ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನ ಮೇಲಿನ ಚಿಟ್ಟೆ

ಕತೆ
Last Updated 30 ಮೇ 2015, 19:30 IST
ಅಕ್ಷರ ಗಾತ್ರ

ಅದು ಕಾರ್ಪೊರೇಟ್ ಸಂಸ್ಥೆಯೊಂದರ ಅತ್ಯಾಧುನಿಕ ಡೈನಿಂಗ್ ಹಾಲ್. ಅದೊಂದು ರೀತಿಯ ಓಪನ್ ಡೈನಿಂಗ್ ಹಾಲ್. ಕಟ್ಟಡವೊಂದರ ಗ್ರೌಂಡ್ ಫ್ಲೋರನ್ನು ಸಂಪೂರ್ಣ ಅದಕ್ಕೆ ಮೀಸಲಿಟ್ಟು ಸುತ್ತಲೂ ಗೋಡೆಗಳನ್ನು ಏರಿಸದಿರುವುದರಿಂದ ಗಾಳಿ ಬೆಳಕುಗಳು ಸರಾಗವಾಗಿ ಓಡಾಡಿಕೊಂಡಿರಲು ಅನುವು ಮಾಡಿಕೊಟ್ಟಂತಿದೆ. ಡೈನಿಂಗ್ ಹಾಲ್‌ನ ಒಂದು ಬದಿಗಿರುವ ಹುಲ್ಲಿನ ಲಾನ್, ಮತ್ತೊಂದು ಬದಿಗಿರುವ ಬಣ್ಣದ ಹೂಗಳನ್ನು ಹೊತ್ತ ಗಿಡಗಳು ಅದರ ಅಂದವನ್ನು ಹೆಚ್ಚಿಸಿವೆ. ಡೈನಿಂಗ್ ಹಾಲ್‌ನ ನೇರಕ್ಕೆ ಕಂಪನಿಯ ಮುಖ್ಯ ದ್ವಾರಕ್ಕೆ ತೆರೆದುಕೊಳ್ಳುವ ದಾರಿಯ ಇಕ್ಕೆಲೆಗಳಲ್ಲಿರುವ ದೊಡ್ಡ ದೊಡ್ಡ ಸಾಲು ಮರಗಳು ಕಂಗಳಿಗೆ ಪರಮಹಿತ ನೀಡುವಂತಿವೆ.

ಇವೆಲ್ಲದರ ದೆಸೆಯಿಂದ ಆ ಕಂಪನಿಯ ಉದ್ಯೋಗಿಗಳಿಗೆ ತಾವು ತೆರೆದ ಬಯಲಿನಲ್ಲಿ ಊಟ ಮಾಡುತ್ತಿರುವಂತೆಯೂ, ಕಾಫಿ ಟೀ ಕುಡಿಯುತ್ತಿರುವಂತೆಯೂ ಅನಿಸುವುದುಂಟು. ಡೈನಿಂಗ್ ಹಾಲ್‌ನ ಒಂದು ಬದಿಗೆ ಕಂಪನಿಯ ಕಿಚನ್‌ಗೆ ಹೊಂದಿಕೊಂಡಿರುವ ಕಾಫಿ ಟೀ ಡಿಸ್ಪೆಂಸರ್‌ಗಳು, ಅಲ್ಲಿ ಕೆಲಸ ಮಾಡುವವರ ಜಿಹ್ವಾ ಚಪಲಗಳನ್ನು ಈಡೇರಿಸುವ ಆತ್ಮವಿಶ್ವಾಸವನ್ನು ಹೊದ್ದು ಪವಡಿಸಿವೆ. ಕಾಫಿ ಟೀ ಜೊತೆಗೆ  ಬೆರೆತಿರುವ ಹಾಲನ್ನು ಕುಡಿಯಲು ಬಯಸದ ಡಯೆಟ್ ಪ್ರಿಯರಿಗಾಗಿ ಬ್ಲಾಕ್ ಟೀ, ಲೆಮನ್ ಟೀ, ಗ್ರೀನ್ ಟೀ ಹೀಗೆ ತರಹೇವಾರಿ ಟೀಗಳ ಸಣ್ಣ ಸಣ್ಣ ಚೀಲಗಳು ಡಿಸ್ಪೆಂಸರ್‌ನ ಪಕ್ಕದ ಟ್ರೇನಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿರುವಂತಿವೆ.

ಸಮಯ ಒಂಬತ್ತೂವರೆ ಆಗಿರುವುದರಿಂದ ಕಾಫಿ ಹೀರಲು ಈಗಾಗಲೆ ಅಲ್ಲಿ ಸಾಕಷ್ಟು ಉದ್ಯೋಗಿಗಳು ಜಮಾಯಿಸಿದ್ದಾರೆ. ಒಂದೇ ಡಿವಿಜನ್‌ಗೆ ಸೇರಿರುವ ಸುಮಾರು ನಲವತ್ತೈದರ ಆಸುಪಾಸಿನ ಪ್ರಕಾಶ್, ಸೂರಜ್, ನಾರಾಯಣಗೌಡ, ವೆಂಕಟ್, ಸುಮತೀಂದ್ರ ಹಾಗು ನವೀನ್‌ಕುಮಾರ್ ತಮ್ಮ ತಮ್ಮ ಕಪ್‌ಗಳಲ್ಲಿ ತಮಗೆ ಬೇಕಾಗಿರುವುದನ್ನು ಹಿಡಿದುಕೊಂಡು ಹೂಗಿಡಗಳ ಕಡೆಗಿರುವ ಮೇಜಿನ ಸುತ್ತಲೂ ಕುಳಿತರು. ಹಾಗೆ ಕುಳಿತವರೇ ಕೈಯಲ್ಲಿರುವ ಕಪ್‌ಗಳನ್ನು ಮೇಜಿನ ಮೇಲಿಟ್ಟು ಜೇಬುಗಳಿಂದ ಮೊಬೈಲ್‌ಗಳನ್ನು ಆಚೆ ತೆಗೆದು ಮೊಬೈಲೆಂಬ ಮಾಯಾ ಪರದೆಯ ಮೇಲೆ ಬೆರಳುಗಳನ್ನು ಆಡಿಸತೊಡಗಿದರು. ಬಣ್ಣದ ಪರದೆಯನ್ನು ಮುಟ್ಟಿ ಪುಳಕಗೊಂಡ ಬೆರಳುಗಳು ಮತ್ತಷ್ಟು ವೇಗವಾಗಿ ಕುಣಿಯತೊಡಗಿದಂತೆ ಕಣ್ಣುಗಳು ಹೊಳಪು ಪಡೆದುಕೊಂಡು ಅರಳತೊಡಗಿದವು.

ಸೂರಜ್‌ನ ಕಪ್ಪಿನಲ್ಲಿ ಕೆಪೆಚಿನೊ ಹಬೆಯಾಡುತ್ತಿದ್ದರೆ ಮಿಕ್ಕವರ ಕಪ್‌ಗಳ ಬಿಸಿ ನೀರಿನಲ್ಲಿ ಗ್ರೀನ್ ಟೀ, ಲೆಮನ್ ಟೀ ಚೀಲಗಳು ಕುಳಿತು ತಮ್ಮೊಳಗಿನ ಸಾರವನ್ನು ಬಿಟ್ಟುಕೊಟ್ಟು ಅರೆಪ್ರಜ್ಞಾವಸ್ಥೆಗೆ ಜಾರುತ್ತಲಿದ್ದವು. ಎಲ್ಲರೂ ವಾಟ್ಸ್ ಆಪ್ ಎಂಬ ಮಾಯಾ ಕಡಲಿನಲ್ಲಿ ಟೆಕ್ಸ್ಟ್ ಸಂದೇಶ, ವಿಡಿಯೋ ಸಂದೇಶ, ಎಂಬ ಹಡಗುಗಳನ್ನೇರಿ ವಿಹರಿಸುತ್ತಾ ಆಗಾಗ ಕಾಫಿ ಟೀಯನ್ನು ಸಿಪ್ಪಿಸುತ್ತಾ ಕಾರ್ಪೊರೇಟ್ ಬದುಕಿನ ಸುಖದ ಉತ್ತುಂಗವನ್ನು ಅನುಭವಿಸತೊಡಗಿದರು. ಅಲ್ಲಿ ಒಂದೇ ಒಂದು ಮಾತು ಆಚೆ ಬರದಿದ್ದರೂ ತುಟಿಗಳು ಅರಳುವುದು, ಕಣ್ಣುಗಳು ಇನ್ನಿಲ್ಲದ ಹೊಳಪನ್ನು ಪಡೆದುಕೊಳ್ಳುವುದು, ಗೊಳ್ಳೆಂದು ನಗುವುದು, ಅನುಕಂಪದ ಭಾವವನ್ನು ಹೊರಸೂಸಿ ‘ಛೆ’ ಎನ್ನುವುದು, ಹೀಗೆ ನವರಸಗಳು ಅಲ್ಲಿ ಅಭಿವ್ಯಕ್ತಗೊಂಡು ಆ ಮೇಜು ರಂಗ ತರಬೇತಿಯ ಸ್ಟೇಜನ್ನು ಆವಾಹಿಸಿಕೊಂಡಂತಿತ್ತು. ಅಥವಾ ಹುಚ್ಚಾಸ್ಪತ್ರೆಯ ವಾತಾವರಣವನ್ನು ಮೈಗೂಡಿಸಿಕೊಂಡಂತ್ತಿತ್ತು.

ಅದೇ ಹೊತ್ತಿಗೆ ನೀಲಿ ಜೀನ್ಸ್ ಪ್ಯಾಂಟ್, ತೆಳು ಗುಲಾಬಿ ಬಣ್ಣದ ಅಂಗಿ ತೊಟ್ಟು ಅವರು ಕುಳಿತಿರುವ ಟೇಬಲ್ ಪಕ್ಕದಲ್ಲೆ ಹಾದು ಹೋದ ಇಪ್ಪತ್ತೈದರ ಹರಯದ ಹುಡುಗಿಯ ಕಡೆಗೆ ನಿಧಾನಕ್ಕೆ ತಲೆ ಎತ್ತಿ ನೋಡಿದ ಸೂರಜ್. ‘ನೋಡ್ರೊ ಗುಲಾಬಿ ಬಣ್ಣದ ಚಿಟ್ಟೆ’ ಎಂದು ಅವಳಿಗೆ ಕೇಳಿಸುವ ಹಾಗೆ ಪಿಸುನುಡಿದ. ಅವಳು ಸೂರಜ್‌ನ ಕಡೆಗೆ ತುಸು ಗುರಾಯಿಸಿ ಮುಂದೆ ಸಾಗಿದಳು.

ಪಕ್ಕದಲ್ಲೇ ಇರುವ ನಾರಾಯಣಗೌಡ ‘ಹೇ ಸೂರಜ್ ಡೋಂಟ್ ಕಾಮೆಂಟ್ ಲೈಕ್ ದಟ್... ವಿಷಲ್ ಬ್ಲೋ ಪಾಲಿಸಿ ಗೊತ್ತಿದೆ ತಾನೆ. ಎಚ್‌ಆರ್‌ಗೆ ಗೊತ್ತಾದ್ರೆ ಪಿಂಕ್ ಸ್ಲಿಪ್ ಕೊಟ್ಟಾರು... ಬಿ ಕೇರ್‌ಫುಲ್‌’ ಎಂದು ಎಚ್ಚರಿಸಿದ ಗ್ರೀನ್ ಟೀ ಕುಡಿಯುತ್ತಾ.
‘ಯು ನೊ.... ದಿಸ್ ಅಂಡಾಲ್ ಕಾರ್ಪೊರೇಟ್ ಕಲ್ಚರ್. ಈವನ್ ದೊ ಶಿ ಸ್ಟೇರ್ಡ್ ಅಟ್ ಮಿ. ಒಳಗೊಳಗೆ ಅವಳಿಗೆ ಖುಷೀನೆ ಆಗಿರುತ್ತೆ... ಐ ನೊ ದಟ್’ ಎಂದು ಸೂರಜ್ ಕೆಪೆಚಿನೊ ಚಪ್ಪರಿಸುತ್ತಾ ನುಡಿದ. ಹೆಣ್ಣುಗಳ ಸೈಕಾಲಜಿ ತನಗೆ ಚನ್ನಾಗಿ ಗೊತ್ತು ಎನ್ನುವ ಅಹಂ ಅವನ ಮಾತಿನಲ್ಲಿತ್ತು.

‘ಮತ್ತೆ ಅವ್ಳು ನಡೆಯೊ ಸ್ಟೈಲ್ ನೋಡಿ... ವೆರಿ ಪೆಕ್ಯುಲಿಯರ್. ಎಷ್ಟೊಂದು ಸ್ಟಿಪ್ಪಾಗಿ... ಕಡ್ಡಿ ನಡೆದ ಹಾಗೆ ನಡೀತಾಳೆ. ಎಲ್ಲಿ ಕಲಿತಳೋ ಮಾರಾಯ್ತಿ, ಮೈಂಡ್ ಬ್ಲೋಯಿಂಗ್... ನೀವೇನೆ ಹೇಳಿ, ಶಿ ಈಸ್ ದ ಡ್ಯಾಮ್ ಫಿಗರ್’ ಎಂದು ತನ್ನ ಮೋಟೋ ಇ ಗೊರಿಲ್ಲಾ ಗ್ಲಾಸ್ ಪರದೆಯಲ್ಲಿ ಮುಳುಗಿದ್ದ ವೆಂಕಟ್ ಅದರಿಂದ ಆಚೆ ಬಂದು ಸೂರಜ್‌ನ ಜೊತೆಗೆ ತನ್ನ ಮಾತನ್ನು ಸೇರಿಸಿದ.

ಇವೆಲ್ಲವನ್ನು ಕೇಳಿಸಿಕೊಳ್ಳುತ್ತಲೆ ತನ್ನ ಸ್ಯಾಮ್ಸಂಗ್ ಎಸ್ ಫೋರ್‌ನ ನ್ಯೂಸ್ ಹಂಟ್ ಆಪ್‌ನಲ್ಲಿ ಇ-ಪುಸ್ತಕಗಳನ್ನು ಆಕಡೆ ಈಕಡೆ ತಳ್ಳುತ್ತಾ ಲೆಮನ್ ಟೀ ಹೀರುತ್ತಾ ಕುಳಿತಿರುವ ಸುಮತೀಂದ್ರ– ‘ಈ ವಯಸ್ಸಿನಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೀಗೆಲ್ಲಾ ಮಾತಾಡ್ಕೊಂಡು... ಏನ್ರೋ ಇದೆಲ್ಲಾ... ದಿಸ್ ಈಸ್ ನಾಟ್ ಫೇರ್ ಆನ್ ಅವರ್ ಪಾರ್ಟ್. ನಮಗೆಲ್ಲರಿಗೂ ನಲವತ್ತೈದು ದಾಟಿದೆ ಹಾಗೂ ನಮ್ಮ ಹೆಣ್ಮಕ್ಕಳೂ ಮದುವೆ ವಯಸ್ಸಿಗೆ ಬಂದವ್ರೆ... ಐ ಆಮ್ ನಾಟ್ ಫೀಲಿಂಗ್ ಕಂಫರ್ಟ್ ವಿತ್ದಿಸ್’ ಎಂದು ನುಡಿದ.

‘ಹ್ಹ ಹ್ಹ ಹ್ಹ ವೇದಾಂತಿ ನುಡೀತಾವ್ನೆ ಕೇಳ್ರಪ್ಪ’– ನವೀನ್‌ಕುಮಾರ್ ಕೊಂಕು ನುಡಿದ.
ಬಿಸಿಲು ನಿಧಾನಕ್ಕೆ ಪ್ರಕಾಶನ ಬಲಗಡೆಯಿಂದ ಚಲಿಸಿ ಅವನ ಭುಜವನ್ನು ನೆಕ್ಕಲು ಶುರುವಿಟ್ಟುಕೊಂಡಿತ್ತು. ಸೂರಜ್ ಕೆಪೆಚಿನೊ ರುಚಿಗೆ ಲೊಟ್ಟೆ ಹಾಕುತ್ತಾ ‘ಯು ನೋ ಸುಮತೀಂದ್ರ... ಗಂಡಸಿಗೆ ನಲವತ್ತು ದಾಟುತ್ತಿದ್ದಂತೆ ಇನ್ನೊಂದು ಹೆಣ್ಣಿನ ವ್ಯಾಮೋಹ ಜಾಸ್ತಿಯಾಗುತ್ತದಂತೆ. ಅದರಲ್ಲೂ ಇಪ್ಪತ್ತರ ಆಸುಪಾಸಿನ ಹುಡುಗಿಯರನ್ನು ಅನುಭವಿಸುವ ಆಸೆ ಜಾಸ್ತಿಯಾಗುತ್ತದಂತೆ’ ಎಂದು ನುಡಿದ.

‘ಓಹೊ ಕಾರ್ಪೊರೇಟ್ ಕಲ್ಚರ್ ಅಂದ್ರೆ ಇದೆ ಏನು?’ ಸುಮತೀಂದ್ರ ಕೆಣಕಿದ.
‘ನೀ ಹೇಗಾದ್ರು ತಿಳ್ಕೊ... ಆದ್ರೆ ಅದು ಗಂಡಸರ ಸೈಕಾಲಜಿ... ಸೈಂಟಿಫಿಕಲಿ ಪ್ರೂವ್ಡ್ ಯು ನೋ...’ ಸೂರಜ್ ಹೀಗೆ ನುಡಿಯುತ್ತಿರುವ ಹೊತ್ತಿಗೆ ಗಿಡಗಳ ಕಡೆಯಿಂದ ಬಂದ ಚಿಟ್ಟೆಯೊಂದು ಇವರ ಮೇಜಿನ ಬಲಬದಿಗಿರುವ ಬಿಸಿಲಿನಲ್ಲಿ ಹೊಳೆಯುತ್ತಾ ದಾರಿ ಮರೆತ ಇರುವೆಯಂತೆ ವಕ್ರ ವಕ್ರವಾಗಿ ಹಾರತೊಡಗಿತು. ಹಾಗೆ ಬಿಸಿಲಿನ ಅಮಲಿಗೆ ಮತ್ತೇರಿದಂತೆ ಹಾರುತ್ತಲಿದ್ದ ಚಿಟ್ಟೆಯನ್ನು ಅವರು ತಮ್ಮ ಮೊಬೈಲ್‌ಗಳ ಮೆಗಾ ಪಿಕ್ಸೆಲ್‌ಗಳಲ್ಲಿ ಬಂಧಿಸಲು ಪ್ರಯತ್ನಿಸತೊಡಗಿದರು. ಅದು ಸ್ವಲ್ಪ ಹೊತ್ತು ಮೇಜಿನ ಮೇಲೆ ಹಾಗೂ ಎಲ್ಲರ ತಲೆಗಳ ಮೇಲೆ ಅಡ್ಡಾಡಿ ನಂತರ ಪ್ರಕಾಶನ ಬೆನ್ನ ಮೇಲೆ ಕುಳಿತುಕೊಂಡಿತು. ಬಿಸಿಲು ಬಿದ್ದು ಹೊಳೆಯುತ್ತಿದ್ದ ಅವನ ಬೆನ್ನು ಈಗ ಮತ್ತಷ್ಟು ಹೊಳೆಯತೊಡಗಿತು. ಎಲ್ಲರೂ ಪ್ರಕಾಶನಿಗೆ ಅಲ್ಲಾಡದಂತೆ ಕುಳಿತುಕೊಳ್ಳಲು ಸೂಚಿಸಿದರು.

ಒಂದು ವೇಳೆ ಪ್ರಕಾಶ ಕದಲಿದರೆ ಚಿಟ್ಟೆ ಎಲ್ಲಿ ಹಾರಿ ಹೋಗುತ್ತದೊ ಎಂಬ ಆತಂಕ ಅವರಲ್ಲಿತ್ತು. ಅಂತಹ ಆತಂಕವನ್ನು ಹೊತ್ತುಕೊಂಡೇ ಒಬ್ಬೊಬ್ಬರಾಗಿ ಎದ್ದು ನಿಂತು ಪ್ರಕಾಶನ ಬೆನ್ನಿನ ಸಮೇತ ಚಿಟ್ಟೆಯನ್ನು ತಮ್ಮ ಮೊಬೈಲುಗಳಲ್ಲಿ ಕ್ಲಿಕ್ಕಿಸತೊಡಗಿದರು. ಪ್ರಕಾಶ ಇಂದಿಗೆ ತನ್ನ ಬೆನ್ನು ಸಾರ್ಥಕತೆ ಪಡೆಯಿತೆಂಬ ಭಾವದಲ್ಲಿ ಹೆಮ್ಮೆ ಪಡತೊಡಗಿದ. ಜೊತೆಗೆ ಇವತ್ತಿನ ಸ್ಟಾರ್ ತಾನೆ ಎಂದು ಬೀಗತೊಡಗಿದ. ಡೈನಿಂಗ್ ಹಾಲ್‌ನಲ್ಲಿ ಕುಳಿತಿರುವ ಬಹುತೇಕ ಎಲ್ಲರೂ ಇವರ ಮೇಜಿನ ಕಡೆ ನೋಡತೊಡಗಿದರು. ಸ್ವಲ್ಪ ಹೊತ್ತಿನ ನಂತರ ಸೂರಜ್ ಬಹಳ ಹತ್ತಿರದಿಂದ ಕ್ಲಿಕ್ಕಿಸಲು ಪ್ರಯತ್ನಿಸಿದ್ದರಿಂದ ಪ್ರಕಾಶನ ಬೆನ್ನ ಮೇಲೆ ಪವಡಿಸಿ ನಿಶ್ಚಿಂತೆಯಿಂದ ಇದ್ದ ಚಿಟ್ಟೆ ಗಾಬರಿಗೊಂಡು ಹಾರಿ ಹೋಯಿತು. ಅವರೆಲ್ಲರೂ ಅದು ಹಾರಿ ಹೋದ ದಿಕ್ಕಿನ ಕಡೆಗೆ ನೋಡತೊಡಗಿದರು. ಅದು ಮೇಲ್ಮುಖವಾಗಿ ಸ್ವಲ್ಪ ಹೊತ್ತು ಚಲಿಸಿ ನಂತರ ಪಕ್ಕದಲ್ಲೆ ಇರುವ ಹೂವಿನ ಗಿಡಗಳ ರಾಶಿಯೊಳಗೆ ಸಂಭ್ರಮಿಸತೊಡಗಿತು.

ಆ ಮೇಜಿನ ಮೇಲೆ ಅಸಲಿ ಚರ್ಚೆ ಶುರುವಾಗಿದ್ದೆ ಆಗ. ಸುಮತೀಂದ್ರನನ್ನು ಹೊರತುಪಡಿಸಿ ಎಲ್ಲರೂ ಪ್ರಕಾಶನೇ ಅದೃಷ್ಟವಂತನೆಂದು ಹೊಗಳತೊಡಗಿದರು. ಚಿಟ್ಟೆಯೊಂದು ಹಾಗೆ ಒಬ್ಬರ ಬೆನ್ನ ಮೇಲೆ ಕೂರುವುದು ಬಹಳ ಅಪರೂಪವೆಂದೂ ಅದು ಕೋಟಿಗಳಲ್ಲಿ ಒಬ್ಬರೊ ಇಬ್ಬರೊ ಆಗಿರುತ್ತಾರೆಂದೂ ಅಂತಹವರು ಬಹಳವೇ ಅದೃಷ್ಟವಂತರಾಗಿದ್ದು ಅವರಿಗೆ ಲಕ್ಷ್ಮೀ ಕೃಪಾಕಟಾಕ್ಷ ಆಗುವುದೆಂದು ತಿಳಿಸಿದ್ದಲ್ಲದೆ, ಈ ಎರಡು ಮೂರು ದಿನಗಳಲ್ಲೆ ಅದರ ಫಲಿತಾಂಶ ಸಿಗುವುದಾಗಿ ತಮ್ಮ ಕಡೆಯಿಂದ ಪ್ರಕಾಶನಿಗೆ ಆಶ್ವಾಸನೆಯನ್ನು ನೀಡಿದರು. ಪ್ರಕಾಶ ಇನ್ನಿಲ್ಲದಷ್ಟು ಹಿಗ್ಗಿದ. ತನ್ನ ಬೆನ್ನ ಮೇಲೆ ಕೂತ ಚಿಟ್ಟೆಯ ಚಿತ್ರವನ್ನು ತನ್ನ ಮೊಬೈಲಿಗೆ ಹಾಕಿಸಿಕೊಂಡು ನಂತರ ತನ್ನ ವಾಟ್ಸ್ ಆಪ್ ತಂಡಕ್ಕೆ ಕಳುಹಿಸಿದ. ಕ್ಷಣಾರ್ಧದಲ್ಲಿ ಅವನ ಮೊಬೈಲಲ್ಲಿ ಸಂದೇಶಗಳು ಸಾಲಾಗಿ ಸದ್ದು ಮಾಡತೊಡಗಿದವು. ಎಲ್ಲಾ ಸಂದೇಶಗಳ ಸಾರಾಂಶವೂ ಅದೃಷ್ಟಲಕ್ಷ್ಮಿಯ ಕುರಿತಾಗಿಯೆ ಇತ್ತು. ಅವನ ಮೊಬೈಲಿಗೆ ಸಂದೇಶಗಳು ಹಾಗೆ ಮಳೆಗೆರೆಯುತ್ತಿರುವ ಹೊತ್ತಿಗೆ ಸೂರಜ್– ‘ಪ್ರಕಾಶ್ ಇನ್ನೊಂದು ವಿಷಯ ಇದೆ... ಚಿಟ್ಟೆ ಮೀನ್ಸ್ ಏಂಜಲ್ ಅಂದ್ರೆ ದೇವತೆ... ಹಾ ಹಾ ಯಾವುದಾದರು ಒಳ್ಳೆ ರಂಭೆ ತರಾ ಇರೊ ಫಿಗರ್‌ನ ಅನುಭವಿಸೊ ಚಾನ್ಸ್ ಸಿಗಬಹುದು... ಡೋಂಟ್ ಮಿಸ್ ಇಟ್ ಯಾ’ ಎಂದು ಪ್ರಕಾಶನಲ್ಲಿ ಸುಪ್ತವಾಗಿ ಅಡಗಿದ್ದ ಆಸೆಯೊಂದನ್ನು ಬಡಿದೆಬ್ಬಿಸಲು ಪ್ರಯತ್ನಿಸತೊಡಗಿದ.

‘ಹೇ ಸೂರಜ್, ನೀನ್ ಸುಮ್ನಿರಪ್ಪ’– ಪ್ರಕಾಶ್ ತುಸು ನಾಚುತ್ತಲೆ ನುಡಿದ.
‘ನೋ ಪ್ರಕಾಶ್. ವಾಟ್ ಐ ಆಮ್ ಟೆಲ್ಲಿಂಗ್ ಈಸ್ ಗೋಯಿಂಗ್ ಟು ಹ್ಯಾಪನ್... ಅದೂ ಅದೃಷ್ಟಾನೆ ತಾನೆ... ನೋಡ್ತಾ ಇರು’.
‘ಸೂರಜ್ ಏನಿದೆಲ್ಲ? ಪ್ರಕಾಶ್, ಚಿಟ್ಟೆ ನಿನ್ಮೇಲೆ ಕೂತಿದ್ದಕ್ಕೆ ಖುಷಿ ಆಯ್ತೋ ಇಲ್ಲವೋ..’ ಎಂದು ಸುಮತೀಂದ್ರ ಮೊದಲು ಸೂರಜ್‌ನನ್ನು ಗದರಿಸಿ ನಂತರ ಪ್ರಕಾಶನಿಗೆ ಕೇಳಿದ. ಪ್ರಕಾಶ ಹೌದೆನ್ನುವಂತೆ ತಲೆಯಾಡಿಸಿದ. ನಂತರ ಸುಮತೀಂದ್ರ ‘ಅದಕ್ಕಿಂತಾ ಇನ್ನೇನು ಬೇಕು... ಸಾಕು ನಡೀರಿ, ಯಾರಾದ್ರು ಬಾಸ್ಗಳು ನೋಡಿದ್ರೆ ಮ್ಯಾನ್ ಹವರ್ಸ್ ವೇಸ್ಟ್ ಆಗ್ತಿದೇಂತ ಎಲ್ಲನ್ನ ಮೇಲ್ ಕಳಿಸಿಗಿಳಿಸಾರು’ ಎಂದು ನುಡಿದು ಎದ್ದು ನಿಂತ. ಉಳಿದವರೆಲ್ಲರೂ ‘ಅದು ಸರೀನೆ ಈ ಬಾಸುಗಳ ಮೂಡನ್ನ ನಂಬೋರು ಯಾರು’ ಎಂದುಕೊಳ್ಳುತ್ತಾ ಎದ್ದು ನಿಂತು, ಪಕ್ಕದಲ್ಲೇ ಇರುವ ವಾಷ್ ಬೇಶಿನ್ನಿನಲ್ಲಿ ತಮ್ಮ ತಮ್ಮ ಲೋಟಗಳನ್ನು ತೊಳೆದುಕೊಂಡು ವರ್ಕ್ ಏರಿಯಾಗೆ ನಡೆದರು.
ಹಾಗೆ ತನ್ನ ಕೆಲಸದ ಜಾಗಕ್ಕೆ ನಡೆದ ಪ್ರಕಾಶ್ ಕೆಲಸ ಮಾಡುವ ಮೂಡಿನಲ್ಲಿರಲಿಲ್ಲ. ಅವನ ಮುಂದೆ ಅದೃಷ್ಟ ಕವಲೊಡೆದು ನಿಂತಿರುವ ಹಾಗೆ ಕಾಣಿಸತೊಡಗಿತು. ಒಂದು ಕಾಂಚಾಣವಾದರೆ ಮತ್ತೊಂದು ಹುಡುಗಿ. ಅವನಿಗೆ ಅವೆರಡೂ ಬೇಕಿರುವಂತದೆ. ಆದರೆ ಮೊದಲಿಗೆ ಅವನು ಕಣ್ಣ ಮುಂದೆ ಕಾಂಚಾಣವನ್ನು ತಂದು ನಿಲ್ಲಿಸಿಕೊಂಡ. ಅದು ಬಂದರೆ ಯಾವ ರೂಪದಲ್ಲಿ ಬರಬಹುದೆಂಬುದರ ಬಗ್ಗೆ ಯೋಚಿಸತೊಡಗಿದ.

ಸ್ಯಾಲರಿ ರಿವಿಜನ್, ಪ್ರೊಮೋಷನ್, ದಾರಿಯಲ್ಲಿ ಅಚಾನಕ್ಕಾಗಿ ದುಡ್ಡಿನ ಮೂಟೆ ಸಿಗುವುದು, ಮಾವನ ಮನೆಯ ಕಡೆಯಿಂದ ಹೆಂಡತಿಗೆ ಬರಬೇಕಾಗಿರುವ ಪಾಲು... ಹೀಗೆ ನಾನಾ ತರದಲ್ಲಿ ಯೋಚನೆ ಮಾಡತೊಡಗಿದ. ಹೀಗೆ ಬರಲಿರುವ ಹಣವನ್ನು ಯಾವ ರೀತಿ ಉಪಯೋಗಿಸುವುದು ಎಂಬುದರ ಬಗ್ಗೆಯೂ ಒಂದಷ್ಟು ಯೋಚಿಸಿ ಒಲ್ಲದ ಮನಸ್ಸಿನಿಂದ ಕೆಲಸ ಮಾಡಲು ಪ್ರಯತ್ನಿಸತೊಡಗಿದ.

ನಂತರ ಅವನಿಗೆ ಫ್ಲಿಪ್‌ಕಾರ್ಟ್‌ನ ಮೆಗಾಸೇಲ್ ನೆನಪಿಗೆ ಬಂದು ಅದರಲ್ಲಿ ಈಜಲು ಶುರುವಿಟ್ಟುಕೊಂಡ. ಅಲ್ಲಿರುವ ಬಹುತೇಕ ಮಂದಿ ಆಗಾಗ ಫ್ಲಿಪ್‌ಕಾರ್ಟ್‌ನ ಮೆಗಾ ಸೇಲ್‌ನ ಮಾಯಾ ಕಡಲಿಗೆ ಧುಮುಕುತ್ತಲಿದ್ದರು. ಹಾಗೆ ಆ ಮಾಯೆಯ ಸುಳಿಯಲ್ಲಿ ಅವರೆಲ್ಲ ಸಿಲುಕಿರುವ ಹೊತ್ತಿಗೆ ಪ್ರಕಾಶನಿಗೆ ಕೇವಲ ಒಂದು ರುಪಾಯಿಗೆ ಆರನೂರರ ಬೆಲೆಯ ಪೆನ್‌ಡ್ರೈವ್ ಸಿಕ್ಕಿ ಖುಷಿಯಲ್ಲಿ ‘ಯಾ...’ ಎಂದ. ಅವನ ಸುತ್ತಲು ಇರುವ ಮಂದಿ ಹಾಗೆ ಅವನಿಗೆ ಒಂದು ರುಪಾಯಿಗೆ ಪೆನ್‌ಡ್ರೈವ್ ಸಿಕ್ಕಿದ್ದನ್ನು ಬೆನ್ನ ಮೇಲೆ ಚಿಟ್ಟೆ ಕುಳಿತಿದ್ದರ ಜೊತೆಗೆ ಬೆಸೆದು ಇವತ್ತಿನಿಂದ ಅವನಿಗೆ ಅದೃಷ್ಟ ಖುಲಾಯಿಸಿರುವುದಕ್ಕೆ ಇದಕ್ಕೂ ಬೇರೆ ನಿದರ್ಶನ ಬೇಕೆ ಎನ್ನುವ ರೀತಿಯಲ್ಲಿ ಮಾತನಾಡತೊಡಗಿದರು. ಪ್ರಕಾಶ ಮತ್ತಷ್ಟು ಹಿಗ್ಗತೊಡಗಿದ. ಆ ಹಿಗ್ಗಿನಲ್ಲೇ ಗೂಗಲ್‌ನಲ್ಲಿ ಚಿಟ್ಟೆಯ ಕುರಿತಾಗಿ ಒಂದಷ್ಟು ತಡಕಾಡಿದ. ಗೂಗಲ್ ಚಿಟ್ಟೆಯ ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಅದರ ಪ್ರಭೇದ, ಜೀವನ ಚಕ್ರಗಳನ್ನು ಅವನ ಮುಂದೆ ತೆರೆದಿಟ್ಟಿತು. ಅದರಲ್ಲಿ ಎಲ್ಲಿಯೂ ಅದೃಷ್ಟಲಕ್ಷ್ಮಿಯ ಬಗ್ಗೆ ಪ್ರಸ್ತಾಪವೆ ಇದ್ದಿರಲಿಲ್ಲ. ಆದರೆ ಚಿಟ್ಟೆ ಅಂದರೆ ಏಂಜಲ್... ದೇವಲೋಕದಿಂದ ಇಳಿದು ಬಂದ ದೇವತೆ ಎಂಬುದು ಅವನ ಗೂಗಲ್ ಹುಡುಕಾಟದ ಕೊನೆಗೆ ದಕ್ಕಿದ ಫಲಿತಾಂಶವಾಗಿತ್ತು.

ಗೂಗಲ್‌ನಲ್ಲಿಯ ತಡಕಾಟದ ಪ್ರತಿಫಲದ ದೆಸೆಯಿಂದ ಅವನ ಮನಸು ಹುಡುಗಿಯ ಕಡೆಗೆ ವಾಲತೊಡಗಿತು. ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದಿವೆ. ಒಂದು ಗಂಡು ಒಂದು ಹೆಣ್ಣು ಮಗುವಿನ ತಂದೆಯೂ ಆಗಿರುವ ಅವನು ಕಳೆದ ಏಳೆಂಟು ವರ್ಷಗಳಿಂದ ಮತ್ತೊಂದು ಹೆಣ್ಣಿನ ಸಂಪರ್ಕಕ್ಕೆ ಇನ್ನಿಲ್ಲದಂತೆ ಹಪಾಹಪಿಸುತ್ತಿದ್ದ. ಆ ರೀತಿ ಮತ್ತೊಂದು ಹೆಣ್ಣಿನ ಸಂಪರ್ಕವಿಲ್ಲದೆ ತಾನೆಲ್ಲಿ ಸತ್ತು ಹೋಗುವೆನೋ ಎಂಬ ಆತಂಕವೂ ಅವನಲ್ಲಿ ಆಗಾಗ ಮೂಡಿದ್ದುಂಟು. ಇಷ್ಟು ವರ್ಷಗಳ ತನ್ನ ಆಸೆ ಈಗ ಈಡೇರುವ ಸನಿಹಕ್ಕೆ ಬಂದಿದೆಯೇನೊ ಎಂದು ಅಂದಾಜಿಸಿ ಅವನ ಮೈ ಒಮ್ಮೆ ಜುಮ್ಮೆಂದಿತು. ತನ್ನ ಮನೆಯ ಸುತ್ತಮುತ್ತ ಇರುವ ಹಾಗು ಕಂಪನಿಯಲ್ಲಿರುವ ಒಂದಷ್ಟು ಹೆಣ್ಣುಗಳನ್ನು ಊಹಿಸಿಕೊಂಡು ಯಾರು ಸಿಗಬಹುದೋ ಎಂಬ ಕುತೂಹಲವನ್ನು ಹೆಚ್ಚಿಸಕೊಳ್ಳತೊಡಗಿದ. ಅಂತಹ ಕುತೂಹಲದಲ್ಲಿಯೇ ಅವನು ಮಧ್ಯಾಹ್ನದ ಊಟವನ್ನೂ ಮುಗಿಸಿಕೊಂಡು ಬಂದಿದ್ದ.

ಊಟ ಮುಗಿಸಿಕೊಂಡು ಬಂದು ತಮ್ಮ ತಮ್ಮ ಜಾಗಗಳಲ್ಲಿ ಕುಳಿತು ಒಂದಷ್ಟು ಹರಟುವಾಗ ಪ್ರಕಾಶನ ಬೆನ್ನ ಮೇಲೆ ಚಿಟ್ಟೆ ಕುಳಿತಿದ್ದ ವಿಷಯ ಇನ್ನೂ ಒಂದಷ್ಟು ಸ್ನೇಹಿತರಿಗೆ ಗೊತ್ತಾಗಿ ಅವರ ಪೈಕಿ ನಲವತ್ತೆರಡರ ಆಸುಪಾಸಿನ ಸುರೇಖ ‘ಅಯ್ಯೊ... ಚಿಟ್ಟೆ ಬೆನ್ನ ಮೇಲೆ ಕೂತ್ರೆ ಅದೃಷ್ಟ ಅಂತ ನಿಮಗ್ಯಾರು ಹೇಳಿದ್ದು... ತಲೆ ಅಥವ ಭುಜದ ಮೇಲೆ ಕುಳಿತಿದ್ದರೆ ಅದರ ಕತೆಯೆ ಬೇರೆ ಇರುತ್ತಿತ್ತು. ಆದ್ರೆ ಕುಳಿತಿರೋದು ಬೆನ್ನ ಮೇಲೆ... ಅಂದರೆ ಸಾವಿನ ಸಂಕೇತ... ಮುಂದೆ ನಿಮಗೆ ಮೃತ್ಯು ಗಂಡಾಂತರ ಕಾದಿರುವ ಹಾಗಿದೆ...

ಯಾವುದಕ್ಕೂ ಸ್ವಲ್ಪ ಎಚ್ಚರದಿಂದಿರಿ’ ಎಂದು ನುಡಿದು ಪ್ರಕಾಶ ಕುಗ್ಗುವಂತೆ ಮಾಡಿದ್ದಳು. ಜೊತೆಗೆ ಅದೇ ಚಿಟ್ಟೆ ಮತ್ತೊಂದು ಸಾರಿ ಕೂತರೆ ಗಂಡಾಂತರದ ಪರಿಣಾಮದ ಪ್ರಮಾಣ ದುಪ್ಪಟ್ಟಾಗುವುದೆಂದೂ... ಮೂರನೇ ಸಾರಿ ಕುಳಿತರೆ ಸಾವು ಕಟ್ಟಿಟ್ಟ ಬುತ್ತಿಯೆಂದು ತಿಳಿಸಿ ಅವನಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದಳು. ನಂತರ ಸುರೇಖ ಮತ್ತು ಸೂರಜ್‌ನ ನಡುವೆ ಅವರವರ ನಂಬಿಕೆಗಳನ್ನು ಸಮರ್ಥಿಸುವಂತಹ ವಾಗ್ವಾದ ನಡೆದು ಆ ವಾಗ್ವಾದದ ಬಿಸಿ ತಾರಸಿಯನ್ನು ಮುಟ್ಟಿದ್ದರಿಂದ ನಾರಾಯಣಗೌಡ ಮಧ್ಯೆ ಬಂದು ಇಬ್ಬರನ್ನೂ ತಣ್ಣಗಾಗಿಸಿದ್ದ.

ಸುರೇಖಾಳು ತನ್ನೊಳಗೆ ಬಿತ್ತಿದ ಸಾವಿನ ಬೀಜದ ಪ್ರಭಾವದಿಂದ ಪ್ರಕಾಶ ಸಾಕಷ್ಟು ಕುಗ್ಗಿ ಹೋದ. ಇಲ್ಲ, ಹಾಗಾಗಲಾರದು, ಅದೆಲ್ಲ ಕಟ್ಟುಕತೆ ಎಂಬ ತೀರ್ಮಾನಕ್ಕೆ ಸಾಕಷ್ಟು ಸಾರಿ ಬಂದಿದ್ದನಾದರೂ ಕಡೆಗೆ ಸೂರಜ್ ಮತ್ತು ವೆಂಕಟ್‌ರ ಮಾತು ನಿಜವಾಗಬಹುದಾದರೆ, ಸುರೇಖಾಳ ಮಾತೂ ನಿಜವಾಗುವ ಸಾಧ್ಯತೆ ಇರುತ್ತದೆಯಲ್ಲವೆ ಎಂಬ ಯೋಚನೆ ಬಂದು ಅವನ ಮೈ ಸಣ್ಣಗೆ ಕಂಪಿಸತೊಡಗಿತು.

ಕಾಂಚಾಣದ ಸೆಳೆತ, ಹುಡುಗಿಯ ಆಮಿಷದ ದೆಸೆಯಿಂದ ಹುಟ್ಟಿದ್ದಂತಹ ಮಧುರವಾದ ಪುಳಕಗಳು ಮಾಯವಾಗಿ ಅವನು ಭಯದ ಗೂಡಿನಲ್ಲಿ ಬಂಧಿಯಾಗತೊಡಗಿದ. ಅವನ ಕಂಗಳೊಳಗಿನ ಭಯವನ್ನು ಗಮನಿಸಿದ ಸುಮತೀಂದ್ರ– ‘ಇವರ ಮಾತುಗಳನ್ನೆಲ್ಲ ತಲೆಗೆ ಹಾಕಿಕೊಳ್ಳಬೇಡ... ಹೈಟ್ ಆಫ್ ಸ್ಟುಪಿಡಿಟಿ ಅಷ್ಟೆ... ನೋಡು ಚಿಟ್ಟೆಯೆಂದರೆ ಅದೊಂದು ಮಧುರವಾದ ಅನುಭೂತಿಯನ್ನು ಹುಟ್ಟುಹಾಕುವಂತದ್ದು. ಈ ಆರ್ದತೆ ಅಂತೀವಲ್ಲ... ಮನಸ್ಸು ತೇವಗೊಳ್ಳೋದು, ಒದ್ದೆಯಾಗೋದು... ಈ ರೀತಿಯ ಅನುಭವವನ್ನು ಉಂಟುಮಾಡುವಂತದ್ದು... ಅದು ಬಿಟ್ಟು ಅದೃಷ್ಟಲಕ್ಷ್ಮಿಯಂತೆ, ಹುಡುಗಿಯಂತೆ, ಸಾವಂತೆ... ಏನಿದು ಅತಿರೇಖಗಳು’ ಎಂದು ನುಡಿದ. ನಂತರ ಇನ್ನೂ ಮಾತನಾಡಲು ಅಣಿಯಾಗುತ್ತಲಿದ್ದ. ಅಷ್ಟರಲ್ಲಿ ಪಕ್ಕದಲ್ಲೆ ಇರುವ ವೆಂಕಟ್ ‘ಸಾಕೊ ಮಾರಾಯ, ಅದೆಷ್ಟು ಬೋರ್ ಹೊಡೆಸ್ತೀಯ’ ಎಂದು ರೇಗಿಕೊಂಡದ್ದರಿಂದ ಸುಮ್ಮನಾದ.

ಸುಮತೀಂದ್ರನ ಮಾತುಗಳು ಪ್ರಕಾಶನ ಭಯವನ್ನು ಹೋಗಲಾಡಿಸುವಂತಹ ಶಕ್ತಿಯನ್ನೇನೂ ಹೊಂದಿರಲಿಲ್ಲ. ಅಥವ ಪ್ರಕಾಶನೇ ಸುಮತೀಂದ್ರನ ಮಾತುಗಳ ಕಡೆಗೆ ಗಮನ ಕೊಡಲಿಲ್ಲವೆಂದೂ ಅನಿಸುತ್ತದೆ. ಒಟ್ಟಿನಲ್ಲಿ ಅವನು ಸಂಜೆ ಮನೆಗೆ ಹೋಗಬೇಕಾದರೆ ಆ ಭಯವನ್ನೂ ಹೊತ್ತುಕೊಂಡು ಹೋಗಿದ್ದ. ಅಂತಹ ಭಯದಲ್ಲೇ ಯಾರ ಬಳಿಯೂ ಮಾತನಾಡದೆ ಊಟವನ್ನೂ ಸರಿಯಾಗಿ ಮಾಡದೆ ಬೇಗ ಹಾಸಿಗೆ ಸೇರಿದ್ದ. ದಿನವೂ ಟೀವಿ ರಿಮೋಟ್‌ಗಾಗಿ ಜಗಳವಾಡುತ್ತಿದ್ದವನು ಇವತ್ತೇನು ಹೀಗೆ ಎಂದು ಅವನ ಹೆಂಡತಿಗೆ ಆಶ್ಚರ್ಯವಾದರೂ, ‘ಸದ್ಯ ಹೇಗೊ ರಿಮೋಟ್ ಕೈಗೆ ಸಿಕ್ಕಿತಲ್ಲ’ ಎಂದು ಖುಷಿಯಾಗಿ ಟೀವಿ ಸೀರಿಯಲ್‌ನಲ್ಲಿ ಮಗ್ನಳಾದಳು. ಪ್ರಕಾಶ ಬೇಗ ಹಾಸಿಗೆಯನ್ನು ಸೇರಿದ. ಆದರೆ, ಅವನಿಗೆ ನಿದ್ದೆ ಬರುವಂತಿರಲಿಲ್ಲ. ರಾತ್ರಿಯಿಡೀ ಭಯವನ್ನು ಹೊದ್ದು ಹೊರಳಾಡಿ ಆಗಾಗ ಅರೆನಿದ್ರೆಗೆ ಜಾರುತ್ತಲಿದ್ದ. ಅಂತಹ ಅರೆನಿದ್ರೆಗಳಲ್ಲಿ ಚಿಟ್ಟೆಯೊಂದು ಹಾರಿ ಬಂದು ಯಮಪಾಶವನ್ನು ತನ್ನ ಕುತ್ತಿಗೆಗೆ ಬಿಗಿಯುತ್ತಿರುವಂತೆಯೂ, ಮತ್ತೊಂದು ಸಾರಿ ಚಿಟ್ಟೆ ತನ್ನ ಕುತ್ತಿಗೆಯ ಮೇಲೆ ಕುಳಿತು ತನ್ನೊಳಗಿನ ರಕ್ತವನ್ನೆಲ್ಲ ಹೀರುತ್ತಿರುವಂತೆಯೂ... ಹೀಗೆ ಚಿಟ್ಟೆಯು ನಾನಾ ತರದಲ್ಲಿ ಚಿತ್ರಹಿಂಸೆ ನೀಡುತ್ತಿರುವಂತೆ ಕನಸುಗಳು ಬಿದ್ದು ಬೆಚ್ಚಿ ಎದ್ದು ಕೂರುತ್ತಲಿದ್ದ. ಇಡೀ ರಾತ್ರಿ ಹೀಗೆ ಕಳೆದು ಮಾರನೇ ದಿನ ನಿದ್ದೆ ಹತ್ತದ ಕಂಗಳನ್ನು ಹೊತ್ತು ಕಂಪನಿಯೊಳಗೆ ಹೊಕ್ಕಿದ್ದ.

ಅಂದು ಎಂದಿನಂತೆ ಟೀ ವಿರಾಮದಲ್ಲಿ ಪ್ರಕಾಶನ ಸಂಗಡಿಗರೆಲ್ಲರೂ ಬಹುತೇಕ ಹಿಂದಿನ ದಿನದ ಚಿಟ್ಟೆಯ ಕತೆಯನ್ನು ಮರೆತೆ ಬಿಟ್ಟಿದ್ದರು. ಅವರೆಲ್ಲ ತಮ್ಮ ಪಾಡಿಗೆ ಎಂದಿನಂತೆ ವಾಟ್ಸ್ ಆಪ್ ಸಂದೇಶಗಳಲ್ಲಿ ಮುಳುಗಿದ್ದರು. ಪ್ರಕಾಶ ಮಾತ್ರ ಯೋಚನೆಯಲ್ಲಿ ಮುಳುಗಿದ. ಆ ಚಿಟ್ಟೆ ಮತ್ತೆ ಇಂದು ಸಹ ತನ್ನ ಬೆನ್ನ ಮೇಲೆ ಕುಳಿತರೆ ಎಂಬ ಆತಂಕದಲ್ಲೆ ಲೆಮನ್ ಟೀ ಹೀರತೊಡಗಿದ. ಚಿಟ್ಟೆಗಿಂತಲೂ ಅವನನ್ನು ಸುರೇಖಾಳ ಮಾತು ಹೆಚ್ಚು ಕಾಡತೊಡಗಿತು. ಹೀಗೆ ಸುರೇಖಾಳ ಮಾತು ಅವನನ್ನು ಕಾಡುತ್ತಿರುವ ಹೊತ್ತಿಗೆ ಆ ಚಿಟ್ಟೆ ಮತ್ತೆ ಬಂದು ಬೆನ್ನ ಮೇಲೆ ಅದೇ ಜಾಗದಲ್ಲಿ ಕುಳಿತುಕೊಂಡಿತು. ಸೂರಜ್, ವೆಂಕಟ್ ಮತ್ತಿತರರು ಮೊಬೈಲುಗಳನ್ನು ಕ್ಲಿಕ್ಕಿಸಲು ಎದ್ದರು. ಆದರೆ ಪ್ರಕಾಶ ತನ್ನ ಬೆನ್ನನ್ನು ವದರಿ ತನ್ನ ಬಲಗೈಯನ್ನು ಹಿಮ್ಮುಖವಾಗಿ ಬೆನ್ನ ಮೇಲೆ ತಿರುಗಿಸಿ ಸವರುತ್ತಾ ಚಿಟ್ಟೆಯನ್ನು ಓಡಿಸಿದ. ಸೂರಜ್ ತುಸು ಬೇಸರಿಸಿಕೊಂಡನಾದರೂ ನಂತರ ಈಗ ಬಂದಿದ್ದ ಚಿಟ್ಟೆ ನಿನ್ನೆ ಬಂದ ಚಿಟ್ಟೆಯೇ ಆಗಿತ್ತೆಂದು ನುಡಿದು ಪ್ರಕಾಶನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ. ವೆಂಕಟ್ ಹಾಗೂ ನಾರಾಯಣಗೌಡ ನಿನ್ನೆ ಬಂದ ಚಿಟ್ಟೆಯೇ ಮತ್ತೆ ಇಂದೂ ಬಂದು ಅದೇ ಜಾಗದಲ್ಲಿ ಕುಳಿತಿದೆ ಎಂದಾದರೆ, ಸುರೇಖಾಳ ಮಾತನ್ನು ತೆಗೆದು ಹಾಕುವಂತಿಲ್ಲ ಎಂದು ನುಡಿದು ಅವನ ಭಯವನ್ನು ಇಮ್ಮಡಿಗೊಳಿಸಿದರು.

ಅಲ್ಲಿಂದ ಎದ್ದ ಅವನು ನೇರ ಸುರೇಖಾಳ ಬಳಿ ನಡೆದು ಚಿಟ್ಟೆ ಮತ್ತೆ ಕುಳಿತುಕೊಂಡ ವಿಚಾರ ತಿಳಿಸಿ, ಇದಕ್ಕೊಂದು ಪರಿಹಾರ ತಿಳಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡ. ಅವಳು ಒಂದಷ್ಟು ಯೋಚನೆ ಮಾಡಿ ನಂತರ ಟೀವಿ ಚಾನಲ್ ಒಂದರಲ್ಲಿ ನಿತ್ಯ ಬೆಳಗ್ಗೆ ಬರುವ ಸ್ವಾಮೀಜಿಯೊಬ್ಬರ ಫೋನ್ ನಂಬರ್ ಕೊಟ್ಟು– ‘ನೋಡು ಪ್ರಕಾಶ್. ಇವರು ನನ್ನ ಅಂಕಲ್, ವೆರ್ರಿ ಫೇಮಸ್ ಪರ್ಸನ್. ಮತ್ತೆ ಇಂತಹ ವಿಷಯಗಳಿಗೆ ಪರಿಹಾರ ಕೊಡೋದರಲ್ಲಿ ತುಂಬಾ ನಿಪುಣರು. ಆದಷ್ಟು ಬೇಗ ಯು ಗೋ ಅಂಡ್ ಮೀಟ್ ಹಿಮ್... ತಿಳೀತೆ ಎಂದು ನುಡಿದಳು. ನಾಳಿದ್ದು ಭಾನುವಾರ ಹೋದರೆ ತೊಂದರೆಯಿಲ್ಲವೆ? ತಡವಾದೀತೆ? ಎಂಬ ಅವನ ಪ್ರಶ್ನೆಗಳಿಗೆ ಅವಳು, ‘ಚಿಟ್ಟೆ ಮೂರನೇ ಸಾರಿ ಕೂತರೆ ಒಂದು ತಿಂಗಳೊಳಗೆ ಸಾವು ಖಚಿತ ಅಂತ ನಮ್ಮ ಅಂಕಲ್ ಹೇಳಿದ್ರು. ಆದ್ರೆ ನಿಮ್ಮ ಮೇಲೆ ಕುಳಿತಿರೋದು ಎರಡು ಸಾರಿ ತಾನೆ... ಆದ್ರೂ ಗಂಡಾಂತ್ರ ಇದ್ದೆ ಇರುತ್ತೆ. ಹುಂ ಸಂಡೆ ತೊಂದ್ರೆ ಇಲ್ಲ ಅಂತ ಕಾಣುತ್ತೆ. ಬಟ್ ಹಿ ವಿಲ್ ಚಾರ್ಜ್ ಮೋರ್ ಆನ್ ದಟ್ ಡೇ’ ಎಂದು ಉತ್ತರಿಸಿದಳು.

ಅಂದು ಹೇಗೊ ಒಲ್ಲದ ಮನಸಿನಲ್ಲಿ ದಿನವನ್ನು ದೂಡಿ ಮನೆ ತಲುಪಿದ. ಹೆಂಡತಿಗೆ ಹಿಂದಿನ ದಿವಸದಿಂದ ನಡೆದ ಎಲ್ಲವನ್ನೂ ವಿವರಿಸಿದ. ಅದಕ್ಕವಳು ಸುರೇಖಾಳ ಮಾತು ಸರಿಯಿದೆಯೆಂದೂ ಚಿಟ್ಟೆ ಮನುಷ್ಯನ ಮೇಲೆ ಎಲ್ಲೆಲ್ಲಿ ಕೂತರೆ ಏನೇನಾಗುತ್ತದೆ ಎಂಬುದನ್ನು ಈ ಹಿಂದೆ ಟೀವಿ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯೊಬ್ಬರು ತಿಳಿಸಿದ್ದರೆಂದೂ ತಿಳಿಸಿದಳು. ನಂತರ ಎಲ್ಲೋ ಶನಿದೇವ ಚಿಟ್ಟೆಯ ರೂಪದಲ್ಲಿ ತಮ್ಮನ್ನು ಕಾಡಲು ಶುರುವಿಟ್ಟುಕೊಂಡಿರಬೇಕೆಂದು ತೀರ್ಮಾನಿಸಿ ಬರಲಿರುವ ಶ್ರಾವಣ ಶನಿವಾರಗಳಲ್ಲಿ ಶನಿಮಹಾತ್ಮೆ ಕತೆಯನ್ನು ಏರ್ಪಡಿಸಿ ಶನಿದೇವರ ಕಾಟದಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದಳು.

ಪ್ರಕಾಶನಿಗೆ ಅಂದು ರಾತ್ರಿಯೂ ನಿದಿರೆಯ ಕರುಣೆ ಸಿಕ್ಕಿರಲಿಲ್ಲ. ಬೆಳಗ್ಗೆ ಎಂದಿನಂತೆ ಎದ್ದು ಕೆಲಸಕ್ಕೆ ಹೋರಟಾಗ ಅವನಲ್ಲಿ ಭಯದ ಜೊತೆಗೆ ಮತ್ತೆ ಆ ಚಿಟ್ಟೆ ಇವತ್ತೂ ಬಂದು ಕೂರಲಿದೆಯೆ ಎಂಬ ಕುತೂಹಲವೂ ಜುಗಲ್‌ಬಂದಿಗೆ ಇಳಿದಿತ್ತು. ಕಂಪನಿಯೊಳಗೆ ಕಾಲಿಟ್ಟ ತಕ್ಷಣ ಒಂದಿಬ್ಬರು ಸ್ನೇಹಿತರು ‘ಗುಡ್‌ಮಾರ್ನಿಂಗ್ ಚಿಟ್ಟೆ ಪ್ರಕಾಶ್’ ಎಂದಿದ್ದರು. ತನ್ನ ಹೆಸರಿನ ಜೊತೆಗೆ ಚಿಟ್ಟೆಯನ್ನು ಸೇರಿಸಿದ್ದು ಅವನಿಗೆ ಸುತಾರಾಂ ಹಿಡಿಸಲಿಲ್ಲ. ಅದನ್ನವರಿಗೆ ತಿಳಿಸಿದ. ಅದಕ್ಕವರು ನಕ್ಕು ‘ಓಹ್ ಕಮಾನ್. ನಮ್ಮ ಕಡೆ ಚಿಟ್ಟೆ ಗೋತ್ರದವರೂ ಇದಾರೆ ಗೊತ್ತೆ. ಬಹುಶಃ ನಿಮ್ಮ ಮಕ್ಕಳ ಕಾಲಕ್ಕೆ ಅವರ ಗೋತ್ರಾನೂ ಚಿಟ್ಟೆ ಗೋತ್ರ ಆಗಬಹುದೇನೊ ಯಾರಿಗೆ ಗೊತ್ತು’ ಎಂದು ಕಾಲೆಳೆದರು. ಪ್ರಕಾಶ ಏನೊಂದೂ ಮಾತನಾಡದೆ ಸುಮ್ಮನಾದ.

ಟೀ ವಿರಾಮ ಬರುತ್ತಿದ್ದಂತೆ ಅವನ ಭಯ ಮತ್ತು ಕುತೂಹಲಗಳು ಉತ್ತುಂಗವನ್ನು ತಲುಪಿದ್ದವು. ಆ ಎರಡರ ಭಾರಕ್ಕೆ ಕುಗ್ಗಿಹೋಗಿದ್ದ ಅವನು ಒಲ್ಲದ ಮನಸಿನಿಂದಲೇ ಟೀ ಕುಡಿಯಲು ಶುರುಮಾಡಿದ. ಅವನ ಸಂಗಡಿಗರು ಚಿಟ್ಟೆಯನ್ನು ಹುಡುಕತೊಡಗಿದರು. ಅವನು ಮಾತ್ರ ಅದನ್ನು ಶಪಿಸುತ್ತಾ ಮತ್ತೆ ಬಾರದಿರಲೆಂದು ಪ್ರಾರ್ಥಿಸತೊಡಗಿದ. ಬಹಳ ಸಮಯ ಕಳೆದರೂ ಚಿಟ್ಟೆ ಅವರ ಮೇಜಿನ ಬಳಿ ಕಾಣಿಸಕೊಳ್ಳಲಿಲ್ಲ. ಆದ್ದರಿಂದ ಚಿಟ್ಟೆಯನ್ನು ಮರೆತು ಮೊಬೈಲುಗಳ ಪರದೆಗಳ ಮೇಲೆ ಬೆರಳಾಡಿಸುತ್ತಾ ತಮ್ಮ ಎಂದಿನ ಲೋಕಕ್ಕೆ ಜಾರತೊಡಗಿದರು. ಹೀಗೆ ಮೊಬೈಲ್ ಪರದೆಯನ್ನು ಜಾಲಾಡುತ್ತ ಅಚಾನಕ್ಕಾಗಿ ಪಕ್ಕದ ಗಿಡದ ಮೇಲೆ ಕಣ್ಣಾಡಿಸಿದ ಸೂರಜ್‌ಗೆ ಅಲ್ಲಿ ಏನೋ ಕಂಡಂತಾಗಿ ಎದ್ದು ಅತ್ತ ಸಾಗಿದ.

ಅಲ್ಲಿ ಗಿಡವೊಂದನ್ನು ಸೂಕ್ಷ್ಮವಾಗಿ ಗಮನಿಸಿ ನಂತರ ಎಲೆಯ ಮರೆಗಿದ್ದ ಚಿಟ್ಟೆಯನ್ನು ಕೈಲಿ ಹಿಡಿದು ಮತ್ತೆ ವಾಪಸ್ ಬಂದು, ಚಿಟ್ಟೆಯನ್ನು ಮೇಜಿನ ನಡುವೆ ಇಟ್ಟು, ‘ಪಾಪ, ಅದೇ ಚಿಟ್ಟೆ ತರಾ ಕಾಣ್ತಾಯಿದೆ... ಇಟ್ ಈಸ್ ನೋ ಮೋರ್’ ಎಂದು ನುಡಿದ. ಪ್ರಕಾಶ ಎಲ್ಲರಿಗೂ ಕೇಳಿಸುವ ಹಾಗೆ ‘ಸದ್ಯ ತೊಲಗ್ತು ಅನಿಷ್ಟ’ ಎಂದು ನುಡಿದು ತುಸು ನಿರಾಳನಾದ. ಚಿಟ್ಟೆಯೊಂದು ಅದೃಷ್ಟ ಲಕ್ಷ್ಮಿಯಾಗಿ, ದೇವತೆಯಾಗಿ, ಹುಡುಗಿಯಾಗಿ, ಸಾವಾಗಿ, ಕೊನೆಗೆ ಅನಿಷ್ಟವಾಗಿ ಮೇಜಿನ ಮದ್ಯದಲ್ಲಿ ಸತ್ತುಬಿದ್ದಿರುವ ಪರಿಯನ್ನು ಸುಮತೀಂದ್ರ ವಿಷಾದದಿಂದ ನೋಡತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT