ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಿರು ಬಾಡಿದೆ ನೋಡಿದಿರಾ...

Last Updated 3 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಕೊಡಗಿನ ಕಾವೇರಿ ನಿಸರ್ಗ ಧಾಮ, ದುಬಾರೆ, ಹಾರಂಗಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ನಿಸರ್ಗದ ರೋಚಕ ವಿದ್ಯಮಾನವೊಂದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಉತ್ತರ ಕನ್ನಡದ ಉಳವಿ ಸುತ್ತಮುತ್ತಲ ದಟ್ಟ ಅರಣ್ಯದಲ್ಲಿ ಹೇರಳವಾಗಿ ಇರುವ ಬಿದಿರು ಕಳೆದ ಮೇ ತಿಂಗಳಲ್ಲೇ ಹೂಬಿಟ್ಟಿದೆ. ಈಗ ಪೂರ್ತಿ ಒಣಗಿದೆ. ದಾಂಡೇಲಿ ಅರಣ್ಯ ಭಾಗದಲ್ಲೂ ವ್ಯಾಪಕವಾಗಿ ಬಿದಿರು ಒಣಗಿ ನಿಂತಿದೆ.

ಹಾರಂಗಿ ಮತ್ತಿತರ ಕಡೆ ಜಲಾಶಯಗಳ ಸುತ್ತ ಇರುವ ಬಿದಿರು ಮೆಳೆಗಳೂ ಒಣಗಿವೆ. ಮಳೆಗಾಲ ಇನ್ನೂ ಪೂರ್ಣವಾಗಿಲ್ಲ. ಬೆಟ್ಟ ಗುಡ್ಡಗಳೆಲ್ಲ ಹಸಿರಿನಿಂದ ನಳನಳಿಸುತ್ತಿವೆ. ಇದರ ಮಧ್ಯೆ ಅಲ್ಲಲ್ಲಿ ಇರುವ ಬಿದಿರು ಒಣಗಿ ನಿಂತಿರುವುದು ವಿಸ್ಮಯವಾಗಿ ಕಾಣುತ್ತಿದೆ.

ದಾಂಡೇಲಿಯ ಕಾಗದ ಕಾರ್ಖಾನೆಗೆ ಪ್ರಮುಖ ಕಚ್ಚಾ ವಸ್ತು ಬಿದಿರು. ಆದರೂ ಈ ಕಾರ್ಖಾನೆಗೆ ದೇಶದ ವಿವಿಧ ಭಾಗಗಳಲ್ಲಿ ಬಿದಿರಿನ ನರ್ಸರಿ ಇರುವುದರಿಂದ ಅದರ ಕೊರತೆ ಕಂಡುಬಂದಿಲ್ಲ ಎಂಬುದು ಸಮಾಧಾನದ ಸಂಗತಿ.

ಬಿದಿರು ಹೂಬಿಟ್ಟು ನಂತರ ಒಣಗುವುದು (ಗ್ರಿಗೇರಿಯಸ್ ಫ್ಲವರಿಂಗ್- ಕಟ್ಟೆ ಬೀಳುವುದು ಎಂತಲೂ ಕರೆಯುತ್ತಾರೆ) ಒಂದು ಅಪರೂಪದ ಪ್ರಕ್ರಿಯೆ. ಒಮ್ಮೆ ಹೂಬಿಡಲು ಪ್ರಾರಂಭ ಆದರೆ ಅದು ಎಲ್ಲ ಕಡೆ ವ್ಯಾಪಿಸುತ್ತದೆ ಎನ್ನುತ್ತಾರೆ ಪರಿಸರ ತಜ್ಞರು. ಹೀಗಾಗಿ ಇದೊಂದು ಸೋಜಿಗದಂತೆ ಭಾಸವಾಗುತ್ತದೆ.

ಬಿದಿರು ಹೂಬಿಟ್ಟ ಬಳಿಕ ಅದು ಅಕ್ಕಿ ಕಾಳಿನಂತಾಗಿ ನೆಲಕ್ಕೆ ಬೀಳುತ್ತದೆ. ಹೀಗಾದಾಗ ಅದು ಬರಗಾಲದ ಮುನ್ಸೂಚನೆ ಎಂಬುದು ನಂಬಿಕೆ ಆಗಿತ್ತು. ಆದರೆ ಈಗ ಬರಗಾಲ ಸಾಮಾನ್ಯವಾದ್ದರಿಂದ ಅರಣ್ಯ ಹಾಗೂ ಪರಿಸರ ತಜ್ಞರು ಅದನ್ನು ಒಪ್ಪುವುದಿಲ್ಲ. ಒಣಗಿದ ಬಿದಿರನ್ನು ಕಟಾವು ಮಾಡಬೇಕೇ, ಬೇಡವೇ ಎಂಬುದು ಕೂಡ ವಾದ-ವಿವಾದಗಳಲ್ಲೇ ಅಡಗಿದೆ.

ಅಭಯಾರಣ್ಯಗಳಲ್ಲಿ ಯಾವುದೇ ಜಾತಿಯ ಮರ-ಗಿಡಗಳು ಒಣಗಿ ಸತ್ತರೂ ಅದನ್ನು ತೆಗೆಯುವಂತಿಲ್ಲ. ಆದರೆ ಒಣಗಿದ ಬಿದಿರನ್ನು ಮುಂಜಾಗ್ರತೆ ದೃಷ್ಟಿಯಿಂದ ಕಟಾವು ಮಾಡುವುದೇ ಒಳ್ಳೆಯದು ಎಂಬುದು ಕೆಲವು ಅರಣ್ಯಾಧಿಕಾರಿಗಳ ಅಭಿಪ್ರಾಯ.

ಇಲ್ಲದೇ ಹೋದಲ್ಲಿ ಅರಣ್ಯಕ್ಕೆ ಬೆಂಕಿ ತಗಲುವ ಅಪಾಯ ತಪ್ಪಿದ್ದಲ್ಲ. ಮೆಳೆಗಳಲ್ಲಿ ಇರುವ ಒಣಗಿದ ಬಿದಿರು ಗಾಳಿಗೆ ಪರಸ್ಪರ ಉಜ್ಜಿಕೊಂಡಾಗಲೂ ಬೆಂಕಿ ಕಿಡಿ ಏಳುವ ಸಂಭವ ಇದೆ.

  ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಅರಣ್ಯ ಸಿಬ್ಬಂದಿ ಫೈರ್ ಲೈನ್‌ಗಳನ್ನು (ಬೆಂಕಿ ಪಥ) ಹಾಕುತ್ತಾರೆ. ರಸ್ತೆ ಬದಿ ಮತ್ತು ಅರಣ್ಯದ ಅಂಚಿನಲ್ಲಿ ಬೆಂಕಿ ಹಾಕಿ ತರಗಲೆಗಳನ್ನು ಸುಡುವ ಮೂಲಕ ಬೆಂಕಿ ಅರಣ್ಯದ ಒಳಕ್ಕೆ ಹೊಕ್ಕದಂತೆ ತಡೆಯುವುದು ಈ ವಿಧಾನ. ಇದು ಹಳೇ ಕಾಲದ ವ್ಯವಸ್ಥೆ. ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಯಲು ವೈಜ್ಞಾನಿಕವಾದ ವಿಧಾನಗಳನ್ನು ಅನುಸರಿಸಬೇಕಿದೆ ಎಂಬುದು ಈ ಅರಣ್ಯಾಧಿಕಾರಿಗಳ ಅಭಿಮತ.

ಏನಿದು ಬಿದಿರು ಬೆಂಕಿ?
ಕಿರು ಬಿದಿರು (ಬಾಂಬುಸಾ ಬ್ರಾಂದಿಸಿಯಾ) ಸಾಮಾನ್ಯವಾಗಿ 15 ವರ್ಷಗಳಿಗೊಮ್ಮೆ ಹೂಬಿಡುತ್ತದೆ. ಹೂಬಿಟ್ಟು ಭತ್ತವಾಗಿ ಬಿದಿರು ಸತ್ತು ಹೋಗುತ್ತದೆ. ಬೀಜ ಮತ್ತೆ ಮೊಳಕೆಯೊಡೆದು ಬಿದಿರು ಬೆಳೆಯುತ್ತದೆ. ದೊಡ್ಡ ಬಿದಿರು (ಅರುಂಡಿನೇಸಿಯಾ) ಸಾಮಾನ್ಯವಾಗಿ 28 ರಿಂದ 32 ವರ್ಷಗಳಿಗೊಮ್ಮೆ ಹೂ ಬಿಡುತ್ತದೆ. ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ಈ ಪ್ರಕ್ರಿಯೆ ಸ್ವಲ್ಪ ಹೆಚ್ಚುಕಮ್ಮಿಯೂ ಆಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರಾದ ಅ.ನ.ಯಲ್ಲಪ್ಪ ರೆಡ್ಡಿ.

ಉಳಿದ ವರ್ಷಗಳಲ್ಲಿ ಕಳಲೆ ಬರುತ್ತದೆ. ಬೇರಿನಿಂದಲೇ ಮೊಗ್ಗು ಒಡೆದು ವರ್ಷದಲ್ಲಿ ಅದು ಬಿದಿರಾಗಿ ಬೆಳೆಯುತ್ತದೆ. 30 ವರ್ಷಗಳವರೆಗೂ ಹೀಗೆಯೇ ಮುಂದುವರಿಯುತ್ತದೆ. ಪ್ರತಿಯೊಂದು ಮೆಳೆಯ್ಲ್ಲಲೂ ಸುಮಾರು ಏಳರಿಂದ ಎಂಟು ಬಿದಿರು ಪ್ರತಿವರ್ಷ ಸೊಂಪಾಗಿ ಬೆಳೆಯುತ್ತಿರುತ್ತದೆ.

ಎರಡು ಬಗೆಯಲ್ಲಿ ಬಿದಿರು ಸಂತಾನ ಅಭಿವೃದ್ಧಿ ಆಗುತ್ತಲೇ ಇರುತ್ತದೆ. ಬಿಯಾಫೇಸ್ ಅಂದರೆ ಪರಾಗಸ್ಪರ್ಶದಿಂದ ಬೆಳೆಯುವುದು ಒಂದು ವಿಧಾನವಾದರೆ, ಮೆಟಾಫೇಸ್ ಅಂದರೆ ಬೇರಿನಿಂದ ಚಿಗುರೊಡೆದು ಬೆಳೆಯುವುದು ಇನ್ನೊಂದು ರೀತಿ.

ಬರ ನಿಜವೇ?
ಬಿದಿರು ಒಣಗಿ ಹೂಬಿಟ್ಟರೆ ಬರಗಾಲ ಬರುವುದು ನಿಜವೇ ಎಂಬ ಪ್ರಶ್ನೆಗೆ ಯಲ್ಲಪ್ಪ ರೆಡ್ಡಿ ಅವರು `ಇಲ್ಲ. ಹಾಗೆಂದೇ ಖಚಿತವಾಗಿ ಹೇಳಲಾಗದು. ಬಿದಿರು ಹೂಬಿಟ್ಟು ಅದರ ಕಾಳು ನೆಲಕ್ಕೆ ಬಿದ್ದಾಗ ಇಲಿಗಳು ಅವನ್ನು ತಿನ್ನುತ್ತವೆ. ಇಲಿಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಹೀಗಾಗಿ ಹಿಂದಿನ ಕಾಲದಲ್ಲಿ ಈ ಬಗೆಯ ನಂಬಿಕೆ ಇತ್ತು. ಈಗ ಹವಾಮಾನ ಪರಿಸ್ಥಿತಿಯೇ ಬದಲಾಗಿದೆ. ಪ್ರತಿವರ್ಷ ಒಂದಲ್ಲ ಒಂದು ಕಡೆ ಬರ ಇದ್ದೇ ಇರುತ್ತದೆ~ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT