ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರು

ಕವಿತೆ
Last Updated 26 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಇಲ್ಲೇ
ನಾನು ವಾಸಿಸುತ್ತಿರುವುದು
ಈ ಮಹಾನಗರದ ಮಹಡಿಗಳಲ್ಲಿ
ನನ್ನಾತ್ಮದ ಬೇರು ಇಳಿದಿರುವುದು
ಅಲ್ಲೇ
ತಲೆಮಾರುಗಳು ನೇಗಿಲು ಸವೆಸಿದ
ನಮ್ಮ ಹೊಲದಲ್ಲಿ
ಎರೆಹುಳುಗಳೊಡನೆ
ಸರಸವಾಡುತ್ತಾ

ತೊಟ್ಟಿಕ್ಕುವ ಜಿಪುಣ ನಲ್ಲಿ
ಬಕೇಟು ನೀರಲ್ಲೇ ಜಳಕ
ಮನಸ್ಸು ಜಿಗಿಯುವುದು ಮಾತ್ರ
ಊರಿನ ಕೆರೆಗೆ
ಪಾದಗಳಿಗೆ ಮೀನು
ಮುತ್ತಿಡುವ ಪುಳಕಕ್ಕೇ
ಎಲ್ಲವೂ ಬಿಕರಿಗಿರುವ
ಈ ನಗರದ ಸಾಲು ಸಾಲು
ಅನ್ನದಂಗಡಿ ಅಂಗಳದಲ್ಲಿ
ಗಂಗಳ ತುಂಬಾ ಉಂಡರೂ
ಹಸಿವಿಂಗುವುದು ಮಾತ್ರ
ಕಿತ್ತಾಡಿತಿಂದ ಹಿಟ್ಟಿನಮಡಕೆ ಸೀಕು,
ಗುಡ್ಡೇಬಾಡಿನ ಕೌಸು
ಸುಟ್ಟುತಿಂದ ಕಾಚಕ್ಕಿ ಅವರೆ ಸೊಗಡು,
ಅವ್ವನ ಬೆರಳಗುರುತಿನ ರೊಟ್ಟಿಗೇ

ಉತ್ತಿ ಬಿತ್ತಿ ಬೆಳೆವಾಗ
ಉಸಿರಿಗಂಟಿದ ಮಣ್ಣಿನ ಘಮ
ಮೈಗಂಟಿದ ಸಗಣಿ ಗಂಜಲದ ಕಮಟು
ಈ ನಗರದ ಯಾವ ಅತ್ತರು ಪೂಸಿಕೊಂಡರೂ
ಮಾಸುತ್ತಿಲ್ಲ

ಸಮಯಸೋರುವ
ಟ್ರಾಫಿಕ್ ಸಿಗ್ನಲ್ ಧಾವಂತದಲ್ಲಿ
ಭರವಸೆ ಹೊತ್ತುತರುವ
ಮಳೆಮೋಡಗಳೆಡೆಗೆ ಕಣ್ಣಾಯಿಸುತ್ತೇನೆ
ರಾತ್ರಿ ಝಗಮಗಿಸುವ ಬೀದಿ ದೀಪಗಳ ನಡುವೆ
ಕಳೆದುಹೋಗುವ ಬಾಲ್ಯದ ಚಂದಿರನ ಇಣುಕುತ್ತೇನೆ
ಎದೆಕೊರೆವ ರೈತರ ಆತ್ಮಹತ್ಯೆ
ಸುದ್ದಿಗೆ ಸ್ತಬ್ಧನಾಗಿ ಕದವಿಕ್ಕಿ ಮಲಗುತ್ತೇನೆ

ನೇಗಿಲಗೆರೆ ಹೊಲ ಗದ್ದೆನಾಟಿ
ಸುಗ್ಗಿಯ ಕನಸು ಇರುಳಜೀಕುತ್ತವೆ
ಮುಂಜಾನೆ
ಊರನೆನಪು ತುಂಬಿಕೊಂಡಿರುವ
ಕುಂಡದಲ್ಲಿ ಹಿಡಿ ಧಾನ್ಯ ಚೆಲ್ಲಿ
ಬೀಜಬಿರಿವ ಸದ್ದಿಗೆ ಹಗೂರಾಗುತ್ತೇನೆ
ಇಲ್ಲೇ
ನಾನು ವಾಸಿಸುತ್ತಿರುವುದು
ಈ ಮಹಾನಗರದ ಗಲ್ಲಿಗಳಲ್ಲಿ
ಬೇರು ಮಾತ್ರ ಅಲ್ಲೇ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT