ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ ಗೀಳು!

Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಬಹಳ ದಿನಗಳ ನಂತರ ಅವರ ಮನೆಗೆ ಹೋಗಿದ್ದೆ. ಖುಷಿಯಿಂದ ಬರಮಾಡಿಕೊಂಡು ಸೋಫಾ ಮೇಲೆ ಕುಳ್ಳಿರಿಸಿ ಒಳಹೋದರು. ಕಾಫಿ ತರಲು ಹೋಗಿರಬಹುದು ಎಂದುಕೊಂಡು ಮನೆಯ ಅಂದ ಚಂದ ನೋಡುತ್ತಾ ಕುಳಿತೆ. ಕೆಲವೇ ನಿಮಿಷದಲ್ಲಿ ಬಂದವರ ಕೈಯಲ್ಲಿ ಕಾಫಿ ಟ್ರೇ ಬದಲು ಕ್ಯಾಮೆರಾ ಇತ್ತು. 

“ಎಲ್ಲಿ, ನಿಮ್ಮ ಜತೆ ಒಂದು ಫೋಟೊ, ಈ ಕಡೆ ತಿರುಗಿ, ಸ್ವಲ್ಪ ನಗು ಇರಲಿ, ಆ ಕೂದಲು ಸ್ವಲ್ಪ ಹಿಂದೆ ಮಾಡಿಕೊಳ್ಳಿ, ಇಲ್ಲವಾದರೆ ನನ್ನ ಮುಖ ಸರಿಯಾಗಿ ಕಾಣಿಸುವುದೇ ಇಲ್ಲ”– ಹೀಗೆಲ್ಲ ಮಾತನಾಡುತ್ತ, ನನ್ನ ಪಕ್ಕ ಕುಳಿತು ಸೆಲ್ಫೀ ಕ್ಲಿಕ್ ಶುರು ಮಾಡಿದರು. ನಾಲ್ಕು ಐದು ಪೋಸುಗಳಾದ ಮೇಲೆ ಅದನ್ನು ಫೇಸ್ ಬುಕ್ಕಿನಲ್ಲಿ ಅಪ್ಲೋಡ್ ಮಾಡುವ ಸಂಭ್ರಮ.

“ಇಲ್ಲಿ ನೋಡಿ, ಆಗಲೇ 6 ಲೈಕುಗಳು. ನನ್ನ ಗೆಳತಿ ಕಲ್ಪನದು ಮೊದಲ ಕಾಮೆಂಟ್, ಮೊನ್ನೆ ಚೆನ್ನಾಗಿ ಬೈದೆ, ನನ್ನ ಸ್ಟೇಟಸ್ ಮೇಲೆ ಕಾಮೆಂಟ್ ಮಾಡದಿದ್ದಕ್ಕೆ. ಅವಳ ಪೋಸ್ಟ್‌ಗಳಿಗೆಲ್ಲ ನನ್ನದೇ ಮೊದಲ ಕಾಮೆಂಟು. ಅಷ್ಟಾಗಿ ಅವಳ ಪೊಗರು ನೋಡಿ, ಪೋಸ್ಟ್ ಹಾಕಿ ಹತ್ತು ನಿಮಿಷಗಳಾದರೂ ಲೈಕ್ ಸಹ ಇಲ್ಲ ಅಂದರೆ? ನನ್ನ ಬಾಯಿಗೆ ಹೆದರಿ ಕಾಮೆಂಟ್ ಹಾಕಿದ್ದಾಳೆ” ಎಂದರು. ನನ್ನ ಬಾಯಿ ಒಣಗಿ ಹೋಗುತ್ತಿತ್ತು. ಧೈರ್ಯ ಮಾಡಿ “ಸ್ವಲ್ಪ ನೀರು ಸಿಗಬಹುದಾ?’’ ಎಂದು ಕೇಳಿದೆ.

“ಎಲ್ಲಿ, ನೀರಿನ ಲೋಟ ಹಿಡಿದು ಈ ಸೋಫಾ ಮೇಲೆ ಕೂಡಿ, ನಮ್ಮ ಹೊಸ ಸೋಫಾ ಸೆಟ್ ಫೋಟೊ ಹಾಕಿದ ಹಾಗೂ ಆಗುತ್ತದೆ’’ ಎಂದರು. ಅವರ ಸೆಲ್ಫೀ ಉತ್ಸಾಹದ ಎದುರು ಕಾಫಿ , ಟೀ ಇರಲಿ, ನೀರು ಸಹ ಸರಿಯಾಗಿ ಕುಡಿಯಲಾಗಲಿಲ್ಲ. ಇನ್ನು ಮಾತುಕತೆ, ಸುಖ–ದುಃಖ ಹಂಚಿಕೊಳ್ಳುವುದು ದೂರವೇ ಉಳಿಯಿತು.

ಇನ್ನೊಂದು ಘಟನೆ. ಅದು ಹೊಸ ಕಂಪ್ಯೂಟರ್ ಕೋಣೆಯ ಉದ್ಘಾಟನೆ. ಕಾರ್ಯಕ್ರಮ ಮುಗಿದ ಕೂಡಲೇ ಹೊಸ ಗಣಕ ಯಂತ್ರಗಳ ಜತೆ ಫೋಟೊ ತೆಗೆಸಿಕೊಳ್ಳುವುದಕ್ಕೆ ನಾ ಮುಂದು, ತಾ ಮುಂದು ಎಂದು ಕ್ಯೂ. ಒಂದೆರಡು ಗಂಟೆಗಳ ನಂತರ ಎಲ್ಲರ ಪ್ರೊಫೈಲ್ ಪಿಕ್ಚರ್ ಬದಲು! ಹೊಸ ಗಣಕ ಯಂತ್ರ ಫೇಸ್‌ಬುಕ್‌ನ ಮುಖಪುಟದಲ್ಲಿ ಮೆರೆದಿದ್ದೂ ಮೆರೆದಿದ್ದೆ!

ಅರ್ಥ ಆಯಿತಲ್ಲ? ಕೆಲಸ ಮಾಡುವುದಕ್ಕಿಂತ ಅದರ ಫೋಟೊ ತೆಗೆದು ಅಪ್‌ಲೋಡ್‌ ಮಾಡುವುದು ಮುಖ್ಯ! ಗೆಳೆಯರನ್ನು ಮೀಟ್ ಮಾಡಿದ ತಕ್ಷಣ ಸೆಲ್ಫೀ ತೆಗೆಯುವುದು ಬಹಳ ಪ್ರಮುಖ ಕೆಲಸ. ತಿಥಿಯೇ ಇರಲಿ, ಹುಟ್ಟುಹಬ್ಬವೇ ಇರಲಿ, ಮೊದಲು ಫೋಟೊ ತೆಗೆಯುವುದು, ಅದನ್ನು ಫೇಸ್‌ಬುಕ್‌ನಲ್ಲಿ ಹಾಕುವುದು; ಲೈಕು–ಕಾಮೆಂಟುಗಳಿಗಾಗಿ ಕಾಯುವುದು. ನೀವು, ನಾನು ಎಲ್ಲಾ ಇದರ ಗೀಳಿಗೆ ಕೆಲವು ಸಮಯಕ್ಕಾದರೂ ಬಲಿಯಾದವರೇ. ಕೆಲಸ ಜಾಸ್ತಿ ಇರುವರು, ಯಾವುದಾದರೂ ಅಧ್ಯಯನದಲ್ಲಿ ತೊಡಗಿರುವವರು ಅಥವಾ ಅಂತರ್ಜಾಲದ ಸಂಪರ್ಕ ಇಲ್ಲದವರು ಮಾತ್ರ ಈ ಗೀಳಿನಿಂದ ದೂರ ಉಳಿದಿರಬಹುದು.

ಇತ್ತೀಚೆಗೆ ಗೆಳತಿಯರೆಲ್ಲ ಸೇರಿ ಹೋಟೆಲ್ಲೊಂದಕ್ಕೆ ನುಗ್ಗಿದ್ದೆವು. ನಮ್ಮ ಗುಂಪು ನೋಡಿ ಬಂದ ಸರ್ವರ್– ‘‘ಫೋಟೊ ತೆಗೀಲಾ ಮ್ಯಾಡಮ್?’’ ಎಂದ. ಅವನಿಗೂ ಗೊತ್ತು, ಫೋಟೊ ಮೊದಲು, ಆರ್ಡರ್ ಆಮೇಲೆ ಅಂತ! ತಿನ್ನುತ್ತಾ ಕುಡಿಯುತ್ತಾ, ಹರಟುತ್ತಾ, ಪೋಸುಗಳು ಕೊಟ್ಟಿದ್ದೇ ಕೊಟ್ಟಿದ್ದು. ತುತ್ತಿಗೊಂದು ಫೋಟೊ, ಗುಟುಕಿಗೊಂದು ಕ್ಲಿಕ್. ಸರ್ವರ್ ನಮ್ಮ ಮೇಜಿನ ಬಳಿಯೇ ಇದ್ದು, ಕ್ಯಾಮೆರಾ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು.

ಸುತ್ತ ಮುತ್ತ ಮೇಜುಗಳಲ್ಲೂ ಸುಮಾರು ಇದೇ ದೃಶ್ಯ. ಇದರಿಂದ ಹೊರತಾದವರೆಂದರೆ ಜೋಡಿಗಳು– ಮನೆಯವರ ಕಣ್ಣು ತಪ್ಪಿಸಿ ಮೀಟ್ ಮಾಡಬಂದ ಜೋಡಿಗಳು. ಏನೋ ವಿಷಯ ಚರ್ಚಿಸಲು ಬಂದ ಹಿರಿಯರು, ಮಧ್ಯ ವಯಸ್ಸಿನ ಜೋಡಿಗಳು... ಊಟ ಎಷ್ಟು ಮಾಡಿದೆವೋ ನೆನಪಿಲ್ಲ. ಫೋಟೊಗೆ ಪೋಸ್ ನೀಡಿದ ಎಲ್ಲಾ ಕ್ಷಣಗಳೂ ಚೆನ್ನಾಗಿ ನೆನಪಿವೆ!  

ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಘಟನೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಯಾವುದೋ ಅನಿರ್ವಾರ್ಯತೆಯಿಂದ ಆಶ್ರಮ ಸೇರಿದ ವಯಸ್ಸಾದವರು, ನೈಟಿ ಧರಿಸಿ ಪೆಚ್ಚು ಪೆಚ್ಚುನಗೆ ಬೀರಿ ನಿಂತ ಅಜ್ಜಿಯರು– ಇವರನ್ನೆಲ್ಲ ಬಲವಂತವಾಗಿ ನಗಿಸಿ ಫೋಟೊ ತೆಗೆಯಲಾಯಿತು. ಬಲೂನ್ ಕಟ್ಟಿ, ಕೇಕ್ ತಿನ್ನಿಸಿ ಅವರ ಜತೆ ಫೋಟೊ ತೆಗೆಸಿಕೊಳ್ಳುವ ಸಂಭ್ರಮ ಬೇರೆ. ಈ ತೋರಿಕೆಯ ಭೇಟಿ ಮುಜುಗರ ತರುವಂತಿತ್ತು.

ಫೋಟೊಗಳಿಗಾಗಿ ಭೇಟಿಯೋ ಭೇಟಿಯಿಂದ ಫೋಟೊಗಳೊ? ಫೇಸ್‌ಬುಕ್‌ಗಾಗಿ ಏನೆಲ್ಲ ಮಂಗಾಟ ಆಡುವ ನಡವಳಿಕೆ ವಿಷಾದ ಹುಟ್ಟಿಸುತ್ತದೆ. ಈಚೆಗೆ, ‘ಅನಾಥಾಶ್ರಮಕ್ಕೆ ಹೋಗೋಣ’ ಎಂದು ಫೋನ್ ಮಾಡಿದ ಗೆಳತಿಗೆ ಕಟ್ಟುನಿಟ್ಟಾಗಿ ಹೇಳಿದೆ– ‘‘ನಾನು ಬರುವೆ, ಆದರೆ ಯಾರೂ ಕ್ಯಾಮೆರಾ ತರಬಾರದು, ಮೊಬೈಲ್‌ಗಳಲ್ಲೂ ಫೋಟೊ ತೆಗೆಯಬಾರದು’’. ಕ್ಷಣಕಾಲ ಆ ಕಡೆಯಿಂದ ಮೌನ. “ಆಯಿತು, ತಿಳಿಸುವೆ” ಎಂದು ಕಾಲ್ ಕಟ್ ಮಾಡಿದವಳು ಆಮೇಲೆ ಪತ್ತೇನೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT