನ್ನು ಧರ್ಮದ ಪವಿತ್ರ ಪಠ್ಯವೆಂದೂ ಸಾಧಿಸುವ ಯತ್ನಗಳು ಕಾಣುತ್ತಿವೆ.

ಲಿಂಗಾಯತ ಧರ್ಮದ ಪ್ರತ್ಯೇಕತೆಯ ವಾದ ಎಂದರೆ, ಅದು ಹಿಂದೂ ಧರ್ಮದ ಒಳಗಿಲ್ಲ ಎಂಬ ಎಂಬ ವಾದವೇ ಆಗಿರುವುದರಿಂದ ಹಿಂದೂ ಧರ್ಮದ ಕುರಿತಾಗಿ ನಡೆದ ಜಿಜ್ಞಾಸೆಗಳೂ ಇಲ್ಲಿ ಮುಖ್ಯವಾಗುತ್ತವೆ. ಹಿಂದೂ ಎಂಬ ಒಂದು ಧರ್ಮವಿಲ್ಲ; ಇರುವುದು ಜಾತಿಗಳು ಮಾತ್ರ ಎಂಬ ವಾದ ಹಳೆಯದು. ದಲಿತ ಚಿಂತಕರಾದ ಕಂಚ ಐಲಯ್ಯ ಅವರು ತಾವು ಹೇಗೆ ಹಿಂದೂ ಅಲ್ಲ ಎಂದು ಸಾಧಿಸುವ ಪುಸ್ತಕವನ್ನೇ ಬರೆದಿದ್ದಾರೆ. ರೊಮಿಲಾ ಥಾಪರ್ ಅವರ ಪ್ರಕಾರ ಹಿಂದೂ ಎಂಬುದು ‘ಕೇವಲ ಕಾಲ್ಪನಿಕವಾದ ಮತಧಾರ್ಮಿಕ ಪಂಥ’. ಎಜಾಜ್ ಅಹಮದ್ ಎಂಬ ಇನ್ನೊಬ್ಬ ಪ್ರಸಿದ್ಧ ಲೇಖಕರು ಹೇಳುವಂತೆ ‘ಭಾರತದ ಶೇಕಡ 80ಕ್ಕಿಂತಲೂ ಹೆಚ್ಚು ಜನ ಹಿಂದೂ ಎಂಬ ಒಂದು ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ್ದಾರೆ ಎಂದು ಹೇಳುವುದು, ನಿಜ ಹೇಳಬೇಕೆಂದರೆ ಮತಿಗೇಡಿತನ’. ಅಮರ್ತ್ಯ ಸೇನ್, ಆಶಿಶ್ ನಂದಿ ಹೀಗೆ ಭಾರತದ ಯಾವ ಮುಂಚೂಣಿ ಚಿಂತಕರನ್ನು ಪರಿಗಣಿಸಿದರೂ ಹೆಚ್ಚು ಕಡಿಮೆ ಇದೇ ಅಭಿಪ್ರಾಯವೇ ಕಾಣುತ್ತದೆ.

ಮೇಲಿನ ಚಿಂತಕರು ಹೇಳಿದ್ದೆಲ್ಲ ಸರಿಯೇ. ಆದರೆ ಇವರಾರೂ ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವರ್ಗೀಕರಣವನ್ನು ಮಾಡದೆ ಬಿಟ್ಟವರಲ್ಲ. ಹಾಗಿದ್ದರೆ ಹಿಂದೂಗಳನ್ನು ಬಹುಸಂಖ್ಯಾತರು ಎಂದು ತೀರ್ಮಾನಿಸಲು ಇವರು ಪರಿಗಣಿಸಿದ ಮಾನದಂಡಗಳು ಯಾವುವು? ನಮ್ಮ ನೀತಿ ನಿರೂಪಕರಾಗಲೀ ಸೆಕ್ಯುಲರ್ ಚಿಂತನೆಯಾಗಲೀ ಈ ಪ್ರಶ್ನೆಯನ್ನು ಕಳೆದ ಎಪ್ಪತ್ತು ವರ್ಷಗಳಲ್ಲಿ ಕೇಳಿಕೊಳ್ಳಲೇ ಇಲ್ಲ. ತಾತ್ಪರ್ಯವೆಂದರೆ, ಹಿಂದೂ ಎಂಬ ವರ್ಗದ ಗುಣಲಕ್ಷಣಗಳೇನು ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲದೆ ಅಂಥ ಒಂದು ವರ್ಗವನ್ನು ಪರಿಕಲ್ಪಿಸಲಾಗಿದೆ ಮತ್ತು ಅದನ್ನು ಒಂದು ಬಹುಸಂಖ್ಯಾತ ಗುಂಪೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ವೇದಗಳನ್ನು ನಂಬುವವರು ಹಿಂದೂಗಳು; ಹಿಂದೂ ಎಂಬುದು ಒಂದು ಜೀವನ ವಿಧಾನ ಎಂದು ಮುಂತಾಗಿ ವಿವಿಧ ಅಭಿಪ್ರಾಯಗಳು ವ್ಯಕ್ತವಾದುದುಂಟು. ಆದರೆ ಆ ಜೀವನವಿಧಾನದ ಲಕ್ಷಣಗಳೇನು? ಅದು ಸ್ಪಷ್ಟವಿಲ್ಲ.

ಭಾರತದಲ್ಲಿ ಮತಧರ್ಮಗಳ ಬಗ್ಗೆ ನೀತಿ ನಿರೂಪಣೆ ಮಾಡುವಾಗ ಕೊನೇ ಪಕ್ಷ ಸ್ವಾತಂತ್ರ್ಯ ಬಂದ ಬಳಿಕವಾದರೂ ಸಾಮಾಜಿಕ ವಾಸ್ತವಗಳನ್ನು ಮತ್ತು ತರ್ಕ-ವೈಚಾರಿಕತೆಯನ್ನು ಅವಲಂಬಿಸಬೇಕಿತ್ತು. ಆದರೆ ಅದರ ಬದಲು ತಪ್ಪು ಗ್ರಹಿಕೆಗಳನ್ನು ಆಧರಿಸಿದ್ದರಿಂದ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆಶ್ಚರ್ಯ ಮತ್ತು ದುಃಖದ ಸಂಗತಿಯೆಂದರೆ ಇಂಥ ವಿಚಾರಗಳಲ್ಲಿ ರಾಜಕಾರಣಿಗಳಿರಲಿ, ಸಮಾಜಶಾಸ್ತ್ರಜ್ಞರು, ಸಾಹಿತಿಗಳು ಮತ್ತು ಚಿಂತಕರೆನಿಸಿಕೊಂಡವರು ಕೂಡ ನಿಜವಾದ ತರ್ಕವನ್ನು ಬಳಸದೇ ಇರುವುದು. ಮತಧರ್ಮಗಳ ಬಗ್ಗೆ ನಮ್ಮ ದೇಶದ ನೀತಿಗಳು ಎರಡು ದೊಡ್ಡ ತಪ್ಪು ಕಲ್ಪನೆಗಳ ಮೇಲೆ ನಿಂತಿವೆ.

ಹಿಂದೂಗಳು ಬಹುಸಂಖ್ಯಾತರು ಎಂಬುದು ಒಂದು. ಸಂಖ್ಯೆಯಲ್ಲಿ ಕಡಿಮೆ ಇದ್ದವರು ಇತರರಿಂದ ದಬ್ಬಾಳಿಕೆಗೆ ಒಳಗಾಗುತ್ತಾರೆ ಎಂಬುದು ಇನ್ನೊಂದು. ಸಂಖ್ಯೆ ಕಡಿಮೆ ಇದ್ದವರಿಗೆ ಕಷ್ಟ ಎನ್ನುವುದು ನಿಜವಾಗಿದ್ದರೆ, ಇಂದು ಬ್ರಾಹ್ಮಣರು ದೇಶದಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇರಬೇಕಿತ್ತು. ಪಾರ್ಸಿಗಳು ದಬ್ಬಾಳಿಕೆಯಿಂದ ಓಡಿಹೋಗಬೇಕಿತ್ತು. ಕಡಿಮೆ ಸಂಖ್ಯೆಯಲ್ಲಿರುವವರನ್ನು ಹಿಂಸಿಸುವುದು ಭಾರತದ ಜಾಯಮಾನವೇ ಅಲ್ಲ. ದೌರ್ಜನ್ಯಕ್ಕೆ ಒಳಗಾಗಲು ಸಂಖ್ಯೆ ಕಡಿಮೆಯಿರಬೇಕು ಅಂತೇನಿಲ್ಲ. ದಲಿತರ ಸಂಖ್ಯೆಯೇನು ಕಡಿಮೆಯಿದೆಯೇ?

ದೇಶದ ಸರ್ಕಾರಿ ದಾಖಲೆಗಳಲ್ಲಿ ಅಥವಾ ಜನಗಣತಿಯಲ್ಲಿ, ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು, ಜೈನರು, ಬೌದ್ಧರು ಹೀಗೆ ರಿಲಿಜನ್ ಅಥವಾ ಮತಧರ್ಮಗಳ ಆಧಾರದಲ್ಲಿ ಯಾವೆಲ್ಲ ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳು ಎಂದು ಹೆಸರಿಸಲಾಗಿದೆಯೋ ಅಂಥವುಗಳಿಗೆ ಸೇರದವರನ್ನು, ಅಂದರೆ ದಲಿತರು, ಒಕ್ಕಲಿಗರು, ಬ್ರಾಹ್ಮಣರು, ಬಂಟರು, ಯಾದವರು, ಕಾಯಸ್ಥರು ಹೀಗೆ ನೂರಾರು ಜಾತಿಗಳನ್ನು ಹಿಂದೂ ಎಂಬ ಒಂದೇ ಕೊಡೆಯಡಿಯಲ್ಲಿ ಪರಿಗಣಿಸಲಾಗುತ್ತದೆ. ಸದ್ಯದ ಮಟ್ಟಿಗೆ ಲಿಂಗಾಯತರೂ ಇದೇ ವರ್ಗದಲ್ಲಿ ಬರುತ್ತಾರೆ. ಒಟ್ಟಿನಲ್ಲಿ, ಇಂದು ನಾವು ಹಿಂದೂಗಳೆಂದು ಕರೆಯುವ ಸಮುದಾಯಗಳಿಗೆಲ್ಲ ಸಮಾನವಾದ ಗುಣಲಕ್ಷಣಗಳನ್ನು ಕಂಡುಕೊಳ್ಳುವ ಯತ್ನ ಪ್ರಾಯಶಃ ನಡೆಯಲೇ ಇಲ್ಲ. ಗೀತೆ, ವೇದ ಅಥವಾ ವಿವೇಕಾನಂದರಂಥವರು ಪ್ರತಿಪಾದಿಸಿದ ವೇದಾಂತವಾಗಲೀ ಎಲ್ಲ ‘ಹಿಂದೂಗಳ’ ಅಸ್ಮಿತೆಯ ಭಾಗವಂತೂ ಖಂಡಿತಾ ಆಗಿರಲಿಲ್ಲ ಮತ್ತು ಆಗಿಯೂ ಇಲ್ಲ.

ಹಾಗಿದ್ದರೆ ಹಿಂದೂಗಳಲ್ಲಿ ಸಮಾನ ಅಂಶಗಳಿಲ್ಲವೇ? ಖಂಡಿತವಾಗಿಯೂ ಇವೆ. ಭಾರತದಾದ್ಯಂತ ಇರುವ, ಬುಡಕಟ್ಟಿನವರು ಮತ್ತು ದಲಿತರಿಂದ ಹಿಡಿದು ಬ್ರಾಹ್ಮಣರವರೆಗೆ ಎಲ್ಲ ಜಾತಿಗಳಿಗೂ ಅನ್ವಯಿಸುವ ಕೆಲವು ಸಾಮಾನ್ಯ ಲಕ್ಷಣಗಳಿವೆ. ಅವು ಲಿಂಗಾಯತರಿಗೂ ಸ್ಪಷ್ಟವಾಗಿ ಅನ್ವಯವಾಗುತ್ತವೆ.

ಒಂದನೆಯದಾಗಿ, ಹಿಂದೂ ಎಂಬ ಒಂದು ಚೌಕಟ್ಟಿಲ್ಲದ ವ್ಯಾಪಕ ಗುಂಪಿನಲ್ಲಿ ಪರಿಗಣಿಸಲಾದ ಸಮುದಾಯಗಳು ಇಸ್ಲಾಂ, ಕ್ರೈಸ್ತ ರಿಲಿಜನ್ನುಗಳಂತೆ, ಅನುಸರಿಸಲೇಬೇಕಾದ ಒಂದು ಪವಿತ್ರ ಗ್ರಂಥವನ್ನು ಹೊಂದಿಲ್ಲ. ವಚನ, ವೇದ, ಗೀತೆಯಂಥವುಗಳನ್ನು ಕೆಲವರು ಪವಿತ್ರವೆಂದು ಪರಿಗಣಿಸುತ್ತಾರಾದರೂ ಅವುಗಳು ಹಿಂದೂಗಳ ಮೇಲೆ ನಿರ್ಣಾಯಕ ಹಿಡಿತ ಹೊಂದಿಲ್ಲ. ಅಷ್ಟೇ ಅಲ್ಲ ಅವುಗಳು ವಿಮರ್ಶೆಗೆ, ವಿಶ್ಲೇಷಣೆಗೆ ಮತ್ತು ಟೀಕೆಗೆ ಅತೀತವೂ ಅಲ್ಲ.

ಎರಡನೆಯದಾಗಿ ಮತ್ತು ಅತ್ಯಂತ ಮುಖ್ಯವಾಗಿ, ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡನ್ನೂ ಪೂಜನೀಯ ಎಂದು ಪರಿಗಣಿಸುವುದು ಈ ಎಲ್ಲ ಸಂಪ್ರದಾಯಗಳಲ್ಲಿ ಕಾಣುವ ಲಕ್ಷಣ. ವಚನಗಳು ಏನೇ ಹೇಳಲಿ, ಲಿಂಗಾಯತರು ಬದುಕಿಕೊಂಡು ಬರುತ್ತಿರುವ ರೀತಿ ಕೂಡ ಇದಕ್ಕೆ ಹೊರತಲ್ಲ.
ಮೂರನೆಯದಾಗಿ, ದೇವ ದೇವತೆಗಳನ್ನು ಮನುಷ್ಯರನ್ನಾಗಿ ಗ್ರಹಿಸುವುದು ಅಥವಾ ಪರಿವರ್ತಿಸುವುದು ಮತ್ತು ಮನುಷ್ಯರು ಜೀವಂತವಾಗಿ ಇದ್ದಾಗ ಅಥವಾ ಸತ್ತ ಬಳಿಕ ಪೂಜ್ಯರು ಎನಿಸಿಕೊಳ್ಳುವುದು. ಅವತಾರಗಳ ಕಲ್ಪನೆ, ಪಿತೃಗಳ ಕಲ್ಪನೆ, ಭೂತಾರಾಧನೆಯಂಥ ಆಚರಣೆಗಳು, ಹರಿಹರನ ರಗಳೆಗಳಲ್ಲಿ ಶಿವ ಬರುವುದು, ಭಕ್ತರು ಕೈಲಾಸಕ್ಕೆ ಏರುವುದು, ಸ್ವಾಮೀಜಿಗಳು ಪೂಜ್ಯರಾಗುವುದು ಇವೆಲ್ಲವನ್ನೂ ಇಲ್ಲಿ ನೆನಪು ಮಾಡಿಕೊಳ್ಳಬಹುದು. ಮನುಷ್ಯರ ಕಾಲು ಮುಟ್ಟಿ ನಮಸ್ಕಾರ ಮಾಡುವುದು ಅಥವಾ ಇನ್ನಿತರ ರೀತಿಗಳಲ್ಲಿ ಪೂಜ್ಯಭಾವ ಪ್ರದರ್ಶಿಸುವುದು ಈ ಸಂಪ್ರದಾಯಗಳಿಗೆ ವಿಶಿಷ್ಟವಾದುದು.

ನಾಲ್ಕನೆಯದಾಗಿ, ಬಹುದೇವತೆಗಳು ಮತ್ತು ಗಂಡು ದೇವತೆಗಳಿರುವಂತೆಯೇ ಹೆಣ್ಣು ದೇವತೆಗಳಿರುವುದು. ಪ್ರಾಣಿ ಪಕ್ಷಿಗಳ ರೂಪದಲ್ಲೂ ದೇವತೆಗಳು ಇರುವುದು. ಐದನೆಯದಾಗಿ, ಲಿಖಿತ ಮತ್ತು/ಅಥವಾ ಮೌಖಿಕ ಪುರಾಣಗಳ ಸೃಷ್ಟಿ, ಮರುಸೃಷ್ಟಿ ಮತ್ತು ವಿಮರ್ಶೆ ನಡೆಯುವುದು.

ಮೇಲೆ ಹೇಳಿದವುಗಳು ಒಂದಕ್ಕೊಂದು ಸಂಬಂಧವಿರುವ ಮತ್ತು ಪೂರಕವಾದ ಗುಣಲಕ್ಷಣಗಳೇ ಆಗಿವೆ. ಇವು ಬಹುಸಂಸ್ಕೃತಿಗಳಿಗೆ ಧಕ್ಕೆ ತರುವ ಸಾಮರ್ಥ್ಯವಿಲ್ಲದ ಮತ್ತು ಅನ್ಯಸಂಸ್ಕೃತಿಗಳಿಗೆ ಅಪಾಯಕಾರಿಯಾಗುವ ಸಾಮರ್ಥ್ಯವಿಲ್ಲದ ಗುಣಗಳು. ವೈಚಾರಿಕತೆಗೂ ವೈಜ್ಞಾನಿಕತೆಗೂ ಅಡ್ಡಿಯಾಗದ ರೀತಿಯ ಗುಣಗಳು. ಹೀಗಾಗಿಯೇ ಹಿಂದೂ ಧರ್ಮದ ಅವಿಭಾಜ್ಯ ಅಂಗಗಳು ಅಂತ ಗುರುತಿಸಬಹುದಾದ ಅಂಶಗಳನ್ನು ಪಟ್ಟಿ ಮಾಡುವುದು ಕಷ್ಟದ ಕೆಲಸ. ಮೇಲೆ ಹೇಳಿದ ಗುಣಲಕ್ಷಣಗಳು ಬಹುಮಟ್ಟಿಗೆ ಜೈನ, ಬೌದ್ಧರಿಗೂ ಅನ್ವಯಿಸುತ್ತವೆ ಅಂದಮೇಲೆ ಲಿಂಗಾಯತರಿಗೆ ಅನ್ವಯಿಸುತ್ತವೆ ಎಂದು ಬೇರೆ ಹೇಳಬೇಕಿಲ್ಲ. ಇಂಥ ತೆರೆದ ಸಂಪ್ರದಾಯಗಳ ಮೇಲೆ ರಿಲಿಜನ್ನಿನ ಒತ್ತಡ ಕಾಲಕಾಲಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಬೀಳುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಹಿಂದುತ್ವವಾದದಲ್ಲಿ ಅಸಹಿಷ್ಣುತೆಯಿದೆ ಎಂದರೆ, ಅದನ್ನು ಒಂದು ರಿಲಿಜನ್ ಆಗಿ ಪರಿವರ್ತಿಸುವ ಯತ್ನ ನಡೆಯುತ್ತಿದೆ ಎಂದು ಅರ್ಥ. ಇನ್ನಷ್ಟು ಬಿಡಿಸಿ ಹೇಳುವುದಾದರೆ ಹಿಂದೂಗಳನ್ನು ಸೆಕ್ಯುಲರ್‍ವಾದವು ಒಂದು ದಮನಕಾರಿ ಬಹುಸಂಖ್ಯಾತ ಗುಂಪು ಆಗಿ ಪರಿಗಣಿಸಿತು. ಈ ಪರಿಗಣನೆಯನ್ನಾಧರಿಸಿ ಅಲ್ಪಸಂಖ್ಯಾತತ್ವದ ಕುರಿತಾಗಿ ಕಟ್ಟಿದ ಕಥನಗಳು ಹಾಗೂ ಆ ಮೂಲಕ ರೂಪಿಸಿದ ನೀತಿಗಳು ಇಂದು ಒಂದೆಡೆ ರಿಲಿಜನ್ನುಗಳಲ್ಲದವುಗಳನ್ನು ರಿಲಿಜನ್ನುಗಳನ್ನಾಗಿಸಲು ಒತ್ತಾಯಿಸಿದರೆ ಇನ್ನೊಂದೆಡೆ ಎಲ್ಲರೂ ಅಲ್ಪಸಂಖ್ಯಾತರ ಸ್ಥಾನಮಾನಕ್ಕಾಗಿ ಹಂಬಲಿಸುವಂತೆ ಒತ್ತಾಯಿಸುತ್ತವೆ. ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಕೂಡ ಇಂಥದ್ದೇ ಒಂದು ಫಲಶ್ರುತಿ.

ಈ ದೇಶದಲ್ಲಿ ಜಾತಿತಾರತಮ್ಯ ಇತ್ತು ಮತ್ತು ಇದೆ. ಅದು ಕಡಿಮೆಯಾಗಿದ್ದರೂ ನಿರ್ಮೂಲನವಾಗಿಲ್ಲ ನಿಜ. ಆದರೆ ಭಾರತೀಯ ಪರಂಪರೆಯಲ್ಲಿ ತೆರೆದುಕೊಳ್ಳುವ ಸ್ವಭಾವವಿದೆ. ಎಂ. ಎನ್. ಶ್ರೀನಿವಾಸರು ಹೇಳಿದ ಸಂಸ್ಕೃತೀಕರಣ ಪರಿಕಲ್ಪನೆಯ ಬಗ್ಗೆ ಏನೇ ಚರ್ಚೆ ಅಥವಾ ಆಕ್ಷೇಪಗಳಿರಲಿ, ಅಲ್ಲೂ ವ್ಯಕ್ತವಾಗುವುದು ಈ ತೆರೆದುಕೊಳ್ಳುವ ಸ್ವಬಾವವೇ. ಇದು ಹೆಗ್ಗಳಿಕೆಯೋ ಔದಾರ್ಯವೋ ಆಗಬೇಕಿಲ್ಲ. ಬೇರೆಯವರನ್ನು ತಮ್ಮೆಡೆಗೆ ತಿರುಗಿಸಲು ಈ ಸಂಪ್ರದಾಯಗಳಿಗೆ ಸುಲಭದಲ್ಲಿ ಸಾಧ್ಯವಾಗದು. ಅದು ಈ ಸಂಪ್ರದಾಯಗಳ ದೌರ್ಬಲ್ಯವೆಂದು ಬೇಕಾದರೂ ಕರೆಯಬಹುದು. ಇವೆಲ್ಲವೂ ಭಾರತದ ಅಸಂಖ್ಯ ಜಾತಿಗಳ ಮಟ್ಟಿಗೆ ಹೇಗೆ ನಿಜವೋ ಹಾಗೆಯೇ ಲಿಂಗಾಯತರ ಮಟ್ಟಿಗೂ ನಿಜ. ಹೀಗಾಗಿಯೇ, ತಿರುಪತಿ ತಿಮ್ಮಪ್ಪನಲ್ಲಿಗೆ ಅಥವಾ ಉಡುಪಿ ಕೃಷ್ಣನಲ್ಲಿಗೆ ಭೇಟಿ ಕೊಡುವುದು ಪಾಪಕಾರ್ಯವೆಂದು ಲಿಂಗಾಯತರು ಪರಿಗಣಿಸುವುದಿಲ್ಲ.

ಹಿಂದೂಗಳು ಶತಮಾನಗಳಿಂದ ನಡೆದುಕೊಂಡು ಬಂದ ರೀತಿಯಲ್ಲಿಯೇ ಒಳವಿಮರ್ಶೆ, ಒಳಬಂಡಾಯ, ಸುಧಾರಣೆಗಳಿಗೆ ಅವಕಾಶಗಳು ಸಹಜವಾಗಿಯೇ ಉಂಟಾಗಿವೆ. ಹೀಗಾಗಿಯೇ ಅದ್ವೈತ, ದ್ವೈತ ಮುಂತಾದ ಮತಗಳು, ದಾಸಪರಂಪರೆಯಂಥ, ತತ್ವಪದಗಳಂಥ ಪರಂಪರೆಗಳು ರೂಪುಗೊಂಡವು. ಆದರೆ ಇವೆಲ್ಲವುಗಳಿಗಿಂತ ಹೆಚ್ಚು ಸ್ಪಷ್ಟವಾದ ರೂಪದಲ್ಲಿ ಹನ್ನರಡನೇ ಶತಮಾನದಲ್ಲಿ ಶರಣರ ಚಳುವಳಿ ಎಲ್ಲ ಜಾತಿಗಳ ಮೇಲೆ ಪ್ರಭಾವ ಬೀರಿತು. ಎಲ್ಲ ಜಾತಿಗಳಿಂದ ಬಂದವರು ಲಿಂಗವೆಂಬ ಒಂದೇ ಗುರುತಿಗೆ ಶರಣಾದರು ಎಂಬ ನಿಟ್ಟಿನಲ್ಲಿ ಲಿಂಗಾಯತ ಅಥವಾ ವೀರಶೈವ ಮತ ಅಥವಾ ಸಂಪ್ರದಾಯಗಳ ಹುಟ್ಟಿಗೆ ಅದ್ವೈತ, ದ್ವೈತ ಇತ್ಯಾದಿ ಮತ-ಸಂಪ್ರದಾಯಗಳಿಗಿಂತ ಹೆಚ್ಚಿನ ಮಹತ್ವ ಇದೆ. ಹೀಗಾಗಿ ಲಿಂಗಾಯತರ ಬೇಡಿಕೆಯನ್ನು ತಪ್ಪೆಂದು ಹೇಳಲು ಯಾವುದೇ ತರ್ಕವಿಲ್ಲ. ಆದರೆ ಭಾರತದಲ್ಲಿ ಜಾತಿಗಳು ಅದಕ್ಕಿಂತಲೂ ಪೂರ್ವದ ಮತ್ತು ಆನಂತರ ಕೂಡ ಇರುವ ವಾಸ್ತವ. ಅವುಗಳೆಲ್ಲ ಪ್ರತ್ಯೇಕತೆಯನ್ನು ಕೇಳಿದರೂ ವಿರೋಧಿಸಲು ತರ್ಕವಿಲ್ಲ.

ಅದೇ ರೀತಿ, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ನಾರಾಯಣಗುರುಗಳು ಹೀಗೆ ಒಬ್ಬೊಬ್ಬರು ಹೇಳಿದ ಅಥವಾ ಬರೆದ ಮಾತುಗಳೆಲ್ಲ ತಮ್ಮ ತಮ್ಮ ಪವಿತ್ರ ಪಠ್ಯಗಳೆಂದೂ ತಮ್ಮದೆಲ್ಲ ಪ್ರತ್ಯೇಕ ಧರ್ಮವೋ ಮತವೋ ಆಗಿದೆಯೆಂದೂ ಯಾರಾದರೂ ವಾದಿಸಿದರೆ, ಅದನ್ನು ವಿರೋಧಿಸಲು ಏನು ತರ್ಕವಿದೆ? ಹಾಗೆ ನೋಡಿದರೆ, ಒಂದು ಪ್ರತ್ಯೇಕ ಧರ್ಮ ಎಂದು ಗುರುತಿಸಲು ಒಬ್ಬ ಪ್ರವಾದಿ, ಒಂದು ನಿರ್ದಿಷ್ಟ ಗ್ರಂಥ ಇರಬೇಕೆಂಬ ಅಥವಾ ಮತಾಂತರ ಮಾಡುವ ತತ್ವವಿರಬೇಕೆಂಬ ಯಾವುದೋ ವಿದೇಶೀ ಮಾನದಂಡವನ್ನು ಯಾಕೆ ಒಪ್ಪಬೇಕು? ಅಥವಾ ಇಂತಿಷ್ಟೇ ಪ್ರಾಚೀನ ಕಾಲದಲ್ಲಿ ಪ್ರವಾದಿಯೊಬ್ಬ ಆಗಿ ಹೋಗಿರಬೇಕು ಎಂಬ ನಿಯಮವೇಕೆ? ಆಯಾ ಗುಂಪು ಅಥವಾ ಸಮುದಾಯಗಳಲ್ಲಿ ಪ್ರತ್ಯೇಕತೆಯ ಭಾವ ಇದ್ದರೆ ಸಾಲದೇ?! ಬಹುಸಂಸ್ಕೃತಿಗಳಿಗೆ ಮಾನ್ಯತೆ ಎಂದರೆ ಇನ್ನೇನು? ಈಗಲೂ ಯಾರೋ ಒಬ್ಬ ದೇವಮಾನವನ ಅನುಯಾಯಿಗಳು ನಾವು ಬೇರೆ ಎಂದರೆ ಯಾಕೆ ಮತ್ತು ಹೇಗೆ ವಿರೋಧಿಸಬೇಕು? ಕೋಲ್ಕತ್ತದ ವಿವೇಕಾನಂದರ ಅನುಯಾಯಿಗಳು ತಾವು ಹಿಂದೂಗಳಲ್ಲ ಎಂದು ನ್ಯಾಯಾಲಯಕ್ಕೆ ಹೋದ ಪ್ರಸಂಗ ತುಂಬ ಪ್ರಸಿದ್ಧ.

ದೇವು ಹನೆಹಳ್ಳಿಯವರು ಈ ಚರ್ಚೆಯ ಸಂದರ್ಭದಲ್ಲಿ ಒಂದು ಅತ್ಯಂತ ಮಹತ್ವದ ಪ್ರಶ್ನೆಯನ್ನು ಎತ್ತಿದ್ದಾರೆ. ವಚನವು ಲಿಂಗಾಯತವೆಂಬ ನವಧರ್ಮದ ಪವಿತ್ರ ಪಠ್ಯವಾದರೆ, ಅದು ಮತೀಯ ಪಠ್ಯ ಎನಿಸಿಕೊಳ್ಳುತ್ತದೆ. ಈವರೆಗೆ ನಾವೆಲ್ಲ ಮೂರು ಅಥವಾ ನಾಲ್ಕನೇ ತರಗತಿಯಿಂದ ಆರಂಭಿಸಿ ಪದವಿ ಮತ್ತು ಕನ್ನಡ ಎಂ.ಎ.ವರೆಗೂ ‘ಸಾಹಿತ್ಯವಾಗಿ’ ಕಡ್ಡಾಯವಾಗಿ ಕಲಿಯುತ್ತಿದ್ದ ವಚನಗಳು ‘ಮತೀಯ’ ಪಠ್ಯವಾಗಿ ಮತಾಂತರ ಹೊಂದಿ ತರಗತಿ ಪಠ್ಯಕ್ರಮದಿಂದ ಹೊರಹೋಗಬೇಕಾಗುತ್ತದೆಯೇ?

ಈ ದೇಶದ ಹಿಂದೂಗಳು, ಮುಸ್ಲಿಮರು ಹೀಗೆ ಎಲ್ಲರನ್ನೂ ನಮ್ಮ ಸೆಕ್ಯುಲರ್ ಸಂಕಥನ ಮತ್ತು ಸೆಕ್ಯುಲರ್ ನೀತಿಗಳು ಪಶ್ಚಿಮದ ಅಥವಾ ಇನ್ನಷ್ಟು ನಿರ್ದಿಷ್ಟವಾಗಿ ಹೇಳುವುದಾದರೆ ರಿಲಿಜನ್ನಿನ ದೃಷ್ಟಿಕೋನದಿಂದಲೇ ನೋಡಿದುದರಿಂದ ನಾವಿಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಿಜವಾಗಿ ಸೆಕ್ಯುಲರ್ ದೇಶದಲ್ಲಿ ಪ್ರಭುತ್ವವು ಯಾವುದೇ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಬೇಕಾಗಿಲ್ಲ. ಯಾರೂ ಯಾರನ್ನೂ ಕೀಳಾಗಿ ಕಂಡು ತಾರತಮ್ಯ ಮಾಡದಂತೆ ನೋಡಿಕೊಳ್ಳುವುದು ಮಾತ್ರ ಪ್ರಭುತ್ವದ ಹೊಣೆ. ಧರ್ಮವನ್ನು ಅದರಲ್ಲೂ ಧರ್ಮಾನುಯಾಯಿಗಳ ಸಂಖ್ಯೆಯನ್ನು ಆಧರಿಸಿದ ನೀತಿ ನಿರೂಪಣೆಗಳನ್ನು ಸೆಕ್ಯುಲರ್ ದೇಶಗಳು ಅನುಸರಿಸಿದರೆ ಇಂಥ ಗೋಜಲುಗಳಿಗೆ ಕೊನೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT