ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಗಿಗಿರಿ

ಕಥೆ
Last Updated 8 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮುನಿಸಿಪಾಲಿಟಿಯಲ್ಲಿ ಪೌರಕಾರ್ಮಿಕನಾಗಿದ್ದ ಮುತ್ಯಾಲು ಬೆಳಗ್ಗೆಯಿಂದ ಕಟ್ಟಿಕೊಂಡಿರುತ್ತಿದ್ದ ಹತ್ತಾರು ಮ್ಯಾನ್ ಹೋಲ್‌ಗಳನ್ನು ನೈಂಟಿ ಹಾಕಿಕೊಂಡೇ ಸರಾಗಗೊಳಿಸುತ್ತಿದ್ದವನು, ತನ್ನ ಮಗನಾದರೂ ಚೆನ್ನಾಗಿ ಓದಿ ಕಮೀಶನರ್ ಆಗಬೇಕೆಂದು ಕನಸುಕಂಡಿದ್ದ. ಅವತ್ತೊಂದಿನ ಕಲ್ಮಠದ ಹನುಮಂತರಾಯನಗುಡಿ ಹತ್ತಿರ ದೊಡ್ಡಮೋರಿ ನೀರೆಲ್ಲ ದೇವಸ್ಥಾನದ ಒಳಗೆ ನುಗ್ಗಿ, ಮಲಿನಗೊಂಡಿದ್ದ ದೇವರನ್ನು ಸ್ವಚ್ಛಗೊಳಿಸುತ್ತಿದ್ದಾಗ ಪರಿಶೀಲನೆಗೆಂದು ಬಿಳೀಕಾರಿನಲ್ಲಿ ಬಿಳೀಷರ್ಟಿನ ಮೇಲೊಂದು ಕಪ್ಪು ಟೈ ಕಟ್ಟಿಕೊಂಡು ಬಂದಿದ್ದ ಮೂವತ್ತೈದರ ಉತ್ತರಭಾರತದ ಹುಡುಗನನ್ನು ನೋಡಿದಾಕ್ಷಣ ಅವನಿಗರಿವಿಲ್ಲದೇ ಎರಡೂ ಕೈಯೆತ್ತಿ ಮುಗಿದಿದ್ದ. ಅದ್ಯಾಕೋ ಆತ ನಕ್ಕ ಒಂದು ಮುಗುಳ್ನಗುವಿನಿಂದ ಪುಳಕಿತನಾದ ಮುತ್ಯಾಲು, ತನ್ನ ಮಗನೂ ಹಿಂಗೆ ಕಮೀಷನರ್ ಆಗಲಿ ಅಂತ ಆಂಜನೇಯಪ್ಪನಿಗೆ ಆ ಕ್ಷಣವೇ ಹರಕೆ ಹೊತ್ತುಕೊಂಡು, ಇನ್ನೆಂದೂ ಮಟ್ಟಲಾಗದ ದೇವರ ಎರಡೂ ಕಾಲುಗಳನ್ನು ಹಿಡಿದುಕೊಂಡು ಬೇಡಿಕೊಂಡಿದ್ದ.

ಯಾರದೋ ಮನೆಯ ಮ್ಯಾನ್‌ಹೋಲ್ ಕಟ್ಟಿಕೊಂಡಿದ್ದನ್ನು ಸರಿಮಾಡಿಕೊಟ್ಟಿದ್ದರಿಂದ ಕೈತುಂಬ ಬಂದ ದುಡ್ಡಲ್ಲಿ ಗಡದ್ದಾಗಿ ಕುಡಿದು ತೂರಾಡಿಕೊಂಡು ಮನೆ ಸೇರಿದಾಗ ರಾತ್ರಿ ಹನ್ನೆರಡೂವರೆಯಾಗಿತ್ತು. ತಗಡು ಬಾಗಿಲಿಗೆ ತಗುಲಿಹಾಕಿದ್ದ ಅಗಳಿಯನ್ನು ಕಿರುಬೆರಳು ಹಾಕಿ ಲಟಾರೆಂದು ಹಾರಿಸಿ ಒಳಬಂದವನು ಸುಮ್ಮನೆ ಮಲಗಿದ್ದರೆ ಏನೂ ಆಗುತ್ತಿರಲಿಲ್ಲ. ಬದಲಾಗಿ ಕುಡಿದ ಗುಂಗಿನಲ್ಲಿ ಮಲಗಿದ್ದ ಹೆಂಡತಿಯನ್ನು ತಟ್ಟಿತಟ್ಟಿ ಎಬ್ಬಿಸಿ ತನ್ನದೇ ವಕ್ರಪ್ರಲಾಪದಲ್ಲಿ ಭಾಷಣ ಬಿಗಿಯಲಾರಂಭಿಸಿದ್ದ.

ಮುತ್ಯಾಲನ ಅಕ್ಕನಮಗಳೇ ಆಗಿದ್ದ ಮುತ್ಯಾಲಿ ಗಂಡನಿಗೆ ಹೇಳಿಮಾಡಿಸಿದಂತಹ ಜೋಡಿ. ಅದೇ ಎತ್ತರ, ಅದೇ ಬಣ್ಣ, ಅದೇ ಆಳ್ತನ.. ಗುಣದಲ್ಲೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ರಾತ್ರಿ ಮಲಗುವಾಗ ಉಂಡ ಉಪ್ಪಿನ ಎಸರಿನ ಜೊತೆ ನೆಂಚಿಕೊಂಡು ಸ್ವಲ್ಪಮಾತ್ರ ಹಾಕಿಕೊಂಡಿದ್ದಳು. ಗಂಡ ತನ್ನ ತೆವಲು ತೀರಿಸೆಂದೋ ಏನೋ ತನ್ನೆಡೆಗೆ ತೆವಳುತ್ತಿದ್ದಾನೆಂದು ನಿದ್ದೆಯಲ್ಲಿದ್ದ ಅವಳೂ ಕೊಸರಿದಳು. ನಾಚಿಕೆಗೇಡಿನ ಮನುಷ್ಯ, ತನಗಿಂತಲೂ ಒಂದೂವರೆ ಅಡಿ ಎತ್ತರ ಬೆಳೆದಿರುವ ಮಗ ಮನೆಯಲ್ಲಿ ಮಲಗಿರುವಾಗ ಇವನದೆಂತಹ ಅಸಭ್ಯತೆಯೆಂದು ಕನಲಿದಳು. ಮಗನಿಗಿನ್ನೂ ನಿದ್ದೆ ಹತ್ತಿಲ್ಲವೆಂಬುದು ಅವಳಿಗೆ ಗೊತ್ತಿತ್ತು. ತನ್ನ ಮಗನೆದುರು ತಾನು ಮಾತ್ರ ಪತಿವ್ರತೆ, ಗಂಡನೇ ಅಪಾಪೋಲಿ ಎಂಬಂತೆ ಬಿಂಬಿಸಲೋಸುಗ ಕೈ ಕಿತ್ತು ಬಿಸಾಕಿ ಹುಸಿಬೈಗುಳ ಸುರಿಸಿದಳು.

ತನ್ನ ನಿದ್ದೆಗೆ ಭಂಗವಾಗುತ್ತಿರುವುದಾಗಿ ಮಗ ಭಂಗಿರಾಜ ಗೊಣಗಿದರೂ ಮುತ್ಯಾಲ ಬಾಯಿಮುಚ್ಚಲಿಲ್ಲ. ‘ನೀನು ಹುಟ್ಟೋಕ್ಕೆ ಮೊದಲಿಂದಲೂ ನಾವು ಹಿಂಗೇ ಕಣಲೇ ಮಗನೇ ಇರೋದು.. ನಾವು ಹಿಂಗೆ ಇದ್ದಿದ್ಕೆ ನೀನು ಹುಟ್ಟಿದ್ದು.. ಇಲ್ದಿದ್ರೆ ನೀನೆಲ್ಲಿರ್ತಿದ್ದೆ..’ ಎಂದು ಮುಸಿಮುಸಿ ನಕ್ಕವನು, ವಟವಟವೆನ್ನುತ್ತ ಮಗನ ಬಾಯಿ ಮುಚ್ಚಿಸಲು ನೋಡಿದ. ಆದರೆ ಹರೆಯಕ್ಕೆ ಬಂದಿದ್ದ ಮಗ, ತನ್ನ ತಾಯಿಯ ಮೇಲೆ ಮುದಿಹುಲಿಯಂತೆ ಆತ ಮಾಡಿದ ಆಕ್ರಮಣವನ್ನು ಸಹಿಸಿಕೊಳ್ಳಲಾರದೇ ಎದ್ದುಬಂದವನು ಕೊರಳಪಟ್ಟಿ ಹಿಡಿದೆತ್ತಿದ. ಸೈಂಧವನಂತಿದ್ದ ಮಗ ದರದರನೆ ಎಳಕೊಂಡು ಬಂದು ಆಚೆಗೆ ಎಸೆದೇಬಿಟ್ಟ. ಮೊದಲೇ ಕುಡಿದೂ ಕುಡಿದೂ ಅರೆಬೆತ್ತಲೆ ಫಕೀರನಂತಿದ್ದ ಮುತ್ಯಾಲುವಿನ ತಲೆಯೆನ್ನುವುದು ಚರಂಡಿಕಲ್ಲಿಗೆ ತಾಗಿ ರಕ್ತವೆನ್ನುವುದು ಬಳಬಳನೆ ನೀರುಸುರಿದಂತೆ ಸುರಿದು ಚರಂಡಿ ಸೇರಿಕೊಂಡಿತು.

ಮೇಗಲಕೇರಿ ಸಾಬರ ಓಣಿಯಿಂದ ಹರಿದುಬರುತ್ತಿದ್ದ ಕಸಾಯಿಖಾನೆಯ ರಕ್ತದ ಜತೆ ಮುತ್ಯಾಲುವಿನ ರಕ್ತವೂ ಸೇರಿ, ಅದು ದನದ ರಕ್ತವೋ, ಮನುಷ್ಯನ ರಕ್ತವೋ ಎಂದು ಡೌಟುಬರುವಂತಿತ್ತು. ಮೊದಮೊದಲು ನಾಟಕವಾಡುತ್ತಿದ್ದಾನೆಂದು ಭಾವಿಸಿದ ಹೆಂಡತಿ ಮುತ್ಯಾಲಮ್ಮ ಒಂದರೆಕ್ಷಣ ಸುಮ್ಮನಿದ್ದವಳು ಆಮೇಲೂ ಅವನು ಎದ್ದು ಬಾರದುದನ್ನು ಕಂಡು ಅನುಮಾನಗೊಂಡಳು. ಸೀಮೆಎಣ್ಣೆ ಬುಡ್ಡಿಯನ್ನು ಹಿಡಕೊಂಡು ಹತ್ತಿರಕ್ಕೆ ಹೋಗಿ ನೋಡಿದಳು. ತಟಸ್ಥನಾಗಿದ್ದ ಮುತ್ಯಾಲ! ಒಂದುಕ್ಷಣ ಏನುಮಾಡಬೇಕೆಂದು ತಿಳಿಯದೇ ಗಲಿಬಿಲಿಗೊಂಡವಳು ತನಗರಿವಿರದೇ ರಪರಪನೇ ಎದೆಚಚ್ಚಿಕೊಂಡು ಬಡಕೊಳ್ಳಲಾರಂಭಿಸಿದಳು. ಸುಮ್ಮನೇ ಹೋಗಿ ಮಲಗಿಕೊಂಡಿದ್ದ ರಾಜ ಗಾಬರಿಗೊಂಡು ಎದ್ದುಬಂದು ನೋಡಿ ಒಂದು ಕ್ಷಣ ಸ್ತಂಭೀಭೂತನಾದ! ತನ್ನ ಎಸೆತಕ್ಕೇ ಅಪ್ಪ ಸತ್ತುಹೋದದ್ದೆಂದು ಅವನಿಗೆ ಖಾತ್ರಿಯಾಗಿಹೋಯಿತು!

ಸುತ್ತಮುತ್ತಲಿನ ಜನ ಮುತ್ತಿಕೊಂಡರು. ಪೊಲೀಸರೂ ಬಂದರು. ಸತ್ತ ಗಂಡನಿಗೋಸ್ಕರ ಬದುಕಿರುವ ಮಗ ಜೈಲಿಗೆ ಹೋದರೆ ತನಗ್ಯಾರು ದಿಕ್ಕು ಎಂದು ಕಂಗಾಲಾಗಿದ್ದಳು. ಒಂದಾ ಮಾಡಲು ಹೋಗಿದ್ದವನು ಕುಡಿದ ಮತ್ತಿನಲ್ಲಿ ಬಿದ್ದು, ಕಲ್ಲು ತಲೆಗೆ ಹೊಡೆದು ಸತ್ತದ್ದೆಂದು ಹೇಳಿಕೆ ನೀಡಿದಳು. ತಾನು ಮಲಗಿದ್ದರಿಂದ ಏನೂ ಗೊತ್ತಿಲ್ಲ, ಏನೋ ಸದ್ದಾಯಿತೆಂದು ನೋಡಿದರೆ ಅಪ್ಪ ಸತ್ತುಬಿದ್ದಿದ್ದ ಎಂದಷ್ಟೇ ಹೇಳಿದ ಭಂಗಿರಾಜ, ಸತ್ಯ ಎನ್ನುವುದು ಎಲ್ಲಿಂದ ಹೇಗೋ ಹೊರಬಂದು ಎಲ್ಲಿ ತನ್ನನ್ನು ಸಿಕ್ಕಿಹಾಕಿಸಿಬಿಡುತ್ತದೋ ಎಂಬ ಅಪರಾಧೀಭಾವದಿಂದ ನಡುಗುತ್ತ ಕುಂತಿದ್ದ. ಈ ಗೊಂದಲಕಾರಿ ಹೇಳಿಕೆಗಳಿಂದಾಗಿ ಅದನ್ನು ಕೊಲೆಯೋ, ಆತ್ಮಹತ್ಯೆಯೋ, ಸಹಜ ಸಾವೋ ಎಂದು ತೀರ್ಮಾನಿಸಲು ಸಾಧ್ಯವಾಗದೇ ಪೊಲೀಸರು ಗೊಂದಲಕ್ಕೀಡಾದರು. ಕುಡಿದ ಮತ್ತಿನಲ್ಲಿ ಎಡವಿಬಿದ್ದು ಸತ್ತಿರುವುದಾಗಿ ಸುತ್ತಲಿನ ಮುಖಂಡರು ಶಿಫಾರಸ್ಸು ಮಾಡಿ ನ್ಯಾಚುರಲ್ ಡೆತ್ ಎಂದು ಕೇಸನ್ನು ಖುಲಾಸೆ ಮಾಡಿಸಲು ಪ್ರಯತ್ನಿಸಿದರು. ಆದರೆ ಹಾಗೆ ಮಾಡಿದರೆ ನಾಳೆ ಯಾರಾದರೂ ತಮ್ಮನ್ನು ಸಿಕ್ಕಿಸಿಯಾರು ಎಂದು ಭಾವಿಸಿದ ಪೊಲೀಸರು, ಯಾರದೂ ವಿರೋಧವಿಲ್ಲದ್ದನ್ನು ಕಂಡರೂ, ಯಾವುದಕ್ಕೂ ಇರಲಿ ಎಂದು ಆತ್ಮಹತ್ಯೆ ಎಂದು ಎಫ್.ಐ.ಆರ್.ನಲ್ಲಿ ನಮೂದಿಸಿಕೊಂಡರು.

ಕಾರ್ಪೋರೇಷನ್ನಿನ ವಿದ್ಯುತ್ ಚಿತಾಗಾರದಲ್ಲಿ ಹೆಣ ಸುಟ್ಟು ಬಂದು ಸಂಬಳವಿಲ್ಲದ ಮುಂದಿನ ಜೀವನ ಹೆಂಗೆಂದು ತಲೆಮೇಲೆ ಕೈಹೊತ್ತು ಕುಳಿತವಳಿಗೆ ಗಂಡನ ಪಿಂಚಣಿಯ ದುಡ್ಡು ಬರುವುದಾಗಿ ಯಾರೋ ನೀಡಿದ ಸಲಹೆ ಸ್ವಲ್ಪ ಸಮಾಧಾನ ನೀಡಿತು. ‘ಅದಕ್ಕೆ ಏನೇನು ಮಾಡಬೇಕೋ ನೋಡಿಕೋ ಮಗ..’ ಎಂದು ಮಗರಾಜನಿಗೆ ಹೇಳಿದಳು. ಭಂಗಿರಾಜ ಅಪ್ಪ ಬದುಕಿರುವಾಗ ಒಂದು ದಿನವೂ ನಗರಸಭೆಯ ಕಡೆ ತಲೆಹಾಕದವನು, ಅಲ್ಲಿನ ವಿವಿಧ ಶಾಖೆಗಳನ್ನು ಸುತ್ತಲಾರಂಭಿಸಿದ.

ಆಡಳಿತ ಶಾಖೆಗೆ ಹೋಗಿ ಹೀಗ್ಹೀಗೆಂದು ಹೇಳಿದ್ದಕ್ಕೆ ಮೊದಲು ಡೆತ್‌ಸರ್ಟಿಫಿಕೇಟ್ ತಂದು ಅರ್ಜಿ ಕೊಡಬೇಕೆಂದು ಕೇಸ್‌ವರ್ಕರ್ ಉಗ್ರನರಸಿಂಹ ಹೇಳಿದ. ‘ಅದುನ್ನ ನೀವೇ ಕೊಡ್ಬೇಕಲ್ವ, ನೀವೇ ಮಾಡ್ಕಂಡು, ಅರ್ಜಿಗೆ ಹಾಕ್ಕಂಡು ಕೆಲ್ಸ ಕೊಡಿ’ ಎಂದ ಭಂಗಿರಾಜ! ಈ ಇಂತದೇ ಕೆಲಸವನ್ನು ಮೂವತ್ಮೂರು ವರ್ಷಗಳಿಂದಲೂ ಮಾಡಿಕೊಂಡು ಬಂದಿರುವ ಉಗ್ರನರಸಿಂಹ, ವಿಗ್‌ಹಾಕಿದಂತೆ ಅನುಮಾನ ಬರುವಷ್ಟು ದಪ್ಪಕೂದಲಿನ ಮಧ್ಯದಿಂದ ಇಣುಕಿನೋಡುತ್ತಿದ್ದ ದಪ್ಪಫ್ರೇಮಿನ ಕನ್ನಡಕವನ್ನು ಲೇಸಿಗೆ ಇಳೆಬಿಟ್ಟು, ‘ನಾವೇ ಕೊಡ್ಬೇಕು ನಿಜ. ಆದರೆ ಅದಕ್ಕೇ ಅಂತ ಬೇರೆ ಕೇಸ್‌ವರ್ಕರ್ ಇದ್ದಾರೆ, ಅವರಿಗೆ ಅರ್ಜಿಕೊಟ್ಟು ಮಾಡುಸ್ಕಂಡು ಬಂದು ಕೊಟ್ರೆ ಪರಿಶೀಲಿಸ್ತೀನಿ.. ಇಲ್ಲದಿದ್ರೆ ಇಲ್ಲ..’ ಎಂದ ಪಟ್ಟುಹಿಡಿದ. ‘ತಾನು ಮುಂದಿನ ವರ್ಷ ರಿಟೈರ್ಡ್ ಆಗುವವನಿದ್ದು, ಅಷ್ಟರೊಳಗೆ ಎಲ್ಲವನ್ನೂ ಸೆಟ್ಲ್‌ಮಾಡಿಕೊಂಡುಬಿಡು’ ಎಂದು ಗೆಳೆಯನ ಮಗನಿಗೆಂಬಂತೆ ಆತ್ಮೀಯತೆಯಿಂದ ಹೇಳಿದ. ಹೆಸರಿನಂತೆ ಉಗ್ರವಾಗಿರದೆ ಸೌಮ್ಯವಾಗಿರುವ ಕೇಸ್‌ವರ್ಕರ್ ಸಿಕ್ಕಿರುವುದು ತನ್ನ ಪುಣ್ಯ ಎಂದುಕೊಂಡ ಭಂಗಿರಾಜ ತನಗೊಬ್ಬ ಒಳ್ಳೆಯ ಮಾರ್ಗದರ್ಶಕ ಸಿಕ್ಕ ಖುಷಿಯಲ್ಲಿ ಉಬ್ಬಿಹೋಗಿ, ಇನ್ನೇನೇನು ಬೆನಿಫಿಟ್ ಸಿಗುತ್ತದೆಂದು ಕೇಳಿದ. ತಾನೀಗ ಬಿಜಿಯಿರುವುದರಿಂದ ಕಾಲಕಾಲಕ್ಕೆ ಏನೇನು ಮಾಡಬೇಕೆಂಬ ಸಲಹೆ ನೀಡುವುದಾಗಿ ಹೇಳಿ ಸಾಗಹಾಕಿದ.

ಡೆತ್ ಸರ್ಟಿಫಿಕೇಟ್ ಕೇಳಲು ಹೋದ ಭಂಗಿರಾಜನಿಗೆ ಬರ್ತ್ ಅಂಡ್ ಡೆತ್ ಸೆಕ್ಷನ್‌ನ ಗುಮಾಸ್ತ ವೆಂಕಟಪ್ಪ, ‘ಮುತ್ಯಾಲಪ್ಪ ಅನ್ನೋ ವ್ಯಕ್ತಿ ಸತ್ತಿದ್ದಾನೆ ಅನ್ನೋದಕ್ಕೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಪೋಸ್ಟ್‌ಮಾರ್ಟಂ ರಿಪೋರ್ಟ್‌ಅನ್ನು ಆಸ್ಪತ್ರೆಯಿಂದ ತರಿಸಿಕೊಡಿ, ಕೂಡಲೇ ಡೆತ್ ಸರ್ಟಿಫಿಕೇಟ್ ಇಶ್ಯೂ ಮಾಡ್ತೇವೆ’ ಎಂದು ಕೊಕ್ಕೆಹಾಕಿದ.

ಪೋಸ್ಟ್‌ಮಾರ್ಟಂ ಮಾಡಿಸೇಯಿಲ್ಲದಿರುವಾಗ ಆಸ್ಪತ್ರೆಯಿಂದ ರಿಪೋರ್ಟನ್ನ ತರಿಸುವುದು ಹೇಗೆಂದು ಪೇಚಾಟಕ್ಕೆ ಸಿಲುಕಿದ ಭಂಗಿರಾಜ, ‘ತರುಸ್ಕಣದು ನಿಮ್ಮ ಡ್ಯೂಟಿ ಸ್ವಾಮಿ, ನಾನ್ಯಾಕೆ ತರುಸ್ಕೊಡ್ಬೇಕು. ಆಗಲ್ಲ ಅಂದ್ರೆ ಅಂಗಂತ ಬರುದುಕೊಡ್ರೀ.. ನಂಗೆ ಗೊತ್ತೈತೆ ಎಂಗೆ ಮಾಡುಸ್ಕಣದು ಅಂತ.. ಅದ್ಸರಿ, ಇದುವರೆಗೆ ಇಸ್ಯೂ ಮಾಡಿರೋ ಡೆತ್ ಸರ್ಟಿಫಿಕೇಟ್‌ಗಳಿಗೆಲ್ಲ ಆಸ್ಪತ್ರೆ ರಿಪೋರ್ಟ್ ತರುಸ್ಕಂಡೇ ಮಾಡಿದಿರೀ ಅನ್ನೋದಕ್ಕೆ ಇರೋ ದಾಖಲೆಗಳನ್ನ ತೋರಿಸಿ, ನಾನು ನೋಡ್ಬೇಕು’ ಎಂದು ಸವಾಲು ಹಾಕಿದ. ಕಕ್ಕಾಬಿಕ್ಕಿಯಾದ ವೆಂಕಟಪ್ಪ– ‘ಹಂಗೆಲ್ಲ ಸುಮ್‌ಸುಮ್ನೆ ತೋರಸಕ್ಕಾಗಲ್ಲ, ಆರ್‌ಟಿಐ ಅರ್ಜಿ ಹಾಕಿ, ಕೊಡ್ತೀವಿ, ನೋಡ್ಕಣೀರಂತೆ’ ಅಂದ. ಯಾವಾಗ ಇವರು ಸಮಸ್ಯೆಯನ್ನ ಜಟಿಲ ಮಾಡೋಕ್ಕೆ ಶುರುಮಾಡಿದ್ರೋ ಆವಾಗ ಉಗ್ರನರಸಿಂಹ ನೆರವಿಗೆ ಬಂದ. ಸರ್ಕಾರಿ ಆಸ್ಪತ್ರೆ ಡಾಕ್ಟರರಿಗೆ ಹೇಳಿ ಒಂದು ಸರ್ಟಿಫಿಕೇಟ್ ಮಾಡಿಸಿಕೊಟ್ಟು, ‘ಇಂಥವರನ್ನೆಲ್ಲ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಬೇಕು’ ಎಂಬ ಸಲಹೆ ನೀಡಿ ಈಗಿಂದೀಗಲೇ ಡೆತ್‌ಸರ್ಟಿಫಿಕೇಟ್ ನೀಡುವಂತೆ ವೆಂಕಟಪ್ಪನಿಗೆ ಹೇಳಿದ. ವಾರಹದಿನೈದು ದಿನ ಅಡ್ಡಾಡಿದ ಮೇಲೆ ಎಲ್ಲದಕ್ಕೂ ಡೆತ್‌ಸರ್ಟಿಫಿಕೇಟೇ ಸರ್ವಸ್ವ, ಅದನ್ನು ಕೊಟ್ಟ ಕೂಡಲೇ ತನ್ನೆಲ್ಲ ದುಡ್ಡು ಬಂದುಬಿಡುತ್ತದೆಂದು ಹೇಳಿ ಭಂಗಿರಾಜ ಕೂಡಿಟ್ಟಿದ್ದ ದುಡ್ಡಿನಲ್ಲೊಂದು ಸಾವಿರ ಕಿತ್ತುಕೊಂಡು ಡೆತ್‌ಸರ್ಟಿಫಿಕೇಟ್ ಕೊಟ್ಟು ಕಳಿಸಿದ.

ಕೂಡಲೇ ಓಡಿಹೋಗಿ ಉಗ್ರನರಸಿಂಹನಿಗೆ ಕೊಟ್ಟು ನಿಟ್ಟುಸಿರುಬಿಟ್ಟು, ದುಡ್ಡು ಈಸಿಕೊಳ್ಳಲು ತನ್ನ ತಾಯಿಯನ್ನು ಯಾವಾಗ ಕರಕೊಂಡುಬರಬೇಕೆಂದು ಕೇಳಿದ. ಕನ್ನಡಕದ ಮೇಲಿಂದ ಇಣುಕಿನೋಡಿದ ಉಗ್ರನರಸಿಂಹ, ನಸುನಕ್ಕು, ಈಗ ಕೊಟ್ಟಿರುವ ಸರ್ಟಿಫಿಕೇಟ್ ಕೇವಲ ಆರಂಭವೇ ಹೊರತು ಅಂತ್ಯವಲ್ಲವೆಂದು ತಿಳಿಹೇಳಿದ. ಇಲ್ಲಿಂದ ಪುಟ್‌ಅಪ್ ಮಾಡಿ, ನಾಲ್ಕೈದು ಟೇಬಲ್ ಮೇಲೆಹೋಗಿ ಅಪ್ರೂವ್ ಆಗಿ ಬಂದ ಮೇಲೆ ಆರ್ಡರ್ ಹಾಕಿ, ಅದು ಮೇಲೆ ಹೋಗಿ ಸಹಿಯಾಗಿ ಬಂದ ಮೇಲೆ ಪೆನ್ಷನ್ ಸೆಕ್ಷನ್‌ನಿಂದ ಚೆಕ್ ಪಡೆಯಬಹುದೆಂದು ಹೇಳಿದ. ಇದೆಲ್ಲ ಆಗಲು ಕನಿಷ್ಠ ಅಂದರೂ ಒಂದು ತಿಂಗಳು ಬೇಕೇಬೇಕೆಂದು ತಿಳಿಸಿದ. ಇನ್ನೂ ಬೇಗ ಬೇಕೆಂದು, ಮನೆಯಲ್ಲಿ ಉಣ್ಣಲು ರೇಷನ್ ಇಲ್ಲವೆಂದು ಭಂಗಿರಾಜ ಅವಸರಿಸಿದ. ‘ನೋಡಪ್ಪ, ನನ್ನ ಕೆಲಸ ನಾನು ಮಾಡಿಕೊಡುತ್ತೇನೆ, ಉಳಿದವರ ಬಳಿ ನೀನೇ ಹೋಗಿ ಸಹಿಮಾಡಿಸಿಕೊಂಡು ಬಾ’ ಎಂದು ಹೇಳಿ ಕೈತೊಳೆದುಕೊಂಡ ಉಗ್ರನರಸಿಂಹ. ಒಂದುವಾರದೊಳಗೆ ಫೈಲನ್ನು ತಯಾರಿಸಿ ಅದಕ್ಕೊಂದು ಹೆಸರು ನಂಬರು ಕೊಟ್ಟು ಮ್ಯಾನೇಜರ್ರ ಟೇಬಲ್ಲಿಗೆ ಇಟ್ಟು ಅದನ್ನು ಫಾಲೋಅಪ್ ಮಾಡಲು ಬೇಕಾದ ವಿವರಗಳನ್ನು ಭಂಗಿರಾಜನಿಗೆ ಬರಕೊಟ್ಟು ತನ್ನ ಕೆಲಸ ಆಯಿತೆಂದು ಬೇರೆ ಕೆಲಸಕ್ಕೆ ತೊಡಗಿದ.

ದಿನಾಲು ಬೆಳಗ್ಗೆ ಉಂಡವನು ನಗರಸಭೆಗೆ ಬಂದರೆ ರಾತ್ರಿವರೆಗೆ ಮ್ಯಾನೇಜರ್‌ಗೆ ಕಾಯುವುದು, ಅವರು ಆ ಮೀಟಿಂಗೂ, ಈ ಮೀಟಿಂಗೆಂದು ಟೇಬಲ್ಲಲ್ಲೇ ಕೂರದ್ದನ್ನು ಕಂಡು ತನ್ನ ಫೈಲು ಸುರಕ್ಷಿತವಾಗಿದೆಯೆಂದುಕೊಂಡು ಮತ್ತೆ ಮನೆಗೆ ತೆರಳುವುದು, ಮಧ್ಯೆಮಧ್ಯೆ ಹೋಗಿ ಉಗ್ರನರಸಿಂಹನ ತಾಳ್ಮೆಯನ್ನು ಪರೀಕ್ಷಿಸಿ, ತನ್ನ ಕೆಲಸ ಮಾಡಿಕೊಟ್ಟಿದ್ದರೂ ಮತ್ತೆಮತ್ತೆ ಕೇಳಿದ್ದನ್ನೇ ಕೇಳಿಕೇಳಿ ಬೈಸಿಕೊಂಡು ಬರುವುದು ಇದೇ ದಿನಚರಿಯಾಯಿತು. ಅಂತೂ ಒಂದು ದಿನ ಅವರೂ ಸಿಕ್ಕು ಸಹಿಮಾಡಿಸಿಕೊಂಡು ಮುಂದಿನ ಟೇಬಲ್ಲಿಗೆ ಸಾಗಹಾಕಿದರೆ ಆ ಅಧಿಕಾರಿಯೂ ವಾರವಾದರೂ ಸಿಗಲೇಯಿಲ್ಲ. ತಿರುಗೀತಿರುಗಿ ರೋಸಿಹೋದ ಭಂಗಿರಾಜ ತನ್ನ ಏರಿಯಾದ ಕೌನ್ಸಿಲರ್‌ಅನ್ನು ಕಂಡು ಅಹವಾಲು ಹೇಳಿಕೊಂಡ. ‘ಮುನ್ಸಿಪಾಲಿಟಿ ಅಂದ್ರೇ ಹಂಗಪ್ಪ.. ಒಂದೈವತ್ತು ಸಾವಿರ ಕೊಡು, ಮೂರು ದಿನದಲ್ಲಿ ನಿಂದು ಏನೇನದೆ ಎಲ್ಲ ಸೆಟ್ಲ್‌ಮಾಡುಸ್ತೀನಿ..’ ಅಂದರು. ‘ಐವತ್ತು ಸಾವ್ರನಾ..!?’ ಅಂತ ದಂಗಾಗಿಹೋದ ಭಂಗಿರಾಜ ಅಲ್ಲಿಂದ ಕಳಚಿಕೊಂಡ.

****
ಮಾಡ್ರನ್ ಎಂಬ ಹೊಸ ಹೆಸರಿನ ಹಳೇ ಟಾಕೀಸಿನ ಪಾರ್ಕಿಂಗ್ ಬಯಲನ್ನೇ ಭಾಷಣದ ವೇದಿಕೆ ಮಾಡಿಕೊಂಡಿದ್ದ, ಪರಿಚಯದ ಮಾತಿಗೆ ಮುಂಚೆಯೇ ಅಟ್ರಾಸಿಟಿ ಕಮಿಟಿ ಮೆಂಬರ್ರು ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದ ಕಡೇಕಲ್ಲು ರಾಂಚಂದ್ರನ ಖಡಕ್ಕಿಗೆ ಹೆದರಿದ್ದ ಓನರ್ರು ಚಲ್ಲಂರಾಜು ಸಿನಿಮಾವನ್ನೇ ಎರಡು ಗಂಟೆ ಕಾಲ ಮುಂದೂಡಿದ್ದ. ಟಿಕೇಟಿಗಾಗಿ ಕ್ಯೂ ನಿಂತಿದ್ದವರು ಯಾರೂ ಮನುಷ್ಯರಂತೆ ಅವನ ಕಣ್ಣಿಗೆ ಕಾಣದೇ ತಮ್ಮ ಶೋವನ್ನು ಇಣುಕಿನೋಡುತ್ತಿರುವ ಕೋತಿಗಳೆಂದೇ ಭಾವಿಸಿದ್ದ. ಅಲ್ಲಿ ನೆರೆದಿರುವ ಮಹಾಜನತೆಯು ಶತಶತಮಾನದಿಂದ ಅನುಭವಿಸಿರುವ ಅವಮಾನದ ಎದುರು ಇವರ ಭಾವನೆಗಳೆಲ್ಲ ಯಃಕಶ್ಚಿತ್ ಎಂದು ಢರುಕಿಹಾಕುತ್ತಿದ್ದ.

ಭಂಗಿಕಾಲೋನಿಯೊಂದರಲ್ಲೇ ಹುಟ್ಟಿರುವ ನೂರಾರು ರಾಜ್ಯಮಟ್ಟದ ದಲಿತಸಂಘಟನೆಗಳೊಳಗೇ ಹೆಚ್ಚು ಪ್ರಭಾವಶಾಲಿಯೆಂದು ರಾಜ್ಯವ್ಯಾಪಿ ಹೆಸರು ಮಾಡಿರುವ ದಲಿತ ಸಂರಕ್ಷಣಾ ವೇದಿಕೆಯಂತಹ ವಿಶಿಷ್ಟ ಹೆಸರಿನ ಸಂಘಟನೆಯ ಸಂಚಾಲಕನ ಭಾಷಣಕ್ಕೇ ಅಡ್ಡಹಾಕಿ, ಎಡಅಂಗೈಯನ್ನು ಟೇಬಲ್‌ನಂತೆ ನಿಲ್ಲಿಸಿಕೊಂಡು ಬಲಗೈ ಮುಷ್ಟಿಬಿಗಿದು ಗುದ್ದುವಂತೆ ನಟಿಸುತ್ತ, ‘ದಲಿತ್ರ ಹೆಸರೇಳ್ಕಂಡು ದಲಿತ್ರನ್ನ ನಿಜ್ವಾಗಿ ಶೋಷಣೆ ಮಾಡ್ತಿರೋದು ನೀವೋ, ಇಲ್ಲ ಮ್ಯಾಲ್ಜಾತಿಯವ್ರೋ.. ಹೇಳ್ರೀ..’ ಎಂದು ಕ್ರಾಸ್‌ಕ್ವಶ್ಚನ್ ಹಾಕಿದ್ದಕ್ಕೆ ರಾಮಚಂದ್ರ, ತನ್ನ ಎಡಗೈಯ್ಯಿಂದ ಕುರುಚಲು ಬಳ್ಳಾರಿಜಾಲಿಯಂತಿರುವ ಅರೆಬಿಳಚಿಕೊಂಡ ಗಡ್ಡವನ್ನು ಕೆರೆಯುತ್ತ ಉತ್ತರಿಸಲು ತಡವರಿಸಿದ.

ಅಂಥ ಉತ್ತರಾತೀತ ಪ್ರಶ್ನೆ ಕೇಳಿದ ಆ ಪುರುಷೋತ್ತಮ ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದ. ಡಯಾಸ್‌ನಲ್ಲಿ ಪಕ್ಕ ಕುಳಿತಿದ್ದವರು ಆತನ ಘಟೋತ್ಕಚನಂತಹ ದಢೂತಿ ದೇಹ, ತಿರುಗದ ನಾಲಿಗೆ ಕಂಡೇ ಆತ ಭಂಗಿಮುತ್ಯಾಲು ಮಗ ಭಂಗಿರಾಜ ಎಂದರಿತು ಆತನ ಪೂರ್ವಾಪರದ ಪ್ರವರಗಳನ್ನೆಲ್ಲಾ ಉಸುರಿದರು. ತಮ್ಮ ದಲಿತ ಸಂರಕ್ಷಣಾ ವೇದಿಕೆಗೆ ಇಂತಹವನೊಬ್ಬನ ಅಗತ್ಯ ಎಂದೋ ಇತ್ತು ಎಂಬುದನ್ನು ಇಂದಾದರೂ ಅರ್ಥಮಾಡಿಕೊಂಡು, ಸಂವಾದವನ್ನು ಅಲ್ಲಲ್ಲಿಗೇ ಮುಕ್ತಾಯಗೊಳಿಸಿ ಕೆಳಗಿಳಿದುಬಂದು, ಎಟುಕದ ಎತ್ತರದ ದೇಹದ ಹೆಗಲಮೇಲಕ್ಕೆ ತನ್ನ ಮೋಟು ಕೈಹಾಕಿಕೊಂಡು ಏನೇನೋ ಮಾತಾಡಿಸುತ್ತ, ಇನ್ನೂ ಮುಗಿಯದ ಮಾತನ್ನು ಕೇಳಿಸಿಕೊಳ್ಳಲೇಬೇಕೆಂಬಂತೆ, ನೆರಳು ಎತ್ತೆತ್ತಲಿತ್ತೋ ಅತ್ತತ್ತಲಾಗಿ ಒಂದುಥರಾ ದಬ್ಬಿಕೊಂಡೇ ನಡೆದ.

ಶಿವಪ್ಪನಾಯಕನ ಮಾರುಕಟ್ಟೆಯೊಳಗೆ ಅಡ್ಡೆಯೊಂದನ್ನು ನಿರ್ಮಿಸಿಕೊಂಡು ವ್ಯಾಪಾರಸ್ಥರಿಂದ ಮಾಮೂಲಿ ವಸೂಲಿಮಾಡುತ್ತ ಅವರೆಲ್ಲರ ಹಿತಕಾಯುವ ಸಂಘಟನೆಯೊಂದರ ನೇತಾರನಂತೆ ಪ್ರತಿಬಿಂಬಿಸಿಕೊಳ್ಳುತ್ತಿದ್ದ ಕಡೇಕಲ್ಲು ರಾಂಚಂದ್ರ, ಭಂಗಿರಾಜನ ಹೆಗಲಮೇಲೆ ಕೈಹಾಕಿಕೊಂಡೇ ದಲಿತ ಸಂರಕ್ಷಣಾ ವೇದಿಕೆಯ ಕಚೇರಿಗೆ ಕರಕೊಂಡು ಬಂದ. ತಮ್ಮ ನೇತಾರ ಯಾರ ಹೆಗಲ ಮೇಲೂ ಹೀಗೆ ಕೈಹಾಕಿಕೊಂಡು ಬಂದದ್ದನ್ನು ಕಾಣದ ಭಟ್ಟಂಗಿಗಳು ಯಾರೋ ಆತನ ಪೂರ್ವಾಶ್ರಮದ ಗೆಳೆಯನೇ ಇರಬೇಕೆಂದುಕೊಂಡು ಆರ್ಡರ್ ಮಾಡುವ ಮೊದಲೇ ಕಾಫಿಯನ್ನು ತಂದಿಟ್ಟರು. ಆತನ ವಾರೆನೋಟವು ತಮ್ಮ ಮೇಲೆ ಬಿದ್ದರೆ ಸಾಕು ಕೃತಾರ್ಥರಾಗಿಬಿಡಬಹುದೆಂಬಂತೆ ಸಲಾಂ ಹೊಡೆದರು.

‘ತಲತಲಾಂತರದಿಂದ ನಮ್ಮನ್ನ ಮೇಲ್ವರ್ಗ ಶೋಷಿಸುತ್ತಾ ಬಂದಿದೆ. ಅವರ ಮನೆಗಳಲ್ಲಿ, ಹೊಲಗದ್ದೆಗಳಲ್ಲಿ ದುಡಿವವರು ನಾವು, ಅವರ ಮನೇಲಿ ದನ ಎಮ್ಮೆ ಸತ್ತರೆ ಊರಾಚೆಗೆ ಹಾಕುವವರು ನಾವು. ನಮ್ಮ ಹೊಟ್ಟೆಗೆ ಅವರು ಕೊಡುವ ಊಟ ಸಾಲದೇ ಆ ಸತ್ತ ಎಮ್ಮೆ ದನದ ಮಾಂಸವನ್ನೇ ಮೃಷ್ಟಾನ್ನ ಎಂದು ತಿಂದವರು ನಾವು. ಆ ಪ್ರಾಣಿಯ ಚರ್ಮ ಸುಲಿದು ಅದರಿಂದ ಅವರಿಗೆ ಚಪ್ಪಲಿ ಹೊಲೆದುಕೊಟ್ಟವರು ನಾವು. ಬೇಸಾಯಕ್ಕೆ ಬೇಕಾದ ಮಿಣಿ, ಬಾರಿಕೋಲುಗಳನ್ನು ಹದಮಾಡಿದ ಚರ್ಮದಲ್ಲಿ ರೆಡಿಮಾಡಿಕೊಟ್ಟವರು ನಾವು... ಅದಕ್ಕೆ ಪ್ರತಿಫಲವಾಗಿ ಅವರು ನಮಗೆ ಕೊಟ್ಟದ್ದೇನು? ಅದೇ ಮಿಣಿಯಿಂದ ಕಂಬಕ್ಕೆ ಕಟ್ಟಿ, ಅದೇ ಬಾರಿಕೋಲಿನಿಂದ ಬಾಸುಂಡೆ ಬರುವಂತೆ ಹೊಡೆದರು.

ನಿರಂತರವಾಗಿ ಸಾವಿರಾರು ವರ್ಷಕಾಲ ನಮ್ಮನ್ನು ಬಗ್ಗುಬಡಿದರು. ಅದೃಷ್ಟವಶಾತ್ ನಮ್ಮವಂಶದಲ್ಲಿ ಜೈಭೀಮ್ ಹುಟ್ಟಿ ನಮ್ಮ ವಿಮೋಚನೆಗೆ ನಾಂದಿಹಾಡಿದರು. ಆದರೂ ಈಗಲೂ ಎಷ್ಟೋಕಡೆ ಇದೇ ಪರಿಸ್ಥಿತಿ ಮುಂದುವರೆದಿದೆ. ಕಾರಣ ನಮ್ಮವರು ಸಂಘಟಿತರಾಗುತ್ತಿಲ್ಲ. ಹಾಗಾಗಿ ಸಂಘಟನೆಗೆ ನಿಮ್ಮಂತಹ ಸದೃಢ ಮೈಕಟ್ಟಿನ, ಪ್ರಶ್ನಿಸುವಂತಹ ಮನೋಭಾವದ ಪ್ರತಿಭಾವಂತರು ಬೇಕು. ಸಭೆಯಲ್ಲಿ ಅಷ್ಟು ಜನ ಸುಮ್ಮನೇ ಮಾತು ಕೇಳಿಸಿಕೊಂಡು ಏನೇನೂ ಪ್ರಚೋದಿತರಾಗದೇ ಹೋಗುತ್ತಿರುವಾಗ ನೀನು ನನಗೇ ಪ್ರಶ್ನೆ ಕೇಳಿದೆಯಲ್ಲ, ನಿನ್ನ ಎದೆಗಾರಿಕೆಗೆ ಮೆಚ್ಚಿದೆ..’ ಎಂದೆಲ್ಲ ಪ್ರಶಂಸಿಸುತ್ತ, ತನ್ನ ಕಚೆೇರಿಯಲ್ಲಿದ್ದವರಿಗೆಲ್ಲ ಅಪರೂಪದ ಮುತ್ತು ತಮಗೆ ಸಿಕ್ಕಿದೆಯೆಂದು ಹೇಳುತ್ತ, ಪರಿಚಯಿಸಿಕೊಡುತ್ತ, ಒಂದಷ್ಟು ಸಂಚಾಲಕರನ್ನು ಕರೆಸಿಕೊಂಡು, ಇನ್ನು ಮುಂದೆ ಭಂಗಿರಾಜನೇ ನಮ್ಮ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂದು ಘೋಷಿಸಿಬಿಟ್ಟ. ಇದ್ದಕ್ಕಿದ್ದಂತೆ ತನಗೆ ಒಲಿದ ಮಹಾಅದೃಷ್ಟವನ್ನು ಕನಸೋ ನನಸೋ ತಿಳಿಯಲಾರದೇ ಪರಿತಪಿಸಿದ. ಆ ಸಂಭ್ರಮದ ಆಚರಣೆಗೆ ಬೀರುಬಾಟಲಿಗಳು, ಐಸ್‌ಕ್ಯೂಬುಗಳು, ಮಿಕ್ಸರ್, ತರಹೇವಾರಿ ನಾನ್‌ವೆಜ್‌ಐಟಂಗಳು ಬಂದು ಮುಂದೆ ಕುಂತವು.

***
ಗೌರ್ನಮೆಂಟ್ ಕೆಲಸದಲ್ಲಿದ್ದವರು ಸತ್ತರೆ, ಅಪ್ಪನ ಕೆಲಸ ಮಗನಿಗೆ ಸಿಗುತ್ತದೆಂದು ಯಾರೋ ಹೇಳಿದರೆಂದು ಮತ್ತೊಂದು ಅರ್ಜಿ ಬರೆದುಕೊಂಡು, ಉಗ್ರನರಸಿಂಹನ ಬಳಿ ಓಡಿಬಂದು ಇಷ್ಟು ದಿನ ಈ ವಿಚಾರವನ್ನ ತನಗೆ ಯಾಕೆ ಹೇಳಲಿಲ್ಲವೆಂದು ಕ್ರಾಸ್‌ಕ್ವಶ್ಚನ್ ಹಾಕಿದ. ‘ಮೊದಲು ಪೆನ್ಷನ್ ಸೆಟ್ಲ್ ಮಾಡ್ಕೋ ಮಾರಾಯ..’ ಅಂದವನು, ‘ನಿಮ್ಮ ತಾಯಿಗೆ ವಯಸ್ಸೆಷ್ಟು?’ ಎಂದು ಕೇಳಿದ. ‘ನಮ್ಮ ಅವ್ವನ ವಯಸ್ಸ ಕೇಳ್ತೀಯಾ? ಅವುಳನ್ನೇನು ಸೂಳೆ ಅಂದ್ಕಂಡಿದ್ದೀಯಾ?’ ಎಂದು ಏರಿಹೋದ. ‘ಅಂಗಲ್ಲಪ್ಪ, ಸಿ.ಜಿ. ಅಪಾಯಿಂಟ್ಮೆಂಟ್ ಕೊಡಕ್ಕೆ ವಯಸ್ಸು ಎಷ್ಟು ಅಂತ ಗೊತ್ತಾಗಬೇಕು ತಾನೇ? ನೀನಿನ್ನೂ ಹುಡುಗ... ನೋಡುದ್ರೆ ಹದಿನೆಂಟೂ ಆದಂಗೆ ಕಾಣಲ್ಲ. ಹದಿನೆಂಟಾಗದೇ ಕೆಲಸ ಕೊಡಕ್ಕಾಗಲ್ಲ. ಅದುಕ್ಕೇ ನಿಮ್ಮ ತಾಯಿ ವಯಸ್ಸು ಎಷ್ಟು ಅಂತ ಕೇಳಿದ್ದು’ ಎಂದು ಒಪ್ಪಿಸುವ ಹೊತ್ತಿಗೆ ಸಾಕುಸಾಕಾಗಿಹೋಯಿತು.

‘ಆಯ್ತು, ಇದುವರೆಗೆ ಎಷ್ಟು ಸಿ.ಜಿ. ಅಪಾಯಿಂಟ್ಮೆಂಟ್ ಕೊಟ್ಟಿದ್ದೀರಾ, ಅದರಲ್ಲಿ ಎಷ್ಟು ಜನ ಬರ್ತ್‌ಸರ್ಟಿಫಿಕೇಟು, ಡೆತ್‌ಸರ್ಟಿಫಿಕೇಟ್ನ ಕೊಟ್ಟವ್ರೆ, ಎಷ್ಟ್ ಜನ ಕೊಟ್ಟಿಲ್ಲ.. ಎಲ್ಲಾ ಡಿಟೈಲ್ಸು ನನಗೆ ಈಗಲೇಬೇಕು’ ಅಂತ ಅವರು ಹೇಳುವ ಮೊದಲೇ ಹತ್ತುರುಪಾಯಿ ಪೋಸ್ಟಲ್‌ಆರ್ಡರ್ ತಂದು ಆರ್.ಟಿ.ಐ. ಅರ್ಜಿ ಗುಜರಾಯಿಸಿದ. ‘ಈಗಲೇ ಅಂದರೆ ಈಗಲೇ ನಿಂತಕಾಲಲ್ಲಿ ಕೊಡಕ್ಕಾಗಲ್ಲ; ನೀವು ಅರ್ಜಿ ಕೊಟ್ಟುಹೋಗಿ. ನಮಗೆ ಮೂವತ್ತು ದಿನ ಟೈಮ್ ಇರತದೆ. ರಿಜಿಸ್ಟರ್‌ಪೋಸ್ಟ್‌ನಲ್ಲಿ ಕಳುಸ್ತೀವಿ’ ಎಂದು ತಲೆಕೆಟ್ಟುಹೋದ ಉಗ್ರನರಸಿಂಹನೂ ಕಾನೂನು ಮಾತಾಡಿದ. ‘ಏನ್ ಹೋಗಿ ಅಂತ ಸಿಂಗ್ಯುಲರ್ ಆಗಿ ಮಾತಾಡ್ತೀರಾ.. ಹೋಗಕ್ಕೇನು ನಿಮ್ಮ ಮನೆಗೆ ಬಂದಿದ್ದೀವಾ.. ದಲಿತ್ರು ಅಂತ ಏನು ಅಷ್ಟು ಕೇವಲವಾಗಿ ಮಾತಾಡ್ತೀರಾ’ ಅಂತ ಭಂಗಿರಾಜನೂ ವಿತಂಡವಾದಕ್ಕೆ ಬಿದ್ದ. ಅಲ್ಲಿದ್ದ ಕೆಲವರು ಸಮಾಧಾನಿಸಿ ಕಳಿಸಲು ಪ್ರಯತ್ನಿಸಿದರು. ‘ನಾಳೆ ಒತ್ತಾರಿಕೆ ಬತ್ತೀನಿ.. ಎಲ್ಲ ರೆಡಿ ಇದ್ಬುಡ್ಬೇಕು.. ಇಲ್ಲಾಂದ್ರೆ..’ ಅಂದುಕೊಂಡು ಹೋದ.

ಭಂಗಿರಾಜ ಹೇಳಿದ ಮಾತಿನಂತೆ ತಪ್ಪದೇ ಬೆಳಬೆಳಗ್ಗೆಯೇ ಮುನಿಸಿಪಾಲಿಟಿಯ ಮುಂದೆ ಹಾಜರಿದ್ದ. ಇನ್ನೂ ನಾಲ್ಕೈದು ಮಾಹಿತಿ ಹಕ್ಕಿನಡಿ ಅರ್ಜಿ ತಯಾರಿಸಿ, ಒಂದರಲ್ಲಿ ಮುನಿಸಿಪಾಲಿಟಿಯಲ್ಲಿ ಏನೇನು ಕಾಮಗಾರಿ ಕೈಗೊಂಡಿದ್ದೀರಿ, ಅದರ ಸಂಪೂರ್ಣ ಕಡತ, ಅಳತೆಪುಸ್ತಕ, ಕಾಮಗಾರಿ ಫೋಟೋಗಳು, ಆಯುಕ್ತರ ಪರಿಶೀಲನಾ ವರದಿ, ಗುಣನಿಯಂತ್ರಣ ವರದಿಗಳನ್ನು ನೀಡುವಂತೆಯೂ, ಇನ್ನೊಂದರಲ್ಲಿ, ಆಯುಕ್ತರಿಂದ ಹಿಡಿದು ಆರೋಗ್ಯಾಧಿಕಾರಿ, ಇಂಜಿನಿಯರ್, ಮ್ಯಾನೇಜರ್, ಗುಮಾಸ್ತರು ಸೇರಿ ಎಲ್ಲರ ಆಸ್ತಿ ಮತ್ತು ಋಣಭಾರ ಪ್ರಮಾಣಪತ್ರಗಳನ್ನು ಕೊಡುವಂತೆಯೂ ಅರ್ಜಿ ಗುಜರಾಯಿಸಿದ.

ಇದರಿಂದ ವಿಚಲಿತರಾದ ಕಮಿಷನರ್ ಆದಿಯಾಗಿ ಎಲ್ಲರೂ ಕೇಸ್‌ವರ್ಕರ್ ಉಗ್ರನರಸಿಂಹನನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಆತ ಎಲ್ಲವನ್ನೂ ವಿವರಿಸಿದ. ಇಂತಹವನಿಗೆ ಕಂಪ್ಯಾಷನೇಟ್‌ಗ್ರೌಂಡ್ ಮೇಲೆ ಅಪಾಯಿಂಟ್ಮೆಂಟ್ ಕೊಟ್ಟರೆ ಮುಂದೆ ತಮ್ಮ ಇಲಾಖೆಗೆ ದೊಡ್ಡ ಕಂಟಕವಾಗುತ್ತಾನೆಂದು ಎಲ್ಲರೂ ಸೇರಿ ತೀರ್ಮಾನಿಸಿದರು. ಅಷ್ಟರಲ್ಲಿ ಅವನ ಅಪ್ಪನನ್ನು ಕೊಂದದ್ದು ಇವನೇ ಅಂತ ರೂಮರ್ ಬೇರೆ ಇದೆ ಎಂದು ಯಾರೋ ಹೇಳಿದರು. ಅಲ್ಲದೇ ಅವನ ಅಪ್ಪ ಸತ್ತ ದಿನ ಹದಿನೆಂಟು ತುಂಬಿರಲಿಲ್ಲ, ತಾಯಿಗೆ ನಲವತ್ತೈದು ಮೀರಿ ಹೋಗಿದೆ; ಅನುಕಂಪದ ಆಧಾರದ ಮೇಲೆ ಕೆಲಸ ಕೊಡೋಕ್ಕಾಗಲ್ಲ ಎಂದು ಟೆಕ್ನಿಕಲ್ ಪಾಯಿಂಟ್ ಮುಂದಿಟ್ಟರು.

ಯಾವಾಗ ಇವರು ಸಮಸ್ಯೆಯನ್ನ ಜಟಿಲ ಮಾಡೋಕ್ಕೆ ಶುರುಮಾಡಿದ್ರೋ ಆವಾಗ ಅಟ್ರಾಸಿಟಿ ಕಮಿಟಿ ಮೆಂಬರ್ ಕಡೇಕಲ್ಲು ರಾಂಚಂದ್ರ ನೆರವಿಗೆ ಬಂದ. ‘ಸಿ.ಜಿ. ಅಪಾಯಿಂಟ್ಮೆಂಟ್ ಕೊಡ್ತೀರೋ, ಇಲ್ಲ ಧರಣಿ ಕೂರಬೇಕೋ’ ಎಂದು ಆತ ಆಯುಕ್ತರಿಗೇ ಆವಾಜ್ ಹಾಕಿದ. ಕಾನೂನು ಪ್ರಕಾರ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರೂ ಕೇಳಲಿಲ್ಲ. ಕಮೀಷನರ್ ಛೇಂಬರಿನಲ್ಲಿಯೇ ಭಂಗಿರಾಜ ಧರಣಿ ಕೂತ. ತಲೆಕೆಟ್ಟ ಕಮೀಷನರ್ರು ಎದ್ದು ಹೊರಟುಬಿಟ್ಟರು. ಅದ್ಯಾವಾಗ ಅವರನ್ನು ಫಾಲೋ ಮಾಡಿದನೋ ಗೊತ್ತಿಲ್ಲ, ಅವರು ಕಾರು ಹತ್ತುವ ಮೊದಲೇ :ಮ್ಯಾಲೆ ಹತ್ತುಸ್ಕಂಡು ಹೋಗ್ರೀ..’ ಅಂತ ಅಡ್ಡ ಮಲಗಿಬಿಟ್ಟ. ಮ್ಯಾನೇಜರ್‌ನ ಕರೆದು ಕೂಡಲೇ ಎಂಡಾರ್ಸ್‌ಮೆಂಟ್ ಕೊಟ್ಟು ಕಳಿಸಿ ಎಂದು ಆದೇಶಿಸಿದರು.

ವಿಚಲಿತನಾದ ಭಂಗಿರಾಜ ರಾಂಚಂದ್ರನ ನಿರ್ದೇಶನದಂತೆ ನಾಳೆ ಬೆಳಗ್ಗೆ ವಿನೂತನವಾಗಿ ಪ್ರತಿಭಟಿಸುವುದಾಗಿ ತೀರ್ಮಾನಿಸಿದರು. ಹತ್ತೂವರೆಗೆ ಆಯುಕ್ತರ ಕಾರು ಪೋರ್ಟಿಕೋ ಅಡಿ ನಿಲ್ಲುತ್ತಿದ್ದಂತೆಯೇ ಅದೆಲ್ಲಿದ್ದರೋ ಒಂದಿಪ್ಪತ್ತು ಜನ ಮುತ್ತಿಕೊಂಡರು. ನೋಡುನೋಡುತ್ತಿದ್ದಂತೆಯೇ ಭಂಗಿರಾಜ ಒಂದು ಕೊಡದ ತುಂಬಾ ತುಂಬಿಕೊಂಡು ಬಂದಿದ್ದ ಮಲ ಕದಡಿದ್ದ ನೀರನ್ನು ಮೈಮೇಲೆ ಬುಳಬುಳನೆ ಸುರಿದುಕೊಂಡ. ಒಂದೇ ಕ್ಷಣದಲ್ಲಿ ಇಡೀ ವಾತಾವರಣವೆಲ್ಲ ಗಬ್ಬುನಾತದಿಂದ ಕೂಡಿಹೋಯಿತು! ಕ್ರೋಧಗೊಂಡ ಆಯುಕ್ತರು ಕೂಡಲೇ ಪೊಲೀಸರಿಗೆ ಫೋನುಮಾಡಿ ಅವರನ್ನೆಲ್ಲ ಅರೆಸ್ಟ್ ಮಾಡಿಸಿದರು. ಇತ್ತ ಆ ಹುಡುಗನಿಗೆ ಹದಿನೆಂಟು ತುಂಬುವ ದಿನಕ್ಕೆ ಪೂರ್ವಾನ್ವಯವಾಗುವ ಹಾಗೆ ಆರ್ಡರ್ ಇಶ್ಯೂ ಮಾಡುವಂತೆ ಆದೇಶಿಸಿದರು.

ಅದೆಷ್ಟು ಬೇಗ ಮಾಧ್ಯಮಗಳಿಗೆ ವಿಷಯ ತಿಳಿಯಿತೋ, ಆಯುಕ್ತರು ಚೆೇಂಬರ್ ಪ್ರವೇಶಿಸುವ ಮೊದಲೇ ಅವರೆಲ್ಲ ಮುತ್ತಿಕೊಂಡರು. ‘ನೋ ಕಾಮೆಂಟ್ಸ್..’ ಎಂದವರೇ ತಮ್ಮ ಬಟ್ಟೆಗೆ ಸಿಡಿದಿರಬಹುದಾದ ಆ ನೀರಿನ ಕಣದಿಂದಾದ ವಾಸನೆಯಿಂದಾಗಿ ವಾಕರಿಕೆ ಬಂದಂತಾಗಿ ಎದ್ದು ಕಾರುಹತ್ತಿ ಹೊರಟರು.

ತಾವು ಸುರಿದುಕೊಂಡಿದ್ದು ಮಲವಲ್ಲ, ಸುದ್ದೆಮಣ್ಣು ಕಲಸಿದ ನೀರು ಎಂದು ಲಾಯರ್ ಮೂಲಕ ವಾದ ಮಂಡಿಸಿ ಬಿಡಿಸಿಕೊಂಡು ಬಂದ ಭಂಗಿರಾಜನಿಗೆ, ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದ ಅವನ ಯೋಗ್ಯತಾನುಸಾರ ಅವನ ಅಪ್ಪನದೇ ಭಂಗಿಕೆಲಸದ ಅಪಾಯಿಂಟ್ಮೆಂಟ್ ಆರ್ಡರ್‌ನೀಡುವ ಕಾರ್ಯಕ್ರಮ ಅದೇ ಪೋರ್ಟಿಕೋ ಅಡಿ ಆಯೋಜಿಸಲಾಯಿತು.

ಒಂದೇ ನಿಮಿಷದ ಆ ಕಾರ್ಯಕ್ರಮವನ್ನು ಬಿತ್ತರಿಸಲು ಮಾಧ್ಯಮಗಳು ತಮ್ಮೆಲ್ಲ ಆಯುಧಗಳೊಂದಿಗೆ ಸಿದ್ಧಗೊಂಡಿದ್ದರು. ಆಯುಕ್ತರು ಕಾರು ಇಳಿದುಬಂದು ಕವರನ್ನು ಹ್ಯಾಂಡ್‌ಓವರ್ ಮಾಡುವ ಫೋಟೋವನ್ನು ಕ್ಲಿಕ್ಕಿಸಲು ಎಲ್ಲರೂ ಸಜ್ಜುಗೊಂಡಿದ್ದರು. ಇನ್ನೇನು ಆಯುಕ್ತರು ಕವರನ್ನು ಮುಂದೆ ಹಿಡಿದು ಕೃತಕನಗೆಯೊಂದಿಗೆ ಹಲ್ಲುಕಿರಿಯುವ ವೇಳೆಗೆ ಸರಿಯಾಗಿ, ತಲೆಗೆ ಬಿಳೀಟೋಪಿ, ಮೈಗೆ ಅಣ್ಣಾ ಹಜಾರೆಯ ಭಾವಚಿತ್ರವಿದ್ದ ಟೀಶರ್ಟ್ ಹಾಕಿಕೊಂಡು ಬಂದ ಒಂದು ಗುಂಪಿನ ನಾಯಕ, ಭಂಗಿರಾಜನನ್ನುದ್ದೇಶಿಸಿ, ‘ಈ ಕೆಲಸ ನಿಮ್ಮ ತಂದೆಯಂತೆ ನಿನ್ನನ್ನೂ ಭಂಗಿಕೆಲಸಕ್ಕೆ ಹಚ್ಚಿ ಸ್ಲೇವರಿ ಪರಂಪರೆಯನ್ನು ಮುಂದುವರೆಸುವುದನ್ನು ಬಿಟ್ಟು ಇನ್ನೇನೂ ಮಾಡಲಾಗದು... ಭ್ರಷ್ಟಾಚಾರದ ವಿರುದ್ಧ ದಟ್ಟವಾಗಿ ಹೋರಾಡಿದ ನೀನು ಭ್ರಷ್ಟಾಚಾರದ ಕೂಪದೊಳಗೆ ಸಿಲುಕಿ ಮತ್ತೆ ಒದ್ದಾಡುತ್ತೀಯಾ... ಅದರ ಬದಲು ದೇಶ ಕಟ್ಟುವ ನಮ್ಮೊಡನೆ ಕೈಜೋಡಿಸು... ನಾಯಕನಾಗುವ ಎಲ್ಲ ಲಕ್ಷಣಗಳು ನಿನ್ನಲ್ಲಿವೆ.. ಮುಂದೊಂದು ದಿನ ಇಂತಹ ಸಾವಿರಾರು ಅಧಿಕಾರಿಗಳನ್ನು ಆಳುವ ಶಕ್ತಿ ನಿನಗೆ ಬರುತ್ತದೆ’ ಎಂದು ಟೋಪಿ ಮತ್ತು ಟೀಶರ್ಟ್‌ಅನ್ನು ಮುಂದೆ ಹಿಡಿದ.

ಗೊಂದಲಕ್ಕೀಡಾದ ಭಂಗಿರಾಜ ಒಮ್ಮೆ ಆಯುಕ್ತರ ಆದೇಶದತ್ತ, ಒಮ್ಮೆ ಅಣ್ಣಾಹಜಾರೆಯ ಟೋಪಿಯತ್ತ ನೋಡಿದ. ಮತ್ತೊಮ್ಮೆ ಕಡೇಕಲ್ಲು ರಾಂಚಂದ್ರನ ಮುಖ ನೋಡಿದ. ಎಲ್ಲ ಮಾಧ್ಯಮಗಳು ಆತ ತೆಗೆದುಕೊಳ್ಳಬಹುದಾದ ತೀರ್ಮಾನದತ್ತ ಕುತೂಹಲದ ನೋಟಬೀರಿದ್ದವು. ವಾಹಿನಿಗಳು ಇದನ್ನು ಲೈವ್ ಕಾಮೆಂಟರಿ ತರಹ ಪ್ರಸ್ತುತಪಡಿಸುತ್ತಿದ್ದವು.

ಅಂತಿಮವಾಗಿ ಭಂಗಿರಾಜ ವರ್ತಮಾನವನ್ನು ನಿರಾಕರಿಸಿ ಭವಿಷ್ಯದೆಡೆಗೆ ಆಕರ್ಷಿತನಾಗಿ ಹಜಾರೆಯ ಟೋಪಿಯನ್ನು ಧರಿಸಿದ. ಜೈಕಾರ ಹಾಕಿದ ಗುಂಪು ಅವನನ್ನು ಎತ್ತಿಕೊಂಡು ಹೋದದ್ದನ್ನ ಮಾಧ್ಯಮಗಳು ನೇರಪ್ರಸಾರ ಮಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT